ಬಲು ಗಮ್ಮತ್ತು

ಓ ಹನುಮಾ
ನೀ ಎತ್ ಹೋಗಿದ್ದು?
ಆಗಿಂದ ನಿನ್ನ ಬರಾ ಕಾದೂ ಕಾದೂ
ಸಾಕಾಯ್ತು ಮಾರಾಯಾ
ಬಾ ಬ್ಯಾಗ್ ಹೋಪಾ.

ಅಲ್ಲಾ ನನ್ನೊಡೆಯಾ
ನಿಂಗ ನಾ ಪ್ರತೀ ಹಬ್ಬಕ್ಕೆ ಜಪ್ತಿ ಮಾಡಬೇಕಾ?
ಬ್ಯಾಡಾ ಅಲ್ಲಿಗೋಪುದು ಅಂದ್ರೆ
ನೀ ಮತ್ ಮತ್ ಅಲ್ಲಿಗೋಪಾ ಅಂತ್ಯಪ!

ಏನು ಈ ವರ್ಸನೂ ತಕರಾರಾ?
ಎಂತದು ನಿಂದು?
ನೀ ಬಪ್ಪೂಕೆ ಯೆಡಿಯಾ ಅಂತ್ಯಾ?
ಎಂತಾ ಮಾರಾಯಾ ಹೀಂಗಂದ್ರೆ?
ಅಲ್ಲೆಲ್ಲ ನನ್ನ ಹಬ್ಬ ಮಾಡೂಕೆ
ತುದಿಗಾಲಲ್ಲಿ ನಿಂತ್ಕಂಡೀರು.

ಅಲಲಾ ಅಲ್ಕಾಣು
ಈ ಪಟ ಭೂ ಲೋಕದಾಗೆ
ಹಬ್ಬ ಬೋ… ಜೋರಿತ್ತಂಬಾಗೆ
ಎಲ್ ಕಂಡರೂ ಜನವೋ ಜನ
ಅದೆಂತಾ ಆ ಪಾಟಿ ಮೆರವಣಿಗೆ!
ನಿಂಗೇನರೂ ಗೊತ್ತಿತ್ತಾ?
ಒಸಿ ಬಗ್ಗಿ ನೋಡು ಮಾರಾಯಾ!

ಹನುಮಾ ಬಗ್ಗಿ ನೋಡ್ತಾನೆ
ತಲೆ ಗಿರ್……ಅಂತು!!

ಅಕಾ ಇಲ್ಕೇಳು ದೇವರೂ…
ಅಲ್ಲಿ ಈ ವರ್ಸಾ ಅದೆಂತೋ ಎಲೆಕ್ಷನ್ ಇತ್ ಅಂಬ್ರು
ಇನ್ನೊಂದು ಮಜಾ ಗೊತ್ತಿತ್ತಾ?
ದೊಡ್ಡ ದೊಡ್ಡೋರೆಲ್ಲ ದೇವಸ್ಥಾನಕ್ಕೆ ಬಪ್ಪುಕ್ ಹತ್ತೀರು..
ಹಾಂಗಂತ ಮೊನ್ನಿ ನಾ ಹೋದಾಗ
ಅಲ್ಲಿ ಪ್ಯಾಪರು, ಟೀವಿಲೆಲ್ಲ ಗುಲ್ಲೋ ಗುಲ್ಲು
ಈ^^^ಸರ್ತಿ ನಿಮ್ಮಬ್ಬ ಭರ್ತಿ ಗಮ್ಮತ್ ಇತ್ತಂಬಾಗೆ
ಅದೇ ನಂಗೂ ಯೋಚನೆ ಆಗಿದ್ದು
ಹೋಪದಾ…ಬ್ಯಾಡ್ದಾ….

ಹನುಮ ಕೂತಾ ಛಂಗನೇ ಎತ್ತರದ ಮರವನೇರಿ
ಕಣ್ಣು ಭೂಲೋಕವನ್ನೆಲ್ಲ ಗಾಳಿಸ್ತಾ ಇತ್ತು!

ಅಲ್ಲಾ, ಹನುಮನಿಗೂ ಭೂಲೋಕದ
ಎಲೆಕ್ಷನ್ ಗಮ್ಮತ್ತು
ಒಸಿ ಆಸೆ ಬಂದೀತಾ ಕಾತೆ
ಆದರೆ ಈ ಬಾರಿನೂ ಅನುಮಾನ ಮಾಡ್ತಾ ಇದ್ದಾ!
ಶ್ರೀ ರಾಮನಿಗೆ ಒಳಗೊಳಗೇ ನಗು.

ಇರಲಿ ಈ ವರ್ಸ ಹೋಪದೇ
ಏನಾರಾ ಆಗ್ಲಿ
ಇವನ್ ಮಾತ್ ಕೇಕಂಡ್ ಕೂಕಂಡ್ರೆ ಅಟೆವಾ!

ಎಷ್ಟ್ ಛಂದ ಶೃಂಗಾರ ಮಾಡೀರು
ಗುಡಿ ಗೋಪುರ ಲಕಲಕಾ ಹೊಳೀತಿತ್ತು
ಏಟಂದ್ರೂ ದೊಡ್ಡ ದೊಡ್ಡ ಮನಸರ್ ಬರ್ತೀರು
ನಾ ಪೀಟದಲ್ಲಿ ಹೋಗಿ ಕೂಡೂದೇ ಸೈ
ಇವ

ನ ಮಾತ್ ಕೆಂಡ್ರೆ
ನನಗ್ ಲಂಗಣಾ
ಪಾನಕಾ, ಕೂಸುಂಬರಿ, ಆ ಪಾಟಿ ಹಣ್ಣು…….
ದೊಡ್ಡೋರು ಬರುವಾಗ ಹ್ಯಾಂಗ್ಯಾಂಗೋ ಮಾಡೂಕಿತ್ತಾ?
ಇವನದೊಂದು ಯಾವಾಗಲೂ ಪಿರಿ ಪಿರಿ.

ಕಾಡೇನು ಯಾವತ್ತೂ ಇತ್
ಎಲೆಕ್ಷನ್ ಗಮ್ಮತ್ತು
ಯಾವಾಗಲೂ ಬರ್ತದಾ??

ಓ^^^^^ ಹನುಮಾ ಇಕಾ ನಾ ಹೊಂಟೆ
ನೀ ಬತಿಯಾ, ಬಾ
ನಿನ್ ಮಾತ್ ಈ ಪಟ
ಕೇಳೂಕ್ ಯಡಿಯಾ
ಆಯ್ತಾ?

ಶರವೇಗದಲ್ಲಿ ಹೊರಟಿತು
ಎರಡು ದಿನ ಮೊದಲೇ!
ಪುಷ್ಪಕ ವಿಮಾನವನೇರಿ ರಾಮನ ಪಯಣ.

ಹನುಮ ಕಂಗಾಲಾಗಿ ನೋಡ್ತಾನೇ ಇದ್ದಾ.
ಒಂದೇ ನೆಗೆತಕ್ಕೆ
ವಾಯು ವೇಗದಲ್ಲಿ ರಾಮನ ಸೇರಿದ.

ಹೋಯ್, ನಾನಿರುವಾಗ
ನೀವೆಂತಕೆ ವಿಮಾನ ಏರೋದು?
ಈಗೆಲ್ಲಾ ಇದನ್ನು ನಂಬೂಕೆಡಿಯಾ
ಬನ್ನಿ ಕೂಕಳಿ ಹೆಗಲ್ಮೇಲೆ
ನೀವಿಲ್ಲದೇ ನಾನಿರೂಕಿತ್ತಾ?

ಹ…ಹ.. ಹನುಮಾ ಹಾಂಗ್ ಬಾ ದಾರಿಗೆ
ಭಕ್ತನ ಹೆಗಲೇರಿ ಕುಳಿತ ಶ್ರೀ ರಾಮ.

ಖುಷಿಯಲ್ಲಿ ಹೊರಟಿತು ಇಬ್ಬರ ಪಯಣ
ಭೂಲೋಕದೆಡೆಗೆ!

14-3-2018. 1.50pm

Advertisements

ಚಂದಿತ್ತ್, ಚಂದಿತ್ತ್….

