ವಾವ್ ಚಾಯ್


ಕಿಸಿ ಬ್ಯಾಡೋ ಹಲ್ಲು
ನಂಗೊತ್ತಾತು ನಿನಗೇನು ಬೇಕು
ಒಂದ್ ಕಪ್ ಚಹಾ ತಾನೆ
ಒಸಿ ತಡಕ!

ಒಲೆ ಹಚ್ಚಲಬೇಕು
ನೀರು ಮರಳಸಲ ಬೇಕು
ಪುಡಿ ಹಾಕಲ ಬೇಕು
ಹಂಗ ಹದವಾಗಿ ಗೊಟಾಯಿಸಲ ಬೇಕು
ಗಟ್ಟಿ ಹಾಲು
ಪಕ್ಕಕ್ಕಿಟ್ಕಂಡಿರಬೇಕು.

ಗೊತ್ತಾತೇನು?
ಚಹಾ ಮಾಡೂದಂದ್ರ
ಅಷ್ಟು ಸುಲಭ ಅಲ್ಲ
ನೀ ಹ್ಯಾಂಗ್ಯಾಂಗೋ ಮಾಡಿದ್ರ
ಥೇಟ್ ನಮ್ಮೂರ ಹಸುವಿಗಿಡ
ಕಲ್ಗಚ್ಚ ಆಗ್ತದ.

ಮತ್ತ ಒಬ್ರೆ ಹಿರಿದರ
ರುಚಿನೂ ಗೊತ್ತಾಗಾಂಗಿಲ್ಲ
ಮಂದಿ ಕೂಡ
ಕುಡಕ್ಕೋಂತಾ ಕೂತ್ರ
ಅದರಮಜಾನೇ ಬೇರೆ.

ಬನ್ನಿ ಬನ್ನಿ ಬನ್ನಿ
ಎಲ್ಲಾರೂ ಚಹಾ ಹಿರೋಣ
ಗಮ್ಮತ್ತಾಗಿ
ಲಾಕ್ ಡೌನ್ ಸಮಯ
ಕಳೆಯೋಣ.

ಏನಂತೀರಿ..?

21-5-2021. 3.58pm

ಅದೂ ಇಲ್ಲ ಇದೂ ಇಲ್ಲ

ನನಗೊಂದು ಹುಕಿ ಬಂದಿದೆ
ಬರೆಯಬೇಕೆಂಬುದು
ಆದರೆ ಏನು ಬರೆಯಲಿ?
ಇದು ದೊಡ್ಡ ಪ್ರಶ್ನೆ.

ಯಾವುದೇ ವಿಷಯ ತಡಕಾಡಲಿ
ಬರೆಯಬೇಕೆಂದರೆ
ಇದವರು ಬರೆದಿರಬಹುದು
ಇವರು ಬರೆದಿರಬಹುದು
ಹಳತಾಯಿತಲ್ಲವೇ ವಿಷಯ?

ಸರಿ ಇನ್ನೇನು ಸಿಕ್ಕಿತು ವಿಷಯ
ಎಂಬುವಷ್ಟರಲ್ಲಿ
ತಂದೆಲ್ಲಿಡಲಿ ಎಂದು ಬಂದೇ ಬಿಟ್ಟಿತು
ಚಹಾದ ನೆನಪು.

ಇನ್ನು ಮಾಡಿ ಕುಡಿಯದಿದ್ದರೆ
ಉಳಿಗಾಲವುಂಟೇ?
ತಲೆಬಂಡಿ ಮುಂದೆ ಹೋಗುವುದಿರಲಿ
ಹಿಂದೆಯೂ ಬರಲೊಲ್ಲದು.

ಹಾಲಿಕ್ಕಿ ಪುಡಿ ಹಾಕಿ
ಸಕ್ಕರೆಯಿಲ್ಲದ ಚಹಾ ಸೋಸಿ
ಇನ್ನೇನು ಗುಟುಕರಿಸಬೇಕು
ಸಾಕಿದ ಬೆಕ್ಕು ಕಾಲು ಸುತ್ತುತ್ತದೆ
ಮಿಯಾವ್….ಮಿಯಾವ್….

ಮುದ್ದುಗರೆದು ಮಮ್ಮು ಹಾಕಿ
ಬಂದು ಕುಡಿಯಲು ನೋಡುತ್ತೇನೆ
ಅಷ್ಟೊತ್ತಿಗೆ ಚಹಾ ತಣ್ಣಗೆ
ಬಿಸಿ ಮಾಡದೇ ಕುಡಿಯಲಾದೀತೇ?

ಇತ್ತೀಚೆಗೆ ಟು-ಲೆಟ್ ಬೋರ್ಡ್ ಎಲ್ಲೆಲ್ಲೂ
ಕಾಯುವುದರಲ್ಲಿ ನಂದೂ ಪಾಲು
ಖಾಲಿ ರೋಡಲ್ಲಿ ಯಾರು ಅಪರೂಪಕ್ಕೆ ಓಡಾಡಿದರೂ
ಕುತ್ತಿಗೆ ನೆಟ್ಟಗೆ ಮಾಡುವಂತಾಗಿದೆ ಈ ಕೊರೋನಾ ಭೀತಿ!

ಥೋsssssss ಈ ಕುತೂಹಲದಲ್ಲಿ
ಮತ್ತೆ ಚಹಾ ತಣ್ಣಗಾಗಿ
ಬರೆಯಬೇಕೆಂದಿದ್ದ ವಿಷಯವೂ ಮಾಯಾ
ಅದೂ ಇಲ್ಲ ಇದೂ ಇಲ್ಲ ದೇವರೇ ದೇವರೇ…..

23-11-2020. 5.45pm✍️

ಉದ್ದಂಡ ನಮಸ್ಕಾರ; ಸುಟ್ ಚಾಕ್ಕೆ

ಸಂಜೆ ನಾಕ್ಕಂಟೆ ಆಗೋತು
ಮನಸ್ಸೆಳಿತಾ ಇದ್ದು
ಆದ್ರೆ ಕುಡಿಯವ ಬ್ಯಾಡ್ದ ….
ಕುಡಿಯವ ಬ್ಯಾಡ್ದ.

