ಧಿಕ್ಕಾರವಿರಲಿ ರೈತ ವಿರೋಧಿ ಕಾಯಿದೆಗೆ.

ನಾನು ಮಲೆನಾಡಿನ ಒಂದು ಪುಟ್ಟ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವಳು. ತವರಲ್ಲಿ ಅಡಿಕೆ ವ್ಯವಸಾಯ ಮುಖ್ಯ ಬೆಳೆ.  ಆಗೆಲ್ಲಾ ರೈತಾಪಿ ಜೀವನವನ್ನೇ ನಂಬಿ ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿದ್ದ ರೈತರು ಇಂದು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಷಹರದಲ್ಲಿ ನೌಕರಿ ಮಾಡುವಷ್ಟರ ಮಟ್ಟಿಗೆ ಬೆಳೆಸಿದ ಪರಿಣಾಮ ಹಳ್ಳಿ ಬರಿದಾಗುತ್ತಿದೆ.  ಹಿರಿಯ ಜೀವಗಳು ತಮ್ಮ ಕೈಲಿ ವ್ಯವಸಾಯ ಮಾಡಲಾಗದೆ ಕೂಲಿಯಾಳುಗಳೂ ಸರಿಯಾಗಿ ಸಿಗದೇ ಒದ್ದಾಡುತ್ತಿದ್ದಾರೆ.  ಬರುವ ಕೂಲಿಯಾಳುಗಳು ಅವಕಾಶಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಣ್ಣಾರೆ ಕಂಡು ಹೊಟ್ಟೆ ಚುರ್ ಅನ್ನುತ್ತದೆ ತವರಿಗೆ ಹೋದಾಗಲೆಲ್ಲ. 

ಬೆಳಿಗ್ಗೆ ಒಂಬತ್ತು ಗಂಟೆಗೆ ಬರುವ ಕೆಲಸದವರಿಗೆ ಬೆಳಿಗ್ಗೆ ಮತ್ತು ಮಧ್ಯಾಹ್ನ ತಿಂಡಿ ಚಹಾ ಕೊಟ್ಟರೂ ಅವರು ಮಧ್ಯಾಹ್ನ ಮೂರು ಗಂಟೆಗೆಲ್ಲ ಕೆಲಸ ಬಿಟ್ಟು ಮನೆ ಹಾದಿ ಹಿಡಿಯುತ್ತಾರೆ.  ಇನ್ನು ಸಂಬಳ ದಿನಕ್ಕೆ ರೂ.400/- ರಿಂದ ರೂ.500/- ಕೊಡಬೇಕು. ಹೋಗುವಾಗ ಕವಳಕ್ಕೆ ಅಡಿಕೆ! ಮತ್ತೆ ಬಕ್ಷೀಸಾಗಿ ಹಾಲು, ಮಜ್ಜಿಗೆ  ತೋಟದಲ್ಲಿ ಬೆಳೆಯುವ ಬೆಳೆ ಕೊಡುವುದಕ್ಕೆ ಲೆಕ್ಕವೇ ಇಲ್ಲ.

ಮೊದಲಾದರೆ ಒಂದು ಬೆಳಿಗ್ಗೆ ಎಂಟು ಗಂಟೆಗೆ ಕೆಲಸಕ್ಕೆ ಬಂದರೆ ಸಂಜೆ ಆರು ಗಂಟೆಯವರೆಗೂ ಕೆಲಸ ಮಾಡುತ್ತಿದ್ದರು.  ಮಧ್ಯೆ ಅರ್ಧ ಗಂಟೆ ಊಟದ ಬಿಡುವು.  ಬೆಳಿಗ್ಗೆ ಒಂದು ಚಹಾ ಮಾತ್ರ ಕೊಡುವ ಪದ್ಧತಿ ಇತ್ತು. ಇನ್ನು ಸಂಬಳವೂ ಈಗಿನಷ್ಟು ಇರಲಿಲ್ಲ. 

ಈಗ ಅವರ ಹತ್ತಿರ ಮೊಬೈಲು ಟೂವೀಲರ್ ಟೀವಿ, ಫ್ರಿಡ್ಜ ಸರ್ವೇಸಾಮಾನ್ಯ ಬಿಡಿ. ಇನ್ನು ಇಷ್ಟು ಮುತುವರ್ಜಿಯಿಂದ ನೋಡಿಕೊಂಡರೂ ಆಗಾಗ ಕೆಲಸಕ್ಕೆ  ಇದ್ದಕ್ಕಿದ್ದಂತೆ ಗೈರು ಹಾಜರಿ.    ಅವರ ಬಿಡಾರದ ಹತ್ತಿರ ಹೋಗಿ ಮಸ್ಕಾ ಹೊಡೆದು ಕೆಲಸಕ್ಕೆ ಕರೆಯುವ ಸಂದರ್ಭವೂ ಇದೆ.

ಹಳ್ಳಿಯ ಸುತ್ತಮುತ್ತಲಿನ ಒಂದಿಷ್ಟು ಎಕರೆ ಪ್ರದೇಶ ಗೋಮಾಳ ಜಾಗವಾಗಿ ಸರ್ಕಾರ ಗೋವುಗಳಿಗೆ ಮೇಯಲು ಬಿಟ್ಟಿದ್ದು ಮುಂದಿನ ದಿನಗಳಲ್ಲಿ ಇದೇ ಜಾಗದಲ್ಲಿ ಸರ್ಕಾರವೇ ಜನತಾ ಮನೆ ಕಟ್ಟಿಕೊಟ್ಟು ಮನೆಗೊಂದು ಫ್ರೀ ವಿದ್ಯುತ್ ದೀಪದ ವ್ಯವಸ್ಥೆ ಮಾಡಿ ಸ್ವಂತ ಮನೆ ಇಲ್ಲದ ಕೂಲಿಕಾರರಿಗೆ ಹಂಚಿತು.  ಇವರುಗಳು ಆ ಮನೆಯ ಸುತ್ತಮುತ್ತ ಒಂದಿಷ್ಟು ಜಾಗ ವಡಾಯಿಸಿ ಬೆಲಿ ಹಾಕಿ ಬಾವಿ ತೋಡಿಕೊಂಡು ಕೊಟ್ಟಿಗೆನೂ ಕಟ್ಟಿ ಹಸು ಸಾಕಾಣಿಕೆ ತರಕಾರಿ ಹಣ್ಣು ಬೆಳೆಯುತ್ತಾ ಆ ಪ್ರದೇಶವನ್ನೆಲ್ಲ ಆಕ್ರಮಿಸಿ ಈಗ ಹಕ್ಕುಪತ್ರ ಕೂಡಾ ದೊರೆತು ಅದೇ ಒಂದು ಊರಾಗಿದೆ.  ಗೋಮಾಳ ಜಾಗ ಮಾಯವಾಗಿದೆ!  ಈಗಂತೂ ನಲ್ಲಿ ನೀರಿನ ಸೌಲಭ್ಯ ಮಾಡಿಕೊಟ್ಟಿದೆ ಸರ್ಕಾರ.

ಇನ್ನು ಹಳ್ಳಿಯ ಕೆಲವು ರೈತರು ತಮ್ಮ ಮನೆ ಖರ್ಚಿಗೆಂದು ಬೇಸಿಗೆಯಲ್ಲಿ ಹಲವು ತರಕಾರಿಗಳನ್ನು ಅವರಿವರ ಹೊಲದಲ್ಲಿ ಮನೆ ಜನರೇ ಸೇರಿ ಬೆಳೆಯುವ ಪದ್ಧತಿಯೂ ಇತ್ತು.  ಹೆಚ್ಚಾದ ತರಕಾರಿಗಳನ್ನು ಷಹರದಲ್ಲಿ ನಡೆಯುವ ವಾರದ ಸಂತೆಯಲ್ಲಿ ಮಾರಿ ಬಂದ ಅಲ್ಪ ಹಣದಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ತರುತ್ತಿದ್ದರು.  ಆದರೆ ಈಗ ಹೆಚ್ಚಾದ ತರಕಾರಿಗಳನ್ನು ಮಾರಲು ಷಹರದಲ್ಲಿ ಬೆಳಗಿನಿಂದ ಸಾಯಂಕಾಲದವರೆಗೂ ಕುಳಿತರೂ ಮಾರಲಾಗದೆ ಮತ್ತೆ ಹೊತ್ತು ತರಲಾಗದೇ ಸಿಕ್ಕ ಹೊಟೇಲಿಗೆ ಅವರು ಕೇಳಿದ ರೇಟಿಗೆ ಕೊಟ್ಟು ಬರುವ ಪರಿಸ್ಥಿತಿ ಎದುರಾದಾಗಿದೆ. ಅಂದರೆ ಸ್ಥಳೀಯ ರೈತರಿಗಿಲ್ಲ ಕಿಮ್ಮತ್ತು.  ಹೊರಗಿನಿಂದ ತರಕಾರಿಗಳು ಬರುತ್ತಿರಬಹುದೆಂಬ ಗುಮಾನಿ, ಶೈತ್ಯಾಗಾರದ ಕೊರತೆ ಹತ್ತು ಹಲವಾರು ಸಮಸ್ಯೆಗಳು ರೈತರು ಎದುರಿಸುತ್ತಲೇ ದಿನ ದೂಡುತ್ತಿದ್ದಾರೆ.   ಇತ್ತೀಚಿನ ವರ್ಷಗಳಲ್ಲಿ ತರಕಾರಿ ಬೆಳೆಯುವುದನ್ನೂ ನಿಲ್ಲಿಸಿಬಿಟ್ಟಿದ್ದಾರೆ.  “ಮನೆ ಖರ್ಚಿಗೆ ಪ್ಯಾಟಿಂದಲೇ ತರಕಾರಿ ತಂದರಾತು” ಎಂಬ ಮಾತುಗಳು ಹಳ್ಳಿಗಳಲ್ಲಿ ಹರಿದಾಡುತ್ತಿವೆ.  ಜೊತೆಗೆ ಕೆಲಸಗಾರರ ಕೊರತೆ ತೀವ್ರವಾಗಿದೆ ಹಳ್ಳಿಗಳಲ್ಲಿ.  ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಯಂತ್ರಗಳ ಸಹಾಯದಿಂದ ವ್ಯವಸಾಯ ಹೇಗೋ ಮಾಡುತ್ತಿದ್ದಾರೆ.  ಮಳೆಯ ಅನಾಹುತ, ರೋಗಗಳ ದಾಳಿ, ಕಳ್ಳರ ಕಾಟ, ಸೂಕ್ತ ಬೆಂಬಲ ಬೆಲೆ ಸಿಗದೇ ಇರುವುದು ಇತ್ಯಾದಿ ನಿತ್ಯವೂ ಆತಂಕದಲ್ಲೇ ಬದುಕುವಂತಾಗಿದೆ ರೈತರ ಗತಿ.

ಹೀಗೆ ಹಳ್ಳಿ ಹಂತ ಹಂತವಾಗಿ ಅಧೋಗತಿಗೆ ಬಂದಿರುವುದರ ಜೊತೆಗೆ ಈಗ ಬಂದಿರುವ ರೈತ ವಿರೋಧಿ ಕಾಯ್ದೆಯಿಂದಾಗಿ ಖಂಡಿತಾ ಹಳ್ಳಿ ಹಳ್ಳಿಯಾಗಿ ಇರೋದಿಲ್ಲ.  ಶ್ರೀಮಂತರ ಬಂಡವಾಳ ಹಳ್ಳಿಯ ಕಡೆ ಮುಖ ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ.

ಷಹರಕ್ಕೆ ಬಂದು ನೌಕರಿ ಮಾಡುತ್ತಿರುವ ಹಳ್ಳಿಯ ಮಕ್ಕಳು  ಹಿರಿಯರ ಪಿತ್ರಾರ್ಜಿತ ಆಸ್ತಿ ಮಾರಲಾಗದೇ ತಮ್ಮ ಮನಸ್ಸು ಬದಲಾಯಿಸಿ ಅಥವಾ ತಮ್ಮ ನಿವೃತ್ತಿಯ ದಿನಗಳಲ್ಲಾದರೂ ಹಳ್ಳಿಯಲ್ಲಿ ಬಂದು ನೆಲೆಸುತ್ತಿದ್ದರು ಕೆಲವರಾದರೂ.  ಆದರೆ ಈಗ ಬಂದಿರುವ ಕಾಯಿದೆಯಿಂದಾಗಿ ರೈತ ತನ್ನ ಆಸ್ತಿ ಮಾರಲು ಅನುವು ಮಾಡಿಕೊಟ್ಟಂತಾಗಿದೆ. 

ಈಗಾಗಲೇ ಎಷ್ಟೋ ರೈತರು ಸಿಟಿಗೆ ಹತ್ತಿರ ಇರುವ ಹೊಲ ಇತ್ಯಾದಿ ಜಾಗಗಳನ್ನು ಸೈಟಾಗಿ ಪರಿವರ್ತಿಸಿ ಮಾರುತ್ತಿದ್ದಾರೆ. ರೈತರಲ್ಲದ ಜನ ಇವುಗಳನ್ನು ಖರೀದಿ ಮಾಡಲಾಗದೇ ಕೈಕಟ್ಟಿದಂತಾಗಿತ್ತು.  ಈಗ ಇಂಥವರಿಗೆ ನಿರಾಳ ಆಗೋಯ್ತು.  ಹೀಗೆ ಆದರೆ ಮುಂದಿನ ದಿನಗಳಲ್ಲಿ ಬರೀ ಮನೆ ಸೈಟು ಕಾಣುತ್ತವೆ ಹೊರತೂ ನೀರಾವರಿ ಜಮೀನು,ಬೆಳೆ ಎಲ್ಲ ಮಂಗ ಮಾಯ.

ಇನ್ನೊಂದು ಮುಖ್ಯ ವಿಷಯ ವ್ಯವಸಾಯ ಮಾಡಲಾಗದ ರೈತ ತನ್ನ ಜಮೀನು ಮಾರಲು ಖಂಡಿತಾ ಮುಂದಾಗುತ್ತಾನೆ.  ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಶ್ರೀಮಂತರು ನೂರಾರು ಎಕರೆ ಜಮೀನು ಖರೀದಿಸಿ ವ್ಯವಸಾಯ ಶುರು ಮಾಡಿದರೆನ್ನಿ; ಇದರಿಂದ ದೇಶಕ್ಕೆ ವ್ಯವಸಾಯ ಉತ್ಪನ್ನಗಳು ಜಾಸ್ತಿ ಆಗಬಹುದು ಆದರೆ ಕೂಡಿಟ್ಟ ಹೊನ್ನು ಕೊನೆಯವರೆಗೆ ಸಾಕೇ?  ಜಮೀನು ಮಾರಿದ ರೈತ ಮತ್ತದೇ ಜಾಗದಲ್ಲಿ ಜೀತದಾಳಾಗಿ ದುಡಿಯಬೇಕಾದ ಪ್ರಮೇಯವೂ ಬರಬಹುದು.  ಇದಲ್ಲದೇ ಜಮೀನು ಕೊಂಡ ಮಾಲೀಕ ಕೆಲಸದವರನ್ನು ಎಲ್ಲೆಲ್ಲಿಂದಲೋ ಕರೆದುಕೊಂಡು ಬರುವುದರಿಂದ ಹಳ್ಳಿಯ ಪರಿಸರ ಸಂಪೂರ್ಣ ಹಾಳಾಗುವುದು ನಿಶ್ಚಿತ.  ಏಕೆಂದರೆ ಹಳ್ಳಿಯ ವಾತಾವರಣದಲ್ಲಿ ಅದರದೇ ಆದ ಕಟ್ಟುಪಾಡುಗಳಿಗೆ.  ಬದುಕುವ ರೀತಿ, ಹಬ್ಬಗಳನ್ನು ಆಚರಿಸುವ ರೀತಿ, ಭಾಷೆ ಇತ್ಯಾದಿಗಳಿಗೆ ಧಕ್ಕೆ ಬರಬಹುದು.  ಆದುದರಿಂದ
ನಿಜಕ್ಕೂ ಈ ಕಾಯಿದೆ ಮಾರಕವಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ. ಇದರ ಬದಲು ಆಯಾ ಪ್ರದೇಶಗಳಿಗೆ ಭೇಟಿಯಿತ್ತು ರೈತರ ಕುಂದು ಕೊರತೆ ಅರಿತು ಪರಿಹಾರ ನೀಡಲು ಸಮೀತಿ ರಚಿಸಿ ರೈತರು ಉದ್ಧಾರವಾಗಲು ಸರ್ಕಾರ ನೆರವಾಗಬೇಕು.

ರೈತರ ಚಳುವಳಿಗೆ ನಾನೂ ಬೆಂಬಲ ಕೊಟ್ಟು ಹಳ್ಳಿಯ ನಿಜ ಸ್ಥಿತಿಯ ಅರಿವು ಸಂಕ್ಷಿಪ್ತವಾಗಿ ಬರೆದಿದ್ದೇನೆ.

ಧಿಕ್ಕಾರವಿರಲಿ ರೈತ ವಿರೋಧಿ ಕಾಯ್ದೆಗೆ.  ದಯವಿಟ್ಟು ಭಾರತ ಹಳ್ಳಿಗಳ ದೇಶ ಎಂಬುದನ್ನು ಹೊಸಕಿ ಹಾಕಬೇಡಿ.  ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಿಷ್ಟೇ ದಯವಿಟ್ಟು ನೀವು ತರುವ ರೈತ ಸಂಬಂಧಿ ಕಾಯಿದೆ ಏನೇ ಇರಬಹುದು ಒಮ್ಮೆ ರೈತ ಮುಖಂಡರಲ್ಲಿ ಚರ್ಚಿಸಿ ಅವರ ಒಪ್ಪಿಗೆ ಪಡೆದು ಜಾರಿಗೊಳಿಸಿ.  ಅನ್ನ ಆಹಾರ ನಿದ್ದೆ ಬಿಟ್ಟು ಇರುವ ಕೆಲಸ ಬದಿಗೊತ್ತಿ ಚಳುವಳಿ ಮಾಡುವ ಹಂತಕ್ಕೆ ಪದೇ ಪದೇ ದೂಡಬೇಡಿ.   ನಾವು ತಿನ್ನುವ ಪ್ರತೀ ಅನ್ನದ ಅಗುಳಲ್ಲೂ ರೈತನ ಬೆವರಿದೆ!

25-9-2020. 8.50pm✍️

ಹೀಗೊಂದು ಅನಿಸಿಕೆ

ಮೊದಲಿನಂತೆ ಒಟ್ಟು ಕುಟುಂಬ ಛಿದ್ರವಾದ ಪರಿಣಾಮ ಕುಟುಂಬದವರನ್ನೇ ಪರಕೀಯರಂತೆ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾನು ತನ್ನದು ತನ್ನ ಮನೆ ಮಕ್ಕಳು ಮೊಮ್ಮಕ್ಕಳು ಇವಿಷ್ಟೆ ಅವರ ಪ್ರಪಂಚ. ಸ್ವಾರ್ಥವೆಂಬುದು ಪ್ರಧಾನವಾಗಿದೆ. ಕುಟುಂಬದಲ್ಲಿರುವ ಅಸಹಾಯಕತೆಯ ಮಂದಿಗೆ ಹೀಗಾದರೆ ಯಾರು ದಿಕ್ಕು? ಹೇಗೆ ಸಮಸ್ಯೆಗಳನ್ನು ನಿಭಾಯಿಸಬಲ್ಲರು?

ಒಂದು ಸಂಸಾರ ಅಂದರೆ ಆ ಕುಟುಂಬದ ಎಲ್ಲ ಜನರಿಗೂ ಸಂಬಂಧಪಟ್ಟಿರುತ್ತದೆ. ಪಟ್ಟಿರಲೇ ಬೇಕು. ಹಾಗಿದ್ದರೇನೆ ಚಂದ. ಅದಿಲ್ಲವಾದರೆ ಮುಂದಿನ ಪೀಳಿಗೆಯಲ್ಲಿ ಮಕ್ಕಳು ಹೆಚ್ಚೆಚ್ಚು ಒಂಟಿಯಾಗುತ್ತ ಹೋಗುತ್ತಾರೆ. ಹೆತ್ತವರು ತಮ್ಮ ಮಕ್ಕಳಿಗೆ ನಡೆ, ನುಡಿ,ವಿದ್ಯೆ ಕಲಿಸಿ ಜೀವನ ರೂಪಿಸಿಕೊಳ್ಳಲು ಕಾಳಜಿ ವಹಿಸಬಹುದು. ಆದರೆ ಕುಟುಂಬದಲ್ಲಿ ಹೇಗಿರಬೇಕು, ಜನರೊಂದಿಗೆ ಮುಕ್ತ ಮನಸ್ಸಿನಿಂದ ಬೆರೆಯುವುದು, ಮಾತಾಡುವ ರೀತಿ, ಗೌರವ, ಹಬ್ಬ ಹುಣ್ಣಿಮೆ ಒಟ್ಟಾಗಿ ಮಾಡುವುದರಿಂದ ಕುಟುಂಬದಲ್ಲಿ ಸಾಮರಸ್ಯ ಬೆಳೆಯುವುದು ಮಕ್ಕಳಿಗೆ ಎಲ್ಲ ಕಲಿಸುವುದು ಈ ಕುಟುಂಬದಿಂದ ಮಾತ್ರ ಸಾಧ್ಯ. ಕಷ್ಟ ಸುಖದ ಅರಿವಾಗುವುದು. ಒಬ್ಬರನ್ನೊಬ್ಬರು ಆಗಾಗ ಸಂಧಿಸುತ್ತಿದ್ದರೆ ನಾನು ನಮ್ಮವರು ಅನ್ನುವ ಭಾವನೆ ಬೆಳೆಯಲು ಅಡಿಪಾಯ. ಆದರೆ ಈಗಿನ ದಿನಗಳಲ್ಲಿ ಅವಕಾಶ ಕಡಿಮೆ. ಎಲ್ಲೋ ಅಲ್ಲೊ ಇಲ್ಲೊ ಅನ್ನುವಂತೆ ಕೆಲವು ಕುಟುಂಬಗಳು ಇರಬಹುದು. ಆದರೆ ತೀರಾ ಅಪರೂಪ.

