ಸ್ಮರಣೆ (ಲಾವಣಿ)

ಮಂಚನಬೆಲೆಯ ಗ್ರಾಮವೊಂದರಲಿ
ಕವಿ ಸಿದ್ದಲಿಂಗಯ್ಯನವರು ಜನಿಸಿದರು
ತಾಯಿ ವೆಂಕಮ್ಮ ತಂದೆ ದೇವಯ್ಯ
ಇವರ ಪೋಷಣೆಯಲಿ ಬೆಳೆದಿಹರು.

ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ
ಇವರ ವಿದ್ಯಾಕೇಂದ್ರವಾಗಿತ್ತು
ಓದು ಬರಹ ಭಾಷಣಕಾರರಾಗಿ
ಕವಿತೆ ಬರೆವ ಹವ್ಯಾಸ ಇವರಿಗಿತ್ತು.

ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ
ಸಾಹಿತ್ಯದಲಿ ದಲಿತ ಕವಿಯಾಗಿ
ಬಂಡಾಯ ಸಾಹಿತಿಯೆಂದು ಆಗಲೇ
ದೊಡ್ಡ ಹೆಸರನು ಮಾಡಿದರು.

ವಿಧಾನ ಪರಿಷತ್ತಿನ ಸದಸ್ಯರಾಗಿ
ಅಧ್ಯಾಪನ ಬರವಣಿಗೆಯಲಿ ತೊಡಗಿದರು
ಕಾವ್ಯ,ನಾಟಕ, ವಿಮರ್ಶೆ, ಪ್ರಬಂಧ
ಇತ್ಯಾದಿ ಬರೆಯುತ ಮುನ್ನುಗ್ಗಿದರು.

ಗ್ರಾಮದೇವತೆಗಳು ಪಿಎಚ್ಡಿ ಪ್ರಬಂಧ
ಊರು ಕೇರಿ ಎಂಬ ಆತ್ಮಕಥನ ರಚಿಸಿದರು
‘ಇಕ್ರಲಾ ವದೀರ್ಲಾ’ ಈ ಪದಗಳ ಬಳಸಿ
ಸಾಹಿತ್ಯದಲಿ ಚರ್ಚೆಗೆ ಗ್ರಾಸವಾಗಿಹರು.

ಪ್ರಾಧಿಕಾರಗಳ ಅಧ್ಯಕ್ಷರಾಗಿ
ಉತ್ತಮ ಆಡಳಿತ ನೀಡಿದರು
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ
ಕನ್ನಡಮ್ಮನ ತೇರ ಎಳೆದಿಹರು.

ಬದುಕಿನುದ್ದಕ್ಕೂ ಎಗ್ಗಿಲ್ಲದೆ ಬರೆಯುತ
ಹಲವು ಪ್ರಶಸ್ತಿಗಳಿಗೆ ಭಾಜನರಾಗಿಹರು
ಸಾಹಿತ್ಯ ಲೋಕದ ಕಣ್ಮಣಿಯಾಗಿ
ಸಾರ್ಥಕ ಜೀವನ ನಡೆಸಿದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ಕವಿಯನು
ಅನುದಿನ ಕ್ಷಣ ಕ್ಷಣ ಸ್ಮರಿಸೋಣ
ಅವರು ನಡೆದ ಹಾದಿಯಲ್ಲಿ
ಸಾಹಿತ್ಯ ಕೃಷಿಯನು ಬೆಳೆಸೋಣ.

9-8-2021. 5.45pm

ಶ್ರೀ ಸಿದ್ದಾರೂಢರ ಜಯಂತ್ಯೋತ್ಸವ ಹಾಗೂ ಕವಿಗೋಷ್ಠಿ

ದಿನಾಂಕ 11-5-2019ರಂದು ಶ್ರೀ ಸಿದ್ದಾರೂಢರ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ಆದಿಚುಂಚನಗಿರಿ ಸಮುದಾಯ ಭವನ,ವಿಜಯನಗರ, ಬೆಂಗಳೂರು ಇಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಭಾಗವಹಿಸುವ ಕವಿಗಳೆಲ್ಲರೂ ಶ್ರೀ ಸಿದ್ದಾರೂಢರ ಕುರಿತಾಗಿ ಭಕ್ತಿ ಪೂರ್ವಕವಾಗಿ ಕವನ ಬರೆಯಬೇಕೆನ್ನುವ ಶರತ್ತು ಕೂಡಾ ಇತ್ತು.

ಶ್ರೀ ಸಿದ್ದಾರೂಢರ ಮಠ ಹುಬ್ಬಳ್ಳಿಯಲ್ಲಿ ಇರುವುದನ್ನು ತುಂಬಾ ವರ್ಷಗಳ ಹಿಂದೆ ಅಂದರೆ 1976-77ರಲ್ಲಿ ನೋಡಿದ್ದೆ. ಅಲ್ಲಿ ಇರುವ ಅಂಧರ ಶಾಲೆಗೂ ಭೇಟಿ ಕೊಟ್ಟು ಅಂಧರು ಕಲಿಯುವ ಲಿಪಿ, ಅವರುಗಳು ಸರಾಗವಾಗಿ ಆ ಲಿಪಿಯ ಮೇಲೆ ಬೆರಳಾಡಿಸುತ್ತ ಓದುವ ವೈಖರಿಗೆ ಬೆರಗಾಗಿದ್ದೆ. ಈ ನೆನಪು ಇಷ್ಟು ವರ್ಷಗಳಾದರೂ ಮರೆತಿಲ್ಲ. ಈ ಒಂದು ಕಾಡುವ ನೆನಪಿಗೊ ಏನೋ ನಾನೂ ಕವನ ಬರೆದು ಪ್ರಸ್ತುತ ಪಡಿಸಬೇಕೆನ್ನುವ ಹಂಬಲ ಹೆಚ್ಚಾಯಿತು. ತಕ್ಷಣ ಅವರ ಬಗ್ಗೆ ಒಂದಷ್ಟು ಮಾಹಿತಿ ಓದಿ ಕವನ ಬರೆಯಲು ಕೂತೆ.