ಇರೋ ಹನುಮಾ
ಯಾಕೋ ಹೀಗೊಂದು ಲಾಗಾ ಹಾಕ್ತೀಯಾ?
ಆಗ್ಲಿಂದ ನನ್ನ ಸುತ್ತತ್ತೀಯಾ..
ಅದೆನೇನೋ ಬಡಬಡಿಸ್ತೀಯಾ..
ಅದೇನಾಯ್ತು ಹೇಳೋ…

ನಾ ನೋಡ್ದೆ, ನಾ ನೋಡ್ದೆ
ನಾ ಹೋಗ್ಬಂದೆ, ನಾ ಹೋಗ್ಬಂದೆ
ಚಂದಿತ್, ಚಂದಿತ್
ಈ ಬಾರಿ ನಿಮ್ಮಬ್ಬ ಗಮ್ಮತ್ತಿತ್ತು
ನಾವ್ ಹೋಪುದೇಯಾ
ನಾವ್ ಹೋಪುದೇಯಾ.

ಎಲಾ ಇವನಾ?
ಅಲ್ಲಾ ಎಲ್ಲಿಗೆ ಹೋಗೋದು?
ಯಾಕೀಂಗೆ ಲಾಗಾ ಹಾಕ್ತಿದ್ದೀಯಾ?
ಏನ್ ತಾನು?
ಸ್ವಲ್ಪ ಬಿಡಿಸಿ ಹೇಳೋ…

ಹನುಮನ ಸಂತೋಷಕ್ಕೆ ಪಾರವೇ ಇಲ್ಲ
ನಿಂತಲ್ಲಿ ನಿಲಲಾರ
ಕೂತಲ್ಲಿ ಕೂರಲಾರ.

ರಾಮನಿಗೋ
ಇವನ ಅವತಾರ ಕಂಡು
ಕೋಪ ನೆತ್ತಿಗೇರಿತು.

“ಏಯ್! ಹನುಮಾ
ಸಾಕು ನಿಲ್ಸೋ ನಿನ್ನಾಟ
ಸ್ವಲ್ಪ ಕೋತಿ ಬುದ್ಧಿ ಬಿಟ್ಟು
ಮನುಷ್ಯನಾಗು”

ಹನುಮ ರಾಮನ ಆರ್ಭಟಕೆ ಹೆದರಿ
ಕುಕ್ಕರುಗಾಲಲ್ಲಿ ರಾಮನ ಪಾದದ ಬುಡಕೆ
ಬಂದು ಕೂತಾ.

ಸರಿ ಈಗೇಳಪ್ಪಾ ಅದೇನ್ ಕಥೆ ನಿಂದು?

ಅಲ್ಲಾ ನನ್ನೊಡೆಯಾ
ನಿಮ್ಮಬ್ಬ ನಿಮಗೇ ನೆನಪಿಲ್ಲವರಾ?
ಮತ್ತೆ ಮತ್ತೆ
ಈ ಪಟ ಭೂಲೋಕದಲ್ಲೇ
ನಿಮ್ಮಬ್ಬ ಮಾಡ್ವಾ ಆಯ್ತಾ‌.

ಏಟೊಂದು ಕ್ಲೀನು
ಏಟೊಂದು ಬಣ್ಣ
ಏಟೊಂದು ಹೂವು
ಎಲ್ಲಾ ಟಿಪ್ ಟಾಪಾಗಿತ್ತು
ಸಂಗ್ತೀಗೆ ನನ್ನ ಗುಡಿನೂ ಕ್ಲೀನ್ ಮಾಡಿರೂ ಅಂತೀನಿ!
ಜನರ ಬುದ್ಧಿ ಬಿಡಿ
ಅದಾಂಗೆ ಇಪ್ಪುದೇಯಾ
ನಿಮಗೆ ತಲಿ ಬಿಸಿ ಬ್ಯಾಡಾ ಆಯ್ತಾ?

ಅಲ್ಲಿ ಗಮ್ಮತ್ತ
ನೀವ್ ಕಂಡ್ರೆ ಎಂತಾ ಹೇಳ್ತ್ರೋ ಏನೋ
ಬ್ಯಾಡಾ ಅನ್ನ್ ಬ್ಯಾಡಿ ನನ್ನೊಡೆಯಾ!

ಇನ್ನೊಂದು ಇಸಿಯಾ
ಏನ್ ಗೊತ್ತಿತ್ತಾ?
ಈಗ ದೊಡ್ಡ ದೊಡ್ಡೋರೆಲ್ಲ ಗುಡಿ ತಾವ್
ಬರೂಕತ್ತೀರಂತೆ!
ಅದೆಂತದೋ ಎಲೆಕ್ಷನ್ಂತೆ
ಎತ್ತ್ ಕಂಡರೂ ಮೆರವಣಿಗೆ
ಒಸಿ ಗಮ್ಮತ್ತಿತ್ತು ಕಂಡ್ರಾ ಅಬ್ಬಬ್ಬೋ…
ನಂಗಂತೂ ತಲಿ ತಿರಗೋಯ್ತ್.

ನಾ ಹಬ್ಬದ ತಯಾರಿ ಹ್ಯಾಂಗಿತ್
ಒಸಿ ಕಂಡ್ಕಂಡ ಬರುವಾ ಅಂತ ಹೋಗಿದ್ನಾ
ಎಲ್ಲರಿಗೂ ನಿಮ್ಮದೇ ಜಪ
ಈ ವರ್ಸ ಆದರೂ…
ರಾಮನ ಕರಕಬಾ
ರಾಮನ ಕರಕಬಾ
ದೊಡ್ಡ ಜನ ಬತೀರು
ಮರ್ವಾದಿ ಉಳಿಸು
ಪೀಠ ಖಾಲಿ ಇಡ್ಸಬೇಡಾ..
ಅಯ್ಯೋ ಏನ್ ಕೇಳ್ತ್ರೀ…

ನಾ ಪಕ್ಕನೆ ಹೂಂ ಅಂದಿಲ್ಲೆ ಮಾರ್ರೆ
ಈಗ ನೀವೇನಂತ್ರಿ ಬ್ಯಾಗ್ ವೋಳಿ??

ಓಹ್… ಇದಾ ವಿಷಯಾ
ಸರಿ ಹೋಗೋಣ ಮಾರಾಯಾ
ನಿನ್ನಂಥ ಭಕ್ತನ ಖುಷಿ ಮುಂದೆ
ನನ್ನದೇನು?

ಸಧ್ಯ!
ಈ ವರ್ಷವಾದರೂ
ಅಲ್ಲೇ ಹಬ್ಬ ಮಾಡುವಾಂಗಾಯ್ತಲ್ಲಾ
ಒಳಗೊಳಗೇ ಖುಷಿ ಪಟ್ಟ ರಾಮ
ನೆಮ್ಮದಿಯ ನಿಟ್ಟುರಿಸು ಬಿಡುತ್ತ
ಪ್ರೀತಿಯಿಂದ ಹನುಮನ ತಲೆ ನೇವರಿಸಿದಾ!!

16-3-2018. 4.05pm

ಹೊಸ ಸಂವತ್ಸರ

ಹೊಸ ಶಖೆಗೆ ಹೊಸದೊಂದು ಸಂವತ್ಸರ
ಹೊತ್ತು ಬರುವುದು ಮತ್ತೆ ಯುಗಾದಿ
ಸಂಭ್ರಮ ಸಂತಸ ಸಿಹಿಕಹಿ ಎಲ್ಲವ
ತನ್ನೊಡಲಲ್ಲಿ ತರುವ ಯುಗಾದಿ||

ಮಾಮರ ಚಿಗುರಿಸಿ ಕೋಗಿಲೆ ಹಾಡಿಸಿ
ವಸಂತನ ಹೊಳಹು ಎಲ್ಲೆಡೆ ಪಸರಿಸಿ
ಬಿಸಿಲ ಚೆಲ್ಲಾಟಕೆ ಪ್ರಕೃತಿ ನೊಂದಾಯಿಸಿ
ಬಂತಿದೋ ನವ ಉಲ್ಲಾಸದ ಯುಗಾದಿ||

ಭೂಮಿಯ ಬದುಕಿಗೆ ಚೇತನ ತುಂಬಿಸಿ
ಬೆಳೆದ ಬೆಳೆಯಲಿ ನಗುವನುಹುದುಗಿಸಿ
ಜನಗಳ ಕಣ್ಣಲಿ ಸಂತಸ ಅರಳಿಸಿ
ಬಂತಿದೋ ಚಂದದ ಹೊಸ ಯುಗಾದಿ||

