ಕೆಲವು ಹನಿಗವನಗಳು

# ಕೌದಿ #

ಆಗೆಲ್ಲ ಹಾಕುತ್ತಿದ್ದರು
ಬಲೂ ನಾಜೂಕಾಗಿ ಹೊಲಿಗೆ
ನೋಡಲದೆಷ್ಟು ಚೆಂದ
ಆದರೀಗ ಹಾಕುತ್ತಾರೆ
ಮಾರಿಗೊಂದು ನಿಮಿಷದಲ್ಲಿ
ಕೇಳಿದರೆ ಹೇಳುತ್ತಾರೆ
ಈಗ ನಾವಾಕುವುದೇ ಹೀಗೇ
ಇಡಿ ಇಡಿ ಕಾಸು ಮಾತ್ರ
ಮುನ್ನೂರು ನಾನೂರು!
************

#ಕೊರೋನಾ ಕಾಲ#

ಇರುವೆ ನಾನೊಬ್ಬನೇ
ಹೀಗಂದು ಬಾಡಿಗೆಗೆ
ಬಂದ ಒಬ್ಬ
ಕೊಡುವೆ ಬಾಡಿಗೆ ಇಷ್ಟೇ..
ತಿಂಗಳಾಗಲಿಕ್ಕಿಲ್ಲ
ಜೊತೆಗೆ ಸೇರಿದರು
ಮತ್ತೊಬ್ಬ ಇನ್ನೊಬ್ಬ
ಹೇಳಲಿಕ್ಕಿಲ್ಲ ಬಿಡಲಿಕ್ಕಿಲ್ಲ
ಹೇಳಿ ಕೇಳಿ ಇದು
ಕೊರೋನಾ ಕಾಲ
ಸುಮ್ಮನಿರುವುದೇ ವಾಸಿ
ಬಾಯ್ಬಿಟ್ಟರೆ ಮನೆ ಖಾಲಿ.

*************

# ಮಳೆ #

ಜಿಟಿ ಮಳೆ
ರಂಪಾಟ ಮಾಡಿ
ಇಳೆಯ ತೊಯ್ದು
ಬಾನ್ಗಡಿ ಮಾಡಿದ್ದು
ಒಂದಲ್ಲಾ ಎರಡಲ್ಲ
ಬೆಳ್ಳಂಬೆಳಗ್ಗೆ
ವ್ಯಾಪಾರ ಬರಕಾಸ್ತು
ಓಡಾಟಕ್ಕೆ ಕಲ್ಬಿತ್ತು
ಕರೆಂಟ್ ಖೋತಾ
ಹಿಡಿದ ಕೆಲಸ
ಎಕ್ಕುಟ್ಟೋಗಿ
ಖಾಲಿ ಕೈಲಿ
ಮನೆಯಲ್ಲಿ ಕೂಡಿಸಿ
ಬಜ್ಜಿ ತಿನ್ನೋ
ಆಸೆ ಹುಟ್ಟಿಸಿ
ಹೆಚ್ಚು ಹೊದ್ದು
ಮಲಗು ಅಂತು.
**********

# ಕೃತಿ #

ಪದ ಪದಗಳಲಿ
ಕವನ ಹುಟ್ಟಿ
ಒಂದಕ್ಕೊಂದು
ಪೊಣಿಸಿ
ಮಾಲೆ
ಮಾಡುವ
ಪರಿಗೆ
ಕೃತಿ
ಅನ್ನೋದಾ?
************

# ತುಂಟ #

ನೀ ಹುಚ್ಚಿಯಂತೆ
ಕಚ್ಚಬೇಡ ಮನಸ
ಕಚಗುಳಿ ಇಟ್ಟಂತೆ
ಗಿಕಿ ಗಿಕಿ ನಗುವೆ
ಒಬ್ಬನೇ
ಖುಷಿಯಲ್ಲಿ
ನೋಡುಗರು
ಅಂದಾರು
ಇವನ್ಯಾವನೋ
ಪಕ್ಕಾ ಹುಚ್ಚಾ!
************

22-8-2021. 1.25pm

ಹನಿಗವನಗಳು “ಬದುಕು”

# ಹುಮ್ಮಸ್ಸು #

ನನಗೊಂದಿಷ್ಟು ಹುರುಪಿತ್ತು
ಹಾಗೆ ದೇಹದಲ್ಲಿ ಖಸುವೂ ಇತ್ತು
ಭವಿಷ್ಯದ ಬಗ್ಗೆ
ಎಂಥೆಂಥದೋ ಕನಸೂ ಇತ್ತು
ಅಂಡಲೆಯುವ ಮನಕ್ಕೆ
ಕಡಿವಾಣ ಹಾಕುವ
ಚುರುಕು ಬುದ್ಧಿಯೂ ಇತ್ತು
ಬೇಕೆಂಬುದನ್ನು …..
ಪಡೆದೇ ತೀರಬೇಕೆಂಬ
ಭಯಂಕರ ಹಠವೂ ಇತ್ತು
ಇವೆಲ್ಲಾ ಒಟ್ಟಾಗಿ
ಕನಸ ಮಾರಿಯ ಮೇಲೇರಿ
ಅಹಮ್ಮಿಗೆ ಲಗಾಮು ಹಾಕದೇ
ನಾಗಾಲೋಟದಲ್ಲಿ ಓಡುವ ಅಬ್ಬರದಲ್ಲಿ
ಕಾಲು ಯಾವಾಗ ಜಾರಿತೋ
ಗೊತ್ತೇ ಆಗಲಿಲ್ಲ.
**************

