ವೃಷಭ ರಾಶಿ ಭವಿಷ್ಯ

ಹೊಸವರ್ಷದ ಹೊಸ್ತಿಲಲ್ಲಿ ಟೀವಿ ಚಾನಲ್ ಒಂದರಲ್ಲಿ ಅಂಬೋಣ ; 2021ರಲ್ಲಿ ವೃಷಭ ರಾಶಿಯವರಿಗೆ ಈ ವರ್ಷ ಆಗೊ ಕೆಲಸ ಆಗುವುದು ಡೋಲಾಯಮಾನ.  ಆಗುತ್ತೆ ಆಗುತ್ತೆ ಅನ್ನುವಷ್ಟರಲ್ಲಿ ಕೈತಪ್ಪುತ್ತದೆ… ಇತ್ಯಾದಿ ಇತ್ಯಾದಿ ಹೇಳುತ್ತಿರುವುದು ಕಿವಿಗೆ ಬಿದ್ದಿದ್ದೇ ತಡ ಟೀವಿ ಕಿವಿ ತಿರುಪಿ ಸ್ವಲ್ಪ ಸೌಂಡ್ ಜೋರು ಮಾಡಿದೆ. 

ಅದು ಹಾಗೆ ನಂಬ್ತೀವೋ ಬಿಡ್ತಿವೋ…ಆ ಕಡೆ ಈ ಕಡೆ ಓಡಾಡಿಕೊಂಡು ಬೆಳಗಿನ ಕೆಲಸ ಮಾಡುವಾಗ ಟೀವಿ ಆನ್ ಆಗಿರಬೇಕು.  ಒಂದು ಚಾನೆಲ್ ಹಾಕಿದೆನೆಂದರೆ ಕಾರ್ಯಕ್ರಮ ಯಾವುದೇ ಇರಲಿ ಅದರ ಪಾಡಿಗೆ ಅದು ನನ್ನ ಪಾಡಿಗೆ ನನ್ನ ಕೆಲಸ.  ಚಾನೆಲ್ ಬದಲಾಯಿಸುವ ಪುರುಸೊತ್ತು ಅಥವಾ ಕಾರ್ಯಕ್ರಮ ಕೂತು ನೋಡಬೇಕು ಅನ್ನುವ ಇರಾದೆ ಇಲ್ಲ.  ಒಟ್ಟಿನಲ್ಲಿ ಮನೆಯೆಲ್ಲ ಗಲಾ ಗಲಾ ಅಂತಿರಬೇಕು ಅಷ್ಟೇ.  ಇವಳೇನು ಕೆಲಸ ಕಾರ್ಯ ಮಾಡೋದು ಬಿಟ್ಟು ಬೆಳಿಗ್ಗೆಯೇ ಟೀವಿ ನೋಡುತ್ತಾ ಕೂತಿರೋದಾ? ನಮ್ಮನೆ ಟೀವಿ ಸೌಂಡು ಕೇಳಿದವರು ಅಂದುಕೊಳ್ಳುವ ಬಗ್ಗೆ ನನ್ನ ಯಾವ ತಕರಾರೂ ಇಲ್ಲ.  ಏಕೆಂದರೆ ನನಗೆ ಫುಲ್ ಮೌನ ಆಗಿಬರೋದಿಲ್ಲ ಬೆಳಿಗ್ಗೆ.  ಸಂಗ್ತೀಗೆ ಅಡಿಗೆ ಮನೆಯಲ್ಲಿ ಬೆಳಿಗ್ಗೆ ಎದ್ದಲಿಂದ ಬೆಂಗಳೂರು ವಿವಿಧ ಭಾರತಿ ಆನ್ ಆಗಿರಬೇಕು.  ಚೂರು ಪಾರು ಸುದ್ದಿ ಸಮಾಚಾರ, ಕನ್ನಡ ಚಿತ್ರಗೀತೆ ಕೇಳ್ಕೊಂಡು ಹಾಡ್ಕೊಂಡು ಅಡಿಗೆ ಕೆಲಸ …..

ನನ್ನ ಸೋದರ ಮಾವನ ಕೃಪಾಕಟಾಕ್ಷ ಜೊತೆ ಜೊತೆಗೆ ಟೀವಿ ರೆಡಿಯೋ ಕೇಳೋದು.  ಅವರ ಮನೆಯಲ್ಲಿ ಇದ್ದಾಗ ಮೇಲ್ಗಡೆ ರೆಡಿಯೋ ಕೆಳಗಡೆ ಟೀವಿ.  ಜೊತೆಗೆ ಮೂರು ನಾಲ್ಕು ಪೇಪರ್ ನಿತ್ಯ.  ಯಾಕ್ ಮಾವ ಹೀಗೆ ಎಂದರೆ ಇವುಗಳನ್ನೆಲ್ಲ ಕೇಳಿ, ನೋಡಿ, ಓದಿದ ಮೇಲೇ ನನ್ನ ನಿತ್ಯದ ಕಾರ್ಯಕ್ರಮ ನಿರ್ಧಾರ ಮಾಡೋದು.  ಇಲ್ಲ ಅಂದ್ರೆ ಹೇಗೆ ಗೊತ್ತಾಗೋದು?  ಹತ್ತು ಗಂಟೆಗೆ ಹೆಗಲಿಗೊಂದು ಜೋಳಿಗೆ ಏರಿಸಿ ಹೊರಗಡೆ ಹೊರಟರೆಂದರೆ ಸಾಯಂಕಾಲವೋ ಅಥವಾ ರಾತ್ರಿ ಬರೋದು.  ಅಷ್ಟೊಂದು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸುವ ಹುಚ್ಚು. 
ಆದರೆ ನಾನು ಮನೆಯಲ್ಲಿ ಕೇಳೋದು ಮಾತ್ರ ತಿರುಗಾಡಲು ಅಲ್ಲ.

ಅಂದಹಾಗೆ ಕೇಳುವ ಕುತೂಹಲ ನಮ್ಮ ರಾಶಿ ಚಕ್ರದ ಸಮಾಚಾರ, ಭವಿಷ್ಯ ವಾಣಿ ಉವಾಚಿಸುವಾಗ.  ಅದರಲ್ಲೂ ಈ ಮೊದಲೇ  ಯಾವುದೋ ಕಾರ್ಯ ನಿಮಿತ್ತ ಜ್ಯೋತಿಷಿಗಳ ಹತ್ತಿರ ಹೋದಾಗ “ನಿಮ್ಮದು ವೃಷಭ ರಾಶಿ.  ಜೀವನವೆಲ್ಲ ದುಡಿಯೋದೆ” ಹೇಳಿದ್ದು ಕೇಳಿದ ಮೇಲೆ ಅದು ಹಾಗೆ ಆಗುತ್ತಿರುವುದರಿಂದ ಕೊಂಚ ಭವಿಷ್ಯ ವಾಣಿ ಮೇಲೆ ಆಸಕ್ತಿ ಹೆಚ್ಚು ಮನಸಿಗೆ.

ಆಗಲಿ ನಂಗೇನೂ ಬೇಜಾರಿಲ್ಲ.  ಎತ್ತು ತಾನೆ…ಹೊಲ ಊಳೋದಾದರೇನು ಚಕ್ಕಡಿಗಾಡಿಗೆ ಹೆಗಲು ಕೊಡೋದಾದರೆ ಏನು… ಎಲ್ಲಾ ಒಂದೇ.  ಹೇಗಿದ್ರೂ ಜೀವನದ ಬಂಡಿ ಎಳಿಲೇ ಬೇಕಲ್ಲಾ…ಬಿಡೋಕಾಗುತ್ತಾ ಅಂತ ಒಂದು ಖುಷಿ, ಸಮಾಧಾನ.  ಕಾರಣ ಹಸು, ಎಮ್ಮೆಗಳ ಮಧ್ಯೆ ಬೆಳೆದವಳು.  ಹಿಂದೆಲ್ಲಾ ಅವುಗಳ ದುಡಿತ ಕಂಡು ಮರುಗುತ್ತಿದ್ದೆ ಅಪ್ಪನ ಮನೆಯಲ್ಲಿ ಇದ್ದಾಗ.  ಈಗ ನನ್ನ ರಾಶಿ ಭವಿಷ್ಯ ಅವರೊಂದಿಗೆ ನಂಟಿದೆಯಲ್ಲಾ… ಇರಲಿ ಬಿಡಿ…ತಲೆ ಹೋಗೋದೇನು?
ದೇಹದಲ್ಲಿ ಶಕ್ತಿ ಇರೋವರೆಗೆ ತಾನೇ?  ಆಮೇಲೆ ಇದ್ದೇ ಇದೆ ಪಲ್ಲಂಗದ ನಂಟು.  ಬಲ್ಲವರಾರು ಕೊನೆಗಾಲದ ಅಂಟು?

ಆದರೆ ಈ 2021ರ ಭವಿಷ್ಯ ಮಾತ್ರ ಒಂದು ರೀತಿ ಸ್ಟಾರ್ಟಿಂಗ್ ನಲ್ಲೇ ಕುತ್ತಿಗೆ ಹಿಡಿತಿದೆಯಲ್ಲಾ!  ಸಾಮಾನ್ಯವಾಗಿ ಕೇಳಿದ್ದು ಎಂತಾ ಭವಿಷ್ಯವೇ ಆಗಲಿ ಕಾರ್ಯ ರೂಪಕ್ಕೆ ಬರುವವರೆಗೂ ನಂಬೊ ಜಾಯಮಾನ ನಂದಲ್ಲ.  ನನ್ನಷ್ಟಕ್ಕೆ ಬದುಕಿನ ತೇರು ಎಳೆಯುತ್ತಿರೋದೆ.  ರಾಹುಕಾಲ, ಗುಳಿಕಕಾಲ, ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಊಹೂಂ ಇವೆಲ್ಲ ಏನೂ ನೋಡೋದೂ ಇಲ್ಲ.  ಹಾಗಂತ ನಂಬೋದಿಲ್ಲ ಅಂತಾನೂ ಅಲ್ಲ.  ನನ್ನ ಸಮಯ, ಆರೋಗ್ಯ ನೋಡಿಕೊಂಡು ಕೆಲಸ ಮಾಡ್ತಿರೋದೆ.  ಏನಾದರೂ ಎಪರಾ ತಪರಾ ಆದರೆ ಆಗ ಕೊಂಚ ಕೂತು ಯೋಚಿಸಿ,” ಬಿಟ್ಟಾಕು ಆದಾಂಗಾಗುತ್ತದೆ…. ನಿನ್ನ ಕೆಲಸ ನೀ ಮಾಡಿದ್ದೀಯಾ….ನಡಿಯೆ ಸಾಕು ಇನ್ನೆಂತಕೆ ಯೋಚನೆ” ಎಂಬ ಅಂಬೋಣ ಮನಸಿನದು.  ” ನೀನೆಷ್ಟೇ ಪ್ರಯತ್ನ,ವಾರ ತಿಥಿ ನೋಡಿದರೂ ಅದು ಏನಾಗಬೇಕೋ ಹಾಗೆ ಆಗೋದು “ಎಂಬ ನನ್ನಜ್ಜಿ ಮಾತು ನೆನಪನ್ನೂ ಮಾಡಿಕೊಂಡು ಒಂದಿಷ್ಟು ಮುಂದಿನ ಕೆಲಸಕ್ಕೆ ಅಣಿಯಾಗುತ್ತೇನೆ.

ಅದೇನಪ್ಪಾ ಅಂದರೆ ಈ ಕೋವಿಡ್ ಬಂದ ನೆವವೋ ಅಥವಾ ಟೀವಿ ಭವಿಷ್ಯವೋ ಈ ವರ್ಷ ಮಾಡಬೇಕಾದ, ಮಾಡಿಸಬೇಕಾದ ಕೆಲಸ ಒಂದೂ ಆಗ್ತಿಲ್ಲ.  ಸಂಬಂಧಪಟ್ಟ ಕೆಲಸದವರಿಗೆ ಫೋನು ಮಾಡಿದಾಗ “ಮೇಡಂ ನಾಳೆ ಬೆಳಿಗ್ಗೆ ಒಂಬತ್ತು ಘಂಟೆಗೆ ಬಂದುಬಿಡ್ತೇನೆ ಆಯ್ತಾ? ಅದೆನೇನು ಇದೆ ಎಲ್ಲಾ ಹೇಳಿಬಿಡಿ ಮುಗಿಸಿಬಿಡುವಾ.”

ನಾನಂತೂ ಸಧ್ಯ ಒಂದೊಂದಾಗಿ ಎಲ್ಲಾ ಕೆಲಸ ಮಾಡಿ ಮುಗಿಸಿ ಹಾಯಾಗಿರೋಣ ಅಂದುಕೊಂಡು ಬೆಳಿಗ್ಗೆ ಬೇಗ ಎದ್ದು ಸ್ನಾನ, ಪೂಜೆ, ತಿಂಡಿ, ಅಡಿಗೆ ಎಲ್ಲ ಮಾಡಿ ಕಾಯ್ತಾ ಇದ್ದರೆ …ಒಂಬತ್ತಾಯಿತು, ಹತ್ತಾಯಿತು ಗಂಟೆ ಜಾರೋದೊಂದೆ ಬಂತು ಆಸಾಮಿಗಳು ಪತ್ತೆಯೇ ಇಲ್ಲ.  ಶಿವನೇ…. ಏನಿದು?  ಯಾವತ್ತೂ ಹೀಗಾಗಿದ್ದಿಲ್ಲ.  ಈಗ ಮಾತ್ರ ಯಾಕೀಗೆ?  ಥೋsssss ಭವಿಷ್ಯ ನಂಬೋಹಾಗೆ ಆಯ್ತಲ್ಲಾ.

ನಿಜಕ್ಕೂ ಇವತ್ತಿಗೂ ಒಂದು ಕೆಲಸವೂ ಆಗದೇ ಮೂರು ತಿಂಗಳಿಂದ ಸತಾಯಿಸುತ್ತಿದೆ.  ಹಾಗಾದರೆ ಟೀವಿಯಲ್ಲಿ ಭವಿಷ್ಯ ಹೇಳುವವರಿಗೆ ಹಿಂದಿನ ವರ್ಷದ ಕೊನೆಯಿಂದಲೇ ಈ ರೀತಿ ಆಗುತ್ತದೆ ಎಂದು ಯಾಕೆ ಹೇಳಿಲ್ಲ?

ಅಲ್ಲಾ ಈ ಹಿಂದಿನ ವರ್ಷದ ಭವಿಷ್ಯ ನನ್ನ ಕಿವಿಗೆ ಬಿದ್ದಿಲ್ಲ ಆಯ್ತಾ?  ಅವರು ಹೇಳಿರಲೂಬಹುದು.  ಹೇಳೇ ಹೇಳಿರುತ್ತಾರೆ ಅಲ್ವಾ?  ಸುಮ್ಮನೆ ಅನುಮಾನ ಯಾಕೆ ಪಾಪ!

ಇಷ್ಟೆಲ್ಲಾ ಒದ್ದಾಟದ ನಡುವೆ ನನ್ನ ಮೇಲೆ ನನಗೆ ಅನುಮಾನ ಬಂದು ನಾನೇನಾದರೂ ಸರಿಯಾದ ಕ್ರಮದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿಲ್ಲವೆನೋ ಅಂತ ಚೂರು ಯೋಚಿಸಿದೆ.  ಇಲ್ಲ ಎಲ್ಲವೂ ಸರಿಯಾಗಿದೆ….ಓಹೋ… ಇದು ಕೊರೋನಾ ಪ್ರಭಾವ.  ಈಗ ಪಂಜರದಿಂದ ಹಕ್ಕಿ ಹೊರ ಬಂದಂತೆ ಜನರ ಕೆಲಸ ಕಾರ್ಯ ಜೋರು.  ಆದರೆ ಕೆಲವು ಕೆಲಸಗಾರರಿಗೆ ಭಯಂಕರ ಡಿಮಾಂಡ್ ಕೂಡಾ ಇರಲಿಕ್ಕೆ ಸಾಕು.

ನೋಡಿ ಮನೆಯಲ್ಲಿ ಕರೆಂಟ್ ರಿಪೇರಿ, ಪ್ಲಂಬಿಂಗ್ ಕೆಲಸ, ಕಾರ್ಪೆಂಟರ್ ಕೆಲಸ, ಸಂಪು ಟ್ಯಾಂಕ್ ಕ್ಲೀನಿಂಗ್, ಗಾರೆಯವನು (ಮೋಲ್ಡಲ್ಲಿ ಒಂದೆರಡು ಕಡೆ ಲೀಕೇಜ್), ಜೊತೆಗೆ To-let ಬೋರ್ಡ್ ತಗಲಾಕ್ಕಂಡಿದ್ದು ಇತ್ಯಾದಿ…. ಇತ್ಯಾದಿ ಉಫ್….. ಕೊರೋನಾ ಕಾಲದಲ್ಲಿ ನಮ್ಮನೆಯಲ್ಲಿ ರಿಪೇರಿದು ಇಷ್ಟುದ್ದ ಲೀಸ್ಟ್.  ಅದೇನೊ ಹೇಳ್ತಾರಲ್ಲ “ಬರಗಾಲದಲ್ಲಿ ಮಗ ಉಣ್ಣೋದು ಕಲಿತಿದ್ದನಂತೆ.”. ಪಕ್ಕದ ಮನೆ ಆಂಟಿ ಉಪದೇಶ ;. “ಕೊರೋನಾ ಕಂಡ್ರೀ… ಯಾರನ್ನೂ ಸೇರಿಸಬೇಡಿ ಮನೆಯೊಳಗೆ…..” ಅವರು ಹೇಳಿದ್ದು ಸರಿಯಾಗಿದೆ.  ಆದರೆ……

ನಾನೋ….ಆಗಿದ್ದಾಗಲಿ….ಬಂದಿದ್ದೆಲ್ಲಾ ಬರಲಿ, ಗೋವಿಂದನ ದಯವಿರಲಿ ಹೇಳ್ತಾ ರಿಪೇರಿ ಮಾಡಿಸುವ ನಿರ್ಧಾರ ಮಾಡಿದೆ.  ಆದರೆ ಮನಸಿನ ಮೂಲೆಯಲ್ಲಿ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ ಭಾಸವಾಗುತ್ತದೆ ಕೊರೋನಾ ನೆನಪಾದರೆ!

ಸ್ವಂತ ಮನೆಗಿಂತ ಬಾಡಿಗೆ ಮನೆಯೇ ವಾಸಿ ಕಂಡ್ರೀ….ಸದಾ ಒಂದಲ್ಲಾ ಒಂದು ರಿಪೇರಿ… ದುಡ್ಡು ಸುರಿತಾನೇ ಇರಬೇಕು….

ಇದರ ಮಧ್ಯೆ ಸಾಕಿಕೊಂಡ ಪುಟಾಣಿ ಬೆಕ್ಕಿಗೋಸ್ಕರ ಕೆಲವು ಕಡೆ ಗ್ರಿಲ್ ಮೇಲೆ ಮೆಷ್ ಹಾಕಿಸುವ ನಿರ್ಧಾರ. ಮೊದಲಾಕಿದ್ದು ಅಗಲ ಗ್ರಿಲ್.  ಅದರ ಮೇಲೆ ಚಿಕ್ಕದು. ಒಂದಿಷ್ಟು ಓಣಿ ಕಡೆ ಆಟವಾಡಿಕೊಂಡು ಇರಲಿ ಅಂತ.
ಪಕ್ಕನೆ ಕಿಟಕಿ ಸಂಧಿಯಲ್ಲಿ ಪರಾರಿ ಆಗದಿರಲೆಂಬ ಕಾಳಜಿ.  ಈ ಹಿಂದೆ ಸಾಕಿದ ಬೆಕ್ಕುಗಳೆಲ್ಲ ನಾಯಿ ಬಾಯಿಗೆ ಬಲಿಯಾಗಿ ನೆನಪಿಸಿಕೊಂಡರೆ ಯಮ ಸಂಕಟ!

ಹತ್ತು ದಿನಗಳಿಂದ ಬರ್ತೀನಿ ಬರ್ತೀನಿ ಹೇಳುತ್ತಿದ್ದ ಗ್ರಿಲ್ ನವನು ಇವತ್ತಂತೂ ತನ್ನ ಪರಿಕರಗಳೊಂದಿಗೆ ಬೆಳಿಗ್ಗೆ ಒಂಬತ್ತಕ್ಕೆಲ್ಲ ಬರ್ತೀನಿ ಅಂದವನು ಮಧ್ಯಾಹ್ನವಾದರೂ ಬಾರದೇ ಇನ್ನೇನು ಉಂಡು ಮಲಗಿದ್ನಾ? ತಕಳಪ್ಪಾ ಫೋನು ಮೇಡಂ ಲೇಟಾಗೋಯ್ತು ಊಟ ಮಾಡಿ ಬರ್ತೀನಿ. ಇನ್ನೆಲ್ಲಿ ಮಲಗಲು ಮನಸ್ಸು ಬರುತ್ತಾ?  ಖುಷಿಯಲ್ಲಿ ಎದ್ದೆ, ಒಂದು ಬಿಸಿ ಚಹಾ ಕುಡಿದು ಕಾದೆ… ಕಾದೆ…. ಅಂತೂ ಬಂದ್ರಪ್ಪಾ ನಾಲ್ಕು ಜನರ ತಂಡ ಮನೆ ಮುಂದೆ ಸಂಜೆ ನಾಕೂಮೂವತ್ತಕ್ಕೆ ಗಡರ್ ಗಡರ್ ಸೌಂಡ್ ಮಾಡುತ್ತಾ ನಿಂತಿತು ಆಟೋ…..

ನೋಡಿದೆ  ಮೆಷ್ಶಿಗೆ ಬಣ್ಣ ಸರಿ ಹಚ್ಚಿಲ್ಲ…. ಸುತ್ತುವ ತಂತಿ ಇದಲ್ಲಾ…..ನಂಗ್ಯಾಕೊ ಈ ರೀತಿ ಕೆಲಸ ಸರಿ ಬರ್ತಿಲ್ಲ

ಮೇಡಂಮ್ಮೋರೆ ಇದೇ ತಂತಿ ಸುತ್ತೋದು.  ಒಂದು ವರ್ಷ ಏನೂ ಆಗಲ್ಲ…. ಬಣ್ಣ ಹಚ್ಚಬೇಕಾದರೆ ತೆಗೆದಾಗ ಮತ್ತೆ ನೀವೇ ಬೇರೆ ತಂತಿಯಲ್ಲಿ ಸುತ್ತಿಸಬೇಕು…..

ಅದೆಲ್ಲಾ ಆಗಲ್ಲ ಬೇರೆ ಗಟ್ಟಿಯಾದ ತಂತಿ ತಂದು ಸುತ್ತಿ, ಇದು ತುಕ್ಕು ಹಿಡಿತದೆ.  ಇಲ್ಲಾಂದ್ರೆ ಬೇಡವೇ ಬೇಡ ಹೋಗಿ ಎಂದು ದಬಾಯಿಸಿದ್ದಕ್ಕೆ ಮತ್ತದೇ ಆಟೋದಲ್ಲಿ ಹೊರಟರು ಇಬ್ಬರು ತಂತಿ ತರೋದಕ್ಕೆ.

ಬಂದ್ರಾ….ಸರಿ ಹೋಯ್ತು…ಹತ್ತು ನಿಮಿಷದಲ್ಲಿ ಶುರುವಾಯಿತು  ಮಳೆ, ಕರೆಂಟಿಲ್ಲ…

“ಮೇಡಂವರೆ ಈ ಮಳೆಯಲ್ಲಿ ಗ್ರಿಲ್ ವರ್ಕ್ ಮಾಡೋದಕ್ಕೆ ಆಗುವುದಿಲ್ಲ….. ಇನ್ನೊಂದು ದಿನ ಬರುತ್ತೇವೆ ಎಲ್ಲಾ ಸರಿಮಾಡಿಕೊಂಡು.”

ತಕಳಪ್ಪಾ ಆಗೋ ಕೆಲಸಕ್ಕೂ ಕಲ್ಲು ಬಿತ್ತು.  ಇದ್ಯಾವ ಪರಿ ಮಳೆಗಾಲ ಈ ವರ್ಷ! ಜನವರಿಯಲ್ಲೂ ಸುರಿಯುತ್ತೆ……

ಇರಲಿ.  ಇಷ್ಟು ದಿನವೇ ತೆಡೆದಿದೆ.  ಇನ್ನೊಂದು ಎರಡು ದಿನದಲ್ಲಿ ಏನಾಗಿಹೋಗೋದು?  ಆಯ್ತಪ್ಪಾ ಹಾಗೆ ಮಾಡಿ ಎಂದೆ.  ಜೊತೆಗೆ ಮಳೆ, ಚಳಿ ನೋಡಿ ಯಾಕೊ ಪಾಪ ಅನಿಸಿತು…ಇರಿ…ಇರಿ…ನಿಮಗೆಲ್ಲ ಕಾಫಿನೋ ಟೀನೋ… ಹೇಳಿ.  ಕುಡಿದು ಹೋಗಿ …..ಅಂತ ಕೊಟ್ಟಿದ್ದೂ ಆಯಿತು …..ಬಿಸಿ ಬಿಸಿ ಕಾಫಿ ಕುಡಿದು ಹೋದರು ಶನಿವಾರಕ್ಕೆ ಗೀಟಾಕಿ.

ಇನ್ನು ಕಾರ್ಪೆಂಟರ್ ಭಾನುವಾರ ಬರ್ತೀನಿ ತಪ್ಪದೇ ಅಂದವನು ಅದ್ಯಾವ ಭಾನುವಾರ ಬರ್ತಾನೋ ಗೊತ್ತಿಲ್ಲ…..

ಮತ್ತೆ ಪ್ಲಂಬರ್ ನಾಳೆ ಬೆಳಿಗ್ಗೆ ಒಂಬತ್ತಕ್ಕೆಲ್ಲ ಬರ್ತೀನಿ ಅಂದಿದ್ದಾನೆ… ಮೂರು ತಿಂಗಳಿಂದ ಹೀಗೆ ಹೇಳುತ್ತಾ ಸತಾಯಿಸ್ತಾ ಬಂದವನು ನೋಡಬೇಕು ನಾಳೆಯಾದರೂ ಅವನ ಮಾತು ಖರೇ…ಆಗುತ್ತಾ  ಅಥವಾ ಈ ಚಳಿಯಲ್ಲಿ ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿದ್ದೇ ಬಂತಾ ಅಂತ??

6-1-2021. 10.45pm

ತೆಪ್ಪಗೆ ಇರು ಅಂದೆ….


ಮೊನ್ನೆ ಒಂದಿನ ಸಾಯಂಕಾಲ ಆಗುತ್ತಿದ್ದಂತೆ ಗಂಟಲು ಸ್ವಲ್ಪ  ಉರಿ,ನೆಗಡಿಯಾಗುವಾಗ ಆಗುತ್ತಲ್ಲಾ ಹಾಗೆ ಒಂದು ರೀತಿಯ ಇರಿಟೇಷನ್.  ಉಸಿರಾಟದಲ್ಲಿ ಸ್ವಲ್ಪ ಕಷ್ಟ ಅಂದರೆ ಬಾಯಿ ತೆರೆದು ಉಸಿರಾಡಬೇಕು ಅನಿಸುವಷ್ಟು.  ಸಂಜೆ ದೀಪ ಹಚ್ಚಿ ಸ್ವಲ್ಪ ಭಗವತ್ಗೀತೆ ಪಾರಾಯಣ ಮಾಡುವ ರೂಢಿ.  ಎಂದಿನಂತೆ ಸರಾಗವಾಗಿ ಓದಲು ಆಗುತ್ತಿಲ್ಲ.  ಸ್ವರವೇ ಹೊರಗೆ ಬರ್ತಿಲ್ಲ.

ಅಯ್ಯೋ ಶಿವನೇ….ಇದೆನಾಯಿತು ನನಗೆ?  ಪಕ್ಕನೆ ಕೊರೋನಾ ಸಿಂಟೆಮ್ಸ ಹೀಗೀಗೆ ಇರುತ್ತದೆ ಎಂದು ಟೀವಿಯಲ್ಲಿ ಪೇಪರಲ್ಲಿ ವಾಲಗ ಊದುತ್ತಿದ್ದದ್ದು ಜ್ಞಾಪಕ ಬಂತು ನೋಡಿ…. ಸೋಫಾದಲ್ಲಿ ಕೂತವಳು ಸಣ್ಣಗೆ ಮನಸ್ಸು ಅದುರಿದ್ದಲ್ಲದೇ ಒಂದು ರೀತಿ ಗಾಬರಿ, ಭಯದಲ್ಲಿ ಎದೆ ಹೊಡೆದುಕೊಳ್ಳಲು ಶುರುವಾಯಿತು. 

ಹೌದಾ…ನಂಗೂ ಬಂತಾ….ಯಪ್ಪಾ….ಈಗೇನು ಮಾಡಲಿ????
ಕೊರೋನಾ ಎಂಟ್ರಿ ಆದಾಗಿಂದ ದಿನಾ ಕಷಾಯ ಮಾಡಿ ಕುಡಿಯಬೇಕು ಮನಸಲ್ಲಿ ಅಂದುಕೊಂಡಿದ್ದೇ ಬಂತು.  ಆದರೆ ಮಾಡಿ ಕುಡಿಯಲು ಬೋರು.  ನಾಳೆ ಕುಡಿವಾ.  ಇವತ್ತು ಯಾರು ಮಾಡುತ್ತಾರೆ.  “ನಾಳೆ ಎಂದವನ ಮನೆ ಹಾಳು” ಗೊತ್ತಿದ್ದೂ ಸೋಂಬೇರಿತನ.  ಜೊತೆಗೆ ಆ ಕಷಾಯ ಕುಡಿಬೇಕು ಅಂದರೆ ಯಮ ಯಾತನೆ, ಗಂಟಲಲ್ಲಿ ಇಳಿಸೋದೇ ಕಷ್ಟ.   ಚಿಕ್ಕವರಿದ್ದಾಗ ಮಳೆಗಾಲದಲ್ಲಿ ಒಂದು ಅಕ್ಷೀ… ಬಂದರೆ ಸಾಕು ಕಷಾಯ ರೆಡಿ.  ಹಠ ಮಾಡಿದರೆ ಅಪ್ಪಯ್ಯಾ ಮೂಗು ಹಿಡಿದು ಎಮ್ಮೆ ಕರಕ್ಕೆ ಗೊಟ್ಟದಲ್ಲಿ ಔಷಧಿ ಕುಡಿಸಿದಂತೆ ನಮಗೂ ಸಮಾ ಸೇರಿಸುತ್ತಿದ್ದರು ಹೊಟ್ಟೆಗೆ.  ಗೊಟ್ಟದಲ್ಲಲ್ಲಾ…ತಪ್ಪು ತಿಳಿಯಬೇಡಿ….. ಲೋಟದಲ್ಲಿ!

ಈಗ ನೋಡಿ ನನಗೆ ಸರ್ವಸ್ವತಂತ್ರರು ಎಂಬ ಕೊಂಬು ಮೂಡಿದ ಮೇಲೆ ಆ ಕಾಲದ ರಾಮಬಾಣ ಈಗ ಬೆಲೆ ಕಳಕೊಂಡು ಏನಿದ್ರೂ ಮೆಡಿಕಲ್ ಸ್ಟೋರ್ಸ್ ಗೆ ಹೋಗೋದು ಮಾತ್ರೆ ನುಂಗೋದು.   ಕಷಾಯ ಕುಡಿಯೋದಿರಲಿ…. ಊಹೂಂ… ನೆನಪೂ ಆಗೋದಿಲ್ಲ.