ಅಂತಹ ಒಂದು ಕುಟುಂಬದ ಪರಿಚಯ ಒಡನಾಟ ಒಮ್ಮೆ ನನ್ನ ಅನುಭವಕ್ಕೂ ಬಂದಿತ್ತು. ಅವರೊಡನಿದ್ದದ್ದು ಎರಡೇ ದಿನವಾದರೂ ಅವರ ಮಾತು,ನಡವಳಿಕೆ ಅಪಾರ ಸಂತೋಷ ತಂದಿತ್ತು. ಅವರಿರೋದೇ ಹಾಗೆ. ಇಲ್ಲಿ ಮನುಷ್ಯನಿಗಿರಬೇಕಾದ ಅಪರೂಪದ ಸ್ವಭಾವ ಎದ್ದು ಕಾಣುತ್ತಿತ್ತು. ಪ್ರತಿಯೊಂದು ಕಷ್ಟ ಸುಖಕ್ಕೆ ಒಬ್ಬರಿಗೊಬ್ಬರು ನೆರವಾಗುತ್ತ ತಾವು ಯಾವ ರೀತಿ ತಮ್ಮ ಕುಟುಂಬದಲ್ಲಿ ಅನ್ಯೋನ್ಯವಾಗಿದ್ದೇವೆ ಎಂಬುದನ್ನು ವಿವರಿಸಿದಾಗ ಈ ಕಾಲದಲ್ಲಿ ಇಂತಹ ಕುಟುಂಬವೂ ಇದೆಯಾ?ಎಂದು ಪ್ರಶ್ನಿಸಿಕೊಂಡಿದ್ದೆ. ನಿಜಕ್ಕೂ ಬಹಳ ಸಂತೋಷವಾಗಿತ್ತು.

ಹೀಗೆ ಎಲ್ಲ ಮನುಷ್ಯರ ಸ್ವಭಾವ ಇದ್ದಿದ್ದರೆ ಬಹುಶಃ ಸಂಸಾರದಲ್ಲಿ ಒಂಟಿಯಾದರೂ ಆ ಭಾವನೆ ಕಾಲಿಕ್ಕಲು ಸಾಧ್ಯವೇ ಇರುತ್ತಿರಲಿಲ್ಲ. ಮನುಷ್ಯನ ಆಯಸ್ಸು, ಆರೋಗ್ಯ ಎಲ್ಲ ಕೇವಲ ಕೇವಲ ಪ್ರೀತಿ ಮಾತ್ರ ಕೊಡಲು ಸಾಧ್ಯ. ಯಾವಾಗ ತಾನು ಅಸಹಾಯಕ, ತಾನು ಒಂಟಿ, ತನ್ನ ಸಹಾಯಕ್ಕೆ ಯಾರೂ ಇಲ್ಲ, ಎಲ್ಲ ಜವಾಬ್ದಾರಿ ತಾನೊಬ್ಬನೇ ಹೇಗೆ ನಿಭಾಯಿಸಲಿ, ಎಲ್ಲರೂ ಅವರವರದೇ ಆದ ಸಂಸಾರ ಕಟ್ಟಿಕೊಂಡಿದ್ದಾರೆ ಹೀಗೆ ಹಲವಾರು ಚಿಂತೆಗಳು ಕಾಡುತ್ತ ನಡೆದಂತೆ ಮನಸ್ಸು ದುರ್ಬಲವಾಗಿ ಅದು ದೇಹದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಆರೋಗ್ಯಕ್ಕೆ ಮನಸ್ಸೇ ಮುಖ್ಯ ಕಾರಣ. ಚಿಂತೆ ಮನಸ್ಸನ್ನು ಆಳಿದಾಗ ದೇಹ ಕೃಷವಾಗಿ ಸುಕ್ಕಾಗುತ್ತ ವಯಸ್ಸು ಎದ್ದು ಕಾಣಲು ಶುರುವಾಗುತ್ತದೆ. ನೀವು exercise, ಯೋಗ, ವಾಕಿಂಗ್ ಏನೇ ಮಾಡುತ್ತಿರಬಹುದು ಆದರೆ ಈ ನಿಜವಾದ ಶಾಂತಿ ಕೊಡುವುದು ಒಡನಾಡಿಗಳ ಪ್ರೀತಿ ಬಾಂಧವ್ಯ ಮಾತ್ರ. ಇದು ಎಷ್ಟು ದುಡ್ಡು ಕೊಟ್ಟರೂ ಸಿಗುವುದಲ್ಲ ಅಲ್ಲವೇ?

30-8-2020 7.26pm

ಏಕೆ ಹೀಗೆ ಕಾಲಚಕ್ರ?
ಮದುವೆ ಎನ್ನುವುದು ಅನಿವಾರ್ಯ ಎಂಬ ನಂಬಿಕೆಯಿತ್ತು ನಮ್ಮ ಕಾಲದಲ್ಲಿ.  ಆಗೆಲ್ಲಾ ಮದುವೆ ವಯಸ್ಸು ಬಂದಂತೆ ಹೆತ್ತವರಲ್ಲದೇ ಮದುವೆಯಾಗುವವರೂ ಬಹಳ ತಲೆ ಕೆಡಿಸಿಕೊಳ್ಳುತ್ತಿದ್ದರು.  ಮದುವೆಯಾಗುವ ಗಂಡಿಗೆ ಉತ್ತಮ ಕೆಲಸ ಇರಲಿ ಬಿಡಲಿ, ಹೆತ್ತವರನ್ನು ನೋಡಿಕೊಳ್ಳುವವರು ಇದ್ದಾರಾ ತಾವು ಮದುವೆಯಾಗಿ ಹೋದರೆ ಇತ್ಯಾದಿ ವಿಷಯಗಳಿಗೆ ಬರೀ ಹೆಣ್ಣು ಹುಟ್ಟಿದ ಮನೆಯಲ್ಲಿ ಹೆಣ್ಣುಮಕ್ಕಳು ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಲೂ ಇರಲಿಲ್ಲ.   ಸರಿ ವಯಸ್ಸಿನಲ್ಲಿ ಮದುವೆ ಆಗಿಬಿಡಬೇಕು ಅಷ್ಟೇ.  ಮದುವೆನೇ ಆಗಿಲ್ಲ ಅಂದ್ರೆ ಹೇಗೆ ಬದುಕೋದು ಒಬ್ಬಳೇ ಅಂತ ಗಾಬರಿಯೂ ಇತ್ತು ಹೆಣ್ಣು ಮಕ್ಕಳಲ್ಲಿ.  ಹಾಗೆ ಹೆಣ್ಣಾಗಲಿ ಗಂಡಾಗಲಿ ಮದುವೆ ಆಗಿರಲಿಲ್ಲ ಅಂದರೆ ಅವರ ಬದುಕು ನಶ್ವರ ಅನ್ನುವ ಹಾಗೆ ಜನರ ವರ್ತನೆ ಕೂಡಾ.  ಮದುವೆಯಾಗದವರನ್ನು ನೆನಪಿಸಿಕೊಂಡಾಗಲೆಲ್ಲ ಅಯ್ಯೋ ಅವನಿ/ಳಿಗೆ ಇನ್ನೂ ಮದುವೆನೇ ಆಗಿಲ್ವಂತೆ….ಇಲ್ಲಾ ಮದುವೆ ಆಯ್ತಾ? ಎಂಬ ಪ್ರಶ್ನೆ, ಒಂದು ರೀತಿ ವ್ಯಂಗ್ಯವಾಗಿ ಮಾತಾಡೋದು.  ಈ ರೀತಿಯ ಮಾತುಗಳು ಈಗಲೂ ಮುಂದುವರೆದಿದೆ.

ಹಿಂದೆ ಈ ರೀತಿಯ ಜನರ ನೋಟ ವ್ಯಂಗ ಮಾತುಗಳಿಗೆ ಹೆದರಿಯೋ ಇಲ್ಲಾ ಬೇಸತ್ತೋ ವಧು ವರರು ವರಾನ್ವೇಷಣೆಯಲ್ಲಿ ಹೆತ್ತವರಿಗೆ ಹೆಚ್ಚಿನ ಸಾಥ್ ನೀಡುತ್ತಿದ್ದರು.  ಆಯ್ಕೆಯ ವಿಷಯದಲ್ಲಿ ಹೀಗೆಯೇ ಇರಬೇಕೆನ್ನುವ ಷರತ್ತು ಹಾಕುವವರು ಅಪರೂಪವಾಗಿತ್ತು.  ಜನರಾಡುವ ಮಾತಿಗೆ ಭಯ ಪಡುತ್ತಿದ್ದರು.  ಆಗ ಹೆಣ್ಣಿನ ಸಂಖ್ಯೆ ಜಾಸ್ತಿ ಇತ್ತು.  ಗಂಡುಗಳು ಹೆಣ್ಣಿನ ಆಯ್ಕೆ ವಿಷಯದಲ್ಲಿ ನಾನಾ ರೀತಿಯ ಪರೀಕ್ಷೆ ಮಾಡುತ್ತಿದ್ದದ್ದು ಹೆಣ್ಣು ಹೆತ್ತವರ ಒದ್ದಾಟ, ಗೋಳು ಸಾಮಾನ್ಯವಾಗಿತ್ತು. ಆದರೆ ಈಗಿನ ಯುವಕ ಯುವತಿಯರು ಇದಕ್ಕೆಲ್ಲ ಕ್ಯಾರೇ ಅನ್ನುವುದಿಲ್ಲ.  ನನಗಿಷ್ಟವಾಗುವವರು ಸಿಗುವವರೆಗೆ ಮದುವೆ ಆಗುವುದಿಲ್ಲ ಎಂದು ಪಟ್ಟು ಹಿಡಿದು ಕೂತವರು ಅನೇಕರು.  ಆಗದಿದ್ದರೂ ಪರವಾಗಿಲ್ಲ.  ನನ್ನ ಜೀವನ ನನಗೆ.  ಮೂರನೆಯವರು ಮೂಗು ತೂರಿಸುವ ಅಗತ್ಯ ಇಲ್ಲ ಎಂಬ ನಿರ್ಧಾಕ್ಷಿಣ್ಯದ ಮಾತು.

ಇನ್ನೊಂದು ಈಗ ಹೆಚ್ಚಿನ ಮಕ್ಕಳು ಅದು ಗಂಡಾಗಲಿ ಹೆಣ್ಣಾಗಲಿ  ವಿದ್ಯಾವಂತರೇ ಹೆಚ್ಚು.  ಹೆಣ್ಣು ಗಂಡುಗಳ ಅನುಪಾತದ ವ್ಯತ್ಯಾಸ ಆಗಿದೆ ಈಗ.  ತಿಳುವಳಿಕೆ ಜಾಸ್ತಿ ಆಗಿದೆ.  ಜೀವನದ ಬಗ್ಗೆ ಮುಂದಿನ ಆಗು ಹೋಗುಗಳ ಬಗ್ಗೆ ವಿಚಾರ ಮಾಡುವ ಶಕ್ತಿ ಈಗಿನ ಮಕ್ಕಳಲ್ಲಿ ಜಾಸ್ತಿ.  ತಾವು ಎಂತಹವರನ್ನು ಆಯ್ಕೆ ಮಾಡಿಕೊಳ್ಳಬೇಕು, ತಮ್ಮ ಜೀವನ ಹೇಗಿರಬೇಕು, ಮದುವೆ ಅನ್ನೋದು ಅಷ್ಟು ಮುಖ್ಯವಾ, ಒಂಟಿಯಾಗಿ ಬದುಕ ಬಲ್ಲೆನಾ? ಎಂತೆಂಥವರನ್ನೋ ಮದುವೆ ಆಗಿಲ್ಲಾ ಎಂದು ಮದುವೆ ಆಗಿ ಕಷ್ಟ ಪಡೋದಕ್ಕಿಂತ ಹೀಗೆ ಇದ್ದುಬಿಡೋದೇ ವಾಸಿ, ಇಷ್ಟು ವರ್ಷ ಸಾಕಿ ಸಲಹಿದ ಅಪ್ಪ ಅಮ್ಮನ ಬಿಟ್ಟು ಕಂಡೂ ಕಾಣದವನನ್ನು ಮದುವೆ ಆಗಿ ಕೊನೆಗೆ ಇವರನ್ನು ನೋಡಿಕೊಳ್ಳುವವರು ಯಾರು? ಇತ್ಯಾದಿ ಇತ್ಯಾದಿ ಯೋಚಿಸುವ ಮಕ್ಕಳೇ ಹೆಚ್ಚು.

ಆದುದರಿಂದ ಅವರಿಷ್ಟಪಟ್ಟವರು ಸಿಕ್ಕು ಮದುವೆ ಆದರೆ ಚೆಂದ.  ಸಂಸಾರದಲ್ಲಿ  ಆ ಕಡೆ ಈ ಕಡೆ ಇದ್ದಿದ್ದೇ.  ಆದರೆ ತೀರಾ ವ್ಯತಿರಿಕ್ತವಾದರೆ ಅದು ಹೆಚ್ಚು ದಿನ ಬಾಳುವುದಿಲ್ಲ.  ಆದುದರಿಂದ ಇಂತಹವರು ಒಂಟಿಯಾಗಿ ಬದುಕುವುದೇ ವಾಸಿ.

ಇಂತಹ ಪರಿಸ್ಥಿತಿಯಲ್ಲಿ ಹೆತ್ತವರು ಕೂಡಾ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಮಾನಸಿಕ ಸ್ಥೈರ್ಯ ಕೊಟ್ಟು ಮಕ್ಕಳ ವಿಷಯದಲ್ಲಿ ಮೂರನೆಯವರು ಮೂಗು ತೂರಿಸದಂತೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.  ಆರ್ಥಿಕವಾಗಿ ಸದೃಢಗೊಳಿಸುವ ಪ್ರಯತ್ನ, ಸೆಲ್ಫ್ ಕಾನ್ಫಿಡೆನ್ಸ್, ಇಂಡಿಪೆಂಡೆಂಟ್ ವ್ಯಕ್ತಿತ್ವ ಮಕ್ಕಳ ಬೆಳೆಸುವುದರಲ್ಲಿ ಪೋಷಿಸುತ್ತಾ ಬಂದರೆ ನಮ್ಮ ಮಕ್ಕಳು  ಸದೃಢ ಜೀವನ ನಡೆಸುವುದರಲ್ಲಿ ಯಾವ ಸಂಶಯವೂ ಇಲ್ಲ.  ಮದುವೆ ಆಗಬೇಕು ನಿಜ.  ಆದರೆ ಒದ್ದಾಟದ ಜೀವನ ಎಷ್ಟು ಸರಿ?

ಈ ರೀತಿಯ ಬೆಳವಣಿಗೆ ಈಗೀಗ ಲೀವಿಂಗ್ ಟುಗೆದರ್ ಎಂಬ ಹೊಸ ವರಸೆ ಹುಟ್ಟಿಕೊಳ್ಳಲು ಕಾರಣವಾಗಿದೆ ನವ ಪೀಳಿಗೆಯಲ್ಲಿ.  ಇದು ಅಭದ್ರತೆಯ ಜೀವನ ಎಂದು ಗೊತ್ತಿದ್ದೂ ಪ್ರೀತಿಯ ಮುಖವಾಡದೊಳಗೆ ಸೆರೆಸಿಕ್ಕ ಮನಸ್ಸು ಹೊಸದರಲ್ಲಿ ತಾವೆನೋ ಸಾಧಿಸಿಬಿಟ್ಟೆವು ಅನ್ನುವ ಹುಸಿ ವಿಶ್ವಾಸ.  ಇಬ್ಬರಲ್ಲೂ ಒಂದೇ ರೀತಿಯ ಭಾವನೆ ದೃಡ ಮನಸ್ಸು ಇದ್ದರೆ ಪರಸ್ಪರರಲ್ಲಿ ಪ್ರೀತಿ ಉಳಿಸಿಕೊಂಡು ಹೋಗುತ್ತದೆ.  ಮದುವೆಯಾಗದಿದ್ದರೂ ಒಟ್ಟಾಗಿ ಬದುಕುತ್ತಾರೆ.  ಆದರೆ ಇದು ತೀರಾ ಅಪರೂಪ.  ಬೆರಳೆಣಿಕೆಯಷ್ಟು ಅಷ್ಟೇ. 

ಅದಿಲ್ಲವಾದರೆ  ಈ ರೀತಿಯ ಸಂಬಂಧದಲ್ಲಿ ಸ್ವಾತಂತ್ರ್ಯ ಹೆಚ್ಚು ಇರುವುದರಿಂದ ಮತ್ತು ಕಾನೂನಿನ ಕಟ್ಟಳೆಯಿಲ್ಲದಿರುವುದರಿಂದ ಇಬ್ಬರೂ ಸರ್ವಸ್ವತಂತ್ರರಾಗಿರುವುದರಿಂದ ಯಾವ ಕ್ಷಣದಲ್ಲಾದರೂ ಇಬ್ಬರಲ್ಲಿ ಒಬ್ಬರು ಮನಸ್ಸು ಬದಲಾಯಿಸಬಹುದು.  ಈ ಒಂದು ಆತಂಕದಲ್ಲೇ ಬದುಕುವ ಇವರು ನಿತ್ಯವೂ ಹೆಚ್ಚು ಅಧೀರರಾಗಿರುವುದಲ್ಲದೇ ಮನಶ್ಶಾಂತಿಯನ್ನು ಕಳೆದುಕೊಂಡು ಬಿಟ್ಟಿರುತ್ತಾರೆ.  ವೈವಾಹಿಕ ಜೀವನದಂತೆ ಸಂಬಂಧ ಏರ್ಪಟ್ಟಿದ್ದು ಕೊನೆಗೆ ಸಂಬಂಧ ಮುರಿದಾಗ ಸಮಾಜದಲ್ಲಿ ಹೆಣ್ಣು ಹೆಚ್ಚಿನ ನಿಂದನೆಗೆ ಗುರಿಯಾಗುತ್ತಾಳೆ.  ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟು ಬದುಕುತ್ತಿದ್ದರೂ ಇಬ್ಬರಲ್ಲೂ ಇದೊಂದು ಕರಾಳ ನೆನಪಾಗಿ ಕಾಡುವುದು ಅಷ್ಟೇ ಸತ್ಯ.

ಆದುದರಿಂದ ಆದರೆ ಮದುವೆಯಾಗಿ ಒಟ್ಟಿಗೆ ಬದುಕಬೇಕು ಇಲ್ಲಾ ಯಾವ ಕಾಮನೆ ಪ್ರೀತಿಯ ಪಾಶಕ್ಕೆ ಬಲಿಯಾಗದೇ ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬದುಕಬೇಕು.  ಹೊರತೂ ವ್ಯಭಿಚಾರದ ಜೀವನಕ್ಕೆ ಬಲಿಯಾಗಬಾರದು. ಹೆತ್ತವರಿಗೆ, ಬಂಧು ಬಾಂಧವರಿಗೆ, ಸಮಾಜಕ್ಕೆ ಹೊರೆಯಾಗಿ ಬದುಕು ನಡೆಸಬಾರದು.  ಮನುಷ್ಯನಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸ ಇದೇ ಎಂಬುದು ಅರಿತಿದ್ದರೆ ಒಳಿತು.

ಮದುವೆಯಾಗಿ ಮಕ್ಕಳನ್ನು ಪಡೆದು ಸಂಸಾರ ಬಂಧನದಲ್ಲಿ ಬದುಕುವುದು ಒಂದು ಜೀವನವಾದರೆ ಮದುವೆಯಾಗದೇ ಮನಸ್ಸು ಹಿಡಿತದಲ್ಲಿ ಇಟ್ಟುಕೊಂಡು ಆತ್ಮಸ್ಥೈರ್ಯದಿಂದ ಸ್ವತಂತ್ರ ವಾಗಿ ಬದುಕುವುದು ಮತ್ತೊಂದು ಜೀವನ.  ಮದುವೆಯಲ್ಲಿ ಸಂಸಾರ ಸುಖ ಮಕ್ಕಳು ಮೊಮ್ಮಕ್ಕಳ ಸುಖ ಕಂಡರೆ ಇವುಗಳನ್ನೆಲ್ಲ ತ್ಯಜಿಸಿ ಇನ್ನೊಂದು ಲೋಕ ತಾವೇ ತಮಗಿಷ್ಟವಾದ ರೀತಿಯಲ್ಲಿ ಸೃಷ್ಟಿಸಿಕೊಳ್ಳಬೇಕು.

ಉದಾಹರಣೆಗೆ ಹಲವರಿಗೆ ದೇಶ ಸುತ್ತಿ ಕೋಶ ಓದಬೇಕು ಎಂತಿದ್ದರೆ ಇನ್ನು ಕೆಲವರಿಗೆ ಪ್ರಾಣಿ ಪ್ರಿಯರಿರುತ್ತಾರೆ. ಮತ್ತೆ ಕೆಲವರಿಗೆ ಅನಾಥ ಮಕ್ಕಳ ಮೇಲೆ ವ್ಯಾಮೋಹ ಹಾಗೆ ಕೆಲವರಿಗೆ ಸಮಾಜದ ಬಗ್ಗೆ ಕಾಳಜಿ ತಾನೇನಾದರೂ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂಬ ತುಡಿತ  ಇತ್ಯಾದಿ.  ಇಂತಹ ಮನಸ್ಸಿರುವವರು ಈ ನಿಟ್ಟಿನಲ್ಲಿ ಮುಂದುವರಿದಲ್ಲಿ ಮನಸ್ಸಿಗೂ ನೆಮ್ಮದಿ ಸಮಾಜದಲ್ಲೂ ಗೌರವ ವ್ಯಕ್ತಿಯಾಗಿ ಬಾಳಬಹುದು.
 
