ಪ್ರತಿಲಿಪಿ ತಾಣದಲ್ಲಿ ಸಂದ ಬಹುಮಾನ

ಪಾಕಡಾ ಹೆಂಡತಿ (ನಗೆ ಬರಹ)

ಗಂಡ- ಯಾಕೆ ಏನಾಯ್ತೆ? ನಿದ್ದೆ ಬರ್ತಿಲ್ವಾ? ಹೊರಳಾಡ್ತಾ ಇದಿಯಾ?

ಹೆಂಡತಿ- ಇಲ್ಲ ಕಂಡ್ರಿ, ಕಸದ್ದೆ ಯೋಚನೆಯಾಗಿ ಬಿಟ್ಟಿದೆ.

ಗಂಡ- ಯಾಕೆ ದಿನಾ ಬೆಳಿಗ್ಗೆ ವಾಕಿಂಗ ಹೋಗುವಾಗ ತಗೊಂಡು ಹೋಗಿ ಅದೆಲ್ಲೊ ಬಿಸಾಕಿ ಬರ್ತಿದ್ದೆ.

ಹೆಂಡತಿ- ಹಂಗಲ್ಲರಿ, ಈಗ ಕಸ ಹಾಕೊ ಜಾಗ ಕ್ಲೀನ ಮಾಡಿ ರಂಗೋಲಿ ಬೇರೆ ಹಾಕಿಡ್ತಾರೆ, ಹ್ಯಾಂಗರಿ ರಂಗೋಲಿ ಮೇಲೆ ಕಸ ಹಾಕೋದು?

ಗಂಡ-ಅಷ್ಷೇನಾ, ಕಸದ ಗಾಡಿಗೇ ಹಾಕಿದ್ರಾಯ್ತು ಬಿಡು.

ಹೆಂಡತಿ- ಅದಲ್ಲ ಕಂಡ್ರಿ.

ಗಂಡ- ಮತ್ತಿನ್ನೇನೆ?

ಹೆಂಡತಿ -ಬೆಳಗ್ಗೆ ನಿಮಗೊಂದು ಕೆಲಸ ಹೇಳೋಣ ಅಂತಿದ್ದೆ.

ಗಂಡ – ಏನೇ ಅದೂ? ಈಗ್ಲೇ ಹೇಳು. ಕುತೂಹಲ ಬೆಳಗಿನವರೆಗೆ ಕಾಯೋಕಾಗಲ್ಲ. ನನ್ನ ಜಾಣ ಮರಿ ಅಲ್ವಾ ನೀನು. ಹೇಳು ಪುಟ್ಟಾ.

ಹೆಂಡತಿ – ಥೂ…ಹೋಗ್ರಿ. ಏನ್ರೀ ಈ ವಯಸ್ಸಿನಲ್ಲಿ …. ನನಗೆ ನಾಚಿಕೆ ಆಗುತ್ತೆ. ಹಂಗಲ್ಲ ಅನ್ಬೇಡಿ.

ಗಂಡ – ಮತ್ತೆ ಹೇಳು ಬೇಗಾ…

ಹೆಂಡತಿ – ಮತ್ತೆ, ಮತ್ತೆ ಮಹಾನಗರ ಪಾಲಿಕೆಯವರು ಕಸನ ಮೂರು ತರ ವಿಂಗಡಿಸಿ ಕೊಡಬೇಕು ಹೇಳ್ತಾರಿ, ಇಲ್ಲ ಅಂದ್ರೆ ಕಸ ತಗಳಲ್ವಂತೆ. ಪಾಂಪ್ಲೆಟ್ ಬೇರೆ ಕೊಟ್ಟಿದ್ದಾರೆ, ಓದಿಕೊಂಡು ವಿಂಗಡಿಸಿ, ಹಾಗೆ ಕಸದ ಗಾಡಿ ಬಂದಾಗ ತಗೊಂಡೋಗಿ ಹಾಕಿಬಿಡ್ರಿ. ಹೇಗಿದ್ರೂ ರಿಟೈರ್ಡ ಆಗಿದಿರಾ. ಬೇಕಾದಷ್ಟು ಟೈಮಿರುತ್ತೆ ನಿಮಗೆ ಫ್ಫೀಯಾಗಿದ್ದೀರಲ್ವಾ?