ಆದರೆ ಈಗ ಅದೇ ಕೊರೋನಾ ಎಲ್ಲ ನೆನಪಿಸುತ್ತಿದೆ.  ಆದರೂ ನನಗೆ ಹೀಗನಿಸುವುದು ;  ಕೊರೋನಾ ತಡೆಗಟ್ಟಲು ಇಮ್ಮೂನಿಟಿ ಹೆಚ್ಚಿಸಿಕೊಳ್ಳಲು ಚಾ ಕುಡಿಯಬೇಕು ಅಂತಿದ್ದರೆ ತಪ್ಪದೆ ಪಟಕ್ಕಂತ ಮಾಡಿಕೊಂಡು ಕುಡಿತಿದ್ನಪ್ಪಾ!  ಒಂದಲ್ಲಾ ಹತ್ತು ಬಾರಿ ಬೇಕಾದರೂ ಗೊಟಾಯಿಸುತ್ತಿದ್ದೆ….ಯಾರೂ ಹೇಳುವ ಅಗತ್ಯವೂ ಇರಲಿಲ್ಲ. ಆದರೀಗ ನೋಡಿ ಇಲ್ಲೀಗ ಕೊರೋನಾ ಭಯದಿಂದಾಗಿ ಸೋಂಬೇರಿತನ ನೆಗೆದುಬಿದ್ದು ನೆಲ್ಲಿಕಾಯಿ ಆಯಿತು.

ಸರ್..ರ್….ನೇ ಎದ್ದೆ.  ನೀರಿಟ್ಟು ಬೆಲ್ಲ ಹಾಕಿದೆ.  ಅರಿಶಿನ ಪುಡಿ, ಜೀರಿಗೆ, ಧನಿಯಾ, ಕಾಳುಮೆಣಸಿನ ಪುಡಿ, ಶುಂಠಿ ಪುಡಿ ಹೇಗಿದ್ದರೂ ವಾರಾಂತ್ಯಕ್ಕೆ ಮಗಳು ಅಡುಗೆ ಮನೆ ಸೇರಿದಾಗ ನಾರ್ಥ್ ಇಂಡಿಯನ್ ಡಿಷ್ಷಸ್ಗೆ ಕಂಪಲ್ಸರಿ ಬೇಕಾದ  ಐಟಂಗಳು ರೆಡಿ ಇಟ್ಟಿದ್ದು….ಮಾಡಿಟ್ಟಿಲ್ಲಾ ಪುಡಿಗಳು ಅಂದರೆ ಸಹಸ್ರನಾಮ ಗ್ಯಾರಂಟಿ ಗೊತ್ತು.  ಅದಕ್ಕೇ ಒಂದೊಂದು ಬಾಟಲಿ ತುಂಬಾ ಪುಡಿ ಮಾಡಿ ಲೆಬಲ್ ಹಚ್ಚಿದ್ದಕ್ಕೆ ನಾನು ಸಂಬಾವಿತಳಾಗಿ ಮೆಚ್ಚಿನ ಅಮ್ಮನಾಗಿಬಿಟ್ಟಿದ್ದು ಅವಳ ದೃಷ್ಟಿಯಲ್ಲಿ.  ಆದರೀಗದಂತೂ ಬಹಳ ಉಪಯೋಗ ಆಯ್ತು.  ಫಟಾಫಟ್ ಎಲ್ಲ ಕೊಂಚ ಕೊಂಚ ಹಾಕಿ ಕುದಿಸಿ ಹಾಲು ಹಾಕಿ ಖಡಕ್ ಕಷಾಯ ಕುಡಿದು ತೆಪ್ಪಗೆ ಕೂತೆ. ಊಹೂಂ ಹಂದಾಡಲಿಲ್ಲ ಗಂಟಲು.  ನಾಲಿಗೆ ರುಚಿ ಇದೆ.  ಮೈಕೈ ನೋವು ಇಲ್ಲ.  ಜ್ವರ ಇಲ್ಲವೇ ಇಲ್ಲ.  ಬೆವರುತ್ತಿದ್ದೆನಲ್ಲಾ…..

ಅಷ್ಟೊತ್ತಿಗೆ ಟೀವಿ ನ್ಯೂಸ್ ;. ಮಂಡ್ಯಾ ಸಂಸದೆ ಸುಮಲತಾ  ಅಂಬರೀಶ್ ರವರಿಗೆ ಗಂಟಲು ನೋವು…..ಕೊರೋನಾ ಪಾಸಿಟೀವ್………ಕಿವಿಗೆ ಬಿದ್ದಿದ್ದೇ ತಡ ಮತ್ತಷ್ಟು ದಿಗಿಲು.

ನೀರು ಕಾಯಿಸಿದೆ.  ಉಪ್ಪು ಹಾಕಿದೆ.  ಬಾಯಿಗೆ ಸುರಿದು ಗಂಟಲು ಕೊಳ ಕೊಳ ಅಂತ ಗಾರ್ಗಿಲ್ ಮಾಡಿದೆ.  ಮತ್ತೂ ಸ್ವಲ್ಪ ಹೊತ್ತು ಕಾದೆ.  ಸ್ವಲ್ಪ ಕಡಿಮೆ ಆದಾಂಗಾಯ್ತು.  ಬಡ್ಡೀ ಮಗಂದು ಕೊರಾನಾ ಅಂತೆ ಕೊರೋನಾ…. ತತ್ತರಕಿ ಇಷ್ಟೊಂದು ಹೆದರಿಸೋದಾ?  ಹುಟ್ಟಾಪರಿ ಎಷ್ಟು ಸರ್ತಿ ಗಂಟಲು ಇರಿಟೇಷನ್ ಆಗಿಲ್ಲಾ?  ಆಗೆಲ್ಲಾ ಒಂದು ಚೂರೂ ಮೈ ಬೆವರಿಲ್ಲಾ…ಭಯನೂ ಆಗಿಲ್ಲ.  ಇನ್ನೇನು ತಡೆಯೋಕೆ ಆಗಲ್ಲಾ ಅಂದಾಗ ಅಪ್ಪನ ನೆನಪಿಸಿಕೊಂಡು ಎದ್ದೋಗಿ ಕಷಾಯನೋ, ಹಾಲು ಅರಿಶಿನವೋ… ಕುಡಿದು ಗಂಟಲಿಗೆ ಉಪ್ಪು ಬಿಸಿ ನೀರಲ್ಲಿ ಗೊಟಾಯಿಸಿ ಕಂಬಳಿ ಹೊದ್ದು ಮಲಗಿದ್ದು ಬಿಟ್ಟರೆ ಈ ಪಾಟಿ ಹೆದರಿದ್ದು ಈವಾಗಲೇ…. ಇದು ಕೈಯಲ್ಲಿ ದುಡ್ಡು ಓಡಾಡದ ದಿನಗಳ ಸಮಾಚಾರ ಆಯ್ತಾ?  ಇರಲಿ…

ಈಗ ಕೇಳಿ; ಸುತ್ತ ಕಣ್ಣಾಡಿಸಿದೆ…ಫ್ರಿಜ್ ಮೇಲಿರೊ ಔಷಧಿ ಬಾಕ್ಸ್ ನಾನಿದ್ದೀನಲ್ಲಾ…ಬೇಕಾ? ನುಂಗು ಒಂದು ಮಾತ್ರೆ ಅಂದಾಂಗಾಯಿತು.  ಬೇಡಾ ಬೇಡಾ ಈಗ ಕೊರೋನಾ ಕಾಲ. ಯಾಕೆ ಟೀವಿ ನೋಡಿಲ್ವಾ?  ದಿನಾ ಗರಿ ಗರಿಯಾಗಿ ಒಂದೊಂದು ಚಾನಲ್ಲಿನಲ್ಲೂ ಬರೀ ಇದೇ ವಿಷಯ ; ಭಾರತೀಯ ನಾಟಿ ವೈದ್ಯ ಪದ್ಧತಿ ಕೊರೋನಾ ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ… ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ…. ಹಾಗೆ ಹೀಗೆ… ಇತ್ಯಾದಿ ಇತ್ಯಾದಿ. ನಿಮಗಿಂತ ನನ್ನಪ್ಪನ ಕಾಲದ ಮದ್ದೇ ವಾಸಿಯಂತೆ …..ತೆಪ್ಪಗಿರಿ ಅಂದೆ. 

ಮತ್ತೊಮ್ಮೆ ಹಂಗೇ ಬಿಸಿ ಬಿಸಿ ನೀರಲ್ಲಿ ಸ್ವಲ್ಪ ಹೆಚ್ಚೇ ಉಪ್ಪು ಹಾಕಿ ಗೊಟಾಯಿಸಿ ಧರ್ಮಸ್ಥಳ ದೇವರಿಗೆ ಹರಕೆ ಹೊತ್ತು ಮಲಗಿದೆ.  ಬೆಳಗಾಯಿತು…ಅರೆರೆ….ನನ್ನ ಗಂಟಲು ಸಮಾ…. ಆಗಿತ್ತು.   ಮೊಗಾಂಬೋ ಖುಷ್ ಹುವಾ….ಹಿಂದಿ ಡೈಲಾಗ್ ಹಳೆ ಪಿಚ್ಚರ್ ಜಮಾನಾದಲ್ಲಿ ನೋಡಿದ್ದು ಅದ್ಯಾಂಗೆ ನೆನಪಿಗೆ ಬಂತೋ ನಾ ಕಾಣೆ. 

ಬೆಳಗಿನ ಖಡಕ್ ಸೆಕೆಂಡ್ ಚಹಾ ಮಗಳು ಎದ್ದ ಮೇಲೆ ಜೊತೆಗೆ ಕುಡಿಯುವುದು ರಾತ್ರಿ ಬೆಳಗಿನವರೆಗಿನ ಸಮಾಚಾರ ಹೇಳಿಕೊಂಡು ಈ ವಿಷಯ ಟಾಪ್ ಲೆವೆಲ್ ನಲ್ಲಿ ಇತ್ತಲ್ಲಾ ….ಕೇಳಿದ ಮಗಳು “ಅಮ್ಮಾ ಯಾಕೆ ನನಗೆ ಹೇಳಲಿಲ್ಲ? ಏನಾದರೂ ಆಗಿದ್ರೆ…?  ಕೊರೋನಾ ಅಂದರೆ ನೀನು ಯೋಗ ಮಾಡಿ ಓಡಿಸಿದ ರೋಗದಂತಲ್ಲಾ.  ಸ್ವಲ್ಪ ಎಚ್ಚರಿಕೆ ಇರಲಿ.  ಗೇಟ್ ಮುಂದೆ ನೀರಾಕಿ ರಂಗೋಲಿ ಹಾಕೋದು ಬಂದು ಮಾಡು.  ಅದೊಂದು ನೆವಾ ನಿನಗೆ.  ಹೋಗ್ತೀಯಾ ಆ ಗಿಡಗಳ ಮದ್ಯೆ ಅರ್ಧ ಗಂಟೆ ಇರ್ತೀಯಾ.  ರೋಡೆಲ್ಲಾ ಗುಡಿಸ್ತೀಯಾ.  ಈಗ ಸರಿಗಿಲ್ಲ ಟೈಮ್.  ಶಾಸ್ತ್ರ ಬಿಟ್ಟಾಕು.  ಏನೂ ಮಾಡಬೇಡಾ.   ಹಾಲು ನಾನೇ ತರ್ತಿನಿ. ನೀನು ಹೋಗಬೇಡಾ.  ರಸ್ತೆಗೆ ಇಳಿಬೇಡಾ….. ಇತ್ಯಾದಿ ಇತ್ಯಾದಿ….” ಅವಳ ಮಾತಿಗೆ ಪಕ್ಕನೆ ಫುಲ್ ಸ್ಟಾಪ್ ಬೀಳೊ ತರಾ ಕಾಣ್ತಿಲ್ಲಾ….

ತಗಳಪ್ಪಾ ಕೈಯಲ್ಲಿ ಇದ್ದ ಚಹಾ ಹಂಗೇ…. ತಣ್ಣಗಾಗಿತ್ತು.  ನಂದಲ್ಲಾ ಅವಳದ್ದು.  ನಾನಾಗಲೇ ಹೀರಾಗಿತ್ತು ಅವಳ ಕಾಳಜಿಯ ಮಾತಿನ ಮಧ್ಯೆ.  ಅವಳ ಮಾತು ಕೇಳಿ ಖುಷಿ ಆಯಿತು.  ಆದರೆ ಒಳಗೊಳಗೆ ಸಣ್ಣ ಬೇಜಾರು.  ಹಾಲು ತರುವ ನೆಪದಲ್ಲಾದರೂ ಎರಡು ಮೂರು ದಿನಕ್ಕೆ ಒಮ್ಮೆ ಕಾಲು ಕಿಲೋ ಮೀಟರ್ ರೋಡಲ್ಲಿ ಹೋಗಿ ಬರುತ್ತಿದ್ದೆ.  ಅದೂ ಬಂದಾಯ್ತಲ್ಲಾ….ಉಫ್…. ಇನ್ನು ನೀರಾಕೋದೂ ಬಿಡಬೇಕಾ…? 

ಇತ್ತೀಚೆಗೆ ಕೊರೋನಾ ಧಾಳಿ ಹೆಚ್ಚಾಗುತ್ತಿದ್ದಂತೆ ಆಗಲೇ ದಿನಾ ತರುವ ಹಾಲು ಒಂದೇ ದಿನದಲ್ಲಿ ನಾಲ್ಕು ದಿನಕ್ಕಾಗುವಷ್ಟು ತಂದು ಫ್ರೀಜರ್ ನಲ್ಲಿ ಇಟ್ಟು ಚಹಾ ಗೊಟಾಯಿಸಲು ಉಪಯೋಗಿಸುತ್ತಿದ್ದದ್ದು ಕೊರೋನಾ ರೂಢಿ ಮಾಡಿಸಿತ್ತು.  ಮೊದಲಾದರೆ ಹೀಗಿರಲಿಲ್ಲ.  ಫ್ರೇಶ್ ಹಾಲೇ ಆಗಬೇಕಿತ್ತು.  ಈಗ ಬಿಡಿ ಎಲ್ಲಾ ಬಂದ್..ಬಂದ್…ಬಂದ್…
ನೀರೂ ಬಂದ್…ಹಾಲೂ ಬಂದ್…..

ಅಯ್ಯೋ…ಈ ಯೋಚನೆ ಆಗುತ್ತಿದ್ದಂತೆ ಇನ್ನೂ ಏನೇನು ಬಂದು ಮಾಡಿಸುತ್ತೋ ಈ ಕೊರೋನಾ…  ಆದರೆ ಒಂದು ಮಾತು ಸಣ್ಣದಾಗಿ ಅನುಭವಿಸಿದ ಕೊರೋನಾ ಕಲ್ಪನೆ ನೆನಪಾಗಿ ತೆಪ್ಪಗೆ ಮಗಳ ಮಾತು ಕೇಳುವುದೇ ವಾಸಿ ಅಂತ ಅನಿಸುತ್ತಿರೋದು ಸುಳ್ಳಲ್ಲಾ.  ಅವಳಿಗೆ ಎದುರುತ್ತರ ಕೊಡದೇ ಟೀವಿಯಲ್ಲಿ ಕೊರೋನಾ ಕೊರೋನಾ ಎಂದು ಆಗಾಗ ಹೇಳುತ್ತಿರುವಂತೆ ಅವಳೇನಂದರೂ ಆಯ್ತು ಆಯ್ತು ಅಂತ ಹೇಳುತ್ತ ತೆಪ್ಪಗೆ ಮನೆ ಗೇಟೊಳಗೇ ದರ್ಬಾರ್ ಮಾಡಿಕೊಂಡು ಇದ್ದುಬಿಟ್ಟಿದ್ದೇನೆ. 

ಏಕೆಂದರೆ ಸಾವು ನನ್ನ ಹಿಂದೆಯೇ ಇದೆಯೆಂಬುದು ಗೊತ್ತಿದ್ದರೂ ಭಯ ಪಡದ ನಾನು ಕೊರೋನಾ ಅಂದರೆ ಬಹಳ ಭಯ ಪಡುತ್ತೇನೆ.    ಎಷ್ಟು ಭಯ ಪಡಿಸುತ್ತಿದೆಯೆಂದರೆ ಚಿಕ್ಕವಳಿರುವಾಗ ರಾತ್ರಿ ಪತ್ತೆದಾರಿ ಕಾದಂಬರಿ ಓದಿ ಎದ್ದು ದೀಪ ಆರಿಸಲೂ ಹೆದರಿ ಕಂಬಳಿ ಒಳಗೇ ಮುದುರಿ ಮಲಗ್ತಿದ್ದ ಅನುಭವಕ್ಕಿಂತಲೂ ಹೆಚ್ಚು. 
ಒಂದೇ ಉಸುರಿಗೆ ಸತ್ತರೆ ಪರವಾಗಿಲ್ಲ.  ಆದರೆ ಈ ಕೊರೋನಾ ನರಳಾಟ, ಅದು ಹಂತ ಹಂತವಾಗಿ ಕಾಡಿಸೊ ಹಿಂಸೆ ಯಾರಿಗೆ ಬೇಕು? ಅನುಭವಿಸೋದು ಹೇಗೆ? ಆಸ್ಪತ್ರೆ ಮೆಟ್ಟಿಲು ಹತ್ತುವಂತ ಶಿಕ್ಷೆ ನನಗೇನು ನನ್ನ ವೈರಿಗೂ ಬೇಡಾ.   ಕೊರೋನಾ ಬಂದು ಸತ್ತರೆ 
ನಮ್ಮ ಬಾಡಿನೂ ನೋಡೋಕೆ ಬಿಡದೆ ಎಳೆದು ಹಾಕ್ತಾರಂತಲ್ಲಾ ……ಈ ಸತ್ಯ ಸಿಕ್ಕಾಪಟ್ಟೆ ಹಿಂಸೆ.  ಕನಸಿನಲ್ಲೂ ಬೆಚ್ಚಿ ಬೀಳುವಂತಾಗುತ್ತದೆ. 

ದೊಡ್ಡದಾಗಿ ಸತ್ತ ಮೇಲೆ ಏನಾದರೇನು ಅಂತ ವೇದಾಂತಿ ತರ ನಾನೂ ಆಗಾಗ ಹೇಳಿದ್ದಿದೆ.  ಆದರೆ ಅದೀಗ ಕಾಲುಬುಡಕ್ಕೆ ಬಂದರೆ …?  ಕೊರೋನಾ ನನ್ನ ಬಂಡವಾಳ ಬಯಲುಮಾಡುತ್ತಿದೆ.  ಬೇಡಪ್ಪಾ ಬೇಡಾ ಇದರ ಸಾವಾಸಾ. 

ಇನ್ನೊಂದು ನಾನು ದೇಹ ದಾನ ಮಾಡುವ ಉದ್ದೇಶ ಆಗೊಮ್ಮೆ ಈಗೊಮ್ಮೆ ಜ್ಞಾಪಿಸುತ್ತದೆ ಮನಸ್ಸು.  “ಅಲ್ಲಾ ನಿನ್ನ ದೇಹ ಆಗಲೇ ಒಂದೆರಡು ಕಾಯಿಲೆ ಅನುಭವಿಸಿದೆ.  ಈಗ ಶುಗರ್ ಬೇರೆ ಸುತ್ತಿಕೊಂಡಿದೆ.  ಹೀಗಿರುವಾಗ ದೇಹ ದಾನ ಮಾಡಬಹುದಾ? ವಿಚಾರಿಸಿಕೊ ಮಾರಾಯ್ತಿ ಅಂತಲೂ ಕುಟುಕುತ್ತದೆ.  ಆಗಲೇ ಕಣ್ಣು ಕೊಟ್ಟಾಗಿದೆ ಅಂದೆ…ಈಗ ದೇಹನಾ? “ಅಂತಲೂ ನನ್ನ ಪುಕ್ಕಲುತನಕ್ಕೆ ಅಣುಕಿಸುತ್ತದೆ.

ಈ ಅಣುಕಿಸುವ ಮಾತಿದೆಯಲ್ಲಾ ನನಗೆ ಆಗಿ ಬರೋದಿಲ್ಲ.  ಮೈಯ್ಯೆಲ್ಲಾ ಉರಿದು ಕೋಪ ನೆತ್ತಿಗೇರಿತು ಅಂದರೆ ಸಾಧಿಸಿಬಿಡುವ ಛಲ ಭುಗಿಲೇಳುತ್ತದೆ.  ಈಗ ಹಾಗೇ ಆಗಿ ಏನಾದರಾಗಲಿ ಕೊರೋನಾ ನನ್ನ ಹತ್ತಿರ ಸುಳಿಯದಂತೆ ಅತ್ಯಂತ ಜಾಗೃತಿವಹಿಸುತ್ತಿದ್ದೇನೆ.  ಅದಕ್ಕಾಗಿ ನಾನು ಕೊರೋನಾ ವಿರುದ್ಧ ಹೋರಾಡುತ್ತಲೂ ಇದ್ದೇನೆ.  ದಿನಾ ತಪ್ಪದೇ ದಿನಕ್ಕೊಂದು ಬಾರಿ ಕಷಾಯ ಕುಡಿಯೋದು.  ತಪ್ಪದೇ ಪ್ರತಿನಿತ್ಯ ಯೋಗ ಮಾಡೋದು.  ಟೆರೇಸ್ ಮೇಲೆ ವಾಕಿಂಗ್.  ಇದರಿಂದಾಗಿ ದಿನವೆಲ್ಲಾ ಲವಲವಿಕೆಯಿಂದ ಇದ್ದು ನನ್ನಲಡಗಿದ್ದ ಸೋಂಬೇರಿತನ ಕಾಲ್ಕಿತ್ತ್ಕೊಂಡು ಓಡೋಗಿಬಿಟ್ಟಿದೆ.

ಅಂದಹಾಗೆ ಈ ನಡುವೆ ಟೆರೇಸ್ ಮೇಲೆ ಪುಟ್ಟ ಕಿಚನ್ ಗಾರ್ಡನ್ ರೆಡಿ ಮಾಡಿದ್ದೇನೆ. ಸಿಮೆಂಟ್ ಚೀಲದಲ್ಲಿ  ಒಂದೆಲಗಾ, ಬಸಳೆ, ಪುದಿನಾ, ದೊಡ್ಡಪತ್ರೆ, ಟೊಮೆಟೊ, ಎಲವರಿಗೆಕುಡಿ,ಗಿಣಿಕೆ ಸೊಪ್ಪು, ಈರುಳ್ಳಿ ಸೊಪ್ಪು ಇತ್ಯಾದಿ ಬೆಳೆಯುತ್ತಿದೆ.  ಇರೊ ಮಣ್ಣಿಗೇ ಮನೆಯ ಹಸಿ ತ್ಯಾಜ್ಯಗಳನ್ನು ಹಾಕಿ ಅವುಗಳ ಹೊಟ್ಟೆ ತುಂಬಿಸುತ್ತಿದ್ದೇನೆ.  ಸೋಂಪಾಗಿ ಬೆಳೆಯುತ್ತಿವೆ.  ದಿನಕ್ಕೊಂದು ಮಲೆನಾಡಿನ ತಂಬುಳಿ ಒಂದೊಂದು ಗ್ಲಾಸ್ ಅಲಂಕರಿಸಿ ನಮ್ಮ ಹೊಟ್ಟೆ ಸೇರುತ್ತಿವೆ.

ಆದರೂ ಈ ಟೀವಿ ಮುಂದೆ ಕೂತಾಗ ಕೆಲವೊಮ್ಮೆ ಮನಸ್ಸು ಚಂಚಲವಾಗಿಬಿಡುತ್ತದೆ.  ಏನು ಗೊತ್ತಾ ಎಲ್ಲಾದರೂ ಸುತ್ತಾಡೊ ಹುಚ್ಚು.  “ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬನ್ನಿ.  ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ.  ಕೊರೋನಾಕ್ಕೆ ಭಯಪಡದಿರಿ.  ಈಗಾಗಲೇ ಕೆಲವರು ಬರುತಾತಿದ್ದಾರೆ…” ಇತ್ಯಾದಿ ಇತ್ಯಾದಿ. ಎಲ್ಲಾ ಓಕೆ ಆದರೆ ಈ ಮನಸ್ಸನ್ನು ಕಟ್ಟಿಹಾಕೋದಿದೆಯಲ್ಲಾ ಭಯಂಕರ ಕಷ್ಟ.  ನಿಮಗೂ ಹೀಗೇ ಅನಿಸುತ್ತಾ?…;

ಅಯ್ಯೋ! ಈ ಕೊರೋನಾ ಯಾವಾಗ ಹೋಗುತ್ತದೋ… ಮತ್ತೆ ಮೊದಲಿನಂತಾಗೋದು ಯಾವಾಗಾ? ಮನೆಯಿಂದ ಹೊರಗೆ ಹೋಗಬೇಕು….ಸುತ್ತಾಡಬೇಕು….. ಕಪಾಟಿನಲ್ಲಿಯ ಸೀರೆಗಳನ್ನು ಉಡದೇ ಎಷ್ಟು ದಿನ ಆಯ್ತು… ಎಲ್ಲಾ ಮುಗ್ಗು ಹಿಡಿತಿದೆ……  
ಏನ್ಮಾಡ್ಲಿ… ಏನ್ಮಾಡ್ಲಿ…..

ಥೋ….. ಇದಂತೂ ಮುಗಿಯದ ಕಥೆ ಮಾರ್ರೆ….. ಅದ್ಕೇ ಈ ಬೇಜಾರಿಗೋ….ಹತಾಶೆಗೋ….ಆಗುತ್ತಿರುವ ಹಿಂಸೆಗೋ….ಒಟ್ಟಿನಲ್ಲಿ  ಕೊರೋನಾ ಶುರುವಾದ ಮೇಲೆ ನನಗೇ ಗೊತ್ತಿಲ್ಲದೆ ಆರೋಗ್ಯ ಅಂತೂ ಸಖತ್ ಸುಧಾರಿಸಿದೆ.  ಪಾಪ ನನ್ನ ದೇಹವಂತೂ  ಆಸ್ಪತ್ರೆ ಮೆಟ್ಟಿಲು ಹತ್ತಲು ಹೆದರಿ ಮೂರು ಮೂರು ದಿವಸಕ್ಕೂ ಏನಾದರೂ ನೆವ ಹೇಳಿ ಮಾಡಿಕೊಳ್ಳುತ್ತಿದ್ದ ಅವಾಂತರ ತೆಪ್ಪಗೆ ಬಾಯಿಮುಚ್ಚಿ ಕೂತಿದೆ.  ಹಾಗೇ ಅದೆಷ್ಟು ದುಡ್ಡು ಉಳಿಸಿದೆ ಅಂದರೆ ಒಂದಿಪ್ಪತ್ತಾದರೂ ಉಳಿಸಿದೆ! 

ಇದೇ ಖುಷಿಯಲ್ಲಿ ನಮ್ಮನೆಗೆ ಆಗಾಗ ಬರುವ  ಬಂಟನಿಗೆ ಮನೆ ಪ್ರೊವಿಸನ್ ಗೆ ಮಕ್ಕಳ ಫೀಸ್ ಕಟ್ಟಲು ಭಕ್ಷೀಸು ಸ್ವಲ್ಪ ಜಾಸ್ತಿಯೇ ನೀಡುವಂತಾಗಿದೆ.  ಕೆರೆಯ ನೀರನು ಕೆರೆಗೆ ಚೆಲ್ಲಿ….ಈಗ ಈ ಹಾಡು ಹೇಳಲು ಬಹಳ ಖುಷಿನೂ ಹೌದು.

ಅಂತೂ…..ಕೊರೋನಾ ಧಾಳಿ ಹೆಚ್ಚಾಗುತ್ತಿದ್ದಂತೆ ಅದರ ವ್ಯಾಪ್ತಿ ದೊಡ್ಡದಾಗುತ್ತಲೇ ನಡೆಯುತ್ತಿರೋದು ಎಂದಿಗೆ ಇದರ ಕೊನೆ? ಪ್ರಶ್ನೆಗೆ ಬೇಗ ಉತ್ತರ ಸಿಕ್ಕರೆ ಸಾಕಾಗಿದೆ ಅಲ್ವಾ?

15-8-2020. 3.55pm

.

ಅಮರಾವತಿ ನೆನಪಿಸಿಕೊಂಡು…. ಒಂದಿಷ್ಟು ನಕ್ಕು…

ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ಟೀವಿಯಲ್ಲಿ, ಪೇಪರಿನಲ್ಲಿ, ಮಕ್ಕಳ ಬಾಯಲ್ಲಿ,ಸ್ನೇಹಿತರ ಬಾಯಲ್ಲಿ ಯಾರು ನೋಡಿದರೂ ಸಂಭ್ರಮಾಚರಣೆದೇ ಸುದ್ದಿ. ಅಲ್ಲೋಗ್ತೀವಿ ಇಲ್ಲೋಗ್ತೀವಿ ಹಾಗೆ ಮಾಡಬೇಕು ಹೀಗೆ ಮಾಡಬೇಕು, ಅಲ್ಲಿ ಬನ್ನಿ ಇಲ್ಲಿ ಬನ್ನಿ. ಥೊಥೊ..ಇದೆಂತಕೊ ಭಯಂಕರ ನನ್ನ ಮನಸ್ಸಲ್ಲೂ ಹೊಕ್ಕು ಒಳಗೊಳಗೆ ಕೂತಲ್ಲಿ ನಿಂತಲ್ಲಿ ತಲೆ ತಿಂದು ಮಾಡೊ ಕೆಲಸದ ಕಡೆಗೂ ಗಮನ ಇಲ್ಲದೇ ಮಾಡಿದ ಅಡಿಗೆಯೆಲ್ಲಾ ಎಪರಾ ತಪರಾ ಆಗಿ ಒಂದಿಷ್ಟು ಬಯ್ಸಿಕೊಂಡಿದ್ದಲ್ಲದೆ ನೀ ಮಾಡಿದ್ದು ನೀನೇ ತಿನ್ನು. ಇದೇನು ಅಡಿಗೇನಾ? ಏನಾಗಿದೆ ನಿನಗೆ? ಮಾರಾಯ್ತಿ ಹೇಳು ಅದಾರು? ಎಜಮಾನ ಉವಾಚ!

ಬಿಡ್ತೀನಾ? ಈ ಸಂದರ್ಭಕ್ಕಾಗೇ ಕಾದಂತಿತ್ತು ಮನಸ್ಸು. ಎಂತಕ್ಕಂದ್ರೆ….ಇಲ್ಲೂ ಅದಕ್ಕೊಂತರಾ ನಾಚಿಕೆ…….ಹೇಳಲೂ ಆಗದೆ ಮನಸ್ಸಿನೊಳಗೇ ಮಂಡಿಗೆ ತಿಂದೂ ತಿಂದೂ ಹೊರಗಾಕುವ ಗಡಿಯ ತುದೀಗೆ ಬಂದು ಕಾದು ಕುಳಿತಂತಿತ್ತು. ಆದರೂ ಹೇಳಲೋ ಬೇಡವೋ ಎಂಬ ವೈಯ್ಯಾರ ಸ್ವಲ್ಪ. ಮೆತ್ತಗೆ ಅಡಿಗೆ ಮನೆ ಮೂಲೆಯಲ್ಲಿ ಕೆಲಸ ಇಲ್ಲದಿದ್ದರೂ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಕಾಣೋದಿಲ್ಲ ಅನ್ನುವಂತೆ ನಾನೂ ಅರುಹಿದ್ದೆ ; ರೀ…..

