ಆಹ್ವಾನ

ಹತ್ತಕ್ಕೆ ಬಂದವ
ಹದಿನೇಳರವರೆಗೆ ನೀನಿದ್ದೆ
ಆಚರಿಸುವ ಹೊಸ ವರುಷಕೆ
ಚೊತೆಯಾಗಿ ಕುಣಿಯುತಿದ್ದೆ
ಅಲ್ಲಿ ಭಾಷೆ ಮೂಕ
ಮಾತಿಲ್ಲದ ಮುಖ ಚಹರೆ
ಎಲ್ಲವೂ ಹೇಳುತ್ತಿತ್ತು
ಕಣ್ಣಗಲಿಸಿ ಚಕಿತ ನೋಟ
ನಿನ್ನ ಭೌ ಭೌ ಗಾನ ನಮ್ಮೊಂದಿಗೆ
ಪಟಾಕಿ ಸದ್ದಿಗೆ ಹೆದರಿ ಮುದುಡುತಿದ್ದೆ
ಹೀಗೆ ಹತ್ತು ಹಲವು
ಮತ್ತೆ ಮತ್ತೆ ನೆನಪಿಸುತಿದೆಯಲ್ಲೊ
ಹ್ಯಾಂಗಾಚರಿಸಲೊ ಹೊಸವರ್ಷ?
ಬೇಡಾ ಕಣೊ ಈ ಸಂಕಟ
ಒಮ್ಮೆ ಬಂದುಬಿಡು
ಮತ್ತೆ ಹಾಡಿ ಕುಣಿದುಬಿಡೋಣ!!
31-12-2017. 9.04am

ಬೇಸರ….!!(ಭಾಗ-7)

ಪ್ರಕೃತಿಯಲ್ಲಿ ಏನೇ ಜೀವಂತವಾಗಿ ಹುಟ್ಟಲಿ ಅವುಗಳಿಗೆಲ್ಲ ಸಾವು ಕಟ್ಟಿಟ್ಟ ಬುತ್ತಿ. ಇದರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವೇ ಇಲ್ಲ. ಕೆಲವು ಅಕಾಲಿಕ ಮರಣ ಹೊಂದಿದರೆ,ಇನ್ನು ಕೆಲವು ದುರ್ಮರಣದಲ್ಲಿ ಕೊನೆಯುಸಿರೆಳೆಯುತ್ತವೆ. ಅವರವರ ಕರ್ಮಾನುಸಾರ ಮರಣ ಬರೆದಿಡುತ್ತಾನೆ ಭಗವಂತ ಅಂದನ್ನುವರು ಹಿರಿಯರು. ಇದು ಎಷ್ಟು ನಿಜವೊ ಸುಳ್ಳೊ ಗೊತ್ತಿಲ್ಲ. ಆದರೆ ಈ ಮರಣ ಅನ್ನುವುದನ್ನು ಮರೆತು ದಿನ ದೂಡುತ್ತಿರುತ್ತೇವಲ್ಲ ; ಇದು ಹೇಗೆ? ಎಷ್ಟು ವಿಚಿತ್ರ! ಇದು ಅತ್ಯಂತ ಹತ್ತಿರದ ಬಾಂಧವ್ಯ ಇರುವ ಪ್ರಕೃತಿಯ ಯಾವುದೇ ಜೀವಿಯದಾಗಲಿ ಅದು ಮಾತ್ರ ಸಹಿಸಲಸಾಧ್ಯ. ಬಹಳ ಬಹಳ ದುಃಖ,ಮನಸ್ಸು ಕ್ಷಣ ಕ್ಷಣ ಕಾಡುವ ಸಂಕಟ, ಏನು ಮಾಡಲೂ ಬೇಜಾರು. ಇದರಿಂದ ಹೊರ ಬರಲು ಮನಸ್ಸು ಎಷ್ಟು ಒದ್ದಾಡುತ್ತಿರುತ್ತದೆ!!