ಗಂಡ – ಅವಕ್ಕಾಗಿ ಹೆಂಡತಿಯನ್ನೇ ನೋಡ್ತಾ ಇದ್ದಾ. ಅವಳೋ.. ನಿರಾಳವಾಗಿ ನಿದ್ದೆಗೆ ಜಾರಿದ್ಲು, ಗಂಡನಿಗೆ ನಿದ್ದೆ ಹಾರೋಯ್ತ ಹೆಂಡತಿ ಮಾತು ಕೇಳಿ!

ಇದೇ ಅಲ್ವೆ ಸಂಸಾರದಲ್ಲಿ ಸರಿ ಸರಿ….ಘಮ ಘಮಾ….!!

**************

https://kannada.pratilipi.com/blog/nagunagutaa-nalee-nli-april-tingala-spardheya-phalitaamsha

12-6-2018. 5.51pm

Advertisements

ಪ್ರತಿಲಿಪಿಯಲ್ಲಿ “ಶಾಯಿ ಸಾಲು” ಕವನ ಸ್ಪರ್ಧೆ ಫಲಿತಾಂಶ

ಅತೀ ಹೆಚ್ಚು ಓದಲ್ಪಟ್ಟ ಮೊದಲ 20 ಬರಹಗಳು ಮತ್ತು ಆಯ್ಕೆ ಮಾಡಿದ ವಿಧಾನ :

ನಂಬಿಕೆ

ಬಣ್ಣಿಸ ಬೇಡ ಮನವೆ
ತಣ್ಣಗಿರುವುದು ಮನಸು
ಇಂಗಿತವನರಿಯದ ಮನುಜಗೆ
ಸಲ್ಲದು ಸಲಾಮು ಗಿಲಾಮು॥

ಕೆರೆದು ಕುರಿಯಾಗುವ ಬದಲು
ಕರ ಮುಗಿದು ದೂರ ಸರಿ
ನಿನ್ನಲ್ಲಡಗಿದ ಮೌನಕೆ ದಾಸನಾಗಿ
ತೆಪ್ಪಗಿರುವುದೆ ವಾಸಿ॥