ಬೇವಿನ ಕಹಿಯೊಳು ಬೆಲ್ಲವ ಸೇರಿಸಿ
ಬದುಕಿನ ದುಃಖವ ಸುಃಖದಲಿ ತೋಯಿಸಿ
ಮನುಜನ ಮನದಲಿ ಜ್ಞಾನವ ಲೇಪಿಸಿ
ಬಂತಿದೋ ನಮ್ಮಯ ನವ ಯುಗಾದಿ||

ಸರಿಯುವ ಕಾಲನ ಲೆಕ್ಕವ ನೆನಪಿಸಿ
ವಿಳಂಬಿಯೆಂಬ ಹೆಸರನು ಬದಲಿಸಿ
ಸರ್ವರಿಗೂ ಸದಾ ಶುಭವನು ಹರಸಿ
ಬಂದಿತೋ ನವ ನಲಿವ ಯುಗಾದಿ||

(ಈ ಕವನ

ಹಾಡಿದವರು – ಕುಮಾರಿ ಭಾಗ್ಯಶ್ರೀ ಕಾಂಚನಾ

ರಾಗ ಸಂಯೋಜನೆ – ಶಶಿಗಿರಿವನ

ಗಿರಿವನ ವಾಯ್ಸ ರೆಕಾರ್ಡಿಂಗ್, ಕಡಬಾ)

18-3-2018. 5.45pm

ನೆನಪಿನ ಸಂಕ್ರಾಂತಿ

ಇನ್ನೂ ನಿದ್ದೆಯ ಮಂಪರು. ಬೆಳಗಿನ ಗಡ ಗಡ ಚಳಿಯಲ್ಲವೆ ಈ ಸಂಕ್ರಾಂತಿ ಮಾಸ. ಹೀಗಂತ ನಾ ಕರೆಯೋದು ಇನ್ನೂ ಬಿಟ್ಟಿಲ್ಲ. ಅಷ್ಟೊಂದು ಸವಿ ಸವಿಯಾದ ನೆನಪು ಈ ಸಂಕ್ರಾಂತಿ. ಹೊದ್ದ ಹೊದಿಕೆ ಇನ್ನೂ ಬಿಗಿಯಾಗಿ ಹಿಡಿದು ಹೊರಳಿ ಮಲಗುತ್ತಿದ್ದೆ ಅಜ್ಜಿ ಎದ್ದೇಳೆ ಅಂದರೂ. ಅವಳ ಮನೆಯಲ್ಲಿ ವಾಸ ಮೂರು ವರ್ಷ ಫ್ರಾಕು ಲಂಗ ಹಾಕಿ ಕುಣಿಯೊ ವಯಸ್ಸಿನಲ್ಲಿ. ಆದರೀ ಸಂಕ್ರಾಂತಿ ಹಬ್ಬ ಇಷ್ಟೆಲ್ಲಾ ಸಡಗರ ಮಾಡುತ್ತಾರೆಂಬುದು ಅಲ್ಲಿರುವಾಗಲೇ ತಿಳಿದುಕೊಂಡಿದ್ದು. ಈ ಹಬ್ಬದ ನೆನಪಿನ ಬುತ್ತಿ ಕಟ್ಟಿಕೊಟ್ಟವಳು ನನ್ನಜ್ಜಿ. ಅದಕ್ಕೇ ಇಷ್ಟು ವರ್ಷಗಳ ನಂತರವೂ ಪ್ರತೀ ಸಂಕ್ರಾಂತಿಯ ದಿನ ನೆನಪಿಸಿಕೊಳ್ಳುತ್ತೇನೆ ಅವಳು ಕಾಲವಾದರೂ ; ಅಂದಿನ ಸಂಕ್ರಾಂತಿಯ ಸಡಗರ, ಅಜ್ಜಿಯೊಂದಿಗೆ ಕಳೆದ ಹಬ್ಬಗಳ ಸಾಲು ಮಾತು,ನಗು,ಅಜ್ಜಿಯ ಕೋಪ ಅವಳ ತಲೆ ತಿನ್ನೋ ಮಾತಿಗೆ ಇತ್ಯಾದಿ.

ಆ ಊರಿಗೆ ಇರುವುದೇ ಮೂರು ಮನೆ ಒಂದೇ ಕೋಳು,(ಅಂಕಣ) ಒಂದೇ ಕುಟುಂಬ ಮೂರು ಭಾಗವಾಗಿ. ಆದರೂ ಸಂಧಿಯಲ್ಲಿ ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ಹೋಗಲು ಚಿಕ್ಕ ಬಾಗಿಲಿನ ಅವಕಾಶ ಕಲ್ಪಿಸಿಕೊಂಡಿದ್ದರು. ಸದಾ ಮೂರೂ ಮನೆ ಸುತ್ತಾಡೋದು ನನ್ನ ಚಾಕರಿ, ನನ್ನದೇ ಮನೆ ಅನ್ನೋ ತರಾ. ಹೀಗಿರುವಾಗ ಒಬ್ಬರ ಮನೆಯಲ್ಲಿ ಸಂಕ್ರಾಂತಿ ತಯಾರಿ ನಡೀತಾ ಇತ್ತು. ಅವರು ಹೇಳ್ತಿದ್ದರು ಬೆಳಗಿನ ನಾಲ್ಕು ಗಂಟೆಗೆಲ್ಲಾ ಎದ್ದು ಸಂಕ್ರಾಂತಿ ಕಾಳು ಮಾಡಬೇಕು ಮುಳ್ಳು ಬರುತ್ತದೆ ಚೆನ್ನಾಗಿ ಚಳಿಯಲ್ಲಿ. ನನಗೋ ತಲೆ ಬುಡ ಅರ್ಥ ಆಗದೆ ಬೇಡಾದ ಪ್ರಶ್ನೆ ಕೇಳಿ ಬಯ್ಸಿಕೊಂಡೆ ನನ್ನಜ್ಜಿ ಹತ್ರ. ” ಹೋಗೆ ಅದೆಂತಾ ಆ ನಮ್ನಿ ಪ್ರಶ್ನೆ ಕೇಳ್ತೆ? ಅಷ್ಟು ಕುತೂಹಲ ಇದ್ರೆ ನೀನೂ ಬೆಳಗ್ಗೆ ನಾಕ್ಕಂಟೀಗೆ ಎದ್ಕಂಡು ಅಲ್ಲಿ ಹೋಗಿ ಕೂತ್ಕಂಡು ನೋಡು “ಎಂದು ಸವಾಲಾಕಿದರು. ಕೆಟ್ಟ ಕುತೂಹಲ ಮುಳ್ಳು ಅಂದರೆ ಅದು ಹೇಗೆ, ಏನು, ಎತ್ತಾ? ಬಿಡ್ತೀನಾ? ಸರಿ ಅಜ್ಜಿ ಸವಾಲಿಗೆ ನಾನೂ ಸವ್ವಾ ಸೇರು.

ಅಜ್ಜಿಗೆ ಹೇಳಿದೆ “ಬೆಳಗ್ಗೆ ನಾಕ್ಗಂಟೀಗೆ ಎಬ್ಸು. ಆನೂ ನೋಡವು.” ಅಜ್ಜಿ ನಕ್ಕಳು ಸಣ್ಣದಾಗಿ.

ಮಾರನೇ ದಿನ ಬೆಳಿಗ್ಗೆ ನಾಲ್ಕಕ್ಕೆಲ್ಲಾ ಎದ್ದು ಸೀದಾ ಅವರ ಮನೆಗೆ ಹೋಗಿ ನೋಡ್ತೀನಿ. ಆಗಲೇ ಒಂದಿಬ್ಬರು ಎದ್ದು ಬಟ್ಟಲಲ್ಲಿ ಕೈ ಆಡಿಸ್ತಿದ್ದಾರೆ! ಪಕ್ಕದಲ್ಲಿ ನಿಗಿ ನಿಗಿ ಕೆಂಡದ ಒಲೆ. ಅದರ ಮೇಲೆ ಒಂದು ದೋಸೆ ಹೆಂಚು. ನನ್ನ ನೋಡಿ,

“ನೀ ಎಂತಕ್ಕೆ ಇಷ್ಟ ಲಗೂನೆ ಎದ್ಕಂಡು ಬಂಜೆ? ಈನಮನಿ ಚಳಿ ಹೋಗ್ ಮಲಕ್ಕ ನಡಿ” ಅಂದರೂ ಬಿಡದೆ

“ಅದೆಂತದು ಕೈ ಆಡಿಸೋದು ಅಂದೆ.”