ಬೆಳಗಿನ ಏಳು ಗಂಟೆ 25-3-2010 ಮನೆಯ ಹಿಂದಿನ ಬಾಗಿಲು ತೆಗೆದಾಗ ಖಾಲಿ ಸೈಟೊಂದರಲ್ಲಿ ಕುಯ್ ಕುಯ್ ಗುಡುತ್ತ ಒಂದು ಸಿಮೆಂಟ್ ಬಾನಿಯಿಂದ ಹೊರ ಬರಲಾರದ ಪರಿಸ್ಥಿತಿ ಕಂಡು ಮನ ಕರಗಿತು. ಮನೆಗೆ ತಂದು ಹಾಲು ಕೊಟ್ಟು ಸ್ನಾನ, ಆಸ್ಪತ್ರೆಯಲ್ಲಿ ಔಷಧೋಪಚಾರ ಹೀಗೆ ಪ್ರತಿಯೊಂದು ಕಾಲಕಾಲಕ್ಕೆ ಕೊಡಿಸುತ್ತ ಅದರ ಆಟದಲ್ಲಿ ನಮ್ಮ ಮನೆ ಸಂತಸದ ಗೂಡಾಗಲು ಹೆಚ್ಚು ದಿನ ಬೇಕಾಗಲಿಲ್ಲ. ಅದೊಂದು ಬೀದಿ ನಾಯಿ ಮರಿ ಇಟ್ಟೆವು “ಶೋನೂ” ಎಂಬ ಹೆಸರು. ಕಂಡವರು ಮೂದಲಿಸಿದರು “ಬೀದಿ ನಾಯಿ ಸಾಕ್ತೀರಾ,ಮನೆಯೊಳಗೆ ಸೇರಿಸಬೇಡಿ.” ವಾಕಿಂಗ್ ಕರೆದೊಯ್ಯುವಾಗ ಕೆಲವರ ನೋಟ, ಮಾತು ಮನಸ್ಸಿಗೆ ಬಹಳ ಹಿಂಸೆ ಆಗುತ್ತಿತ್ತು. ಆದರೆ ಇದ್ಯಾವುದಕ್ಕೂ ಜಗ್ಗದೆ ನಮ್ಮ ಅವನ ಸಂಬಂಧ ಗಾಡವಾಗುತ್ತ ಹೋಯಿತು. ಒಂದು ದಿನವೂ ಅವನನ್ನು ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಕ್ರಮೇಣ ಅವನ ಅಂದ ಜನರೊಂದಿಗಿನ ಅವನ ವರ್ತನೆ ಮನೆಗೆ ಬರುವವರಿಂದ ಹಿಡಿದು ಅಕ್ಕ ಪಕ್ಕದ ಬಡಾವಣೆಯ ಜನರಿಗೆಲ್ಲ ಅಚ್ಚು ಮೆಚ್ಚಿನವನಾದ. “ಶೋನು ಮನೆ” ನಮ್ಮನೆಗೆ ಬರುವವರಿಗೆ ನಿಖರವಾದ ವಿಳಾಸ ಹೇಳುವಂತಾಯಿತು.