ಅಲ್ದೆ…..
ಮೀನಾಮೇಷ ಎಂತಕ್ಕೆ ಮಾಡ್ತೆ?
ಕುಡಿ ಕುಡಿ ಪರವಾಗಿಲ್ಯೆ
ಇವತ್ತೊಂದಿನಾ….

ಅದೌದು..
ಆದ್ರೆ ಜಾಗರಣೆಗೆ ಎಂತಾ ಮಾಡವೆ?
ಕಪ್ಪಪ್ಪ ಹೊತ್ತಿಗೆ ಕುಡದ್ರೆ ನಿದ್ ಬತ್ತಿಲ್ಯಲೆ….

ಎಂತಾರು ಬರಿಯೆ,ಓದೆ
ಟೀವಿ ನೋಡೆ ಸಾಕು
ಬೆಳಿಗ್ಗೆ ಎಂತಾ ಲಗೂನೆ ಏಳವನೆ….
ಹ್ಯಾಂಗಿದ್ರೂ ವರ್ಕ್ ಫ್ರಮ್ ಹೋಮಪ…
ಸಾವಕಾಶವಾಗಿ ಕೆಲ್ಸ ಮಾಡ್ಕಂಡ್ರಾತು ಸೈ ತಗ…
ಜೀವನ್ದಲ್ಲಿ ಇನ್ನೆಂತದೆ?
ಇಶಿಶಿ….ಎಲ್ಲದಕ್ಕೂ ತಲೆ ಎಂತಕ್ಕೆ ಕೆಡಿಸ್ಕತ್ತೆ?
ಸಣ್ಣ ಕಪ್ಪಲ್ಲಿ ಕುಡಿ ಸಾಕು
ಒಂದು ರಾತ್ರಿ ನಿದ್ದೆಗೆಟ್ಟರೆ
ಆಗದೆಂತದು ಇಲ್ಲೆ.

ಅಬ್ಬಾ! ಯಾನಮನಿ ಮಾತು
ಈ ಚಹಾದ್ದೂ…..
ಕೊರೋನಾ ಬಂದಿದ್ದು
ಮಗಳು ಆಫೀಸಿಗೆ ಕೆಲಸಕ್ಕೆ ಹೋಗ್ತಿಲ್ಲೆ
ಹೇಳದೆಲ್ಲ ಹ್ಯಾಂಗ್ ಗೊತ್ ಮಾಡ್ಕಂಡಿಗೀದೂ…!

ಈಗಿತ್ಲಾಗೆಂತೂ
ಬ್ಯಾಡ್ ಬ್ಯಾಡಾ ಅಂದ್ರೂ ಬೆನ್ನಟ್ಕಂಡ ಬತ್ತು
ಇದರ ಮಾತಿಗೆ ಮರುಳಾಗಿ
ಆವಾಗಾ ಆವಾಗಾ ಕುಡಿಯದು
ಕಡಿಗೆ ಹಾಸಿಗೆಯಲ್ಲಿ ಹೊರಳಾಡದು
ನಂಗಂತೂ ನಿದ್ದೆಗೆಟ್ಟಗೆಟ್ಟ್ ಸಾಕಾಗೋಜು
ಆದ್ರೂವಾ ಚಾ ಮಾತ್ರ ಬಿಡಲಾಗ್ತಿಲ್ಲೆ
ಎಂತಾಮಾಡವನ…ಎಂತಾಮಾಡವನ….

ಸುಮ್ನೆ ಕುಂತಾಗಾ ಅಂದ್ಕತ್ತಿ
ಈ ಕಳ್ಳ ಮನಸ್ಸಿಗೆ ಉಡಿದಾರ ಹಾಕವು
ಮದ್ಲು ಚಾ ಕುಡಿಯವು ಅನ್ಸದಾಗಾ
ಕಣ್ಣಿಗೆ ಖಾಲಿ ಡಬ್ಬಾ ಕಾಣವು
ಇದಕ್ಕೆ ಬೇಕಾದ ಪರಿಕರ ಒಂದೂ
ಮನೆಯಲ್ಲಿ ಇಪ್ಪಲಾಗಾ
ಕುಡಿಯವು ಕುಡಿಯವು ಹೇಳಿ
ಮನಸ್ಸು ತಕಥೈ ಕುಣಿಯವು
ಪರಿತಪಿಸಿ ಪರಿತಪಿಸಿ ಸಾಯ್ಲಿ
ಭಯಂಕರ ಉದ್ದಂಡ ನಮಸ್ಕಾರ ಹಾಕಿಬಿಡವು
ಸುಟ್ ಚಾಕ್ಕೆ….

ಯಂಗೆ ಈ ಕೊರೋನಾ ಬಂದ್ಮೇಲಂತೂ
ಆರೋಗ್ಯದ ಬಗ್ಗೆ ಕಾಳಜಿ ಭರ್ತಿ ಹೆಚ್ಚಾಗಿ
ಭಯದ ವಾತಾವರಣ ತಟ್ಟಿ
ನಾಳೆಯಿಂದ ಹಿಂಗಿಂಗೇ
ಜೀವನ ಶೈಲಿ ರೂಢಿಸಿಕೊಳ್ಳವು
ತಿಂಡಿ,ಊಟ, ನಿದ್ದೆ, ಏಳದು,ಮಲಗದು,
ಬದುಕದು, ಅಕ್ಕಪಕ್ಕ ಹರಟೆ ಕೊಚ್ಚದು
ಅಲ್ಲಿ ಇಲ್ಲಿ ಹೋಗದು, ಚಾ ಕುಡಿಯದು
ಇತ್ಯಾದಿ ಇತ್ಯಾದಿ….