# ಯೋಚನೆ #

ದಿನಗಳು ಉರುಳುತ್ತವೆ
ನಮಗರಿವಿಲ್ಲದಂತೆ
ಕಳೆದ ದಿನಗಳ ನೆನಪು
ಧಾಂಗುಡಿಯಿಡುತ್ತವೆ
ಮುಸುಕು ಹೊದ್ದಂತೆ
ಸಾಧನೆಯ ಪಥದಲ್ಲಿ
ಶೋಧಿಸ ಹೊರಟರೆ
ಸಾಧಿಸಿದ್ದೇನು ಕಾಣದು
ಇಷ್ಟಕ್ಯಾಕೆ ಜನಿಸಿದೆ
ಬೇಕಿತ್ತಾ ಇಂತಹ ಬದುಕು
ಕ್ಷಣಕ್ಷಣಕ್ಕೂ ಕಾಡುವುದು
ಬಿಡದು ಕೊರಳ ಉರುಳು.
************

# ಮುಪ್ಪು #

ಒಳದನಿಯಿನ್ನೂ ಸತ್ತಿಲ್ಲ
ಚೈತನ್ಯ ದೀವಿಗೆಯಲ್ಲಿ
ಎಣ್ಣೆಯಿನ್ನೂ ಬತ್ತಿಲ್ಲ
ನೆನಪಿನಂಗಳದ ತುಂಬ
ನಡೆದಾಡುವ ಮಾತಿಗೆ
ಕಿಂಚಿತ್ತೂ ಕೊರತೆಯಿಲ್ಲ
ರೂಪಕ್ಕೆ ಅಷ್ಟೇನೂ
ಕುಂದು ಬಂದಿಲ್ಲ
ಆದರೂ ವಯಸ್ಸು
ಆಗಾಗ ನೆನಪಿಸುವುದು
ನಿನಗಾವರಿಸಿದೆ ಮುಪ್ಪು.
************

#ಹಪಾಹಪಿ #

ಚಿತೆಯೊಳದ್ದಿದ ಮನಸು
ಸದಾ ಸುಡು ಸುಡು
ಕೊತ ಕೊತನೆ ಕುದಿವಾಗ್ನಿ
ಕೆನ್ನಾಲಿಗೆ ವಿಸ್ತರಿಸಿ
ದಹಿಸುವ ಪರಿಗೆ
ವಿಲ ವಿಲನೆ ಒದ್ದಾಡಿ
ಬದುಕು ಜೀಕುತ್ತಿದ್ದರೂ
ಛಂದೋಬದ್ಧವಾಗಿ
ಬದುಕಿಬಿಡಬೇಕೆಂಬ
ದಾಹ ಮಾತ್ರ
ಎಂದೂ ತೀರದ
ಹಪಾಹಪಿ.

30-7-2021. 5.20pm

ಕೆಲವು ಹನಿಗವನಗಳು

# ಗತಿ #

ಹೇಳಿ ಹೋಗು ಕಾರಣ
ಹೇಳಿದ್ದೆ ನಾನು
ಹೇಳದೇ ಹೋದವನು ನೀನು
ಹೇಗಿದ್ದಿ ಎಂದು ಕೇಳಲು
ಹೇಳ ಹೆಸರಿಲ್ಲದಂತಾಯ್ತು
ಹೆಪ್ಪಾಕಿದ ನಮ್ಮ ಪ್ರೀತಿ
ಹೆಕ್ಕಿ ಹೆಕ್ಕಿ ಗಂಡೊಂದ ನನಗೆ ಕಟ್ಟಿದರು
ಹೇಳು ಇದಕ್ಕೆ ಕಾರಣ ನೀನಲ್ಲದೆ
ಹೆತ್ತವರು ಹೇಗಾದಾರೂ? ಪರಿಣಾಮ
ಹೆತ್ತೊಡಲು ತಂಪಾಯ್ತು
ಹೋರಾಟದ ಬದುಕು ನನ್ನದಾಯಿತು.
**********

# ಗುಟ್ಟು #

ನಾನು ನೀನು ಹೀಗೆ
ಇದ್ದೇವಲ್ಲೋ ಹೇಗೆ
ತಾಳ ಇಲ್ಲ ತಂಬೂರಿ ಇಲ್ಲ
ಗಂಟೆಗೊಂದು ಮಾತಿಲ್ಲ
ಆದರೂ ಬದುಕಿದ್ದು
ಗೊತ್ತಾಗಲೇ ಇಲ್ಲ
ಒಂದಿನ ಬೇಕಿತ್ತಾ
ಈ ಸಂಸಾರ ಕೇಳಿದ್ದೆ
ಇದ್ದರಾಯಿತು ಬಿಡು
ಲೋಕದ ಕಣ್ಣಿಗೆ
ಮಣ್ಣೆರಚಿ ನಮ್ಮಷ್ಟಕ್ಕೆ
ಅಷ್ಟಕ್ಕೂ ಸಮರ್ಥವಾಗಿ
ಸಂಸಾರ ನಡೆಸುವವರು
ಎಷ್ಟಿದ್ದಾರೆ ಹೇಳು?