ರಾತ್ರಿ ತಿಂದುಂಡು ಆಟವಾಡಿ ಮುದ್ದು ಮಾಡಿಸಿಕೊಂಡು ಬೆಚ್ಚಗೆ ಮಲಗಿ ಗೊರಕೆ ಹೊಡೆಯುತ್ತಿದ್ದ ನಮ್ಮ ಮರಿ 22-12-2017ರ ಬೆಳಿಗ್ಗೆ ಅದೇ ಸಮಯ ಬೆಳಗ್ಗೆ ಜೋರಾಗಿ ಒಂದು ಕ್ಷಣ ಕಿರುಚಿದ. ಎದ್ದು ಓಡಿ ಬಂದು ನೋಡುವಷ್ಟರಲ್ಲಿ ಅಸು ನೀಗಿದ್ದ. ಏನಾಯಿತೆಂದು ಊಹಿಸಲೂ ಅಸಾಧ್ಯ. ಕಲ್ಪನೆ ಕೂಡಾ ಮಾಡಿರಲಿಲ್ಲ ಇಷ್ಟು ಬೇಗ ನಮ್ಮನ್ನಗಲಬಹುದೆಂದು. ಸಾವು ಅದೆಷ್ಟು ಅನಿರೀಕ್ಷಿತ!! ಅದು ಶ್ವಾನವೇ ಆಗಿರಬಹುದು. ಆದರೆ ಅದನ್ನು ಕಳೆದುಕೊಂಡ ದುಃಖ, ನೋವು, ಸಂಕಟ ಅದು ಸಾಕಿದವರಿಗಷ್ಟೆ ಗೊತ್ತಾಗಲು ಸಾಧ್ಯ.
ಮುಂದಿನ ಕಾರ್ಯ ಸುಮನಳ್ಳಿಯಲ್ಲಿ ಈಗಾಗಲೇ ಪ್ರಾಣಿಗಳ ದಹನ ಕಾರ್ಯಕ್ಕೆ ಬಿಬಿಎಂಪಿಯವರು ವ್ಯವಸ್ಥೆ ಮಾಡಿರುವಲ್ಲಿ ಹಣ ಸಂದಾಯ ಮಾಡಿ ಶಾಸ್ತ್ರೋಕ್ತವಾಗಿ ಅಂತ್ಯ ಕ್ರಿಯೆ ಅವರಿಂದ ನಡೆಸಲಾಯಿತು. ಮೂರನೆಯ ದಿನ ಅವರು ಕೊಟ್ಟ ಅಸ್ಥಿ ಭೂದಿ ತಂದು ಮಲ್ಲತ್ತಳ್ಳಿ ಕೆರೆಯಲ್ಲಿ ಬಿಟ್ಟು ಮನೆಗೆ ಬಂದಾಗ ಅವನು ಮಲಗಿದ ಜಾಗದಲ್ಲಿ ಮೂರು ದಿನಗಳಿಂದ ಹಚ್ಚಿಟ್ಟ ದೀಪ ಆರದೇ ಉರಿಯುತ್ತಿತ್ತು. ಮನೆಯೆಲ್ಲ ಸ್ಮಶಾನ ಮೌನ. ಅವನಿಗಿಟ್ಟ ಹಾಲು ರೊಟ್ಟಿ ಅನ್ನ ಒಂದಷ್ಟು ಪೆಡಿಕ್ರಿ ಹಿಡಿದು ಸಂಜೆ ಸುತ್ತಮುತ್ತಲಿನ ಬೀದಿಗಳಲ್ಲಿ ಓಡಾಡಿ ಅವನ ಸ್ನೇಹಿತರಿಗೆಲ್ಲ ಹಂಚಿ ಬಂದಾಗ ಒಂದಷ್ಟು ಸಮಾಧಾನ.

ಈ ಮಧ್ಯೆ ಎರಡನೇ ದಿನ 23ರಂದು ಯಲಹಂಕದಿಂದ ಮೂರು ಕೀ.ಮೀ.ದೂರದಲ್ಲಿರುವ ಹುಣಸಮಾರನ ಹಳ್ಳಿಯ old coco cola factory ಹತ್ತಿರವಿರುವ Singh Surya Sai care ಇಲ್ಲಿಗೆ ಭೇಟಿ ನೀಡಿದ್ದು ಮರೆಯಲಾಗದು. ಉತ್ತರ ಪ್ರದೇಶದ ದಂಪತಿಗಳಾದ ಇವರು ಈಗ ಮೂರು ವರ್ಷಗಳಿಂದ 118 ಅಶಕ್ತ ಬೀದಿ ನಾಯಿಗಳನ್ನು ಮಕ್ಕಳಂತೆ ಸಾಕುತ್ತಿದ್ದಾರೆ. Facebook ನಲ್ಲಿ Sing Surya ಇಲ್ಲಿ ಸಂಪೂರ್ಣ ಮಾಹಿತಿ ಇದೆ. ಶೋನೂನ ಪ್ರತಿಯೊಂದು ಸಾಮಾನು,ಒಂದಷ್ಟು ತಿಂಡಿಗಳು ಜೊತೆಗೊಂದಷ್ಟು ಹಣ ನೀಡಿ ಅಲ್ಲೆ ಮೂರು ತಾಸು ಆ ನಾಯಿಗಳ ಜೊತೆ ಕಾಲ ಕಳೆದದ್ದು ಒಂದಷ್ಟು ಮನಸ್ಸಿಗೆ ಖುಷಿ ಕೊಟ್ಟಿತು. ಈಗ ಮನೆ ಮುಂದೆ ಬರುವ ನಾಯಿಗಳಿಗೆ ಅವನ ಹೆಸರಲ್ಲಿ ಆಹಾರ ಕೊಡುವುದು ಮುಂದುವರೆದಿದೆ.