ಥೊsssss ನಿಯತ್ತಿನ ಸೂರ್ಯ
ಬೆಳಗ್ಗೆ ಕದ ತಟ್ಟಲಿಲ್ಲೆ
ಮತ್ತೆ ನಾಯಿಬಾಲ ಡೊಂಕೇ..
ತಲೆಯಲ್ಲಿ ಯಥಾಪ್ರಕಾರ ಅದೇ ಚಹಾದ ಕುಣಿತ.

ಬುದ್ಧಿಯ ನಿರ್ಧಾರವೆಲ್ಲ ಎಕ್ಕುಟ್ಟೋಗಿ
ಮನಸ್ಸು ಚಾದಿಂದೆ ಝಂಡಾ ಊರಿ
ನೀ ಕುಡಿಯೆ ನೀ ಕುಡಿಯೆ
ಬೆಳಿಗ್ಗೆ ಸಂಜೆ ಇದೇ ಹಣೆಬಾರಾಗೋತು…
ಅಡಿಗೆಮನೆಗೆ ದೌಡು!

7-9-2020. 4.14pm


ಅದರ ಗಮ್ಮತ್ತೇ ಬೇರೆ…


ಚಹಾದ ಹನಿಯೊಂದು
ನಾಲಿಗೆಯ ಮೇಲಿದ್ದರೆ
ಅದರ ಗಮ್ಮತ್ತೇ ಬೇರೆ
ಅದರಲ್ಲೂ ಸುಡು ಸುಡು ಚಹಾದ ಸ್ವಾದ
ಸೊರ್…. ಎಂದು ಹೀರುತ್ತಾ
ನೆತ್ತಿ ಸುರಲೋಕದ ಸುರಾಪಾನದ ಗತ್ತಲ್ಲಿ
ಮರೆತೇ ಹೋಗುತ್ತದೆ
ತಾನಿರುವ ತಾಣ.

ಹಮ್ಮಾ….ಜಿಗಿ ಜಿಗಿ ನೆಗೆತ
ಮತ್ಸ ಕನ್ಯೆಯೊಂದು ಈಜುತ್ತದೆ
ಅಡ್ಡಗಲ ಜಯಭೇರಿ ಬಾರಿಸುತ್ತ
ನೊರೆ ನೊರೆಯುಕ್ಕಿಸಿ
ತಿಲ್ಲಾಣದ ಕುಣಿತ
ಆ ಕ್ಷಣದ ಹಾಯ್ ಹಾಯ್ ಘಮಲು
ಗಾಳಿಗೆ ಸೆಡ್ಡು ಹೊಡೆದು ನಿಲ್ಲುತ್ತದೆ
ಅದೇ ಅದೇ ಚಹಾದ ಬಿಸಿಯುಸಿರು
ಬೆಚ್ಚಗಿನ ಶಾಖ ಕೊಟ್ಟು.

ಕುದ್ದಷ್ಟೂ ನಿಗಿ ನಿಗಿ ಕೆಂಡ
ಬದುಕ ಪಾತ್ರೆಗೊಂದಿಷ್ಟು ಸಾಂತ್ವನ
ಹಸಿದ ಹೊಟ್ಟೆಗೂ
ನಾನಿರುವೆನೆಂಬ ಭರವಸೆ
ಬರೀ ಆಶ್ವಾಸನೆಯೊಂದಲ್ಲವೇ ಅಲ್ಲ
ದಿಟವಾಗಿ ಹಾಡು ಹಗಲಲ್ಲೇ
ಸತ್ಯ ನುಡಿವುದು ಸವಾಲೆಸೆದು
ಗುಟುಕರಿಸಿ ಒಮ್ಮೆ ನೋಡಿ.

ಅನುಭವ ಅರಗಳಿಗೆಯಲ್ಲ
ನೆನಪಿಸಿಕೊಂಡು ದುಂಬಾಲು ಬಿದ್ದು
ಅದರಡಿಯಾಳಾಗಿ ಕಾಡಿ ಬೇಡಿ
ಮತ್ತದರ ದಾಸರಾಗುವಂತೆ ಮಾಡಿ
ಒಮ್ಮೊಮ್ಮೆ ಡಬ್ಬಗಳು ಖಾಲಿಯಾಗಲು
ಶೆಟ್ಟರಂಗಡಿಗೆ ಹಲ್ಲುಜ್ಜದೆ
ಓಡೋಡಿ ಹೋಗುವಂತೆ ಮಾಡಿ
ತನ್ನ ತಾಕತ್ತು ತೋರಿಸುವ
ಹಾಯ್ ಹಾಯ್ ಚಹವೇ…..
ನೀನೆಷ್ಟು ಚಂದ
ಅದೆಷ್ಟು ರುಚಿ
ನೀನಿಲ್ಲದೇ ನಾನಿಲ್ಲ
ಸದಾ ನೀನಗೆ ಬೇಕಲ್ಲಾ
ಲವ್ ಯೂ …..

7-7-2020. 3.00pm

ತತ್ತರಕಿ…ಹೊತ್ತಲ್ಲದ ಹೊತ್ತಲ್ಲಿ !

ನಿದ್ದೆ…..
ನೀ ಬರದ ರಾತ್ರಿಯಲಿ ಅಂಗಾತ ಮಲಗಿ
ಮುಚ್ಚಿದ ಕಣ್ಣ ರೆಪ್ಪೆಯಡಿಯಲಿ ಹುಡುಕುತ್ತೇನೆ
ಶಬ್ದಗಳ ತೋರಣ ಕಟ್ಟಲು
ಒಂದೊಂದೇ ಅಕ್ಷರ ಪೊಣಿಸಲು.

ಮನಸು ಕೇಳುವುದಿಲ್ಲ
ಛೆ! ಯಾಕೊ ನಿದ್ದೆ ಬರ್ತಿಲ್ಲ
ಯಾಕೊ ನಿದ್ದೆ ಬರ್ತಿಲ್ಲ
ಹೊರಳಾಡಿ ಹೊರಳಾಡಿ ಸಮಯ ಕಳೆಯುವುದು
ಕಹಿ ಗುಳಿಗೆ ನುಂಗಿದಷ್ಟು ತಡೆಯಲಾಗದ ವಾಕರಿಕೆ.

