( 4) ಮೊಹಬ್ಬತ್ ಸಾಲುಗಳು

ನಿನ್ನ ಆಗಮನದ ನಿರೀಕ್ಷೆಯಲಿ ನಾ ಅರಳುವೆ ಹೂವಾಗಿ ಸಖ
ನಿನ್ನ ಮನದ ಮಾತಾಗಿ ಬದುಕ ಬಯಸುವೆ ಹಾಯಾಗಿ ಸಖ

ಮನದ ಬೆಳದಿಂಗಳ ಬೆಳಕು ಪ್ರಹರಿಸುವುದು ನೀ ಬಂದರೆ ಸಖ
ನಿನ್ನ ಹಾಜರಿಯ ಜರೂರತ್ ಕೊಂಚ ತಡವಾದರೂ ಮನ್ನಿಸುವೆ ನಿನಗಾಗಿ ಸಖ.

ಪರಿತಪಿಸುವ ಮನದ ಒದ್ದಾಟದ ಗುದ್ದಾಟವನೆಲ್ಲ ನಿನಗರುಹಲೇ ಬೇಕು ಸಖ
ನಿನ್ನ ಸಾಂತ್ವನದ ಸಾಂಗತ್ಯದಲಿ ಇರ ಬಯಸುವೆ ನೆಮ್ಮದಿಯಾಗಿ ಸಖ.

ಬೆಂಬಿಡದೆ ಕಾಡುವ ನೆನಪಿನ ರಂಗೋಲಿ ಬಣ್ಣ ಕಳಕೊಳ್ಳುತಿವೆ ಸಖ
ನಿನ್ನ ಹೆಜ್ಜೆಯ ಸದ್ದಿಗೆ ಅರಳುವುವು ತನ್ನಷ್ಟಕ್ಕೇ ತಾವಾಗಿ ಸಖ

ಅಳಿದುಳಿದ ಬಯಕೆಗಳ ಸಾಕಾರಗೊಳಿಸಲು ನೀನೇ ಬರಬೇಕು ಸಖ
ನಿನ್ನ ಈ “ಗೀತೆ” ಕಣ್ಮುಚ್ಚದೇ ಕಾಯುತಿದೆ ನಿನ್ನಾಗಮನಕ್ಕಾಗಿ ಸಖ.

19-7-2019. 9.52pm

(3) ಮೊಹಬ್ಬತ್ ಸಾಲುಗಳು

ನನ್ನ ಬತ್ತಳಿಕೆಯ ತುಂಬ ಹಂಬಲದ ಮೊಳಕೆಯೊಡೆಯುತಿವೆ ನಿನಗಿದು ಗೊತ್ತಾ?
ನನ್ನ ಕುಂತಲ್ಲಿ ನಿಂತಲ್ಲಿ ನಿಲ್ಲಗೊಡಲೊಲ್ಲವು ಸದಾ ಕಾಡುತಿವೆ ನಿನಗಿದು ಗೊತ್ತಾ?

ಜಾಣ್ಮೆಯ ಉತ್ತರ ಕೊಟ್ಟು ಹೊರ ದಬ್ಬಿದಷ್ಟೂ ನನ್ನೇ ಸುತ್ತಿಕೊಳ್ಳುತ್ತಿವೆ
ನನ್ನ ನಿದ್ದೆಗೂ ಸಂಚಕಾರವಿಡುವಷ್ಟು ಬೆಳೆದು ನಿಂತಿವೆ ನಿನಗಿದು ಗೊತ್ತಾ?

ನನಸು ಮಾಡಿಕೊಳ್ಳುವ ಕನಸೊಂದರ ಕಾಟ ಹೇಗೆ ಬಿಚ್ಚಿಡಲಿ ಹೇಳು
ನನ್ನ ಪ್ರತಿ ಕ್ಷಣ ಬೆಂಬಿಡದೆ ಕಾಡುತ್ತ ಕೊಲ್ಲುತಿವೆ ನಿನಗಿದು ಗೊತ್ತಾ?

ಬರೆದ ಬರಹಗಳೆಲ್ಲವೂ ನೆಲೆಯೂರಲು ಕಾದು ಕುಳಿತಿವೆ ಜಾತಕ ಪಕ್ಷಿಯಂತೆ
ನನ್ನ ಅಹವಾಲಿಗೆ ಕಾದು ಕಾದು ಸುಸ್ತಾಗಿ ಮರಗಟ್ಟುತ್ತಿವೆ ನಿನಗಿದು ಗೊತ್ತಾ?