ಏನೆ ಅದು? ಅಲ್ಲೆಂತಾ ಮಾಡ್ತಿರೋದು? …

ಪಾಪ!ಗನಾ ಚಾನರೂ ಮಾಡಿ ತರಬಹುದೆಂಬ ಯೋಚನೆ ಬಂತೊ ಏನೊ. ನಾನೊ ಸುಮ್ಮನೆ ಕಟ್ಟೆ ಒರೆಸೊ ನೆವದಲ್ಲಿದ್ದೆ. ಏನಿಲ್ಲಾ….ನಾವೂ ಎಂ.ಜಿ.ರೋಡಿಗೆ ಹೋಗೋಣ ಹೊಸ ವರ್ಷಾಚರಣೆಗೆ ಅಂದೆ.

ಅಲ್ಲೆಂತಾ ಮಾಡೋದು? ಪಡ್ಡೆ ಹುಡುಗ ಹುಡುಗಿಯರು ಸುತ್ತಾಡೋಕೆ ಹೋಗದಲ್ಲಿ. ಇಲ್ಲೇ ಟೀವಿಯಲ್ಲಿ ನೋಡು. ಸುಮ್ಮನೆ ಗಲಾಟೆ. ಕುಡುಕರ ತಂಡಾನೇ ಇರುತ್ತದೆ.

ಶಿವನೆ….ಬಿಡುತ್ತಾ ಆಸೆ? ಅಟ್ಟಾಡಿಸಿಕೊಂಡು ಬಂದಂತೆ ಅದ್ಯಾವ ಮಾಯದಲ್ಲಿ ಹೊರಗೆ ಬಂದೆನೊ ಗೊತ್ತಿಲ್ಲ. ಇಲ್ಲ ನಂಗೆ ಹೋಗಬೇಕು. ಎಂ.ಜಿ.ರೋಡಲ್ಲಿ ಚಂದ ಇರುತ್ತದೆ ಹೊಸ ವರ್ಷ. ಹೋಗೋದೆ ಸೈ ಅಂತ ಪಟ್ಟಿಡಿತು ನನ್ನ ಹಠ.

ಅಲ್ವೆ ಮಾರಾಯ್ತಿ. ಈ ಮಗಳನ್ನ ಎಂತಾ ಮಾಡೋದು. ಅವಳನ್ನೆಲ್ಲ ಕರೆದುಕೊಂಡು ಹೋಗೋದು ಸರಿ ಅಲ್ಲ. ನೀ ಮನೆಯಲ್ಲಿ ಒಬ್ಬಳೇ ಇರ್ತೀಯಾ?

ಅವಳೋ ಇನ್ನೊಂದು ಕಾಲು ಮುಂದೆನೆ ಇಟ್ಟಿದ್ದಳು ; ತನ್ನ ಸ್ನೇಹಿತೆಯರೊಂದಿಗೆ ಹೊಸದಾಗಿ ಕಟ್ಟಿಸಿದ ಮನೆಯ ಬಾಲ್ಕನಿಯಲ್ಲಿ ತಮ್ಮದೆ ತಂಡ ಕಟ್ಟಿಕೊಂಡು ಹಾಡು,ಡಾನ್ಸ, ತಿಂಡಿ ವಗೈರೆ ಸೇರಿಸಿಕೊಂಡು ಎಂಜಾಯ್ ಮಾಡೊ ಪ್ಲಾನು.

ಓಕೆ. ನಾನು ಬರಲ್ಲಾ. ನನ್ನ ಫ್ರೆಂಡ್ಸ್ ಜೊತೆ ನನ್ನ ಪ್ಲಾನು. ಪ್ಲೀಸ್ ಪ್ಲೀಸ್……ಅಪ್ಪನ ಒಪ್ಪಿಗೆ ಮಗಳು ಧಿಲ್ಖುಷ್.

ಆಗಲೇ ಲೆಕ್ಕಾಚಾರ ; ಎಷ್ಟೊತ್ತಿಗೆ ಹೊರಡೋದು,ಯಾವ ಸೀರೆ ಉಡಲಿ? ಇತ್ಯಾದಿ ಇತ್ಯಾದಿ. ನಾಳೆ ರಾತ್ರಿ ತಯಾರಿಗೆ ಇವತ್ತು ರಾತ್ರಿನೇ ನಿದ್ದೆ ಬಂದಿಲ್ಲ. ತತ್ತರಕಿ ಅಂತೂ ನಿದ್ದೆ ಬಯ್ಕೋತಾ ಅದೆಷ್ಟು ಹೊತ್ತಿಗೆ ನಿದ್ದೆ ಬಂತೊ ಗೊತ್ತಾಗಲಿಲ್ಲ.

ಮನೆ ಮುಂದಿನ ರಂಗೋಲಿ ದಿನಕ್ಕಿಂತ ಹೆಚ್ಚು ರಂಗಾಗಿ ಕಾಣ್ತಿತ್ತು ಹೋಗಿ ಬರೋರಿಗೆ. ನನಗೋ….ಹಾರೊ ಮಂಗಂಗೆ ಏಣಿ ಹಾಕಿದಷ್ಟು ಉಮೆದಿ. ಬೆಳಗಿನ ತಿಂಡಿ ಗಮಗಮ ಮಧ್ಯಾಹ್ನದ ಅಡಿಗೆನೂ ಥಕಧಿಮಿ ಹೊಟ್ಟೆ ತಾಳ ಹಾಕುವಷ್ಟು ರುಚಿ. ಪಟ್ಟಾಗಿ ಹಳೆ ವರ್ಷದ ಕೊನೆ ದಿನದ ಊಟ ಅವರಿಗಿಷ್ಟವಾದ ಚಪಾತಿ,ಪಲ್ಯ,ಸಾಂಬಾರು, ಮಗಳಿಗಿಷ್ಟದ ಪಲಾವು ನಂಗಿಷ್ಟವಾದ ಶಿರಾ….ಆಹಾ! ಊಟ ಅಂತೂ ಗಮ್ಮತ್ತೋ ಗಮ್ಮತ್ತೂಊಊಊ….ನಾನೇ ಮಾಡಿದ್ದು… ಅವರಿಬ್ಬರೂ ಹೇಳಿದ್ದು….

ಕೈಕಾಲು ಮುಖ ತೊಳೆದು ದೆವರಿಗೆ ವರ್ಷದ ಕೊನೆಯ ದೀಪ ಹಚ್ಚಿ ಆರೂವರೆಗೆಲ್ಲ ರೆಡಿ ಆಗಿಬಿಟ್ಟೆ. ಹೊಸಾ ಕೆಂಪು ಸೀರೆಯಲ್ಲಿ ಚಂದ ಕಾಣಬೇಕೆಂದು ಮುತುವರ್ಜಿ ವಹಿಸಿದ್ದು ನಿಜ ಆಯ್ತಾ? ನಿಲುವುಗನ್ನಡಿ ಮುಂದೆ ನಿಂತು ನೋಡ್ಕೊಂಡಿದ್ದೇ ನೋಡ್ಕಂಡಿದ್ದು.
ಒಳಗೆ ಹೊರಗೆ ಓಡಾಡಿದ್ದೇ ಓಡಾಡಿದ್ದು ಆಸಾಮಿ ಆರೂ ಮುಕ್ಕಾಲಾದರೂ ಪತ್ತೆ ಇಲ್ಲ. ಮಗಳು ಅವಳ ಪಾಡಿಗೆ ಸ್ನೇಹಿತರನ್ನು ಸೇರಿಸಿಕೊಂಡು ಕೊಣ್ಣಾ ಕೊಟ್ಟಾ ಶುರು ಹಚ್ಕಂಡಂತಿತ್ತು. ನನ್ನ ಕಡೆ ಗಮನ ಕೊಡೋದು ಯಾರೂ ಇಲ್ವೆ. ನಮ್ಮನೆ ನಿಲ್ದಾಣದ ಫೋನಿನಿಂದ ಫೋನು ಮಾಡಿದರೂ ಬಂದೆ ಬಂದೆ ಎಂಬ ಭರವಸೆ ಪದ ಅಷ್ಟೇ. ಆದರೆ ಬರ್ತಿಲ್ವೆ? ಮುಖ ಮುದುಡಿ ಮೇಕಪ್ಪು ಮೈಕಪ್ಪಾಗಬಾರದು ಹೇಳಿ ಹುಳ್ಳಗೆ ನಗುವ ಪ್ರಯತ್ನ ಮಾಡ್ತಿದ್ದೆ. ಎರಡು ಕನಸು ಸಿನೇಮಾದಲ್ಲಿ ಗಂಡನ ಬರುವಿಕೆಯಲ್ಲಿ ಕಲ್ಪನಾ ರೆಡಿಯಾಗಿ ಕನಸು ಕಾಣಲ್ವೆ ಹಾಗೆ.

ಅಂತೂ ಏಳು ಗಂಟೆಗೆ ಹಾಜರಾಯ್ತು ಮನೆಯೊಳಗೆ ನಮ್ಮೆಜಮಾನರ ಪಾದ! …..ಏನೆ ಇದು? …ಹೀಗೊಂದು ರೆಡಿಯಾಗಿದೀಯಾ? …ಎಲ್ಲಿಗೆ?

ಸರಿಹೋಯ್ತು. ಬೆಳಗಿನವರೆಗೆ ರಾಮಾಯಣ ಕೇಳಿ ರಾಮಾ ಸೀತೆ ಸಂಬಂಧ ಕೇಳ್ತೀರಲ್ರೀ… ನಿನ್ನೆಗೆ ಹೇಳಿಲ್ವಾ? ಎಂ.ಜಿ.ರೋಡು….
ಹೇಳುವಷ್ಟರಲ್ಲೆ ಜ್ಞಾನೋದಯವಾಯಿತು ಆಸಾಮಿಗೆ. ಸರಿ ಮಾರಾಯ್ತಿ ಬಾಯಾರಿಕೆ ಎಂತಾರೂ ಕೊಡು. ಚಳಿ ಬೇರೆ ನಿಂದೊಂದು…..

ಒಮ್ಮೆ ಗುರಾಯಿಸಿ ಕಷಾಯ ತಂದಿಟ್ಟು ಕುಡಿರಿ ಬೇಗ ಹೋಗೋಣ ಲೇಟ್ ಆಗುತ್ತೆ. ನಾನು ಎಂ.ಜಿ.ರೋಡ್ ವೈಭವ ನೋಡಬೇಕು, ಸುತ್ತಾಡಬೇಕು. ಅಷ್ಟೊತ್ತಿಗೆ ನಾಚಿಕೆ ಎಲ್ಲಾ ಇಳಿದು ಆಸೆ ಬಾಲ ಬಡುಕೋತಾ ಇತ್ತು.

ಅಂತೂ ಏಳೂವರೆಗೆ ಮಗಳ ತಂಡಕ್ಕೆ ಬೈಬೈ ಹೇಳಿ ಸ್ಕೂಟರಿನಲ್ಲಿ ಝಂ,… ಎಂದು ಹೊರಟ್ವಿ ಅಂತಾತು. ಆ ಎಂ.ಜಿ.ರೋಡೊ ದೀಪದಲಂಕಾರದಲ್ಲಿ ಚಂದದ ಹೆಣ್ಣನ್ನೂ ಹಿಂದಿಕ್ಕಿತ್ತು. ಲಕಲಕ ಪಕಪಕ ಕಣ್ಣೊಡೆದಂತೆ…ನೀರು ಹರಿದಂತೆ….ಹಾಡುಗಳು ಲಘು ಸಂಗೀತ…ವಾಹನಗಳಿಲ್ಲದ ರಸ್ತೆ ಜನರೂ ಅಷ್ಟಿಲ್ಲದೇ ಬೀಕೋ…. ಅಂತಿತ್ತು.

ರೀ….ಜನನೆ ಇಲ್ಲಾ…….ಇದೇನಾ ಎಂ.ಜಿ.ರೋಡೂ….ತುಂಬಾ ರಶ್ ಇರುತ್ತದೆ ಅಂದ್ರೀ….ಹೀಗೆ ನನ್ನ ವಟಾ ವಟಾ ಮಾತು ಸಾಗುತ್ತಲೇ ಇತ್ತು. ಮೊದ ಮೊದಲು ನವ ಜೋಡಿಗಳ ನಡಿಗೆಯಂತೆ ಸಾಗುತ್ತಿದ್ದು ಸುಮಾರು ದೂರದವರೆಗೂ ನಡೆದೂ ನಡೆದೂ ಕಾಲೂ ಬಿದ್ದೋಯ್ತು, ಉಮೇದಿನೂ ಕಳಚ್ಕೊತಾ ಬಂತು. ಊಟನರೂ ಮಾಡೋಣ ಅಂದ್ರೆ ನಂಗಿಷ್ಟದ ಒಂದೂ ಹೊಟೆಲ್ ಕಾಣಲಿಲ್ಲ. ರಸ್ತೆ ಪಕ್ಕದ ಬೇಂಚ್ ಮೇಲೆ ಒಂದಷ್ಟು ಹೊತ್ತು ಕೂತರೂ ಯಾಕೊ ಮನಸ್ಸಿಗೆ ಪಿಚ್ ಅನಿಸಿತು.

ನಾ ಕಂಡ ಅಮರಾವತಿ ವೈಭೋಗ ಇಲ್ಲೆಂತಾ ಇದೆ ಮಣ್ಣು? ಬರೀ ಚಳಿ ಪಿಕ ಪಿಕ ಲೈಟು. ಎದ್ದೆ ಅಲ್ಲಿಂದ. ಕೂತ್ಕಳೆ……ಕೇಳುತ್ತಿಲ್ಲ ಅವರ ಮಾತು….

ಸ್ವಲ್ಪ ಹೊತ್ತಲ್ಲೇ ಜೋಡಿ ಜೋಡಿ, ಗೆಳೆಯರ ಹಿಂಡು ನಿಧಾನವಾಗಿ ಬರಲು ಸ್ಟಾರ್ಟ್ ಆಯಿತು. ಆದರೆ ಎಲ್ಲರೂ ಕಪ್ ಡ್ರೇಸ್ಸೇ ಹೆಚ್ಚು ಹಾಕಿದ್ರು. ಅಡಿಯಿಂದ ಮುಡಿವರೆಗೆ ನನ್ನೇ ನಾ ನೋಡಿಕೊಂಡೆ. ನಾನೂ ಕಪ್ ಮಿಶ್ರಿತ ಸೀರೆನೆ ಉಡಬೇಕಿತ್ತು ಅಲ್ವಾ? ಡ್ರೆಸ್ ನಾನೂ ಹಾಕೋದು ರೂಢಿ ಮಾಡ್ಕೊಬೇಕಿತ್ತಲ್ವಾ? ಪೆದ್ದಿ ನಾನು. ಇಲ್ಲೆಲ್ಲಾ ನಾನು ಬರಬಾರದಿತ್ತು. ಅಂದ್ಕೊಂಡಿದ್ದೇ ತಡ ನಡಿರಿ ಮನೆಗೆ ಅಂದೆ.

ಅಲ್ವೆ ತಡಿಯೆ ರಾತ್ರಿ ಹನ್ನೆರಡು ಗಂಟೆ ಆದ ಮೇಲೆ ಹೋಗೋಣ್ವೆ ಅಂತ ಅವರು ಜೋರಾಗಿ ನಗಲು ಶುರು ಮಾಡಿದಾಗ ಎಂತದೂ ಬ್ಯಾಡಾ. ನಡಿರಿ ಮನೆಗೆ. ಕಾಲು ಬಿರಬಿರನೆ ಗಾಡಿ ಇದ್ದಲ್ಲಿಗೆ ಬಂದು ನಿಂತಿತು.

“ಏನಮ್ಮಾ ಆಯ್ತಾ ನ್ಯೂ ಇಯರ್ ಪಾರ್ಟಿ? ಹೆಂಗಿತ್ತು ಎಂ.ಜಿ.ರೋಡು? ಯಾಕಿಷ್ಟು ಬೇಗ ಬಂದಿದ್ದು?” ಅಪ್ಪ ಮಗಳು ನಗ್ತಿದ್ರೆ ನಾನಾಗಲೇ ಮಧ್ಯಾಹ್ನದ ತಂಗಳು ಬಿಸಿ ಮಾಡಲು ರೆಡಿ ಮಾಡ್ತಿದ್ದೆ ; ಅದೇನು ಎಂ.ಜಿ.ರೋಡೋ, ಅದೇನು ಹೊಟೆಲ್ಲೋ, ಅದೆಂತಾ ಡ್ರೆಸ್ಸೋ ….ನಮ್ಮನೆಯಲ್ಲೇ ಚಂದ. ಬನ್ನಿ ಬನ್ನಿ ಎಲ್ಲಾ ಬಿಸಿ ಬಿಸಿ ಮಾಡಿದ್ದೇನೆ. ತಿಂದ್ಬಿಟ್ಟು ಟೀವಿನರೂ ನೋಡೋಣ. ಹೊಸ ವರ್ಷದ ಕಾರ್ಯಕ್ರಮ ಹತ್ತು ಗಂಟೆಗೆ ಶುರುವಾಗುತ್ತದೆ. ಮೂರು ನಾಲ್ಕು ಚಾನೆಲ್ಲೆಲ್ಲಾ ತಟಪಟ ಅಂತ ತಡಕಾಡಿ ಚಂದನಕ್ಕೆ ಬಂದು ನಿಂತಿತು. ವರ್ಷಾಚರಣೆ ಬಗ್ಗೆ ಮಾತಾಡುತ್ತಿದ್ದರು.

ರೀ…. ಇವತ್ತು ನನ್ನ ಮಾವನ ಫೋನು ಬರುತ್ತೆ….ಅಂದೆ ಧಿಮಾಕಿನಲ್ಲಿ!

ಹದಿನೆಂಟು ವರ್ಷಗಳ ಹಿಂದಿನ ಹೊಸ ವರ್ಷದ ಉಮೆದಿ…. ಅದೂ ಎಂ.ಜಿ.ರೋಡಲ್ಲಿ ವರ್ಷಾಚರಣೆ ಗುಂಗು…..ಪ್ರತೀ ವರ್ಷ ಹನ್ನೆರೆಡು ಗಂಟೆಗೆ ನನ್ನ ಸೋದರ ಮಾವ ಮಾಡುವ ಶುಭಾಶಯ ಫೋನಲ್ಲಿ ……ಎಲ್ಲವೂ ಈಗ ನೆನಪಷ್ಟೇ!!

ಆದರೆ ಮಗಳು ಈಗಿನ ಕಾಲದವಳು. ವರ್ಷಾಚರಣೆ ವರ್ಷ ವರ್ಷವೂ ಸಂಭ್ರಮದಿಂದ ಸ್ನೇಹಿತರ ಜೊತೆ ಆಚರಿಸುತ್ತಿರೋದು ನೋಡಿ ಖುಷಿ ಪಡುತ್ತೇನೆ ಅಮರಾವತಿ ನೆನಪಿಸಿಕೊಂಡು… ಒಂದಿಷ್ಟು ನಕ್ಕು.

30-12-2019. 3.34pm

ಹಿಪ್ ಹಿಪ್ ಹುರ್ರೇಎಎಎಎಎ….

ಇಷ್ಟೊಂದು ಸಂತೋಷಕ್ಕೆ ಆದ ಕಾರಣಗಳನ್ನು ಅದೇಗೆ ವರ್ಣಿಸಲಿ? ಭಯಂಕರ ಸಂತೋಷವಾದಾಗ ತಡೆದುಕೊಳ್ಳಲಾಗದೇ ಇರೋ ಜಾಗನೂ ಮರೆತು ಕುಣಿಯೋದೊಂದು ಬಾಕಿ. ಆದರೂ ನನ್ನ ವಯಸ್ಸು ಈ ಸಂತೋಷ ಮಕ್ಕಳಂತೆ ಕುಣಿದು ಸಂಬ್ರಮ ಪಡಲು ಬಹಳ ಬಹಳ ಅಡ್ಡಿ ಪಡಿಸ್ತಾ ಇದೆ. ಆಗೆಲ್ಲಾ ನನಗೆ ನನ್ನೀ ದೇಹದ ಮೇಲೆ ಸಿಕ್ಕಾಪಟ್ಟೆ ಕೋಪ. ಆದರೆ ನಾನು ನನ್ನ ಮನಸ್ಸನ್ನು ಬಹಳ ಬಹಳ ಪ್ರೀತಿಸ್ತೀನಿ. ಅದೆಷ್ಟು ಅನ್ನೋದು ನನಗೆ ಅದಕೆ ಮಾತ್ರ ಗೊತ್ತು. ಜೀವನದ ಪ್ರತಿಯೊಂದು ಚಿಕ್ಕ ಚಿಕ್ಕ ಕ್ಷಣಗಳನ್ನು ಅದು ಸಂತೋಷವೇ ಆಗಿರಬಹುದು, ದುಃಖವೇ ಆಗಿರಲಿ ಮನಸ್ಪೂರ್ತಿಯಾಗಿ ಅನುಭವಿಸಿ ಹಗುರಾಗಿ ಬಿಡುತ್ತದೆ. ಒಂದಷ್ಟು ಚಿಂತೆ ಒಂದಷ್ಟು ದಿನ ಕಾಟಾ ಕೊಟ್ಟರೂ ಈ ಸಂತೋಷದ ಆ ಒಂದು ಕ್ಷಣ ಇದೆಯಲ್ಲಾ ಎಲ್ಲವನ್ನೂ ತೊಡೆದು ಹಾಕಿ ಮೈ ಮನವೆಲ್ಲ ಹೂವಾಗಿಸಿ ಬಿಡುತ್ತದೆ. ಅಂತಹ ಕ್ಷಣದಲ್ಲಿ ಮನೆಯಲ್ಲಿ ಏನಾರೂ ಇದ್ದರೆ ಕ್ಯಾರೇ ಅನ್ನದೇ ಕುಣಿಯೋದೇ… ಯಾಕೆಂದರೆ ಆ ಕ್ಷಣ ಮತ್ತೆ ಸಿಗುತ್ತಾ ಹೇಳಿ? ಇಲ್ಲಾ ಈ ಮನಸ್ಸಿಗೆ ನಾವು ಕಡಿವಾಣ ಹಾಕೋದು ತಪ್ಪಲ್ವಾ.

ಹಾಗೆ ದುಃಖ ಆದಾಗಲೂ ಇನ್ನೇನು ತಡಿಲಾರೆ ಅಂದಾಗ ಸಾಮಾನ್ಯವಾಗಿ ಯಾರ ಹತ್ತಿರವೂ ಹೇಳಿ ಕೊಳ್ಳುವ ಜಾಯಮಾನ ನನ್ನದಲ್ಲ. ಯಾರಿಲ್ಲದಾಗ ಒಬ್ಬಳೇ ದೇವರ ಕೋಣೆಯಲ್ಲಿ ಕೂತು ಜೋರಾಗಿ ರಾಗವಾಗಿ ಅತ್ತು ಮನಸ್ಸು ಹಗುರ ಮಾಡಿಕೊಂಡಿದ್ದೂ ಇದೆ. ಏಕೆಂದರೆ ನಮ್ಮ ದುಃಖ ನಮಗೇ ಇರಲಿ, ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡರೆ ಮನಸ್ಸಿಗೆ ಮತ್ತಷ್ಟು ಖುಷಿ ಸಿಗೋದು ಗ್ಯಾರಂಟಿ. ಮನಸ್ಸಿಗಾದ ಆ ಕ್ಷಣದ ಥ್ರಿಲ್ ಏನಪ್ಪಾ ಅಂದ್ರೆ…;

ಇವತ್ತು ಒಂದೆರಡು ಬ್ಯಾಂಕಿಗೆ ಹೋಗೊ ಕೆಲಸ ಇತ್ತು. ಮನೆಯಿಂದ ಹೊರಗೆ ಹೋಗ ಬೇಕು ಅಂದರೆ ನಾ ಸ್ವಲ್ಪ ಸೋಂಬೇರಿ. ಹೊರಟೆ ಎಂದರೆ ಇರೋ ಬರೋ ಕೆಲಸ ಎಲ್ಲ ಪೇರಿಸಿಕೊಂಡು ಸ್ಕೂಟಿ ಹತ್ತಿ ಹೊರಟರೆ ಮುಗಿಸಿಯೇ ಮನೆಗೆ ಬರೋದು. ಇವತ್ತೂ ಹಾಗೆ ಏನೆಲ್ಲಾ ನೆನಪಿಸಿಕೊಂಡು ಅಂತೂ ಒಂದು ಬ್ಯಾಂಕಿನ ಮೆಟ್ಟಿಲೇರಿದೆ. ಒಳಗಡೆ ಹೋಗಿ ಇನ್ನೇನು ಪರ್ಸ್ ತೆಗಿತೀನಿ…”ಆರ್ಕಿಮಿಡೀಸ್ ಸಿಕ್ಕಿತು ಸಿಕ್ಕಿತು ಎಂದು ಬರಿ ಮೈಯಲ್ಲಿ ಓಡಿದ ಹಾಗೆ” ನನಗೂ ಅದಕ್ಕಿಂತ ಹೆಚ್ಚು ಖುಷಿ, ತಕಧಿಮಿ ತಕಧಿಮಿ ಕುಣಿಯೋ ಹಾಗಾಯಿತು. ಯಪ್ಪಾ…..ಜನ ಯಾರೂ ಇರಲಿಲ್ಲ ಅದೇನೊ ಸ್ವರದಲ್ಲಿ ವಾವ್!……ಸಿಕ್ಕಿತು ಸಿಕ್ಕಿತು ಅಂದುಕೊಂಡು ಸೀದಾ ಹೊರಗೆ ಬಂದು ಮಗಳಿಗೆ ಫೋನಾಯಿಸಿದೆ. ನನ್ನ ಮನಸ್ಸು 200 ಮೀಟರ್ ಸ್ಪೀಡಲ್ಲಿ ಇತ್ತು. ಆ ಕಡೆಯಿಂದ ಅಷ್ಟೇ ಕೂಲಾಗಿ “ಹೌದಾ ಅಮ್ಮಾ, ಗುಡ್” ಅಷ್ಟೇ ಹೇಳಬೇಕಾ? ಪಿಚ್ಚಾ… ಇಷ್ಟೊಂದು ಖುಷಿ ವಿಷಯ ಹೇಳಿದಾಗ ಹೀಂಗಾ ರಿಯಾಕ್ಟ ಮಾಡೋದು ಅಂತ ಅನಿಸಿದರೂ ತಡಿಲಾರದೇ ನಾನೇ ಮುಂದುವರಿಸಿ “ನೀ ಆರ್ಡರ್ ಮಾಡಿದ್ದು ಕ್ಯಾನ್ಸಲ್ ಮಾಡು. ಬೇಡಾ ತರಿಸೋದು. ಹಂಗೆ ಈ ಸ್ಯಾಟರ್ಡೆ ಊಟ ಕೊಡಸ್ತೀನಿ ಕಣೆ” ಅಂದೆ. ಆಗ ಅವಳ ಕಿವಿ ನೆಟ್ಟಗಾಗಿ “ಹಾಂ,ಹೌದಾ? ಎಲ್ಲಿ? ಹೋಗೋಣ, ಯಸ್ ಓಕೆ….”. ಅವಳ ಖುಷಿ ಅವಳಿಗೆ. ಅವಳಾಗಲೇ ಹೊಸ ಹೊಸದು ಕೊಡಿಸೊ ಯೋಚನೆಯಲ್ಲಿ ಇದ್ಜವಳು, ನಾನು “ತಡಿ ಇರು ಸ್ವಲ್ಪ “ಅನ್ನೋಕೆ. ಇದು ಸುಮಾರು ದಿನದಿಂದ ನಡೀತಾ ಇತ್ತು.

ಇದೇ ತರ ಸನ್ನಿವೇಶ ಇತ್ತೀಚೆಗೆ ನನ್ನ ಮೆಚ್ಚಿನ ಸರ್ ಒಬ್ಬರು ಮನೆಗೆ ಬರ್ತೀವಿ ಎರಡು ಮೂರು ಜನ ಅಂದು ಫೋನಾಯಿಸಿದಾಗ ಮನೆಯಲ್ಲಿ ಮಧ್ಯಾಹ್ನ ಮಲಗಿದ್ದವರನ್ನೆಲ್ಲ ಎಬ್ಬಿಸಿ ಖುಷಿಯಲ್ಲಿ ಮನೆಯೆಲ್ಲ ಓಡಾಡಿ ಏನು ಮಾಡಲಿ ಏನು ಮಾಡಲಿ ಎಂದು ಕೊನೆಗೆ ಶಿರಾ ಮಾಡಿ ಹಣ್ಣು ಕಟ್ ಮಾಡಿ ಇರೊ ಬರೊ ಕುರುಕಲು ಎಲ್ಲಾ ತಟ್ಟೆಯಲ್ಲಿ ಪೇರಿಸಿ ಕಾಯ್ತಾ ಕೂತರೆ ಕೊನೆಗೆ ಬಂದಿದ್ದು ಅವರೊಬ್ಬರೇ ಆದರೂ ಸಂಪೂರ್ಣ ನಿರೀಕ್ಷೆ ನಾವೆಲ್ಲಾ ಅವರಿಗೇ ಮೀಸಲಿಟ್ಟಿರೋದರಿಂದ ಬಹಳ ಬಹಳ ಖುಷಿ ಆಗಿತ್ತು. ಆದರವರು ತಿಂದದ್ದು ಬರೀ ಕೋಳಿಯಷ್ಟು ಮಾತ್ರ! ದೊಡ್ಡ ಮನುಷ್ಯರು ಇಷ್ಟಾದರೂ ತಿಂದ್ರಲ್ಲಾ, ಕೊನೆಗೂ ಈ ಬಡವಳ ಮನೆಗೆ ಬಂದ್ರಲ್ಲಾ ಅನ್ನೋ ಹೆಮ್ಮೆ ನನಗೆ. ಎಲ್ಲವೂ ಈ ಬರವಣಿಗೆ ತಂದು ಕೊಟ್ಟ ವರ. ಚಿರಋಣಿ

ಇನ್ನೊಂದು ಏನು ಗೊತ್ತಾ? ಈ ಮೊಬೈಲ್ ಕಥೆ. ಇದಂತೂ ಕೈ ಕೊಡ್ತಾ ಇದ್ದರೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಡೋದು ಗ್ಯಾರೆಂಟಿ. ಕರೆಂಟಿಲ್ಲಾ ಅಂದರೆ ಒದ್ದಾಡಿಕೊಂಡು ತೆಪ್ಪಗಿರ್ತೀವಿ. ಅದೇ ಸಾಧನವೇ ಖರಾಬಾದರೆ? ಸುಮಾರು ತಿಂಗಳಿಂದ ಯಡವಟ್ಟಾಗಿದ್ದು ಒಂದು ವಾರದಿಂದ ಮೊಬೈಲು,ಐ ಪ್ಯಾಡ್ ಎರಡೂ ನಾ ದುರಸ್ತಿ. ಯಾರಿಗೆ ಹೇಳಲಿ ನನ್ನ ಕಷ್ಟನಾ? ನಂಗೊತ್ತಿಲ್ಲ, ಅದ್ಯಾವುದೋ ಕಾರಣಕ್ಕೆ ನನ್ನ ಪಾಸ್ ವರ್ಡ ಆತ್ಮೀಯರೊಬ್ಬರಿಗೆ ಕೊಟ್ಟಿದ್ದೆ ಅದೇನೊ ಸ್ವಲ್ಪ ಸರಿ ಮಾಡಿಕೊಡಿ ಅಂತ. ಅವರೆನೊ ಆಪರೇಟ್ ಮಾಡುವಾಗ ನನಗೆ ಮೆಸೇಜ್. ನಿಮ್ಮ ಪಾಸ್ವರ್ಡ್ ಬೇರೆಯವರು ಉಪಯೋಗಿಸುತ್ತಿದ್ದಾರೆ. ನಂಗೊತ್ತು ಕಂಡ್ರೀ ಅಂತ ಸೈಲಂಟಾಗ್ಬಿಟ್ಟಿದ್ದೆ. ಅಲ್ಲಿಂದ ಶುರುವಾದ ತೊಂದರೆ. ಮೇಲ್ ಬರಲ್ಲ,ಹೋಗಲ್ಲಾ, ವಾಟ್ಸಾಪ್ ಕೈ ಕೊಡ್ತಿದೆ ಆಗಾಗ. ಮೊಬೈಲ್ ಡೈರಿ, ಐ ಪ್ಯಾಡ್ ಡೈರಿಯಲ್ಲಿ ಬರೆದದ್ದೆಲ್ಲಾ ಡಿಲೀಟ್ ಆಗೋದ್ರೆ? ಶಿವನೆ ಅದೆಷ್ಟು ಒದ್ದಾಟಾ. ಅದ್ಯಾವುದೋ ಯ್ಯಾಪ್ ಡೌನ್ಲೋಡ್ ಮಾಡಿ ಅದು ಕ್ಲೀನ್ ಮಾಡಿ ಕ್ಲೀನ್ ಮಾಡಿ ಹೇಳೋಕೆ ನಾ ಮಾಡೋಕೆ. ಚಾರ್ಜ್ ಹಾಕಲು ಮೊಬೈಲ್ ಬಿಸೀ ಆಗೋದು ಸ್ವಲ್ಪ ಹೊತ್ತಲ್ಲಿ ಚಾರ್ಜ್ ಹೊರಟು ಹೋಗೋದು. ವಾಟ್ಸಾಪ್ ಗ್ರೂಪ್ ಚಾಟೆಲ್ಲಾ ಡಿಲೀಟ್ ಮಾಡ್ದೆ, ಎಷ್ಟೊಂದು ಫೋಟೊ ಡಿಲೀಟ್ ಮಾಡಿದೆ. ಊಹೂಂ ಒಟ್ಟಿನಲ್ಲಿ ಇದರಲ್ಲೇ ದಿನದ ಟೈಮೆಲ್ಲಾ ವೇಸ್ಟ್ ಆಗಿ ಕೊನೆಗೆ ಬಂದಿರೊ ಕಾಲ್ ರಿಸೀವ್ ಮಾಡಲಾಗದೇ ಹೊರಟೆ ಮೊಬೈಲ್ ಅಂಗಡಿಗೆ. ಒಬ್ಬರಂದ್ರು ಇದು ಬ್ಯಾಟರಿ ಬದಲಾಯಿಸಿ,ಇನ್ನೊಬ್ಬರು ಸ್ವಿಚ್ ಆಫ್ ಮಾಡಿ ಅಂತೂ ಮೊಬೈಲ್ ಆನ್ ಆಯಿತು, ಇದು ಡೌನ್ಲೋಡ್ ಬೇಡಾ ಅದು ಬೇಡಾ ಮಾಡಬೇಡಿ ಅಂದು ಅಂತೂ ನನ್ನ ಮೊಬೈಲ್ ಒಂದು ಹಂತಕ್ಕೆ ಬಂತು.

