ವಚನ

ತನು ಕಲಕುವ ದುಃಖಕ್ಕೆ
ಹೊಣೆಗಾರ ಯಾರು
ಮನ ಮೂಖವಾದರೆ
ಅನುಭವಿಸು ನೀನು॥

ಮಾಡಿರುವ ಕರ್ಮಕ್ಕೆ
ಅಡಿಗಡಿಗೆ ಎರಗಿದರೂ
ಪಾಪದ ಕೊಳೆಯಳಿಯದು
ಅನುಭವಿಸು ನೀನು॥

ಆಸೆಯೆಂಬುದು ಮನುಜ
ನಿನ್ನ ಬೆಂಬಿಡದ ಭೂತ
ಅನುದಿನವು ಕಾಡುವುದು
ಅನುಭವಿಸು ನೀನು॥

ಪ್ರೀತಿಯೆಂಬುದು ಬರಿ ಭ್ರಮೆ
ನೆಚ್ಚಿಕೊಂಡಡಿಯಿಟ್ಟಲ್ಲಿ
ಸಿಗುವುದು ಕೊನೆಯಲ್ಲಿ ದುಃಖ
ಅನುಭವಿಸು ನೀನು॥

ನನಗಾರು ಇಹರೆಂದು
ಮಮ್ಮಲ ಮರುಗದಿರು ಮಂಕೆ
ಬಿಟ್ಟು ಹೋಗುವವರೇ ಎಲ್ಲ
ಅನುಭವಿಸು ನೀನು॥

ದಿಟವಾದ ಸತ್ಯ
ಎಂದಿಗೂ ಬಲು ಕಹಿಯೆ
ಅರಗಿಸಿಕೊಳ್ಳಲಾಗದಿದ್ದರೂ
ಅನುಭವಿಸು ನೀನು॥

ಮನು ಕುಲಕೆ ನೀ ಬಂದು
ಮಾಡಬಾರದು ಮಾಡಿದರೆ
ಕರ್ಮ ಕಳೆಯುವವರೆಗೆ
ಅನುಭವಿಸಲೇ ಬೇಕೆಂದ ದೇವ॥

9-3-2017. 9.37pm

ವಚನ

ಮೌನದ ಬೆಂಬತ್ತಿದ ಮನಸು
ಇನ್ನಿಲ್ಲದ ಚಿಂತೆಯಲಿ
ಧಾಂಗುಡಿಯಿಡುವ ಭವಿಷ್ಯದ
ಕನಸುಗಳ ಬೊಂತೆಯಲಿ
ಸದಾ ಚಿಂತಾಕ್ರಾಂತ॥

ಆಗದ ಆಸೆಗಳ ಬೆನ್ನತ್ತಿ
ಮಾಯಾ ಜಿಂಕೆಯ ಹಿಡಿಯುವ ಓಟ
ಸಿಕ್ಕೇ ಸಿಗುವುದೆಂಬ ಭರವಸೆಯಲಿ
ಇಟ್ಟುಕೊಂಡ ನಂಬಿಕೆ
ಹುಸಿಯಾಗದಿರಲೆಂದು ಪ್ರಾರ್ಥನೆ॥

ಇರುವ ನಾಲ್ಕು ದಿನಕೆ
ಸಿಕ್ಕ ಅನುರಕ್ತದ ಇರುವಿಕೆಯ ಬದಿಗೊತ್ತಿ
ಇರದುದಕೆ ಕೂಡಿಡುವ
ಕಾಂಚಾಣದ ಆಮಿಷೆ ಸತತ
ತುತ್ತಿಗೂ ತತ್ವಾರದ ಜಿಗುಟುತನ॥

ಸತ್ತಾಗ ಹಿಂದೆ ಬಾರದಿಹ ಗಂಟಿಗೆ
ಇರುವಾಗ ಅದೆಷ್ಟು ನಂಟು
ನಾನೂ ನನ್ನದೆನ್ನುವ ಬಡಿದಾಟದ ಬದುಕಿಗೆ
ಜೋತು ಬಿದ್ದೇ ದಿನ ದೂಡುವ ನರಜನ್ಮಕೆ
ನಾಕ ನರಕದ ಯೋಚನೆಯೂ ಇಲ್ಲ॥

ಇದು ಜೀವನ ಇದುವೆ ನಾಕ ನರಕ
ಇದ್ದರೂ ಇಲ್ಲದಂತಿರಬೇಕು ಎಲೆ ಮರೆಯ ಕಾಯಂತೆ
ಹೊನ್ನು ಕೂಡಿಟ್ಟು ಪರರ ಬಾಯಿಗಾಗುವುದರ ಬದಲು
ದಾಹ ತೀರಿಸು ಹರಿದು ಹಂಚಿ ಮರೆಯಲ್ಲಿ
ಸ್ವರ್ಗದರಮನೆ ಇಲ್ಲಿಹುದು ಕಾಣೆಂದ ದೇವ॥