ಮನುಷ್ಯನಿಗೆ ಆಸೆಗಳು ಹಲವಾರು.  ಕನಸುಗಳ ಮಹಲು ರಾರಾಜಿಸುವುದು ಯೌವ್ವನದ ದಿನಗಳಲ್ಲಿ.  ಅದು ಈಡೇರದಾಗ ಹತಾಶರಾಗಿ ಮನಸ್ಸು ಕೆಡಿಸಿಕೊಳ್ಳದೆ ನಿಧಾನವಾಗಿಯಾದರೂ ತಮ್ಮ ವ್ಯಕ್ತಿತ್ವ ಬದಲಾಯಿಸಿಕೊಳ್ಳುತ್ತ ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸಬೇಕು.  ನಮಗೆ ನಾವೇ ಶತ್ರು ನಮಗೆ ನಾವೇ ಮಿತ್ರ ಎಂಬ ನಾಣ್ಣುಡಿ ಸದಾ ಗಮನದಲ್ಲಿರಲಿ. ಆದುದರಿಂದ ಮದುವೆನೇ ಜೀವನವಲ್ಲ ಅಥವಾ ಮದುವೆಯಾಗದಿರುವವರು ಯಕ್ಕಶ್ಚಿತರಲ್ಲ.  ಅದರಾಚೆಗೂ ಜೀವನ ಇದೆ.  ಆದರೆ ಜೀವನ ಆಯ್ದುಕೊಳ್ಳುವಾಗ ಯೋಚಿಸಿ ಮುನ್ನಡಿಯಿಡುವುದು ಉತ್ತಮ.


20-3-2020.  3.40pm

ಪ್ರೀತಿಯೆಂಬ ಮಾಯೆಪ್ರೀತಿ ಎಂದರೆ ಹೃದಯದ ಹಸಿವು.  ಎಲ್ಲ ಭಾವಗಳ ಮೂಲ.  ಇದನ್ನು ಬಯಸದ ಮನುಷ್ಯ ಜಗತ್ತಿನಲ್ಲೇ ಇಲ್ಲ.  ಹೆತ್ತವರ ಪ್ರೀತಿ, ಹೆತ್ತವರಿಗೆ ಮಕ್ಕಳ ಪ್ರೀತಿ, ಅಕ್ಕ ತಂಗಿಯರ ಪ್ರೀತಿ, ಅಣ್ಣ ತಮ್ಮನ ಪ್ರೀತಿ, ಗೆಳೆಯರ ಪ್ರೀತಿ, ಗಂಡ ಹೆಂಡತಿಯ ಪ್ರೀತಿ ಹೀಗೆ ಹೇಳುತ್ತ ಹೋದರೆ ಮುಗಿಯದ ಕಡಲು.  ಆ ದೇವರನ್ನೂ ಅಥವ ಕಾಣದ ಶಕ್ತಿ ಅಂತ ನಂಬಿಕೊಂಡಿರೋದನ್ನೂ ಅದೆಷ್ಟು ಪ್ರೀತಿ ಮಾಡುತ್ತೇವೆ.  ಹಾಗೆ ಪೃಕೃತಿ, ಪ್ರಾಣಿ  ಇತ್ಯಾದಿ. 

ಎಲ್ಲವೂ ಪ್ರೀತಿನೆ.  ಆದರೆ ಅವುಗಳೊಂದಿಗಿನ ಅವಿನಾಭಾವ ಸಂಬಂಧ, ಭಾವನೆಗಳು ಮನಸ್ಸನ್ನು ಕಲಕುವ ರೀತಿ ನಿಜಕ್ಕೂ ಅದ್ಭುತ.  ಇರುವಾಗ ಅದೆಷ್ಟು ಖುಷಿ, ಇಲ್ಲದಾಗ ಅದೆಷ್ಟು ದುಃಖ.  ಅಗಲಿಕೆಯ ನೋವಿನಲ್ಲಿ ಬೆಂದೇ ಹೋಗುವಷ್ಟು ತೀವ್ರತೆ.  ಅತ್ತು ಅತ್ತು ಕಣ್ಣು ಕೆಂಪಾಗಿ, ತಲೆ ಭಾರವಾಗಿ ಇನ್ನೂ ಏನೇನೊ ಆಗಿ ಒಮ್ಮೊಮ್ಮೆ ಬದುಕೆ ಸಾಕಪ್ಪ ಅನ್ನುವಷ್ಟು ಹಿಂಸೆ ಕೊಡುವ ಒಂದು ಅದ್ಭುತ ಮಾಯೆ.

ಹರೆಯದ ಹೆಬ್ಬಾಗಿಲು ತೆರೆದಿರುವ ಗಳಿಗೆಗೆ ಈ ಪ್ರೀತಿಯೆಂಬ ಮಾಯೆ ಸುತ್ತಿಕೊಳ್ಳುತ್ತ ಬರುವಾಗ ಕಗ್ಗಂಟಾಗಲು ಬಿಡದೆ ತಡೆದು ನಿಲ್ಲಿಸುವ ತಿಳುವಳಿಕೆಯ ಬತ್ತಿ ನಮಗೆ ನಾವೆ ಹಚ್ಚಬೇಕು.  ಮಧುರವಾದ ಪ್ರೀತಿ ಯಾವತ್ತೂ ಹಾಳಲ್ಲ.  ಕೆಟ್ಟದ್ದೂ ಅಲ್ಲ.  ಅದಕ್ಕೊಂದು ಪಲ್ಲಕ್ಕಿಯಲ್ಲಿ ಸ್ಥಾನವಿದೆ.  ಆ ಗೌರವ ಕಾಪಾಡಿಕೊಂಡು ಕಲ್ಮಶದ ಗಾಳಿಯ ಧೂಳನ್ನು ಆಗಾಗ ತಿಳುವಳಿಕೆಯ
ಲಗಾಮು ಹಾಕಿ ಒರೆಸುತ್ತಿರಬೇಕು.

ಪ್ರೀತಿಯ ಹೊಡೆತದ ನೋವು ಹೇಗಿರುತ್ತದೆ.  ಇದರಿಂದ ಹೇಗೆ ಹೊರಗೆ ಬರಬೇಕು ಅನ್ನುವ ಪ್ರಶ್ನೆ ಅನುಭವಿಸಿದ ಜೀವಕ್ಕೆ ಮಾತ್ರ ಗೊತ್ತು.  ಆದರೆ ಇದರಿಂದ ಹೊರಗೆ ಬರುವ ಈ ಪ್ರಯತ್ನ ಅನ್ನೋದಿದೆಯಲ್ಲ ಅದರ ಮುಂದೆ ಯಾವುದೂ ಲೆಕ್ಕಕ್ಕೆ ಇಲ್ಲ.

ಮನಸ್ಸಿನ ನಿಧಾ೯ರ ಓಮ್ಮೆ ಗಟ್ಟಿ ಮಾಡಿಕೊಳ್ಳಬೇಕು.  ನಮ್ಮ ಮೇಲಿನ ನಂಬಿಕೆ ಅಚಲವಾಗಿರಬೇಕು.  ಪ್ರೀತಿಯ ಅಮಲು ಹೊಡೆತದಲ್ಲಿ ಕೊನೆಗೊಂಡಾಗ ತಪ್ಪಿನ ಅರಿವಾಗುತ್ತದೆ.  ಅಲ್ಲಿಯವರೆಗೂ ನಂಬಿಕೆ ಎಂಬ ಭ್ರಮೆ ಮುತ್ತಿಕೊಂಡು ಬೆರೆಲ್ಲ ಯೋಚನೆಗಳಿಗೆ ತೆರೆ ಎಳೆದು ಬಿಟ್ಟಿರುತ್ತದೆ ಮನಸ್ಸು  ನಾನು ಯಾರು?  ನನ್ನ ಯೋಗ್ಯತೆ ಏನು? ನಾನು ಏನಾಗಬೇಕು? ನನ್ನ ಮುಂದಿನ ಗುರಿ ಏನು? ನನ್ನ ಮನೆ ಕುಟುಂಬ ಇವೆಲ್ಲವುಗಳ ಬಗ್ಗೆ ಯೋಚಿಸುವ ಗೋಜಿಗೆ ಹೋಗುವುದಿಲ್ಲ.  ಏನು ಬೇಕಾದರೂ ಸಾಧಿಸಿಬಿಡುವೆನೆಂಬ ವಿಚಿತ್ರ ಧೈರ್ಯ ಈ ಪ್ರೀತಿ ಅನ್ನುವ ಮಾಯೆಗೆ.

ಬದುಕು ನಡೆಸಲು ದೂರದಲ್ಲಿ ಕಾಣುವ ಓಯಾಸಿಸ್.  ಮರುಭೂಮಿಯಲ್ಲಿ ನೀರು ಸಿಗುವುದೆಂದು ಅಲೆದು ಹೊರಟಂತೆ.  ಮನಸ್ಸು ತನಗಾಗುವ ಆಯಾಸ ಮರೆತು ಪಡೆಯುವ ಹಂಬಲದಲ್ಲಿ ಮುನ್ನುಗ್ಗುತ್ತಲೇ ಇರುತ್ತದೆ.  ಕೊನೆಗೆ ಸಿಕ್ಕರೂ ನೆಮ್ಮದಿ ಅನ್ನುವುದು ಕನಸಿನ ಮಾತು.  ಯಾವಾಗ ಢಮಾರ್ ಎನ್ನುವುದೊ ಯಾರಿಗೂ ತಿಳಿಯದು.  ಆದರೂ ನಂಬಿಕೆಯಲ್ಲಿ ಈ ಮಾಯೆಗೆ ಬಲಿಯಾಗಿ ಬದುಕು ಸಾಗುತ್ತಲೇ ಇರುತ್ತದೆ.

ಆದರೆ ಭಗವಂತ ತುಂಬಾ ಚೂಟಿ.  ಕೊಡೋದು ಗೊತ್ತು, ಹಿಂಪಡೆಯೋದೂ ಗೊತ್ತು, ಹಾಗೆ ಮರೆಸೋದು ಗೊತ್ತು. ಅಷ್ಟಲ್ಲದೇ “ಎಲ್ಲಾ ಭಗವಂತನ ಲೀಲೆ “ಅಂತ ಸುಮ್ಮನೆ ಹೇಳುತ್ತಾರಾ?  ಪಡೆದ ಕ್ಷಣದ ಸುಖ ಅತ್ಯಾನಂದ.  ಕಳೆದು ಕೊಂಡ ಕ್ಷಣ ಅತ್ಯಂತ ದುಃಖ.  ಮರೆಸುವ ಕ್ಷಣಗಳು ವಿಳಂಬ ಮಾಡಿ ತಾಳ್ಮೆ, ಅರಿವು, ತಿಳುವಳಿಕೆಯ ಬತ್ತಿ ಹಚ್ಚಿ ಮನುಷ್ಯನನ್ನಾಗಿ ಮಾಡುವ ಪ್ರಯತ್ನ ಅವನದು.

ಆದುದರಿಂದ ಪಡೆದಾಗ ಖುಷಿ ಪಟ್ಟು ಕಳೆದುಕೊಂಡಾಗ ಹತಾಶರಾಗದೇ ಎಲ್ಲಾ ಭಗವಂತನ ಇಚ್ಛೆ ಎಂದು ಮನಸ್ಸನ್ನು ಸಮಾಧಾನಿಸಿಕೊಂಡು ನೆಮ್ಮದಿಯಿಂದ ಬದುಕಲು ಪ್ರಯತ್ನಿಸುವುದು ಸೂಕ್ತ.

10-6-2020.  2.52pm

ಬದುಕುವ ರೀತಿ

ಮನುಷ್ಯನಿಗೆ ಈ ಅವಮಾನ ಅನ್ನುವುದು ಒಳಗೊಳಗೆ ಕುದಿಯುತ್ತಿರುವ ಬೆಂಕಿಯಂತೆ. ಕೆಲವೊಮ್ಮೆ ತನ್ನ ತಪ್ಪಿಲ್ಲದೆ ಅದನ್ನು ಪ್ರತಿಪಾಧಿಸಲು ಸಾಧ್ಯವಾಗದೇ ವಿಲಿ ವಿಲಿ ಒದ್ದಾಡುವಂತಾಗುತ್ತದೆ. ಮಾಡುವ ಯಾವ ಕೆಲಸದಲ್ಲೂ ಗಮನವಿಲ್ಲ,ಶೃದ್ಧೆಯಂತೂ ಮೊದಲೇ ಇಲ್ಲ. ಯಾರಲ್ಲಾದರೂ ತನ್ನ ಪರಿಸ್ಥಿತಿ ಹೇಳಿಕೊಂಡರೆ ಸಮಾಧಾನ ಆಗಬಹುದೇನೋ ಅನ್ನುವಂತಾಗುತ್ತದೆ. ಆದರೆ ಹೇಳಿಕೊಂಡು ಆಗುವುದೇನು? ಅನುಭವಿಸಿದ ಯಾತನೆ ಹೊರಟು ಹೋಗುತ್ತಾ? ಮಣ್ಣೂ ಇಲ್ಲ. ಮತ್ತೊಂದಷ್ಟು ಕಿರಿ ಕಿರಿ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ತಾಳ್ಮೆಯಿಲ್ಲದಿದ್ದರೂ ಉತ್ತರಿಸಲೇ ಬೇಕಾದ ಅನಿವಾರ್ಯತೆ. ಉತ್ತರಿಸಿಲ್ಲ ಅಂದರೆ ಅವರ ಅಸಮಾಧಾನ, ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮತ್ತದೇ ಇನ್ನೊಂದು ಸಮಸ್ಯೆ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಅವರು ತಮ್ಮ ಆತ್ಮೀಯರಲ್ಲೋ ಇಲ್ಲಾ ತಮ್ಮ ಬಂಧುಗಳಲ್ಲೋ ಹೇಳಿಕೊಳ್ಳದೇ ಇರುತ್ತಾರೆಯೆ? ಖಂಡಿತಾ ಹೇಳೇ ಹೇಳ್ತಾರೆ. ಮತ್ತೆ ಅವರವರಲ್ಲೇ ನಮ್ಮ ಕುರಿತು ಚರ್ಚೆ. ಅಯ್ಯೋ ಪಾಪ ಅನ್ನುವವರು ಇದ್ದಾರೆ ; ಹಾಗೆ ಆಗಬೇಕು ಎಂದು ಮೂಗು ಮುರಿಯುವವರೂ ಇದ್ದಾರೆ.

ಹಾಗಾದರೆ ನಮ್ಮನ್ನು ನಾವು ಸಮಾಧಾನ ಮಾಡಿಕೊಳ್ಳುವುದಾದರೂ ಹೇಗೆ? ಈ ಒಂದು ಪರಿಸ್ಥಿತಿಯಿಂದ ಮನಸ್ಸು ಸಮಾಧಾನ ಮಾಡಿಕೊಂಡು ನಮ್ಮನ್ನು ನಾವೇ ಸರಿಪಡಿಸಿಕೊಳ್ಳುವುದು ಹೇಗೆ? ಇದು ಒಂದು ದೊಡ್ಡ ಕಠಿಣ ಪರಿಸ್ಥಿತಿ. ಏಕೆಂದರೆ ಮನಸ್ಸು ಬಲೂ ಸೂಕ್ಷ್ಮ. ಇಂತಹ ಸಮಯದಲ್ಲಿ ಆದಷ್ಟು ಶಾಂತವಾಗಿ ನಮ್ಮನ್ನೇ ನಾವು ಪರಾಮರ್ಶಿಸಿಕೊಳ್ಳುವುದು ಸೂಕ್ತ. ಏಕೆಂದರೆ ಅವಮಾನವನ್ನು ಅಷ್ಟು ಬೇಗ ಮರೆಯಲು ಸಾಧ್ಯವಿಲ್ಲ ಹಾಗೆ ಅಷ್ಟು ಬೇಗ ಮನಸ್ಸಿನಿಂದ ದೂರ ಮಾಡಿಕೊಳ್ಳಲೂ ಸಾದ್ಯ ಇಲ್ಲ. ಸದಾ ಆ ಪ್ರಸಂಗ ಮನಸ್ಸನ್ನು ಕೊರೆಯುತ್ತಿರುತ್ತದೆ.

ಮನುಷ್ಯನಾದವನು ಒಂದಲ್ಲಾ ಒಂದು ಸಂದರ್ಭದಲ್ಲಿ ಅವಮಾನವನ್ನು ಅನುಭವಿಸಿಯೇ ಇರುತ್ತಾನೆ. ಗಂಡಸಾದರೆ ಅದನ್ನು ಸಿಟ್ಟಲ್ಲಿ ಒಂದಷ್ಟು ಬಯ್ದು ವ್ಯಕ್ತಪಡಿಸಿದರೆ ಹೆಣ್ಣು ಒಂದಾ ಅಳುತ್ತಾಳೆ ಇಲ್ಲಾ ತನ್ನಷ್ಟಕ್ಕೆ ವಟಗುಟ್ಟಿಯಾದರೂ ಸಮಾಧಾನ ಮಾಡಿಕೊ಼ಳ್ಳುತ್ತಾಳೆ. ” ಕೈಲಾಗದವರು ಮೈ ಪರಚಿಕೊಂಡಂತೆ” ಎಂಬಂತಾಗುತ್ತದೆ ಹೊರತೂ ಇದರಿಂದ ಏನು ಪ್ರಯೋಜನ? ಸುತ್ತಮುತ್ತಲ ವಾತಾವರಣ ಕಲುಷಿತಗೊಂಡು ಇನ್ನಷ್ಟು ಜನರ ಮಾತಿಗೆ ಬಲಿಯಾಗಬೇಕಾಗುತ್ತದೆ.

ಆದುದರಿಂದ ಇಷ್ಟೆಲ್ಲಾ ಗಲಾಟೆಗೆ ಅವಕಾಶ ಕೊಡದೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬೇಕು. ಈ ಉದ್ವೇಗ, ಹತಾಶೆ, ಅವಮಾನ ಎಲ್ಲ ಸಹಿಸಲಾಗದ ಮಾತು. ನಿಜ. ಆದರೆ ಇವನ್ನೆಲ್ಲ ಸೈರಿಸಿಕೊಳ್ಳುವ ಬುದ್ಧಿ ನಾವು ರೂಢಿಸಿಕೊಳ್ಳಲೇ ಬೇಕು. ಏಕೆಂದರೆ ನಾವು ಮನಷ್ಯರು ಪ್ರಾಣಿಗಳಲ್ಲಾ. ಅವುಗಳಾದರೆ ಆ ತಕ್ಷಣ ಒಬ್ಬರ ಮೇಲೆ ಒಬ್ಬರು ಕಿರುಚಾಡಿ, ಕಚ್ಚಿ, ಅಟ್ಟಿಸಿಕೊಂಡು ಹೋಗಿ ಸಾಯಿಸುವ ನಿದರ್ಶನವೂ ಇದೆ. ಇದೇ ರೀತಿ ಹಲವು ಮನುಷ್ಯರೂ ವರ್ತಿಸುತ್ತಾರೆ. ಆಗ ಇಂತಹ ಜನರನ್ನು ಸಮಾಜ ಕರೆಯುವುದು ಮೃಗಗಳೆಂದು ಹೊರತೂ ಯಾರೂ ಮನುಷ್ಯ ಅಂತ ಹೇಳೋದಿಲ್ಲ. ಪದೇ ಪದೇ ಇದೇ ಪ್ರವೃತ್ತಿ ಪುನರಾವರ್ತನೆ ಆಗುತ್ತಲೇ ಇದ್ದರೆ ಆಗ ಅಂತಹವರನ್ನು ಗುರುತಿಸುವುದು “ಓಹ್! ಅವನಾ/ಅವಳಾ? ಮೃಗ ಕಂಡ್ರೀ.. ನೀವು ಹುಷಾರಾಗಿ”ಅಂತ ಎಚ್ಚರಿಕೆ ಕೊಡುತ್ತಾರೆ. ಸಹವಾಸಕ್ಕೂ ಯಾರೂ ಬರುವುದೂ ಇಲ್ಲ.

ಇಷ್ಟಕ್ಕೆಲ್ಲಾ ಅವಕಾಶ ಕೊಡದೆ ಸಮಯ ಸಂದರ್ಭ ನೋಡಿಕೊಂಡು ನಮ್ಮಷ್ಟಕ್ಕೇ ನಾವಿದ್ದು ತಾಳ್ಮೆಯಿಂದ ವರ್ತಿಸುವುದು ಸೂಕ್ತ ಮಾರ್ಗ. ದಿನಗಳು ಶಾಶ್ವತವಲ್ಲ. ಈಗ ಚೆನ್ನಾಗಿ ಇದ್ದವರು ಮುಂದೇನಾಗುತ್ತಾರೊ ಗೊತ್ತಿಲ್ಲ. ನಮಗೆ ಅವಮಾನ ಮಾಡಿದವರು ಮುಂದೆ ಅವರಿಗೂ ಇಂತಹುದೇ ಪರಿಸ್ಥಿತಿ ಬರುವುದಿಲ್ಲ ಎನ್ನುವುದು ಯಾವ ಗ್ಯಾರಂಟಿ? ಇದು ಕಲಿಯುಗ. ಈ ಜನ್ಮದಲ್ಲಿ ಮಾಡಿದ ಪಾಪ ಕಾರ್ಯ ಇಲ್ಲೇ ಅನುಭವಿಸಿ ಹೋಗುತ್ತಾನೆ. ಇದು ಯಾರನ್ನೂ ಬಿಟ್ಟಿಲ್ಲ. ಮೇಲೆ ಹೋದವನು ಕೆಳಗೆ ಬರಲೇ ಬೇಕು. ಆಗ ಅದರ ಅನುಭವ ಆಗೇ ಆಗುತ್ತದೆ. ಅದು ಶ್ರೀಮಂತ ಬಡವ ಬಲ್ಲಿದ ಜಾತಿ ಗೀತಿ ನೋಡುತ್ತಾ? ಖಂಡಿತಾ ಇಲ್ಲ. ಅದಕ್ಕೆ ಎಲ್ಲರೂ ಒಂದೇ.