ಮನೆಗೆ ಬಂದ ಮೇಲೆ ಅದೇನೊ ಮೆಸೇಜು ಸೈನ್ ಮಾಡಿ ಅಂತ. ನಂಗೆ ಭಯಾ ಇನ್ನೇನಾಗುತ್ತೊ ಅಂತ. ಮಗಳು ಬೇರೆ ಬಯ್ತಾಳೆ “ಏನೇನೊ ಒತ್ತಿ ಇನ್ನೇನೊ ಮಾಡಿಕೊಂಡು ಆಮೇಲೆ ಏನಾಯ್ತು ನೋಡೆ ಅಂತಿಯಾ.” ಏನಾದರಾಗಲಿ ಧೈರ್ಯವಾಗಿ ಸೈನ್ ಮಾಡಿದೆ ಪಾಸ್ವರ್ಡ್ ಕೇಳುತ್ತೆ. ನಂಗೊ ಈ ಪಾಸ್ವರ್ಡ್ ಪ್ರತೀ ಸಾರಿ ಮರೆಯೋದು. ಅಂತೂ ಈಗ ಹೊಸಾ ಪಾಸ್ವರ್ಡ್ ಸ್ಟೋರ್ ಆಯ್ತು ಬರೆದು ಇಟ್ಟುಕೊಂಡೆ. ಆಹಾ! ನನ್ನ ಮೊಬೈಲೇ ಅದೆಷ್ಟು ಆಟ ಆಡಿಸಿದೆ ಒಂದು ವಾರದಿಂದ? ಅಬ್ಭಾ! ಅಂತೂ ಈಗ ಸರಿ ಹೋಯಿತು . ಐ ಪ್ಯಾಡೂ ಹೊಸಾ ಪಾಸ್ವರ್ಡ್ ಒತ್ತಿದ ಮೇಲೆ ಅದೂ ತನ್ನಷ್ಟಕ್ಕೇ ಸರಿಯಾಯ್ತು. ಇದಂತೂ ಮತ್ತೂ ಮತ್ತೂ ಧಿಲ್ ಪಸಂದ ಹಿಪ್ ಹಿಪ್ ಹುರ್ರೇಎಎಎಎಎ…

ಅದೇನೊ ಹೇಳ್ತಾರಲ್ಲಾ “ರವಿ ಕಾಣದ್ದು ಕವಿ ಕಂಡಾ” ಹಾಗಾಯ್ತು ಆ ಕ್ಷಣ ನನ್ನ ಇನ್ನೊಂದು ಕಥೆ. ಮನಸ್ಸು ಆಗಲೇ ಏನು,ಹೇಗೆ,ಎತ್ತ,ಹೀಗಿದ್ದರೆ ಸರಿ,ಇಲ್ಲ ಹಾಗೆ ಇದ್ದರೆ ಸರಿ. ಒಟ್ಟಿನಲ್ಲಿ ಬರಿಲೇ ಬೇಕು ಈ ಖುಷಿಯ ಸನ್ನಿವೇಶವನ್ನು ಅಂತ ಮೆಲುಕು ಹಾಕಲು ಶುರುವಾಯಿತು.

ಅಂದಾಃಗೆ ಈ ಮೊದಲೆ ಬರೆದ ಖುಷಿಯ ಕಾರಣ ಹೇಳಲೇ ಇಲ್ಲ ಅಲ್ವಾ? ಎರಡು ತಿಂಗಳಿಂದ ಕಾಣೆಯಾಗಿದ್ದ ಅಮೂಲ್ಯ ವಸ್ತು ಸಡನ್ನಾಗಿ ಕಣ್ಣಿಗೆ ಬಿದ್ದರೆ ಎಷ್ಟು ಸಂತೋಷವಾಗಿರಲಿಕ್ಕಿಲ್ಲ ನೀವೇ ಹೇಳಿ? ಇಲ್ಲಾ ಅನ್ನುವುದು ಇದೆಯೆಂದು ಭ್ರಮಿಸೋದು ಬೇರೆ ಇಲ್ಲವಾದದ್ದು ಪ್ರತ್ಯಕ್ಷವಾಗಿ ಕಣ್ಮುಂದೆ ನಿಂದರೆ ಹೇಗೆ? ಅಂತಹ ಸಂತೋಷ ಬ್ಯಾಂಕಲ್ಲಿ ನನಗಾಯ್ತು.

ಇತ್ತೀಚೆಗೆ ಬರೆದದ್ದೆಲ್ಲ ಕಾಪಿ ತೆಗೆಸುವ ಯೋಚನೆ. ಎಲ್ಲಾ ಪೆನ್ ಡ್ರೈವ್ ಲ್ಲಿ ಪೇರಿಸಲು ಮಗಳಿಗೆ ಒಂದಿನ್ನೂರು ಬರಹ ಮೇಲ್ ಮಾಡಿದ್ದೆ. ಪಾಪ ಅವಳೆಲ್ಲ ಅದರಲ್ಲಿ ತೂರಿಸಿ ನನ್ನ ಕೈಗೆ ತಂದು ಕೊಟ್ಟಿದ್ದೂ ಆಯಿತು. ನಾನೋ ಇವತ್ತು ನಾಳೆ ಅಂತ ನಾಲ್ಕಾರು ದಿನ ಮುಂದೂಡಿ ಕೊನೆಗೆ ದೂರ ಪ್ರದೇಶಕ್ಕೆ ಹೋಗೊ ಗಡಿಬಿಡಿಯಲ್ಲಿ ಪರ್ಸಲ್ಲೇ ಇಟ್ಟು ಕೊಂಡೊಯ್ದು ಅಲ್ಲೇ ಎಲ್ಲೋ ಕಳೆದು ಹೋಯ್ತು ಅನ್ನುವ ಸಂಶಯವಿದ್ದರೂ ಮನೆಗೆ ಬಂದ ಮೇಲೆ ಎಲ್ಲಾ ಕಡೆ ತಡಕಾಡಿ ಎಲ್ಲೂ ಸಿಗದೆ ಒಂದಷ್ಟು ದುಃಖ ಪಟ್ಟು ಆತ್ಮೀಯರಲ್ಲಿ ಅಯ್ಯೋ ಹೀಂಗಾಗೋಯ್ತು ಅಂತ ಅಲವತ್ತುಕೊಂಡು ಮೌನವಾಗಿ ಅತ್ತು ಒಂದೆರಡು ರಾತ್ರಿ ನಿದ್ದೆನೂ ಗೆಟ್ಟು ಅದೇ ಕೊರಗಲ್ಲಿ ಇದ್ದೆ. ಕಳೆದದ್ದು ಮತ್ತೆ ಖರೀಧಿಸಬಹುದು ಆದರೆ ಅದರಲ್ಲಿರೋದು ಮತ್ತೆ ಮಗಳಿಗೆ ಗೋಳು ಕೊಡಬೇಕಲ್ಲಾ,ನನಗೆ ಬರಲ್ಲ ದಡ್ಡಿ ಅಂತ ನನ್ನನ್ನೇ ಬಯ್ಕಂಡು ಚಿಂತೆಗೀಡಾಗಿದ್ದೆ. ಸಿಕ್ಕಿದ ಖುಷಿಯಲ್ಲಿ ಇದರಿಂದ ಹೊರಗೆ ಬಂದರೂ ಇದರ ಜೊತೆಗೆ ಇನ್ನೂ ಒಂದಷ್ಟು ಬೇಸರವೂ ಮೇಳೈಸಿತು ಇದೇ ದಿನ ;

ಕಾಪಿ ತೆಗೆಸಲು ಹೋದರೆ ಬರ್ತಾನೇ ಇಲ್ಲ. “ನುಡಿ” ಗೆ ಹಾಕಲು ಹೇಳಿ. ಇದರ ಬಗ್ಗೆ ಗಂಧಗಾಳ ನಂಗೊತ್ತಿಲ್ಲ, ಒಂದು ಕಾಪಿಗೆ ಎರಡು ಮೂರು ರೂ. ಅಂತಾರೆ. ಅಲ್ಲಿ ನೋಡಿದರೆ ಆ ಅಂಗಡಿಯಪ್ಪಾ ಟೈಪಿಸ್ಟ ಹತ್ತಿರ “ರೀ ಅದಾಗೊಲ್ಲ ಕೊಟ್ಟು ಕಳಿಸ್ರೀ.. ತಗೊಳ್ಳಿ ಇದು ಮಾಡಿ.” ಅರೆ ಇಸಕಿ! ಇವನೇನು ನನಗೆ ಪುಕ್ಕಟೆ ಮಾಡಿಕೊಡ್ತಾನಾ? ನಂಗೆ ಬೇರೆ ಏನೂ ಗೊತ್ತಿಲ್ಲ. ” ಕೊಬ್ಬು” ಮನಸಲ್ಲೇ ಬಯ್ಕಂಡು ಇನ್ನೂ ಒಂದೆರಡು ಕಡೆ ವಿಚಾರಿಸಿ ಕಣ್ಣೆಲ್ಲ ಒದ್ದೆ ಮಾಡಿಕೊಂಡು ಪೆಚ್ಚು ಮೋರೆ ಹಾಕಿ ಸರಕ್ಕನೆ ಗಾಡಿ ಹತ್ತಿ ಧುಮು ಧುಮು ಅಂದ್ಕೊಂಡು ಸೀದಾ ಮನೆಗೆ ಬಂದೆ.

ಒಂದಷ್ಟು ಗಟ ಗಟ ನೀರು ಕುಡಿದು ತಟಸ್ಥವಾಗಿ ಕೂತೆ. ತತ್ತರಕಿ ಇವರ ಮನೆ ಕಾಯಾ. ಯಾರೂ ಬೇಡಾ ನಾನೇ ಯಾಕೆ ಕಲಿಬಾರದು? ಹಚ್ಚಿದೆ ಫೋನು. ಬರೀ ರಿಂಗು ಉತ್ತರ ಇಲ್ಲ. ವಾಟ್ಸಾಪ್ ನಂಬರಿಗೆ ಚಾಟ್ ಮಾಡಿದೆ. ಎರಡು ಗೀಟು ಬಂತು. ಯಸ್ ಗೊಟ್ ಇಟ್. ನಂಬರು ಬದಲಾಗಿಲ್ಲ. ಏಕೆಂದರೆ “ಸಂಕಟ ಬಂದಾಗ ವೆಂಕಟರಮಣ” ಅಂದಂತೆ ಎರಡು ವರ್ಷಗಳ ಹಿಂದೆ ಅವರ ಮನೆ ಆಫೀಸಿಗೆಲ್ಲ ಭೇಟಿ ಕೊಟ್ಟಿದ್ದು ಬಿಟ್ಟರೆ ಇವತ್ತೇ ಫೋನಾಯಿಸಿದ್ದು! ಮಾಡ್ತಾರೆ ಅಂತ ಕಾದೆ ಕಾದೆ,ಅಂತೂ ಒಂದು ತಾಸಾದ ಮೇಲೆ ಕಾಲ್ ಬಂತು ರಿಸೀವ್ ಮಾಡೋಕಾಗ್ದೆ ಒದ್ದಾಟ. ಪಟಕ್ ಅಂತ ನಾನೇ ಮಾಡಿ ನಾಮಕಾವಸ್ಥೆ ಒಂದೆರೆಡು ಲೋಕಾ ರೂಢಿ ಮಾತಾಡಿ ಬುಡಕ್ಕೆ ಬಂದು ” ಒಂದು ಹೆಲ್ಪ ಆಗಬೇಕಿತ್ತು” ಅಂದೆ. ಅವರೊ ಇಪ್ಪತ್ತೆಂಟು ವರ್ಷಗಳಿಂದ ಪರಿಚಯ, ಆಗ ಇನ್ನೂ ಡಿಪ್ಲೊಮಾ ಓದೊ ಹುಡುಗ ,ನಾವೆಲ್ಲಾ ಒಂದೇ ಕಂಪೌಂಡಲ್ಲಿ ಬಾಡಿಗೆ ಇದ್ದವರು ಆಗ ಗಳಸ್ಯ ಕಂಠಸ್ಯ ನನ್ನ ಮಗಳಿಂದ ಹಿಡಿದು. ಪುಣ್ಯಾತ್ಮ ಅದೇ ಅಭಿಮಾನ ನಮ್ಮ ಕಂಡರೆ. ಈಗ ಪಾರ್ಟನರ್ ಶಿಪ್ನಲ್ಲಿ ದೊಡ್ಡ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದು ಜೋಷಾಗಿದ್ದಾರೆ. ಆದರೆ ಮನಸ್ಸು ಇನ್ನೂ ಚಿನ್ನ!

ಕೂಡಲೇ “ಹೇಳಿ ಆಂಟಿ” “ನೋಡ್ರೀ ನಿಮ್ಮ ಹತ್ತಿರ ತಗಂಡಿರೋ ಕಂಪ್ಯೂಟರ್ ಪ್ರಿಂಟರ್ ಇನ್ನೂ ಸುಸ್ತಿತಿಯಲ್ಲಿ ಇದೆ. ಒಬ್ಬರನ್ನು ಕಳಿಸಿ ಸೆಟ್ ಮಾಡಿಕೊಡಿ.” ನನ್ನ ಸಮಾಚಾರ ಎಲ್ಲಾ ಅರುಹಿದೆ. “ಓಹ್!ಹೌದಾ ಆಂಟಿ ಬಹಳ ಸಂತೋಷ ” ಇತ್ಯಾದಿ ಇತ್ಯಾದಿ ಮಾತಾಡಿ ನಾಳೆ ಕಳಿಸ್ತೀನಿ ಅಂತ ಫೋನಿಟ್ಟ. ನನಗೊ ಗುಡ್ಡ ಕಡಿದಷ್ಟು ಖುಷಿ. ಆಗೋದೆಲ್ಲಾ ಒಳ್ಳೆದಕ್ಕೆ ಅಂತ ಸಮಾಧಾನಲ್ಲಿದೆ ಸಧ್ಯಕ್ಕೆ ಮನಸ್ಸು. ಆದರೂ ಒಂದು ಸಣ್ಣ ಆತಂಕ ನಾನು ಕಲಿತು ಕಾಪಿ ತೆಗಿತೀನಾ? ನೋಡ್ವಾ… ಅವರ ನಿರೀಕ್ಷೆ ಈಗ ನನ್ನ ಪರೀಕ್ಷೆ ಎರಡೂ ನನ್ನ ಮುಂದಿದೆ.

ಅಲ್ಲಾ ಮರೆತೇ ಬಿಟ್ಟಿದ್ದೆ ; ಇಲ್ಲೇ ಇರೊ ನನ್ನ ಫ್ರೆಂಡ್ ಹತ್ತಿರ ಪೆನ್ ಡ್ರೈವ್ ಕಳೆದಿರೊ ವಿಚಾರ ಹೇಳಿದಾಗ “ಅಲ್ಲೇ ಎಲ್ಲೋ ಇರ್ತೆ,ಮತ್ತೊಂದು ಸಲ ಹುಡುಕು. ಯಮ್ಮಲ್ಲೂ ಹೀಂಗೆ ಆಗಿ ಕಡಿಗೆ ನೋಡತಂಕ ತೊಳೆದ ಪ್ಯಾಂಟ್ ಇಸ್ತ್ರಿ ಮಾಡಕರೆ ಪ್ಯಾಂಟ್ ಜೋಬಲ್ಲೇ ಇತ್ತು ಮಾರಾಯ್ತಿ, ಸಿಕ್ತು ತಗ” ಅಂದಿದ್ದು ಈಗ ನಂಗೂ ಸಿಕ್ಕ ವಿಷಯ ಹೇಳಬೇಕು ಅಲ್ವಾ? ಅವಳು ನಾ ಹೋದ ಹಾಗೆ “ಚಾ ಕುಡಿತ್ಯನೆ ಹೇಳ್ತಾ ಚಾಕ್ಕಿಡೋದು ಮಾತಾಡ್ತಾ ಮಾತಾಡ್ತಾ ಚಾ ತಂದಿಡೋದು, ನಾ ಬ್ಯಾಡ್ ಬ್ಯಾಡ್ದೆ ಹೇಳ್ತಾ ಚಾ ಹೀರಿ ಬರೋದು ಈಗ ಹತ್ತು ವರ್ಷಗಳಿಂದ ನಡೀತಾ ಬಂದಿರೊ ಮಾಮೂಲಿ. ಅವಳ ಕೈ ಖಡಕ್ ಚಾ ಕುಡದು ” ನಿನ್ನ ಬಾಯಿಗೆ ಸಕ್ಕರೆ ಹಾಕವೆ ” ಇದು ಮಾತ್ರ ಮುದ್ದಾಂ ಹೇಳಿಯೇ ಬರಬೇಕು. ಇಗೋ ಹೊರಟೆ. ಬರ್ಲಾ……?

11-4-2019. 7.27pm

ಖಡಕ್ ಸೆಕೆಂಡ್ ಚಾ…….

“ಒಂದು ಕಪ್ ಖಡಕ್ ಚಾ ಕುಡಿಯದೇ ಈಗಾ. ತಡಕಳಲೇ ಆಗ್ತಿಲ್ಲೆ. ಏನಾದರಾಗಲಿ.” ಮನಸಲ್ಲಿ ನೆಲೆಯೂರಿ ಬಿಟ್ಟಿದ್ದ ಈ ಸೆಕೆಂಡ್ ಚಹಾದ ಗುಂಗು ಇವತ್ತು ಬೆಳಿಗ್ಗೆ ದೋಸೆ ಹೊಯ್ತಾ ಇನ್ನಷ್ಟು ಭುಗಿಲೆದ್ದು ಬಿಟ್ಟಿತ್ತು. ಫ್ರೆಶ್ ಹಾಲು. ಆದರಿದು ನನ್ನಪ್ಪನ ಮನೆಯಲ್ಲಿ ಆಗಿಂದಾಗ್ಗೆ ಕರೆದ ಹಾಲಿನಂತೇನಲ್ಲ. ಆದ್ರೂ ಈ ಸಿಟಿಯಲ್ಲಿ ಭೀಗೋದು ಫ್ರೆಶ್ಶು ಫ್ರೆಶ್ಶು ಹೇಳಿ.

ಅಂದಾಂಗೆ ಸಖತ್ತಾಗಿ ಮಾಡುವ ಬರೀ ಹಾಲಲ್ಲೇ ಒಂಚೂರು ಏಲಕ್ಕಿ, ಶುಂಠಿಯ ಸ್ಟ್ರಾಂಗ್ ಚಹಾ ತಪ್ಪಿಹೋಗಿದ್ದು ಈ ಜಿಮ್ಮಿಂದ. ನೋಡಿ. ಈ ಜಿಮ್ಮು ಪಮ್ಮೂಗೆ ಹೋಗ್ತಾರಾ ಈಗಿನ ಮಕ್ಕಳು. ಅಲ್ಲಿ ಅವರು ಹೇಳಿದ್ದೇ ವೇದವಾಖ್ಯ. ನಾವೇನಾದರೂ ನಮ್ಮ ಜೀವನಾನುಭವದ ಮಾತು ಹೇಳಿದರೆ ಊಹೂಂ ಸುತಾರಾಂ ಒಪ್ಪೋದೇ ಇಲ್ಲ. ಮಗಳ ಜಿಮ್ಮಿನವರ ಅಪರಾವತಾರ “ಮನೆಗೆ ಹೋದ ಮೇಲೆ ಜೂಸ್ ಕುಡಿರಿ”.” ಚಾಕ್ಕೆ ಹಾಕಿದ ಕೊಕ್ಕೆ ನಂಗೆ ಮೂರ್ ನಾಮ.

ಎಷ್ಟು ಕೋಪ ಗೊತ್ತಾ ಹೇಳಕಿಲ್ಲಾ ಬಿಡಕಿಲ್ಲಾ. ಆದರೂ ಮರೆತಂತೆ ನಟಿಸಿ ಚಾ ಗೊಟಾಯಿಸಿ ಕೊಟ್ಟು ಸಮಾ ಬಯ್ಸಿಕೊಂಡೆ ಅಲ್ಲಲ್ಲಾ ಉಗಿಸಿಕೊಂಡೆ. ಗೊತ್ತಲ್ಲ ಈಗಿನವರ ಜಿಮ್ ಮೇಲಿನ ಪ್ರೀತಿ ಅಡ್ಡಡ್ಡ ಬೆಳಿಬಾರದೆನ್ನುವ ಕಸರತ್ತು ಮಾಡಲು ಹೋಗಿ ಮನೆಗೆ ಬಂದು ಅಮ್ಮನ ಮೇಲೆ ಕೋಪದ ಅಸ್ತ್ರ ಪ್ರಯೋಗ. ಕಾರಣ ಇಡೀ ದಿನ ಕಂಪ್ಯೂಟರ್ ಮುಂದೆ ದುಡಿ. ಬ್ಯಾಡಾ ಅಂದರೂ ಬರೋ ಮೈಯ್ಯಿ. ಅರ್ಧ ದಿನ ರಸ್ತೆ ಮೇಲೇ ಜೀವನ . ಉಫ್… “ಅದೇನು ಟ್ರಾಫಿಕ್ಕು. ವೈಟ್ ಟಾಪಿಂಗ್ ಬೇರೆ ಸಾಕಾಗೋಗುತ್ತೆ ಅಮ್ಮ ” ಅಂದಾಗ ಕರಗೋಗ್ತೀನಿ.

ಇನ್ನು ಬಾಡಿ ಕಸರತ್ತು ಮಾಡೊ ಧಂ ಇರಲ್ಲ ಮಾಡದೇ ಇದ್ದರೆ ಗತಿ ಇಲ್ಲ. ಅವರೇಳಿದ್ದು ಕೇಳದಿದ್ದರೆ ಜಿಮ್ ಮಾಡಿದರೂ ವರ್ಕೌಟ್ ಆಗಲ್ಲ . ಇಷ್ಟ ಪಡುವ ತಿಂಡಿಗೆಲ್ಲಾ ಕೊಕ್. ಮನಸ್ಸು ಕೆಟ್ಟೋಗಿ ಯಪ್ರಾತಪ್ರಾ ತಿನ್ನೋ ಐಟಂ ಮನಸ್ಸಿನ ಸುತ್ತ ಗಿರಕಿ ಹೊಡೆದೂ ಹೊಡೆದೂ ಅವಸ್ಥೆ ಏನ್ ಕೇಳ್ತೀರಾ ದೇವರೆ ದೇವರೆ! ನಂಗಂತೂ ಮನಸ್ಸಲ್ಲೇ ನಗು. ಅವಳ ರೇಗೋ ಕಾರಣ ಏನೂ ಗೊತ್ತಿಲ್ಲದಂತೆ ಇದುವರೆಗೂ ಮೆಂಟೇನ್ ಮಾಡ್ತಾನೇ ಬಂದಿದ್ದೇನೆ. ಹಂಗಂತ ನನ್ನ ಒಳಗುಟ್ಟು ಬಿಟ್ಕೊಟ್ಟಿಲ್ಲ ಆಯ್ತಾ? ಅದೇ ಸೆಕೆಂಡ್ ಸ್ಟ್ರಾಂಗ್ ಚಾದೂ. ಏಕೆಂದರೆ ಈ ಅಮ್ಮನಿಗೋಸ್ಕರ ಮನಸ್ಸು ಬದಲಾಯಿಸಿ ಬಿಟ್ರೆ? ನಂಗೂ ಆಸೆ ನನ್ಮಗಳು ಚಂದಾನೇ ಕಾಣಬೇಕು ಯಾವಾಗಲೂ ಅಂತಾ!

ಏನ್ ಕೆಲಸ ಇದ್ದರೂ ಬಿಟ್ಟಾಕಿ ಜಿಮ್ಮಿಂದ ಮನೆಗೆ ಅವಳಡಿಯಿಡೋ ಅಷ್ಟರಲ್ಲಿ ಈ ಚಾ ರೆಡಿಗೆ ಅಣಿಯಾಗಿ ಬಿಡ್ತಿದ್ದೆ. ಅದೂ ಬೆಳಗಿನ ಸೆಕೆಂಡ್ ಚಾ. ಕುಡಿಯಲು ಜೊತೆಗಿದ್ದರೇನೇ ಹೀರಲು ಒಂಥರಾ ಗಮ್ಮತ್ತು. ಈಗೇನು ಮಾಡಲಿ? ಮಾಡಿ ಕುಡಿಯಲು ಯಾರ ಹಂಗಿಲ್ಲ. ಆದರೂವಾ ಚಾ ಕುಡಿಯೋದಕ್ಕೆ ನೆವ ಬೇಕು. ಅದು ಹಂಗೆ. ಹೇಳಿದರೆ ಗೊತ್ತಾಗೋದಲ್ಲ. ಚಟವಿರಬೇಕು. ಅದೇ ಚಾದ ಚಟಾರೀ… ನನಗಂತ ಮಾಡಿಕೊಂಡಿದ್ದಲ್ಲಪ್ಪಾ ಮಗಳಿಗೆ ಮಾಡಿದ್ದು ಹಂಗೇ ಒಂದು ಚೂರು ಕುಡದ್ನಪ್ಪಾ. ಮನಸ್ಸು ಸುಳ್ಳು ಸುಳ್ಳೆ ತನ್ನ ತಪ್ಪಿಲ್ಲವೆಂದು ಸಮಾಧಾನ ಮಾಡಿಕೊಳ್ಳುತ್ತದೆ ಇಡೀ ದಿನ. ಅಕಸ್ಮಾತ್ ಸ್ವಲ್ಪ ಪಿತ್ತ ಜಾಸ್ತಿ ಆಗಿದ್ದು ಅರಿವಿಗೆ ಬಂದಾಗ ಕಿಲಾಡಿ ಮನಸ್ಸು ಹೀಗೇ ಹೇಳೋದು .

ಒಂದು ವಿಷಯ ಪಟಕ್ ಅಂತ ನೆನಪಾಯಿತು ನೋಡಿ ; ನನ್ನ ಸೋದರ ಮಾವ ಒಬ್ರು ಇದ್ರು. ಇದ್ರು ಅಂದರೆ ಈಗಿಲ್ಲ ಬಿಡಿ. ಆದರೆ ಅವರಲ್ಲಿ ಒಂದು ಗುಟ್ಟಿತ್ತು. ಆಗೆಲ್ಲ ನನಗೆ ಅರ್ಥ ಆಗ್ತಿರಲಿಲ್ಲ. ಈಗ ಈ ಚಹಾದ ಹುಚ್ಚು ಹೆಚ್ಚಾದಂತೆ ನನಗೆ ಅವರ ನೆನಪು ಅಪೂಟೂ ಬಿಡದ ಹಾಗೆ ಮನಸ್ಸಿನಲ್ಲಿ ಸುರುಳಿ ಸುತ್ಕೋತಾ ಇದೆ.