ಋಣವಿರಲು ಜನ್ಮಕೆ
ತಾನಾಗೆ ಬಂದು ಸೇರುವುದು
ಆರು ಬಲ್ಲರು ಹೇಳು
ಜಗದೊಡೆಯ ಬರೆದ ಹಣೆ ಬರಹ॥

ಹಗಲು ಗನಸನು ಮರೆತು
ಇರುವುದರಲ್ಲೇ ತೃಪ್ತಿ ಪಡು
ನೊಂದು ಸಿಗದ ವಸ್ತುವಿಗೆ
ಪರಿತಪಿಸದಿರು ಮರುಳೆ॥

ಇರುವ ಮೂರು ದಿನ
ಕೊರಗಿ ಸಾಯಲು ಬೇಡ
ಮಾಡಿರುವ ಕರ್ಮವ
ಅನುಭವಿಸದೆ ಗತಿ ಇಲ್ಲ॥

ಮುನ್ನ ಮಾಡಿದ ಪಾಪ
ಇಂದು ಕಾಡುತಿರಬಹುದು
ಇನ್ನಾದರೂ ಮುಂದಡಿಯಿಡು
ಕರ್ಮ ಸುತ್ತಿಕೊಳ್ಳದಂತೆ॥

ಇರುವನಲ್ಲವೆ ಜಗದೊಡೆಯ
ಹುಲ್ಲು ಕಡ್ಡಿಯ ನೆಪ ಸಾಕು
ಹುಟ್ಟಿಸಿದ ದೇವನವ
ಹುಲ್ಲು ಮೇಯಿಸದಿರ॥

ನಂಬಿಕೆಯೆ ಜೀವಾಳ
ನಂಬಿ ಕೆಟ್ಟವರಿಲ್ಲ
ನಂಬಿಕೆಯಲಿ ಬದುಕಿದರೆ
ಇಂಬು ಕಾಣುವೆ ನೀನು॥

12-4-2017. 8.21pm

4-3-2018 4.50pm

ಕುತೂಹಲ (ಕಥೆ)

“ಬೆಟ್ಟ ಗುಡ್ಡಗಳ ನಾಡು ಮಲೆನಾಡು. ಈ ನಾಡಿನ ತುಂಬ ಜನರು ತಮ್ಮದೆ ಆದ ಜೀವನ ಶೈಲಿ ರೂಢಿಸಿಕೊಂಡಿರುವುದು ಜನಜನಿತ. ಆಚಾರ ವಿಚಾರ ಬದುಕುವ ರೀತಿ ಹೊಸದಾಗಿ ಕಂಡವರಿಗೆ ವಿಚಿತ್ರ ಅನಿಸಬಹುದು. ಆದರೆ ಇದು ಸ್ವಾಭಾವಿಕ. ತಮ್ಮದೆ ಆದ ನಂಬಿಕೆಗೆ ಕಟ್ಟು ಬಿದ್ದ ಎಷ್ಟೋ ಕುಟುಂಬಗಳು ತಲೆ ತಲೆತಲಾಂತರದಿಂದ ಈ ಭೂತ ಪ್ರೇತಗಳಿಗೆ ಪೂಜೆ ಬಲಿ ಹೋಮ ಹವನ ಇತ್ಯಾದಿ ಮಾಡುತ್ತ ಬಂದಿರುತ್ತಾರೆ. ಅವರ ನಂಬಿಕೆ ಎಷ್ಟು ಆಳವಾಗಿದೆ ಎಂದರೆ ಯಾರಾದರೂ ಹೊರಗಿನವರು ಇವರ ನಂಬಿಕೆಯ ಕುರಿತು ಅಪಹಾಸ್ಯ ಮಾಡಿದರೆ ನಡೆದ ಘಟನೆಗಳನ್ನು ಉಧಾಹರಣೆ ಕೊಟ್ಟು ಸಾಭೀತು ಪಡಿಸುತ್ತಾರೆ. ಅಂತಹುದೇ ಒಂದು ಘಟನೆಯ ಕುರಿತಾದ ಲೇಖನ ತಮ್ಮ ಮುಂದೆ. ಒಂದು ದಿನ ರಾತ್ರಿ …………….”

ಮಹೇಶ ಬೆಳಗಿನ ಟೀ ಹೀರುತ್ತ ಪೇಪರಿನಲ್ಲಿ ಬಂದ ಈ ಲೇಖನವನ್ನು ಕುತೂಹಲ ಭರಿತನಾಗಿ ದೀರ್ಘವಾಗಿದ್ದರೂ ಓದುತ್ತ ಕುಳಿತ. ಯಾಕೊ ಈ ಲೇಖನ ಸ್ವಲ್ಪ ಕಟ್ಟು ಕಥೆಯಂತೆ ಅನಿಸಿತವನಿಗೆ. ದೆವ್ವ ಅಂತೆ ಭೂತ ಅಂತೆ ಇದೆಲ್ಲ ಜನರ ಭ್ರಮೆ ಅಷ್ಟೆ. ಅದೆಲ್ಲ ಮೊದಲಿನ ಕಾಲದಲ್ಲಿ ಇತ್ತೊ ಏನೊ. ಆದರೆ ಈಗ ದೆವ್ವವೂ ಇಲ್ಲ ಭೂತವೂ ಇಲ್ಲ. ಸುಮ್ಮನೆ ಏನಂತ ಮೂಡನಂಬಿಕೆಗೆ ಜನ ಬಲಿ ಆಗ್ತಿದ್ದಾರೊ ಏನೊ. ಹ..ಹ….