“ಅದಾ… ಯಳ್ಳು ಒಂದು ಸ್ವಲ್ಪ ಜೀರಿಗೆ”

“ಎಂತಾ ಮಾಡಲ್ಲೆ ಇದು? ಹೀಂಗೆಂತಕ್ಕೆ ಮಾಡ್ತೆ?”

ಅವರ ಮನೆಯಲ್ಲಿ ಮದುವೆ ವಯಸ್ಸಿನ ಚಂದದ ಅಕ್ಕ ಇದ್ದಳು. ನಾವೆಲ್ಲ ಅವಳನ್ನು “ಅಕ್ಯಾ” ಎಂದೇ ಕರೆಯೋದಾಗಿತ್ತು. ಅವಳು ಪ್ರತಿಯೊಂದು ಕೆಲಸದಲ್ಲೂ ನಿಪುಣೆ,ಎಲ್ಲರ ಬಾಯಲ್ಲಿ ಅವಳ ಹೊಗಳಿಕೆ. ಅವಳ ಜೊತೆ ನನಗೂ ಸಲಿಗೆ ಜಾಸ್ತಿ ಇತ್ತು. ನನ್ನನ್ನು ಹತ್ತಿರ ಕೂಡಿಸಿಕೊಂಡು ಅವಳು ಮಾಡುವ ಈ ಯಳ್ಳಿನ ಸಮಾಚಾರ ಎಲ್ಲಾ ಹೇಳುತ್ತ

“ನೀನೂ ಮಾಡ್ತ್ಯ? ಆ ಹೇಳ್ಕೊಡ್ತಿ. ಬಾ ಕೂತ್ಕ ಇಲ್ಲಿ. ”

ಸರಿ ನನ್ನ ಕೈಗೂ ಒಂದು ಚಿಕ್ಕ ಬಟ್ಟಲು ಬಂದಿತು. ಉತ್ಸಾಹದಲ್ಲಿ ಕಣ್ಣು ನಿದ್ದೆ ಸರಿಸಿತ್ತು. ದಿನಾ ಬೆಳಿಗ್ಗೆ ನಾಲ್ಕಕ್ಕೆಲ್ಲಾ ಎದ್ದೇಳದು, ಅವಳ ಜೊತೆ ಕೂತು ನನಗೆ ಕೊಟ್ಟ ಬಟ್ಟಲಲ್ಲಿ ಅವಳು ಹೇಳಿಕೊಟ್ಟಂತೆ ಕೈ ಆಡಿಸೋದು. ಹೀಗೆ ಸುಮಾರು ಏಳೆಂಟು ದಿನ ಆಗಿರಬಹುದು ಎಳ್ಳು ಜೀರಿಗೆ ಬಿಳಿ ಬಣ್ಣ ತಳೆದು ಕ್ರಮೆಣ ನಕ್ಷತ್ರದಂತೆ ತನ್ನ ಮೈ ಸುತ್ತ ಚೂಪು ಚೂಪಾದಂತ ಆಕೃತಿಗಳು ಮೂಡಲು ಶುರುವಾಯಿತು. ಮೊದಲೆಲ್ಲ ಅಂಗಡಿಯಲ್ಲಿ ಸಿಗೊ ಸಂಕ್ರಾಂತಿ ಕಾಳು ನೋಡಿದ್ದೆ ಆದರೆ ಸಂಕ್ರಾಂತಿ ಕಾಳು ಹೀಗೆ ಮಾಡುವುದು ಗೊತ್ತೇ ಇರಲಿಲ್ಲ.

” ಈಗ ಸಾವಕಾಶ ಕೈ ಆಡಿಸು. ಮುಳ್ಳು ಮುರಿದು ಹೋಗಲಾಗ ಗೊತ್ತಾತನೆ?”

ನನಗೊ ಕುಣಿಯೋದೊಂದು ಬಾಕಿ. ಮುಳ್ಳು ಅಂದರೆ ಗುಲಾಬಿ ಮುಳ್ಳು, ಕೌಳಿಕಾಯಿ ಮುಳ್ಳು ಇಷ್ಟೇ ಗೊತ್ತಿತ್ತು. ಈ ಮುಳ್ಳು ಹೊಸದು. ಮುಳ್ಳಂತೆ ಚೂಪಾಗಿದ್ದರೂ ಕೈಗೆ ಚುಚ್ಚೋ ಮುಳ್ಳಲ್ಲ. ಆಶ್ಚರ್ಯ ಬೇರೆ. “ಎಷ್ಟು ಚಂದ ಕಾಣ್ತಲೆ ಈಗಾ ಅಕ್ಯಾ? ಅಜ್ಜಿಗೆ ತೋರ್ಸಿಕ್ಕೆ ಬರಲ” ಅಂದೆ.

” ಇರೆ , ನಾಳೆನೂ ಒಂದಿನ ಮಾಡನ. ಕಡಿಗೆ ತೋರ್ಸಲಕ್ಕಡೆ.”

ಮಾರನೇ ದಿನ ಅಜ್ಜಿ ನಾ ಮಾಡಿದ ಸಂಕ್ರಾಂತಿ ಕಾಳು ಕಂಡು ಮುಖ ಊರಗಲ ಆಗಿತ್ತು. ಅಜ್ಜನ ಹತ್ತಿರ ಹೇಳಿದಾಗ ಬಕ್ಷಿಸ್ ಜಾಸ್ತಿ ಸಿಕ್ಕಿತ್ತು . ಅಜ್ಜಿ ಕಂಜೂಷಿ ಅಂತ ಬಯ್ಕೊಂಡಿದ್ದೆ ಬರೀ ಎಂಟಾಣೆ ಕೊಟ್ಟಿದ್ದರು. ಅಜ್ಜ ಎಂಟಾಣೆದು ಎರಡು ನಾಣ್ಯ ಕೊಟ್ಟಿದ್ದ.

ಮತ್ತೆ ಮುಂದಿನ ವರ್ಷ ಈ ರೀತಿ ಸಂಕ್ರಾಂತಿ ಕಾಳು ಮಾಡಲು ಅವಕಾಶ ಆಗಲೇ ಇಲ್ಲ. ಏಕೆಂದರೆ ಆ ಅಕ್ಕನಿಗೆ ಮದುವೆ ಆಗೋಯ್ತು. ಅದೇ ಮೊದಲು ಅದೇ ಕೊನೆ. ಮತ್ತೆ ಆ ಸಂಕ್ರಾಂತಿ ಕಾಳು ನಾನು ಮಾಡಲೇ ಇಲ್ಲ.

ಹೀಗೆ ಶುರುವಾದ ಮುಳ್ಳಿನ ಕುತೂಹಲ ನಾನು ಆರನೇ ಕ್ಲಾಸಿನಲ್ಲಿ ಇರುವಾಗಲೇ ಸಂಕ್ರಾಂತಿ ಕಾಳು ಮಾಡಿ ಜಯಿಸಿದ್ದೆ. ಒಂದೆಳೆ ಸಕ್ಕರೆ ಪಾಕ ಮಂದವಾಗಿ ಮಾಡಿಕೊಂಡು ತೊಟ್ಟು ತೊಟ್ಟೇ ಎಳ್ಳು ಜೀರಿಗೆ ಮಿಶ್ರಣಕ್ಕೆ ಹಾಕುತ್ತ ಮಧ್ಯೆ ಮಧ್ಯೆ ಬೆಚ್ಚಗೆ ಮಾಡಿಕೊಳ್ಳುತ್ತ ನಂತರ ಸ್ವಲ್ಪ ಸ್ವಲ್ಪ ಜಾಸ್ತಿ ಸಕ್ಕರೆ ಪಾಕದ ಹುಂಡುಗಳನ್ನು ಹಾಕಿ ನಿಧಾನವಾಗಿ ಮುಳ್ಳು ಬಂದ ಮೇಲೆ ಅದು ಮುರಿಯದಂತೆ ಕೈ ಆಡಿಸುತ್ತ ಮಾಡಬೇಕು. ಸಂಕ್ರಾಂತಿ ಕಾಳು ಮಾಡುವುದು ಕಷ್ಟ ; ಆದರೆ ನೋಡಲ ಅತೀ ಸುಂದರ. ಇದಕ್ಕೆ ಕೆಲವು ಕಡೆ ಕುಸುರೆಳ್ಳು ಎಂದು ಹೇಳುತ್ತಾರೆ. ಇದನ್ನು ಬೆಳಗಿನ ಜಾವದ ಚಳಿಯಲ್ಲಿ ಕೂತು ಮಾಡಿದರೆ ಚೆನ್ನಾಗಿ ಮುಳ್ಳು ಬರುತ್ತದೆ ಎಂಬುದು ಪ್ರತೀತಿ.