ಅದೇನಪ್ಪಾ ಅಂದರೆ ಮನೆಗೆ ಸದಾ ಯಾರಾದರೂ ಬರುತ್ತಿರಬೇಕು. ಮಾವಂಗೆ ನಮ್ಮಂತೆ ಓಡಾಡಲಾಗದ ಸ್ವಲ್ಪ ಅಶಕ್ತರು. ಆದರೆ ಕೂತಲ್ಲೇ ದರ್ಭಾರ ನಡೆಸುವವರು. ಸಿಕ್ಕಾಪಟ್ಟೆ ಸಾಹಿತ್ಯದ ಹುಚ್ಚು. ಓದೋದು, ಬರೆಯೋದು,ಸದಾ ತಮಾಷೆ ಮಾತಾಡ್ತಾ ಮನೆಯೆಲ್ಲ ಗಲಗಲಾಂತ ನಗಿಸೋರು. ಸಾಹಿತ್ಯಾಸಕ್ತರ ದೊಡ್ಡ ದಂಡೇ ಇತ್ತು ಅವರ ಸ್ನೇಹದ ಬಳಗದಲ್ಲಿ. ಮನೆಗೆ ಯಾರು ಬರಲಿಕ್ಕಿಲ್ಲ “ಚಾ ಕುಡಿತ್ಯನಾ? ” ಅವರು ಕುಡಿಯುವವರಲ್ಲದಿದ್ದರೂ ಅಲ್ಲೇ ಸಣ್ಣಕೆ “ಹೂಂ, ಕುಡಿತಿ ಹೇಳಾ” ಹೀಗಂದೂ ಅಂದೂ ಅವರ ಬಳಗದವರು ಯಾರೇ ಬರಲಿ ಬೇಡಾ ಹೇಳ್ತಾನೇ ಇರಲಿಲ್ಲ. ಇನ್ನಿವರು ಕುಡಿಯದೆಷ್ಟಪ್ಪಾ ಅಂದರೆ ಒಂದು ನಾಲ್ಕು ಸಿಪ್ಪು ದಿನಕ್ಕೆ ಒಂದತ್ತೋ ಹದಿನೈದು ಸಾರಿ ಇರಬಹುದು. ಇದಕ್ಕೇನು ಹೊತ್ತಿಲ್ಲ ಗೊತ್ತಿಲ್ಲ. ಆದರೆ ಚಾ ಕುಡಿಬೇಕಾರೆ ಒಟ್ಟಿನಲ್ಲಿ ಒಂದು ನೆವ ಬೇಕು. ಒಂದಿನಾನೂ ಯಾರೂ ಇಲ್ಲ ಅನ್ನೋ ಹಾಗೇ ಇಲ್ಲ. ಅಕಸ್ಮಾತ್ ಯಾರೂ ಬರದೇ ಇದ್ದರೆ ಫೋನ್ ಮಾಡಿಯಾದರೂ ಕರೆಸಿಕೊಳ್ಳೊ ಸ್ವಭಾವದವರು. ಕಡೆ ಕಡೆಗೆ ಒಬ್ಬರೇ ಕುಡಿಯೋದು ರೂಢಿನೂ ಆತು. ಹಂಗೆ ನಾನವರ ಮನೆಯಲ್ಲಿ ಇರುವಾಗ ಚಾ ಮಾಡಿಕೊಟ್ಟೂ ಕೊಟ್ಟೂ ಗೊಣಗಿದ್ದೆ “ಈ ಮಾವಂಗೆ ಎಂತಕೀನಮನಿ ಚಾ ಹುಚ್ಚನ. ಎಷ್ಟು ಸರ್ತಿ ಮಾಡವನ, ಕುಡಿಯದು ಮಾತ್ರ ಇಷ್ಟೇಯಾ.” ಹೇಳುವುದು ಸುಲಭ ಆದರೆ ಚಾ ಗೀಳು ಅಂಟಿಸಿಕೊಂಡವರಿಗಷ್ಟೇ ಗೊತ್ತು ಸಿಕ್ಕಿಲ್ಲಾ ಅಂದರೆ ಅದರ ಅವಸ್ಥೆ. ಈಗ ನನಗೆ ಸಮಾ^^^ಅರ್ಥ ಆಗ್ತಿದೆ ಆಗಿನ ಮಾವನ ಅವಸ್ಥೆ.

ನಂಗೂ ಈಗೀಗ ಹಂಗೇ ನೆಪ ಬೇಕು ಚಾ ಮಾಡಲು ಅನಿಸೋದು ಜಾಸ್ತಿ ಆಗಿದೆ. ಛೆ!ಕುಡಿಯುವವರು ಯಾರಾದರೂ ಬಂದಿದ್ರೆ, ಒಂಚೂರು ಚಾ ಗೊಟಾಯಿಸಬಹುದಿತ್ತಲ್ಲಾ? ನನ್ನ ಚಾ ಕವನ ಓದಿ ಚಾ ಮತ್ತ್ ಹತ್ತಿ ನಾಕಾರು ಸ್ನೇಹಿತರು ನಮ್ಮನೆಗೆ ಬಂದು ಈರುಳ್ಳಿ ಪಕೋಡಾ ಜೊತೆಗೆ ಹಂಗೇ ಮಾತಾಡ್ತಾ ಡಬಲ್ ಚಾ ಕುಡಿದು ಮತ್ತೆ ಬರ್ತೀನಿ ಅಂದಾಗ ಆ ದಿನ ಇನ್ನೂ ಬಂದಿಲ್ವಲ್ಲಾ ಅಂತ ಕೇಳುತ್ತೆ ಮನಸ್ಸು. ಒಬ್ಬಳಂತೂ “ಮೂರು ವರ್ಷದ ಹಿಂದೆ ಚಾ ಕವನ ಓದುತ್ತಾ ಮನಸ್ಸು ತಡಿಲಾರದೇ ಎದ್ದೋಗಿ ಕೂಡಲೇ ಚಾ ಮಾಡಿ ಕುಡಿದಿದ್ದೆ. ಈಗ ನೋಡಿ ನಿಮ್ಮ ಕೈಯ್ಯಾರೆ ಚಾ ಕುಡಿದದ್ದು ಸಂತೃಪ್ತಿ ಆಯಿತು ” ಅಂತ ಮೊನ್ನೆ ಮನೆಗೆ ಬಂದವಳು ಅಂದಾಗ ಪರವಾಗಿಲ್ವೆ? ನನ್ನ ಚಾ ಮರುಳೂ ಮಾಡುತ್ತೆ ಅಂತ ಹೆಮ್ಮೆ ಪಟ್ಟೆ.

ಏನಾದರಾಗಲಿ ಒಂದು ಲೀಟರ್ ಹಾಲು ಬೆಚ್ಚಗೆ ಕಾಯಿಸಿದ್ದು ಮನೆಯಲ್ಲಿ ಕಾದಿರಿಸೋದು ಮಾತ್ರ ಮರೆಯೋಲ್ಲ ಆಯ್ತಾ? ಈ ಬಿರು ಬೇಸಿಗೆಯಲ್ಲಿ ಎಲ್ಲಿ ಹಾಲು ಒಡೆದು ಹೋದರೆ ಅಂತ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿ ಮಲಗುವಾಗಲೂ ಕಾಯಿಸಿನೇ ಮಲಗೋದು. ಬೆಳಿಗ್ಗೆ ಎದ್ ಮಗಲಲ್ಲಿ ಹಾಲಿಲ್ಲಾ ಅಂದರೆ ತಲೆ ಕೆಟ್ಟು ಗೊಬ್ಬರ. ಯಾಕಂದರೆ ಈ ನಿದ್ದೆ ನನ್ಮಗಂದು ಅದ್ಯಾವಾಗ ಕೈ ಕೊಡುತ್ತೆ ಗೊತ್ತೇ ಆಗೋದಿಲ್ಲ. ಒಮ್ಮೊಮ್ಮೆ ಬೆಳಗಿನ ಜಾವ ನಾಕ್ ಗಂಟೆಗೇ ಎಚ್ಚರಾಗಿ ಚಾ ನೆನಪಾಗಿ ಸಟಕ್ ಅಂತ ಏಳೋ ಹಾಗಾದಾಗ ಎಲ್ಲಿ ಹುಡುಕ್ಕೊಂಡು ಹೋಗಲಿ ಅಷ್ಟು ಬೆಳಗ್ಗೆ. ನಂಗಂತೂ ದೇವರ ತಲೆ ಮೇಲೆ ಹೂ ತಪ್ಪಿದರೂ ಅಡ್ಡಿಲ್ಲ ಈ ಚಾ ಮಾತ್ರ ತಪ್ಪೂಕ್ ಯಡಿಯಾ. ಠೇಮಿಗೆ ಸರಿಯಾಗಿ ಬೇಕು. ಅದೂ ಬೆಳಿಗ್ಗೆ ಎರಡು ಬಾರಿ. ಅಷ್ಟು ಸಿಕ್ಕರೆ ಸಾಕು ದಿನವೆಲ್ಲಾ ಖುಷ್!
ಮತ್ತೆ ಚಾನ್ಸ್ ಸಿಕ್ಕರೆ ಹೀರದೇ ಇರಲು ಮನಸ್ಸು ತಡೆಯೋದಿಲ್ಲ

ಮೊನ್ನೆ ಅಕಾಡಮಿ ಸಮಾರಂಭಕ್ಕೆ ಹೋದಾಗ ಅಲ್ಲಿ ಚಾ ಕಂಡು ಯಾರು ಏನು ಬೇಕಾದರೂ ಅಂದು ಕೊಳ್ಳಲಿ ಬಿಡಿಯಾ ಇಲ್ಲದೇ ಸೀದಾ ಎರಡು ಕಪ್ ಚಾ ಕೇಳಿ ಕುಡಿದದ್ದು ಇನ್ನೂ ಗುಟ್ಟಾಗೇ ಇಟ್ಟುಕೊಂಡಿದ್ದೇನೆ. ಸಖತ್ತಾಗಿತ್ತು ಎಲ್ಲರ ಜೊತೆ ಹಂಗೆ ಮಾತಾಡ್ತಾ ಹೀರಿದ್ದು!

ನೋಡಿ ನಾ ಮತ್ತೇನು ಹೇಳೂದಿಲ್ಲ ಚಾ ಚಟ ಹಚ್ಕೋಬೇಡಿ. ಅಕಸ್ಮಾತ್ ಹಂಚ್ಕೊಂಡರೆ ಅಕ್ಕ ಪಕ್ಕದವರನ್ನೊ ಇಲ್ಲಾ ಒಂದಷ್ಟು ಹತ್ತಿರದಲ್ಲಿರೋ ಸ್ನೇಹಿತರ ಬಳಗ ಬೆಳೆಸಿಕೊಳ್ಳಿ. ಈಗ ನನ್ನ ಮುಂದಿನ ದಾರಿನೂ ಅದೇ. ಒಬ್ಬರೇ ಕೂತು ಚಾ ಕುಡದ್ರೆ ಮಜಾ ಇಲ್ಲ. ಜೊತೆಗೆ ಒಬ್ಬರು ಇರೋದು ಚಾ ಜೊತೆ ಚುಡುವಾ ಇದ್ದಾಂಗೆ. ಒಂದಷ್ಟು ಹರಟತಾ ನಕ್ಕೋಂತಾ ಖಡಕ್ ಸುಡು ಸುಡು ಚಾ ಕುಡೀತಾ ಇದ್ರೆ^^^^^^ ವಾವ್!ತಾಜ್….ಮಸ್ತ್ ಮಸ್ತ್ ಉತ್ಸಾಹ. ಬೇಕಾರೆ ಚಾ ಚಟ ಹಚ್ಕೊಂಡು ನೋಡಿ ಇಲ್ಲಾ ನಾ ಹೇಳಿದ್ದು ಅಪ್ಪಟ ಸತ್ಯ, ನಂಬಿ!

ಅಂದಾಂಗೆ ಬರ್ತೀರೇನು ಚಾ ಕುಡಿಯೋಣೂ…….

25-3-2019. 3.49pm

ಹಾಂ, ಸಿಕ್ಕಿತು…

ಪಟಕ್ಕನೆ ಯಾಕೊ ನೆನಪಾಯಿತು, ಹರಡಿಕೊಂಡು ಕೂತೆ. ಕಣ್ಣು ಇಷ್ಟಗಲ ಹೃದಯದಲ್ಲಿ ಸಂತಸದ ನಗಾರಿ. ಓದುತ್ತ ಓದುತ್ತ ಎಲ್ಲೋ ಹೋಗಿಬಿಟ್ಟೆ ಒಂದು ಕ್ಷಣ ಹಂಗಂಗೆ.

ಹೌದು ಆ ದಿನಗಳಲ್ಲಿ ಪೋಸ್ಟಮನ್ಗೆ ಅದೆಷ್ಟೊಂದು ಬೆಲೆಯಿತ್ತು. ಹಳ್ಳಿಯಲ್ಲಿರುವಾಗ ಹತ್ತಿರದವರಿಂದ ಬರುವ ಪತ್ರಗಳಿಗಾಗಿ ಪೋಸ್ಟ್ ಮನ್ ಬರಾ ಕಾಯೋದೇನು, ದೂರದಿಂದಲೇ ಸೈಕಲ್ ಬೆಲ್ ಬಾರಿಸುತ್ತ ಬರೋ ಅವನ ಶೈಲಿ, ಓಡಿ ಹೋಗಿ ಕೊನೆಗೆ ಪತ್ರ ಬರದಾಗ ಪೆಚ್ಚು ಮೋರೆ ಹಾಕೋದು, ಇವೆಲ್ಲ ಹಳ್ಳಿಯಲ್ಲಿದ್ದಾಗ ಮಾಮೂಲಾಗಿತ್ತು. ಅದರಲ್ಲೂ ಈ ಹಬ್ಬಗಳು ಬಂದರಂತೂ ಮುಗೀತು ಶುಭಾಶಯ ಸಂದೇಶಗಳನ್ನು ಹೊತ್ತು ತರುವ ವಿಧವಿಧವಾದ ಚಂದದ ಗ್ರೀಟಿಂಗ್ಸ್ ಅದರೊಳಗಿನ ಮನ ಸೂರೆಗೊಳ್ಳುವ ಒಕ್ಕಣೆಗಳು

ಆಗೆಲ್ಲ ಪತ್ರ ಬರೆಯೋದೇ ಒಂದು ಸಡಗರ. ಬರೆದಾದ ಮೇಲೆ ಮನೆಯಲ್ಲಿ ಗಮ್ ಇಲ್ಲದೇ ಒದ್ದಾಟ. ” ಅನ್ನ ಮುಸುರೆ ಕೂಸೆ” ಅಜ್ಜಿ ಹೇಳಿದರೂ ಕೇಳದೆ ಅದನ್ನೇ ಗಮ್ಂತೆ ಉಪಯೋಗಿಸಿರೋದು , ಮೈಲಿಗಟ್ಟಲೆ ನಡೆದುಕೊಂಡು ಹೋಗಿ ಸ್ಟಾಂಪ್ ಹಚ್ಚಿ ಪೋಸ್ಟ್ ಡಬ್ಬಿಗೆ ಹಾಕೋದು. ದೊಡ್ಡ ಪತ್ರವಾದರೆ ಹಾಕಲೆಂದು ಪೋಸ್ಟ್ ಕವರ್ ಮುಂಗಡವಾಗಿ ಕಾರ್ಡು, ಇನ್ಲೆಂಡ್ ಲೆಟರ್ ತಂದಿಟ್ಟುಕೊಳ್ಳೋದೇನು? ಅಬ್ಬಬ್ಬಾ ಮಸ್ತ್ ಮಜಾ ಸಂಕ್ರಾಂತಿ, ದೀಪಾವಳಿ,ಹೊಸ ವರ್ಷ ಹೀಗೆ. ಶುಭಾಶಯಗಳ ವಿನಿಮಯ ಹಲವಾರು. ಆಮೇಲೆ ಅದೆಲ್ಲ ಸಂಗ್ರಹಿಸಿಡೋದು.

ಹೀಗೆ ಸಂಗ್ರಹಿಸಿಟ್ಟ ಕಂತೆಗಳೇ ಇವತ್ತು ನನ್ನ ಸಂತೋಷದ ಕಡಲಲ್ಲಿ ಮುಳುಗಿಸಿದ್ದಂತೂ ನಿಜ. ಅದೂ ಇರುವನೊಬ್ಬನೇ ಅಣ್ಣನ ಪತ್ರಗಳು ಜೋಪಾನವಾಗಿ ಎತ್ತಿಟ್ಟಿದ್ದೆ. ಒಂದೇ ಪತ್ರದಲ್ಲಿ ಅತ್ತಿಗೆಯ ಒಕ್ಕಣೆಯೂ ಇರುತ್ತಿತ್ತು. ಅಣ್ಣನ ಮನದಾಳದ ಮಾತುಗಳು, ಪ್ರೀತಿ ತುಂಬಿದ ಹಾರೈಕೆ, ಅತ್ತಿಗೆಯ ಪಾರುಪತ್ಯದ ಸಂಗತಿಗಳು, ಊರ ಸುದ್ದಿ ಕೊನೆಗೆ “ಯಾವಾಗ ಬರ್ತ್ಯೇ?”.

ಆಹಾ! ಮತ್ತೊಮ್ಮೆ ಓದುತ್ತ ಕಳೆದೇ ಹೋದೆ 1987ರಲ್ಲಿ ನಾ ಬೆಂಗಳೂರು ಕಾಲಿಕ್ಕಿದ ದಿನದಿಂದ ಬಂದ ಪತ್ರಗಳು. ಆಗ ಅಮ್ಮ ಇದ್ದರು. ಅವರ ಸಮಾಚಾರ ಈಗ ಬರೀ ನೆನಪಷ್ಟೇ. ಅಣ್ಣನ ಮಗನ ತೀಟೆ,ಹುಡುಗಾಟಿಕೆಯ ಸಾಲುಗಳು ನಗುವಿಗೆ ನಾಂದಿ
ಹಾಡಿದರೆ ಈಗ ಬೆಳೆದು ದೊಡ್ಡವನಾದವನಿಗೆ ಈ ಪತ್ರಗಳನ್ನು ಓದಿ ಏನನಿಸಬಹುದು? ಖಂಡಿತ ಅವರ್ಯಾರೂ ಅಂದುಕೊಂಡಿರೋಲ್ಲ ; ಇದುವರೆಗೂ ಅವರ ಪತ್ರಗಳು ನನ್ನ ಹತ್ತಿರ ಜೋಪಾನವಾಗಿ ಇವೆಯೆಂಬುದು.

ಆದರೆ ಆನಂತರದ ದಿನಗಳಲ್ಲಿ ಬಂದ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ಫೋನ್ ಕನೆಕ್ಷನ್ ಊರಲ್ಲೂ ನಮ್ಮನೆಯಲ್ಲೂ ಈ ಪತ್ರ ವ್ಯವಹಾರ ನಿಂತು ಬರೀ ದೂರವಾಣಿಯಲ್ಲಿ ಮಾತಾಡೋದು ಆಗೋಯ್ತು. ನೆನಪಾಗಿ ಉಳಿಯಬೇಕಾದ ಮಾತುಗಳು ಮರೆವಿಗೆ ಬಲಿಯಾಯ್ತು. ಹೊಸದರಲ್ಲಿ ದೂರದಿಂದಲೇ ಮಾತಾಡೋದು ಖುಷಿ ತರಿಸಿದರೂ ಬರಹದಲ್ಲಿ ಬರೆಯುವ ಮನಸಿನ ಮಾತುಗಳನ್ನು ಖಂಡಿತಾ ಮಾತುಗಳಲ್ಲಿ ವ್ಯಕ್ತಪಡಿಸಲು ಸಾದ್ಯವಿಲ್ಲ ಅಂತ ಈ ಪತ್ರಗಳನ್ನು ಓದಿದಾಗ ಅನಿಸುತ್ತದೆ. ನಿಜಕ್ಕೂ ಪತ್ರಗಳು ಕೊನೆಯವರೆಗೂ ನನ್ನ ಜೀವನ ಸಂಗಾತಿಗಳು.

ಮೊಬೈಲ್ ಬಂದ ನಂತರವಂತೂ ಎಷ್ಟೋ ಸಾರಿ ನೆಟ್ವರ್ಕ್ ಸಿಗದೇ ಮನಸು ಮಾತಾಡಬೇಕೆಂದಾಗ ಮಾತಾಡಲಾಗದೇ ನೆಟ್ವರ್ಕ್ ಸಿಕ್ಕಾಗ ಮಾತನಾಡಲು ಹೋಗಿ ಆಡಬೇಕಾದ ಆ ಕ್ಷಣದ ಮಾತುಗಳು ಮರೆತು ಒಂದು ರೀತಿ ಯಾಂತ್ರಿಕ ವಾತಾವರಣ. ಸಂತೋಷ ಸ್ವಾತಂತ್ರ್ಯ ಕಳೆದುಕೊಂಡ ಭಾವ.

ಇದ್ದಕ್ಕಿದ್ದಂತೆ ಪಕ್ಕನೇ ಮನದ ಯೋಚನೆ ಈ ಬಾರಿ ಊರಿಗೆ ಹೋಗುವಾಗ ಎಲ್ಲರಿಗೂ ಏನು ಒಯ್ಯಲಿ? ಹಾಂ,ಸಿಕ್ಕಿತು. ಈ ಪತ್ರಗಳ ಕಂತೆಗಳನ್ನೇ ಯಾಕೆ ಹೊತ್ತೊಯ್ಯಬಾರದು? ಅವರೊಂದಿಗೆ ಕೂತು ಓದುತ್ತ ನೆನಪಿನ ರಂಗೋಲಿ ಮನೆಯೆಲ್ಲ ಬರೆದುಬಿಡಬೇಕು. ಸಂತಸದ ತಂಗಾಳಿ ನನ್ನಪ್ಪನ ಮನೆ ತುಂಬ ಹುಯ್ಲೆಬ್ಬಿಸಿಬಿಡಬೇಕು. ಜೊತೆಗೊಂದಿಷ್ಟು ಹರಟೆಯ ಮದ್ಯೆ ಅತ್ತಿಗೆ ಮಾಡಿದ ಹಳ್ಳಿ ತಿಂಡಿಗಳು ಬಟ್ಟಲಲ್ಲಿದ್ದರೆ……. ವಾವ್! ಬಹುಶಃ ಇಷ್ಟು ಸಂತೋಷ ನಾನು ಬೇರೆ ಏನು ತೆಗೆದುಕೊಂಡು ಹೋದರೂ ಸಿಗಲು ಸಾಧ್ಯ ಇಲ್ಲ ಅಲ್ಲವೇ??

11-10-2018. 8.35am

ಬಿಸಿ ಬಿಸಿ ಕಜ್ಜಾಯ…….

ಗಣಪ ಅಂದರೆ ಸಾಕು ನೆನಪಾಗುವುದು ದೊಡ್ಡ ಕಿವಿ, ಸೊಂಡಿಲ ಮೂತಿ, ಚಂದ ಕಣ್ಣು, ಡೊಳ್ಳು ಹೊಟ್ಟೆ. ಹಾವು ಸುತ್ತಿಕೊಂಡು ತುಂಬಿದೊಟ್ಟೆ ಒಡೆಯದಿರಲೆಂದು ಕಟ್ಟಿಕೊಂಡ ಗಣಪ ಅಂತ ಅಮ್ಮ ಹೇಳುವ ಕಥೆಯೂ ನೆನಪಾಗದೇ ಇರದು. ಅಷ್ಟು ಮುದ್ದು ಮುದ್ದು ನಮ್ಮ ಗಣಪ ಅಂದು,ಇಂದು,ಮುಂದೆಂದೂ. ಹಂಗಂಗೇ^^^^ ಇವತ್ತು ಇನ್ನಷ್ಟು ನೆನಪು ಬಾಲ್ಯದ ಚಿನಕುರುಳಿ ಆಟದ ದಿನಗಳಲ್ಲಿ ನಡೆದ ಅನೇಕ ಘಟನೆಗಳು ಕಣ್ಣ ಮುಂದೆ ಬಂದು ಒಂದೊಂದೇ ಸರಣಿ ಬಿಚ್ಚಿದಂತೆ ನೆನಪಾದಾಗ ಆಗಿನ ಕುಚೇಷ್ಟೆ ಈಗ ನಗು ತರಿಸಿದರೆ ಆ ಭಯ ಭಕ್ತಿ ಈಗೆಲ್ಲಿ ಹೋಯ್ತು ಅನ್ನುವಂತಾಗುತ್ತದೆ. ಇದನ್ನೇ ನಾವು ಕಾಲ ಬದಲಾಯಿತು ನಾವೂ ಬದಲಾಗಿ ಬಿಟ್ವಿ ಅನ್ನೋದು ಅಲ್ವಾ?

ನಿಜರೀ…ಇವತ್ತು ಪೇಪರಿನಲ್ಲಿ ಬಂದ ಒಂದು ಸುದ್ದಿ “ಅಂದುಕೊಂಡಿದ್ದು ಈಡೇರಿದ್ದರಿಂದ ಗಣೇಶನಿಗೆ ಬೆಳ್ಳಿ ಕಿರೀಟ ಮಾಡಿಸಿ ಹರಕೆ ತೀರಿಸಿದರಂತೆ!” ಅಬ್ಬಾ ಕಾಲವೇ ಅನಿಸಿತು. ಕಾರಣ ;

ಹಿಂದೆಲ್ಲ ಇಷ್ಟೊಂದು ಕಾಷ್ಟ್ಲಿ ಹರಕೆ ಇತ್ತಾ? ಭಯಂಕರ ಯೋಚನೆಗೆ ಶುರು ಹಚ್ಚಿಕೊಂಡಿತು ತಲೆ. ಪೇಟೆ ಮೇಲಿನ ಜನರ ಸುದ್ದಿ ನಂಗೊತ್ತಿಲ್ಲ : ಆದರೆ ನಮ್ಮ ಹಳ್ಳಿ ಕಡೆ ಮಂದಿ ಹರಸಿಕೊಳ್ಳುವ ಪರಿ ಸ್ವಲ್ಪ ದೇಹಕ್ಕೆ ಶ್ರಮ ಕೊಡುವ ಹರಕೆ ಆಗಿತ್ತು. ಹುಟ್ಟುವ ಅಥವಾ ಹುಟ್ಟಿದ ಮಕ್ಕಳ ಶ್ರೇಯೋಭಿವೃದ್ಧಿಗೆ ಅವರ ವಿಷಯದಲ್ಲಿ ಅಂದುಕೊಂಡದ್ದು ಈಡೇರಿಸಲು ಗಣಪನಲ್ಲಿ ಹರಕೆ ಹೊರುತ್ತಿದ್ದುದು ಒಂದಾ ಪಂಚಕಜ್ಜಾಯ ಇಂತಿಷ್ಟು ಸೇರು ಮಾಡಿ ಇಡಗುಂಜಿ ಗಣೇಶನಿಗೋ ಇಲ್ಲಾ ಸಿರ್ಸಿ ದೊಡ್ಡ ಗಣಪತಿ ದೇವಸ್ಥಾನಕ್ಕೋ ಹರಸಿಕೊಂಡು ತಪ್ಪದೇ ಹರಕೆ ಒಪ್ಪಿಸೋದು. ಈ ರೂಢಿ ಎಲ್ಲಾ ಶುಭಕಾರ್ಯ, ಅನು ಆಪತ್ತು ಬರಲಿ,ಅವಘಡ ಸಂಭವಿಸಲಿ ಪ್ರತಿಯೊಂದಕ್ಕೂ ಪಂಚಕಜ್ಜಾಯ, ಕಾಯಿ ಒಡೆಸೋದು ಇಂತಿಷ್ಟು ಅಂತ, ಇಲ್ಲಾ ಮನೆಯಲ್ಲಿ ಬೆಳೆದ ಫಸಲು ಇಂತಿಷ್ಟು ದೇವಸ್ಥಾನಕ್ಕೆ ಅದರಲ್ಲೂ ಗಣೇಶನಿಗೆ ಹರಕೆ ಹೊರುವುದು ಜಾಸ್ತಿ. ಏಕೆಂದರೆ ನಮ್ಮ ಮಲೆನಾಡಿನಲ್ಲಿ ಗಣೇಶನೇ ದೊಡ್ಡ ದೇವರು. ಬಿಟ್ಟರೆ ಶ್ರೀ ಮಾರಿಕಾಂಬಾ ದೇವಿ. ಸಕಲ ಕಷ್ಟ ನಿವಾರಿಣಿ.

ಮತ್ತೆ ಶಾಲೆಗೆ ಹೋಗುವ ಮಕ್ಕಳಲ್ಲಿ ದೊಡ್ಡವರು ಚಿಕ್ಕಂದಿನಿಂದಲೂ ಅವರ ತಲೆಯಲ್ಲಿ ತುಂಬುವ ವಿಷಯ ದೇವರ ಭಕ್ತಿಗೆ ಇಂತಿಷ್ಟು ಗರಿಕೆ ಕೊಯ್ದು ಅರ್ಪಿಸ್ತೀನಿ, ಇಂತಿಷ್ಟು ಉದ್ದಂಡ ನಮಸ್ಕಾರ ಹಾಕ್ತೀನಿ ಅಂತ ಹರಸಿಕೊ, ಗಣೇಶ ಹಬ್ಬದಲ್ಲಿ ನೂರಾ ಒಂದು ಗಣೇಶನ ದರ್ಶನ ಮಾಡಿ ನಮಸ್ಕಾರ ಮಾಡ್ತೀನಿ ಅಂತ ಹರಸಿಕೊ, ಉಪವಾಸ ಮಾಡ್ತೀನಿ, ಸಹಸ್ರನಾಮಾವಳಿ ಓದುತ್ತೇನೆ ಅಂತ ಹರಸಿಕೊ ಹೀಗೆ. ನಾವೇನಿಲ್ಲಪ್ಪಾ, ಯಾವ ಉಡಾಫೆ ಮಾತಾಡದೇ ಅವರೇಳಿದ್ದು ಅಪ್ಪಟ ಸತ್ಯ ಅಂತ ನಂಬಿ ಹಾಗೆ ಮಾಡ್ತಿದ್ವಿ. ಕಾಸಿಲ್ಲ,ಖರ್ಚು ಮೊದಲೇ ಇಲ್ಲ.

ಹರಕೆ ತೀರಿಸಲು ಹಳ್ಳಿ ಹಳ್ಳಿ ಗಣೇಶನ ನೋಡಲು ಅದೆಷ್ಟು ಕಿ.ಮೀ. ಕಾಲ್ಗಾಡಿಯಲ್ಲಿ ಹೋಗ್ತಿದ್ವೊ ಏನೊ. “ಶೆಟ್ಟಿ ಬಿಟ್ಟಲ್ಲೆ ಪಟ್ನ”ಅನ್ನೊ ಹಾಗೆ ಕತ್ತಲೆ ಆಯ್ತು ಅಂದರೆ ಗಣೇಶನ ಕೂರಿಸಿದವರ ಮನೆಯಲ್ಲಿ ನಮ್ಮ ಠಿಕಾಣಿ. ಹೇಗಿದ್ರೂ ಗುಂಪಲ್ಲಿ ಗೋವಿಂದ. ನಾಲ್ಕಾರು ಮಕ್ಕಳು ಕೈಯಲ್ಲಿ ಒಂದಷ್ಟು ಅಕ್ಷತ ಕವರಿನಲ್ಲಿ ಹಿಡಕೊಂಡು ಗುರುತು ಪರಿಚಯ ಇರಬೇಕಂತನೂ ಇಲ್ಲ. ಗಣೇಶ ಇರಟ್ಟಿರುವ ಮನೆಗೆ ಹೋಗೋದು “ನಿಮ್ಮಲ್ಲಿ ಗಣೇಶನ ಇಟ್ಟಿದ್ವ?” ಕೇಳೋದು ಬೇರೆ ಸುಮ್ಮನೆ. “ಇದ್ದು ಬನ್ನಿ ಬನ್ನಿ, ಹುಡುಗ್ರಾ ಆಸ್ರಿಗೆ ಬೇಕನ್ರ^^^ತಗಳಿ ಪಂಜಕಜ್ಜ ಪ್ರಸಾದ.” ಎಲ್ಲರ ಮನೆ ಉಪಚಾರ. ಊಟದ ಹೊತ್ತಾದರೆ ಆ ಸಮಯಕ್ಕೆ ಯಾರ ಮನೆ ತಲುಪಿರುತ್ತೇವೊ ಅಲ್ಲೇ ಊಟ! ಸ್ವಲ್ಪವೂ ಬಿಡಿಯಾ ಇಲ್ಲ ದಾಕ್ಷಿಣ್ಯ ಮೊದಲೇ ಇಲ್ಲ.