ಪೇಪರ್ ಪಕ್ಕಕ್ಕಿಟ್ಟು ತನ್ನ ಬೆಳಗಿನ ಕೆಲಸ ತಡವಾಯಿತೆಂದು ಲಗುಬಗೆಯಿಂದ ಹೊರಟ ತೋಟದ ಕಡೆ. ಕೆಲಸದಾಳುಗಳು ಅದೇನು ಮಾಡುತ್ತಿದ್ದಾರೊ ಏನೊ. ಅವರ ಹಿಂದೆ ಇಲ್ಲದಿದ್ದರೆ ಕೆಲಸ ನಿಧಾನ. ಮಳೆಗಾಲ ಶುರುವಾಗುವ ದಿನ ಹತ್ತಿರ ಬರುತ್ತಿದೆ. ಬೇಗ ಬೇಗ ತೋಟದ ಎಲ್ಲಾ ಕೆಲಸ ಮುಗಿಸಬೇಕು. ಹೀಗೆ ಯೋಚಿಸಿಕೊಂಡು ತೋಟದ ಕಡೆ ಹೆಜ್ಜೆ ಹಾಕುತ್ತಿರುವಾಗ ಮೊಬೈಲು ರಿಂಗಾಯಿತು.

“ಹಲೊ, ಏನು ಮಹೇಶಣ್ಣಾ ಏನು ಮಾಡ್ತಿದ್ದಿಯಾ? ಕಾಫಿ ತಿಂಡಿ ಆಯ್ತಾ? ನಾನು ರಂಗ ಕಣೊ.”

“ಗೊತ್ತಾಯಿತು ಅದೇನು ಹೇಳು. ಯಾಕೆ ಫೋನು ಮಾಡಿದ್ದು?”

“ಏನಿಲ್ಲಾ, ಕಾರವಾರಕ್ಕೆ ಮದುವೆಗೆ ಬರ್ತೀಯಾ? ಅದೆ ಭಾಸ್ಕರಂದು ಕಣೊ. ನಾವೆಲ್ಲಾ ಗೆಳೆಯರು ಒಂದು ವೆಹಿಕಲ್ ಮಾಡಿಕೊಂಡು ಹೋಗುವಾ ಎಂದು ಮಾತಾಡಿಕೊಂಡಿದ್ದೇವೆ. ನೀನು ಬರುವುದಾದರೆ ಹೇಳು. ಸೀಟ್ ಎರಡೇ ಬಾಕಿ ಇದ್ದಿದ್ದು.”

ಮಹೇಶ ಏನೊ ಒಂದಷ್ಟು ಲೆಕ್ಕಾಚಾರ ಹಾಕಿ “ಹೂಂ ಕಣೊ. ನಾನೂ ಬರ್ತೀನಿ. ಹೊರಡುವ ದಿನ ಹೇಳು. ಸೀದಾ ನಿಮ್ಮ ಮನೆಗೆ ಬರ್ತೀನಿ.”

“ಸರಿ, ನಾಳೆ ಮತ್ತೆ ಫೋನ್ ಮಾಡುತ್ತೇನೆ.”

ಕರೆ ಕಟ್ಟಾಯಿತು. ಮಹೇಶನಿಗೆ ಪೇಪರಿನಲ್ಲಿ ಓದಿದ ಲೇಖನ ಸಖತ್ ತಲೆ ತಿಂತಾ ಇತ್ತು. ಹೇಗಾದರೂ ಆ ಸ್ಥಳ ನೋಡಲೆ ಬೇಕೆನ್ನುವ ಕುತೂಹಲ. ಅದಕ್ಕೆ ಸರಿಯಾಗಿ ರಂಗನ ಫೋನ್ ಬಂತು. ಹೇಗಿದ್ದರೂ ಕಾರವಾರಕ್ಕೆ ಹೋಗುವ ದಾರಿಯಲ್ಲಿ ಇದೆ. ಇನ್ನೇನು.