ನೋಡಿ ಎಲ್ಲವೂ ಗುರು ಕರುಣೆ. ನಾನು ಮೊದಲನೇ ಸಾರಿ ಬರೆದೆ ಲಾವಣಿ ಪದ್ಯ! ಹಾಗೆ ಲಾವಣಿ ರೂಪದಲ್ಲಿ ಹಾಡಿದೆ.

ಆ ದಿನ ಅಲ್ಲಿ ಸಂಗೀತ ಕಾರ್ಯಕ್ರಮ ಖ್ಯಾತ ಹಾಡುಗಾರರಾದ ವಿಧ್ವಾನ್ ಪಂಡಿತ್ ಶ್ರೀ ದೇವೇಂದ್ರ ಕುಮಾರ್ ಪತ್ತಾರವರಿಂದ ಏರ್ಪಡಿಸಲಾಗಿತ್ತು. ಅವರು ಈ ಲಾವಣಿ ಕವಿತೆಯನ್ನು ಮೆಚ್ಚಿ ತಮ್ಮ ಸುಶ್ರಾವ್ಯವಾದ ಕಂಠದಲ್ಲಿ ಅಲ್ಲೇ ಆ ಕ್ಷಣ ರಾಗ ಸಂಯೋಜನೆ ಮಾಡಿ ಹಾಡಿರುವುದು ಅತ್ಯಂತ ಖುಷಿ ತಂದಿತು.

ಹಾಗೂ ಅಲ್ಲಿ ಭಾಗವಹಿಸಿದ ಕವಿಗಳೆಲ್ಲರ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ಹೆಮ್ಮೆಯ ವಿಷಯ. ಭಾಗವಹಿಸಿದ ಎಲ್ಲಾ ಕವಿಗಳಿಗೂ ನೆನಪಿನ ಕಾಣಿಕೆಯಿತ್ತು ಶಾಲು ಹೊದಿಸಿ ಸ್ವತಃ ಗುರುಗಳೇ ಸನ್ಮಾನ ಮಾಡಿದರು. ಧನ್ಯೋಸ್ಮಿ ಗುರುವರ್ಯಾ🙏

****************

ಶ್ರೀ ಸಿದ್ದಾರೂಢರ ಚರಿತೆ(ಲಾವಣಿ)

ಸಿದ್ಧಾರೂಢರ ಜನನವು ಆಯಿತು
ಚಳಕಾಪುರದ ಗ್ರಾಮದೊಳು
ಬೀದರ ಜಿಲ್ಲೆಗೆ ಹೆಮ್ಮೆಯ ಪುತ್ರರು
ನಮ್ಮ ನಿಮ್ಮೆಲ್ಲರ ಸ್ವಾಮಿಗಳು||

ಚಿಕ್ಕ ವಯಸಿನಲಿ ಮನೆಯನು ತೊರೆದು
ಲೋಕ ಸಂಚಾರವ ಮಾಡಿಹರು
ಜನರ ಆಧ್ಯಾತ್ಮಿಕ ಮಾತಿಗೆ ಕಿವಿಯಾಗಿ
ಹುಬ್ಬಳ್ಳಿಗೆ ಬಂದು ನೆಲೆಸಿದರು||

ಪಂಚಾಕ್ಷರಿ ಮಂತ್ರವ ಪಠಿಸಲು ಇವರು
ಜನರಿಗೆ ಪ್ರೇರಣೆ ಮಾಡಿದರು
ಓಂ ನಮಃ ಶಿವಾಯ ಮಂತ್ರದ ಪಠನೆಯು
ಹಗಲೂ ರಾತ್ರಿಯಿಲ್ಲಿ ನಡೆದಿಹುದು||

ಜಾಗೃತ ಕೇಂದ್ರದ ಗದ್ದುಗೆ ನೋಡಲು
ಹುಬ್ಬಳ್ಳಿಗೆ ಬನ್ನಿ ನೀವೆಲ್ಲಾ
ಭಕ್ತಿಯಿಂದಲಿ ಗದ್ದುಗೆ ಮುಟ್ಟಲು
ನಿಮ್ಮಾಸೆಯೆಲ್ಲವು ಈಡೇರುವುದು||

ಅದ್ವೈತ ಸಿದ್ಧಾಂತದ ಮೂಲಕ ನಮಗೆ
ಧರ್ಮ ಮಾರ್ಗವ ಭೋದಿಸಿದರು
ಸುಧೀರ್ಘ ಜೀವನದುದ್ದಕೂ ತಮ್ಮಯ
ಭಕ್ತಿ ಜ್ಞಾನವನು ಗೈದಿಹರು||

ಹಿರಿಯ ಜೀವವನು ಕಳಕೊಂಡ ನಾವು
ಇಂದಿಲ್ಲಿ ಅವರನು ಸ್ಮರಿಸೋಣ
ಜ್ಞಾನ ದೀವಿಗೆಗೆ ದೀಪವ ಬೆಳಗಿ
ಶಾಂತಿಯ ಮಂತ್ರವ ಪಠಿಸೋಣ॥

ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ॥🙏

19-4-2019. 6.23pm