ಹಬ್ಬಕ್ಕೆ ನಾಲ್ಕೈದು ದಿನ ಮೊದಲೇ ಹರಕೆ ಹೊತ್ತದ್ದು ಮಕ್ಕಳಾದ ನಮ್ಮ ನಮ್ಮಲ್ಲೆ ಚರ್ಚೆ ನಡೆದು ಎಲ್ಲಾ ತೀರ್ಮಾನ ಆಗಲೇ ಮಾಡಿ ಹಿರಿಯರು ಬೇಡಾ ಹೇಳೋದೇ ಇಲ್ಲ ಎಂದು ಗೊತ್ತಿದ್ದು ಧೈರ್ಯವಾಗಿ ಸಾಂಗವಾಗಿ ನಡಿತಿತ್ತು. ಒಂದು ಚೂರೂ ಅಹಿತ ಘಟನೆಗಳು ಹೆಣ್ಣು ಮಕ್ಕಳಾದ ನಮಗಂತೂ ಅನುಭವಕ್ಕೆ ಬಂದೇ ಇಲ್ಲ. ಅದೆಷ್ಟು ಮುಕ್ತ ವಾತಾವರಣ! ಹೋದಲ್ಲೆಲ್ಲ ಪಟಾಕಿ ಸಿಕ್ಕರೆ ನಾವೂ ಒಂದಾಗಿ ಜಡಾಯಿಸೋದು. ಅಲ್ಲಿರೊ ಮಕ್ಕಳ ಜೊತೆ ಅದೆಷ್ಟು ಕೇಕೆ. ಮೊಗಮ್ಮಾಗಿ ವಿಜೃಂಭಣೆಯಿಂದ ಹಳ್ಳಿ ಸೊಗಡಿನ ಮಂಟಪದಲ್ಲಿ ಮುದ್ದಾಗಿ ಕುಳಿತ ತರಾವರಿ ಭಾವಗಳ ಗಣಪನ ಜಭರ್ದಸ್ತ ಬೊಂಬಾಟ್ ದರ್ಭಾರು ಸುಮಾರು ಹನ್ನೊಂದು ದಿವಸದವರೆಗೂ ನಡೆಯುತ್ತಿತ್ತು ಕೆಲವರ ಮನೆಯಲ್ಲಿ. ಅಷ್ಟೂ ದಿನ ಶಾಲೆಗೆ ಕೊಟ್ಟ ಒಂದೆರಡು ದಿನ ರಜಾನೂ ಸೇರಿಸಿ ಎಂಜಾಯ್ ಮಾಡಿದ್ದೇ ಮಾಡಿದ್ದು. ಶಾಲೆಗೆ ಹೋದಾ ಪುಟ್ಟಾ ಬಂದಾ ಪುಟ್ಟಾ! ಏನಾದರೂ ಕಾರಣ ಹೇಳಿ ಮಧ್ಯಾಹ್ನ ಊಟಕ್ಕೆ ಬಂದವರು ತಿರಗಾ ಹೋದರೆ ಉಂಟು ಇಲ್ಲಾ ಅಂದರೆ ಮಾರನೇ ದಿನವೂ ಗೋತಾ.

ಆದರೀಗ ಹಾಗಲ್ಲ ; ಸಿಟಿಯಲ್ಲಿ ಮಗ ಆಗಲಿ ಮಗಳಾಗಲಿ ಒಂದು ಚೂರು ಮನೆಯಿಂದ ಆಚೆ ಈಚೆ ಆದರೆ ಸಾಕು ಮನೆಯವರೆಲ್ಲರ ಹುಡುಕಾಟ. ಹಳ್ಳಿಗಳಲ್ಲೂ ಅಲ್ಪ ಸ್ವಲ್ಪ ಈ ವಾತಾವರಣ ಉದ್ಭವ ಆಗಿದೆ.

ಹೀಗೆ ಗಣೇಶ ಹಬ್ಬ ನೋಡಿ ನೋಡಿ ಗಣಪನ ಮುಳುಗಿಸೋದು ಕೊನೆಯಲ್ಲಿ ಅದೂ ನೋಡಿ ಒಂದಷ್ಟು ಮಕ್ಕಳು ಸೇರಿ ಅಡಿಗೆ ಆಟ ಆಡಿದ್ದು ಆಮೇಲೆ ದೊಡ್ಡವರು ದೊಣ್ಣೆ ತಗೊಂಡು ಬಂದಿದ್ದು ಯಾವತ್ತಾದರೂ ಮರೆಯೋಕೆ ಸಾಧ್ಯನಾ? ;

ಊರ ಹುಡುಗರು ಹುಡುಗಿಯರೆಲ್ಲ ಸೇರಿ ಹಬ್ಬ ಮುಗಿದ ಒಂದು ಭಾನುವಾರ ಊರ ಪಟೇಲರ ಮನೆ ಮುಂದಿನ ದೊಡ್ಡ ಜಾಗದಲ್ಲಿ ಗಣೇಶ ಹಬ್ಬ ಆಚರಿಸುವ ಆಟ ಶುರುವಾಯಿತು. ಸಿಕ್ಕ ಹೂವು, ಎಲೆ ಎಲ್ಲ ತಿರಿದು ಆ ಕಡೆ ಈ ಕಡೆ ಆಧಾರವಾಗಿ ಸಿಕ್ಕ ಬೇಲಿಯ ಕೋಲಿಗೆ ತೋರಣ ಕಟ್ಟಿ ಅಲ್ಲೆ ಅಕ್ಕ ಪಕ್ಕದಲ್ಲಿ ಇದ್ದ ಕಲ್ಲು ಒಂದರ ಮೇಲೊಂದಿಟ್ಟು ಗಣೇಶನ ಕೂಡಿಸುವ ಜಾಗ ನಿರ್ಮಾಣ ಆಯಿತು. ಒಂದಷ್ಟು ತೆಂಗಿನ ಕಾಯಿಯ ಗರಟೆಗಳೇ ಅಡಿಗೆ ಸಾಮಾನು ಆಗೆಲ್ಲ. ಮೂರು ಕಲ್ಲು ಹೂಡಿ ಒಲೆನೂ ರೆಡಿ ಆಯ್ತು. ಒಣಗಿದ ಕಡ್ಡಿ ಆರಿಸಿ ಒಲೆಗಿಕ್ಕಿದ್ದೂ ಆಯ್ತು. ಒಂದಷ್ಟು ಗಿಡದ ಎಲೆ ಕೊಯ್ದು ಚಚ್ಚಿ ಚಟ್ನಿ,ಪಲ್ಯ,ಸಾಂಬಾರು,ಪಂಚಕಜ್ಜಾಯ, ಚಕ್ಲಿ ಇರೊ ಬರೋ ಎಲ್ಲಾ ತಿಂಡಿ ಅಡಿಗೆ ರೆಡಿ ಆಯಿತು. ಈಗ ಗಣೇಶನ ಕೂರಿಸುವ ಸರದಿ.

ನಮ್ಮ ನಮ್ಮಲ್ಲೇ ಮಾತಾಡಿಕೊಂಡು ನಮ್ಮ ಜೊತೆ ಸೇರಿ ಕೂತಲ್ಲೇ ಆಟ ಆಡುತ್ತಿದ್ದ ಪುಟ್ಟ ಮಗು ಅವನೇ ನಮ್ಮಾಟದ ಗಣೇಶ. ಸರಿ ಪೀಟದಲ್ಲಿ ಕೂಡಿಸಿ ಹೂ ಹಾಕಿ ಪೂಜೆನೂ ಮಾಡಿದ್ವಿ. ಸುಮ್ಮನೆ ಪಿಕಿ ಪಿಕಿ ನೋಡ್ತಾ ನಗುತ್ತ ಕೂತ ಅವನನ್ನು ನೋಡಿ ನಮಗೆಲ್ಲಾ ಖುಷಿ ನೋ ಖುಷಿ, ಉಮೇದಿ. ಕತ್ತಲಾಗುತ್ತಿದೆ, ” ಏಯ್ ಬರ್ರೊ ಗಣೇಶನ ನೀರಿಗೆ ಬಿಡನ” ನಮ್ಮಲ್ಲೇ ಮಾತಾಡಿಕೊಂಡು ಗಣೇಶನ ಪಾತ್ರಧಾರಿಯನ್ನು ಅನಾಮತ್ತಾಗಿ ಇಬ್ಬರು ಎತ್ತಿಕೊಂಡು “ಗಣಪತಿ ಬಪ್ಪ ಮೋರೆಯಾ, ಮಂಗಳ ಮೂರ್ತಿ ಮೋರೆಯಾ”ಎಂದು ಜೈಕಾರ ಹಾಕುತ್ತಾ ಹೊರಟಿತು ನಮ್ಮ ಸವಾರಿ ಊರ ಮುಂದಿನ ಕೆರೆಯತ್ತ.

ಅಲ್ಲೀವರೆಗೂ ಜಗುಲಿಯ ಕಟ್ಟೆ ಮೇಲೆ ಕೂತು ಮಕ್ಕಳಾಟ ನೋಡುತ್ತ ನಗುತ್ತ ಕೂತ ಪಟೇಲರ ಮನೆ ಅಜ್ಜಿ “ಬರ್ರೋ ಯಾರರೂ, ಈ ಹುಡುಗರ ತಡೆದು ನಿಲ್ಲಸ್ರ….” ಲಭ ಲಭ ಹೋಯ್ಕಳ ಅಭ್ರಕ್ಕೆ ನಾಕಾರು ಜನ ದೊಡ್ಡವರು ಅಕ್ಕ ಪಕ್ಕದ ಮನೆಯಿಂದ ಓಡಿ ಬಂದು ನಮ್ಮ ಮೆರವಣಿಗೆ ನೋಡಿ ಧಂಗಾದರು. ದೊಣ್ಣೆ ಹಿಡಿದು ಅಟ್ಟಿಸಿಕೊಂಡು ಬಂದಾಗ ಗಣೇಶನನ್ನು ದೊಬಕ್ಕನೆ ಅಲ್ಲೆ ಬಿಸಾಕಿ ನಾವೆಲ್ಲರೂ ಪಕ್ಕದಲ್ಲಿ ಇದ್ದ ಅಡಿಕೆ ತೋಟದಲ್ಲಿ ದಿಕ್ಕಾಪಾಲು.

ಇತ್ತ ಅಡಿಗೆ ಮಾಡ ಜಾಗದಲ್ಲಿ ನಮ್ಮ ಅಡಿಗೆ ಒಲೆಗೆ ಹೊತ್ತಿಸಿದ ಬೆಂಕಿ ಅಕ್ಕ ಪಕ್ಕ ಇರೊ ಒಣಗಿದ ಹುಲ್ಲು ಬಣವೆಯ ಹತ್ತಿರ ಸಾಗುತ್ತಿರುವುದ ಕಂಡು ಅಲ್ಲಿದ್ದ ಕೆಲವರು ಕೂಡಲೇ ನೀರು ಸೋಕಿ ನಂದಿಸಿದ ವಿಷಯ ಕತ್ತಲಾದ ಎಷ್ಟೋ ಹೊತ್ತಿನ ಮೇಲೆ ನಡುಗುತ್ತ ಮನೆಗೆ ಬಂದ ಮೇಲೆ ಗೊತ್ತಾಯಿತು. ಹಾಗೆ ಬಿಸಿ ಬಿಸಿ ಕಜ್ಜಾಯವೂ ಕೆಲವರಿಗೆ ಸಿಕ್ಕಿತು. ಅದರಲ್ಲಿ ನಾನೂ ಒಬ್ಬಳು😊

12-9-2018. 4.36pm

ಮಂತ್ರಕ್ಕೆ ಮಣಿದ ಮಂಡಿ ನೋವು….

ಎಂದಿನಂತೆ ಬೆಳಿಗ್ಗೆ ಪಟಕ್ಕಂತ ಏಳಲು ಹೋದೆ. ಎದ್ದೆ. ಆದರೆ ಅರೆ ಇಸಕಿ ನನ್ನ ಕಾಲಿಗೇನಾಯ್ತಪ್ಪಾ! ಎಡಗಾಲು ಮಡಿಸಲು ಆಗ್ತಿಲ್ಲ ಮಂಡಿ ವಿಪರೀತ ನೋವು, ಒಂದೆಜ್ಜೆ ಇಡಲಾಗದಷ್ಟು ಯಾತನೆ. ಮತ್ತಾಂಗೆ ಕೂತೆ ಮಂಚದ ಮೇಲೆ. ಕಾಲು ಮಾತ್ರ ಕದಂ ಕೋಲ್. ಯಪ್ಪಾ ಹೆಂಗೆಂಗೋ ಅಂತೂ ಇಂತೂ ನಿಧಾನವಾಗಿ ಮಡಸಿ ಬಿಟ್ಟು ಸ್ವಲ್ಪ ಕಸರತ್ತು ಮಾಡಿ ಹೋಗ್ ಹೋಗು ನಾ ಎಂದೊ ಗುಡ್ಬೈ ಹೇಳಾಗಿದೆ ಸಾಕಷ್ಟು ರೊಮೈಟೈಡ್ ಆರ್ಥರೈಟೀಸ್ ನೋವು ಹತ್ತು ವರ್ಷ ತಿಂದೂ ತಿಂದೂ. ಅದನ್ನೇ ಯೋಗ ಸಾಧನೆ ಮಾಡಿ ಓಡ್ಸಿದೀನಂತೆ. ಈಗ ನಿಂದ್ಯಾವ ಲೆಕ್ಕ?

ಆದರೆ ಯೋಚನೆ ಶುರು ; ಆಗಿಲ್ಲದ ಮಂಡಿ ನೋವು ಈಗೆಲ್ಲಿಂದ ಹೊಸದಾಗಿ ವಕ್ಕರಿಸಿಕೊಂಡ್ತು? ರಾತ್ರಿ ಮಲಗುವಾಗ ಆರಾಂ ಇತ್ತಲ್ಲಾ ಕಾಲು. ಥೊ^^^^^ಎಂತಾ ಕೆಲಸ ಆಯ್ತು. ಈ ದಿನ ನಯನ ಸಭಾಂಗಣದಲ್ಲಿ ಒಂದೊಳ್ಳೆ ಕಾವ್ಯ ವಾಚನ ಕಾರ್ಯಕ್ರಮ ಇತ್ತು. ಹೋಗಬೇಕು ಒಂದೆರಡು ಜನ ಭೇಟಿ ಆಗೊ ಲೀಸ್ಟಲ್ಲಿ ಇದ್ರು. ಹೀಗಾಗೋಯ್ತಲ್ಲಾ. ಈ ಬಾರಿ ಅವರುಗಳು ಬರ್ತಾರೆ ಅಂತ ಗೊತ್ತಿದ್ದೂ ಹೋಗಿಲ್ಲ ಅಂದರೆ ಗ್ಯಾರೆಂಟಿ ನನ್ನ ತಪ್ಪಾಗಿ ತಿಳ್ಕೋತಾರೆ. ಸುಳ್ಳು ಸಭೂಬು ಹೇಳಲು ಬರೋದಿಲ್ಲ. ಓ… ಆ ದಿನ ನಡೆದ ಅಭಿನಂದನೆ ಕಾರ್ಯಕ್ರಮ ಮೊದಲೇ ಸರಿಯಾಗಿ ತಿಳ್ಕೊಳ್ಳದೇ ಏನೇನೋ ಕೆಲಸ ಹಚ್ಚಿಕೊಂಡು ಸಮಾರಂಭದಲ್ಲಿ ಪಾಲ್ಗೊಳ್ಳೊ ಅವರುಗಳನ್ನು ಭೇಟಿ ಆಗೋದು ಮಿಸ್ ಮಾಡ್ಕೊಂಡೆ. ಆಗೇನೊ ಹಲವಾರು ಕಾರಣಗಳ ನಿಮಿತ್ತ ಬರಲಾಗಲಿಲ್ಲ ಅಂತ ನಿಜವಾದ ಮೆಸೇಜ್ ವಗಾಯಿಸಿದ್ದೆ. ಇವತ್ತೂ ಏನಾದರೂ ಹೇಳಿದರೆ ನಂಬುತ್ತಾರಾ? ದೇವರೆ ದೇವರೆ….

ಹಂಗೆ ಕೇಳಿದೆ “ಬೆಂಗಳೂರಿಗೆ ಬಂದಿದ್ದೀರಾ”

“ಇಲ್ಲ ಪ್ರೋಗ್ರಾಂ ಪೋಸ್ಟ್ ಪೋನ್ ಆಯ್ತು” ಒಂಟಿ ಕಾಲ ಕುಣಿತ WhatsApp ಮೆಸೇಜ್ ನೋಡಿ.

ಅಂತೂ ಇಂತೂ ಒಂದತ್ತು ನಿಮಿಷ ಖಾಯಂ ನಮ್ಮನೆಯಲ್ಲಿ ನನ್ನ ಅತಿಥಿ ಏನು ಆಪದ್ಬಂಧುವಾಗಿ ಯಾವಾಗಾದರೂ ಬರುವ ಸೊಂಟ ನೋವಿಗೆ ರಾಮಭಾಣವಾದ ನನ್ನ ತಲೆ ದಿಂಬ ಕೆಳಗೆ ಠಿಕಾಣಿ ಹೂಡಿದ ಅದೇ ಆ ನೋವಿನ ಮುಲಾಮು ಮುಲಾಜಿಲ್ಲದೆ ತಿಕ್ಕಿ ತೀಡಿ ನಿಧಾನವಾಗಿ ಎದ್ದು ನಡೆಯೊ ಪ್ರಯತ್ನ ಮಾಡಿದರೆ ಮಂಡಿ ಸುತಾರಾಂ ಬಾಗವಲ್ಲದು. ಒಂದು ಕಾಲು ಉದ್ದ ಒಂದು ಕಾಲು ಗಿಡ್ಡ ಇದ್ದವರ ತರ ಮಾರಿಗೊಂದು ಹೆಜ್ಜೆ ಎತ್ತಿಡೋದು ಈ ಕಾಲು ಬ್ಯಾಲೆನ್ಸ್ ಮಾಡೋದರಲ್ಲಿ ಬೆಳಗಿನ ಮಾಡಲೇ ಬೇಕಾದ ಕೆಲಸ ಎಲ್ಲಾ ಎಕ್ಕುಟ್ಟೋಯ್ತು.

ಆದರೂ ಬಿಡ್ತೀನಾ ಈ ನೋವಿನ ವಿರುದ್ಧ ಜಗಳಾಡೋದು ನನಗೆ ರೂಢಿ ಆಗೋಗಿದೆ. ಗೊತ್ತು ಸೋಂಬೇರಿತನಕ್ಕೆ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ನೆಪ ಹೇಳಿಕೊಂಡು ವಾಕಿಂಗ್, ಯೋಗ ಎಲ್ಲಾ ಬಂದ್. ಯೋಗಾ ಮಾಡೋಕೆ ಏನಾಗಿತ್ತೆ ಧಾಡಿ ಕೇಳಿತು ಮನಸ್ಸು ; ಚಳಿ ಚಳಿ ಅಂತ ಹೇಳಿ ಈರುಳ್ಳಿ ಪಕೋಡಾ ಬೇರೆ ಪೊಗದಸ್ತಾಗಿ ತಿಂದುಬಿಟ್ಟಿದ್ದೆ. ಹಂಗೆ ಟೀ ಜೊತೆಗೆ ಇರಲಿ ಅಂತ ಕಾಫಿನೂ ಸ್ವಲ್ಪ ಹೆಚ್ಚೇ ಹೊಟ್ಟೆ ಸೇರಿಕೊಂಡು ವಾಯು ಮಾಲಿನ್ಯ ಹೊಟ್ಟೆಯೊಳಗೆ! ಓಹೋ^^^^ ಈಗ ಎಲ್ಲಾ ಒಟ್ಟಾಗಿ ಮಂಡಿ ಸೇರಿಕೊಂಡು ಬಿಟ್ವಿದ್ದು ಮನಸಿಗೆ ಖಾತರಿನೂ ಆತು.

“ಅಮ್ಮಾ ಏನಾಯ್ತೆ? ನಡಿ ನಡಿ ಹಾಸ್ಪಿಟಲ್ ಹೋಗೋಣ”

“ಇರೆ ಏನೂ ಆಗಿಲ್ಲ. ಸರಿ ವಾಕಿಂಗ್ ಮಾಡಿದರೆ ಎಲ್ಲಾ ಓಡೋಗುತ್ತೆ”

“ಹ…ಹ.. ಅಮ್ಮಾ…. ನಡೆಯೋಕೆ ಆಗ್ತಿಲ್ಲ ವಾಕಿಂಗ್ ಮಾಡ್ತೀಯಾ? ನಿನ್ನ ಹಠ ಎಲ್ಲಿ ಬಿಡ್ತೀಯಾ? ಏನಾರ ಮಾಡ್ಕ”

ಅವಳಿಗೆ ಚೆನ್ನಾಗಿ ಗೊತ್ತು ಈ ಅಮ್ಮನ ಹಠಮಾರಿ ಅವತಾರ. ಅದಕ್ಕೆ ಜಾಸ್ತಿ ತಲೆ ತಿನ್ನದೆ ಅನಿವಾರ್ಯವಾಗಿ ಅಡಿಗೆಮನೆಗೆ ಪಾದಾರ್ಪಣೆ ಮಾಡಿದ್ಲು. ನಳಪಾಕದ ಸ್ಪೆಷಲ್ ತಯಾರಿಗೆ. ಸಧ್ಯ ಭಾನುವಾರವಾಗಿತ್ತು ನಾ ಬಚಾವ್!

ಸಾಯಂಕಾಲ ಪಕ್ಕದ ಮನೆ ಅಜ್ಜಿ ದಿನ ನಿತ್ಯ ಬಂದು ಒಂದಷ್ಟು ಹೊತ್ತು ಮಾತಾಡಿಕೊಂಡು ಹೋಗುವ ಪರಿಪಾಠ ಇತ್ತೀಚೆಗೆ ಬೆಳೆದಿತ್ತು. ವಾಡಿಕೆಯಂತೆ ಅಜ್ಜಿ ಸಾಯಂಕಾಲ ಬರುವ ಬದಲು ಮಧ್ಯಾಹ್ನವೇ ಬಂದು ಗೇಟು ತಟ್ಟಿದರು. ನನ್ನ ಮಾರಾಕುವ ಸ್ಟೈಲ್ ನಡಿಗೆ ನೋಡಿ ಎಲ್ಲಾ ಸಮಾಚಾರ ತಿಳಿದು ” ಇರಿ ನಾನು ಸಾಯಂಕಾಲ ದೀಪ ಹಚ್ಚುವ ಸಮಯಕ್ಕೆ ಬರ್ತೀನಿ. ಸ್ವಲ್ಪ ಸಿದ್ಧಿ ಮಾಡಿಕೊ ಬೇಕು. ಈ ಸಮಯದಲ್ಲಿ ಅಲ್ಲ. ” ಅಂತಂದು ಹೊರಟು ಹೋದರು.

ಇನ್ನೂ ನಾನು ಬಗ್ಗಲಾರದೇ ಕಷ್ಟಪಟ್ಟು ಬಗ್ಗಿ ದೇವರಿಗೆ ದೀಪ ಹಚ್ಚುವ ಶಾಸ್ತ್ರ ಮಾಡ್ತಿದ್ದೆ. ಅಜ್ಜಿಯ ಆಗಮನ.

“ಬನ್ನಿ. ಸ್ವಲ್ಪ ಕೊಬ್ಬರಿ ಎಣ್ಣೆ ತನ್ನಿ.”

ಆಯ್ತು ಎಣ್ಣೆ ಸಮಾರಾಧನೆ ಮಂಡಿಯಿಂದ ಕಾಲು ಪಾದದವರೆಗೆ. ಅವರು ನೀವುತ್ತಿದ್ದರೆ ನನಗೆ ಒಂಥರಾ ಮುಜುಗುರ ಛೆ! ವಯಸ್ಸಾದ ಅಜ್ಜಿ ಕೈಯಲ್ಲಿ ನನ್ನ ಕಾಲು ಉಜ್ಜಿಸಿಕೊಳ್ಳುವಂತಾಯಿತಲ್ಲಾ!! ಆದರೆ ಮನಸ್ಸಿಗೆ ಆ ನೋವಿನ ಕಾಲಿಗೆ ಅವರುಜ್ಜುವ ಪರಿ ಹಾಯ್! ಇನ್ನೂ ಸ್ವಲ್ಪ ಹೊತ್ತು ಹೀಗೆ ನೀವುತ್ತಿರಲಿ ಅಂತನಿಸಿದ್ದು ನನ್ನಪ್ಪನಾಣೆ ಸುಳ್ಳಲ್ಲ ಆಯ್ತಾ.

ಆಮೇಲೆ ಅವರ ಮನೆ ಡೋರ್ಲಾಕ್ ಕೀ ಅವರ ಕೈಲಿದ್ದದ್ದು ನನ್ನ ಕಾಲ ಮೇಲಿಟ್ಟು ಮೇಲಿಂದ ಕೆಳಗಿನವರೆಗೆ ಜಾರಿಸ್ತಾ ಬಂದ್ರು ಒಂದೆಂಟತ್ತು ಸರ್ತಿ. ಹಂಗೆ ನೆಲಕ್ಕೆ ಪ್ರತಿ ಬಾರಿ ಕುಟ್ಟತಾ ಇದ್ರು. ಇಷ್ಟೆಲ್ಲಾ ಪ್ರಕ್ರಿಯೆ ನಡೆಯುವಾಗ ಅದೇನೊ ಮಂತ್ರ ಹೇಳುತ್ತಿದ್ದರು ಕೂತಲ್ಲಿಂದಲೆ ದೇವರ ಮನೆ ಕಡೆ ಮುಖ ಮಾಡಿ ಪ್ರಾರ್ಥಿಸ್ತಾ ಇದ್ದದ್ದು ನನಗೆ ಬಲೂ ಸೋಜಿಗ ಅನಿಸಿತು.

ಇವರೇನೊ ಹೇಳ್ತಾರೆ, ಹಿರಿಯರು ಯಾಕೆ ಬೇಡಾ ಅನ್ನಲಿ ಅಂತ ಆಯ್ತು ಅಜ್ಜಿ ಬಂದು ನಿಮ್ಮ ಕೈಂಕರ್ಯ ಮಾಡಿ ಅಂತ ಒಪ್ಪಿಕೊಂಡಿದ್ದೆ. ಆದರೆ ನನಗೆ ನಂಬಿಕೆ ಯಳ್ಳಷ್ಟೂ ಇರಲಿಲ್ಲ. ಅಜ್ಜಿ ಎದುರಿಗೆ ತೋರಿಸಿಕೊಳ್ಳಲಿಲ್ಲ. ಪ್ರತೀ ಬಾರಿ ಹೀಗೆ ಮಾಡಿದಾಗ ಅವರ ಕಾಲು ಮುಟ್ಟಿ ನಮಸ್ಕಾರ ಮಾಡೋದು ಮರಿಲಿಲ್ಲ. ಬಹಳ ನಿಯತ್ತಿನ ಅಜ್ಜಿ. ಏನು ಕೊಟ್ಟರೂ ಬೇಡಾ ಬೇಡಾ ಅನ್ನುವ ಅವರನ್ನು ಯಾವುದಾದರೂ ಹಣ್ಣು ಮನೆಯಲ್ಲಿ ಇರುವಾಗ ತಗೊಳ್ಳಿ ಪರವಾಗಿಲ್ಲ ಅಂತ ಅವರು ಅದನ್ನು ಸ್ವೀಕರಿಸುವ ಮಟ್ಟಕ್ಕೆ ಅವರ ಮನಸ್ಸು ತಂದಿಟ್ಟಿದ್ದೆ. ಈಗಲೂ ಅದೇ ಕೊಡುತ್ತಿದ್ದೆ.

ಹೀಗೆ ಸಾಯಂಕಾಲ, ಬೆಳಿಗ್ಗೆ ಮತ್ತೆ ಸಾಯಂಕಾಲ ಮೂರು ಬಾರಿ ಅಜ್ಜಿಯ ಮಂತ್ರ ಶಕ್ತಿ ನನ್ನ ಕಾಲ ಮೇಲೆ ಪ್ರಯೋಗ ಆಯಿತು. ನಿಧಾನವಾಗಿ ಮಂಡಿ ನೋವು ನನಗರಿವಿಲ್ಲದಂತೆ ಕಡಿಮೆ ಆಗುತ್ತ ಈ ದಿನ ಬೆಳಿಗ್ಗೆ ಪೂರ್ತಿ ಕಡಿಮೆ ಆಗಿ ಮಾಮೂಲಿ ಸ್ಥಿತಿಗೆ ಬಂದೆ. ಯಾವ ಮೆಡಿಸಿನ್,ವಾಕಿಂಗ್ ಹೋಗಲಿ ಯೋಗನೂ ಮಾಡಿಲ್ಲ, ಎಂತಾ ನಮನಿ ಕಷಾಯನೂ ಕುಡಿಲಿಲ್ಲ.

ಇದು ಹೇಗೆ? ಒಂದು ರೀತಿ ವಿಸ್ಮಯ ಮೊನ್ನೆ ಆ ನಮನಿ ನೋವು ಈ ದಿನ ಬೆಳಿಗ್ಗೆ ಎಲ್ಲಾ ಮಾಯಾ!! ಯಾಕೊ ಅಜ್ಜಿ ಮಾಡಿದ ಮಂತ್ರದಂಡದ ಹಿಂದೆಯೇ ಮನಸ್ಸು ಗಿರಕಿ ಹೊಡಿತಾ ಇದೆ. ಅಜ್ಜಿಯ ನಂತರ ಈ ವಿಧ್ಯೆ ನಶಿಸಿ ಹೋಗುತ್ತಲ್ಲಾ ಅನ್ನುವ ಸಣ್ಣ ವ್ಯಥೆ ಕಾಡುತ್ತಾ ಇದೆ.

ಯಾರು ನಂಬಲಿ ಬಿಡಲಿ ಮಂತ್ರಕ್ಕೆ ಮಾವಿನಕಾಯಿ ಉದುರುತ್ತೊ ಇಲ್ಲವೊ ಗೊತ್ತಿಲ್ಲ. ಆದರೆ ಮಂತ್ರಕ್ಕೆ ನೋವನ್ನು ತೆಗೆಯೊ ಶಕ್ತಿ ಇದೆ ಅಂತ ನಾನು ಸ್ವತಃ ಅನುಭವದಿಂದ ನಂಬುವಂತಾಗಿದ್ದಂತೂ ದಿಟ.

21-8-2018. 3.02pm

ಶಿರಾ ಮಾಡಲ್ಲೆ ಬರ್ತನೆ..??

ಶಿರಾ ಅಂದರೆ ಚಿರೋಟಿ ರವೆಯಿಂದ ಮಾಡುವ ಮಲೆನಾಡಿನ ಸಿಹಿ ಖ್ಯಾಧ್ಯ. ಇದನ್ನು ಕೇಸರಿ ಬಾತ್ ಅಂತಲೂ ಕರೆಯುತ್ತಾರೆ ಆ ಸೀಮೆಯವರಲ್ಲದ ಉಳಿದ ಮಂದಿ. ದಿಢೀರನೆ ಮಾಡುವ ಸಿಹಿ ತಿಂಡಿ. ಅದರಲ್ಲೂ ಮಲೆನಾಡಿನ ಹವ್ಯಕ ಮನೆಗಳಲ್ಲಿ ಶುಭ ಕಾರ್ಯಕ್ಕೆ ಹೇಳಿಕೆ ಕೊಡಲು ಮನೆಗೆ ನೆಂಟರು ಬಂದಾಗ ಸಿಹಿ ತಿನ್ನಿಸಿ ಕಳಿಸಬೇಕೆಂಬ ಪದ್ಧತಿ ಇದೆ. ಸಮಯಾವಕಾಶ ಕಡಿಮೆ ಇದ್ದಾಗ ಈ ಸಿಹಿ ಖ್ಯಾಧ್ಯ ಮಾಡುವುದು ಮಾಮೂಲಿ.