ಮನೆಗೆ ಬಂದವನೆ ಆ ಪೇಪರನ್ನು ಜೋಪಾನವಾಗಿ ಎತ್ತಿಟ್ಟ. ಗೆಳೆಯರೊಂದಿಗೆ ಚರ್ಚಿಸಿ ಇದರ ಸತ್ಯಾ ಸತ್ಯತೆಯ ಬಗ್ಗೆ ತಿಳಿಯಬೇಕು. ನನಗಂತೂ ಮೊದಲಿನಿಂದಲೂ ಈ ದೆವ್ವ ಭೂತದ ಬಗ್ಗೆ ನಂಬಿಕೆ ಇಲ್ಲ. ಇನ್ನು ನನ್ನ ಗೆಳೆಯರೊ ಒಬ್ಬೊಬ್ಬರದು ಒಂದೊಂದು ರೀತಿಯ ವಿಚಾರ. ಆ ಶಾಮನಂತೂ ಸ್ವಂತ ಆಟೊ ಇಟ್ಟುಕೊಂಡು ಗ್ರಾಹಕರು ಕರೆದ ಕಡೆಯೆಲ್ಲ ಹೋಗುತ್ತಿರುತ್ತಾನೆ. ಅವನಿಗೆ ಇದರಲ್ಲೆಲ್ಲ ಬಳ ನಂಬಿಕೆ. ಗುಡಿ ಕಂಡರೆ ಸಾಕು ಆಟೊ ನಿಲ್ಲಿಸಿ ಕೈ ಮುಗಿವ ಗಿರಾಕಿ. ಎಷ್ಟು ವರ್ಷಗಳಿಂದ ನೋಡುತ್ತಿದ್ದೇನೆ. ಆಗಾಗ ಏನಾದರೂ ಒಂದು ಕಥೆ ಹೇಳುತ್ತಲೆ ಇರುತ್ತಾನೆ.

ನಾನಂತೂ ಅವನ ಮಾತು ಕೇಳಿ ” ಹೋಗೊ ಸುಮ್ಮನೆ ಬೊಗಳೆ ಬಿಡಬೇಡಾ. ನೀನು ಕಣ್ಣಾರೆ ನೋಡಿದೀಯಾ? ಹಾಗಾದರೆ ಹೇಳು ಭೂತ ಅಂದರೆ ಹೇಗಿರುತ್ತದೆ.”

“ಒಂದು ಕೆಲಸ ಮಾಡು. ಯಾವಾಗಾದರೂ ನಾನು ತಡ ರಾತ್ರಿ ಊರಿಂದ ಹೊರಗೆ ಹೋಗುವ ದಿನಗಳಲ್ಲಿ ನನ್ನೊಂದಿಗೆ ಬಾ. ಅಕಸ್ಮಾತ್ ಭೂತ ಕಾಡಿದರೆ ನೀನೆ ಸ್ವತಃ ನೋಡುವಿಯಂತೆ. ನಿನಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲ ಅಲ್ವಾ?”