ಆಗನಿಸುವುದು
ನಭೋ ಮಂಡಲದ ಬಟ್ಟಲು ಬರಿದಾದಂತೆ
ಚಂದ್ರ ನಕ್ಷತ್ರಗಳ ಗಮ್ಮತ್ತು.
ಸುರೆ ಹೊಯ್ದ ನಿಶಾಚರರಂತೆ ಕಾಣುವುದು
ಬಿದ್ದುಕೊಂಡ ಭೂಮಿ ಕೂಡಾ.

ಶಿರದಲ್ಲಿ ಹೈರಾಣಾಗಿ
ನಶೆಯೇರಿ ಸೆಟಗೊಂಡು ಕಾಡಿ
ಕಣ್ಣ ಕುಣಿಕೆಗೆ ಜೋತು ಬೀಳುವ ನಿದ್ದೆಯ ಹುಳುಗಳು
ಇಂದೆಲ್ಲಿ ಎಲ್ಲಿ ಎಲ್ಲಿ ಎಂದು
ತಲೆ ಚಕ್ರ ತಿರು ತಿರುಗಿ ಹುಡುಕುತ್ತೇನೆ.

ಕಗ್ಗತ್ತಲ ನಿರವ ಮೌನ ಕಾಂಕ್ರೀಟು ಕಾಡು
ಸದ್ದಡಗಿದ ಸತ್ತವರ ಮನೆಯಂತೆ.

ನಿದ್ದೆಯೆಂಬ ಭೂತ ಸ್ಮಶಾನ ಕಾಯಲು ಹೋಗಿರಬಹುದೇ?
ಎಂಬ ಒದ್ದಾಟದ ನಗಾರಿ ಭಾರಿಸುತಿರಲು
ಪಟಕ್ಕನೆ ನೆನಪಾಯಿತು ನನ್ನ ತಲೆಯೆಂಬ ಬುರುಡೆಗೆ
ತತ್ತರಕಿ …….
ಇವತ್ತು ಹೊತ್ತಲ್ಲದ ಹೊತ್ತಲ್ಲಿ
ಕುಡಿದ “ಚಾ”ದ ಪರಿಣಾಮ!

ಅಬ್ಬಾ!
ಸೂರ್ಯ, ಚಂದ್ರ, ಕಾಡು,ಸ್ಮಶಾನ, ಸತ್ತವರ ಮನೆ ಇತ್ಯಾದಿ
ಕಂಡಕಂಡವರ ಕಡೆ ಬೊಟ್ಟು ತೋರಿಸಿ
ಒಂದಕ್ಕೊಂದು ಸಂಬಂಧ ಕಲ್ಪಿಸುವ
ನನ್ನ ಹುಚ್ಚು ಮನಸೀಗ ನಿರಂಮಳ.

ಹೌದೌವುದು
ಯಾರೂ ಕಾರಣರಲ್ಲ
ಕಂಟ್ರೋಲ್ ಇಲ್ಲದ ಮನಸು
ನಿದ್ದೆಗೆ ನಾನೇ ಆದೆ ಶತ್ರು.

ಪರಿಹಾರ ಕಂಡ ಮನಸು ಹಾಯೆಂದು ಹಲುಬಿತು
ನಿದ್ದೆಯಿಲ್ಲದಿದ್ದರೇನಂತೆ
ರಾಶಿ ರಾಶಿ ಶಬ್ದಗಳು ಚಿತ್ತದೊಳೀಗ ಸೆರೆ ಸಿಕ್ಕವಲ್ಲಾ
ಪೊತ ಪೊತನೆ ಉದುರುವ ಮರ ಬಿಟ್ಟ ಹಣ್ಣೆಲೆಯಂತೆ!

ಆಗಲೆ
ಆಯ್ದು ಪೊಣಿಸುವ ಕಸರತ್ತು ಶುರುವಾಯಿತು ನೋಡಿ
ಸರಿ ರಾತ್ರಿಯಲಿ ;

ಹೊಸ ಮದುಮಗಳು
ಹೊಸದರಲ್ಲಿ ಬೆಳಗೆದ್ದು ಉತ್ಸಾಹದಲ್ಲಿ
ಗಂಡನಿಗೆ ಚಾ ಮಾಡಲು
ಅಣಿಯಾದಂತೆ!

7-8-2017. 12.56am

ಆಹಾ!

ನಿನ್ನ ಹೀರುತ್ತ ಹೀರುತ್ತ
ಕಳೆದೇ ಹೋಗುವೆ ನಾನು
ಅದೆಷ್ಟು ಸ್ವಾದವೇ ನೀನು…
ಎನಿತು ಹೇಳಲಿ ನಾನು?

ಸುಡು ಸುಡು ಅಹಹಹ…
ಚಳಿಗೊಂದು ಅಪ್ಪಟ ಮದ್ದು
ಬೆಚ್ಚನೆ ಶಾಖ ಕೊಡುತ್ತ
ಗಂಟಿಕ್ಕಿದ ಮುಖ ಪ್ರಸನ್ನಗೊಳಿಸಿ
ನವ ಚೈತನ್ಯ ಉಕ್ಕಿಸಿ ಚಿಮ್ಮಿಸುವ
ನಿನ್ನ ನಿಧಾನವಾಗಿ
ಸ್ವಲ್ಪ ಸ್ವಲ್ಪವೇ ಗುಟುಕರಿಸುತ್ತಿದ್ದರೆ…

ಆಹಾ!
ಸ್ವರ್ಗಕ್ಕೆ ಮೂರೇ ಗೇಣು
ಹೊಡಿ ಇನ್ನುಳಿದ ಪೇಯಕ್ಕೆ
ಗೋಲಿಮಾರು!!