ಆದುದರಿಂದ ನಮಗಾದ ಅವಮಾನ, ನೋವು ಆದಷ್ಟು ಯಾರಲ್ಲೂ ಹೇಳಿಕೊಳ್ಳದೆ ಮೌನವಾಗಿ ಎದುರಿಸುವ ಪ್ರಯತ್ನ ಮಾಡಬೇಕು. ಆದಷ್ಟು ನಮಗೆ ಆಸಕ್ತಿ ಇರುವ ಇನ್ನಿತರ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಇನ್ನೂ ಒಳ್ಳೆಯ ಸಂಗತಿ ಎಂದರೆ ಯಾವುದರಲ್ಲೂ ಅನಾವಶ್ಯಕವಾಗಿ ತಲೆ ಹಾಕದೆ ನಮ್ಮಷ್ಟಕ್ಕೇ ನಾವಿದ್ದರೆ ಇಂತಹ ಪರಿಸ್ಥಿತಿ ಎದುರಾಗುವುದು ತಪ್ಪುತ್ತದೆ.

ಆದಷ್ಟೂ ನಮ್ಮ ಮನಸ್ಸಿಗೆ ಒಗ್ಗುವವರ ಜೊತೆ, ಸಮಾನ ಮನಸ್ಕರ ಜೊತೆ ನಮ್ಮ ಒಡನಾಟ ಇಟ್ಟುಕೊಳ್ಳುವುದು ಉತ್ತಮ. ಜನ ಪರಿಚಯವಾದರು ಅಂತ ಅವರ ಜೊತೆ ಸ್ನೇಹ ಮಾಡುವುದು ತಪ್ಪು. ಎಷ್ಟೋ ಜನರ ಗುಣಾವಗುಣಗಳು,ಅವರ ರೀತಿ ನೀತಿ, ಒಳ ಮರ್ಮ ತಿಳಿಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನಮ್ಮ ಸಲುಗೆ ಆತ್ಮೀಯತೆಯನ್ನು ಕ್ರಮೇಣ ದುರುಪಯೋಗ ತೆಗೆದುಕೊಳ್ಳುವ ಅಥವಾ ಇದನ್ನೇ ನಮ್ಮ ವೀಕ್ನೆಸ್ ಎಂದು ತಿಳಿದು ತಮ್ಮ ಆಟ ಶುರು ಮಾಡುತ್ತಾರೆ. ಇಂತಹ ಸಮಯ ನಿಭಾಯಿಸೋದು,ಇವರ ಕಿರಿಕಿರಿಯಿಂದ ತಪ್ಪಿಸಿಕೊಳ್ಳೋದು ಅಷ್ಟು ಸುಲಭ ಸಾಧ್ಯವಾಗೋದಿಲ್ಲ. ಆದರೂ ಇಂತಹವರನ್ನು ಎದುರು ಹಾಕಿಕೊಳ್ಳದೇ ಸಮಯ ಸಂದರ್ಭ ನೋಡಿಕೊಂಡು ಅವರಿಂದ ಕ್ರಮೇಣ ದೂರವಾಗುತ್ತ ಹೊರ ಬರುವುದು ಸೂಕ್ತ. ಏಕೆಂದರೆ ನಮಗೆ ನಮ್ಮ ನೆಮ್ಮದಿ, ಶಾಂತಿ ಮುಖ್ಯವಾಗಿರುತ್ತದೆ. ಬದುಕಬೇಕೆಂದರೆ ಜೀವನದಲ್ಲಿ ಇವೆಲ್ಲ ಅನಿವಾರ್ಯವೂ ಕೂಡಾ.

ಆದುದರಿಂದ ಬದುಕು ಬಂದಂತೆ ಎದುರಿಸುತ್ತ ಹೆದರದೇ ಜಾಣ್ಮೆಯಿಂದ ಹೆಜ್ಜೆ ಇಡುತ್ತ ಸಾಗಿದಲ್ಲಿ ನೆಮ್ಮದಿಯ ಜೀವನ ಕಾಣಬಹುದು.

6-6-2018. 10.09am

ಒಮ್ಮೆ ನಕ್ಕು ಬಿಡಿಮೊದಲ ಬಾರಿಗೆ ವಿಶ್ವ ನಗು ದಿನವನ್ನು 1998, ಜನವರಿ 10 ರಂದು ಮುಂಬಯಿನಲ್ಲಿ ಆಚರಿಸಲಾಯಿತು. ಇದನ್ನು ಪ್ರಥಮ ಬಾರಿಗೆ ಆರಂಭಿಸಿದವರು ಡಾ. ಮದನ್‌ ಕಟಾರಿಯಾ ಎಂಬುವವರು. ವಿಶ್ವ ನಗು ಯೋಗ ಅಭಿಯಾನದ ಸಂಸ್ಥಾಪಕರಾದ ಇವರು ನಗುವಿಗಿರುವ ಅನನ್ಯ ಶಕ್ತಿಯನ್ನು ಗಮನಿಸಿ ಇಂಥದ್ದೊಂದು ದಿನವನ್ನು ಆರಂಭಿಸಿದರು. ನಗುವಿನಿಂದ ಇಡೀ ವಿಶ್ವವನ್ನೇ ಶಾಂತಿಯುತವಾಗಿ ಮತ್ತು ಪಾಸಿಟಿವ್‌ ಆಗಿ ಬದಲಾಯಿಸಬಹುದು ಎಂಬ ನಂಬಿಕೆ ಇವರದ್ದು. ಈಗ ಈ ದಿನವನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಆಚರಿಸುತ್ತವೆ.

ಈಗ ಸರ್ವೇ ಸಾಮಾನ್ಯವಾಗಿ ಎಲ್ಲದಕ್ಕೂ ವರ್ಷದಲ್ಲಿ ಒಂದು ದಿನವನ್ನು ಮೀಸಲಾಗಿಟ್ಟಿರುವುದು ಕಾಣಬಹುದು. ಹಾಗೆ ಈ ನಗುವಿನ ಮಹತ್ವವನ್ನು ಗಮನಿಸಿಯೇ ಕೆಲವರು ನಗುವಿಗೂ ಒಂದು ದಿನವನ್ನು ಮೀಸಲಾಗಿಟ್ಟಿದ್ದಾರೆ. ಪ್ರತಿವರ್ಷ ಮೇ ತಿಂಗಳ ಮೊದಲನೆ ಭಾನುವಾರವನ್ನು ವಿಶ್ವ ನಗು ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಮೇ 3 ರಂದು ನಗು ದಿನವನ್ನಾಗಿ ಆಚರಿಸಲಾಗುತ್ತದೆ.

ಹಾಗೆ ಈಗ ಎದುರಾಗಿರುವ ಕೊರೋನಾ ಸಂದಿಗ್ಧ ಪರಿಸ್ಥಿತಿಯ ನೆನಪಿಗಾಗಿ ಮುಂದೊಂದು ದಿನವನ್ನು “ಕೊರೋನಾ ದಿನ”ವನ್ನಾಗಿ ಆಚರಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಈ ದಿನವನ್ನು ಈ ರೋಗ ತಡೆಗಟ್ಟಲು ಶ್ರಮಿಸುತ್ತಿರುವ ನಮ್ಮ ವೈದ್ಯರು,ದಾದಿಯರು, ಪೋಲೀಸ್ ಇಲಾಖೆಯವರು, ಅಧಿಕಾರಿಗಳು,ಪೌರ ಕಾರ್ಮಿಕರು ಇತ್ಯಾದಿ ವರ್ಗದವರಿಗೆ ಎಲ್ಲರೂ ಕೃತಜ್ಞತೆ ಸಲ್ಲಿಸುವ ಹಾಗೂ ಈ ರೋಗದಿಂದ ನರಳಿ ಇಹಲೋಕ ತ್ಯಜಿಸಿದವರ ನೆನಪಿಗಾಗಿ ಮೀಸಲಿಡುವುದು ಒಳಿತು.

ನಗು ನಮಗೆ ದೇವರು ನೀಡಿದ ವರದಾನ. ಹಾಗಂತ ಸದಾ ನಗು ನಗುತ್ತಾ ಇರೋದೂ ಕಷ್ಟದ ಮಾತೇ. ಸಹಜವಾಗಿ ಬರುವ ನಗು ನಿಜವಾದ ನಗು. ನಗಬೇಕಲ್ಲಾ ಅಂತ ನಗೋದು ಇನ್ನೊಬ್ಬರ ಸಮಾಧಾನಕ್ಕೆ. ಇನ್ನು ನಗೆ ಕೂಟದಲ್ಲಿ ನಗುವ ನಗುವಂತೂ ಕಂಡವರ ನಗೆಪಾಟಲಿಗೆ ಬಲಿಯಾಗುವುದೂ ಇದೆ. ಇದು ಅವರವರ ದೃಷ್ಟಿಯನ್ನು ಅವಲಂಬಿಸಿದ್ದು.

ನೋವು, ಹತಾಶೆ,ಅಂದೆಂತಹ ಬೇಜಾರು ಇದ್ದರೂ ಒಂದು ಸುಂದರವಾದ ನಗುವಿನ ಮೂಲಕ ಅದನ್ನು ದೂರ ಮಾಡಬಹುದು. ಆದರೆ ಇಂತಹ ಸಮಯದಲ್ಲಿ ನಗೋದಾದರೂ ಹೇಗೆ? ತಮಾಷೆ ಮಾತಾ? ನೋಡಿದವರು ಏನನ್ನಲಿಕ್ಕಿಲ್ಲ? ಹೌದು. ನಗುವುದಕ್ಕೆ ಸಮಯ ಸಂದರ್ಭ ಅಂತಿದೆ. ಯದ್ವಾ ತದ್ವಾ ಯಾವಾಗಂದರೆ ಆಗ ನಗ್ತಾ ಇದ್ದರೆ “ನೋಡು ಹುಚ್ಚಿಡಿದಿರಬೆಕು”ಅಂತ ಹೆದರಿ ದೂರ ಸರಿಯಬಹುದು ಜನ. ಆದುದರಿಂದ ನಗುವಾಗಲೂ ಹುಷಾರಾಗಿರುವುದು ಲೇಸು.

ಆದರೆ ಅದೇನೆ ಇರಲಿ ಸದಾ ನಗು ನಗುತ್ತಾ ಜೀವನ ಕಳೆಯಬೇಕು ಅಂತ ಬಯಸೋದು ಪ್ರತಿಯೊಬ್ಬ ಮನುಷ್ಯನ ಗುಣ. ಆದುದರಿಂದ ಸಹಜವಾಗೋ,ಸಮಾಧಾನಕ್ಕೋ ಇಲ್ಲಾ ಸಾಮೂಹಿಕವಾಗೋ ಒಟ್ಟಿನಲ್ಲಿ ಎಲ್ಲರೂ ಅವರಿಗಿಷ್ಟ ಬಂದಂತೆ ನಗು ನಗುತ್ತಾ ಇರಿ.  ನಗು ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ದಿನವಿಡೀ ಕೆಲಸದಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಲು ಕಾರಣವಾಗುತ್ತದೆ.  ಮುಖದ ಸ್ನಾಯುಗಳು ಹಿಗ್ಗುವುದರಿಂದ ಒಂದು ರೀತಿ ಕಳೆ ಅರಳುತ್ತದೆ ಮುಖಾರವಿಂದದಲ್ಲಿ.  ಒಮ್ಮೊಮ್ಮೆ ಅತಿಯಾಗಿ ನಗುವಾಗ ಕಣ್ಣಿನಲ್ಲಿ ಆನಂದ ಭಾಷ್ಪ.  ಕೆಲವರು ಕೆಮ್ಮುತ್ತ ಸಾಕಪ್ಪಾ ಸಾಕು ಅದೆಷ್ಟು ನಗಿಸಿಬಿಟ್ಟೆ…..ಹೊಟ್ಟೆ ಹುಣ್ಣಾಗುವಷ್ಟು ಎಂಬುದನ್ನು ಕೇಳಿರುತ್ತೀರಿ.  ಹೌದು ಇಂತಹ ನಗು ಆಗಾಗ ಬೇಕು ಮನುಷ್ಯನಿಗೆ.  ಆ ಒಂದು ಕ್ಷಣದಲ್ಲಾದರೂ ಇರುವ ಕಷ್ಟ ನೋವು ಮರೆತು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ.  ನಗುವೆಂಬುದು ಆರೋಗ್ಯಕ್ಕೆ ದಿವ್ಯೌಷಧ ಎಂಬುದರಲ್ಲಿ ಎರಡು ಮಾತಿಲ್ಲ.

ಅದಕ್ಕೇ ಕೆಲವು ಕವಿಗಳು ತಮ್ಮ ಬರಹಗಳಲ್ಲಿ ” ನಗು ನಗುತಾ ನಲಿ ನಲಿ ಏನೇ ಆಗಲಿ ” ಎಂದು ಹೇಳಿರುವುದು. ನಗುವಿನಲ್ಲಿ ಅಷ್ಟೊಂದು ಶಕ್ತಿಯಿದೆ. ನಗುವುದು ಒಂದು ಕಲೆಯಾದರೆ, ನಗಿಸುವುದು ಇನ್ನೊಂದು ಕಲೆ. ನಗಿಸುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಆದ್ದರಿಂದಲೇ ಹಿರಿಯರು ತಾವೂ ನಕ್ಕು, ನಗಿಸಿ, ನಗುತಾ, ನಗಿಸುವ ಬಾಳು ನಿಮ್ಮದಾಗಲಿ ಎಂದೇ ಹಿರಿಯರು ನಮ್ಮನ್ನು ಆಶೀರ್ವದಿಸುತ್ತಾರೆ. ಈ ನಗುವಿಗೆ ಒಂದು ರೀತಿಯ ಪಾಸಿಟಿವ್‌ ಎನರ್ಜಿಯಿದೆ. ಎಂತಹ ಸಮಸ್ಯೆಯನ್ನೂ ಪರಿಹರಿಸುವ ಶಕ್ತಿಯಿದೆ. ನಗು ನಮ್ಮ ಬಾಳಿನ ದಿವ್ಯ ಜ್ಯೋತಿ.

ಬನ್ನಿ ಸಹಜವಾಗಿ ನಗು ನಗುತ್ತಾ ಈ ದಿನವನ್ನು ಕಳೆದು ಬಿಡೋಣ.


3-5-2020. 12.50pm
ಕನ್ನಡ ಅಂದು – ಇಂದು

ಕನ್ನಡ ನನ್ನ ಮಾತೃಭಾಷೆ. ಹುಟ್ಟಿನಿಂದ ಬುದ್ಧಿ ಬರುವವರೆಗೂ ಗೊತ್ತಿದ್ದದ್ದು ಇದೊಂದೇ ಭಾಷೆಯಾಗಿತ್ತು. ಓದಿರುವುದು ಕನ್ನಡ ಸರ್ಕಾರಿ ಶಾಲೆ. ಮನೆ ಮಾತು ಹವ್ಯಕ ಕನ್ನಡ. ಪಠ್ಯ ಪುಸ್ತಕಗಳಲ್ಲಿ ಐದನೇ ತರಗತಿಯಿಂದ ಇಂಗ್ಲಿಷ್, ಆರನೇ ತರಗತಿಯಿಂದ ಹಿಂದಿ, ಮುಂದೆ ಹೈಸ್ಕೂಲ್ ಎಂಟನೇ ತರಗತಿಯಿಂದ ಸಂಸ್ಕೃತ ಆಯ್ಕೆಯ ವಿಷಯವಾಗಿದ್ದರೂ ಈ ಕನ್ನಡ ಬಿಟ್ಟರೆ ಬೇರೆ ಯಾವ ಭಾಷೆಯೂ ನನಗೆ ರುಚಿಸಲೇ ಇಲ್ಲ, ಇನ್ನು ರಿಸಲ್ಟ್ ನಲ್ಲೋ ಜಸ್ಟ್ ಪಾಸ್ ಹೇಳ್ತಾರಲ್ಲ ಹಾಗೆ. ಕನ್ನಡ ಫುಲ್ ಮಾರ್ಕ್ಸ್😝

ತದನಂತರದ ದಿನಗಳಲ್ಲಿ ವಾಣಿಜ್ಯ ವಿಷಯದಲ್ಲಿ ತೇರ್ಗಡೆ ಹೊಂದಿ ಕೆಲಸಕ್ಕೆ ಸೇರಿದಾಗ, ಮದುವೆಯಾಗಿ ಈ ಬೆಂಗಳೂರಿನಂತಹ ಊರಲ್ಲಿ ಬದುಕು ನಡೆಸುವ ಸಂದರ್ಭದಲ್ಲಿ ಬೇರೆ ಭಾಷೆ ನನಗೆ ಬರುವುದಿಲ್ಲವಲ್ಲ, ನಾನೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಕಲಿಯಬೇಕಿತ್ತು. ನಾನೂ ಎಲ್ಲರಂತೆ ಇಂಗ್ಲಿಷ್ ಮಾತನಾಡಬಹುದಿತ್ತು ಅಂತ ತುಂಬಾ ಕೊರಗಿದ್ದಿದೆ. ಎಷ್ಟೋ ಬಾರಿ ಅತ್ತಿದ್ದೇನೆ ನಾನು ದಡ್ಡಿ, ಇಂಗ್ಲಿಷ್ ಭಾಷೆ ಬರೋದಿಲ್ಲ ಅಂತ.

ಇಂಗ್ಲೀಷ್ ಬಂದವರು ಮಾತ್ರ ಮಹಾನ್ ಬುದ್ಧಿವಂತರು ಎಂಬ ಭಾವನೆ ಆಳವಾಗಿ ಬೇರೂರಿಬಿಟ್ಟಿತ್ತು. ಅವರನ್ನು ಕಂಡಾಗೆಲ್ಲ ಯಾವುದೋ ಮಹಾನ್ ಕಾರ್ಯ ಮಾಡಿದವರಂತೆ ಭಾಸವಾಗಿ ಬೆರಗುಗಣ್ಣಿಂದ ನೋಡುತ್ತಿದ್ದೆ. ಅಬ್ಬಾ! ಎಷ್ಟು ಬುದ್ಧಿವಂತರು. ಪುಣ್ಯ ಮಾಡಿದ್ದಾರೆ. ಆಗೆಲ್ಲ ನನ್ನ ನಾನು ಅದೆಷ್ಟು ಬಯ್ಕೊಳ್ಳುತ್ತಿದ್ದೆ.

ಮಗಳು ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿದಾಗಂತೂ ನಾನು ಇವಳೊಂದಿಗೆ ಇಂಗ್ಲೀಷ್ ಕಲಿಬಹುದು. ಮನೆಯಲ್ಲಿ ಇವಳೊಂದಿಗೆ ಇಂಗ್ಲೀಷಿನಲ್ಲೇ ಮಾತಾಡಬೇಕು. ಅವಳಲ್ಲಿ ಹೇಳಿಕೊಂಡು ಒಂದಷ್ಟು ದಿನ ತಾಕೀತು ಮಾಡಿದರೂ ಮತ್ತೆ ನಾಯಿ ಬಾಲ ಡೊಂಕೇ😊 ಕನ್ನಡ ಮಾತೇ ಆಡಿ ಆಡಿ ಅದೇ ಬಾಯಿಗೆ ಬರ್ತಿತ್ತೇ ಹೊರತೂ ಇಂಗ್ಲೀಷ್ ಮಾತು ಮಂಗ ಮಾಯಾ🙈

ಹೀಗೇ ಒಬ್ಬರಲ್ಲಿ ನನ್ನ ಅನಿಸಿಕೆ ಹೇಳಿಕೊಂಡಾಗ “ಇದಕ್ಯಾಕೆ ಇಷ್ಟು ಕೊರಗೋದು? ದೂರದ ಜರ್ಮನಿಯಲ್ಲಿ ಅಲ್ಲಿಯ ಎಷ್ಟೋ ಜನಕ್ಕೆ ಜರ್ಮನ್ ಭಾಷೆ ಬಿಟ್ಟರೆ ಬೇರೆ ಭಾಷೆ ಬರೋದಿಲ್ಲ. ಕನ್ನಡ ನಮ್ಮ ಹುಟ್ಟು ಭಾಷೆ. ಅದರಲ್ಲಿ ನೀವೆಷ್ಟು ಪಳಗಿದ್ದೀರಾ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿ ” ಇತ್ಯಾದಿ ಹೇಳುತ್ತ ನನ್ನ ಕಣ್ಣು ತೆರೆಸಿದರು.

ನಿಜಕ್ಕೂ ನನಗೀಗ ಬಹಳ ಹೆಮ್ಮೆ. ನಾನು ಕನ್ನಡದವಳು. ಅದರಲ್ಲೂ ಈ ಬರವಣಿಗೆ ಶುರು ಮಾಡಿದ ಮೇಲೆ ಕನ್ನಡ ಇನ್ನಷ್ಟು ಸುಧಾರಿಸಿಕೊಂಡು ಬೇರೆ ಭಾಷೆ ಬರುವುದಿಲ್ಲ ಎಂಬ ಕೀಳರಿಮೆ ಸಂಪೂರ್ಣ ದೂರವಾಗಿದೆ. ನಮ್ಮ ಈ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪದಗಳ ದೊಡ್ಡ ಸಮೂಹವೇ ಇದೆ. ಈ ಭಾಷೆ ಕಲಿಯಲು ಬೇರೆ ಭಾಷೆಯಂತೆ ಪರಿಶ್ರಮ ಕೂಡಾ ಬೇಕು. ಇದು ನನ್ನ ಹುಟ್ಟು ಭಾಷೆ ಎಂಬುದೇ ನನಗೆ ಸಂತೋಷ.