“ಆಯಿತು ಮಾರಾಯಾ. ನೋಡೆ ಬಿಡುವಾ” ಅಂದಿದ್ದೆ. ಆದರೆ ಇದುವರೆಗೂ ಒಂದು ದಿನವೂ ನನ್ನ ಕರೆದಿಲ್ಲ. ಇದರಲ್ಲೆ ಗೊತ್ತಾಗುತ್ತದೆ ಅವನು ಹೇಳುವುದು ಎಷ್ಟು ಸತ್ಯ ಅನ್ನೋದು. ದೆವ್ವ ಅಂತೆ ದೆವ್ವ. ಮನಸ್ಸಿನಲ್ಲೆ ನಕ್ಕು. ಕಾಲು ಮುಖ ತೊಳೆದು ಅಮ್ಮ ಮಾಡಿದ ಅಡಿಗೆ ಪೊಗದಸ್ತಾಗಿ ಉಂಡು ರಾತ್ರಿ ಮಲಗಿದವನಿಗೆ ಪೇಪರ್ ವಿಷಯ ಮಾತ್ರ ಮರೆಯೋಕೆ ಆಗ್ತಿಲ್ಲ. ನಿದ್ದೆಯ ಗುಂಗಿನಲ್ಲೂ ಅದೇ ವಿಚಾರ.

“ಮಗಾ ಎದ್ದೇಳು. ಯಾಕೆ ಇಷ್ಟೊತ್ತಾದರೂ ಇನ್ನೂ ಮಲಗೇ ಇದ್ದೀಯಾ. ತೋಟಕ್ಕೆ ಹೋಗೋದಿಲ್ವಾ. ಗಂಟೆ ಎಂಟಾಯಿತು” ಅಮ್ಮನ ಧ್ವನಿ ಗಡಬಡಿಸಿ ಏಳುವಂತಾಯಿತು. ನಿತ್ಯ ಕರ್ಮ ಮುಗಿಸಿ ತೋಟದ ಕಡೆ ಹೊರಟಾಗ ಮತ್ತೆ ರಂಗನ ಫೋನು. “ಹಲೋ, ಹೇಳು ರಂಗಾ. ಏನು ಸಮಾಚಾರ?”

“ಅದೆ ಕಣೊ ಈ ಶುಕ್ರವಾರ ಸಾಯಂಕಾಲ ಐದು ಗಂಟೆಗೆ ಹೊರಡೋದು ಅಂತ ತೀರ್ಮಾನಿಸಿದ್ದೇವೆ. ರಾತ್ರಿ ಹನ್ನೊಂದು ಗಂಟೆ ಆಗಬಹುದು ತಲುಪುವುದು. ಬೆಳಗ್ಗೆ ಬೇಗ ಎದ್ದು ಸುತ್ತ ಮುತ್ತಲ ಕೆಲವು ಸ್ಥಳಕ್ಕೆ ಭೇಟಿಯಿತ್ತು ಮಾರನೆ ದಿನ ಭಾನುವಾರ ಮದುವೆ ಮುಗಿಸಿ ಹೊರಡೋಣ ವಾಪಸ್ಸು ಅಂತ ಮಾತಾಡ್ಕೊಂಡಿದ್ದೀವಿ. ಓಕೆನಾ. ಸರಿ ಬೇಗ ಹೊರಟು ನಮ್ಮ ಮನೆಗೆ ಬಂದು ಬಿಡು. ಮರಿಬೇಡಾ.”

“ಆಯ್ತು ಕಣೊ, ಬಾಯ್.”

ಇನ್ನೇನು ಎರಡೇ ದಿನ ಇದೆ. ಈ ಸಾರಿ ಕಾರವಾರಕ್ಕೆ ಹೋದಾಗ ಶಾಮನನ್ನು ಕಾಣಬೇಕು. ಹೇಗಿದ್ದಾನೊ ಏನೊ. ತುಂಬಾ ದಿನಗಳಾಯಿತು, ಫೋನೂ ಮಾಡಿಲ್ಲ ಪುಣ್ಯಾತ್ಮ. ಹಿಂದಿನ ಸಾರಿ ಸಿಕ್ಕಾಗ ಸಖತ್ ರೇಗಿಸಿದ್ದೆ. ಅವನಕ್ಕನ ಮನೆ ಇಲ್ಲೆ ಇರೋದರಿಂದ ಬಂದಾಗೆಲ್ಲ ಭೇಟಿ ಆಗುತ್ತಿದ್ದ. ಏನಂದುಕೊಂಡನೊ ಏನೊ. ಮನಸ್ಸಿನಲ್ಲಿ ಮೌನದ ಮಾತು ಮುಂದುವರಿದಿತ್ತು.