ಅದೂ ಸರಿಯನ್ನು
ತೆಪ್ಪಗೆ ಮಲಕೊ ನೀನಿನ್ನು!
*********

# ಸ್ಥಿತಿ #

ನಿನ್ನ ಕೆನ್ನೆಯ
ನವಿರಾದ ನುಣುಪು
ನನ್ನೆದೆ ತಾಕಲಿಲ್ಲ
ನಿನ್ನ ಬಂಗಾರದ
ಮೈ ಬಣ್ಣಕೆ
ಮನಸೋಲಲಿಲ್ಲ
ನಿನ್ನ ಕೊರಳ
ಸವಿಗಾನಕೆ
ಫಿದಾ ಆದೆನಲ್ಲ
ನಾನೆಂತ ಹುಚ್ಚ!
ಕೊರಳಿಗೆ ತಾಳಿ
ಬಿಗಿದ ಮೇಲೆ
ಗೊತ್ತಾಯಿತು
ನಾನು ಮೋಸ
ಹೋಗಿದ್ದು
ನಿನ್ನ ಗುಣ
ಘಾಸಿ ಮಾಡಿತು
ನನ್ನ ಹೃದಯ
ಈಗ ಛಿದ್ರ.
*********

# ಲೆಕ್ಕ #

ನಿನ್ನಂತೆ ಇರುವ ಪದಗಳು
ನನ್ನ ಹಿಂದಲೇ ಬಂದವು
ಒಟ್ಟೂ ಸೇರಿಸಿ
ಪೊಣಿಸಿಬಿಡುವ ಅಂದರೆ
ನಿನ್ನಂತೆ ಅರ್ಧದಲ್ಲೇ
ಕೈಕೊಟ್ಟು ಪರಾರಿಯಾದವು
ಅಲ್ಲಿಗೆ ಲೆಕ್ಕ ಚುಕ್ತಾ
ಮನಸ್ಸು ನಿರಾಳ.
***********

# ಸಂಸಾರ #

ಎಲ್ಲಿಂದಲೋ
ಬಂದವನು ನೀನು
ಒಂದು ತಿರುವಿನಲ್ಲಿ
ಸಂಧಿಸಿದ ನಮ್ಮ ಹಾದಿ
ಈಗ ಹೇಳಹೆಸರಿಲ್ಲದಂತೆ
ಮಾಯವಾಯಿತು
ನೆನಪಿನ ಕುರುಹುಗಳನಿಟ್ಟು
ಆಧುನಿಕತೆಯ
ಹೆಸರಿನಲ್ಲಿ ಹಾದಿಗಳು
ಅಗಲವಾಗುತ್ತಲೇ ಇರುತ್ತವೆ
ಬದುಕಿನ ಹಾದಿ ಮಾತ್ರ
ದಿನದಿನಕ್ಕೂ
ಸಂಕುಚಿತವಾಗುತ್ತಿರುವುದು ಮಾತ್ರ
ವಿಪರ್ಯಾಸವೇ ಸರಿ.
***********

# ಭಾವೋದ್ವೇಗ #

ಹೊಗಳುವ
ತುಪಾಕಿಯಲಿ
ನನ್ನೇ ನಾ
ಮರೆತಿದ್ದೆ
ಅರೆಕ್ಷಣ
ನೇರವಾಗಿ
ಎದೆಗೆ
ತಾಕಿದ
ಗುಂಡು
ವಿವಶವಾಯಿತು
ತನುಮನ.
**********

# ಸ್ನೇಹ #

ಭೇಟಿ ಬೇಕಿಲ್ಲ
ಮಾತಿನಗತ್ಯವಿಲ್ಲ
ಮನಸ್ಸಿನ ಭಾವನೆಗಳಿಗೆ
ಅಕ್ಷರಗಳು ಸಾಕು
ಪದಪದಗಳಲಿ ಹೊಮ್ಮುವ
ಮೌನ ಮಾತುಗಳ
ಹೃದಯಕ್ಕೆ ಕಿಚ್ಚು ಹಚ್ಚಿ
ಬಾಂಧವ್ಯ ಬೆಸೆದು
ಅನನ್ಯ ಅನುಭವ ಕೊಟ್ಟು
ಚಿತ್ತದಲಿ ವಿರಾಜಮಾನವಾಗಿ
ಆಗಾಗ ನೆನಪಿಸಿಕೊಂಡು
ಸಂತೋಷ ಪಡಲು
ಕೊಂಡಿ ಕಳಚದ
ಇಂತಹ ಸ್ನೇಹಿತರಿರಲು
ಇನ್ನೇನು ಬೇಕು?
***********

21-7-2021. 4.45pm

ಕೆಲವು ಹನಿಗವನಗಳು

# ದುರಂತ #

ಹೆಜ್ಜೆ ಹೆಜ್ಜೆಗೂ ನಿನ್ನ ಹಿಂಬಾಲಿಸಿಕೊಂಡು ಬಂದೆ
ಕೊನೆಗೂ ನಿನ್ನ ಗಮನಕ್ಕೆ ಬರಲೇ ಇಲ್ಲ
ಎಂತಹಾ ದುರಂತ ನೋಡು
ಕೋವಿಡ್ ಬಂದು ನನ್ನ ಉಸಿರು ನಿಂತ ಮೇಲೆ
ಕಂಡವರೆದುರು ನೀನು ಹೇಳುವ ಮಾತು
ಕೇಳಿಸಿಕೊಂಡ ಮೇಲೆ ಗೊತ್ತಾಯಿತು
ಇದು ನೀನು ಬೇಕಂತಲೇ ಮಾಡಿದ ನಾಟಕ
ಈಗ ನನಗಿಲ್ಲಿ ಸಂತೋಷ
ನಿನಗಲ್ಲಿ ಪರಿತಾಪ!
************

# ಬೆಪ್ಪ #

ಥೇಟ್ ನಿನ್ನಂತೆ
ಇದ್ದಳು ಅವಳು
ಹೆಸರು ಕೂಗಿದಾಗ
ಹಿಂತಿರುಗಿ ನೋಡಲೇ ಇಲ್ಲ
ಸಿಟ್ಟತ್ತಿ ಬಂತು
ಸರ್ರನೆ ಹೋಗಿ
ಜಡೆ ಎಳೆದೆ ನೋಡು
ಅವಳು ನೀನಾಗಿರಲಿಲ್ಲ
ಯಪ್ಪಾ… ಸತ್ತೆನೋ ಬಿದ್ದೆನೋ
ಅಂತ ಓಟ ಕಿತ್ತೆ.