14-1-2017. 3.21pm

ವಚನ

ಎಣ್ಣೆ ಮಜ್ಜನಗೊಂಡ ದೇಹ
ಹಂಡೆಯ ಬಿಸಿ ನೀರಲಿ ಮಿಂದೆದ್ದರೆ
ಇನ್ನಿಲ್ಲದ ಸುಖವ ಕಾಣುವುದು
ಮೈ ಮನವೆಲ್ಲ ಹಗುರಾಗಿ
ಕೀಲುಗಳೆಲ್ಲ ಸಡಿಲಾಗಿ
ಲವಲವಿಕೆ ತಾಂಡವವಾಡುವುದು॥

ಆಹಾ! ಕಾಳು ಶುಂಠಿಯಲದ್ದಿ
ಜೀರಿಗೆ ಕೊತ್ತಂಬರಿ ಬೆಲ್ಲ
ಪೇರಿಸಿದರದ್ಲೋಟ ಬಿಸಿ ಬಿಸಿ
ಕಷಾಯ ಪೊಗದಸ್ತು ನಿದ್ದೆಯಲಿ
ಗೊರಕೆ ಹೊಡಿ ಎಂದ ದೇವ॥

7-1-2017. 10.13am

ವಚನ

ಸಂಭಾವಿತರಂತೆ
ಸೋಗು ಹಾಕುವುದು ಮನಸು
ಕಾಳನ ಕಾಟವಿಲ್ಲ ಬೋಳನ ಹಂಗಿಲ್ಲದಂತೆ॥

ಕನ್ನಡಿ ಹಿಡಿದಂತೆ ಕಾಣುವುದು
ಆದರೊಳಗಿನ ಹುಳುಕು, ಥಳುಕು
ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ॥

ಜನ್ಮ ಜಾತವೆ
ಮರುಳು ಮಾಡುವ ಕೊಳಕು ಕಲೆ
ಲಂಗು ಲಗಾಮಿಲ್ಲದ ಓಟದ ಕುದುರೆ॥

ಸಿಕ್ಕಲ್ಲೆ ಸೀರುಂಡೆ
ಅದಕಿಲ್ಲ ಯಾರ ಅಡೆತಡೆ
ಮುಂಡೆ ಮದುವೇಲಿ ಉಂಡವನೆ ಜಾಣನಂತೆ॥

ಮನಸೆ ಪಟದಂತೆ ಹರಿಯುವ
ಅತಂತ್ರ ಬದುಕು ಈಗ ಕಾಣುವುದಿಲ್ಲ
ಪಾಪ ತುಂಬಿದ ಕೊಡ ತುಂಬ ಬೇಕು॥

ಮೇಲೇ ಇರುವೆನೆಂಬ ಭ್ರಮೆ ಬೇಡ
ಚಕ್ರ ತಿರುಗಿದಂತೆ ಕಾಲನ ಯಾನ
ಇಳಿದಾಗ ಕಾಣುವೆ ಮಾಡಿದ ಕೃತ್ಯದ ಫಲ॥

ಯಾರಿಗೆ ಯಾರೂ ಇಲ್ಲ
ನೀ ಮಾಡಿದ ಪಾಪಕ್ಕೆ ಯಾರಾಗಲಾರರು
ನಮಗೆ ನಾವೇ ಗೋಡೆಗೆ ಮಣ್ಣೆ ಗತಿ॥

ಇದು ಜೀವನ
ಇದುವೇ ಬದುಕಿನ ಮಮ೯
ಶರಣನ ಗುಣ ಮರಣದಲ್ಲಿ ಕಾಣೆಂದ ದೇವ॥
30-10-2016. 1.13pm

ವಚನ

ಅರಿತರೆ ಅಥ೯
ಅರಿಯದಿರೆ ಅನಥ೯
ಬದುಕು ಸ್ವತಂತ್ರ
ಬದುಕಾಗದಿರಲಿ ಅತಂತ್ರ॥

ಅವನಿತ್ತ ಬಾಳು
ಅರಿಯದಿರೆ ಹಾಳು
ಬದುಕಿನ ಯೋಚನೆ
ಬದುಕಿಗೆ ಯಾತನೆ॥

ಅವನೊಂದಿಗಿನ ನಡೆ
ಅದನರಿತರೆ ಬಿಡೆ
ಬದುಕಲಿದು ಸತ್ಯ
ಬದುಕಿಗಿದೇ ನಿತ್ಯ॥

ಅವನಿಲ್ಲದೆ ಬಾಳಿಲ್ಲ
ಅವನಿಲ್ಲದೆ ಜಗವಿಲ್ಲ
ಬದುಕಿನ ಹೋರಾಟಕು
ಬದುಕಲ್ಲಿ ಅವನಿರಬೇಕು॥

ಅವನೆ ಹುಟ್ಟಿಸಿದವನು
ಅವನೆ ಕಾಪಾಡುವವನು
ಬದುಕು ಅವನಿಗಾಗಿ
ಬದುಕು ಸತ್ಯವಂತನಾಗಿ॥

ಅವನ ನೆನೆಯದಿರಬೇಡ
ಅವನ ಮರೆಯಬೇಡ
ಬದುಕಾಗುವುದು ಶೃಂಗಾರ
ಬದುಕಾಗುವುದು ಬಂಗಾರವೆಂದ ದೇವ॥
17-8-2016. 8.54pm

‌‌