ಕನಸ ಕಾವಲಿಟ್ಟಿದ್ದೇನೆ..

ಅಂದು ಸುಂದರ ಸಂಜೆ
ಮುತ್ತುಗಳುದುರಿಸಿದಂತಿತ್ತು ಅವಳ ಮಾತು
ಆದರೂ –
ಸಿಟ್ಟಿನಲಿ ಒದರಿದ್ದೆ
ಯಾಕೆ ಕೇಳುವೆ ಈಗ ಈ ಪ್ರಶ್ನೆ?
ಸುಮ್ಮನೆ ತಿನ್ನಬಾರದೆ,
ಬರೀ ಪ್ರಶ್ನೆ ಕೇಳಿ ಕೇಳಿ
ನನ್ನ ತಲೆ ತಿಂತಿಯಾ.

ಕೆಲಸ ಮುಗಿಸಿ ಮನೆ ಸೇರಿದ ದೇಹಕ್ಕೆ
ಉತ್ತರ ಕೊಡಲೂ ಹುಮ್ಮಸ್ಸಿರುತ್ತಿರಲಿಲ್ಲ.

ಬೇಡಾ ಬೇಡಾ ಅಂದರೂ ಸುತ್ತಿಕೊಳ್ಳುವ
ಕಳೆದ ದಿನಗಳ ನೆನಪು
ಈಗಷ್ಟೇ ನೆನಪಾಗಿ
ಅವಳ ಹತ್ತಿರ ಕೂತು ತಲೆ ನೇವರಿಸಿ
ಹೇಳು ಪುಟ್ಟಾ ಕೇಳು ನಿನ್ನ ಪ್ರಶ್ನೆ
ಈಗ ನನಗೆ
ದಿನವೆಲ್ಲಾ ಬಿಡುವು.

ಆದರೆ ಈಗ ವರ್ತಮಾನ ಕಳೆದು
ನಾನು ಅವಳಾಗಿ
ಅವಳು ನಾನಾಗಿ
ಪ್ರಶ್ನೆಗಳಿಗೆ ಉತ್ತರಿಸುವೆನೆಂದರೂ
ಕೇಳುವ ಮನಸ್ಸೇ ಅವಳಿಗಿಲ್ಲ
ಆದರೂ ಕಾಯುತ್ತಿದ್ದೇನೆ
ಎಂದಾದರೂ ಮತ್ತೆ ಪ್ರಶ್ನೆ ಕೇಳಿಯಾಳು ಎಂಬ ಭ್ರಮೆಯಲ್ಲಿ
ಉತ್ತರಿಸಲೇ ಬೇಕೆಂಬ ಹುನ್ನಾರದಲ್ಲಿ
ಪ್ರಶ್ನೆ ಉತ್ತರ ಎಂಬ ಬದುಕಲ್ಲಿ
ಹಿಂತಿರುಗಿ ನೋಡುತ್ತ ಅಂತಹುದೇ ಪ್ರಶ್ನೆಯ ನಿರೀಕ್ಷೆಯಲ್ಲಿ
ಮಗಳು ಬೆಳೆದು ನಿಂತಿದ್ದಾಳೆ ಎಂಬ ಸತ್ಯ ಮರೆತು
ಮಗುವಾಗಿ ಕಾಣುವ ಹಂಬಲದಲ್ಲಿ.

ಬಾಳೆಹಣ್ಣು ಯಾವ ಫ್ಯಾಕ್ಟ್ರಿಯಲ್ಲಿ ಬೆಳಿತಾರೆ?
ಈ ನೆಲದೊಳಗೆ ಏನಿದೆ?
ನಿನ್ನ ಮದುವೆ ಫೋಟೋದಲ್ಲಿ ನಾನ್ಯಾಕಿಲ್ಲ?
………‌
……..
..‌‌‌……
ಎಷ್ಟೊಂದು ಅಪರೂಪದ ಪ್ರಶ್ನೆಗಳು!

ಆಗೆಲ್ಲ ಸಿಟ್ಟು, ಗದರಿಕೆ
ಈಗ ಕಣ್ಣು ಮಂಜು
ಆದರೂ ಕನಸು ಕಾವಲಿಟ್ಟಿದ್ದೇನೆ ಅದೇ ಮುಗ್ಧ ಪ್ರಶ್ನೆಗಳಿಗಾಗಿ.

16-1-2017. 4.17pm

Advertisements