ಆದರೆ ಮನೆಯಲ್ಲಿ ಅವನ ನೆನಪು ಇಡೀ ಮನೆ ಆವರಿಸಿದೆ. ಕ್ಷಣ ಕ್ಷಣಕ್ಕೂ ಈ ನೆನಪುಗಳು ಕಣ್ಣು ಮಂಜಾಗಿಸುತ್ತಿದೆ. ಅವನಿಲ್ಲ ಅನ್ನುವ ಸತ್ಯ ಅರಗಿಸಿಕೊಳ್ಳಲಾಗುತ್ತಿಲ್ಲ. ಅವ ಯಾಕಾಗಿ ನಮ್ಮನೆ ಸೇರಿದ? ಯಾಕೆ ಯಾವ ಸೂಚನೆ ನೀಡದೆ ಹೊರಟು ಹೋದ? ಇಷ್ಟು ವರ್ಷ ಯಾವ ಪ್ರಾಣಿಗಳನ್ನು ಸಾಕದ ನಮಗೆ ಇವನನ್ನು ಕಂಡ ಕ್ಷಣ ಸಾಕಬೇಕೆನ್ನುವ ಆಸೆ ಹುಟ್ಟಿದ್ದಾದರೂ ಹೇಗೆ? ಇದು ಇವತ್ತಿಗೂ ನಿಗೂಢ. ಇದಕ್ಕೇ ಹೇಳೋದಾ ಋಣಾನುಬಂಧ!!

ಏಳು ವರ್ಷ ಒಂಬತ್ತು ತಿಂಗಳವರೆಗೆ ಜೊತೆಯಾಗಿದ್ದವ ಬಿಟ್ಟು ಹೋದ ನೆನಪುಗಳು ಅವನ ಪಟಗಳು ವೀಡಿಯೋಗಳು ಸಾವಿರ. ಅವನ ಕುರಿತು ಬರೆದ ಬರಹಗಳಲ್ಲಿ ಇದು ಕೊನೆಯ ಕವನ.
****************
ಹಿಚುಕಿಬಿಡಲೆ
ಜೋರಾಗಿ ಒಮ್ಮೆ
ಮುದ್ದುಗರೆಯಲೆ
ಅಥವಾ
ಕಂಡವರ ಕಂಡು
ಕೂಗಾಡುವ ನಿನ್ನ
ಕಟ್ಟಿ ತದುಕಿಬಿಡಲೆ
ಅರಿಯದ ಬಲು
ಮುಗ್ಧ ಚಿನ್ನು ನೀನು
ಅದೆಲ್ಲಿಂದ ಸಿಕ್ಕೆ ಹೇಳು
ನಮ್ಮನೆಯ ಸದಸ್ಯನಾಗಿ
ಎಲ್ಲರ ಒಲವ ಗಳಿಸಿ
ಅಲ್ಲಲ್ಲಿ ಹೆಜ್ಜೆಯ ಗುರುತನಿರಿಸಿ
ನೀನಿಲ್ಲದ ಒಂದರೆಕ್ಷಣ
ಮನೆಯೆಲ್ಲ ಭಣ ಭಣ ಎನಿಸಿ
ನಿನ್ನಿರುವ ಛಾಪಿಸಿದ
ಬಲು ತುಂಟ ಪೋರಾ.

ನೀ ಶ್ವಾನವೋ ಇಲ್ಲಾ
ಮರುಳು ಮಾಡುವ ಧೀರನೊ
ಇದೇನು ಜನ್ಮದ ನಂಟು
ನನ್ನ ಸುತ್ತ ಸುತ್ತಿಕೊಂಡೇ
ಅನುದಿನ ಕಾಲ ಕಳೆಯುವ
ಕೊಂಚ ಪ್ರೀತಿ ತೋರಿಸಿದರೆ
ಹೆಗಲನೇರಿ ಕುಣಿಯುವ
ಅವಕಾಶವಾದಿ ನೀನು
ಅದಕೆ ಈ ಭಾವಕೆ ಆಗಾಗ
ಬೇಲಿ ಕಟ್ಟುವೆ ನಾನು
ಮುದುಡಿ ಮಲಗುವ ನಿನ್ನ
ಓರೆ ಗಣ್ಣಲಿ ನೋಡಿ
ಮುಗುಳ್ನಕ್ಕು ಬರೆಯುವೆ ನಾನು.

ನಾನು – ನೀನು
ನಮ್ಮದೆ ಪ್ರಪಂಚ
ಈಗೇಳು ವರ್ಷದಿಂದ
ಸಾಗಿದ ಕ್ಷಣಗಳು ವಿಸ್ಮಯ
ಹೀಗನಿಸುವುದು ಸಹಜ
ಹೇಗೆ ನಾ ಹೇಳಲಿ ಹೇಳು
ನೀನೋ ಮೂಕ ಪ್ರಾಣಿ
ಅಲ್ಲಲ್ಲ ಹೀಗಂದಾಗ
ಬಲೂ ನೋವು ನನಗೆ.