ನಮ್ಮ ಮಲೆನಾಡಿನಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಈ ರೀತಿ ಸಂಕ್ರಾಂತಿ ಕಾಳು ಮಾಡುವ ಪದ್ಧತಿ ಇದೆ. ಅಲ್ಲಿ ಕೊಬ್ಬರಿ ಬೆಲ್ಲ ತುಂಡರಿಸಿ ಮಾಡುವ ಪದ್ಧತಿ ಇಲ್ಲ. ಸಕ್ಕರೆ ಅಚ್ಚು ಮಾಡುವುದಿಲ್ಲ. ಆದರೆ ಹಬ್ಬದ ದಿನ ಎಳ್ಳು, ಕೊಬ್ಬರಿ, ಬೆಲ್ಲ, ಏಲಕ್ಕಿ, ತುಪ್ಪ ಎಲ್ಲಾ ಹಾಕಿ ಎಳ್ಳು ಉಂಡೆಮಾಡಿ, ಹೊಸ ಅಕ್ಕಿ ಹಾಲು ಪಾಯಸ ಮಾಡಿ ಜೊತೆಗೆ ಕಬ್ಬು ಸಿಗಿದು ಹೋಳುಗಳನ್ನು ಮಾಡಿ ತಟ್ಟೆಯಲ್ಲಿ ಇಟ್ಟು ಹಣ್ಣು ಕಾಯಿಯೊಂದಿಗೆ ಮಾಡಿದ ಇನ್ನಿತರ ಭಕ್ಷಗಳೊಂದಿಗೆ ಹಬ್ಬದ ದಿನ ದೇವರಿಗೆ ನೈವೇದ್ಯ ಮಾಡುವ ಪದ್ಧತಿ ಇದೆ.

ಇಂದಿನಿಂದ ಉತ್ತರಾಯಣ ಪುಣ್ಯ ಕಾಲ ಶುರು. ಸ್ವರ್ಗದ ಬಾಗಿಲು ತೆಗೆಯುತ್ತದೆ. ಹೆಚ್ಚು ಹೆಚ್ಚು ಶೃದ್ಧೆಯಿಂದ ಪೂಜೆ ದಾನ ಧರ್ಮ ಮಾಡುವುದರಿಂದ ಮಾಡಿದ ಪಾಪವೆಲ್ಲ ಕಳೆದು ಸತ್ತ ನಂತರ ಸ್ವರ್ಗ ಸೇರುತ್ತಾರೆಂಬ ನಂಬಿಕೆ. ಮಹಾಭಾರತ ಯುದ್ಧ ನಡೆದಾಗ ಇಶ್ಚಾ ಮರಣಿಯಾದ ಭೀಷ್ಮ ಪಿತಾಮಹ ಮುಳ್ಳಿನ ಮಂಚದ ಮೇಲೆ ಮಲಗಿ ಪ್ರಾಣ ಬಿಡಲು ಈ ದಿನಕ್ಕಾಗಿ ಕಾಯುತ್ತಿದ್ದನೆಂದು ಕಥೆ ಹೇಳುತ್ತದೆ.

ಇದೇ ಕಾರಣಕ್ಕಾಗಿ ಹೆಚ್ಚಿನ ಮನೆಗಳಲ್ಲಿ ಸತ್ಯನಾರಾಯಣ ಕಥೆ ಪೂಜೆ ಮಾಡಿ ಕೆಲವರು ಗೋ ದಾನ, ದವಸ ಧಾನ್ಯ ಇತ್ಯಾದಿ ದಾನ ಮಾಡುವ ರೂಢಿ ಇಟ್ಟುಕೊಂಡಿದ್ದಾರೆ. ಯಾವುದೇ ಹಬ್ಬ ಬರಲಿ ಮಾಡಿದ ಅಡಿಗೆಯಲ್ಲಿ “ಗೋಗ್ರಾಸ” ಅಂತ ಎಲ್ಲ ಸ್ವಲ್ಪ ಸ್ವಲ್ಪ ಕುಡಿ ಬಾಳೆಯ ಎಲೆಯಲ್ಲಿ ಎತ್ತಿಟ್ಟು ಸಾಯಂಕಾಲ ಹಸುಗಳು ಮೆಂದು ಮನೆಗೆ ಬಂದಾಗ ಅವುಗಳಿಗೆ ತುತ್ತು ನೀಡುವ ಪದ್ಧತಿ ಈಗಲೂ ಮುಂದುವರಿದಿದೆ.

ಹೊಸ ಬಟ್ಟೆ ತೊಟ್ಟು ಮನೆ ಮಂದಿಗೆ ಅಕ್ಕ ಪಕ್ಕದವರಿಗೆಲ್ಲ ಸಂಕ್ರಾಂತಿ ಕಾಳು ಕೊಟ್ಟು “ಸಂಕ್ರಾಂತಿ ಹಬ್ಬದ ಶುಭಾಶಯಗಳು, ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡು” ಎಂದು ನಗೆಯ ಹೂರಣ ಮೆಲ್ಲೋದು. ಹಿರಿಯರಿಂದ ಬರುವ ಶಹಬ್ಬಾಸ್ಗಿರಿ ಅವರಿಂದ ಏನಾದರೂ ಬಕ್ಷಿಸ್ ಹಬ್ಬಕ್ಕೆ ಸಿಕ್ಕರೆ ಮತ್ತೊಂದಷ್ಟು ಖುಷಿಯ ಲೆಕ್ಕಾಚಾರ ಆ ವರ್ಷ ಮಾರಿಕಾಂಬಾ ಜಾತ್ರೆ ಇದ್ದರೆ ದುಡ್ಡು ಒಟ್ಟಾಕೊ ಬುದ್ಧಿ ಸತ್ಯನಾರಾಯಣ ಕಥೆಯಲ್ಲಿ ಸಿಗುವ ಭೋಜನ ದಕ್ಷಿಣೆಯನ್ನೂ ಬಿಡದೆ ಲೆಕ್ಕಾಚಾರ ತಲೆಯಲ್ಲಿ . ಎಲ್ಲರ ಮನೆ ಪೂಜೆಗೆ ತಪ್ಪದೇ ಹಾಜರಾಗೋದು ದೇವರ ಹೂವಿನ ಪ್ರಸಾದ, ತೀರ್ಥಕ್ಕಿಂತ ಸತ್ಯನಾರಾಯಣ ಕಥೆಗೆ ಮಾಡುವ ಪ್ರಸಾದ ತೆಗೆದುಕೊಳ್ಳಲು ಮುಂದೆ ಹೋಗಿ ನಿಲ್ಲೋದು. ಹಬ್ಬ ಕಳೆದ ಮೇಲೆ ಡಬ್ಬದಲ್ಲಿ ಉಳಿದಿರುವ ಸಂಕ್ರಾಂತಿ ಕಾಳು ಮೇಲಿರುವ ನಾಗಂತ್ಕೆ (ಶೆಲ್ಪ) ಯಿಂದ ತೆಗೆಯಲು ಹೋಗಿ ಡಬ್ಬಾನೇ ಬಿದ್ದು ಸಂಕ್ರಾಂತಿ ಕಾಳೆಲ್ಲ ಅಡಿಗೆ ಮನೆಯೆಲ್ಲ ಹರಡಿ ಮತ್ತೆ ಅಜ್ಜಿ ಹತ್ತಿರ ಬಯ್ಸಕಂಡಿದ್ದಂತೂ ಮರೆಯೋಕೆ ಸಾಧ್ಯ ಇಲ್ಲ. ಸಖತ್ ಉಡಾಫೆ ಬುದ್ಧಿ !!