ಇದು ಬೆಳೆಯುವ ಮಕ್ಕಳಿಗೆ ಪೌಸ್ಟಿಕ ಆಹಾರವೂ ಹೌದು. ಗೋಧಿ, ತುಪ್ಪ, ಸಕ್ಕರೆ, ಏಲಕ್ಕಿ, ಲವಂಗ್, ಜಾಪತ್ರೆ, ಕೇಸರಿ, ಡ್ರೈ ಫ್ರೂಟ್ಸ ಜೊತೆಗೆ ಬೇಕಾದರೆ ಅನಾನಸ್ ಹಣ್ಣು ಇಲ್ಲಾ ಬಾಳೆ ಹಣ್ಣು, ಹಾಲು ಹಾಕಿ ಮಾಡಿದರೆ……. ದೊಡ್ಡವರೇನು? ಮಕ್ಕಳೂ ಕೂಡಾ ವಾವ್! ಅಂತ ಚಪ್ಪರಿಸಿಕೊಂಡು ತಿಂದೇ ತಿಂತಾರೆ. ಮಕ್ಕಳಿಗೆ ಸಿಹಿ ಅಂದರೆ ಇಷ್ಟವಾಗೋ ಸಿಹಿ ತಿಂಡಿ ಕೂಡಾ!

ಆಗಿನ್ನೂ ನನಗೆ ಹನ್ನೆರಡು ವರ್ಷ. ಶಾಲೆಗೆ ಹೋಗಲು ಅಜ್ಜಿ ಮನೆಯಲ್ಲಿದ್ದೆ. ಚಿಕ್ಕಂದಿನಿಂದಲೂ ಈ ಅಜ್ಜಿಯನ್ನು “ಚಿಕ್ಕಮ್ಮ” ಎಂದು ಕರೆಯುವ ವಾಡಿಕೆ. ನನ್ನ ಆಯಿ(ಅಮ್ಮ)ಯ ಅಮ್ಮನ ತಂಗಿ ಅವರು. ಆಯಿಗೆ ಚಿಕ್ಕಮ್ಮ ಆಗಬೇಕು ಹಾಗೆ ಕರಿತಿದ್ರು ಸರಿ. ಆದರೆ ನಾವೂ ಹಾಗೆಯೇ ಕರೆಯೋದು ಹೇಗೆ ರೂಢಿಗೆ ಬಂತೋ ನಾ ಕಾಣೆ.

ಒಂದಿನ ಚಿಕ್ಕಮ್ಮ ಇರಲಿಲ್ಲ. ಅವರು ಆಗಾಗ ತನ್ನ ಅಪ್ಪನ ಮನೆಗೆ ಎರಡು ಮೂರು ದಿನ ಇದ್ದು ಬರಲು ಹೋಗುತ್ತಿದ್ದರು. ಅವರಮ್ಮ ವಯಸ್ಸಾದವರು ಎದ್ದು ಓಡಾಡದ ಪರಿಸ್ಥಿತಿಯಲ್ಲಿದ್ದರು. ಅಮ್ಮನ ನೋಡಿಕೊಳ್ಳಬೇಕೆಂಬ ಹಂಬಲ. ಒಂದಷ್ಟು ತಿಂಡಿ ಅದೂ ಇದೂ ಪೂರ್ವ ತಯಾರಿ ಮನೆಯಲ್ಲಿ ಇದ್ದವರಿಗೆ ಮಾಡಿಟ್ಟು ಎರಡು ದಿನ ಸುಧಾರಿಸಿಕೊಳ್ಳಿ ಅಂತ ಹೇಳುವಾಗೆಲ್ಲ “ಆತೆ ಮಾರಾಯ್ತಿ ನೀ ಹೋಗ್ಬಾರೆ. ಅದೆಷ್ಟು ಒದ್ದಾಡ್ತ್ಯೆ?” ಅಂತ ಅಜ್ಜ ತಮಾಷೆ ಮಾಡ್ದಾಗ ಚಿಕ್ಕಮ್ಮನಿಗೆ ಹುರುಪು.

ಒಮ್ಮೆ ಹೀಗೆ ಚಿಕ್ಕಮ್ಮ ಇಲ್ಲದ ಆ ದಿನ ಭಾನುವಾರ ಆಗಿತ್ತು. ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಗೆ ಮದುವೆಗೆ ಕರೆಯಲು ಹತ್ತಿರದ ನೆಂಟರು ಒಬ್ಬರು ಬಂದಿದ್ದರು. ಬಂದವರೊಟ್ಟಿಗೆ ಚಾ ಸೇವನೆ ಆಯಿತು.
” ನೀವು ಊಟ ಮಾಡಿಕೊಂಡು ಹೋಗಿ” ಅಜ್ಜನ ವರಾತ. ಇದು ಹಳ್ಳಿ ಕಡೆ ರೂಢಿ ಕೂಡಾ.

ಸರಿ, ಅಡಿಗೆ ತಯಾರಿ ಮಾಡಬೇಕಲ್ಲಾ? ಮನೆಯಲ್ಲಿ ಹೆಣ್ಣು ಅಂದರೆ ನಾನೊಬ್ಬಳೆ. ಇರುವ ಇಬ್ಬರು ಮಾವಂದಿರೊಂದಿಗೆ ನಾನೂ ಸೇರಿ ನಳಪಾಕ ಮಾಡಲು ಅಣಿಯಾದೆ.

“ಸಿಹಿ ಏನಾದರೂ ಮಾಡಲೇ ಬೇಕು” ಮದುವೆಗೆ ಕರೆಯಲು ಬಂದಾಗ‌ ಮಾವ ಹೇಳಿದರು.

“ಸರಿ ನಾನು ಶಿರಾ ಮಾಡ್ತೀನಿ ” ಅಂದೆ ಎಲ್ಲಾ ಗೊತ್ತಿದ್ದವರಂತೆ.

“ನಿಂಗೆ ನಿಜವಾಗಲೂ ಶಿರಾ ಮಾಡಲ್ಲೆ ಬರ್ತನೆ” ಮಾವ ಕೇಳಿದಾಗ

” ಹೌದು ನಂಗೆ ಬರ್ತು ಚಿಕ್ಕಮ್ಮ ಮಾಡಕರೆ ನೋಡಿದ್ದಿ” ಅಂದೆ.

“ಆತು ಹಂಗರೆ ಮೊದಲು ಅಡಿಗೆ ಮುಗಸ್ಕಳನ. ಕಡಿಗೆ ನೀ ಶಿರಾ ಮಾಡು ಅಕಾ” ಎಂದ.

ಅಂತೂ ಚಿಕ್ಕಮ್ಮನ ಅಡಿಗೆ ಮನೆಯಲ್ಲಿ ಅದೆಲ್ಲಿ ಇದೆಲ್ಲಿ ಅಂತ ತಡಕಾಡಿ ಅನ್ನ, ಸಾಂಬಾರು, ಪಲ್ಯ , ಹಶಿ (ಮೊಸರ್ಬಜ್ಜಿ) ಎಲ್ಲರೂ ಸೇರಿ ಮಾಡಿ ಮುಗಿಸಿದ್ದಾಯಿತು. ಮುಂದಿನ ಸರದಿ ಶಿರಾ ಮಾಡುವ ಜವಾಬ್ದಾರಿ ನನಗೆ ವಹಿಸಿ ಹೊರಗಡೆ ಜಗುಲಿಯಲ್ಲಿ ಬಂದ ನೆಂಟನೊಂದಿಗೆ ಮಾವಂದಿರಿಬ್ಬರೂ ಹರಟಲು ಕುಳಿತರು.

ಬಾಂಡಲೆಗೆ ಒಂದಷ್ಟು ತುಪ್ಪ ಸುರಿದು ರವೆ ಹಾಕಿ ಕೈಯಾಡಿಸ್ತಾ ಇದ್ದೆ. ಎಷ್ಟು ಹೊತ್ತಾದರೂ ಗಟ್ಟಿ ಆಗ್ತಿಲ್ಲ. ರವೆಯೆಲ್ಲಾ ಹುರಿದೂ ಹುರಿದೂ ಕಪ್ಪಾಗಿ ನೀರಾದ ಪಾಯಸದಂತಾಗಿತ್ತು. ಅಷ್ಟು ತುಪ್ಪ ಸುರಿದಿದ್ದೆ. ಗಟ್ಟಿನೇ ಆಗ್ತಿಲ್ಲ!

ಹೊರಗಡೆ ಹರಟೆಯಲ್ಲಿ ಮಗ್ನವಾದ ಇಬ್ಬರು ಮಾವಂದಿರು ಬಂದ ನೆಂಟ ಎಲ್ಲರೂ ಇನ್ನೂ ಯಾಕೆ ಊಟಕ್ಕೆ ಕರಿತಿಲ್ವಲ್ಲಾ ಇವಳು ಅಂತಂದುಕೊಂಡು ಅಡಿಗೆ ಮನೆಗೆ ದಿಢೀರ್ ಪ್ರವೇಶ.

“ಸಂಗೀ…..‌ಆತನೆ ಶಿರಾ ಮಾಡಿ? ಎಂತಕ್ಕೆ ಇಷ್ಟೊತ್ತು? ನೀ ಕರಿತೆ ಊಟಕ್ಕೆ ಹೇಳಿ ಕಾಯ್ತಾ ಇದ್ಯ. ಎಂತಾತು?”

ನನ್ನ ಕೈ ಕಾಲು ಆಗಲೇ ನಡುಗಲು ಶುರುವಾಗಿತ್ತು. ನಾ ಮಾಡಿದ ಶಿರಾ ಅವತಾರ ನೋಡಿ ಜೋರಾಗಿ ನಗಲು ಪ್ರಾರಂಭಿಸಿದರು. ಅವಮಾನದಿಂದ ಕುಗ್ಗಿ ಹೋದೆ. ಆ ಕೆಲಸ ಅಲ್ಲಿಗೆ ಬಿಟ್ಟು ಮರೆಯಲ್ಲಿ ಹೋಗಿ ತುಂಬಾ ಅತ್ತಿದ್ದೆ. ಎಷ್ಟು ಅವಮಾನ ಆಗಿತ್ತು ಗೊತ್ತಾ? ಈಚೆ ಬಂದು ಮುಖ ತೋರಿಸಲೂ ನಾಚಿಕೆ ಆಗಿತ್ತು.

ರವೆಯೆಲ್ಲ ಹುರಿದೂ ಹುರಿದೂ ಹೊತ್ತಿ ಹೋಗಿತ್ತು. ಚಿಕ್ಕಮ್ಮ ಶಿರಾ ಮಾಡುವಾಗ ತುಪ್ಪ ಹಾಕಿ ಹುರಿಯೋದು ನೋಡಿದ್ದೆ ಹಂಗೆ ನಾನೂ ಹುರಿದ್ನಪ. ಅದು ಹೀಂಗೆಲ್ಲಾ ಆಗುತ್ತೆ ಅಂತ ನಂಗೇನು ಗೊತ್ತು. ನೀರಾಕಿದಾಗ ಭೊಸ್…..ಅಂತ ಸೌಂಡ್ ಬರೋದೂ ನೋಡಿದ್ದೆ. ನೀರಾಕಲು ತುಪ್ಪ ರವೆ ಗಟ್ಟಿ ಆಗಬೇಕು ಅಂತ ಅಂದ್ಕೊಂಡಿದ್ದೆ. ಹುರಿದಿದ್ದೇ ಹುರಿದಿದ್ದು. ಏನೇನೊ ಆಗೋಯ್ತು.

ಚಿಕ್ಕಮ್ಮ ಬಂದ ಮೇಲೆ ಅವರ ಮುಂದೆ ನನ್ನ ಶಿರಾದ ಅವತಾರ ಹೇಳಿಕೊಂಡು ನಕ್ಕಿದ್ದೇ ನಕ್ಕಿದ್ದು ಈ ಮಾವಂದಿರು. ಸದಾ ಕೀಟಲಿ ಮಾಡಿ ಗೋಳು ಹೊಯ್ದುಕೊಳ್ಳುವ ಅವರಿಗೆ ನನ್ನ ಕಂಡರೆ ಅಷ್ಟೇ ಮುದ್ದು. ಏನಾದರೂ ಕೆಲಸ ನೈಸಾಗಿ ಮಾಡಿಸಿಕೊಳ್ಳೋದು ಆಮೇಲೆ ನಿನ್ನ ಮದುವೆಗೆ ನಾವು ಮೂರೂ ಜನ ಮಾವಂದಿರು ಸೀರೆ ಉಡುಗೊರೆ ಮಾಡ್ತೀವಿ ಅಂತ ರೇಗಿಸೋದು. ನಾನೋ ನಾಚಿಕೆಯಿಂದ ” ಹೋಗೋ ಮಾವಾ…”ಅನ್ನುತ್ತ ಅಲ್ಲಿಂದ ಕಾಲ್ಕೀಳ್ತಿದ್ದೆ. ಆದರೆ ನನ್ನ ಮದುವೆಲಿ ಒಂದು ಸೀರೆನೂ ಕೊಡಲೇ ಇಲ್ಲ. ಬರೀ ಓಳ್ ಬಿಟ್ಟು ನನ್ನ ಹ್ಯಾಮಾರಿಸಿದ್ದು ಈಗಲೂ ಸಿಕ್ಕಾಗೆಲ್ಲ ಕೆಂಡ ಕಾಯ್ತೀನಿ.

ಆಮೇಲೆ ಚಿಕ್ಕಮ್ಮನಿಗೆ ನಾನಂದುಕೊಂಡ ಶಿರಾ ಮಾಡುವ ಕ್ರಮ ಹೇಳಿದಾಗ

“ಥೋ…..ದಡ್ಡಿ. ನಾ ಎಂತಾ ಮಾಡಕರೂ ನನ್ನ ಹಿಂದೆ ಬಾಲದಂತೆ ಇರ್ತೆ. ನೀ ಇನ್ನೂ ಶಣ್ಕಿದ್ದೆ. ಎಂತಕ್ಕೆ ಮಾಡಲ್ಲೋದೆ. ಅದು ಅಷ್ಟು ಸುಲಭದಲ್ಲಿಲ್ಯೆ. ಎಲ್ಲಾ ಪದಾರ್ಥ ಸರಿಯಾಗಿ ಹಾಕಿ ಕ್ರಮಬದ್ಧವಾಗಿ ಮಾಡಿದ್ರೆ ಮಾತ್ರ ಚೊಲೋ ಆಗ್ತು. ನಾ ನಿಂಗೆ ಹೇಳಿ ಕೊಡ್ತಿ” ಅಂತ ನಯವಾಗಿ ಗದರಿಸಿ ತುಪ್ಪ ರವೆ ಹಾಳು ಮಾಡಿದ್ದು ಮನ್ನಿಸಿದರು.

ಮುಂದೆ ಅದೇ ಚಿಕ್ಕಮ್ಮನಿಂದ ಕ್ರಮಬದ್ಧವಾಗಿ ಶಿರಾ ಮಾಡುವುದು ಕಲಿತು ಮಾಡ್ತಾ ಮಾಡ್ತಾ ಈಗ ಎಷ್ಟು ಚೆನ್ನಾಗಿ ಮಾಡ್ತೀನೆಂದರೆ ತಿಂದವರು ನೆನಪಿಸಿಕೊಂಡು ಚಪ್ಪರಿಸುವಷ್ಟು!

ಹಂಗಾರೆ ಶಿರಾ ಮಾಡುವುದು ಅಷ್ಟು ಸುಲಭವಾ ಈಗ? ಅಲ್ಲ ಬಿಡಿ. ಸಣ್ಣ ಚಿರೋಟಿ ರವೆ ತಂದರಾಯಿತು, ಒಂದಷ್ಟು ಸಕ್ಕರೆ ತುಪ್ಪ ಇದ್ದರಾಯಿತು ಅಂದುಕೊಂಡ್ರಾ. ಊಹೂಂ ಅದಲ್ಲ ಪ್ರಶ್ನೆ. ಈಗ ಬರೊ ಚಿರೋಟಿ ರವಾ ಮೊದಲಿನಂತೆ ಸಾಚಾ ಇರೋಲ್ಲ. ಅದೇನು ಹಿಟ್ಟು ಬೆರೆಸಿರ್ತಾರೋ ಏನೋ. ತುಪ್ಪ ಅಳತೆ ಪ್ರಕಾರ ಹಾಕಿದ್ರೂ ಮುದ್ದೆ ಮುದ್ದೆ ಆಗಿ ಮೇಣದಂತಾಗುವ ಅನುಭವ ಸಾಕಷ್ಟು ಸಾರಿ ಆಗಿದೆ. ಒಂದಾ ತಂದ ರವೆ ಸಣ್ಣ ಜರಡಿಯಲ್ಲಿ ಜರಡಿ ಮಾಡಬೇಕು ಇಲ್ಲಾ ಕಲಬೆರಕೆ ಇಲ್ಲದ ರವೆ ಹುಡುಕಿ ತರಬೇಕು. ಇನ್ನು ತುಪ್ಪವೋ ಗಮ್ ಅಂತಿರಬೇಕು. ಇಲ್ಲೂ ಬೆರಕೆ ಕಂಡ್ರೀ. ಊರಿಗೆ ಹೋದಾಗ ಗಮ ಗಮ ಹರಳು ತುಪ್ಪ ಅದರಲ್ಲೂ ಎಮ್ಮೆ ತುಪ್ಪ ಸಖತ್ತಾಗಿರುತ್ತೆ ಅಂತ ಕೊಂಡು ತಂದ್ರೆ ಅದೂ ಇದೇ ಕತೆ. ನೆಯಕಲು. ಸರಿ ಕಾಯಿಸಿಲ್ಲ ಜೊತೆಗೆ ಡಾಲ್ಡಾನೋ ಪೀಲ್ಡಾನೋ ಬೆರೆಸಿದ ತುಪ್ಪ. ಬೆರಕೆ ಮಾಡೊ ಗಾಳಿ ಹಳ್ಳಿಯಲ್ಲೂ ಪಸರಸಿರೋದು ಗೊತ್ತಾಗಿ ಬುದ್ಧಿ ಚುರುಕಾಯಿತು.

ಆದರೂ ಈ ಶಿರಾ ಮಾಡೋದರಲ್ಲಿ ಎತ್ತಿದ ಕೈ ಆಗಬೇಕು ಎಂಬ ಹಠದಲ್ಲಿ ಪಟ್ಟ ಸಾಹಸ ಅಷ್ಟಿಷ್ಟಲ್ಲ. ಒಂದೊಂದು ಸಾರಿ ಮಾಡಿದಾಗಲೂ ಏನಾದರೂ ವ್ಯತ್ಯಾಸ. ಚಿಕ್ಕಮ್ಮನ ಹತ್ತಿರ ಅದೆಷ್ಟು ಸಾರಿ ಬಯ್ಸ್ಕಂಡೆನೊ!! ಇಹಲೋಕ ತ್ಯಜಿಸಿದ ನನ್ನ ಪ್ರೀತಿಯ ಚಿಕ್ಕಮ್ಮ ಶಿರಾ ಮಾಡುವಾಗೆಲ್ಲ ಈಗಲೂ ನೆನಪಾಗ್ತಾಳೆ.

ಇದು ತಮಾಷೆಯಲ್ಲ ವಾಸ್ತವ‌. ಅಂದು ಹಾಗಾಗದಿದ್ದರೆ ಪಟ್ಟು ಹಿಡಿದು ಶಿರಾ ಮಾಡುವುದು ನಾನು ಬಹುಶಃ ಕಲಿಯುತ್ತಿರಲಿಲ್ಲವೇನೊ ಅನಿಸುತ್ತದೆ ಎಲ್ಲರ ಹೊಗಳಿಕೆ ಕೇಳಿದಾಗ. ಇದು ನಲವತ್ತೇಳು ವರ್ಷದ ಹಿಂದಿನ ನನ್ನ ಮೊದಲ ಅಡಿಗೆಯ ಅದರಲ್ಲೂ ಸಿಹಿ ಪ್ರಿಯಳಾದ ಶಿರಾ ತಿನ್ನುವ ಚಪಲದಲ್ಲಿ ಮಾಡಿದ ಸವಿ ಸವಿ ನೆನಪು. ಗೊತ್ತಾಯ್ತಲ್ಲಾ? ನೆಂಟ ಬಂದಿದ್ದು ಒಂದು ನೆವ ಅಷ್ಟೇ.😊

30-5-2018. 2.11pm

ಬರೀ ಲೆಕ್ಕಾಚಾರ

ಯಾವುದೋ ಕೆಲಸದ ನಿಮಿತ್ತ ಅತ್ತಿಂದಿತ್ತ ಇತ್ತಿಂದತ್ತ ನಾಲ್ಕಾರು ಕಿ.ಮೀ. ಗಾಡಿ ಓಡಿಸಿ ಕೊನೆಗೆ ಈ ಬಿಲ್ಡಿಂಗ್ ಪಕ್ಕದಲ್ಲೇ ಇರುವ ಕಛೇರಿಗೂ ಭೇಟಿ ಕೊಟ್ಟು ಇನ್ನೇನು ಮನೆ ಕಡೆ ಮುಖ ಮಾಡೋಣ ಅನ್ನುವಷ್ಟರಲ್ಲಿ ಪಕ್ಕನೆ ಕಣ್ಣಿಗೆ ಬಿತ್ತು

ಅರೆ! ಬಾಗಿಲು ತೆಗೆದಿದೆ! ಇನ್ನೂ ನಾಲ್ಕು ಗಂಟೆ. ನಾಲ್ಕೂವರೆಗಲ್ವಾ ಓಪನ್ ಆಗೋದು? ಎಲ್ಲೋ ಈಗಿತ್ತಲಾಗಿ ಬೇಗ ಬಾಗಿಲು ತೆಗಿಬಹುದು ಅಂತ ನನ್ನಲ್ಲೆ ಪ್ರಶ್ನೆ ಉತ್ತರ ಎಲ್ಲ ಹೇಳಿಕೊಂಡು ತಲೆ ಕವಚ ಕೈಯಲ್ಲಿ ನೇತಾಡಿಸಿಕೊಂಡು ನಾನೂ ಎಂಟ್ರಿ ಕೊಟ್ಟೆ ಸ್ವಲ್ಪ ಖುಷಿ ಲವಲವಿಕೆಯಿಂದ. ನಾನೇನು ಅಷ್ಟೆಲ್ಲಾ ಓದುವವಳಲ್ಲ. ಆದರೂ ಎಲ್ಲಾ ಪತ್ರಿಕೆ ಪೇಪರು ಕಣ್ಣಾಡಿಸುವ ಕುತೂಹಲ ಆಗಾಗ. ಹಂಗಾಗಿ ಇಲ್ಲಿಗೆ ಮನಸ್ಸು ಬಂದಾಗ ಬಿಡುವು ಮಾಡಿಕೊಂಡು “ಹೋಗಿ ಓದೆ “ಅಂತ ಮನಸ್ಸು ಹೇಳಿದಾಗೆಲ್ಲ ಬರ್ತಾ ಇದ್ದೇನೆ.

ಅದೊಂದು ಸರಕಾರಿ ವಾಚನಾಲಯ. ಆಲಯ ಅಂದರೆ ದೇವಸ್ಥಾನ. ಇದು ನಿಮಗೂ ಗೊತ್ತು. ಇಲ್ಲಿ ಕೂಡಾ ನಿಶ್ಯಬ್ಧವಾದ ವಾತಾವರಣ ಇತ್ತು. ಐದಾರು ಮೇಜಿನ ಮೇಲೆ ಏಳೆಂಟು ದಿನನಿತ್ಯದ ಕನ್ನಡ ಇಂಗ್ಲೀಷ್ ಪೇಪರುಗಳು ಹರಡಿತ್ತು. ಕನ್ನಡ ಇಂಗ್ಲೀಷ್ ಮಾಸ ಪತ್ರಿಕೆಗಳು ಕೂಡಾ ಒಪ್ಪವಾಗಿ ಮೂಲೆಯ ಸ್ಟ್ಯಾಂಡ್ ಅಲಂಕರಿಸಿತ್ತು. ಒಬ್ಬರು ಮುಖನೇ ಕಾಣದಂತೆ ಪೇಪರು ಮೇಲೆತ್ತಿ ಓದುತ್ತಿದ್ದರು. ನನ್ನ ಎಂಟ್ರಿ ಆಗ್ತಿದ್ದಂತೆ ಪಕ್ಕಕ್ಕೆ ಪೇಪರ್ ಸ್ವಲ್ಪವೇ ಸ್ವಲ್ಪ ಸರಿಸಿ ಕನ್ನಡಕದ ಗಾಜಿಂದ ಇಣುಕಿದರು. ನಾನಂತೂ ಅವರ ಮುಖ ನೋಡಲಾಗಲೇ ಇಲ್ಲ. ಶರೀರ ದರ್ಶನ ಆಯ್ತು. ಕುತೂಹಲವೇನು ಇರಲಿಲ್ಲ, ಯಾಕಂದ್ರೆ ಅವರು ವಯಸ್ಸಾದವರು ಬಿಡಿ!

ಬಾಗಿಲ ಬಲಗಡೆ ಮೇಜಿನ ಪಕ್ಕದ ಖುರ್ಚಿಯಲ್ಲಿ ಸ್ವಲ್ಪ ಜಾಸ್ತಿನೇ ವಯಸ್ಸಾದ ತಾತಪ್ಪ ಕನ್ನಡಕ ಇಲ್ದೇನೆ ಕಣ್ಣಿಗೆ ಅತ್ಯಂತ ಹತ್ತಿರದಲ್ಲಿ ಪೇಪರು ಹಿಡಿದು ಓದುತ್ತಿದ್ದರು. ” ಯಾಕೀಗೆ ಓದೋದು? ” “ತತ್ತರಕಿ ಆಗಲೇ ಶುರುವಾಯಿತಾ ನಿನ್ನ ಲೆಕ್ಕಾಚಾರ? ನಡಿಯೆ ಸಾಕು, ನೀನಾಕ್ಕೊ ಕನ್ನಡಿ” ಮನಸ್ಸು ಅಣಕಿಸಿತು. ನಾನು ಸುತ್ತ ಮುತ್ತ ಕಣ್ಣಾಯಿಸಿದೆ. ಇರೋದೇ ಇಬ್ಬರು ಜೊತೆಗೆ ನಾನು ಮೂರನೆಯವಳು.

ಎದುರುಗಡೆ ಮೇಜಿನ ಮೇಲಿರುವ ಪುಸ್ತಕದಲ್ಲಿ ನನ್ನ ಹೆಸರು ಕುಲ ಗೋತ್ರ ಅದೇರಿ ಹೆಸರಿನೊಂದಿಗೆ ಉಧ್ಯೋಗ, ವಯಸ್ಸು, ವಿಳಾಸ ಇತ್ಯಾದಿ ಬರೆದು ಸಹಿ ಮಾಡಿ ಯಾರೂ ಇಲ್ಲದ ಪೇಪರು ಮಾತ್ರ ಇರುವ ಟೇಬಲ್ ಮುಂದೆ ಖುರ್ಚಿಯಲ್ಲಿ ಆಸೀನನಾದೆ. ಮೂಲೆ ಸ್ಟ್ಯಾಂಡಲ್ಲಿ ಜೋಡಿಸಿಟ್ಟಿದ್ರಲ್ಲ ಒಂದಷ್ಟು ಮಾಸಿಕ ಕನ್ನಡ ಇಂಗ್ಲೀಷ್ ಮಾಗ್ಝಿನ್ ಅದರಲ್ಲಿ ನಾಲ್ಕಾರು ಕನ್ನಡ ಮ್ಯಾಗ್ಝಿನ್ ಮಾತ್ರ ಎತ್ತಿ ಕೊಂಡೆ. ಇಂಗ್ಲೀಷ್ ಬರದಿದ್ದರೂ ತೋರುಗಾಣಿಕೆಗೆ ಇಂಗ್ಲೀಷ್ ಪುಸ್ತಕ ಹಿಡ್ಕೊಂಡು ಸ್ಟೈಲಾಗಿ ಕೂತು ಓದುವವರೂ ಇದ್ದಾರೆ ಅಂತ ಎಂದೋ ಯಾರೋ ಹೇಳಿದ್ದು ನೆನಪಾಯಿತು.

ಅದೇನು ಇಂಗ್ಲೀಷ್ ವ್ಯಾಮೋಹವೋ ಏನೋ! ನಾನು ಅಚ್ಚ ಕನ್ನಡತಿ. ಓದೊ ವಯಸ್ಸಿನಲ್ಲಿ ಯಾವಾಗಲೂ ಇಂಗ್ಲೀಷು ಗಾಂಧಿ ಕ್ಲಾಸಾದರೆ ಇನ್ನೇನು? ಆರಕ್ಕೆ ಏಳೋಲ್ಲ ಮೂರಕ್ಕೆ ಇಳಿಯೋಲ್ಲ. ಲಟಾಸ್ ನನ್ನ ಇಂಗ್ಲೀಷ್ ಗತ್ಯಂತರವಿಲ್ಲದೇ ಮಾತಾಡುವಾಗ ಇರೊ ಬರೊ ವರ್ಡ ಎಲ್ಲಾ ಉಪಯೋಗಿಸಿ ಮಾತಾಡಿದ್ದು ಅರ್ಥ ಮಾಡ್ಕೋಳೋದು ಕೇಳುಗರಿಗೇ ಬಿಟ್ಟಿದ್ದು. ನಾನಂತೂ ತಲೆ ಕೆಡಿಸಿಕೊಳ್ಳದೇ ಒದರಿ ಬಿಡೋದೆ. ಅರ್ಥ ಆಗಿಲ್ಲ What ? What? ಅಂತ ಅಭಿನಯಿಸಿ ಕೈ ಅಲ್ಲಾಡಿಸಿದರೆ “ಕಲಿಬೇಕಿತ್ತು ಕನ್ನಡ, ಅದಕೆ ಬರೋಲ್ಲ ಅಂದರೆ ನಾನೇನು ಮಾಡ್ಲಿ? ಗೊತ್ತಿರೋದೆ ನನಗೆ ಇದೊಂದೇ ಭಾಷೆ. ಈಗ ನಾನು ಕಲಿತಿಲ್ವಾ ಅಲ್ಪ ಸ್ವಲ್ಪ ಇಂಗ್ಲೀಷೂ… ಹಂಗೆ ನೀವು ಕಲಿರಿ ಕನ್ನಡ!” ಅಂತ ಜಡಾಯಿಸಿದ್ದೂ ಇದೆ. ಆಗೆಲ್ಲ ಕೆಟ್ಟ ಕೋಪ ನನಗೆ.

ಇದೇ ತರ ಹಿಂದಿನೂ ಕಾ,ಕೋ,ಹೈ, ತೋ …ಹೀಂಗೆಲ್ಲ ಅಕ್ಷರ ಜೋಡಿಸಿ ಕನ್ನಡ ಬರದ ಹಿಂದಿಯವರ ಹತ್ತಿರವೂ ಮಾತಾಡಿ ಸೈ ಅನಿಸ್ಕೊಂಡು ಬಿಡ್ತೀನಿ. ಹಾಂಗನ್ನದೆ ಗತಿ ಇಲ್ಲ ಅವರಿಗೆ ಪಾಪ!