“ರಂಗು ಏ ರಂಗು ಬಾಗಿಲು ತೆಗಿಯೊ. ಆಗಲೆ ಮಧ್ಯಾಹ್ನ ಊಟ ಮಾಡಿ ಮಲಗಿದೀಯಾ? ನೋಡು ನಾನು ರೆಡಿಯಾಗಿ ಬಂದಿದ್ದೀನಿ ಹೊರಡೋಕೆ.”

ರಂಗ ಕಣ್ಣುಜ್ಜುತ್ತಾ ಆಕಳಿಸಿ ಬಾಗಿಲು ತೆಗೆದಾಗ ಗೆಳೆಯನ ಕಂಡು ಖುಷಿ. “ಲೇ.. ಬಾರೊ. ಕೂತುಕೊ. ಹಂಗೆ ಊಟ ಮಾಡಿ ವರೀಕ್ಕಂಡೆ ಆಗಲೆ ನಿದ್ದೆ ನೋಡು. ಇರು ಬಂದೆ ಮುಖ ತೊಳೆದು ಬರುತ್ತೇನೆ. ಅಮ್ಮ ಮಹೇಶ ಬಂದಿದ್ದಾನೆ. ಟೀ ಮಾಡ್ತೀಯಾ? ”

ಅವನಮ್ಮನಿಗೊ ಸದಾ ಆಗಾಗ ಬರುವ ಮಹೇಶನ ಕಂಡರೆ ಎಲ್ಲಿಲ್ಲದ ಅಕ್ಕರೆ. ಒಂದೇ ವಾರಿಗೆಯ ಹುಡುಗರು. ಒಳ್ಳೆಯ ನಡೆ ನುಡಿ. ಶ್ರಮ ಜೀವಿ. ಮುಂಡೆದವು ಅದ್ಯಾವಾಗ ಮದುವೆ ಮಾಡ್ಕೊತಾವೊ ಏನೊ. ಸಿಕ್ಕಾಗೆಲ್ಲ ಇಬ್ಬರನ್ನೂ ಕೂಡಿಸಿ ಬುದ್ಧಿ ಹೇಳುವರು. ಇವರಿಬ್ಬರೂ “ಅಯ್ಯೋ! ಬಿಡಮ್ಮ. ಆದ್ರೆ ಆಯಿತು. ನಮಗಿಬ್ಬರಿಗೂ ಒಂದೇ ಮನೆ ಹುಡುಗಿ ತರ್ತೀಯಾ ಹೇಳು. ಈಗಲೇ ಮಾಡ್ಕೋತೀವಿ” ಎಂದು ಬಾಯಿ ಮುಚ್ಚಿಸಿ ಬಿಡುತ್ತಿದ್ದರು. ಅದೇನೊ ಗಾದೆ ಹೇಳ್ತಾರಲ್ಲ ; ಹಾವು ಸಾಯೋಲ್ಲ, ಕೋಲು ಮುರಿಯಲ್ಲ!