” ಆ ಎಂತಾರು ಬೇಜಾರು ಮಾಡಿದ್ರೆ ಮನಸಲ್ಲಿ ಇಟ್ಕಳಡಾ. ಇಬ್ಬರೂ ಮರೆತು ಬಿಡನ ಅಕಾ” ಹೀಗೆ ಹೇಳುವುದು ಮಾರನೇ ದಿನ ಅದೇ ಹೊಸಾ ಲಂಗದಲ್ಲಿ ಶಾಲೆಗೆ ಹೋದಾಗ ಕ್ಲಾಸಲ್ಲಿ ಎಲ್ಲರಿಗೂ ಸಂಕ್ರಾಂತಿ ಕಾಳು ಕೊಟ್ಟು ಶುಭಾಶಯ ಹೇಳಿ ಪಂಚರಿಲ್ಲದ ರಾಜಿ ಪಂಚಾಯಿತಿ. ಮತ್ತದೇ ಜಗಳ ಮಾರನೇ ದಿನ ಶುರುವಾದರೂ ಆ ದಿನ ಮಾತ್ರ ಎಲ್ಲರೂ ಒಂದೇ. ಏಕೆಂದರೆ ಹೊಸ ಲಂಗದ ವರ್ಣನೆ. ನೀ ಎಷ್ಟು ದುಡ್ಡು ಒಟ್ಟಾಕಿದ್ದೆ? ಮಾರಿ ಜಾತ್ರೆಯಲ್ಲಿ ಎಂತಾ ತಂಗಂಬನ? ” ಇಂತದ್ದೆ ಮಾತು. ಆ ದಿನ ಇಡೀ ಇದೇ ಸಡಗರ ಓಡಾಟ ಶಾಲೆ ತುಂಬ. ಅದಕ್ಕೆ ಸರಿಯಾಗಿ ಶಿಕ್ಷಕರೂ ಸಾಥ್ ಕೊಡುತ್ತಿದ್ದರು. ಹಬ್ಬದ ದಿನವಂತೂ ಶಾಲೆಗೆ ರಜೆ ಗ್ಯಾರಂಟಿ ಆಗಿತ್ತು.

ನಾವಂದುಕೊಳ್ಳುತ್ತೇವೆ ಒಮ್ಮೊಮ್ಮೆ ದೇವರು ಯಾಕೆ ಈ ನೆನಪನ್ನು ಕೊಟ್ಟಿದ್ದಾನೊ ಏನೊ? ಕಹಿ ಗಳಿಗೆ ಬೇಡಾ ಬೇಡಾ ಅಂದರೂ ನೆನಪಿಗೆ ಬರುತ್ತದೆ. ಮರೆಯೋಕ್ಕೇ ಆಗುತ್ತಿಲ್ಲ. ಏನು ಮಾಡೋದಪ್ಪಾ ಅಂತ ವ್ಯಥೆ ಪಡುತ್ತೇವೆ. ಆದರೆ ಇಂತಹ ಸುಂದರ ನೆನಪುಗಳು ನೆನಪಾಗಿ ಉಳಿದು ಆಗಾಗ ನೆನಪಾಗಿ ಮನಸ್ಸು ಮತ್ತೆ ಬಾಲ್ಯಕೆ ಕಾಲಿಟ್ಟು ಹೃದಯ ಖುಷಿಯಿಂದ ಹಕ್ಕಿಯಂತಾಗುವುದು ನಿಶ್ಚಿತ.

ಎಲ್ಲಾ ಓದುಗರಿಗೂ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು.

13-1-2017 4.13pm

ನಡುಗಿದ ಹನುಮಾ….??

ಹನುಮ ಕೇಳುತ್ತಾನೆ
“ನನ್ನ ಹಬ್ಬ ನೀವ್ ಎಂತಕ್ ಮಾಡೂದು?”

ಆದರೆ ಜನ ಕೇಳಬೇಕಲ್ಲಾ.

ಗುಡಿ ಗೋಪುರಗಳು ಎದ್ದು ನಿಂತಿವೆ
ಎಲ್ಲಂದರಲ್ಲಿ ಉದ್ಭವ ಮೂರ್ತಿಯಂತೆ
ಏಕಶಿಲಾ ಮೂರ್ತಿಯಂತೆ ಹಾಗೆ ಹೀಗೆ^^^^^
ಮತ್ತೊಂದು ಮಗದೊಂದು
ನಗರ ಬೆಳೆದಂತೆ ದಾರಿ ಸವೆದಂತೆ ಜನ ಸಂಖ್ಯೆ ಹೆಚ್ಚಾದಂತೆ
ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕಲ್ವಾ?

“ಅದೌದು,
ಅಲ್ಲಾ ನಾ ಯಾವ ಗುಡೀಲಿ ಹೇಳಿ ಹೋಗಿ ಕೂಕಳ್ಲಿ?
ಅಬ್ಬಾ! ಅದ್ಯಾವ್ ಪಾಟಿ ವಿಳ್ಯೆದೆಲೆ ಹಾರ
ಸುತ್ತಿ ಸುತ್ತಿ ನನ್ನ ಮೈಯ್ಯೆಲ್ಲ ಬಲೂ ಒಜ್ಜಿ
ಪೊಗದಸ್ತಾಗಿ ತಿನ್ನೂ ತಿನ್ನೂ ಅಂತೀರಿ
ನನಗೂ ಹೊಟ್ಟಿ ಕೇಡೂಕಿತ್ ಮತ್ತೆ…..
ಅದು ಗೊತ್ತಿತ್ತಾ ನಿಮಗೆ?”

ಹೇಳುವ ಹನುಮನ ಮಾತು
ಬಾಜಾ ಭಜಂತ್ರಿಯ ಗೌಜು ಗಲಾಟೆಯಲ್ಲಿ
ಅಖಾಡದಲ್ಲಿ ಉಡುಗಿ ಹೋಯಿತು.

ಹನುಮಾ ಮೂತಿ ಊದಿಸಿಕೊಂಡು ನೋಡ್ತಾನೇ ಇದ್ದಾ!
ಜನ ಬರೋದು ಹೋಗೋದು ನಡಿತಾನೇ ಇತ್ತು
ಬಗ್ಗಿ ಬಗ್ಗಿ ತನ್ನ ಬಾಲದ ಕಡೆ
ನೋಡ್ತಾನೇ ಇದ್ದ ನೋಡ್ತಾನೇ ಇದ್ದಾ
ಅವನಿಗೆ ಅನುಮಾನ ಬಂತು
ಅರೆರೆ ನನ್ನ ಬಾಲಕ್ಕಿಂತ ಜನರ ಕ್ಯೂ ಉದ್ದ ಜಾಸ್ತಿ ಇದೆಯಲ್ಲಾ
ಅರೆ ಇಸಕಿ!
ಕಣ್ಣಲ್ಲೆ ಅಳತೆ ಮಾಡುತ್ತಾ ಮಾಡುತ್ತಾ
ಕೋಪ ನೆತ್ತಿಗೇರಿತು.

“ಬಿಡ್ತೀನಾ ನಾನು ”

ಸುತ್ತದಾ ಸುತ್ತದಾ ಸುತ್ತದಾ^^^
ಮೇಲೆ ಮೇಲೆ ಮೇಲೆ ಏರಿ ಕುಳಿತಾ
ರಾವಣನ ಮುಂದೆ ಕೂತಾಂಗೆ!
ಈ^^^^ಗ ಸ್ವಲ್ಪ ಸಮಾಧಾನ ಆಯಿತು
ಒಮ್ಮೆ ಮುಗುಳು ನಕ್ಕ

“ಆದರೂ^^^^
ಇಲ್ಯಾಕೊ ಇರೋದೇ ಬ್ಯಾಡಾ
ಮಂಡಿ ಬಿಸಿ ಆಯ್ತಿದೆ”

ಸುತ್ತ ಮುತ್ತ ದೃಷ್ಟಿ ಹಾಯಿಸಿದ
ದೂರದಲ್ಲಿ ಮಸಾಲೆ ಅರಿತಾ ಇದ್ದಾರೆ?
ಯಾಕೋ……ಡೌಟು…..