ಇದೇ ಅಭಿಮಾನದಲ್ಲಿ ಕಾರವಾರ ಜಿಲ್ಲೆ ಸಿದ್ದಾಪುರ ತಾಲ್ಲೂಕಿನಲ್ಲಿರುವ ಶ್ರೀ ಭುವನೇಶ್ವರಿ ತಾಯಿಯ ದೇಗುಲಕ್ಕೆ ಹೋಗಿದ್ದೆ. ಆ ತಾಯಿಯ ದರ್ಶನ, ಪೂಜೆ, ಪ್ರಸಾದ ಸ್ವೀಕರಿಸಿ ಬರುವಾಗ ಮನಸಲ್ಲಿ ತಾಯಿ ಸಂಪೂರ್ಣ ಆವರಿಸಿದ ಅನುಭವ. ಆ ತಾಯಿಯ ಮೇಲೆ ಒಂದು ಪದ್ಯ ಬರೆದೆ. ಗಾಯಕಿಯೊಬ್ಬರು ಹಾಡಿದ್ದು ಅದನ್ನು ಆ ದೇವಿಯ ಸನ್ನಿಧಿಗೆ ತಲುಪಿಸಿದೆ. ಇದು ನನ್ನ ಭಾಗ್ಯ!

ತದನಂತರ ಬದುಕಿನ ಗತಿಯಲ್ಲಿ ಹಿಂದಿ ಇಂಗ್ಲಿಷ್ ವ್ಯಾವಹಾರಿಕವಾಗಿ ಆಯಾ ಸಂದರ್ಭದಲ್ಲಿ ಉದ್ಯೋಗ ರಂಗದಲ್ಲಿ ಅನಿವಾರ್ಯವಾಗಿ ಕಲಿತು ರೂಢಿಸಿಕೊಂಡರೂ ಆಡುವ ಭಾಷೆ ಮಾತ್ರ ಕನ್ನಡ ಒಂದೇ.

ಇನ್ನು ಆಗಿನ ಕಾಲವೇ ಹಾಗಿತ್ತು. ಮನೆಯಲ್ಲಿ ಎಲ್ಲರೂ ಅವರವರ ಭಾಷೆಯಲ್ಲಿ ಮಾತನಾಡುತ್ತಿದ್ದರು. ನಮ್ಮ ಸರ್ಕಾರಿ ಶಾಲೆಯಲ್ಲಿ ಮಾತ್ರ ಎಲ್ಲರೂ ಕನ್ನಡ ಪದವನ್ನೇ ಬಳಸುತ್ತಿದ್ದರು. ಕನ್ನಡ ಸಿನೇಮಾ,ಯಕ್ಷಗಾನ, ಜಾನಪದ ನೃತ್ಯ, ಸೋಬಾನೆ ಹಾಡುಗಳು, ಅಜ್ಜಿ ಹೇಳುವ ಹಳೆಯ ಕಥೆಗಳು, ಹಸು,ಕರು,ನಾಯಿ, ಎಮ್ಮೆಯಿಂದ ಹಿಡಿದು ಮನೆಯಲ್ಲಿ ಯಾವುದೇ ಪ್ರಾಣಿ ಸಮೂಹವಿರಲಿ ಎಲ್ಲದಕ್ಕೂ ಒಂದೊಂದು ಹೆಸರಿಡಿದು ಕರೆಯೋದು, ಹಬ್ಬ ಹುಣ್ಣಿಮೆಗಳಲ್ಲಿ ಮಾಡುವ ತಿಂಡಿಗಳೇ ಮೃಷ್ಟಾನ್ನ. ಅವುಗಳಿಗೂ ಹಂಚಿ ತಿಂದು ತೃಪ್ತಿಪಡುವುದಾಗಿತ್ತು. ಹೊರಗಿನ ತಿಂಡಿ ತಿನಿಸು ಕಂಡವರಲ್ಲ. ಹಬ್ಬದ ಮಾರನೇ ದಿನ ಶಾಲೆಗೆ ಹೋಗುವಾಗ ಕಲಿಸುವ ಶಿಕ್ಷಕರ ವರ್ಗಕ್ಕೂ ಮನೆಯಲ್ಲಿ ಮಾಡಿದ ಸಿಹಿ ಕೊಟ್ಟರೆನೇ ಸಮಾಧಾನ. ಆ ವಾತಾವರಣದಲ್ಲಿ ಮನಸ್ಸಿಗೆ ಬಹಳ ಸಂತೃಪ್ತಿ ಇತ್ತು.

ಈಗಿನ ಭಾಷೆಗಳ ಭರಾಟೆಯಲ್ಲಿ ಕನ್ನಡ ಕ್ಷೀಣಿಸುತ್ತಿರುವುದು ನೋಡಿದರೆ ಅದರಲ್ಲೂ ಕನ್ನಡ ಮಾತಾಡುವವರೇ ಮನೆ ಇರಲಿ ಹೊರಗೇ ಇರಲಿ ಅದರಲ್ಲೂ ಮಕ್ಕಳೊಂದಿಗೆ ಟಸ್ಸು ಪುಸ್ಸೂ ಅಂತ ಇಂಗ್ಲಿಷ್ ಮಾತಾಡುವುದು ನೋಡಿದರೆ ನಮ್ಮ ಭಾಷೆ ಗತಿ ಎಲ್ಲಿಗೆ ಬಂತಪ್ಪಾ ಅಂತ ಯೋಚನೆ, ದುಃಖವಾಗುತ್ತದೆ.

ನವೆಂಬರ್ ಒಂದು ಬಂತೆಂದರೆ ಕೆಲವರು ಕನ್ನಡಾಭಿಮಾನಿಗಳಂತೆ ಕೇವಲ ಜಯಘೋಷಕ್ಕೋ ಇಲ್ಲಾ ಪ್ರಶಸ್ತಿ ಗಿಟ್ಟಿಸಿಕೊಳ್ಳಲೋ
ಕನ್ನಡ ಶಾಲು ಹೊದ್ದು ಕನ್ನಡ ಭಾವುಟ ಹಿಡಿದು ಕೂಗಿಕೊಂಡರೆ ಸಾಲದು. ಅದು ನಮ್ಮ ಭಾಷೆ, ಈ ಸಂಸ್ಕೃತಿ ನಮ್ಮ ಕಣ ಕಣದಲ್ಲೂ ಹರಿದು ಬಂದಿದೆ, ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಕನ್ನಡಕ್ಕೆ ಬೆನ್ನೆಲುಬಾಗಿ ಕನ್ನಡಿಗರಾದ ನಾವೇ ಬಲ ತುಂಬಬೇಕು. ಮನೆಯಲ್ಲಿ ಹೊರಗೆ ಎಲ್ಲಿ ಹೋದರೂ ಸದಾ ಕನ್ನಡ ಮಾತನಾಡುವುದು ಬಿಡಬಾರದು.

ಎಷ್ಟೋ ಜನ ನಮ್ಮ ಕನ್ನಡಿಗರು ವಿದೇಶದಲ್ಲಿ ವಾಸಿದ್ದಾರೆ. ಹೊರಗಿನ ಭಾಷೆ ಇಂಗ್ಲಿಷ್ ಆದರೂ ಮನೆಯಲ್ಲಿ ತಮ್ಮ ಮಕ್ಕಳೊಂದಿಗೆ ಮಾತೃ ಭಾಷೆ ಮಾತನಾಡುವಂತಾಗಬೇಕು. ಅಲ್ಲಿಂದ ರಜೆಗೆ ಭಾರತಕ್ಕೆ ಬಂದರೆ ಆ ಮಕ್ಕಳು ಉಳಿದ ಮಕ್ಕಳೊಂದಿಗೆ ಸರಳವಾಗಿ ಬೆರೆಯಲು ಮಾತೃ ಭಾಷೆ ಅತೀ ಮುಖ್ಯ. ಇದು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡರೆ ಒಳಿತು.

ಅಂದು ಕನ್ನಡ ಮನೆ ಮನೆ ಮಾತಾಗಿತ್ತು. ಅದರಲ್ಲೂ ಮಲೆನಾಡಿನ ನಮ್ಮ ಹಳ್ಳಿಗಳಲ್ಲಿ ಇಂದಿಗೂ ಕನ್ನಡ ಭಾಷೆ ರಾರಾಜಿಸುತ್ತಿದೆ. ಹೊರ ಊರಲ್ಲಿ ಓದುತ್ತಿರುವ ಮಕ್ಕಳು ಅವರ ಮಕ್ಕಳು ಊರಿಗೆ ಬಂದರೆ ಅಲ್ಲೊಂದು ಕನ್ನಡ ಸಮೂಹವೇ ನೆರೆದಂತಿರುತ್ತದೆ. ಕಾರಣ ಮನೆಯಲ್ಲಿ ಇರುವ ಹಿರಿಯರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರೋದಿಲ್ವೆ! ಗತ್ಯಂತರವಿಲ್ಲದೇ ಕನ್ನಡ ಭಾಷೆ ಸರಾಗವಾಗಿ ಎಲ್ಲರ ಬಾಯಲ್ಲಿ.

ಆದುದರಿಂದ ಕನ್ನಡ ಬರುವ ನಾವು ಕನ್ನಡ ಮಾತನಾಡೋಣ. ಭಾಷೆ ಬಾರದವರಿಗೆ ಕನ್ನಡ ಭಾಷೆ ಕಲಿಸೋಣ. ಅವರು ಇವರು ಅಂತ ಬೊಟ್ಟು ತೋರಿಸುವುದರ ಬದಲು ಮೊದಲು ನಾವು ನಮ್ಮ ಕರ್ತವ್ಯ ನಿಭಾಯಿಸೋಣ. ನಮ್ಮನ್ನು ನೋಡಿ ಇನ್ನೊಬ್ಬರು ನಮ್ಮನ್ನು ಅನುಸರಿಸುವಂತೆ ಮಾಡೋಣ.

ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಜೈ ಭುವನೇಶ್ವರಿ 🙏

31-10-2019. 4.58pm

ಡಯಾಬಿಟಿಸ್ ಹಾಗೂ ಸಿರಿಧಾನ್ಯ

ಭಾರತೀಯರ ಆಹಾರ ಪದ್ಧತಿ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಇದೆ. ಹಾಗೆ ಅವರಾಡುವ ಭಾಷೆಯೂ ಕೂಡಾ. ಅವರು ಯಾವ ಜಾತಿಯವರೇ ಆಗಿರಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಹೊಂದಿಕೊಂಡು ಬಾಳುವುದನ್ನು ರೂಢಿಸಿಕೊಳ್ಳುವುದು ಸಾಮಾನ್ಯ. ಅದರಂತೆ ಅಲ್ಲಿಯ ಆಡು ಭಾಷೆ, ಊಟ, ಮಾತು, ರೀತಿ,ನೀತಿ, ಹಬ್ಬ ಹರಿದಿನಗಳು ಇತ್ಯಾದಿ ಅಳವಡಿಸಿಕೊಂಡಿರುವುದನ್ನು ಕಾಣಬಹುದು.

ಕೆಲವು ಪ್ರದೇಶಗಳಲ್ಲಿ ಕಾರಣಾಂತರಗಳಿಂದ ನಾವು ಬದುಕಲೇ ಬೇಕಾದ ಅನಿವಾರ್ಯತೆ ಒದಗಿ ಬಂದಾಗ ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವ ಸಂದರ್ಭ ಬರಹುದು. ಕಾರಣ ನಾವು ತಿನ್ನುವ ಗುಣಮಟ್ಟದ ಆಹಾರ ಸಿಗದಾಗ ಗತ್ಯಂತರವಿಲ್ಲದೇ ನಮ್ಮ ಆಹಾರ ಕ್ರಮ ಬದಲಾಯಿಸಿಕೊಂಡಾಗ ಆರೋಗ್ಯಕ್ಕೆ ಒಗ್ಗದೇ ಒದ್ದಾಡುವ ಪರಿಸ್ಥಿತಿ.

ಉದಾ; ಉತ್ತರ ಕರ್ನಾಟಕದಲ್ಲಿ ಜೋಳ,ನವಣೆ, ಸಜ್ಜೆ ರೊಟ್ಟಿ ಸಾಮಾನ್ಯ. ಅದೇ ಮಲೆನಾಡಿನಲ್ಲಿ ಅಕ್ಕಿ ಮುಖ್ಯ ಆಹಾರ. ಅನ್ನ ತಂಪು, ಜೋಳ ಉಷ್ಣ. ಒಂದಕ್ಕೊಂದು ಸಂಬಂಧವಿಲ್ಲದ ಆಹಾರ ತಿಂದಾಗ ಒಗ್ಗುವುದು ಕಷ್ಟ.

ಆದರೆ ಕಾಯಿಲೆಗಳು ಬಂದಾಗ ಇಷ್ಟ ಇರಲಿ ಇಲ್ಲದಿರಲಿ ಮನುಷ್ಯ ಅದನ್ನು ತಡೆಗಟ್ಟುವ ಆಹಾರ ತಿಂದು ಜೀರ್ಣಿಸಿಕೊಳ್ಳಲು ಮುಂದಾಗುತ್ತಾನೆ. ಇಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹೊಸ ಹೊಸ ಸಂಶೋಧನೆಗಳು ರೋಗಕ್ಕನುಗುಣವಾಗಿ ಕಂಡು ಹಿಡಿಯಲು ಶುರು ಮಾಡಿದಾಗ ಈ ಸಿರಿ ಧಾನ್ಯ ಬೆಳಕಿಗೆ ಬರಲು ಶುರುವಾಯಿತು. ಹಾಗೂ ಈ ಸಿರಿ ಧಾನ್ಯದ ಬಳಕೆಯಿಂದಾಗಿ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುತ್ತಿರುವ ಕಾಯಿಲೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು, ತಡೆಗಟ್ಟಬಹುದೆನ್ನುವುದು ಅರಿತಾಗ ಇದರ ಬಳಕೆ ಜಾಸ್ತಿ ಆಗಲು ಶುರುವಾಗಿದೆ. ಹೊರತು ಇದು ಯಾರು ಯಾರಿಗೂ ಒತ್ತಡದಲ್ಲಿ ತುರುಕುತ್ತಿರುವ ಆಹಾರವಾಗಬಾರದು.

ಈಗಿನ ಆಹಾರಗಳಲ್ಲಿ ವೈಜ್ಞಾನಿಕ ಗೊಬ್ಬರ ಬಳಕೆ, ಆಹಾರ ಹಾಳಾಗದಂತೆ ಅದಕ್ಕೆ ಹಾಕುವ ಮದ್ದುಗಳು ಮನುಷ್ಯನ ದೇಹದ ಮೇಲೆ ದುಶ್ಪರಿಣಾಮ ಬೀರುತ್ತಿವೆ. ಜೊತೆಗೆ ಮಿತಿ ಇಲ್ಲದೆ ತಿನ್ನುವ ಜಂಕ್ ಫುಡ್, ಬಾಯಿ ಚಪಲಕ್ಕೆ ತಿನ್ನುವ ಹೊಟೆಲ್ ತಿಂಡಿಗಳು ಬೊಜ್ಜು ಬರಲು ಕಾರಣವಾಗಿದೆ. ಇದಕ್ಕೆಲ್ಲ ನಮ್ಮಲ್ಲಿರುವ ಸೋಂಬೇರಿತನ ಮುಖ್ಯ ಕಾರಣ ಎಂದರೂ ತಪ್ಪಾಗಲಾರದು.
ದಿನ ನಿತ್ಯದ ಬದುಕಲ್ಲಿ ಸರಿಯಾಗಿ ಜೀವನ ಕ್ರಮ ರೂಢಿಸಿಕೊಳ್ಳದಿದ್ದಲ್ಲಿ ಬೊಜ್ಜೂ ಬರುತ್ತದೆ, ದೇಹ ರೋಗದ ಆಗರವೂ ಆಗುತ್ತದೆ. ಇದಕ್ಕೆ ಆಹಾರ ಧಾನ್ಯವೊಂದೇ ಕಾರಣವಲ್ಲ. ಅಕ್ಕಿ ಗೋಧಿಯಂತೆ ಸಿರಿ ಧಾನ್ಯ ಕೂಡಾ ಆಯಾ ಪ್ರದೇಶದಲ್ಲಿ ತಿಂದು ಜನ ಬದುಕುತ್ತಿಲ್ಲವೆ? ಯಾರೊ ಒಬ್ಬರು ಹೇಳಿದರು ಎಂದು ಅದನ್ನೇ ಪ್ರತಿಪಾದಿಸುವುದು ಸರಿಯಲ್ಲ. ಸರಿಯಾಗಿ ನಿಯಮಿತವಾಗಿ ತಿಂದು ಮೈ ಬಗ್ಗಿಸಿ ದುಡಿಯಬೇಕು. ಅಲ್ಲಿ ಇದೆ ನಮ್ಮ ಆರೋಗ್ಯ.

ಹಾಗಂತ ಕೆಲವರ ಅಭಿಪ್ರಾಯ ಧಿಕ್ಕರಿಸಲೂ ಸಾಧ್ಯವಿಲ್ಲ. ಏಕೆಂದರೆ ಹುಟ್ಟಿನಿಂದ ಆಹಾರದ ಕ್ರಮ ಯಾವುದೋ ರೋಗ ಬಂತು ಎಂದು ಕೂಡಲೇ ಬದಲಾಯಿಸಲು ಹೋಗಿ ಆಗುವ ಅವಾಂತರಗಳು ಹಲವಾರು. ಇದರಲ್ಲಿ ಸಿಲುಕಿದವರಲ್ಲಿ ನಾನೂ ಒಬ್ಬಳು.

2014ರ ಆಸುಪಾಸು. ಇದ್ದಕ್ಕಿದ್ದಂತೆ ಯೋಗ ಮಾಡಲಾಗದಷ್ಟು ವಿಪರೀತ ನಿಶ್ಯಕ್ತಿ. ತಪಾಸಣೆ ಮಾಡಿಸಿದಾಗ ಶುಗರ್ ಲೆವಲ್ After food 324 mg/dl ಮತ್ತು HBA1C 10.3. ಕೂಡಲೇ ಒಂದು ವಾರದ ಮಾತ್ರೆ ಬರೆದುಕೊಟ್ಟರೂ ಒಂದೆರಡು ಮಾತ್ರೆ ತೆಗೆದುಕೊಂಡು ಬಿಡಬೇಕಾಯಿತು. ಕಾರಣ ಗಿಡ್ಡಿನೆಸ್. ಶುಗರ್ ಲೆವಲ್ ಆಹಾರಕ್ಕಿಂತ ಮೊದಲು 70 mg/dlಕ್ಕೆ ಇಳಿಯಿತು. ಮಾತ್ರೆ ಬಂದ್ ಕೇವಲ ಡಯರ್ಟು ವಾಕಿಂಗ್ ಶುರುವಾಯಿತು. ಬರೀ ಗೋಧಿ, ರಾಗಿ, ಸಿರಿಧಾನ್ಯಕ್ಕೆ ಮೊರೆ ಹೋದೆ. ಸಿಹಿ ಪದಾರ್ಥ ಪೂರ್ತಿ ಬಿಟ್ಟು ಪ್ರತಿನಿತ್ಯ ತಪ್ಪದೇ ಎಂದಿನಂತೆ ಯೋಗ ತನ್ನಷ್ಟಕ್ಕೇ ಶುಗರ್ ನಾರ್ಮಲ್ಲಲ್ಲೇ ಮುಂದುವರಿಯಿತು.

ಡಾಕ್ಟರ್ ಒಂದು ಮಾತು ಹೇಳಿದರು ; ” ಇಷ್ಟು ವರ್ಷ ಸಖತ್ತಾಗಿ ತಿಂದಿದ್ದೀರಲ್ರೀ….ನೀವು ಲಕಿ ಅನ್ನಿ. ತಡವಾಗಿ ಈ ಕಾಯಿಲೆ ನಿಮ್ಮ ಆವರಿಸಿದೆ. ನೀವು ಡಯರ್ಟಲ್ಲಿದ್ದರೆ ನಿಮಗೆ ಯಾವ ಮಾತ್ರೆಯೂ ಬೇಡಾ. ನಿಮ್ಮ ಜೀವನ ಶೈಲಿ ಚೆನ್ನಾಗಿದೆ. ಅದನ್ನೇ ಮುಂದುವರಿಸಿ ಸಾಕು.”

ಆದರೆ ಈ ಸಿರಿಧಾನ್ಯ ತುಂಬಾ ಉಷ್ಣ. ಉಷ್ಣ ಪ್ರಕೃತಿಯವರಿಗೆ ಇನ್ನಷ್ಟು ಉಷ್ಣ ಮಾಡುತ್ತದೆ. ನನಗಾಗಿದ್ದೂ ಇದೇ. ನಾಲ್ಕಾರು ತಿಂಗಳಲ್ಲಿ ಏನೆಲ್ಲಾ ಅವಸ್ಥೆ ಪಟ್ಟೆ. ಆಗಾಗ ಉರಿ ಮೂತ್ರ, ನಿಶ್ಯಕ್ತಿ, ಆ ತಪಾಸಣೆ ಈ ತಪಾಸಣೆ ಎಲ್ಲಾ ಮಾಡಿಸಿ ಒಂದಷ್ಟು ಮಾತ್ರೆ ಸೇವನೆ ಮಾಡುತ್ತಾ ಕೊನೆಗೆ ಗೊತ್ತಾಗಿದ್ದು ಇದು ಉಷ್ಣದ ಅವತಾರ. ಸಿರಿಧಾನ್ಯ ಫುಲ್ ಬಿಟ್ಟೆ. ಜೊತೆಗೆ ಜೋಳದ ರೊಟ್ಟಿನೂ ಹತ್ತಿರ ಸೇರಿಸಲಿಲ್ಲ. ನನ್ನ ಈ ಶುಗರ್ ಇರುವ ದೇಹಕ್ಕೆ ಆಹಾರ ಕ್ರಮ ಅರಿತುಕೊಳ್ಳಲು ಸುಮಾರು ಒಂದು ವರ್ಷವೇ ಬೇಕಾಯಿತು. ಅದೇನೊ ಹೇಳ್ತಾರಲ್ಲಾ ; ತೀರ್ಥ ತೆಗೆದುಕೊಂಡರೆ ಥಂಡಿ, ಆರತಿ ತೆಗೆದುಕೊಂಡರೆ ಉಷ್ಣ ಹಾಗಾಯಿತು. ಅದರಲ್ಲೂ ಡಾಕ್ಟರ್ ಹೇಳುವ ಪ್ರಕಾರ ಎಲ್ಲವನ್ನೂ ಪಾಲಿಸುತ್ತ ಹೋದರೆ ಖಂಡಿತಾ ನನಗೆ ಆಗೋದಿಲ್ಲ ಅನ್ನುವುದೂ ಮನವರಿಕೆಯಾಯಿತು.