ಹಚಾ,ಹೋಗು ಅನ್ನುವ
ಜನರ ಮಾತು ನಿನ್ನ ಕಂಡಾಗ
ಯಾಕೆ ಹೆಸರೇಳಲೇನು?
ಸಂಕುಚಿತ ಜನರ ದುರ್ಭಾವ
ಕೊಳಕು ನಾಲಿಗೆ ಕಂಡಾಗ
ಜನರ ಸಹವಾಸಕ್ಕಿಂತ
ನೀನೆಷ್ಟೋ ಮೇಲು
ಅಂದನ್ನುವ ನನ್ನ ಕಕ್ಕುಲತೆ
ಸದಾ ನಿನ್ನ ಮೇಲೆ
ಬಿಡದು ಅದು ನನ್ನ
ಜೀವಿತಾವಧಿಯವರೆಗೆ
ನೀ ನನ್ನೊಡನಿರು
ಕೊನೆಯವರೆಗೆ!!
11-6-2017. 4.53pm

ಈ ದುಃಖ, ಬೇಜಾರಿಗೆ ಪರಿಹಾರ ಸಿಗುತ್ತಿಲ್ಲ. ಶೋನೂ ಮತ್ತೆ ನಮ್ಮನೆಯಲ್ಲೇ ಹುಟ್ಟಿ ಬಾ. ನಿನ್ನ ಆತ್ಮಕ್ಕೆ ದೇವರು ಸದಾ ಶಾಂತಿಯನ್ನು ಕೊಡಲಿ.

27-12-2017. 3.33pm

ಶೋನೂ^^^^^😢

ನನ್ನ ಅಮ್ಮಾ ಎಂದು ನಿನ್ನ ಭೌ ಭೌ ಭಾಷೆಯಲ್ಲಿ ಕರೆಯುತ್ತಿದ್ದೆಯಲ್ಲಾ ಪುಟ್ಟಾ. ಎಷ್ಟು ನೆನಪು ಕಣೋ ನಮಗಿಲ್ಲಿ😢 ನೀನಿರುವೆ ಎಂಬ ಭಾವ ಬೆಳಗಿನ ಕಣ್ಣು ತೆರೆದಾಗ. ನೀ ಮಲಗಿದ ಜಾಗದಲಿ ಹಚ್ಚಿಟ್ಟ ದೀಪ ನೆನಪಿಸಿತು ಈ ಮನೆಯಲ್ಲಿ ಈಗ ನೀನಿಲ್ಲ. ನಡಿ ಹೋಗೋಣ ವಾಕಿಂಗು ಎಂದು ಕರೆಯುವ ಗಡಿಬಿಡಿ ಜಿಂಕೆ ಮರಿ ಕುಣಿತ ಪೆಡಿಕ್ರೀ ಕೊಡೆಂಬ ಸೌಜ್ಞೆ ಲೊಚ ಲೊಚ ಹಾಲು ಕುಡಿವ ಸದ್ದು ಎಲ್ಲ ಕಳೆದುಕೊಂಡು ಮನೆಯೆಲ್ಲ ನಿಶ್ಯಬ್ಧ ಮೌನ. ಮತ್ತೆ ನೀ ಸಿಗಲಾರೆ ಎಂಬ ಸತ್ಯ ಹೇಗೆ ಅರಗಿಸಿಕೊಳ್ಳಲಿ!!😢😢
(ಜನನ 25-3-2010 to ಮರಣ 22-12-2017)

ಅನುಬಂಧ

ಹಿಚುಕಿಬಿಡಲೆ
ಜೋರಾಗಿ ಒಮ್ಮೆ
ಮುದ್ದುಗರೆಯಲೆ
ಅಥವಾ
ಕಂಡವರ ಕಂಡು
ಕೂಗಾಡುವ ನಿನ್ನ
ಕಟ್ಟಿ ತದುಕಿಬಿಡಲೆ
ಅರಿಯದ ಬಲು
ಮುಗ್ಧ ಚಿನ್ನು ನೀನು
ಅದೆಲ್ಲಿಂದ ಸಿಕ್ಕೆ ಹೇಳು
ನಮ್ಮನೆಯ ಸದಸ್ಯನಾಗಿ
ಎಲ್ಲರ ಒಲವ ಗಳಿಸಿ
ಅಲ್ಲಲ್ಲಿ ಹೆಜ್ಜೆಯ ಗುರುತನಿರಿಸಿ
ನೀನಿಲ್ಲದ ಒಂದರೆಕ್ಷಣ
ಮನೆಯೆಲ್ಲ ಭಣ ಭಣ ಎನಿಸಿ
ನಿನ್ನಿರುವ ಛಾಪಿಸಿದ
ಬಲು ತುಂಟ ಪೋರಾ.