“ಇವತ್ತು ಏನೊ ನನ್ನ ಪೂಜೆ ಮಾಡ್ತೀರು…..
ನಮ್ಮ ವಾನರ ಸೇನೆ ಕೈಗೆ ಸಿಕ್ಕರೆ ಬಿಟ್ಟಾರಾ?
ಢಮ್ ಢಮಾರ್ ಮಾಡೂಕಿಲ್ಲಾ ಅಂತ ಯಾವ ಗ್ಯಾರಂಟಿ?”

ಮನಸಿಗಾದ ಇರಿಸು ಮುರಿಸು
ಪೂಜಾರಿ ಡೊಂಬರಾಟ, ಭಕ್ತರ ಪರದಾಟ
ಗಡಚಿಕ್ಕುವ ಮೈಕಾಟ.

“ಅಯ್ಯೋ! ಸಾಕಪ್ಪಾ ಈ ಜನರ ಸಾವಾಸ
ನೆಮ್ಮದಿ ಇಲ್ಲದ ಇವರ ಪೂಜಿಗಿಂತ
ನಮ್ಮ ಕಾಡೇ ಎಷ್ಟೋ ವಾಸಿ”

“ನಡಿ ನಡಿರಿ
ಎಲ್ಲಾ ಹೋಪಾ
ಇವರು ಮಾಡುವ ಬರ್ತಡೇನೂ ಬ್ಯಾಡಾ
ಎಂತದೂ ಬ್ಯಾಡಾ
ಇವರನ್ ನಂಬೂಕೆಡಿಯಾ”

ಹನುಮನೂ ಹೆದರಿಬಿಟ್ಟಾ!!

1-12-2017. 1.09pm

ಜನ ಮರುಳೊ ಜಾತ್ರೆ ಮರುಳೊ…!!

ಸಿರಸಿಯ ಪೇಟೆಯಲ್ಲಿ ಬಂಗಾರದ ಅಂಗಡಿ ಮುಂದೆ ಕೆಲವರು ಸಣ್ಣ ಪೊರಕೆಯಲ್ಲಿ ಧೂಳು ಗುಡಿಸಿ ಬಾಂಡ್ಲಿಯಲ್ಲಿ ಹಾಕಿ ನೀರಿನಿಂದ ಜಾಲಿಸಿ ಬಂಗಾರ ಹುಡುಕುವ ಕಲೆ ಚಿಕ್ಕವಳಿದ್ದಾಗ ನೋಡಿದ ದೃಶ್ಯ ಇಲ್ಲಿಯ ಬಂಗಾರದಂಗಡಿಯ ಜಗಮಗ ಬೆಳಕಲ್ಲಿ ನೆನಪಾಯಿತು. ಸಿಕ್ಕರೆ ಬಂಗಾರ ಇಲ್ಲದಿದ್ದರೆ ಅವರ ಕಮರುವ ಆಸೆಗೆ ನಾನೂ ಬೆರೆತು ಬರೆದೆ ಈ ಕವನ.
^^^^^^^^^^^^^^^^^^^^

ಕಂಚಿ ಪಿತಾಂಬರ ಜರಿ ಒಡಲು
ನಿರಿಗೆ ಸರಿದಿದೆ ಒಪ್ಪ ಮಡಿಕೆ
ನವಿಲ ನಡಿಗೆಗೆ ತಾಳ ಹಾಕಲು
ಪಳ ಪಳ ಬಂಗಾರ ಹಳದಿ
ವಜ್ರದೋಲೆ ಕಿವಿ ಬುಗುಡಿ
ಸರಮಾಲೆಗಳ ಔತಣ
ಇನಿಯನ ಸವಿ ಮಾತಿನ
ಹಸನಾದ ಹೊದಿಕೆ ಹೊದ್ದು
ನೆರಳ ತೋಳ ಬಂಧನದಲ್ಲಿ
ಬಳುಕುವ ಬಾಲೆ
ಅಕ್ಷಯಾ
ಏನು ನಿನ್ನ ಲೀಲೆ.

ಇದ್ದವರಿಗೆ ಎಲ್ಲ ಉಂಟು
ಇಲ್ಲದವರಿಗೆ ಹರಿದ
ಗೋಣಿಯ ಹೊದಕಲು
ಕಣ್ಣು ಹಾಯುವ
ಬಂಗಾರದಂಗಡಿಯ ಬಾಗಿಲಲ್ಲಿ
ಬಿದ್ದ ಧೂಳಿಗೆ ಬೆರೆಸಿ ನೀರು
ಜರಡಿ ಮಾಡುವುದ ಕಂಡಿದ್ದೆ
ತಿಳುವಳಿಕೆಯಿಲ್ಲದ ವಯಸ್ಸಿನಲ್ಲಿ
ಸಿಗುವುದೆ
ಗುಲಗಂಜಿಯಷ್ಟು ಬಂಗಾರ!

ಗರಿ ಗೆದರಿದ ದಿನಗಳಲ್ಲಿ
ಒಡಲ ತುಂಬೆಲ್ಲ ಆಸೆಗಳ ಹೊಗೆ
ನಾ ಬರಿಗೈಯ್ಯ ಬಡವಿ
ಕಣ್ಣು ಪಿಳಿ ಪಿಳಿ ಕಂಡ ವೈಭವ ನೋಡಿ
ಕಮರಿ ಹೋದ ದಿನಗಳಿಗೆ ಬೀಗ ಜಡಿದು
ಕೊಸರಿ ಬಿಸಾಕಿ ಬಂದಿರುವೆ
ನಖಶಿಕಾಂತ ಬಡಿದೆಬ್ಬಿಸಿದ ಆಸೆಗಳ
ತಣ್ಣನೆಯ ನೀರು ಕುಡಿದು.

ತದಿಗೆಯ ದಿನ ಖರೀದಿ ಕಾರ್ಯ
ಬರುವುದು ಸಿರಿ ಸಂಪತ್ತು
ಕಂಡವರೆಲ್ಲ ಉಸುರಿ ಹೇಳುವರಲ್ಲ
ಬರಿ ಸುಖಾಸುಮ್ಮನೆ
ಹುಟ್ಟಿದ ನಂಬಿಕೆಗಳಿರಬಹುದೆ
ಕಂಡಾಗ ವ್ಯಾಪಾರಸ್ಥರ ಅನಗತ್ಯ
ಅಬ್ಭರದ ಭರಾಟೆ ಕಾಳ್ಗಿಚ್ಚು
ಆದರೆ ಮಾಯದ ಹುಣ್ಣು
ಹಾಗೆ ಹಸಿಯಾಗಿ ಕೆಂಪಾಗಿ
ಅವಿತು ಕೂತುಬಿಟ್ಟಿದೆ
“ಜನ ಮರುಳೊ ಜಾತ್ರೆ ಮರುಳೊ”
ಅಕ್ಷಯ ತದಿಗೆಯ ಹುಸಿ
ಕಥೆಯಲ್ಲಿ!
8-5-2016. 2.42pm

ಹೊಸ ಸಂವತ್ಸರ …..

ಅರವತ್ತು ಸಂವತ್ಸರಗಳಲ್ಲಿ ಮೊದಲರ್ಧ ಮುಗಿದು ಇವತ್ತು ಮಂಗಳವಾರ ಮೂವತ್ತೊಂದನೆ ಸಂವತ್ಸರ ಪ್ರಾರಂಭ. ಹೊಸ ಸಂವತ್ಸರದಲ್ಲಿ ನಾವೆಲ್ಲ ಕಾಲಿಡುತ್ತಿದ್ದೇವೆ. ಪಂಚಾಂಗದ ಪ್ರಕಾರ ಹಿಂದೂಗಳಿಗೆ ಇದು ಹೊಸ ವರ್ಷದ ಪ್ರಾರಂಭ. ಪ್ರಕೃತಿ ಮಾತೆ ಚೈತ್ರ ಮಾಸದಲ್ಲಿ ಮೈ ತುಂಬಿ ನಳ ನಳಿಸುತ್ತಾಳೆ. ಎಲ್ಲಿ ನೋಡಿದರೂ ವನ ರಾಶಿಯ ಮಧ್ಯೆ ನಡೆದಾಗ ಕಣ್ಣಿಗೆ ಕಾಣುವುದು ಬರೀ ಹಸಿರೇ ಹಸಿರು. ಚಿಗುರೆಲೆ, ಮೊಗ್ಗು,ಹೂ,ಕಾಯಿ ಮಾಮರದ ಕೋಗಿಲೆಗೂ ಹಾಡಲು ಇನ್ನಿಲ್ಲದ ಆತುರ. ಈ ಒಂದೆರಡು ತಿಂಗಳು ಬೆಳಿಗ್ಗೆ ಚುಮು ಚುಮು ತಂಗಾಳಿಯ ಹಿತಕರ ವಾತಾವರಣದಲ್ಲಿ ಆ ಗಿಡಗಳ ನಡುವೆ ನಡೆದಾಡುವ ಸೊಬಗಿದೆಯಲ್ಲ ; ವಾವ್! ಮನಸಿಗದೆಷ್ಟು ಉಲ್ಲಾಸ. ಎಷ್ಟು ನಡೆದರೂ ಇನ್ನೂ ಒಂದಷ್ಟು ದೂರ ಸಾಗಿ ಬರೋಣವೆ ಅನ್ನುತ್ತದೆ ಮನಸ್ಸು. ಹಳ್ಳಿ ಗಾಡಿನ ಮಧ್ಯೆ ಇಂತಹ ಅನುಭವ ಸವಿದ ಕ್ಷಣಗಳು ನೂರಾರು. ಈ ವರ್ಷದ ಸಂವತ್ಸರ “ಹೇವಿಳಂಬಿ”.