ಬೆಳ್ಳಂಬೆಳಗ್ಗೆ
ಆದೆ ನಾನು ಬೆಪ್ಪ.
**********

# ಮಳೆ #

ಮುಂಗಾರು ಮಳೆ
ಪಕ್ಕಾ ನಿನ್ನಂತೆ
ಕೊಂಚ ವಿರಮಿಸಲಿಕ್ಕಿಲ್ಲ
ಪಟಕ್ಕನೆ ಬಂದು ಎಬ್ಬಿಸಿಬಿಡುತ್ತದೆ
ಬಿಸಿಲಿಗಿಟ್ಟ ಹಪ್ಪಳ ಸಂಡಿಗೆ ಒಣಗಲು
ಸೌಡು ಕೊಡುವುದೇ ಇಲ್ಲ
ಬರಲು ಹೊತ್ತಿಲ್ಲ ಗೊತ್ತಿಲ್ಲ.
**********

# ನೆನಪು #

ರಾಣಿ ಜೇನಿನ ಹಿಂದೆ
ಮುತ್ತಿಕೊಳ್ಳುವ ಜೇನು ಹುಳುಗಳಂತೆ
ವಕ್ಕರಿಸಿಬಿಡುತ್ತವೆ ಒಮ್ಮೊಮ್ಮೆ ನೆನಪುಗಳು
ಅಲ್ಲಾದರೆ ರಟ್ಟು ಕಟ್ಟಿ
ಮಕರಂದ ಹೀರಿ ತುಪ್ಪ ಮಾಡುವ ಕಾಯಕ
ಆದರಿಲ್ಲಿ ಜೀವ ಹಿಂಡಿ
ದೇಹ ಸೊರಗಿಸಿ ಮಾಡುವುದು ಅಸಹಾಯಕ.
************

3-6-2021 8.45am

ಹನಿಗವನ

ನೀನು ಮಾತನಾಡದಿದ್ದರೆ
ನನಗೇನಿಲ್ಲ ಬೇಜಾರು
ಆದರೆ ನೀನು ಆಗಾಗ ಬಂದು
ಮುಖ ತೋರುವೆಯಲ್ಲ
ನನ್ನದರದಲಿ ನಗು
ಅರಳಿಸುವೆಯಲ್ಲ ಝಿಲ್ಲನೆ
ಕವನವಾಗಿ ಬರುವೆಯಲ್ಲ
ಶಬ್ದಗಳ ಸರಮಾಲೆ ತೊಟ್ಟು
ದಿನವಿಡೀ ಓದಿ ಖುಷಿ ಪಡುವೆ
ಹೂವಿನಂತ ಮನಸ ಹೊತ್ತು
ನೀನೆ ಕಣೆ ನನ್ನ ಸೊತ್ತು.

24-10-2016  1.32pm

ವಿಧವಿಧ ರೀತಿಯ ಕವಿತೆಗಳು

ದ್ವಿರುಕ್ತಿ ಕವಿತೆ

ನನ್ನ ನಿನ್ನ ನಡುವೆ ಸದಾ ಗಡಿಬಿಡಿ
ಎದ್ದೇಳುವುದು ಲೇಟಾಗಿ ಹೇಳುತ್ತಿದ್ದೆ ತಡಿತಡಿ
ತಿಂಡಿ ತಿನ್ನುವಾಗ ನೀ ಮಾಡುತ್ತಿದ್ದೆ ಸಿಡಿಮಿಡಿ
ಸಹಿಸಿಕೊಂಡು ನಾ ನೋಡುತ್ತಿದ್ದೆ ಪಿಕಿಪಿಕಿ.
**************

ಚೌಕ ಕವಿತೆ

ಮನದ ಮಾತಿಗೆ ಮೌನವೇ ಶೃಂಗಾರ
ಅರಿತು ನಡೆದರೆ ಬಾಳದು  ಬಂಗಾರ
ಇರುವ ಮೂರು ದಿನಗಳೇ  ಆಧಾರ
ಹೊಂದಿಕೆ ಬದುಕಿನ ಏಕೈಕ ಸಾಕಾರ.
**************

9 ಪದಗಳ ಕವಿತೆ

ಹೂವೇ ಹೆಣ್ಣಾಗಿ
ಇನ್ನೊಂದು ಮನೆ ಬೆಳಗಿ
ಸಂತಾನ ಸಂಪತ್ತಿಗೆ
ಒಡೆಯಳಾಗಾಮನೆಯ
ಜ್ಯೋತಿಯಾಗುವಳು!
************

ಮೊಗ್ಗು ಹೂವಾಗಿ
ಸುತ್ತೆಲ್ಲ ಪರಿಮಳ ಬೀರಿ
ಪೂಜೆಗೂ ಸಾವಿಗೂ
ಅರ್ಪಿಸಿಕೊಂಡು
ಕೃತಾರ್ಥಳಾಗುವಳು!
************