22-2-2020. 9.14am

ಚಾನೇ ಹಾಗೆ…

ಮತ್ತದೇ ಚಹಾದ ದಿನಕ್ಕಾಗಿ..

ಹೊತ್ತು ಏರಿದಾಗ
ಕತ್ತು ಕೊಂಕಿಸಿದಾಗ
ಚುಮು ಚುಮು ಚಳಿ ಮೈ ಸೋಕಿದಾಗ
ಬರೆಯಲು ಕೂತಾಗಾ
ಯಾರಾದರೂ ಬಂದಾಗ
ಬರುವೆನೆಂಬ ಫೋನಾಯಣ ಬಂದಾಗ
ಆಗ ಈಗ ಯಾವೆಗೆಲ್ಲಾ
ಬರೀ ಈ ಚಾದ್ದೇ ಗುಂಗೂ….

ಆಗೆಲ್ಲಾ ಯಾವ ಚಾ ಮಾಡಲಿ
ಟಾಟಾನೋ
ತ್ರೀರೋಸಾ
ರೆಡ್ಲೆಬಲ್ಲಾ
ಇಲ್ಲಾ ಕಣ್ಣನ್
ಇತ್ಯಾದಿ ಇತ್ಯಾದಿ ಇತ್ಯಾದಿ

ಹಾಲೆಷ್ಟು ಹಾಕಲಿ?
ಸಕ್ಕರೆ ಬೇಕೊ ಬೇಡ್ವೊ?
ಲೈಟಾಗಾ ಸ್ಟ್ರಾಂಗಾ?
ಗೊಟಾಯಿಸಿ ಕೊಡ್ಲಾ?
ಹಂಗೆ ಬಿಸಿ ಬಿಸಿ ಬಗ್ಗಿಸಿ ಕೊಡ್ಲಾ?
ದೊಡ್ಡ ಕಪ್ಪಲ್ಲಾ?
ಸಣ್ಣ ಕಪ್ಪಲ್ಲಾ?
ನಿಮಗೆ ಕುಡಿಯೊ ಚಟ ಇದೆಯಾ?
ನೀವು ಮನೆಯಲ್ಲಿ ಏನು ಕುಡಿಯೋದು?
ಹಾಲಾಕ್ತೀರಾ?
ಇಲ್ಲಾ ಹಾಗೆ ಕುಡಿಯೋದಾ?…….

ಬಂದವರ ತಲೆ ತಿನ್ನಲು
ಬೇಕಾದಷ್ಟು ಪ್ರಶ್ನೆಗಳ ಸುರಿ ಮಳೆನೇ ಉಂಟು
ಒಂಥರಾ ಹನುಮಂತನ ಬಾಲಾ..

ಮತ್ತೆ ಚಾ ಅಂದರೆ ಸುಮ್ನೇನಾ
ನವರಂಗಿ ಆಟ ಅಷ್ಟೂ ಗೊತ್ತು
ಕೇವಲ ಒಂದೇ ಒಂದು ಕಪ್ ಗುಟುಕರಿಸಲು
ದೌಲತ್ ರಾಣಿ ಅಂದರೂ ತಪ್ಪಿಲ್ಲ
ಅವಳಿಗೇನು ಸಿಟ್ಟು ಬರೋಲ್ಲ
ನೀವೆನೇ ಹೇಳಿ
ಮಾಡೊ ಹದ ಮಾತ್ರ
ಮಾಂತ್ರಿಕ ಕೈ ಆಗಿರಬೇಕು
ಮಾತಲ್ಲಿ ಕೊಂಚ ಎಡವಿದ್ರೊ…
ಮುಗಿದೇ ಹೋಯ್ತು
ಕುಡಿದವ ಹೇಳ್ತಾನೆ ಕಲ್ಗಚ್ಚು…

ನೆನಪಿರಲಿ ಅಸಡ್ಡೆ ಗಿಸಡ್ಡೆ
ಹತ್ತಿರನೂ ಸೇರಸೋದೇ ಇಲ್ಲ
ಅದಕ್ಕೂ ಮಾ ರಾಶಿ ಪ್ರೀತಿ ಬೇಕು
ಮಾಡುವಾಗ ಮನಸು ಕಣ್ಣು ಕೈ
ಎಲ್ಲಾ ನಮ್ಮ ಗಮನದಲ್ಲಿದ್ದರೇನೇ
ಚಾನೂ ಅಷ್ಟೇ ರುಚಿ
ಮರ ಮರ ಮರಳಿ
ಮಿರಿ ಮಿರಿ ಮಿಂಚಿ
ಅಂದವಾದ ಕಪ್ಪಿಗೆ
ಅಷ್ಟೇ ಮುತುವರ್ಜಿಯಿಂದ ಬಗ್ಗಿಸಿ
ಪಕ್ಕದಲ್ಲಿ ಬಿಸ್ಕೀಟೊ ರಸ್ಕೊ ಇಟ್ಟು ಕೊಟ್ಟರೆ
ಬಂದವರೇನು ನೀವೂ ಕೂಡಾ
ಪಂಚಭಕ್ಷ ಪರಮಾನ್ನ ಉಂಡಷ್ಟು
ಖುಷಿ ಪಡೋದಂತೂ ಗ್ಯಾರಂಟಿ.

ಮತ್ಯಾಕ್ ತಡಾ
ಬಂದವರಿಗೆ ಈ ಚಳಿಗೆ
ಒಂದು ಖಡಕ್ ಚಾ ಕೊಟ್ಟು
ಖುಷಿ ಪಡಿಸಿ ಕಳಿಸ್ರಲಾ
ಅಡಿಗಿ ಗಿಡಗಿ ಮಾಡೊ
ಚಿಂತೆನೇ ಬೇಡಾ
“ಬರೇ ಚಾ ಒಂದಿದ್ದರೆ ಸಾಕು
ಇದೇ ನಾಲ್ಕು ಸಲ ಕುಡಿದುಬಿಡೋಣ”
ಹೇಳದೇ ಇದ್ರೆ ಕೇಳಿ…!!