ಕಾರಣ ಶುಗರ್ ಬಂದವರಿಗೆ ಶುಗರ್ ಜಾಸ್ತಿಯಾದಂತೆ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತದೆ ಎಂದು ಡಾಕ್ಟರ್ ಮೊದಲು ಇದಕ್ಕೂ ಮಾತ್ರೆ ಬರೆದು ಕೊಟ್ಟಿದ್ದು ನುಂಗಿ ನುಂಗಿ ಸಾಕಾಯಿತು. ಅದರ ರಕ್ತ ಪರೀಕ್ಷೆ ಮಾಡಿಸುವುದೂ ದುಬಾರಿ ಹಾಗೆ ಮಾತ್ರೆಗಳೂ ದುಬಾರಿ. ತತ್ತರಕಿ ಇದ್ಯಾಕೊ ನನಗೆ ತಡೆಯಲಾಗದಷ್ಟು ಹಿಂಸೆ ಆಗಲು ಶುರುವಾಯಿತು. ನೇರವಾಗಿ ಡಾಕ್ಟರಿಗೆ ಹೇಳೇ ಬಿಟ್ಟೆ. “ನಾನು ಯಾವುದಕ್ಕೂ ಮಾತ್ರೆ ತೆಗೆದುಕೊಳ್ಳುವುದಿಲ್ಲ, ಅಂಥಾ ಸಿಥೀಯಸ್ ಕಾಯಿಲೆ ಅಂದರೆ ಮಾತ್ರೆ ತೆಗೆದುಕೊಳ್ಳಲೇ ಬೇಕಾದ ಸಂದರ್ಭದಲ್ಲಿ ಮಾತ್ರ ಮಾತ್ರೆ ತೆಗೆದುಕೊಳ್ಳುತ್ತೇನೆ. ಅದೇನು ಡಯರ್ಟಲ್ಲಿರಬೇಕು ಹೇಳಿ ತಪ್ಪದೇ ಮಾಡ್ತೀನಿ “ಅಂದೆ.

” ಜಿಡ್ಡಿನ ಪದಾರ್ಥ ತಿನ್ನಬೇಡಿ, ಮೊಸರು ಬೇಡಾ,ತುಪ್ಪ ಬೇಡಾ “ಇತ್ಯಾದಿ.

ಅಯ್ಯೋ! ದೇವರೆ. ಅಲ್ಲಾ ಎಲ್ಲಾ ಬಿಟ್ಟರೆ ಒಣ ಒಣ ತಿಂದುಕೊಂಡು ಇರಲು ಸಾಧ್ಯವಾ? ಇವೆಲ್ಲಾ ಪಾಲಿಸಿಯೇ ಸಿಕ್ಕಾಪಟ್ಟೆ ಉಷ್ಣ ಆಗಿ ಒದ್ದಾಡಿದ್ದು. ಮನೆ ಹತ್ತಿರ ಇರೊ ಲೇಡಿ ಡಾಕ್ಟರ್ ಹತ್ತಿರ ಹೋದಾಗ ನನ್ನ ಅವಸ್ಥೆ ನೋಡಿ “ಒಂದು ತಿಂಗಳು ಸ್ವೀಟ್ ಬಿಟ್ಟು ಬೇರೆಲ್ಲಾ ನಾರ್ಮಲ್ ನಂತೆ ತಿಂತಾ ಬನ್ನಿ. ನೋಡೋಣ ಏನಾಗುತ್ತದೆ ಅಂತ” ಅಂದು ಹೇಳಿದ್ದೇ ತಡ ಸಿಕ್ಕಿದ್ದೇ ಚಾನ್ಸ್ ಅಂತ ಎಲ್ಲಾ ಮರೆತು ಸಮಾ ತಿಂತಾ ಬಂದೆ.

ನಮ್ಮ ಹಳ್ಳಿ ಮದ್ದು, ಮಜ್ಜಿಗೆ, ಜೀರಿಗೆ ಕಷಾಯ, ಚೆನ್ನಾಗಿ ಹಾಲು ಮೊಸರು, ಬಾರ್ಲಿ ಅಕ್ಕಿ ಗಂಜಿ, ಅನ್ನ (ಭ್ರೌನ್ ರೈಸ್)ವಾರಕ್ಕೆರಡು ಬಾರಿ ಮಾತ್ರ ಸ್ವಲ್ಪ ಅನ್ನ ಊಟ ಮಾಡುತ್ತ , ಚಪಾತಿ, ರಾಗಿ ಮುದ್ದೆ ತಿನ್ನುತ್ತ ಬಂದ ಮೇಲೆ ಈಗೊಂದು ವರ್ಷದಿಂದ ಮಾತ್ರೆ ನುಂಗಾಣ ಇಲ್ಲ ಆಸ್ಪತ್ರೆ ಬಾಗಿಲು ತಟ್ಟಿಲ್ಲ. ಮೊದಲಿನಿಂದಲೂ ಶುಗರ್ ಮಾತ್ರೆ ತೆಗೆದುಕೊಳ್ಳದ ನನಗೆ ಈ ಆಹಾರ ಪದ್ಧತಿಯಲ್ಲೂ ಶುಗರ್ ಕಂಟ್ರೋಲ್ನಲ್ಲಿ ಇದೆ. ಆದರೆ ಸಿಹಿ ಪದಾರ್ಥ ತಿಂದ್ಯೊ ದಿಢೀರ್ ಶುಗರ್ ಜಾಸ್ತಿ ಆಗುವುದು ಗ್ಯಾರಂಟಿ. ಶುಗರ್ ಇದ್ದವರು ಬಾಯಿ ಚಪಲಕ್ಕೆ ಕಡಿವಾಣ ಹಾಕಲೇ ಬೇಕು. ಸಿಹಿ ತಿನ್ನೋದು ಬಿಟ್ಟರೆ ಒಳ್ಳೆಯದು. ಹಾಗೆ ಈ ಬಿಳಿ ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥ ಕೂಡಾ ಶುಗರ್ ಜಾಸ್ತಿ ಮಾಡುತ್ತದೆ. ಬ್ರೌನ್ ರೈಸ್ ಕೂಡಾ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

ಇದರಿಂದಾಗಿ ಆರೋಗ್ಯವೂ ಸುದಾರಿಸಿತು ಹಂಚಿ ಕಡ್ಡಿಯಂತಾದ ದೇಹ ಸ್ವಲ್ಪ ಊದಲು ಶುರುವಾಯಿತು. ಈಗ ಡಾಕ್ಟರ್ ಕಾಣದೇ ವರ್ಷ ಆಯಿತು. ಪ್ರತೀ ಮೂರು ತಿಂಗಳಿಗೊಮ್ಮೆ ತಪ್ಪದೇ ಶುಗರ್ ಟೆಸ್ಟ್ ಮಾಡಿಸೋದು ಮರೆಯೋದಿಲ್ಲ. ಆಸ್ಪತ್ರೆಗೆ ಓಡಾಡುವ ಬದಲು ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತ ಜೀವನ ಕ್ರಮವನ್ನೇ ಬದಲಾಯಿಸಿಕೊಂಡು ನಾಲ್ಕು ಜನರ ಮದ್ಯೆ ಬೆರೆಯುತ್ತಿರುವುದರಿಂದ ಮನಸ್ಸಿಗೂ ನೆಮ್ಮದಿ ಸಿಗ್ತಾ ಇದೆ.

ಅಂದರೆ ರೋಗ ಬಂದಾಗ ನಮ್ಮ ದೇಹಕ್ಕೆ ಯಾವ ಆಹಾರ ಬದಲಾಯಿಸಿದರೆ ಒಗ್ಗುತ್ತದೆ ಎಂಬುದನ್ನು ಕಂಡುಕೊಳ್ಳಬೇಕು. ಏಕಾಏಕಿ ತಿನ್ನಲು ಶುರು ಮಾಡಿದರೆ ಆರೋಗ್ಯ ಇನ್ನಷ್ಟು ಬಿಗಡಾಯಿಸುತ್ತದೆ. ನಮ್ಮ ದೇಹ ಎಂತಹುದಕ್ಕೆ ಒಗ್ಗುತದೆ ಎಂಬುದು ಪೂರ್ತಿ ತಿಳಿಯಲು ಸ್ವಲ್ಪ ಸಮಯ ಕೂಡಾ ಬೇಕು. ಹಾಗಂತ ಯಾವ ಆಹಾರವನ್ನೂ ದೂರುವುದೂ ಸರಿಯಲ್ಲ.

ಅದರಲ್ಲೂ ಯಾವುದಾದರೂ ರೋಗ ಬಂತು ಅಂದರೆ ಸಾಕು ಗಾಬರಿ,ಟೆನ್ಷನ್. ಮನಸ್ಸು ಸೀಮಿತ ಕಳೆದುಕೊಂಡು ಏನೆಲ್ಲಾ ಅವಸ್ಥೆ ಪಡುತ್ತದೆ. ಇಂತಹ ಸಮಯದಲ್ಲಿ ರೋಗದ ಬಗ್ಗೆ ಕೂಲಂಕುಷವಾಗಿ ಅರಿಯುವ ಪ್ರಯತ್ನ, ಅದನ್ನು ತಡೆಗಟ್ಟಲು, ವಾಸಿಮಾಡಿಕೊಳ್ಳಲು ಇನ್ನಿಲ್ಲದ ಶ್ರಮ,ತರಾತುರಿ. ಆಗ ಉಷ್ಣ ಶೀತದ ಕಡೆ ಗಮನ ಇರೋದಿಲ್ಲ. ಅದರಲ್ಲೂ ಮಾತ್ರೆ ಎಂದರೆ ಮಾರು ದೂರ ಹೋಗುವ ನನ್ನಂಥವರಿಗೆ ಕಾಯಿಲೆ ವಿರುದ್ಧ ಹೊಡೆದಾಡುವ ಛಲ. ಒಗ್ಗಿದರೆ ಸರಿ ಇಲ್ಲಾ ಅಂದರೆ ಅವಸ್ಥೆ ಪಟ್ಟಾದ ಮೇಲೆ ಜ್ಞಾನೋದಯ.

“ಕಾಶ್ಮೀರದ ಸೇಬು ಆ ಪ್ರದೇಶದಲ್ಲಿ ಬೆಳೆದರೇನೇ ರುಚಿ ಜಾಸ್ತಿ” ಅಂತ ಹೇಳ್ತಾರೆ ಹಾಗೆ ಈ ಸಿರಿಧಾನ್ಯ ಕೂಡಾ. ಆ ಪ್ರದೇಶದಲ್ಲಿ ಬೆಳೆದರೆ ಮಾತ್ರ ಸತ್ವ ಜಾಸ್ತಿ ಇರಬಹುದಾ? ಏಕೆಂದರೆ ಈಗ ಎಲ್ಲೆಂದರಲ್ಲಿ ಬೆಳೆಯುತ್ತಿದ್ದಾರೆ. ನೀರೂ ಕಡಿಮೆ ಸಾಕು, ಬೇಡಿಕೆ ಹೆಚ್ಚಿದೆ ಎಂದು ರೈತರ ಅಂಬೋಣ. ಬೆಳೆಯುವವರಿಗೆ ಅದೇ ಆಹಾರ ದೇಹ ಒಗ್ಗಿಬಿಟ್ಟಿರುತ್ತದೆ. ಅವರಂತೆ ನಾವಾಗಲು ಹೋದರೆ ಸುಧಾರಿಸಿಕೊಳ್ಳುವುದು ಕಷ್ಟ.

ಇನ್ನೊಂದು ಸಾಮಾನ್ಯವಾಗಿ ಹೆಚ್ಚಿನ ಜನರಲ್ಲಿ ಈಗ ಕಾಡುತ್ತಿರುವ ಶುಗರ್ ಕಾಯಿಲೆಗೆ ರಾಮ ಬಾಣ ಸುಲಭವಾಗಿ ಬೆಳೆಯಬಲ್ಲ ಅಮೃತ ಬಳ್ಳಿ ಹಾಗೂ ಶುಗರ್ ಎಲೆಯೆಂದೇ ಕರೆಸಿಕೊಳ್ಳುವ ಇನ್ಸುಲಿನ್ ಈ ಎಲೆ ಮತ್ತು ಹಾಗಲಕಾಯಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಮೃತ ಬಳ್ಳಿ ಎಲೆ ಹಾಗೂ ಎರಡು ಮೂರು ಶುಗರ್ ಎಲೆ ಎರಡನ್ನೂ ಸೇರಿಸಿ ಹಾಗೆ ಬಾಯಲ್ಲಿ ಚೆನ್ನಾಗಿ ಜಗಿದು ರಸ ನುಂಗಬೇಕು. ಎಳೆ ಎಲೆಯಾದರೆ ಹಾಗೆ ನುಂಗಿಬಿಡಬಹುದು. ಹೊಟ್ಟೆ ತುಂಬ ನೀರು ಕುಡಿಯಬೇಕು. ವಾರಕ್ಕೊಂದಾವರ್ತಿಯಾದರೂ ಹಸಿ ಹಾಗಲಕಾಯಿ ಸಣ್ಣದಾಗಿ ಹೆಚ್ಚಿಕೊಂಡು ಸ್ವಲ್ಪ ಉಪ್ಪು ಬೆರೆಸಿ ತಿನ್ನಬೇಕು.

ಅಮೃತ ಬಳ್ಳಿ ಎಲೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕಾರಣ ಶುಗರ್ ಖಾಯಿಲೆ ಇರುವವರಿಗೆ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೆ. ಬೇರೆಯವರಿಗಿಂತ 50% ಬೇಗ ಇನ್ನಿತರ ಕಾಯಿಲೆಗಳು ಧಾಳಿ ಇಡುತ್ತವಂತೆ. ಅದಕ್ಕೆ ಈ ಎಲೆ ತಿನ್ನುವುದರಿಂದ ಸ್ವಲ್ಪವಾದರೂ ಪರಿಹಾರ ಸಿಗುತ್ತದೆ.

ಇನ್ನು ಶುಗರ್ ಎಲೆ ಇನ್ಸುಲಿನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ಮಾಡಿ ಶುಗರ್ ಲೆವಲ್ ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ಈ ಎಲೆ ರುಚಿಯಲ್ಲಿ ಹುಳಿ ಅಂಶ ಒಳಗೊಂಡಿರುತ್ತದೆ. ಅಮೃತ ಬಳ್ಳಿ ಎಲೆ ಕಹಿ. ಇವೆರಡನ್ನೂ ಸೇರಿಸಿ ತಿನ್ನುವುದರಿಂದ ನಾಲಿಗೆಗೆ ಒಂದು ರೀತಿ ರುಚಿ ಹುಟ್ಟಿಸುತ್ತದೆ. ಶುಗರ್ ಇಲ್ಲದವರು ಈ ಶುಗರ್ ಎಲೆ ಉಪಯೋಗಿಸಿದರೆ ಮೈ ನವೆಯೇಳುತ್ತದೆ. ನನಗೆ ಶುಗರ್ ಇಲ್ಲದಾಗ ಈ ಎಲೆಯ ಗೊಜ್ಜು (ಕಟ್ನೆ)ಮಾಡಿ ಉಪಯೋಗಿಸಿ ಅಂಗೈ ಅಂಗಾಲೆಲ್ಲಾ ತುರಿಕೆ ಶುರುವಾಗಿತ್ತು.

ಈ ಗಿಡಗಳನ್ನು ಬೆಳೆಯುವುದು ಕೂಡಾ ಅತೀ ಸುಲಭ. ಬೆಳೆದ ಕಾಂಡವನ್ನು ಸ್ವಲ್ಪ ಗೊಬ್ಬರ ಹಾಕಿದ ಮಣ್ಣಿನಲ್ಲಿ ಊರಿದರೆ ಕೆಲವೇ ದಿನಗಳಲ್ಲಿ ಗಿಡ ಬೆಳೆಯುತ್ತದೆ. ಶುಗರ್ ಎಲೆ ಗಿಡದಂತೆ ಎತ್ತರವಾಗಿ ಬೆಳೆದರೆ ಅಮೃತ ಬಳ್ಳಿ ಬಳ್ಳಿಯಂತೆ ಹಬ್ಬಿಬಿಡುತ್ತದೆ. ಎರಡೂ ಗಿಡಕ್ಕೂ ದಿನ ನಿತ್ಯ ನೀರು ಹಾಕಬೇಕು.

ಅವರಿವರು ಹೇಳುವ ಇದರ ಉಪಯೋಗದ ಪರಿಣಾಮ ತಿಳಿಯಲು ಈಗೊಂದು ಐದು ತಿಂಗಳಿನಿಂದ ತಪ್ಪದೇ ಪ್ರತಿನಿತ್ಯ ಉಪಯೋಗಿಸುತ್ತಿದ್ದು ಆಶ್ಚರ್ಯಕರ ರೀತಿಯಲ್ಲಿ ಆರೋಗ್ಯ ಇನ್ನಷ್ಟು ಸುಧಾರಿಸುತ್ತಿದೆ. ಆಗೀಗ ತೆಗೆದುಕೊಳ್ಳುವ ಆಹಾರ ವ್ಯತ್ಯಾಸವಾದರೂ ಶುಗರ್ ಲೆವಲ್ ಕೂಡಾ ಕಂಟ್ರೋಲ್ನಲ್ಲಿ ಇರುವುದು ರಕ್ತ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಇನ್ನೊಂದು ವಿಚಾರ ಈ ಎಲೆಗಳನ್ನು ತಿನ್ನುತ್ತಿರುವುದರಿಂದ ದೇಹದಲ್ಲಿ ನಿಶ್ಯಕ್ತಿ ಕಡಿಮೆ ಆಗುತ್ತಿದೆ. ದಿನವೆಲ್ಲಾ ಉತ್ಸಾಹದಿಂದ ಇರುವಂತಾಗಿದೆ. ಮೊದಲೆಲ್ಲಾ ಕಾರಣಾಂತರದಿಂದ ಒಂದೆರಡು ದಿನ ಯೋಗ ಮಾಡದಿದ್ದರೆ ನಿಶ್ಯಕ್ತಿ ಕಾಡುತ್ತಿತ್ತು. ಆದರೆ ಈ ಎಲೆಗಳನ್ನು ತಿನ್ನಲು ಶುರು ಮಾಡಿದ ಮೇಲೆ ಈ ತೊಂದರೆ ಕಾಡುತ್ತಿಲ್ಲ. ಅದಕ್ಕೇ ಏನೋ ಈ ಎಲೆಗೆ ಡಯಾಬಿಟಿಸ್ ಎಲೆ ಎಂದೇ ಜನಜನಿತವಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಡಯಾಬಿಟಿಸ್ ಕಡಿಮೆ ಮಾಡಲು ಸಿರಿಧಾನ್ಯವೊಂದೇ ಪರಿಹಾರ ಅಲ್ಲ. ನನ್ನ ಅನುಭವದ ಪ್ರಕಾರ ದಿನ ನಿತ್ಯ ವಾಕಿಂಗ್, ನಿಯಮಿತ ಯೋಗ, ಯಾವುದೇ ಕಾರಣಕ್ಕೂ ಸಿಹಿ ಪದಾರ್ಥಗಳನ್ನು ತಿನ್ನದೇ ಇರುವುದು, ವಾರಕ್ಕೆ ಒಂದೆರಡು ಬಾರಿ ಭ್ರೌನ್ ರೈಸ್ ಸ್ವಲ್ಪ ಉಪಯೋಗಿಸುತ್ತ ಗೋಧಿಯ ಪದಾರ್ಥ, ರಾಗಿಯ ಪದಾರ್ಥಗಳನ್ನು ಹಾಗೂ ತಿಂಗಳಿಗೊಂದು ನಾಲ್ಕಾರು ಭಾರಿ ದೇಹಕ್ಕೆ ಒಗ್ಗಿದರೆ ಸಿರಿಧಾನ್ಯ ಆಹಾರದಲ್ಲಿ ಅಳವಡಿಸಿಕೊಂಡು ಯಥೇಚ್ಛವಾಗಿ ತರಕಾರಿ, ಸೊಪ್ಪು, ಹಾಲು,ಮೊಸರು,ಮಜ್ಜಿಗೆ, ಕೆಲವು ಹಣ್ಣುಗಳು, ಕೆಲವು ಡ್ರೈ ಫ್ರೂಟ್ಸ್ ತಿನ್ನುತ್ತಿದ್ದರೆ ಯಾವ ಮಾತ್ರೆಗಳೂ ಇಲ್ಲದೇ ಶುಗರ್ ಕಂಟ್ರೋಲ್ನಲ್ಲಿ ಇಡಬಹುದು. ಜೊತೆಗೆ ಈ ಎರಡು ರೀತಿಯ ಎಲೆಗಳು ಮತ್ತು ಒಂದು ಹಾಗಲಕಾಯಿ ವಾರಕ್ಕೊಮ್ಮೆ ದೇಹಕ್ಕೆ ಒಗ್ಗಿದರೆ ನಿಯಮಿತವಾಗಿ ತಿನ್ನಬಹುದು. ಉಷ್ಣ ಹಾಗೂ ಶೀತ ಪ್ರಕೃತಿಯವರಿಬ್ಬರಿಗೂ ಈ ರೀತಿಯ ಆಹಾರ ಒಗ್ಗುತ್ತದೆ.