ಹೆಸರು ಕವಿತೆ

ಮೂರಕ್ಷರವೊಂದರ
ಹೆಸರಲ್ಲಿ ನಾನಿರುವೆ
ಮೊದಲಕ್ಷರವ ತೆಗೆದರೆ
ಅಲ್ಲೂ ನಾನಿರುವೆ
ಏನೆಂದು ಕೇಳುವಿರಾದರೆ
ಅದೇ ನನ್ನ ಹೆಸರು
” ಸಂ ಗೀತಾ “
*************

ಜೋಡು ನುಡಿ ಕವಿತೆ

ಮನೆಗಿನೆ ಎಲ್ಲಾ ಮರೆತು
ಹಾದಿಬೀದಿ ಸುತ್ತಿಕೊಂಡಿದ್ದರೆ
ಸಂಸಾರಗಿಂಸಾರ ಸಾಗೋದಾದರೂ ಹೇಗೆ.

ನಮ್ಮನಮ್ಮಲ್ಲಿ ಒಗ್ಗಟ್ಟಿದ್ದು
ಅಡ್ಡಾದಿಡ್ಡಿ ವ್ಯವಹಾರ ಮಾಡದೆ ಬದುಕಿದರೆ
ಅವರಿವರ ದೃಷ್ಟಿಯಲ್ಲಿ ಗೌರವ ಪಡೆಯಬಹುದು.
*************

ಬೆಸ ಕವಿತೆ

ಪ್ರಕೃತಿಯೊಡನೆ ಬೆರೆತು ನೋಡಿ
ಸಿಗುವುದು ಎಷ್ಟೊಂದು ಮನಕಾನಂದ
ಮರೆಯಲಾಗದ ಸಂತಸ ನೀಡುತ್ತ
ಮನಸ್ಸು ಮುಗ್ಧಗೊಳಿಸುವ ಶಕ್ತಿ
ಅವಳಿಗಲ್ಲದೇ ಇನ್ನಾರಿಗಿರಲು ಸಾಧ್ಯ?
*************

ಪ್ರಶ್ನೆ ಕವಿತೆ

ಸುಮ್ಮನಿದ್ದ ಮನಸ
ಕಾಡಿ ಬೇಡಿ ಕೆಣಕಿದರೆ
ಏನು ಬಂತು ಪ್ರಯೋಜನ?

ತನ್ನ ತಾನು ಅರಿಯದೆ
ಅನ್ಯರಿಗೆ ಹಿಂಸೆ ಕೊಡುವ ಮನಸ
ಈ ಜಗದಲಿ ಯಾರು ಮೆಚ್ಚುವರು?

12-3-2021. 10.13pm

ನಿರ್ಧಿಷ್ಟ ಪದಗಳಲ್ಲಿ ಬರೆದ ಕವಿತೆಗಳು


1234

ಎಲ್ಲೋ
ಇದ್ದ ನನ್ನ
ನಿನ್ನ ಮೋಡಿಗೆ ಬೆರಗಾಗಿಸಿ
ಬಿಡಿಸಿಕೊಳ್ಳಲು ಆಗದಂತೆ ಮಾಡಿದ್ದು ತರವೇ?

ಹೇಗೋ
ಇದ್ದೆ ನಾನು
ನೀನು ಬಂದ ಮೇಲೆ
ನಾನಾರೆಂದು ಅರಿವಾಗಿಸಿದ್ದಕ್ಕೆ ಏನು ಕೊಡಲೇಳು?
************

424 ಕವಿತೆ

ರೈತರ ಬೆಳೆಗೆ ಸೂಕ್ತ ಬೆಲೆ
ಸಿಕ್ಕರೆ ಸಾಕು
ಉತ್ತು ಬಿತ್ತಿ ಮತ್ತಷ್ಟು ಬೆಳೆದಾನು!
**************

323 ಕವಿತೆ

ಕಂದನ ತೊದಲು ನುಡಿ
ತಾಯ್ತನಕ್ಕೆ ಗರಿಮೆ
ಹೆಣ್ಣಿಗದು ಸಂಭ್ರಮದ ಗಳಿಗೆ.
************

242 ಕವಿತೆ

ಅರಿವಿಲ್ಲದಂತೆ ಅರಿವಾಗುವುದು
ತನು ಮನದೊಳಗೆಲ್ಲ ಪ್ರೇಮ ನಿವೇದನೆ
ಇದುವೇ ಹರೆಯ.
*************

333 ಕವಿತೆ

ಇರುವ ಮೂರು ದಿನಕೆ
ಸದಾ ಏನೇನೆಲ್ಲಾ ಬಡಿವಾರ
ಕೊನೆಗೆ ಸಾವಿನಲ್ಲಿ ಸಮಾಪ್ತಿ.
*************

353 ಕವಿತೆ

ಕಾಡುವ ಮನಸುಗಳು ನೂರಿರಲು
ಕವಿತೆಗೆಲ್ಲಿ ಬರುವುದು ಒಂದು ದಿನವಾದರೂ ನಿದ್ರೆ
ಬಟ್ಟಿಯಿಳಿಸಿ ಬರೆಯಿಸುವುದೇ ಆಯಿತಲ್ಲಾ.
***********