ನೀ ಶ್ವಾನವೋ ಇಲ್ಲಾ
ಮರುಳು ಮಾಡುವ ಧೀರನೊ
ಇದೇನು ಜನ್ಮದ ನಂಟು
ನನ್ನ ಸುತ್ತ ಸುತ್ತಿಕೊಂಡೇ
ಅನುದಿನ ಕಾಲ ಕಳೆಯುವ
ಕೊಂಚ ಪ್ರೀತಿ ತೋರಿಸಿದರೆ
ಹೆಗಲನೇರಿ ಕುಣಿಯುವ
ಅವಕಾಶವಾದಿ ನೀನು
ಅದಕೆ ಈ ಭಾವಕೆ ಆಗಾಗ
ಬೇಲಿ ಕಟ್ಟುವೆ ನಾನು
ಮುದುಡಿ ಮಲಗುವ ನಿನ್ನ
ಓರೆ ಗಣ್ಣಲಿ ನೋಡಿ
ಮುಗುಳ್ನಕ್ಕು ಬರೆಯುವೆ ನಾನು.

ನಾನು – ನೀನು
ನಮ್ಮದೆ ಪ್ರಪಂಚ
ಈಗೇಳು ವರ್ಷದಿಂದ
ಸಾಗಿದ ಕ್ಷಣಗಳು ವಿಸ್ಮಯ
ಹೀಗನಿಸುವುದು ಸಹಜ
ಹೇಗೆ ನಾ ಹೇಳಲಿ ಹೇಳು
ನೀನೋ ಮೂಕ ಪ್ರಾಣಿ
ಅಲ್ಲಲ್ಲ ಹೀಗಂದಾಗ
ಬಲೂ ನೋವು ನನಗೆ.

ಹಚಾ,ಹೋಗು ಅನ್ನುವ
ಜನರ ಮಾತು ನಿನ್ನ ಕಂಡಾಗ
ಯಾಕೆ ಹೆಸರೇಳಲೇನು?
ಸಂಕುಚಿತ ಜನರ ದುರ್ಭಾವ
ಕೊಳಕು ನಾಲಿಗೆ ಕಂಡಾಗ
ಜನರ ಸಹವಾಸಕ್ಕಿಂತ
ನೀನೆಷ್ಟೋ ಮೇಲು
ಅಂದನ್ನುವ ನನ್ನ ಕಕ್ಕುಲತೆ
ಸದಾ ನಿನ್ನ ಮೇಲೆ
ಬಿಡದು ಅದು ನನ್ನ
ಜೀವಿತಾವಧಿಯವರೆಗೆ
ನೀ ನನ್ನೊಡನಿರು
ಕೊನೆಯವರೆಗೆ!!

11-6-2017. 4.53pm

ಹುಟ್ಟು ಹಬ್ಬದ ಶುಭಾಶಯಗಳು

image

ಹಾಯ್, ಎಷ್ಟು ಬೇಗ ಆರು ವಷ೯ ಆಗೋಯಿತಲ್ಲ! ನಮ್ಮನೆಗೆ ಬಂದು. ಯಾಕೊ ಇಷ್ಟೊಂದು ಕುಣಿತಿದ್ದೀಯಾ? OK OK Birthday ಅಂತನಾ. ಇರು ಸ್ನಾನ ಮಾಡಿಸ್ತೀನಿ. ಬೇಡ್ವಾ? ಗೊತ್ತು ನನಗೆ ಕೊಳಕಪ್ಪ. ಬರಿ ತಿಂಡಿ ಪೋತಾ. ಆಯ್ತು ಸರಿ ಕೇಕ ಕಟ್ಟ್ ಮಾಡ್ತೀಯಾ. ನಿನಗೋಸ್ಕರ shugarless ಮಾಡಿದೀನಿ. ಭೌ ಭೌ. ಗೊತ್ತಾಯಿತು ನಿನ್ನ friendsಗೂ ಕೊಡಬೇಕಾ? ಸರಿ ಮಾರಾಯಾ. ಇಗೆಲ್ಲಿ ನನ್ನ ಮಾತು ಕೇಳ್ತೀಯಾ. ದೊಡ್ಡವನಾಗಿದಿಯಾ. ನಿನ್ನದೇ ನಡೀಬೇಕೀಗ. ನೋಡು ನಾ ಒಂದು ಕವನ ಬರೆದಿದ್ದೀನಿ. ನಿನ್ನ birthday ಗೆ dedicate ಮಾಡ್ತಿದ್ದೀನಿ