ಅಂತ್ಯ ಕಾಣದ ಹಾಡು ಅತಂತ್ರದ ಅವಸ್ಥೆಯಲಿ ಮೊರೆ ಇಡುತ್ತಿವೆ ತಲೆಬಾಗಿ
ನನ್ನ ಕನಸಿನ “ಗೀತೆ” ದೇವಾ ನೀನೇ ಬಂದು ನನಸು ಮಾಡೆನ್ನುತಿವೆ ನಿನಗಿದು ಗೊತ್ತಾ?

19-7-2019. 10.36pm

(1 & 2) ಮೊಹಬ್ಬತ್ ಸಾಲುಗಳು

(1) ನೀ ಕಾಣದಷ್ಟು ದೂರ ಇದ್ದರೂ ಇಂದು ನಿನ್ನೆಯ ವ್ಯತ್ಯಾಸವಿಲ್ಲ ನನಗೆ
ನೀ ತೊರೆದು ಹೋಗಬಹುದು ನಿನ್ನೆ ಮೊನ್ನೆಗಳ ಮರೆತು ಆದರೂ ಮಾಸುವುದಿಲ್ಲ ನೆನಪು ನನಗೆ.

ನೀ ನಾನಾಗಿ ಅಗಲಿದರೂ ನಿನ್ನಯ ಅಮಲಲಿ ಸದಾ ಉನ್ಮಾದ ನನಗೆ
ನೀ ನನ್ನೊಳ ಮನದಾಳದಿ ಬೆರೆತು ಒಂದಾದ ಆ ಗಳಿಗೆ ಮರೆಯಾಗುವುದಿಲ್ಲ ನನಗೆ.

ನೀ ಅಳಿಸಿ ತುಟಿಯ ಮೇಲಿನ ನಗುವ ಧಿಕ್ಕರಿಸಿ ನಡೆದಾಗ ಬಲು ಮೋಜು ನನಗೆ
ನೀ ಆಡುವ ಮಾತು ಮೋಡಿ ಈಗಲೂ ದಿಲ್ ಖುಷಿ ನನಗೆ.

ನೀ ನಡೆದ ವೈಖರಿಗೆ ಮನಸು ಮುದುಡಿ ಜೀವ ಒದ್ದಾಟ ಒಳಗೊಳಗೆ ನನಗೆ
ನೀ ಬರುವ ಜರೂರತ್ ಶರಾ ಕಳಿಸಿದ ‘ಗೀತೆ’ ಓದಿ ಹೃದಯ ತಕಧಿಮಿ ತೋಂ ಆಯಿತಲ್ಲ ನನಗೆ.

*************

( 2 ) ನಿನಗಾಗಿ ಗಜಲ್ ಬರೆಯುತ್ತೇನೆ ಹೃದಯ ತುಂಬ ಮೋಹ ತುಂಬಿ ಸಖ
ನಿನಗಾಗಿ ಮರು ಜನುಮ ಬಯಸಿ ಬದುಕು ಕಟ್ಟುತ್ತೇನೆ ಸಖ.

ನಿನಗಾಗಿ ಸವಿ ನೆನಪಲ್ಲಿ ಹೆಣೆಯುತ್ತೇನೆ ನೂರೆಂಟು ಮೊಹಬ್ಬತ್ ಸಾಲುಗಳ ಸಖ
ಆದರೆ ನೀ ತಿಳಿಯದಿರು ಎಂದೆಂದೂ ಇದು ಹಸಿ ಹಸಿ ನೆಲದ ಸುಖವೆಂದು ಸಖ.

ನಿನ್ನೊಲುಮೆಯ ಕಿರು ನಗೆಯಲಿ ಅರಳುವವು ನನ್ನೊಳಗೆ ಸಖ
ಆದರೆ ನೀ ಮರೆಯದಿರು ಎಂದೆಂದೂ ನನ್ನ ಬರಹಕೆ ನೀನೇ ಕಾರಣವೆಂದು ಸಖ.

ನಿನ್ನ ಭರವಸೆಯ ಉಯಿಲಿನಲಿ ನನ್ನ ಮನ ಸದಾ ನರ್ತಿಸುತಿಹುದು ಸಖ
ನೀ ಒಂದು ಕ್ಷಣ ತೊರೆದರೆ ಎಂದೆಂದೂ “ಗೀತೆ”ಯ ನೆರಳು ಸಾಗದು ಸಖ.

17-7-2019. 4.56pm