15-12-2019. 7.27pm

ವೆರಿ ಸಿಂಪಲ್…..

ವಿಶ್ವ ಚಾ ದಿನಕ್ಕಾಗಿ ಈ ಕವನ

ನನಗೆ ಹೀಗೆಯೇ ಇರಬೇಕೆಂದು
ಯಾವತ್ತೂ ಅನಿಸಲೇ ಇಲ್ಲ
ಆದರೆ ಚಹಾಕ್ಕೆ ಹಾಗಲ್ಲ
ಹೀಗೆಯೇ ಇರಬೇಕೆಂಬ ಗುಮಾನಿ
ಸದಾ ಅದಕೆ.

ಮರಳೀ ಮರಳೀ ಹದವಾಗಿ ಬೆವರೊಡೆದು
ತನ್ನೊಳಗಿನ ಪಿಕಾಸಿ ಬಣ್ಣವನೆಲ್ಲ ಹೊರ ಚೆಲ್ಲಿ
ಕುಡಿದರೆ ಕಿಕ್ಕು ಉಕ್ಕಿಸಿ
ಇನ್ನೆಂದೂ ವಾಪಸ್ಸು ತನ್ನ ಬಿಟ್ಟು
ತಿರುಗಿ ಹೋಗಲಾರದಂತಹ ಸ್ಥಿತಿ ತಂದು
ಬಂಧಿಸುವ ಹಿಕ್ಮತ್ತದಕೆ.

ನೋಡಲು ಬರೇ ಬರೇ ಚಹಾನೇ
ವೆರಿ ಸಿಂಪಲ್
ಒಂದಥವಾ ಎರಡಕ್ಷರ
ಚಾ, ಚಹಾ.‌..
ಇನ್ನಿಂಗ್ಲೀಷಲ್ಲಿ ಟೀ…
ಹಿಂದಿಯಲ್ಲಿ ಚಾಯ್…..
ಗುಣ ಮಾತ್ರ ಬ್ರಹ್ಮಾಂಡದಷ್ಟು
ಹಿತವಾಗಿ ಗಂಟಲಲ್ಲಿ ಇಳಿಯುತ್ತ
ಹಾಯ್ ಹಾಯ್ ತೇಲುತ್ತ ತೇಲುತ್ತ
ಕವಿ ಆಗಲೇ ಭಾವಕ್ಕೆ ಬಂಧಿ.

ಸಾಕು ಬಾ ಪಕ್ಕಕ್ಕೆ ಕೂಡು
ಬಿಸ್ಕೀಟು, ರಸ್ಕೋ
ಚಟವಿದ್ದರೆ ಬೀಡಿ,ಸಿಗರೇಟಾದರಂತೂ
ಬಲೂ ಗಮ್ಮತ್ತೇ ಗಮ್ಮತ್ತು
ನಾಣಿ ಅಂಗಡಿ ತೆಪರಾ ಬೇಂಚಾದರೂ ಸಾಕು
ಬಿಸಿ ಬಿಸಿಯಾಗಿ ಹೀರಲು
ಐಶಾರಾಮಿ ಹೊಟೇಲ್ ದೌಲತ್ತೇನೂ ಬೇಕಾಗೇ ಇಲ್ಲ
ನೋಡಿ ಎಷ್ಟು ಸಿಂಪಲ್!

ಆದರೆ ಇದಕ್ಕಿರೋ ಹೆಸರು ಮಾತ್ರ
ಟಾಟಾ ಟೀ, ತ್ರೀ ರೋಸಸ್, ರೆಡ್ ಲೆಬಲ್,ಗ್ರೀನ್ ಟೀ
ಇತ್ಯಾದಿ ಇತ್ಯಾದಿ
ಮಾರಾಶಿ ಹೆಸರಲಿ ಕರೆಯೋದು ನೋಡಿದರೆ
ಗೊತ್ತಿಲ್ಲದವರು ಧಂಗಾಗಬೇಕು
ಭಯಂಕರ ದೊಡ್ಡ ಬ್ರ್ಯಾಂಡೆಡ್ ಸಾಲಿನಲ್ಲಿ
ಕೂರುವ ಗತ್ತಿರಬೇಕು ಅಂದುಕೊಂಡರೆ
ಛೆ ಛೆ ಇದು ಮಾತ್ರ ಬರೇ ಸುಳ್ಳೇ ಸುಳ್ಳು
ಗೂಡಂಗಡಿ ಬಾಟಲಿ ಆದರೂ ಆದೀತು
ಅಲ್ಲೂ ಮಿಂಚಿಂಗೂ….

ಒಂದೇ ಒಂದು ಬೇಜಾರು ;
ಈ ಕಲಬೆರಕೆ ಕಾಲದಲ್ಲಿ
ಒಮ್ಮೊಮ್ಮೆ ಚಾ ಪುಡಿ ಕಲಸುಮೇಲೊಗರವಾಗಿ
ರುಚಿ ಯದ್ವಾ ತದ್ವಾ ಆಗಿ
ಕುಡಿದ ಬಾಯಿ ಕೆಟ್ಟೋಗಿ
ತಲೆ ಚೊಂಬಾಗೊ ಚಾನ್ಸೂ ಇರುವುದು
ಚಾದ ತಪ್ಪೆಂತೂ ಅಲ್ವೇ ಅಲ್ಲ
ಎಲ್ಲಾ ಜಿಣಿ ಜಿಣಿ ಕಾಂಚಾಣದ್ದು.

ಆದರೂ ಒಮ್ಮೆ ಚಾ ಕುಡಿದರೆ
ಜಪ್ಪಯ್ಯಾ ಅಂದರೂ ಬಿಡುವ ಮಾತಿಲ್ಲ ಆಯ್ತಾ?
ಹೊತ್ತಿಲ್ಲ ಗೊತ್ತಿಲ್ಲ ಸಮಯದ ಪರಿವಿಲ್ಲದೇ
ಥೇಟ್ ನಾವಂಟಿಸಿಕೊಂಡ
ಬರೆಯುವ ಹುಚ್ಚಂತೆ
ಗಳಸ್ಯ ಕಂಠಸ್ಯ!