ಈ ಹೆಸರು ಕಂಡಾಗ ನನಗನಿಸಿದ್ದು ” ಹೇ ಅಂದರೆ ನೀನು, ವಿಳಂಬಿ ಅಂದರೆ ನಿಧಾನ”
ಈ ಸಂವತ್ಸರದ ಕೊನೆಯಲ್ಲಿ ನಾನು ಹುಟ್ಟಿರೋದು. ಅಂದುಕೊಂಡೆ ನಾನು ನಿಧಾನ. ಇಷ್ಟು ವರ್ಷದ ಬದುಕಿನಲ್ಲಿ ಏನೂ ಸಾಧಿಸಿಲ್ಲ. ವಿಳಂಬವಾಗಿ ಈಗ ಈ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ. ನಾನು ಹುಟ್ಟಿದ ಸಂವತ್ಸರದಲ್ಲೆ ಇದೆ ನನ್ನ ಭವಿಷ್ಯ ಅಂತ ಒಮ್ಮೆ ನಗು ಬಂತು.

ಆದರೆ ಈ ಸಂವತ್ಸರದ ಅರ್ಥ ಹೀಗಲ್ಲ. ಇದು ಸಂಸ್ಕೃತ ಶಬ್ದ. ಇದನ್ನು “ಹೇವಿಳಂಬಿ/ಹೇಮಲಂಬಿ ಎಂದೂ ಇದರ ಉತ್ಪತ್ತಿ ‘ ಹೇಮ ಲಂಬತೇ ಅತ್ರ’ ಎಂದೂ ಇದರ ಅರ್ಥ ಕನ್ನಡದಲ್ಲಿ ಈ ಸಂವತ್ಸರದಲ್ಲಿ ಬಂಗಾರ ಅಥವಾ ಬೆಲೆ ಬಾಳುವ ಇನ್ನಾವುದೆ ವಸ್ತು ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ ಎಂದು ಇತ್ತೀಚೆಗೆ ಓದಿ ತಿಳಿದುಕೊಂಡೆ. ಏಕೆಂದರೆ ನಾನು ಹುಟ್ಟಿದ ಸಂವತ್ಸರ ಯಾವುದೆಂದು ಇದುವರೆಗೂ ಗಮನಿಸಿರಲಿಲ್ಲ. ನನಗೆ ಅಷ್ಟೊಂದು ನಂಬಿಕೆ ಇಲ್ಲ. ಈಗ ಈ ಪಟ್ಟಿ ತಿಳಿದುಕೊಳ್ಳುವಂತೆ ಮಾಡಿತು. ತಮಗೂ ಲಭ್ಯವಾಗಲೆಂದು ಇಲ್ಲಿ ಲಗತ್ತಿಸಿದೆ.

ಎಲ್ಲರಿಗೂ ಹೊಸ ಸಂವತ್ಸರ ಶುಭವನ್ನೇ ತರಲಿ💐

ಸಂವತ್ಸರಗಳು ಅರವತ್ತು

*( 1867, 1927,1987,)*: ಪ್ರಭವ
*(1868,1928,1988)*: ವಿಭವ
*(1869,1929,1989)*: ಶುಕ್ಲ
*(1870,1930,1990)*: ಪ್ರಮೋದೂತ
*(1871,1931, 1991)*: ಪ್ರಜೋತ್ಪತ್ತಿ
*(1872,1932,1992)*: ಅಂಗೀರಸ
*(1873,1933,1993)*: ಶ್ರೀಮುಖ
*(1874,1934,1994)*: ಭಾವ
*(1875,1935,1995)*:ಯುವ
*(1876,1936,1996)*: ధాత
*(1877,1937,1997)*: ಈಶ್ವರ
*(1878,1938,1998)*: ಬಹುಧಾನ್ಯ
*(1879,1939,1999)*: ಪ್ರಮಾದಿ
*(1880,1940,2000)*: ವಿಕ್ರಮ
*(1881,1941,2001)*: ವೃಷ
*(1882,1942,2002)*: ಚಿತ್ರಭಾನು
*(1883,1943,2003)*: ಸ್ವಭಾನು
*(1884,1944,2004)*: ತಾರಣ
*(1885,1945,2005)*: ಪಾರ್ಥಿವ
*(1886,1946,2006)*: ವ್ಯಯ
*(1887,1947,2007)*: ಸರ್ವಜಿತ್
*(1888,1948,2008)*:ಸರ್ವಧಾರಿ
*(1889,1949,2009)*: ವಿರೋಧಿ
*(1890,1950,2010)*: ವಿಕೃತಿ
*(1891,1951,2011)*: ಖರ
*(1892,1952,2012)*: ನಂದನ
*(1893,1953,2013)*: ವಿಜಯ
*(1894,1954,2014)*: ಜಯ
*(1895,1955,2015)*: ಮನ್ಮಥ
*(1896,1956,2016)*: ದುರ್ಮುಖಿ
*(1897,1957,2017)*: ಹೇವಿಳಂಬಿ
*(1898,1958,2018)*: ವಿಳಂಬಿ
*(1899,1959,2019)*: ವಿಕಾರಿ
*(1900,1960,2020)*: ಶಾರ್ವರಿ
*(1901,1961,2021)*: ಪ್ಲವ
*(1902,1962,2022)*: ಶುಭಕೃತ
*(1903,1963,2023)*: ಶೋಭಕೃತ
*(1904,1964,2024)*: ಕ್ರೋಧಿ
*(1905,1965,2025)*: ವಿಶ್ವಾವಸು
*(1906,1966,2026)*: ಪರಾಭವ
*(1907,1967,2027)*: ಪ್ಲವಂಗ
*(1908,1968,2028)*: ಕೀಲಕ
*(1909,1969,2029)*: ಸೌಮ್ಯ
*(1910,1970,2030)*: ಸಾಧಾರಣ
*(1911,1971,2031)*: ವಿರೋಧಿಕೃತ
*(1912,1972,2032)*: ಪರಿಧಾವಿ
*(1913,1973,2033)*: ಪ್ರಮಾದ
*(1914,1974,2034)*: ಆನಂದ
*(1915,1975,2035)*: ರಾಕ್ಷಸ
*(1916,1976,2036)*: ನಳ
*(1917,1977,2037)*: ಪಿಂಗಳ
*(1918,1978,2038)*: ಕಾಳಯುಕ್ತಿ
*(1919,1979,2039)*: ಸಿದ್ಧಾರ್ಥಿ
*(1920,1980,2040)*: ರೌದ್ರಿ
*(1921,1981,2041)*: ದುರ್ಮತಿ
*(1922,1982,2042)*: ದುಂದುಭಿ
*(1923,1983,2043)*: ರುಧಿರೋದ್ಗಾರಿ
*(1924,1984,2044)*: ರಕ್ತಾಕ್ಷಿ
*(1925,1985,2045)*: ಕ್ರೋಧನ
*(1926,1986,2046)*: ಅಕ್ಷಯ

28-3-2017. 5.53pm