333 ಕವಿತೆ

ಭಾವದಲೆಗಳ ಮೇಲೆ ತೇಲುತಿಹ
ಪದಗಳ ಮೇಳ ಜಾರಿದಾಗ
ಉದ್ಭವಿಸಿತೊಂದು ಚಂದದ ಕವನ.
**********

12345 ಕವಿತೆ

ನಾನೊಂದು
ವೀಣೆಯ ತಂತಿ
ಮೀಟುವವ ನೀನಿರುವಾಗ ನನಗಿಲ್ಲ
ನಾದ ಹೊರಬರದಿರಬಹುದೆಂಬ ಕಿಂಚಿತ್ತೂ ಆತಂಕ
ಹೀಗೆಯೇ ಮುಂದುವರೆದರೆ ನೀನಿಟ್ಟ ಹೆಸರು ಸಾರ್ಥಕ!
***********

2424 ಕವಿತೆ

ಪದ ಪದಗಳಲಿ
ಹುಟ್ಟಿ ಬರುವ ಅಂದದ ಅರಗಿಣಿ
ನಿನ್ನ ಅಂಗಳದಲ್ಲಿ
ಅದಿನ್ನೆಷ್ಟು ಅಡಗಿವೆ ನನಗೊಮ್ಮೆ ಹೇಳು.
*************

2323 ಕವಿತೆ

ಕವಿಯ ಭಾವನೆಗಳ
ದ್ಯೋತಕ ಪದಗಳ ಬಳಕೆ
ಮುತ್ತಿನಂತೆ ಪೊಣಿಸುವುದು
ಅದವರವರ ಬುದ್ಧಿಮತ್ತೆಯ ಹಿಕ್ಮತ್ತು.
************

432 ಕವಿತೆ

ನಾನು ನೀನೊಂದಾಗಿ ಬರೆದ ಕವಿತೆ
ಇಂದೆನಗೆ ಓದುವ ಆಸೆಯಾಗಿದೆ
ಆದರೆ ನೀನಿಲ್ಲವಲ್ಲಾ!
*************

135 ಕವಿತೆ

ಕನಸೇ
ನೀನೇಕೆ ಬೆನ್ನಟ್ಟಿ ಬರುವೆ…
ನಖಶಿಖಾಂತ ಉರಿ ಎಬ್ಬಿಸಿ ಚೆಂದ ನೋಡುವುದಕ್ಕಾ?

************

321 ಕವಿತೆ

ಸೂರ್ಯಾಸ್ತದ ರಂಗಿಗೆ ಅಂಬರವು
ಕೆಂಪಾಗಿರಲು ಭುವಿಯೂ
ತಂಪಾಯಿತು.
**************

1212 ಕವಿತೆ

ಪದಗಳ
ಲಾಲಿತ್ಯಕೆ ಮಣಿಯದ
ಕವಿಯಿಲ್ಲ
ಭಾವೋದ್ವೇಗದ ಕ್ಷಣಗಳಲಿ.
***********

2332 ಕವಿತೆ

ನೆನಪಾಗಿ ಉಳಿಯದಿರು
ಗಾಯಕ್ಕೆ ಬರೆ ಎಳೆದಂತೆ
ಕಂಬನಿಯ ಉಯಿಲು ಬತ್ತಿ
ಬಾಯ್ತೆರೆದ ಭೂಮಿಯಾಗುವುದು.
*************

7-3-2021 2.47pm

ಅಪಾರ್ಥ

ನಗುಮೊಗದಲಿ ನಾನಂದು ನಿನಗೆ
ಏನೋ ಹೇಳಲು ಹೊರಟಿದ್ದೆ
ಕಿವಿಗಿಟ್ಟ ನಿನ್ನ ಮೊಬೈಲಿನಲಿ
ನೀ ಉಲಿಯುತ್ತಿದ್ದೆ ಸ್ವಲ್ಪ ಜೋರಾಗೇ
ಅವಳಾ…ಗಂಟು ಮೋರೆ ಗಿರಾಕಿ.

ಆ ಕ್ಷಣ ನಾನಂದುಕೊಂಡಿದ್ದೆ
ಈ ಮಾತು ನನ್ನ ಕುರಿತೇ ಇರಬಹುದೆಂದು
ಕ್ಷಣಮಾತ್ರದಲಿ ಗಂಟಾದ ನನ್ನ ಮುಖ
ನೀ ನೋಡಬೇಕೆಂದೇ ಎದುರಾದೆ
ಇನ್ನಷ್ಟು ಊದಿಸಿಕೊಂಡು.

ಸೂಕ್ಷ್ಮಮತಿ ನೀನು ಗಮನಿಸಿಯೇ ಬಿಟ್ಟೆ
“ಅಪಾರ್ಥ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ”
ಅಂದು ನೀ ಹೇಳಿದ್ದು ಸಾಭೀತೂ ಮಾಡಿಬಿಟ್ಟೆ
ನಾಚಿಕೆಯಾಗುತಿದೆ ಈಗಲೂ ನೆನಪಿಸಿಕೊಂಡರೆ
ಥೋ…….ನನ್ನ ತಲೆ ಕಾಯಾ!

“ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ”
ಎಂದು ಮತ್ತೆ ಮತ್ತೆ ಹೇಳಬೇಡೊ ಮಾರಾಯಾ
ಹೆಣ್ಣಿಗೆ ಹೊಗಳಿಕೆ ಬೇಕು ತೆಗಳಿಕೆ ಬೇಡಾ
ಇದು ತಿಳಿಯದ ಗಂಡಸರು
ಎಷ್ಟು ಪ್ರೀತಿ ಮಾಡಿದರೂ ಅಷ್ಟೇ.