ಹೊಟ್ಟೆ ಬಿರಿ ತಿನ್ನುವ ಬದಲು ಸಾಕು ಎಂಬಷ್ಟರಲ್ಲೇ ಎದ್ದು ಕೈ ತೊಳೆದುಕೊಂಡು ಇದೇ ಆಹಾರ ದಿನಕ್ಕೆ ನಾಲ್ಕಾರು ಬಾರಿ ಹಂಚಿಕೊಂಡು ತಿನ್ನುವುದರಿಂದ ಶುಗರ್ ಏರುವುದನ್ನು ತಡೆ ಗಟ್ಟಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಈ ಖಾಯಿಲೆ ನಮಗಿದೆ ಎಂಬುದನ್ನೇ ಮರೆತು ಈ ಆಹಾರ ಕ್ರಮದಲ್ಲಿ ಬದುಕುವುದರಿಂದ ಹೆಚ್ಚಿನ ನೆಮ್ಮದಿ ಕಾಣಬಹುದು.

ಎಲ್ಲಿಯವರೆಗೆ ಮಾತ್ರೆಗಳು ಇಲ್ಲದೇ ಶುಗರ್ ಖಾಯಿಲೆ ನಿಯಂತ್ರಣದಲ್ಲಿ ಇಡಬಹುದೋ ಅಲ್ಲಿಯವರೆಗೆ ಹೋರಾಡೋಣ. ಏಕೆಂದರೆ ಮಾತ್ರೆಗಳಿಂದ ಕ್ರಮೇಣ ಅಡ್ಡ ಪರಿಣಾಮ ಗ್ಯಾರಂಟಿ. ಹಾಗೆ ಶುಗರ್ ಲೆವೆಲ್ ಏನಾದರೂ ಜಾಸ್ತಿಯಾಗಿದ್ದು ರಕ್ತ ಪರೀಕ್ಷೆಯಲ್ಲಿ ಕಂಡು ಬಂದು ಆರೋಗ್ಯದಲ್ಲಿ ವ್ಯತ್ಯಾಸವಾದರೆ ಕೂಡಲೇ ಡಾಕ್ಟರ್ ಕಾಣುವುದು ಮರೆಯಬಾರದು. ದೇಹವನ್ನು ಇಂಚಿಂಚಾಗಿ ಟೊಳ್ಳು ಮಾಡುವ ಖಾಯಿಲೆಯಿದು. ಹಾಗಾಗದಂತೆ ನೋಡಿಕೊಳ್ಳಲು ಡಯರ್ಟ ಹಾಗೂ ಶುಗರ್ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳುವುದು ಅತೀ ಮುಖ್ಯ.

ಇದು ನಮ್ಮ ಅನುಭವದ ಮಾತು.

27-6-2019. 10.58pm

ಕಣ್ ಕಟ್ ಆಟ…..

“ಹೋಯ್! ಬೇಗಾ ಬೇಗಾ ಒಳಗಾಕ್ಕೊಳ್ರೋ,ಬಂದಾ ಬಂದಾ, ಹಿಂದೆ ಬತ್ತಾವನೆ. ತೆಗಿ ತೆಗಿ ಆ ಕವರು. ಹಾಕು ಹಾಕು ಕವರಿಂದ ಅದಕ್ಕೆ. ತತ್ತಾ ಈ ಕಡಿಕೆ…….” ಹೀಗೆ ಬಿರುಸಿನ ಮಾತು , ಗಡಿಬಿಡಿ, ಬಚಾವಾಗುವ ಪರಿ. ಎಲ್ಲಾ ಕಣ್ ಕಟ್ ಆಟಾ. ಹೀಗೆ ಮುಂದುವರಿದರೆ ಉದ್ಧಾರ ಆಗೋದು ಯಾವಾಗ? ಉತ್ಪನ್ನಗಳನ್ನು ಯಾಕೆ ಪೂರ್ತಿ ತೆಗೆದು ಹಾಕುತ್ತಿಲ್ಲ. ಕೈಗೆ ಸಿಗದೇ ಇದ್ದರೆ ಇಂತಹ ಸನ್ನಿವೇಶ ಕಣ್ಣೆದುರು ನೋಡುವ ದುರಂತ ಬರ್ತಿತ್ತಾ? ಪದೇ ಪದೇ ಮನೆಗೆ ಬರುವವರೆಗೂ, ಬಂದ ಮೇಲೂ, ಇಂದಿನವರೆಗೂ ಕಾಡುತ್ತಲೇ ಇದೆ. ಅದಕ್ಕೇ ಬರೆಯಲು ಕೂತೆ ಮನಸ್ಸು ತಡೀದೆ.

ನಿನ್ನೆ ಕೆಲವು ಕೆಲಸಗಳ ನಿಮಿತ್ತ ಹೊರಗಡೆ ಹೋದಾಗ ದಾರಿಯಂಚಿಗೆ ಮಾಮೂಲಿಯಾಗಿ ಕೂತು ತರಕಾರಿ ವ್ಯಾಪಾರ ಮಾಡುವವರನ್ನು ಮಾತನಾಡಿಸುವ ಪ್ರಯತ್ನ ಮಾಡಿದೆ. ಸುಮ್ಮನೆ ಏನಾದರೂ ಕೇಳಿದರೆ ಉತ್ತರ ಕೊಡ್ತಾರಾ? ಊಹೂಂ. ಬೇಕಾಗಲಿ ಬೇಡವಾಗಲಿ ಒಂದೆರಡು ತರಕಾರಿ ಆಯೊ ನೆವದಲ್ಲಿ ಮಂಡಿಯೂರಿ ಕೂತೆ ತರಕಾರಿ ಮುಂದೆ. ಅದೆಷ್ಟಣ್ಣಾ ಇದೆಷ್ಟಣ್ಣಾ. ಒಂದರ್ಧ ಕೇಜಿ ಕೊಡು, ಇರು ಇದೇ ರೇಟಿನ ಇನ್ನೊಂದೆರಡು ತರಕಾರಿ ಆಯ್ಕೋತೀನೀ ಅಂತೇಳುತ್ತ ಸುತ್ತ ಮುತ್ತ ಕಣ್ಣಾಯಿಸಿದೆ.

ತಕಳಪ್ಪಾ ಇದ್ದಕ್ಕಿದ್ದಂತೆ ಒಂದು ಯಪ್ಪಾ ಎಲ್ಲಿಂದ ಓಡಿ ಬಂದನೋ, ಮೇಲಿನ ಗಡಿಬಿಡಿ ಮಾತನಾಡುತ್ತ ಟೆನ್ಷನ್ ವಾತಾವರಣ ಸೃಷ್ಟಿ ಮಾಡಿಬಿಟ್ಟ. ನಾನಂತೂ ಅವಕ್ಕಾದೆ. ಹೀಗೂ ಉಂಟಾ? ಅಲ್ಲಾ ಸರಕಾರ ಪ್ಲಾಸ್ಟಿಕ್ ಬ್ಯಾನ್ ಮಾಡ್ತಿದ್ದರೆ ಇವರು ರಂಗೋಲಿ ಕೆಳಗೇ ನುಸುಳೋದಾ? ಶಿವನೇ ಇನ್ನೂ ಏನೇನು ಆಟ ಆಡ್ತಾರೋ.

ಅಷ್ಟಕ್ಕೂ ಈ ರೀತಿ ತೆಳ್ಳಗಿನ ಪ್ಲಾಸ್ಟಿಕ್ ಕವರುಗಳು ಸಿಗೋದಾದರೂ ಎಲ್ಲಿಂದ? ಅವ್ಯಾಹತವಾಗಿ ಅದರಲ್ಲೂ ಕಿರಾಣಿ ಅಂಗಡಿಗಳಲ್ಲಿ, ರಸ್ತೆ ಬದಿ ವ್ಯಾಪಾರಸ್ತರಲ್ಲಿ ಹೇರಳವಾಗಿ ಇನ್ನೂ ಉಪಯೋಗವಾಗ್ತಿರೋದು ನೋಡಿದರೆ ಉತ್ಪಾದನೆ ಇನ್ನೂ ನಿಂತಿಲ್ಲ ಅನಿಸುತ್ತಿದೆ.

ಕ್ಷಣ ಮಾತ್ರದಲ್ಲಿ ಪ್ಲಾಸ್ಟಿಕ್ ಕವರೆಲ್ಲ ಅದೆಲ್ಲಿ ಮಂಗ ಮಾಯ ಮಾಡಿದರೋ ಗೊತ್ತಿಲ್ಲ ಬಿಳಿ ಬಟ್ಟೆ ಚೀಲ ಅಲ್ಲಿ ಕೂತ ನಾಲ್ಕಾರು ವ್ಯಾಪರಸ್ತರ ಮುಂದೆ ಕಣ್ಣಿಗೆ ಎರಚುವಂತೆ ಆಸೀನವಾಯಿತು. ವಾರೆವಾ! ಇದಪ್ಪಾ ಹಿಕ್ಮತ್ ಅಂದರೆ, ಚಕಿಂಗ್ ಬಂದವರ ಮುಂದೆ ಜೀ ಹುಜೂರ್. ಸೂಪರ್ ಐಡಿಯಾ. ನೋಡಿ ಎಂತೆಂಥಹಾ ಐಡಿಯಾ. ಹೀಗೆ ಎಲ್ಲೆಲ್ಲಿ ನಡೆಯುತ್ತದೋ ದೇವರಿಗೇ ಗೊತ್ತು.

“ಕೇಳಿದೆ, ಯಾಕ್ರೀ ಹೀಂಗ್ ಮಾಡ್ತೀರಾ? ನಮ್ಮ ಹತ್ತಿರ ಕವರಿಲ್ಲಾ, ಬ್ಯಾನ್ ಮಾಡಿದ್ದಾರೆ. ಮನೆಯಿಂದ ಬರೋವಾಗ ಚೀಲ ಹಿಡ್ಕೊಂಡು ಬನ್ನಿ ಅಂದರೆ ಆಗ್ತಿರಲಿಲ್ವೆ? ಎಲ್ಲರಿಗೂ ಸದಾ ಹೇಳ್ತಿರಿ. ಆಮೇಲೆ ಕವರು ಸಿಗಲ್ಲಪ್ಪಾ, ಚೀಲ ತಗೊಂಡು ಹೋಗ ಬೇಕು ಹೊರಗಡೆ ಏನಾದರೂ ತರೋದಿದ್ದರೆ ಅಂತ ಜ್ಞಾಪಿಸಿಕೊಂಡು ತರ್ತಾರೆ” ಅಂದೆ.

ಅದಕ್ಕವರು ಅಂತಾರೆ ” ನೋಡಿ ಮೇಡಂ, ನಮಗೂ ಸರಕಾರದ ಜೊತೆ ಕೈ ಜೋಡಿಸೋಕೆ ಇಷ್ಟ. ಆದರೆ ಈ ಇಷ್ಟ ನಂಬಿ ನಾವು ಮುಂದುವರೆದರೆ ಹೊಟ್ಟೆ ಮೇಲೆ ತಣ್ಣೀರ್ ಪಟ್ಟಿ. ಮೇಡಂ ಬಂದಾಗೆಲ್ಲಾ ಹೇಳ್ತಾನೇ ಇರ್ತೀವಿ. ಆದರೆ ಎಲ್ಲೋ ಒಂದೆರಡು ನಿಮ್ಮಂಥವರು ಬಿಟ್ಟರೆ ಯಾರು ಚೀಲ ತರೋದಿಲ್ಲ ಮೇಡಂ. ಅದಕ್ಕೇ ನಾವು ಪ್ಲಾಸ್ಟಿಕ್ ಇನ್ನು ಯೂಸ್ ಮಾಡ್ತಿರೋದು. ಕವರಿಲ್ಲಾ ಅಂದರೆ ತರಕಾರಿನೇ ಬೇಡಾ ಅಂತಾರೆ. ಬೇರೆ ಕಡೆ ತಗೋತಾರೆ. ನಾವೊಂದು ಮಾಡಿದರೆ ಸಾಕಾ ಮೇಡಂ, ಎಲ್ಲಾ ವ್ಯಾಪಾರಿಗಳು ನಿಯತ್ತಾಗಿ ಬೆಂಬಲಿಸಿದರೆ, ಸಾರ್ವಜನಿಕರೂ ನಮ್ಮ ಕಷ್ಟ ಅರ್ಥ ಮಾಡಿಕೊಂಡರೆ ಸರ್ಕಾರದ ನಿಯಮ ಪಾಲನೆ ಆಗಲು ಸಾಧ್ಯ. ನೋಡಿ ಮೇಡಂ ನಮ್ಮ ಅವಸ್ಥೆ. ಎಲ್ಲಾದರೂ ಸಿಕ್ಕಾಕಿಕೊಂಡರೆ ನಮ್ಮ ಗತಿ ಹೇಳಿ. ಆದರೂ ಇದರಲ್ಲೇ ಜೀವನ ಆಗಬೇಕಲ್ಲಾ. ಏನೋ ಹೀಂಗೇ ನಡಿತೀದೆ. ಇರಲಿ ಮೇಡಂ ನಮ್ಮ ಕಷ್ಟ ನಮಗೆ. ಕೊಡಿ ಚೀಲ ತಕಳಿ ನಲವತ್ತು ರೂಪಾಯಿ ಆಯಿತು. ಕಾಸು ಕೊಡಿ” ಅನ್ನಬೇಕಾ!!

ನನಗೆ ಏನು ಹೇಳಬೇಕು ಗೊತ್ತಾಗದೆ ಹಣ ಕೊಟ್ಟು ಸ್ಕೂಟಿ ಏರಿದೆ. ದಾರಿಯುದ್ದಕ್ಕೂ ಅವನ ಮಾತು ಮರುಕಳಿಸುತ್ತಲೇ ಇತ್ತು.
ಮೂಲದಿಂದಲೇ ಅಂದರೆ ಪ್ಲಾಸ್ಟಿಕ್ ಕವರ್ ಉತ್ಪನ್ನವನ್ನೇ ಬಂದು ಮಾಡಿದರೆ ಎಷ್ಟು ದಿನ ಅಂತ ಕವರ್ ಚಲಾವಣೆಯಲ್ಲಿ ಇರಲು ಸಾಧ್ಯ?

ಮನೆ ಮುಂದೆ ಕಸದ ಗಾಡಿ ಬರಲಿ ಚೀಲದಲ್ಲಿ ಸಂಗ್ರಹಿಸಿದ ಕವರುಗಳು ಉಕ್ತಾ ಇರುತ್ತವೆ. ಪ್ರಯಾಣ ಮಾಡುವಾಗ ದಾರಿಯುದ್ದಕ್ಕೂ ಅಕ್ಕ ಪಕ್ಕ ಗಮನಿಸಿದರೆ ಈ ಪ್ಲಾಸ್ಟಿಕ್ ಕವರ್ ಚಿಂದಿ ಇರದ ಜಾಗವೇ ಇಲ್ಲ. ರಸ್ತೆಯಲ್ಲಿ ಚಿಕ್ಕ ಪೆಂಡಾಲ್ ಹಾಕಿ ರಾಮನವಮಿನೋ, ರಾಜಕುಮಾರ್ ಜನ್ಮ ದಿನವೋ ಇಲ್ಲಾ ಇನ್ನೊಂದು ಇತ್ಯಾದಿ ಆದಾಗೆಲ್ಲ ಗಮನಿಸಿದ್ದೇನೆ. ಕುಡಿದು ತಿಂದು ಹಾಕಿದ ಪ್ಲಾಸ್ಟಿಕ್ ಲೋಟ ತಟ್ಟೆಗಳ ರಾಶಿ ಕುಣಿದು ಕುಪ್ಪಳಿಸುವ ಜೋಷಲ್ಲಿ ರಸ್ತೆ ಅಕ್ಕ ಪಕ್ಕ ಬಿಸಾಕಿದ್ದು ನಂತರ ಬೆಳಗಿನ ವಾಕಿಂಗಾಯಣದಲ್ಲಿ ಎಲ್ಲಿ ಕಾಲಿಟ್ಟು ದಾಟಬೇಕು ಅನ್ನುವುದೇ ತಿಳಿವಲ್ಲದು. ಯಾಕೆ ನಮ್ಮ ಜನ ಅಸಂಸ್ಕೃತರಂತೆ ನಡೆದುಕೊಳ್ಳುತ್ತಾರೆ? ಬೀದಿ ಗುಡಿಸುವ ಹೆಂಗಳೆಯರು ಒಂದಷ್ಟು ಬಯ್ಕೊಂಡು ಎಲ್ಲಾ ಬಾಚಿ ಎತ್ತಾಕುವಾಗ ಪಾಪ ಅನಿಸುತ್ತದೆ. ಅವರೂ ನಮ್ಮಂತೆ ಮನುಷ್ಯರಲ್ಲವಾ?

“ನೋಡಿ ಮೇಡಂ. ನಾವಿದ್ದೀವಿ ಗುಡಿಸೋಕೆ ಅಂತ ಹ್ಯಾಂಗ್ ಮಾಡಿಟ್ಟವರೆ” ಸೊಂಟ ಹಿಡಿದುಕೊಂಡು ಹೇಳುವಾಗ ಮನಸ್ಸು ಚುರ್ ಅನ್ನುತ್ತದೆ. ಹಲವಾರು ಬಾರಿ ಕಣ್ಣಿಗೆ ಕಂಡಿದ್ದು ತಡಿಲಾರದೇ ಹೇಳಿದ್ದೂ ಉಂಟು,ಹಾಗೆ ಬಯ್ಸಿಕೊಂಡಿದ್ದೂ ಉಂಟು. ಏನೇ ಹೇಳಿ ಕೆಲವರಂತೂ ಯಾವಾಗ ಬುದ್ಧಿ ಕಲಿತಾರೋ ಅಂತ ತುಂಬಾ ಬೇಸರವಾಗುತ್ತದೆ.

ಹೀಗೆಯೇ ಆದರೆ ಈ ಪರಿಸರ ಸ್ವಚ್ಛವಾಗಿರಲು ಹೇಗೆ ಸಾಧ್ಯ? ಹಸುಗಳಂತೂ ಇವುಗಳನ್ನು ತಿಂದು ಸಾಯ್ತಾ ಇದ್ದಾವೆ. ಮನುಷ್ಯನಿಗೆ ಗೊತ್ತು ಪ್ಲಾಸ್ಟಿಕ್ ನಿಂದ ಏನೆಲ್ಲಾ ಅನಾಹುತವಾಗುತ್ತಿದೆ ಎಂದು. ಆದರೂ ಅದರ ನಿರ್ವಹಣೆ ಮಾಡುವುದರಲ್ಲಿ ಸೋಂಬೇರಿ ತನ ತಿರಸ್ಕಾರ. ಯಾಕಿಂತಹ ದುರ್ಭುದ್ಧಿ. ಪರಿಸರ ಪ್ರಾಣಿಗಳ ಜೀವದ ಬಗ್ಗೆ ಸ್ವಲ್ಪವಾದರೂ ಕಾಳಜಿ ಬೇಡವಾ? ಒಮ್ಮೊಮ್ಮೆ ಅನಿಸುತ್ತದೆ ; “ಭೂಮಿಗೆ ಭಾರ ಕೂಳಿಗೆ ದಂಡ” ಈ ಗಾದೆ ಇಂತಹವರನ್ನು ನೋಡಿಯೇ ಮಾಡಿರಬೇಕು.

ಪ್ಲಾಸ್ಟಿಕ್ ಇಲ್ಲದ ಜೀವನ ಊಹಿಸಿಕೊಳ್ಳಲೂ ಅಸಾಧ್ಯ. ಅಷ್ಟು ನಮ್ಮ ಜೀವನದಲ್ಲಿ ಪ್ರತಿಯೊಂದೂ ಪ್ಲಾಸ್ಟಿಕ್ ಮಯವಾಗಿಬಿಟ್ಟಿದೆ. ಆದರೆ ಕೆಲವು ಕಡೆ ಸಂಪೂರ್ಣ ಬ್ಯಾನ್ ಮಾಡಿ ಯಶಸ್ವಿಯಾಗಿದ್ದಾರೆ. ಹೇಗಪ್ಪಾ ಪ್ಲಾಸ್ಟಿಕ್ ಇಲ್ಲದೇ ಇರ್ತಾರೆ ಅನ್ನೋ ಕುತೂಹಲ ಇತ್ತು.

ಇತ್ತೀಚೆಗೆ ಅಂಡಮಾನ್ ಪ್ರವಾಸಕ್ಕೆ ಹೋದಾಗ ಅಲ್ಲಿಯ ಪರಿಸರ ಕಾಳಜಿ ಕಂಡು ಬೆರಗಾದೆ. ಸಂಪೂರ್ಣವಾಗಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದಾರೆ ಅಲ್ಲಿ. ಇಡೀ ಅಂಡಮಾನ್ ನಲ್ಲಿ ಕುಡಿಯುವ ಬಿಸ್ಲೇರಿ ನೀರು ಬಾಟಲ್ ಮಾತ್ರ ಪ್ಲಾಸ್ಟಿಕ್ ಕಂಡೆ. ಅಲ್ಲಿ ಕಸದ ನಿರ್ವಹಣೆಯೂ ಅಷ್ಟೇ ಚೆನ್ನಾಗಿದೆ. ಉಪಯೋಗಿಸೋದು ಬರೀ ಪೇಪರ್ ಕವರ್, ಸ್ಟೀಲ್ , ಪಿಂಗಾಣಿ, ಗಾಜಿನ ತಟ್ಟೆ, ಲೋಟ. ರಸ್ತೆ ಅಕ್ಕ ಪಕ್ಕದಲ್ಲಿ ಗಿಡಗಳ ಎಲೆಗಳು ಬಿಟ್ಟರೆ ಬೇರೇನೂ ಕಸ ಕಾಣದು. ಏಕೆಂದರೆ ಇಡೀ ಅಂಡಮಾನ್ ಸಮೃದ್ಧವಾಗಿ ಗಿಡಮರಗಳನ್ನು ಬೆಳೆಸಿದ್ದಾರೆ. ಎತ್ತ ನೋಡಿದರೂ ಸಮುದ್ರ ತೀರ. ಅಲ್ಲಿ ಕಡಲಂಚಿನಲ್ಲೂ ಮರಗಳ ಕಸಕಡ್ಡಿ ಬಿಟ್ಟರೆ ಬೇರಾವ ಕಸವೂ ಕಣ್ಣಿಗೆ ಕಾಣದು. ನಿಜಕ್ಕೂ ತುಂಬಾ ಆಶ್ಚರ್ಯ ಪಟ್ಟೆ.