image

‌ಬಾಲಂಗೋಚಿ

ಬಡ್ಡಿ ಮಗ ಕಣೋ ನೀನು
ನಿನಗೆ ಮಲಗಲು ನಿನ್ನಾಸಿಗೆ ಬೇಡ
ಸೋಫಾ ಬೇಕು, ಚೇರು ಬೇಕು
ನಾ ಮಲಗುವ ಹಾಸಿಗೆ ಬೇಕು
ಅಕ್ಕನ ತಲೆ ದಿಂಬು ಬೇಕು
ಬಿಟ್ಟರೆ ರತ್ನದ ಸಿಂಹಾಸನವೆ
ತಂದಿಡು ಅಂತಿಯೇನೊ!

ಎಷ್ಟು ಸೊಕ್ಕು ಮಾಡ್ತೀಯಾ
ಬಾ ಅಂದರೆ ಬರೋಲ್ಲ
ಸಂಶಯ ಪಿಶಾಚಿ ಕಣೊ
ನಿನ್ನಿಷ್ಟದ ತಿಂಡಿ ಕೊಟ್ಟರೆ
ಕೇಳುವ ಮೊದಲೆ
ಶೇಕ ಹ್ಯಾಂಡ ಕೊಡ್ತೀಯಾ.

ಭೌ ಭೌ ಬೊಗಳಿ ಕಿರುಚಾಡಿ
ನಿನ್ನ ಕೆಲಸ ಮಾಡಿಸ್ಕೋತಿಯಾ
ಬರಿ ಹಠಮಾರಿ ಮುದ್ದು ಮರಿ ನೀನು
ಮನೆ ನೋಡಿಕೊಳ್ಳಲು ನಿನ್ನ ಸಾಕಿದರೆ
ನಾನು ಎಲ್ಲ ಬಿಟ್ಟು
ನಿನ್ನ ನೋಡಿಕೊಳ್ಳುವ ಹಾಗಾಯಿತಲ್ಲ
ನೆನಪಾಗುವುದೀಗ ನನಗೆ
‘ಸನ್ಯಾಸಿ ಸಂಸಾರ’ದ ಕಥೆ.
3-11-2015. 10.05pm

image

Happy birthday SHOUNU
ಇರುವಷ್ಟು ಕಾಲ ಆರೋಗ್ಯದಿಂದ ಸುಃಖವಾಗಿ ಬಾಳು.
God bless you.
25-3-2016

image

ನಮ್ಮನೆ ಮರಿ

image

ಚಂಗನೆ ನೆಗೆದು ಅಚಾನಕ್ಕಾಗಿ ತೆಗೆದ ಗೇಟಿನ ಸಂದಿಯಲ್ಲೆ ತೂರಿಕೊಂಡು ಜಿಂಕೆಯಂತೆ ಬೀದಿಯಲ್ಲಿ ಕುಣಿದು ಕುಪ್ಪಳಿಸುತ್ತ ಹೋದ ನಮ್ಮನೆ ಶೋನು ಮರಿ ಮಧ್ಯಾಹ್ನ ಬೀದಿಯ ಹುಡುಗರು ಬಂದು ವಿಷಯ ಹೇಳಿದಾಗ ಓಡೋಡಿ ಹೋದೆ. ಬೀದಿ ನಾಯಿಗಳ ಆಭ೯ಟಕೆ ಸಿಲುಕಿ ಹೆದರಿ ಕಾರಿನ ತಳ ಸೇರಿ ಕೂತಿತ್ತು. ಅವನನ್ನು ರಮಿಸಿ ಈಚೆ ಕರೆದಾಗ ಕಾಲು ಕುಂಟುತ್ತ ಮನೆಗೆ ಬಂತು. ಪಾಪ! ಅವನು. ಆಟ ಆಡುವ ಹುಮ್ಮನಿಸ್ಸಿನಲ್ಲಿ ಹೋಗಿತ್ತು. ಆಡಿಕೊಂಡಿರಲಿ ಸ್ವಲ್ಪ ಹೊತ್ತು ಎಂದು ಬಿಟ್ಟರೆ ಹೀಗಾಯಿತು.