15-10-2019. 7.57pm

ಕಾಶಿ ಚಾ ಮಾತ್ರ ರಾಶಿ ರುಚೀ ಇರ್ತೇ…….

ಟೀ ಪುಡಿ ಮಾರುವವನ ಅಂಗಡಿ ಮುಂದೆ
ಗಕ್ಕನೆ ಕಾಲು ನಿಲ್ಲುತ್ತದೆ.

ಚಪ್ಪಲಿ ಕಾಲಿಗೆ ಏನೋ ಮೆಟ್ಟಿದಂತೆ
ಅಂದುಕೊಂಡರೆ ನೀವು
ಅದು ಶುದ್ಧ ತಪ್ಪು ಜೊತೆಗಾರರೆ
ನಾವು ನೋಡಲು ಬಂದದ್ದು ಕಾಶಿ ಎಂದು
ನಿಮ್ಮೆಣಿಕೆ ಮಾತ್ರ.

ನನಗೆ…??
ಅಲ್ಲಲ್ಲಾ ಅಲ್ಲೊಂದು ಚಾದ ಘಮಲು
ಚುಕುಬುಕು ರೈಲಿನುದ್ದಕ್ಕೂ ಒಳ ರಸ್ತೆ ತಿರುಗಾಡಿದ್ದೇನೆ
ಒಂದೇ ಒಂದು ಸಿಪ್ಪು ರುಚಿ ಚಾ ಸಿಕ್ಕರೆ ಕೇಳಿ?
ಬಾಯೆಲ್ಲಾ ಸಪ್ಪೆ
ಹೈರಾಣಾಗೋಯ್ತು ಮನಸ್ಸು ಕಿಕ್ಕಿಲ್ಲದೇ
ಅದಕೇ ಈ ಅವಸ್ಥೆ.

ಆಹಾ! ಮಣ್ಣಿನ ಕುಡಿಕೆ
ಸ್ವಲ್ಪ ದೊಡ್ಡದಿರಲೀ… ಎಂದೆ
ದುಡ್ಡೆಷ್ಟಾದರೇನು ಮೊದಲಿಳಿಸಬೇಕು ಕಡಕ್ ಚಾ..
ಮಂದ ಎಮ್ಮೆ ಹಾಲು
ಬರವೇನೂ ಇಲ್ಲ ಅಲ್ಲಿ ಕ್ಯಾನಿನ ಸಾಲು ಸಾಲು
ಮನಕೆ ಅದೇನೋ ಖುಷಿ
ಇದೂ ಕೂಡಾ ಚಾ ನಾಡು ಬರವಿಲ್ಲ
ಇರುವ ತನಕ ಬಿಡು
ಮನಸು ಲಗಾಮಿಲ್ಲದ ಕುದುರೆ!

ಮತ್ತಲ್ಲಿ ಲಸ್ಸೀ…ಸ್ವೀಟೂ…ಪೂರಿ….ಸಬ್ಜಿ….ಪಾನು?
“ನೋ…ನೋ…ನಂಗ್ಯಾವುದೂ ಬ್ಯಾಡ್ದೆ ಚಾ ಸಾಕು”

ಅರೆರೆ ಇಸ್ಕಿ ….
ನೆಂಟರ ಮನೆಯಲ್ಲಿ ಬಡಿವಾರ ಮಾಡಿದಂತೆ
ಮಿಟಕಲಾಟಿ ತೋರಿಸಿತು ಮನಸ್ಸು
ಆದರೂ
“ಒಂದು ಸ್ವಲ್ಪ ಇರಲಿ ಸೈಡಿಗೆ ಬ್ಯಾಡಾ ಹೇಳಡ್ದೆ ಅಪರೂಪಕ್ಕೆ ಬಂಜೆ
ಇನ್ಯಾವಾಗ ಬತ್ಯ ಏನ…!”
ಮೆಲ್ಲಗೆ ಸೈಡಿಗೆ ಬಂತು
ತಂದೆಲ್ಲಿ ಇಡಲಿ ಎಂಬ ಇರಾದೆ.

“ಅಬ್ಬಬ್ಬಾ ಅದೆಷ್ಟು ಶೋಕಿನೆ ಈ ಚಹಾಕ್ಕೆ”
ಮಡಿಕೆ ನೇರವಾಗಿ ಹೇಳ್ತು
“ಅದಕ್ಕೆ ಕುಡದವೆಲ್ಲಾ ಕಸದ ಬುಟ್ಟಿಗೆ ಬಿಸಾಕ್ತ ನಿನ್ನ”
ಬೆಂಗಳೂರು ಮಂದಿ ಸಹವಾಸ ಗೊತ್ತಿಲ್ಲ
ಪಾಪ! ಅದಕ್ಕೆ…

ಅಹಂಕಾರದ ಮಾತು ಚಾದ್ದು ಅಂದೆನಿಸಿದರೂ
ಮಡಿಕೆ ಚಾ ಕುಡಿಯೋದು ಬಿಡಲಾಗದೇ
ಕಾಶಿ ಚಾ ಗಮ್ಮತ್ತಾಗಿತ್ತು
ಅಂದೆನಿಸಿದ್ದು ಮಾತ್ರ ಸುಳ್ಳಲ್ಲ.

ಥೇಟ್ ಅಲ್ಲಿದೇ
ಚಾ ಪುಡಿ ಹೊತ್ಕಂಡು ಬಂದರೂ
ಇಲ್ಲಿ ನೀರಾಲಲ್ಲಿ ಮತ್ತೆ ರುಚಿ ಕಳಕೊಂಡು
“ಕಾಶಿ ಚಾ ಮಾತ್ರ ರಾಶಿ ರುಚೀ^^^^ಇರ್ತೇ……..”
ನೆನಪು ಜೊಲ್ಲು ಸುರಿಸುತ್ತಿರೋದು
ಬಿಡ್ತಾನೇ ಇಲ್ವೆ…….!!