29-11-2020. 12.20pm

ಹನಿಗವನಗಳು


ಗುರು :

ಮನು ಕುಲದ
ದೀನ ದಲಿತರಿಗೆ
ದಾರಿ ದೀಪವಾಗಿ
ಸಚ್ಛಾರಿತ್ರದಲ್ಲಿ ಬದುಕಲು
ತಮ್ಮನ್ನು ತಾವೇ
ಸದಾ ತೇದು ತೇದು
ಬರಿದಾಗುತ್ತಿರುವ
ಶ್ರೀಗಂಧದ ಕೊರಡು.
**************

ಸಂನ್ಯಾಸಿ ;

ಕಾಶಾಯ ವಸ್ತ್ರಧಾರಿ ಸದಾ ಹೇಳುತ್ತಿದ್ದ
ನಾನು ಸರ್ವಸಂಗ ಪರಿತ್ಯಾಗಿ ಸನ್ಯಾಸಿ
ಆದರೆ ಅವನಾಶ್ರಮದೊಳು ಹೊಕ್ಕರೆ
ಅವ ಕುಳಿತುಕೊಳ್ಳುವ ಪೀಠ ಬೆಳ್ಳಿ
ಸೇವಾ ಕರ್ತಳಾಗಿ ಜೊತೆಗಿದ್ದಳು
ಚಂದದ ಮಿಂಚುಳ್ಳಿ.
************

ರೈತ ;

ರೈತನ ಗದ್ದೆಯಲ್ಲಿ
ಬಿತ್ತಿದ ಬೀಜ
ಅವನ ಎದೆಯಲ್ಲಿ
ಮೊಳಕೆಯೊಡೆಯುತ್ತದೆ.

ದಿನದಿನವವನ
ಬೆವರ ಕುಡಿದು
ಬೆಳೆದು ಫಸಲಾಗಿ
ಕೈಗೆ ಬರುತ್ತದೆ.

ಇನ್ನೇನು ಗೆದ್ದೆ
ಎನ್ನುವಷ್ಟರಲ್ಲಿ ಆಘಾತ
ಬಂದೆರಗುತ್ತಲೇ ಇದೆ
ಮುಂದೆಂದೂ ಹೀಗಾಗದಿರಲಿ!
***********

ಆಕಾಶ ;

ಅಂಬರದ ಹೂಗಳಲಿ
ಚಂದಿರನು ನಗುತಾನೆ
ಇಂದಿರೆಯ ಕಂಗಳಲಿ
ತನ್ನಂದವ ನೋಡುತಾನೆ.

ಅವಳ ಉಸಿರಲಿ ಬೆರೆತು
ದಿನವೂ ಕುಣಿಯುತಾನೆ
ಆವನಂದವ ಹೊಗಳಲು
ನಗುತ ಹಿಗ್ಗುತಾನೆ.

ಸುತ್ತ ಬೆಳಕ ಚೆಲ್ಲಿ
ಮೆಲ್ಲನೆ ಕುಗ್ಗುತಾನೆ
ಹದಿನೈದು ದಿನಕೊಮ್ಮೆ
ತಪ್ಪದೇ ಎದ್ದು ಬರುತಾನೆ.
*************

ಲಾಕ್ ಡೌನ್ ;

ನಾ ಹೋಗಿ ಬರುವೆ
ಆಗಾಗ ನಮ್ಮಳ್ಳಿಗೆ….
ಅಲ್ಲಿ ಆಯಿಯ
ಜೊತೆಗೆ ಕಳೆದ
ಸುಂದರ ನೆನಪಿದೆ…..
ಅಕ್ಕ ತಂಗಿಯ
ಜೊತೆ ಆಡಿದ
ಹುರುಪಡಗಿದೆ…..
ಅಣ್ಣನ ಪ್ರೀತಿಯ
ಮಾತಡಗಿದೆ….
ಈ ಕನಸುಗಳು
ನಿತ್ಯ ಬೀಳುತ್ತಿವೆ
ಬರೆಯಲು ಬೇಕಾದಷ್ಟು
ಕಣ್ಮುಂದೆ ನೇತಾಡುತ್ತವೆ
ಹಾಗಾಗಿ ಲಾಕ್ಡೌನ್
ದಿನಗಳ ಖುಷೀಯಿಂದ
ಕಳೆಯುವಂತಾಗಿದೆ.
**********

ಅವನು :

ಹೇಳಿ ಹೋಗು ಕಾರಣ
ಎಂದು ನಾನು ಹೇಳಿದ್ದೆ
ಮರೆತು ಹೋದ ಕಾರಣ
ನೀನು ಬಂದು ಉಸುರಿದ್ದೆ.

ವಿಷಯ ಮರೆಸಿ ದಡ್ಡನಂತೆ
ನನ್ನ ಹುಂಬ ಮಾಡಿದ್ದೆ
ಜಾಣ ಕುರುಡ ನೀನೆಂದು
ಆಗಲೇ ಸಾಬೀತು ಪಡಿಸಿದ್ದೆ.
*************

ಕೂಗು :

ಅರಿವಿಗೆ ಬಾರದೇ ಓ ಕ್ಷಣವೇ…
ಅಲ್ಲೇ ನಿಂತೆ ನೀನೇಕೆ ಹೇಳು

ಬಾಗಿಲವರೆಗೆ ಬಂದ ಅದೃಷ್ಟವೇ…
ನೀನೇಕೆ ಒಳಬರದೇ ಹೋದೆ ಹೇಳು.