ಇಂತವರ ಜೊತೆ ಆಗೀಗ ಮಾತಾಡಿ ಇಂಗ್ಲೀಷು ಹಿಂದಿ ಸ್ವಲ್ಪ ಸರಿಯಾಗಿ ಮಾತಾಡ್ತೀನಿ ಅಂತ ಮಗಳ ಶಹಭಾಸ್ ಗಿರಿ ಅಪರೂಪಕ್ಕೊಮ್ಮೆ ಅವಳ ಗಲ ಗಲ ಗೆಳತಿಯರು ಮನೆಗೆ ಬಂದಾಗ ಕನ್ನಡ ಬಾರದ ಉತ್ತರ ದೇಶದವರತ್ತಿರ ಮಾತಾಡೊ ಚಪಲ. ಅವರ ಕುಲ ಗೊತ್ರ ಜಾಲಾಡೊ ಹುಚ್ಚು, ಕುತೂಹಲ ಬರದ ಭಾಷೆ ಅಯ್ಯೋ!ನನ್ನ ಅವಸ್ಥೆ ಏನು ಕೇಳ್ತೀರಾ? ಅವರೆಲ್ಲ ನನ್ನೆದುರೇ ನಕ್ಕರೂ ನಾನಂತೂ ಒಂದಿನಿತೂ ಬೇಜಾರು ಮಾಡಿಕೊಳ್ಳದೇ ಹೊಟ್ಟೆ ತುಂಬ ಉಣಬಡಿಸಿ ಕಳಿಸ್ತೀನಲ್ಲಾ ಬಗೆ ಬಗೆ ಬೃಷ್ಟಾನ್ನ ಭೋಜನವಾ? ಹಿಂದಿಂದ ಹೇಳ್ತಾರಂತೆ ” your Mom is sooo cute!” “ಬೆಂಕಿ ಬಿತ್ತು ನನ್ನ ಭಾಷೆಗೆ ಆ ಹುಡುಗಿಯರ ಹತ್ತಿರ ಏನೆಲ್ಲಾ ಕೇಳಬೇಕಿತ್ತು. ಛೆ! ಏನೆ ನೀನು ಕನ್ನಡ ಬಾರದವರ ಹತ್ತಿರ friendship” ಅಂತ ಹೇಳಿದರೆ “ಅಮ್ಮಾ ಇನ್ಮೇಲೆ ನಿನ್ನ ಹತ್ತಿರ ಇಂಗ್ಲೀಷನಲ್ಲೇ ಮಾತಾಡೋದು. ಮಾತಾಡ್ತಾ ಮಾತಾಡ್ತಾ ಕಲಿಬಹುದು. ಕಷ್ಟ ಇಲ್ವೆ…” ಈ ಉಮೇದಿ ಎರಡು ದಿನ. ಮತ್ತದೇ ನಾಯಿ ಬಾಲ ಡೊಂಕೆ.

ಇಲ್ಕೇಳಿ ನಾನು ಹಾಂಗೆಲ್ಲ ಮಾಡಲ್ಲಪ್ಪಾ ಇಂಗ್ಲೀಷ್ ಬರೋ ತರ ನಟನೆನೂ ಮಾಡಲ್ಲಪ್ಪಾ. ಅಂದ್ಕೊಂಡು ಉತ್ಕೃಷ್ಟ ಸಂಭಾವಿತರ ಸಾಲಿಗೆ ಸೇರಿ ನಾಲ್ಕಾರು ಕನ್ನಡದ್ದೇ ಮಾಗ್ಝಿನ್ ಆರಿಸಿಕೊಂಡರೆ ಮನಸ್ಸು “ಸರಿ ಹೋಗಿ ಕೂಡು ಸಾಕು” ಅಂತು. ಕೂಡುವ ಮೊದಲೇ ನನ್ನ ಟೇಬಲ್ “ಆಹಾ! ನನ್ನ ಟೇಬಲ್ ಅಂತೆ. ಆಗಲೆ ನಿನ್ನದು ಅಂದ್ಬಿಟ್ಯಾ? ಮಂಕೆ ಇದು ಲೈಬ್ರರಿ ಟೇಬಲ್ಲು” ಗೊತ್ತು ಮಾತಿಗಂದೆ ಹಾಗೆ. ನೋಡಿ ನನ್ನದು ಅನ್ನುವುದು ಮನುಷ್ಯನ ಮೆದುಳು ಎಷ್ಟು ಬೇಗ ಪ್ರತಿಷ್ಠಾಪಿಸಿಬಿಡುತ್ತದೆ! ವಿಚಿತ್ರ ಅಲ್ವಾ?

ಸರಿ ಎಲ್ಲಾ ಮಾಗ್ಝಿನ್ ಟೇಬಲ್ ಮೇಲೆ ಅಲಂಕರಿಸಿಟ್ಟುಕೊಂಡೆ ; ಏನೋ ಗನಂಧಾರಿ ಓದುವವರಂತೆ. ನಗು ಬಂತು. ನನ್ನದೂ ಒಂಥರಾ ಶೋಕಿ ರೀಡಿಂಗಾ ಅಂತ. ಛೆ ಛೆ! ಹಾಗೆನಿಲ್ಲ ಬಿಡಿ. ನಾನು ಓದಿದಷ್ಟು ಗಮನವಿಟ್ಟು ಓದುವ ಅಪ್ಪಟ ಓದುಗಾರ್ತಿ. ಓದೋದೆ ಹಬ್ಬಕ್ಕೊಮ್ಮೆ ಹಾಡಿಗೊಮ್ಮೆ. ಅದು ಬೇರೆ ವಿಷಯ!

ಮೂಲೆ ಸ್ಟ್ಯಾಂಡ್ ಹತ್ತಿರ ನಿಂತು ಮ್ಯಾಗ್ಝಿನ್ ಆರಿಸಿಕೊಳ್ಳುವಾಗ ” ಅಲ್ಲಾ ಒಂದೇ ಸಾರಿ ಇಷ್ಟೊಂದು ಮಾಗ್ಝಿನ್ ಎತ್ತಿಕೊಂಡರೆ ಬೇರೆಯವರಿಗೂ ಬೇಕಾದರೆ? ಹೀಗೆ ಮಾಡುವುದು ತಪ್ಪಲ್ವಾ?” ಎಂದಿತು ಮನಸ್ಸು. ಹಿಂದೊಮ್ಮೆ ಮದುವೆಯ ಮಂಗಲಧಾಮದಲ್ಲಿ ಮಗಳಿಗೆ ಗಂಡು ನೋಡೊ ಅಬ್ಬರದಲ್ಲಿ ಎರಡು ಮೂರು ಫೈಲು ಪೇರಿಸಿಕೊಂಡಾಗ ಅಲ್ಲಿರೊ ಕ್ಲರ್ಕಮ್ಮ “ಅಯ್ಯೋ, ಹೀಗೆ ಫೈಲು ಎತ್ತಿಕೊಂಡು ಹೋದರೆ ಹೇಗೆ? ಬೇರೆಯವರೂ ನೋಡಬೇಕಲ್ವಾ? ಒಂದು ಫೈಲು ತಗೊಂಡು ನೋಡಿ ಅದೇ ಜಾಗದಲ್ಲಿ ತಂದಿಟ್ಟು ಮತ್ತೆ ಇನ್ನೊಂದು ಫೈಲು ತಗೊಂಡು ನೋಡಬೇಕು ಆಯ್ತಾ” ಅಂತ ಬೆಣ್ಣೆ ಮಾತಂದು ಅದೆಷ್ಟು ಸರ್ತಿ ಕೂತು ಎದ್ದು ಮಾಡುವಂತೆ ಮಾಡಿದ್ಲು. ಸಾಕಪ್ಪಾ, ಸೊಂಟ ಎಲ್ಲಾ ನೋವು ಬಂದು ಸರಿ ಮಾಡಿಕೊಂಡು ಮನೆ ಸೇರುವಾಗ ಅದೆಷ್ಟು ಅವಸ್ಥೆ ಪಟ್ಟಿದ್ದೆ ಗೊತ್ತಾ? ಮತ್ತೆ ಆ ಕಡೆ ತಲೆ ಹಾಕಲೂ ಇಲ್ಲ. ಇಂತಹ ಅನುಭವ ಹೇಗೆ ಮರೆಯುತ್ತೆ. ಅಷ್ಟು ಪಕ್ಕನೆ ಮರೆಯುವ ವಿಷಯವೇ ಇದು? ಇಲ್ಲೂ ನೆನಪಾಯಿತು. ಆದರೆ ಇದು ಸೋಂಬೇರಿ ಚಾಳಿ ಅಂತೂ ಅಲ್ಲ. ಮತ್ತೆ? ಪದೇ ಪದೇ ಎದ್ದು ಕೂತು ಮಾಡಲು ಕೈಲಾಗಲ್ಲ ಏನ್ಮಾಡ್ಲಿ? ಅದಕೆ ಹೀಂಗ್ ಮಾಡದ್ನಪ. ತಪ್ಪಾ? ಅಲ್ಲ ಅಲ್ವಾ?

ಈಗ ವಿಷಯಕ್ಕೆ ಬರ್ತೀನಿ ; ಒಂದೊಂದೇ ಮ್ಯಾಗ್ಝಿನ್ ಹಾಳೆ ತಿರುವಾಗ್ತಾ ಇದ್ದೆ ಮನಸ್ಸು ಮಾತ್ರ ಆ ತಾತಪ್ಪನ ಕಡೆಯೇ ಇತ್ತು. ಆಗಾಗ ನೋಡ್ತಾ ಇವರು ಯಾಕೆ ಇಷ್ಟು ಕಷ್ಟ ಪಟ್ಟು ಓದುತ್ತಿದ್ದಾರೆ? ಒಂದು ಕನ್ನಡಕ ತೆಗೆದುಕೊಳ್ಳೋಕಾಗಲ್ವೆ? ಕಣ್ಣು ಹೋಗಿ ಟೆಸ್ಟ್ ಮಾಡಿಸ್ಕೋಬೇಕಪ್ಪಾ? ಛೆ! ಏನು ಕಷ್ಟನೊ ಏನೋ? ಪಾಪ! ಒಮ್ಮೆ ವಿಚಾರಿಸಲಾ? ಏನು ಅಂತ ಕೇಳಿಬಿಡಲೆ? ಬನ್ನಿ ತಾತಪ್ಪಾ ನಾನೇ ಕರೆದುಕೊಂಡು ಹೋಗುತ್ತೇನೆ. ಟೆಸ್ಟ್ ಮಾಡಿಸೋಣಾ ಅಂತ ಹೇಳಿದರೆ? ಇಂತಾ ಉಸಾಪರಿ ಚಿಕ್ಕ ಪುಟ್ಟದ್ದು ಅಲ್ಪ ಸ್ವಲ್ಪ ಮಾಡಿದೀನಿ.

ಒಮ್ಮೆ ಏನಾಯ್ತು ಗೊತ್ತಾ? ಅದೆ ಬಸವನ ಗುಡಿ ರಾಮಕೃಷ್ಣ ಆಶ್ರಮ ಹತ್ತಿರ ಒಬ್ಬರು ಕಣ್ಣಿಲ್ಲದವರು ಕೋಲು ಹಿಡಕೊಂಡು ಕಪ್ಪು ಕನ್ನಡಕ ಧರಿಸಿ ರಸ್ತೆ ದಾಟಲು ನಿಂತಿದ್ದರು. ಅಂತಾ ವಯಸ್ಸಾದವರೇನು ಅಲ್ಲ. ನಾನೂ ಅಲ್ಲೆ ಆ ಕಡೆ ಕ್ರಾಸ್ ಮಾಡಬೇಕಿತ್ತು. ಪಾಪ!ಇವರು ಕ್ರಾಸ್ ಮಾಡೋಕೋಗಿ ಆಮೇಲೆ ಗಾಡಿ ಅಡಿಗಾದರೆ ಅಂತ ” ಬನ್ನಿ ನಾನೂ ಆ ಕಡೆ ಹೋಗಬೇಕು, ನಾನೇ ಕ್ರಾಸ್ ಮಾಡಸ್ತೀನಿ ಭಯ ಪಡಬೇಡಿ ” ಅಂತ ಅವರ ಕೈ ಹಿಡಿದುಕೊಂಡು ಕರೆದುಕೊಂಡು ಹೋದೆ. ಸರಿ ನೀವಿನ್ನು ಹೋಗಬಹುದು ಈ ಕಡೆ ಬಂದಾಯ್ತು ಅಂತ ಕೈ ಬಿಡಲು ಹೋದರೆ ಆ ಯಪ್ಪ ನನ್ನ ಕೈ ಗಟ್ಟಿಯಾಗಿ ಅದುಮುತ್ತಿದ್ದಾನೆ. ಎಲ್ಲಿತ್ತೊ ಕೋಪಾ ಬಂತು ನೋಡಿ ಆದರೂ ತಡಕೊಂಡು ಏನೂ ಮಾತನಾಡದೆ ಕೊಸರಿಕೊಂಡು ಕೈ ಬಿಡಿಸಿಕೊಂಡು ಬಂದಿದ್ದೆ. ಬ್ಯಾಡ್ ಎಕ್ಸಪೀರಿಯನ್ಸ!

ಅದಕೆ ಸಿಕ್ತ ಸೆನ್ಸು ಯಾವಾಗಲೂ ಎಚ್ಚರಿಸುತ್ತೆ ; “ಇದೊಂತರಾ ಉಸಾಪರಿ ಕೆಲಸ ನಿನಗ್ಯಾಕೆ ಸುಮ್ನಿರು ಅಂತ ” ಆದರೂ ಬಯ್ಕೋತಿನಿ ಥೊ^^^^ ಈ ಒಳ ಮನಸ್ಸಿನ ಕಾಟಾ ಯಾವಾಗಲೂ ಹೀಗೆ, ಬ್ಯಾಡಾ ಬ್ಯಾಡಾ ಅಂತ ಅಡ್ಡಗಾಲು ಹಾಕೋದೆ ಆಯ್ತು.

ಇಷ್ಟೆಲ್ಲಾ ಯೋಚನೆ ಬ್ಯಾಡಾಗಿದ್ದು ಮನಸ್ಸು ಮಾಡ್ತಾ ಇದ್ರೂ ಕಣ್ಣು ಮಾತ್ರ ತಾತಪ್ಪನ್ನೂ ನೋಡೋದು ಅಕ್ಷರದ ಮೇಲೂ ಕಣ್ಣಾಯ್ಸ್ಕೋತಾ ಜೊತೆ ಜೊತೆಗೆ ಎಲ್ಲಾ ಮಾಗ್ಝಿನ್ ತಿರುವಾಕಿದ್ದು ಮುಗಿಸಿತ್ತು. ನಾಲ್ಕಾರು ಬರಹನೂ ಓದಿ ಬೇಕಾದ email ವಿಳಾಸ ಕೂಡಾ ಕ್ಲಿಕ್ಕಿಸಿಕೊಂಡ್ತು. ತಾತಪ್ಪ ಹಾಗೆ ಓದ್ತಾ ಇದ್ರಾ. ಈ ಯಪ್ಪ ಉಸ್ ಅಂದ್ಕೊಂಡು ಓದಿ ಬಹಳ ಸುಸ್ತಾದವರಂತೆ ಎದ್ದು ಸೊಂಟ ಸರಿ ಮಾಡಿಕೊಳ್ತಾ ತಮ್ಮಷ್ಟಕ್ಕೇ ಜಾಗಾ ಖಾಲಿ ಮಾಡಿದರು. ಹೋಗೊ ಸ್ಟೈಲು ಚೆನ್ನಾಗಿತ್ತು.

ಎಷ್ಟು ನಿಶ್ಯಬ್ಧ ವಾತಾವರಣ ಅಂದ್ರೆ ಮನಸ್ಸು ಪೇಪರಿನ ಒಳ ಹೊಕ್ಕು ವೇಗವಾಗಿ ಓದುತ್ತಿತ್ತು.

“ಇದೇ ಏನ್ರೀ ಲೈಬ್ರರಿ? ”

ಅವರ ಧ್ವನಿ ಇನ್ನೂ ನಿಂತಿಲ್ಲ ತಾತಪ್ಪ “ಹೌದ್ರೀ ಇದೇ ಲೈಬ್ರರಿ ಬನ್ನಿ” ಅಂದ್ರು.

” ನೋಡ್ರೀ ನಾ ಲೈಬ್ರರಿ ಬಾಗಲಲ್ಲಿ ನಿಂತಿದೀನಿ. ಇಲ್ಲಿಂದ ನಿಮ್ಮನೆಗೆ ಹೇಗೆ ಬರಬೇಕು ರೂಟ್ ಹೇಳಿ, ಓ.. ಪಕ್ಕದ ಗೇಟಲ್ಲಾ? ಸರಿ ಸರಿ ಕಾಣ್ತಿದೆ. ಬರ್ತೀನಿ ಬರ್ತೀನಿ”

ಮೊಬೈಲ್ ಮಾತಾಯಣ ಒಂದು ಕ್ಷಣ ಸಿಡಿಲಿನ ಅಬ್ಬರದಂತೆ ಜೋರಾಗಿ ಮೊಳಗಿ ಕಟ್ ಆಯ್ತು. ಯಾವುದೋ ಮನೆಗೋಗೊ ಅಡ್ರೆಸ್ ತಿಳಿಯೊ ಅವಸರ ಅವರದ್ದೇನೂ ತಪ್ಪಿಲ್ಲ ಬಿಡಿ, ಬಹಳ ಟೆನ್ಷನ್ ನಲ್ಲಿ ಮಾತು ಜೋರಾಗಿತ್ತು. ಆದರೂ ಲೈಬ್ರರಿ ಬಾಗಲಲ್ಲಿ^^^^

ಅವರ ಜಾಗದಲ್ಲಿ ನಾನಿದ್ರೂ ಅಲ್ಲಲ್ಲಾ ನಾವಿದ್ರೂ ಹೀಗೆ ಮಾಡ್ತಿದ್ವೇನೊ? ಇದು ಕಲ್ಪನೆ ಅಷ್ಟೆ. ನಿಜವಾಗಲೂ ಹೇಳ್ದೆ ಅಂತ ಕೋಪ ಮಾಡಿಕೊಬೇಡಿ ನನ್ಮೇಲೆ ಆಯ್ತಾ? ಮನುಷ್ಯನ ಸ್ವಭಾವ ವಿಶ್ಲೇಷಣೆ ಮಾಡಿದೆ ಅಷ್ಟೆ.

ಮತ್ತದೇ ಶಾಂತ ವಾತಾವರಣ. ಯೋಚನೆ ಶುರುವಾಯಿತು. ಅಲ್ಲಾ ಲೈಬ್ರರಿ ಪಕ್ಕದಲ್ಲಿ ಹಿಂದಿನ ರಸ್ತೆಗೆ ಯಾಕೆ ಗೇಟು ಇಟ್ಟಿರೋದು? ಅಗತ್ಯ ಇದ್ದರೂ ಗೇಟು ಇಡುವಂತಿರಲಿಲ್ಲ ಅಲ್ಲಿ. ಇದು ಸರಕಾರಿ ಜಾಗ. ಅಲ್ಲದೇ ಭದ್ರತೆಯ ದೃಷ್ಟಿಯಿಂದ ತಪ್ಪು ಅನಿಸುತ್ತಿದೆ. ಆದರೆ ಇಟ್ಟುಕೊಂಡಿದ್ದಾರೆ ಶಾರ್ಟ ಕಟ್ ಹಾದಿ. ಅವರವರ ಅನುಕೂಲಕ್ಕೆ ಸರಕಾರಿ ಕಛೇರಿ ಉಸ್ತುವಾರಿ ಓಡಾಡೋಕೆ, ಸಾರ್ವಜನಿಕರೂ ಕೆಲವರು ಬಳಸಿ ಹೋಗುವ ಹಾದಿ ಬಿಟ್ಟು ಇಲ್ಲೆ ಸಂಧಿಯಲ್ಲಿ ನುಗ್ಗೋ ಚಾಳಿ ರೂಢಿಸಿಕೊಂಡುಬಿಟ್ಟಿದ್ದಾರೆ. ಹೊರಗಿಂದ ಬರುವವರ ನೋಡಿದರೆ ಅಲ್ಲಿರೊ ಯಾವುದಾದರೂ ಆಫೀಸಿಗೊ ಲೈಬ್ರರಿಗೊ ಬಂದಿರಬೇಕು ಅಂತ ಸುಮ್ಮನಿರಬೇಕು. ಆದರೆ ಬಂದು ಹೋಗುವವರ ಉದ್ದೇಶ ಬಂದವರಿಗಷ್ಟೇ ಗೊತ್ತು ಹೋಗುವವರಿಗಷ್ಟೇ ಗೊತ್ತು. ಮಿಡ್ಲಲ್ಲಿ ಇರುವವರು ಅವರಾಡುವ ಮಾತು ಕೇಳಿಸಿಕೊಂಡು ಪಿಕಿ ಪಿಕಿ ನೋಡಬೇಕು. ನೋಡಿ ಹೇಗಿದೆ ಸಮಾಚಾರ. ಇರಲಿ ಪಾಪ! ಮನಸಿನ ಸಮೀಕ್ಷೆ ಗೂಢಚರ್ಯೆ ಕೊನೆಗೆ ಅನುಕಂಪ.

ಸರಿ ಪೇಪರ್ ಒಂದೆರಡು ತಿರುವಾಕುವಷ್ಟರಲ್ಲಿ ತಾತಪ್ಪನ ಸವಾರಿನೂ ಎತ್ತು. ನಿಧಾನವಾಗಿ ಹೋಗುವ ಅವರನ್ನೇ ದಿಟ್ಟಿಸಿದೆ. ಯಾಕೋ ಮಾತಾಡಿಸಬೇಕು ಅಂದರೂ ತಡಕೊಂಡೆ. ಮಗಳು ಯಾವಾಗಲೂ ಹೇಳ್ತಾಳೆ “ಅಮ್ಮ ನೀ ಯಾರ್ ಕಂಡರೂ ಮಾತಾಡಿ ಗುರ್ತಾ ಮಾಡ್ಕೊತಿಯಾ. ಅದೆಷ್ಟು ಮಾತಾಡ್ತೀಯೆ. ಸುಮ್ನಿರೆ. ಹಂಗೆಲ್ಲ ಗೊತ್ತಿಲ್ಲದವರನ್ನೆಲ್ಲ ಪರಿಚಯ ಮಾಡ್ಕೊಂಡು ಮಾತಾಡಬೇಡಾ. ಯಾರು ಹ್ಯಾಂಗೊ ಏನೋ.” ನೆನಪಾಯಿತು. ಅವಳೂ ಹೇಳೋದೂ ಸರಿನೆ ಇದೆ. ಚಿಕ್ಕವರ ಬಾಯಲ್ಲಿ ದೊಡ್ಡ ಮಾತು ಬಂದಾಗ ತಲೆಬಾಗೋದು ನನ್ನ ರೂಢಿ. ತೆಪ್ಪಗೆ ಕೂತೆ. ಆದರೆ ಅವಳ ಮಾತು ಎಲ್ಲಾ ಕಡೆ ಪರಿಪಾಲಿಸಲು ಸಾಧ್ಯ ಇಲ್ಲ. ಕೆಲವು ಕಡೆ ಮೇಲು ಬಿದ್ದು ಮಾತಾಡಿಸಿ ಗುರುತು ಪರಿಚಯ ಮಾಡಿಕೊಂಡಿದ್ದರೇನೆ ನಮ್ಮ ಕೆಲಸ ಸಲೀಸಾಗಿ ಆಗೋದು. ಅದೇ ಇನ್ನೆಲ್ಲೂ ಅಲ್ಲ ಕಛೇರಿ ಬ್ಯಾಂಕುಗಳಲ್ಲಿ ನಾನೇ ಕಂಡುಕೊಂಡ ಶಾರ್ಟ ಕಟ್ ದಾರಿ.

ವಾತಾವರಣ ಇನ್ನಷ್ಟು ಶಾಂತವಾದಂತೆನಿಸಿತು. ಓದೊ ಕಡೆ ಗಮನ ಮಾಯವಾಯಿತು. ಯಾರೂ ಇಲ್ಲ. ಅವಳೊಬ್ಬಳು ಕ್ಲರ್ಕ ಇರ್ತಾ ಇದ್ಲು. ಏನೊ ಸೀರೆ ಫಾಲ್ ಹಚ್ಚೋದೊ ಸಣ್ಣದಾಗಿ ಮಡಚಿಟ್ಟುಕೊಂಡು ಅಥವಾ ಇನ್ನೇನೊ ತನ್ನ ಸ್ವಂತ ಕೆಲಸದಲ್ಲಿ ಮಗ್ನಳಾಗಿ ಕೂತಿರೋದು ಇಲ್ಲಿಗೆ ಬಂದಾಗೆಲ್ಲ ಗಮನಿಸಿದ್ದೆ. ಆಗೆಲ್ಲ ನನಗನಿಸೋದು ಇಂದಹ ಜಾಗದಲ್ಲಿ ನನಗೂ ಪಾರ್ಟ ಟೈಮ್ ಈ ಕೆಲಸ ಸಿಕ್ಕಿದ್ದರೆ ಇಲ್ಲಿರೊ ಪೇಪರು ಮಾಗ್ಝಿನ್ ದಿನಾ ಓದಬಹುದಿತ್ತಲ್ಲ.

“ಶುದ್ಧ ಸೋಂಬೇರಿ ನೀನು ದಿನಾ ಬಂದು ಕೂತು ಓದು ಯಾರು ಬೇಡಾ ಹೇಳ್ತಾರೆ” ಮತ್ತದೇ ಮನಸ್ಸು ಕುಟುಕಿದ್ದೂ ಇದೆ. ನಮಗೆ ನಾವೇ ಬೇಲಿ ಹಾಕೊ ಬೇಕು ಅಂದರೆ ಒಂದಾ ದೃಢ ಮನಸ್ಸಿರಬೇಕು,ಇಲ್ಲಾ ಬಂಧನ ಇರಬೇಕು. ಎರಡೂ ಇಲ್ಲಾ ಅಂದರೆ ಹೀಗೆ ಅಂದುಕೊಳ್ಳೋದು, ಅನಿಸಿಕೊಳ್ಳೋದು ನಮಗ ನಾವೆ. ದೇವರೆ ದೇವರೆ.

ವಾಸ್ತವಕ್ಕೆ ಬನ್ನಾ. ಕೆಟ್ಟ ಕೆಟ್ಟ ಯೋಚನೆ, ಆತಂಕ ಸುಳಿದಾಡೋದು ಇಂಥಾ ಒಬ್ಬಂಟಿ ಸಮಯದಲ್ಲೇ. ಸ್ವಲ್ಪ ಭಯ ಶುರುವಾಯಿತು. ಸಾಕಪ್ಪ ನಾನೊಬ್ಬಳೇ ಇಲ್ಲಿರೋದು,ಯಾರಾದರೂ ಬರೋದು, ಇಲ್ಲಿ ಎಷ್ಟೊಂದು ಪತ್ರಿಕೆ ಬೇರೆ ಇದೆ. ಯಾಕೊ ನಾನೊಬ್ಬಳೇ ಇರೋದು ಸರಿ ಅಲ್ಲ ಅಂತ ಅನಿಸಿಕೆಯ ಬಾವುಟ ನಿಗರಿ ನಿಂತಾ, ಎಲ್ಲಾ ನೀಟಾಗಿ ಲಗುಬಗೆಯಿಂದ ಜೋಡಿಸಿ ಸೀದಾ ಹೊರಟೆ. ಗಾಡಿ ಹತ್ತಿರ ಬಂದೆ, ಓಹ್! ತಲೆ ಕವಚ ಮರತಿದ್ದು ನೆನಪಾಯಿತು, ಹೋಗಿ ನೋಡ್ತೀನಿ ಅಲ್ಲೊಬ್ಬರು ಬಂದು ಪೇಪರು ಓದುತ್ತ ಕೂತಿದ್ದಾರೆ! ಅರೆ ಇಸ್ಕಿ, ಹಾದಿ ಇರೋದು ಇದೊಂದೇ. ಎದುರಿಗೆ ಯಾರೂ ಸಿಕ್ಕಲಿಲ್ಲ. ಇವರೆಲ್ಲಿಂದ ಬಂದಿದ್ದೂ… ಪಟಕ್ಕನೆ ನೆನಪಾಯಿತು ಓಹೋ..ಪಕ್ಕದ ಶಾರ್ಟ ರೂಟ್ ಗೇಟ್ ಬರಲಿದ್ದದ್ದು.

ಸರಿ ಯಾರೆಲ್ಲಿಂದಲಾದರೂ ಬರಲಿ. ಹೊಟ್ಟೆ ತಾಳ ಹಾಕ್ತಿದೆ. ರೊಯ್ಯ^^^ ಅಂತ ಗಾಡಿಯಲ್ಲಿ ಬರ್ತಾ ಇದ್ನಾ ಮಾಮೂಲಿ ರಸ್ತೆ ಪಕ್ಕದ ಅನ್ನಪೂರ್ಣೇಶ್ವರಿ ಬಾರೆ ಬಾರೆ ಅಂತ ಕರೀತು. ಏನೊ ಒಂದಷ್ಟು ಆಸೆಯಾದಾಗ ಅಪರೂಪಕ್ಕೊಮ್ಮೆ ಹೋಗಿ ರವೆ ಇಡ್ಲಿ ಮೆಂದು ಬರ್ತಿದ್ದೆ. ಮೊನ್ನೆ ತಾನೆ ಹೋಗಿದ್ದೆ. ಇವತ್ತು ಮತ್ತೆ ಕರಿತಾಳೆ! ಅದು ಹಾಗೆ ಅಲ್ಲೂ ಒಂದು ಹಾಸ್ಯ ಚಟಾಕಿ ನಡೆದು ಅಲ್ಲಿರುವವರು ಗೊಳ್ಳೆಂದು ನಕ್ಕಿದ್ದು ; ಅದೇರಿ ಮಂಗಳೂರು ಬಜ್ಜಿ ತಿನ್ನೊ ಹೆಬ್ಬಯಕೆಯಲ್ಲಿ ಆರ್ಡರ್ ಮಾಡಿ ಕೊನೆಗೆ ಮೆಯ್ಯುವಾಗ “ಇದೇನ್ರಿ ಬಿಸಿನೇ ಇಲ್ಲಾ, ತಣ್ಣಗಾಗಿಬಿಟ್ಟಿದೆ” ಅಂತ ಸೊಟ್ಟ ಮೂತಿ ಮಾಡಿದ್ದು ನೋಡಿ ಅಲ್ಲಿ ಬಂದ ಗಿರಾಕಿಯೊಬ್ಬರು “ಮಾಡುವಾಗ ಬಿಸಿ ಬಿಸಿ ಇತ್ತು” ಅಂದಿದ್ದು ಅವರ ಅರ್ಧ ಮಾತಿಗೆ ನಾನೂ ಪೂರ್ತಿ ಮುಕ ಮಾಡಿ ಹಲ್ಕಿರಿದಿದ್ದು ಎಜಮಾನನಿಗೆ ಸ್ವಲ್ಪ ಸಮಾಧಾನ ಆಯ್ತೆನೋ. ಅವನ ನಗು ನನ್ನ ನೋಡಿದಾಗ ಅವಳಿಗೂ ನೆನಪಾಗಿರಬೇಕು.

ಆದ್ರೂ ನಾ ಜಗ್ಗಲಿಲ್ಲ. ಡಾಕ್ಟರ್ ಮಾತು ನೆನಪಿಸಿಕೊಂಡು ಜಾಣ ಮರಿ ಆಗಿ ಮನೆ ಸೇರಿಕೊಂಡ್ನಪ್ಪಾ. ತಣ್ಣಗಾದ ಅಡಿಗೆನೇ ಬಿಸಿ ಮಾಡಿಕೊಂಡು ಅಚ್ಕಟ್ಟಾಗಿ ತಿಂದೆ. ಅದೇರಿ ಸಕ್ಕರೆ ಬಂದ ಮೇಲೆ ನನ್ನ ಸಮಾಧಾನಕ್ಕೋಸ್ಕರ ಕಂಡವರ ಮುಂದೆ ನನ್ನಷ್ಟಕ್ಕೇ ಅಡಿಗೆ ಅಂತ ಕರಿಯೊ ಬರೀ ವೋಟ್ಸೂ…….!!

15-4-2018. 9.7pm