ಏನನ್ನೂ ಹೇಳಿಕೊಳ್ಳಲಾಗದ ಮೂಕ ಪ್ರಾಣಿಯ ಮೂಕ ರೋಧನೆ. ಎಲ್ಲದಕ್ಕೂ ಭೌ ಭೌ, ಕುಯ್ ಕುಯ್. ಡಾಕ್ಟರ್ ಟ್ರೀಟ್ಮೆಂಟಿನಿಂದಾಗಿ ಸುಮ್ಮನೆ ಮಲಗಿದೆ. ಮನೆಯೆಲ್ಲ ನಿಶ್ಯಬ್ದ ಮೌನ, ಬೇಜಾರು, ಸಂಕಟ!

Please God bless my SHOUNU.

13-3-2016 2.42pm

ಶೋನು ಮರಿ

ಅಪರೂಪದಲ್ಲಿ ಅಪರೂಪದ ಮರಿ ನಾನು ಸಾಕಿದ ಶೋನು ಮರಿ. 25-3-2010ರ ಸುಂದರ ಮುಂಜಾನೆ ಮನೆ ಹಿಂದಿನ ಖಾಲಿ ಸೈಟಲ್ಲಿ ಪುಟ್ಟ ನಾಯಿಮರಿ. ಕುಯ್ಯಿ, ಕುಯ್ಯಿ ಶಬ್ದ ಕೇಳಿ ಪಾಪ ಅನಿಸಿ ನೋಡಲು ಹತ್ತಿರ ಹೋದರೆ ಒಂದು ಸಿಮೆಂಟ ಬಾನಿಯಿಂದ ಹೊರಬರಲಾರದೆ ಕೂಗುತ್ತಿತ್ತು. ಸರಿ ನಾನು ಮತ್ತು ಮಗಳು ಇಬ್ಬರೂ ಮುದ್ದಾದ ಮರಿ ಎತ್ತಿಕೊಂಡು ಬಂದು ಸ್ನಾನ ಉಪಚಾರ ಮಾಡಿ ನೋಡಿದರೆ ಮೂತಿ ಮೇಲೊಂದು ಗಾಯ, ಸಣ್ಣ ಹುಳುಗಳು. ಡಾಕ್ಟರ್ ಭೇಟಿ ಇಂಜಕ್ಷನ ಔಷಧಿ ಎಲ್ಲ ಮಾಡಿ ಅಂತೂ ನನಗೂ ಮೂರು ದಿನ ರಾತ್ರಿ ಹಗಲು ನಿದ್ದೆನೂ ಇಲ್ಲದೆ ಒಂದು ಹಂತಕ್ಕೆ ಬಂದಿತು ಅದರ ನಮ್ಮ ಬಾಂದವ್ಯ.

ಈಗ ನಮ್ಮ ಮನೆಯ ಒಬ್ಬ ಸದಸ್ಯನಾಗಿ ನನ್ನ ಒಂಟಿತನವನ್ನು ದೂರ ಮಾಡಿದ, ಸದಾ ನನ್ನ ಜೊತೆಗೆ ಮಾತಾಕೊಂಡಿರುವ(ಅದರದೆ ಭಾಷೆ) ನನ್ನ friend. ಬೆಳಗಿನ ವಾಕಿಂಗ ಹೊರಟರೆ ಪಾಪ ಅದೇನೊ.ಖುಷಿ. ಪಾರ್ಕ್ ಒಳಗಡೆ ಬಿಡೊಲ್ಲ ಹತ್ತಿರದಲ್ಲೆ ಇರುವ ಯೋಗ ಕ್ಲಾಸ ಕಂಪೌಂಡನಲ್ಲಿ ಸುಮ್ಮನೆ ಕೂತಿರುತ್ತೆ ನನ್ನ ವಾಕಿಂಗ ಮುಗಿಯೋವರೆಗು. ಎರಡು ದಿನ ಗಲಾಟೆ ಮಾಡಿ ಆಮೇಲೆ ಗೊತ್ತಾಯಿತು ಅಮ್ಮ ಎಲ್ಲೂ ಹೋಗಲ್ಲ ನನ್ನ ಬಿಟ್ಟು, ಎಂಥ ಬುದ್ಧಿ! ಅದೆಷ್ಟು ಬುದ್ಧಿವಂತ ನಮ್ಮ ಶೋನು ಮರಿ!
God bless you!

3-2-2016