ಇಂದು ವಿಶ್ವ ಪರಿಸರ ದಿನ. ಕಂಡಿದ್ದು, ಕೇಳಿದ್ದು,ಅನುಭವಿಸಿದ್ದು ಒಂದು ಚೂರು ಬರೆಯೋಣ ಅನಿಸಿತು, ಬರೆದೆ. ಮನಸ್ಸು ಆ ಕ್ಷಣ ಸಮಾಧಾನ ಪಡುತ್ತದೆ. ಮತ್ತೆ ಹೊರಗಡೆ ಹೋದಾಗ ಇನ್ನೊಂದು ಮತ್ತೊಂದು ಕಂಡರೆ ತಡಿಲಾರದೇ ಹೇಳ್ತೀನಿ. ಕೆಲವೊಮ್ಮೆ ಬಯ್ಸಿಕೊಂಡು, ಕೆಲವರು ಅರ್ಥ ಮಾಡಿಕೊಂಡರೆ ಖುಷಿ ಪಟ್ಟುಕೊಂಡು ಹೀಗೆ ನಡೆಯುತ್ತದೆ ಜೀವನ ಅಂತ ಗೊತ್ತಿದ್ದರೂ ಮನಸ್ಸಿನ ಮೂಲೆಯಲ್ಲಿ ಎಂದಾದರೂ ಸುಧಾರಣೆ ಆಗಬಹುದೆಂಬ ಭರವಸೆ ಮಾತ್ರ ಇನ್ನೂ ಉಡುಗೇ ಇಲ್ಲ ನೋಡ್ರಿ!😊

4-5-2019. 1.50pm

ನೆಮ್ಮದಿಯ ಬುನಾದಿ

ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಮನಸ್ಸನ್ನು ಹಿಡಿತದಲ್ಲಿಡಲು ಆಗಾಗ ಸೋತು ಹೋಗುವುದಂತೂ ನಿಜ. ಇದಕ್ಕೆ ಕಾರಣ ಮನಸ್ಸಿಗಾದ ಆಘಾತ. ಹೃದಯಕ್ಕಾದ ನೋವು. ಮನಸ್ಸು ತನ್ನ ಅಸ್ತಿತ್ವವನ್ನು ಕಳೆದುಕೊಂಡು ವಿಲ ವಿಲ ಒದ್ದಾಡುತ್ತದೆ. ಹುಡುಕುತ್ತ ಹೋದರೆ ದಿನ ನಿತ್ಯದ ಜೀವನದಲ್ಲಿ ಬೇಕಾದಷ್ಟು ಸಿಗುತ್ತವೆ. ಕೆಲವನ್ನು ನಮ್ಮ ಕೆಲಸದ ಒತ್ತಡದಲ್ಲಿ ಮರೆತು ಬಿಡುತ್ತೇವೆ. ಇನ್ನು ಕೆಲವು ಆಗಾಗ ಮನಸ್ಸನ್ನು ಕುಟುಕುತ್ತಾ ಇರುತ್ತದೆ. ಮರೆಯಲು ಅಥವಾ ನಮ್ಮ ಮನಸ್ಸನ್ನು ಹಿಡಿತಕ್ಕೆ ತರಲು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಆಗೆಲ್ಲಾ ರಾತ್ರಿ ನಿದ್ದೆನೂ ಇಲ್ಲದೇ ಹಗಲು ನೆಮ್ಮದಿಯಿಂದ ಇರಲಾಗದೇ ಏನ್ಮಾಡ್ಲಿ,ಯಾರಲ್ಲಿ ಹೇಳಿಕೊಳ್ಳಲಿ ಎಂಬಂತಾಗುತ್ತದೆ.

ಆದರೆ ಇದರ ಮೂಲ ಸಾಮಾನ್ಯವಾಗಿ ನಮಗೆ ಗೊತ್ತಾದರೂ ಇದರಿಂದ ಹೊರಗೆ ಬರುವ ದಾರಿ ನಾವು ಎಷ್ಟೋ ಬಾರಿ ಹುಡುಕುವ ಪ್ರಯತ್ನವನ್ನೇ ಮಾಡದೆ ಬರೀ ಚಿಂತಿಸುತ್ತ,ದುಃಖ ಪಡುತ್ತ, ಒಂದಷ್ಟು ಕಣ್ಣೀರು ಸುರಿಸುತ್ತ ಕಳೆದು ಬಿಡುತ್ತೇವೆ. ಕೆಲವನ್ನು ಆತ್ಮೀಯರಲ್ಲಿ ಹೇಳಿಕೊಳ್ಳಲೂ ಆಗುವುದಿಲ್ಲ. ಏಕೆಂದರೆ ತೀರಾ ವಯಕ್ತಿಕ ವಿಷಯ ಅದರಲ್ಲೂ ಮನೆಯ ಅಥವಾ ಕುಟುಂಬದ ವಿಷಯ ಹೇಳಲೂ ಆಗದೇ ನುಂಗಿಕೊಳ್ಳಲೂ ಆಗದೇ ಕೊನೆಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಪರಿಸ್ಥಿತಿ. ಚಿತೆ ದೇಹ ಸುಟ್ಟರೆ ಚಿಂತೆ ಆರೋಗ್ಯವನ್ನು ಹದ ಗೆಡಿಸುವುದು ದಿಟ.

ಮನಸ್ಸಿಗೆ ಒಗ್ಗದ ಇನ್ನೊಂದು ಮನಸ್ಸಿನ ಮಾತಿನ ಸುಳಿಯಲ್ಲಿ ಸಿಲುಕಿ ಹೀಗೆ ಆಗುವುದು ಅಥವಾ ಆತ್ಮೀಯ ಸ್ನೇಹಿತರೊ, ಇಲ್ಲಾ ಮನೆ ಜನ ಇಲ್ಲಾ ಕುಟುಂಬ ವರ್ಗದವರಲ್ಲಿ ನಡೆಯುವ ಮಾತುಗಳು ನಮ್ಮ ಕಿವಿಗೆ ಬಿದ್ದಾಗ ಕುಟುಕಿದಂತಾಗಿ ನೆಮ್ಮದಿ ಕಳೆದುಕೊಂಡು ಬಿಡುತ್ತೇವೆ. ಸಂಬಂಧಿಕರು,ಕುಟುಂಬದವರು ಅಥವಾ ಮನೆ ಜನವಾದರೆ ಮೌನ ತಾಳದೇ ಒಂದಷ್ಟು ಚರ್ಚೆ ಮಾಡದೇ ಗತಿ ಇಲ್ಲ. ಅಂತಹವರನ್ನು ದೂರ ಇಡಲೂ ಆಗದೇ ಅವರ ಪರಿಧಿಯಲ್ಲಿ ಇರಲೂ ಆಗದೇ ಮನಸ್ಸಿಗೆ ಇರುಸು ಮುರುಸು.

ಊರು ಅಂದ ಮೇಲೆ ಅಕ್ಕ ಪಕ್ಕ ಇರುವ ತರಾವರಿ ಜನ ಅವರು ಹರಿಯ ಬಿಡುವ ನಾಲಿಗೆಯ ಮಾತು, ಅವರದೇ ಆದ ಮಾತಿನ ವೈಖರಿ ಮನಸ್ಸನ್ನು ಜರ್ಜರಿತವಾಗಿ ಮಾಡಿಬಿಡುತ್ತದೆ. ವಾದಕ್ಕೆ ನಿಂತರೆ ಜಗಳ ಗ್ಯಾರಂಟಿ. ಇನ್ನಷ್ಟು ಹೊಟ್ಟೆ ಒಳಗಿನ ಮಾತು ಮುಲಾಜಿಲ್ಲದೆ ಕಕ್ಕುವುದಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಇದು ಅಸಹ್ಯ ಮತ್ತು ನಮ್ಮ ಗೌರವಕ್ಕೆ ಕುಂದು ಕೂಡಾ ಹೌದು. ಕೆಲವರಂತೂ ಜಗಳ ಕಾಯೋಕೆ ಇರುವವರಂತೆ ವರ್ತಿಸುವವರನ್ನು ಕಾಣಬಹುದು. ಇವರೊಂಥರಾ ಜಿದ್ದಿಗೆ ಬಿದ್ದವರೆಂದರೆ ತಪ್ಪಾಗಲಾರದು. ಇಂತಹವರೊಂದಿಗೆ ಯಾವ ಮಾತೂ ಬೇಡಾ ಮೌನ ತಾಳಿಬಿಡಿ. ದಂಡಂ ದಶಗುಣಂ ಅಂದ ಹಾಗೆ ನಮ್ಮ ಮೌನವೇ ಅವರಿಗೆ ಮೈ ಪರಚಿಕೊಳ್ಳುವಂತಾಗುವುದು ಗ್ಯಾರಂಟಿ. ಗಾಳಿ ಜೊತೆ ಎಷ್ಟು ದಿನ ಅಂತ ಒಬ್ಬರೇ ಗುದ್ದಾಡೋಕೆ ಸಾಧ್ಯ?

ಇನ್ನು ಸ್ನೇಹಿತರಾದರೆ ಹಲವು ದಿನಗಳ ಒಡನಾಟವಿರಬಹುದು ಅಥವಾ ಅವರೇನು ಅಂದುಕೊಳ್ಳುವರೆಂಬ ಧಿಗಿಲೂ ಕಾರಣವಿರಬಹುದು. ದೂರ ಇಡಲು ಸ್ವಲ್ಪ ಕಷ್ಟ ಕೂಡಾ ಹೌದು. ಇದರಿಂದ ಒಟ್ಟಿನಲ್ಲಿ ಮನಸ್ಸಿಗೆ ಶಾಂತಿಯಿಲ್ಲದೇ ದಿನ ದೂಡಬೇಕಾದ ಅನಿವಾರ್ಯತೆ ನಾವೇ ನಮಗೆ ಗೊತ್ತಿಲ್ಲದಂತೆ ಸೃಷ್ಟಿ ಮಾಡಿಕೊಂಡು ಆಮೇಲೆ ಒದ್ದಾಡೋದೂ ನಾವೇ.

ಅದಕ್ಕೇ ಹೇಳೋದು “ಸರಿಯಾಗಿ ಒಬ್ಬರ ಬಗ್ಗೆ ತಿಳಿಯದೇ ಸಹವಾಸ ಮಾಡಬೇಡಾ, ಬೆಳ್ಳಗಿರುವುದೆಲ್ಲ ಹಾಲಲ್ಲ” ಹಿರಿಯರ ಹಿತ ನುಡಿ. ಜೀವನದಲ್ಲಿ ಅನುಭವಕ್ಕೆ ಬಂದ ಮೇಲೇ ಹಿರಿಯರ ನುಡಿ ಹೌದೆಂದು ಗೋಣಲ್ಲಾಡಿಸುವುದು. ಎಷ್ಟು ಕಲಿತರೂ ಮುಗಿಯದ ಹಾದಿ ಈ ಜೀವನ ಪಥ. ಇಟ್ಟ ಎಚ್ಚರಿಕೆಯ ಹೆಜ್ಜೆಗಳು ನಂಬಿಕೆಯನ್ನು ಬುಡ ಮೇಲು ಮಾಡಿಬಿಡುತ್ತವೆ. ಮನಸ್ಸಿಗದೆಷ್ಟು ಆಘಾತ!

ಇರಲಿ, ನಡೆಯುವವನು ಎಡವುವುದು ಸಾಮಾನ್ಯ. ಆದರೆ ಈ ಇರುಸು ಮುರುಸು ಬದಿಗೊತ್ತಿ ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲಿ ಸಾಧ್ಯವಾದಷ್ಟು ಒಂದು ಗಟ್ಟಿ ನಿರ್ಧಾರ ತಳೆದು ಅಂತಹವರಿಂದ ದೂರ ಇರುವುದೇ ಇದಕ್ಕೆ ಸರಿಯಾದ ಪರಿಹಾರ. ಆಗ ನೋಡಿ ಮನಸ್ಸು ಅದೆಷ್ಟು ನಿರಾಳ.

ಕೊಂಕು ಮಾತು ಮನುಷ್ಯನ ನೆಮ್ಮದಿ ಹಾಳು ಗೆಡವುತ್ತದೆ. ಈ ರೀತಿ ಮಾತಾಡೋದು ಕೆಲವರ ಹುಟ್ಟು ಗುಣ. ತಮ್ಮ ಪ್ರತಿಕ್ರಿಯೆ, ಮಾತಿನಿಂದ ಇನ್ನೊಬ್ಬರಿಗೆ ಎಷ್ಟು ನೋವಾಗಬಹುದು, ಅವಮಾನ ಆಗಬಹುದು ಎಂಬ ಪರಿಜ್ಞಾನವೂ ಇಲ್ಲದೇ ವರ್ತಿಸುವವರನ್ನು ಯಾವ ಮುಲಾಜಿಲ್ಲದೆ ದೂರ ತಳ್ಳುವುದು ಕ್ಷೇಮ. ಇಂಥವರು ನಮಗೆ ಬೇಕಾ? ಇವರಿಲ್ಲದೇ ನಾವಿರಲು ಸಾಧ್ಯ ಇಲ್ವಾ? ಯಾಕೆ ಇಂತಹವರ ಸಹವಾಸ ಮಾಡಿದೆ? ಇವರಿಂದ ನಮಗೆ ಆಗಬೇಕಾದ್ದು ಏನಿದೆ?ಇತ್ಯಾದಿ ಸಮಾಧಾನವಾಗಿ ಕುಳಿತು ಯೋಚಿಸಬೇಕು. ನಾವು ಮಾಡುವ ವಿಚಾರ ಧಾರೆ,ಸರಿ ತಪ್ಪುಗಳ ವಿಶ್ಲೇಷಣೆ ಮನಸ್ಸು ಒಂದು ದೃಢ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ.

ಸೂಕ್ಷ್ಮ ಮನಸ್ಸಿನ ಸಂವೇದನೆ ಹೃದಯದಲ್ಲಿ ನೋವಿನ ಅಲೆ ಎಬ್ಬಿಸಿದಾಗ ಚಿತ್ತ ಶಾಂತಿಯನ್ನು ಕಳೆದುಕೊಂಡು ಯಾವ ಕೆಲಸದಲ್ಲೂ ಏಕಾಗ್ರತೆ ಇಲ್ಲದೆ ಒದ್ದಾಡುವ ಬದಲು ಸಂಕೋಚ ಮನೋಭಾವನೆಯಿಂದ ಹೊರ ಬಂದಾಗ ಮಾತ್ರ ಗಟ್ಟಿ ನಿರ್ದಾರಕ್ಕೆ ಬರಲು ಸಾಧ್ಯ. ಇದು ಸ್ವಲ್ಪ ಕಷ್ಟ ಆದರೂ ನೆಮ್ಮದಿಯಿಂದ ಇರಬೇಕೆಂದರೆ ರೂಢಿಸಿಕೊಳ್ಳುವುದು ಅನಿವಾರ್ಯ. ಇದು ಜೀವನಕ್ಕೆ ಅಗತ್ಯವೂ ಕೂಡಾ. ಈಜಬೇಕು, ಇದ್ದು ಜಯಿಸಬೇಕು.

ಏಕೆಂದರೆ ಯಾರೂ ಯಾರ ಜೀವನಕ್ಕೂ ಹೊಣೆಗಾರರಲ್ಲ. ನಾವು ಹೇಗಿರಬೇಕು, ನಮಗೆ ಯಾವುದು ಸರಿ, ನಮಗೇನು ಬೇಕು, ನಮಗೆಲ್ಲಿ ನೆಮ್ಮದಿ ಇದೆ ಇತ್ಯಾದಿ ಎಲ್ಲವನ್ನೂ ಸಂಪೂರ್ಣವಾಗಿ ನಿರ್ಧರಿಸುವ ಜವಾಬ್ದಾರಿ ನಮ್ಮದೇ. ಏರುವ ಮಂಗನಿಗೆ ಎಲ್ಲಿವರೆಗೆ ಮರ ಹತ್ತಿಸಲು ಸಾಧ್ಯ? ಕೈಗೆಟುಕುವವರೆಗೆ. ತದ ನಂತರ ಏರುವ ಗತಿ ಸ್ವಂತವಾಗಿ ಕಲಿತು ಮುಂದುವರಿಯಬೇಕು. ಹೆತ್ತವರು ಮಾಡಿಲ್ಲಾ, ಒಡ ಹುಟ್ಟಿದವರು ಮಾಡಿಲ್ಲ, ನನಗ್ಯಾರೂ ಕೇರ್ ತಗೊಂಡಿಲ್ಲ ಅಂತ ಗೊಣಗುವುದು ತಪ್ಪು. ಯಾರೂ ಯಾರಿಗಿಲ್ಲ. ನಮಗೆ ನಾವೇ ಗೋಡೆಗೆ ಮಣ್ಣೇ. ಎಷ್ಟು ಮುತುವರ್ಜಿಯಿಂದ ನಾವು ಹೆಜ್ಜೆ ಇಡ್ತೀವೋ ಹಾಗೆ ನಡೆಯುತ್ತದೆ ನಮ್ಮ ಜೀವನ.

ಹಾಗಾದರೆ ನಾವು ಇವೆಲ್ಲ ತಿಳಿದುಕೊಳ್ಳುವುದು ಹೇಗೆ? ಕೆಲವೊಂದು ನಮ್ಮ ಯೋಚನೆಗೆ ನಿಲುಕದಲ್ಲಾ? ಏನು ಮಾಡಲಿ ಎಂಬ ಗೊಂದಲಕ್ಕೆ ಪರಿಹಾರ ಪುಸ್ತಕಗಳು. ನಮಗೆ ಏನೇ ಸಮಸ್ಯೆ ಬರಲಿ ಓದುವ ರೂಢಿ ನಮ್ಮಲ್ಲಿ ಇದ್ದರೆ ಇದಕ್ಕೆ ಸಂಬಂಧಪಟ್ಟ ಪುಸ್ತಕಗಳು ದಂಡಿಯಾಗಿ ದೊರೆಯುತ್ತವೆ. ಅನುಭವದ ಮಾತುಗಳನ್ನೇ ಬರೆದಿರುವರು ಎಷ್ಟೋ ಲೇಖಕರು. ಬದುಕಿನ ಪ್ರತಿಯೊಂದು ಗಟ್ಟದಲ್ಲಿ ಅರಿಯಬೇಕಾದ್ದು ಸಾಕಷ್ಟಿವೆ. ಕೆಲವು ಓದಿ, ಕೆಲವು ನಿಜ ಜೀವನದಲ್ಲಿ, ಕೆಲವು ಜನರ ನಡುವೆ ಬೆರೆತಾಗ ಅರಿವಾಗುತ್ತ ಹೋಗುತ್ತದೆ. ಮನಸ್ಸಿಗೆ ಇದರಿಂದ ಎಷ್ಟು ತಿಳುವಳಿಕೆ ಪಡೆಯುತ್ತ ಹೋಗುತ್ತೇವೊ ಅಷ್ಟು ನಮ್ಮ ಬುದ್ಧಿ ಚುರುಕಾಗಿ ಜಾಗೃತ ಭಾವ ನೆಲೆಗೊಳ್ಳುತ್ತದೆ. ಮನಸ್ಸಿನ ನೆಮ್ಮದಿಗೆ ಓದು ಅತೀ ಮುಖ್ಯ.

ಕೆಲವೊಮ್ಮೆ ಸ್ವಾರ್ಥಿಯಾಗಿ ಯೋಚನೆ ಮಾಡಲೇ ಬೇಕಾದ ಅನಿವಾರ್ಯತೆ ಇಂತಹ ಸಂದರ್ಭದಲ್ಲಿ. ಪರವಾಗಿಲ್ಲ, ಇದರಲ್ಲೇನು ತಪ್ಪು? ನನ್ನ ನೆಮ್ಮದಿ ಮುಖ್ಯ, ಮಿಕ್ಕಿದ್ದು ಗೌಣ ಎಂದು ಮುಂದುವರಿದಲ್ಲಿ ಮಾತ್ರ ಮನಸ್ಸು ಕಾಣುವುದು ನೆಮ್ಮದಿ. ನಮ್ಮ ಸುತ್ತ ಮುತ್ತಲಿನ ಪರಿಧಿ ಮನಸ್ಸಿಗೆ ಹಿತ ಕೊಡುವವರ ಮಧ್ಯ ಇದ್ದರೆ ಸಾಕೆಂಬ ಸಮಾಧಾನ ಹೆಚ್ಚಿನ ಸಂತೋಷ ಕೊಡುತ್ತದೆ. ನಾಲ್ಕು ಜನರ ನಡುವೆ ಇರಬೇಕೆನ್ನುವುದು ಮನುಷ್ಯನ ಸಹಜ ಗುಣ. ನಮ್ಮ ಮನಸ್ಸಿಗೆ ಒಗ್ಗುವವರ ಮದ್ಯೆ ಇದ್ದು ನೆಮ್ಮದಿ ಜೀವನ ನಡೆಸೋಣ.

5-5-2019. 12.59am