ಕಿಂಚಿತ್ತೂ ಕರುಣೆ ತೋರದ ಓ ದೇವನೇ…
ನೀನೆಲ್ಲಿ ಮರೆಯಾದೆ ಹೇಳು.
*************

ಸಂಸಾರ:

ನಾ ನೀ ಎಂತಾದರೂ ಸರಿ
ಸಾಗಬೇಕಿದೆ ಇನ್ನೂ ಭಾರಿ
ಆರು ಮೂರಾದರೇನು?
ಮೂರು ಆರಾದರೇನು?
ಹೊಡಿ ಗೋಲಿ
ಜೀವನವೇ ಒಂದು
ಜೀಕುವ ಜೋಕಾಲಿ
ಅಲ್ಲಿ ನನಗೆ ನೀನು
ನಿನಗೆ ನಾನು
ಬೇರೆ ಯಾರೂ ಇಲ್ಲ
ಮಾಡಲು ಹಮಾಲಿ
ಕಷ್ಟವೇ ಬರಲಿ
ಸುಖವೇ ಬರಲಿ
ಬದುಕಲು ಮಾಡುವ
ಕೂಲಿ ನಾಲಿ
ಜೈಸಿಬಿಡೋಣ ಒಂದಾಗಿ
ಮೂರು ದಿನದ ನಂಟು
ಆಗದಂತೆ ಸಂಸಾರ ಕಗ್ಗಂಟು.
*************

ವ್ಯಥೆ :

ನಿನ್ನ ಒಂದು ಮಾತಿಗೆ
ತಗಲಾಕ್ಕೊಂಡ ಮನಸ್ಸು
ತಲೆ ಬುಡ ಅರ್ಥ ಆಗದೆ
ಬೆಪ್ಪಾಗಿ ಕುಳಿತಿದೆ.

ಹಬ್ಬ ಮಾಡೋಣ ಬಾರೆ
ಎಂದು ಕರೆಯುವುದ ಬಿಟ್ಟು
ಹೀಂಗಾ ಹೇಳೋದು ಎಂದು
ಸಖತ್ ಚಿಂತೆಗೀಡಾಗಿದೆ.
**********

ಎಡವಟ್ಟು :

ನನಗೊಂದಷ್ಟು ಹುರುಪಿತ್ತು
ಹಾಗೆ ದೇಹದಲ್ಲಿ ಖಸುವೂ ಇತ್ತು
ಭವಿಷ್ಯದ ಬಗ್ಗೆ
ಎಂಥೆಂಥದೋ ಕನಸೂ ಇತ್ತು
ಅಂಡಲೆಯುವ ಮನಕ್ಕೆ
ಕಡಿವಾಣ ಹಾಕುವ
ಚುರುಕು ಬುದ್ಧಿಯೂ ಇತ್ತು
ಬೇಕೆಂಬುದನ್ನು …..
ಪಡೆದೇ ತೀರಬೇಕೆಂಬ
ಭಯಂಕರ ಹಠವೂ ಇತ್ತು
ಇವೆಲ್ಲಾ ಒಟ್ಟಾಗಿ
ಕನಸ ಮಾರಿಯ ಮೇಲೇರಿ
ಅಹಮ್ಮಿಗೆ ಲಗಾಮು ಹಾಕದೇ
ನಾಗಾಲೋಟದಲ್ಲಿ ಓಡುವ ಅಬ್ಬರದಲ್ಲಿ
ಕಾಲು ಯಾವಾಗ, ಹೇಗೆ, ಎಲ್ಲಿ ಮುರಿಯಿತು
ಎಂಬುದು ಗೊತ್ತೇ ಆಗಲಿಲ್ಲ.

*************

7-11-2020. 1.25pm

ಕೋವಿಡ್ ಮಹಿಮೆ

ನನ್ನೊಲವಿನ ಅವಳು ಹೇಳಿದಳು
ನಿಮಗೆ ಕೋವಿಡ್ ಬಂದರೆ
ಯಾರಿಗೂ ಹೇಳಲೇಬೇಡಿ.

ಅಂದುಕೊಂಡೆ
ಆಹಾ! ಎಷ್ಟೊಂದು ಸೂಕ್ಷ್ಮ ಇವಳ ಮನಸ್ಸು
ದುಃಖ ತಡೆಯಲಾಗದವಳು
ಅಷ್ಟೇ ಕಾಳಜಿ, ಕರುಣೆ,ಪ್ರೀತಿ!

ಅವಳ ಮನೆಯ ಮುಂದೆ
ಹಾದು ಹೋಗುವಾಗ ಕಂಡೆ
ಮನೆಗೆಲ್ಲ ಹೊಸ ಬಣ್ಣ
ಚಪ್ಪರ ಹಾಕುವ ತಯಾರಿ
ಸಿಕ್ಕ ಆಗಂತುಕನ ವಿಚಾರಿಸಲಾಗಿ ತಿಳಿಯಿತು
ನಿಕ್ಕಿಯಾಗಿತ್ತು ಅವಳಿಗೆ ಆಗಲೇ ಮದುವೆ.

ಆದರೆ ಅಸಲಿಯತ್ತು ಇದಲ್ಲ
ಅವಳಿಗೆ ನನ್ನ ಸಂಪರ್ಕದಲ್ಲಿ
ತಾನಿಲ್ಲವೆಂಬುದಷ್ಟೇ ಬೇಕಾಗಿತ್ತು.

ಅಲ್ಲಾ ಇಷ್ಟೂ ತಿಳಿದುಕೊಳ್ಳದ
ನಾನೆಂಥ ದಡ್ಡ!

9-10-2020. 3.20pm