29-9-2019. 2.22pm

ಆಕಿಗೂ ಧಿಮಾಕು ಬರ್ತಿತ್ತೊ ಏನೋ…

ಅಲ್ಲಾ ಆಕಿಗೇನ್ ಗೊತ್ತು
ಜನ ತನ್ ಈಟೊಂದು ಮೆಚ್ಗಂಡಾರಾ ಅಂತ
ಗೊತ್ತಾತಂದ್ರ ಆಕಿಗೂ
ಧಿಮಾಕು ಬರ್ತಿತ್ತೊ ಏನೋ!!

ಒಂದಿಡಿನಾ ಅದು
ಬರೀ ಒಂದು ಚಮಚಾ ಹಾಕಿ ಕುದಿಸಿ
ಸರ್^^^^ಅಂತ ಬಗ್ಗಸಿ
ಹಾಲು ಒಂದೀಟೇ ಈಟು
ಸಕ್ಕರಿ ಹಾಕಿ ಗೊಟಾಯಿಸಿದ್ದಕ್ಕ
ಈಟೊಂದು ಮೆರವಣಿಗೇನಾ?

ಯವ್ವಿ ಯವ್ವಿ^^^^
ನೀ ಖರೇ ಹೇಳ್ತೀಯೇನ ಮತ್
ತಗಿ ತಗಿ ಇದ ದಿಟಾ ಇರಲಿಕ್ಕಿಲ್ ಬಿಡು
ಹಂಗ ನಾನೂ ಒಸಿ
ಮಾಡ್ ನೋಡ್ತೀನಿ ಇರು
ಹೊರಗಡಿ ಭಾಳ್ ಚಳಿ ಐತಿ
ಪರೀಕ್ಸಿ ಮಾಡೂಣಂತ….

ಮತ್ ಗಟ್ಟಿ ಹಾಲಿರಬೇಕ
ನೀ ಹ್ಯಾಂಗ್ಯಾಂಗೋ ಮಾಡಿ
ನನ್ ಮಾತ್ ಸುಳ್ ಅನ್ಬಾಡ ನೋಡು…

ಹೌದಲ್ಲ ತಂಗೀ ನೀ ಹೇಳಿದ್ ಖರೇ^^^ಅದ
ಮತ್ಯಾಕ್ ನಮ್ಮ ಮಂದಿ
ಬರೀ ಕಾಫಿ ಆತ ಅಂತಾರ
ಟೀ ಆತ ಅಂತ ಕೇಳಾಂಗೇ ಇಲ್ಲ??

ಗೊತ್ತಿದ್ರಲ್ಲ ರುಚಿ ಬಾಯೀಗ…
ಈಗ ಗೊತ್ತಾತಿಲ್ಲೋ
ಚಾಯ್ ರುಚಿ ಅಂದ್ರ ಹಂಗ…
ಒಮ್ಮೆ ಖಡಕ್ ಚಾಯ್ ಕುಡದ ಅಂದ್ರ
ಸಾಯೋ ಮಟ ಬಿಡಕಾಗಾಂಗಿಲ್ಲ
ನಶಿ ಏರದಾಂಗ ನೋಡ್
ಆಗಾಗ್ ಕುಡದಿಲ್ಲಾ ಅಂದ್ರ
ಮನಸಿಗೆ ಸಮಾಧಾನನೂ ಇರವಲ್ಲದು
ತಲಿ ಕೆಟ್ ಗೊಬ್ಬರಾಗೈತಿ
ಒಸಿ ಟೀ ಕುಡಿಬೇಕು ಅಂತಾರು
ಮದ್ ರಾತ್ರಿಲಿ ನೆನಪಾತಂದ್ರ
ಎದ್ ಮಾಡ್ಕಂಡ ಕುಡಿಯೋಣ ಅನಸ್ತೈತಿ
ಒಂದಿನ ಕುಡದಿಲ್ಲಾ ಅಂದ್ರ
ಹಂಗ ತಲಿ ನೋವೂ ಬರ್ತೈತಿ ಮತ್
ನಾ ಹೇಳಿಲ್ಲ ಅನ್ಬಾಡ
ಈಗ ನೋಡ್ ನೀನೂ ಹಚ್ಕೊಂಡೀ ಅಲ್ಲ…..
ಭೇಷ್ ಆತು ಬಿಡು.

ಹಂಗರೀ ^^^^
ನಮ್ಮೂರಿನ ಸುಡು ಸುಡು ಚಾ ಅಂದ್ರ
ಬೆಳಗಿನ್ ಚಳೀನ ಬೆಚ್ಗ ಮಾಡಿ
ಕೆಲಸ ಮಾಡಾಕ ಹುರಿದುಂಬಿಸತೈತಿ
ಬರೆಯೂ ಮಂದಿಗೆ ಕಿಕ್ ಕೊಡತೈತಿ
ಅದರ ಮಹಿಮಿ ಹೇಳಾಕ ಹೋದ್ರ
ಭಾಳ್ ಐತ್ ಬಿಡ್ರಿ….

ಈಗ್ ನೀವೂ ಒಸಿ ಖಡಕ್ ಚಾ ಮಾಡಿ
ಕುಡದ್ ನೋಡ್ರಲಾ…

ಇನ್ನೊಂದು ಮಾತ್ ಜಪ್ತಿ ಮಡ್ಕಳಿ
ಆಗಾಗ್ ಕುಡದು ಹೆಚ್ಚಾತಂದ್ರೂ
ಪಿತ್ತ ನೆತ್ತಿಗೇರಿ ತಲಿ ನೋವ್ ಬಂದು
ವಾಂತಿ ಮಾಡ್ಕಂಡು
ಮಾತ್ರಿ ತಗೊಳೊ ಮಟ ಬಿಡವಲ್ಲದು
ಹುಷಾರು!

13-8-2019. 10.42pm