ಇಬ್ಬರೂ ರೆಡಿಯಾಗಿ ಹೊರಟಾಗ ಮೊದಲೆ ನಿರ್ಧರಿಸಿಕೊಂಡ ವೆಹಿಕಲ್ ಬರೋದು ಸರಿಯಾಯಿತು. ಹೋಗುವ ಹಾದಿಯ ಗುಂಟ ಹರಡಿಕೊಂಡಿರು ಹಚ್ಚ ಹಸುರಿನ ಕಾನನ ದೇವಿ ಮನೆ ಘಾಟಿಗೆ ಎಂಟ್ರೀ ಆಗುತ್ತಿದ್ದಂತೆ ಹಾವಿನಂತೆ ಬಳುಕುತ್ತ ಸಾಗುವ ಕಾಂಕ್ರೀಟ್ ರಸ್ತೆ. ಕುಳಿತವರೇನಾದರೂ ಗಟ್ಟಿಯಾಗಿ ಕಂಬಿಯನ್ನು ಹಿಡಿದುಕೊಳ್ಳದಿದ್ದರೆ ಕುಳಿತ ಸೀಟಿನಿಂದ ಇನ್ನೊಂದು ಸೀಟಿಗೆ ತನ್ನಷ್ಟಕ್ಕೇ ಸ್ಥಾನ ಪಲ್ಲಟ ಆಗೋದು ಗ್ಯಾರಂಟಿ. ಹಾಗಿದೆ ಆ ದುರ್ಗಮ ಹಾದಿ. “ಯು ಪಿನ್ ಕರ್ವಗಳು” ಹಲವಾರು ಇವೆ. ಬಗ್ಗಿ ನೋಡಿದರೆ ಒಂದು ಕಡೆ ಪಾತಾಳ ಇನ್ನೊಂದು ಕಡೆ ತಲೆ ಎತ್ತಿದರೆ ಎತ್ತರವಾದ ಗುಡ್ಡಗಳು. ಗುಡ್ಡದ ಧರೆಯಿಂದ ಅಲ್ಲಲ್ಲಿ ಜಿನುಗುವ ನೀರಿನ ತೊರೆಗಳು. ಎಷ್ಟಗಲ ಕಣ್ಣು ಹಿಗ್ಗಿಸಿದರೂ ತುಂಬಿಕೊಳ್ಳಲಾಗದಷ್ಟು ವನ ಸಿರಿ, ಪ್ರಕೃತಿ ಮಾತೆ ಸದಾ ಕಳೆ ಕಳೆಯಾಗಿ ಮಿನುಗುತ್ತಿದ್ದಾಳೆ.

ಸಂಜೆ ರಂಗೇರುತ್ತಿದೆ. ರವಿ ಬಾನಿಂದ ಕದಲುವ ಸಮಯ. ದೂರದಲ್ಲಿ ಬೆಂಕಿಯ ಚಂಡಿನಂತಾದ ರವಿಯ ಒಮ್ಮೆ ಹೋಗಿ ಬಗ್ಗಿ ಹಿಡಿದು ಬಿಡಲೆ? ಪ್ರತಿ ಬಾರಿ ಈ ಹಾದಿಯಲ್ಲಿ ಬಂದಾಗ ಮಹೇಶನಿಗೆ ಹೊಸ ಲೋಕಕ್ಕೆ ಬಂದಷ್ಟು ಖುಷಿ ಪಡುತ್ತಾನೆ. ಹಾಗೆ ಉಳಿದ ಗೆಳೆಯರೂ ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಳ್ಳುತ್ತ ಹರಟೆಯಲ್ಲಿ ಮಗ್ನವಾಗಿದ್ದರಿಂದ ತಲುಪುವ ಸ್ಥಳ ಬಂದಿದ್ದು ಗೊತ್ತಾಗಲೇ ಇಲ್ಲ. ಇವರಿಗಾಗಿ ಕಾದಿರಿಸಿದ ವಾಸ ಸ್ಥಳದಲ್ಲಿ ವಿಶ್ರಮಿಸಿ ಮಾರನೇ ದಿನ ಬೇಗ ಎದ್ದು ಊರೆಲ್ಲ ಸುತ್ತಿ ಮದುವೆ ಮನೆ ತಲುಪಿದಾಗ ಆರತಕ್ಷತೆಯಲ್ಲಿ ವಧು ವರರು ಮಿಂಚುತ್ತಿದ್ದರು.

ಗೆಳೆಯರೆಲ್ಲರ ಭೇಟಿ ಎಲ್ಲರಲ್ಲಿ ಹೊಸ ಹುರುಪು ತಂದಿತ್ತು. ಗೆಳೆಯ ಶಾಮನೂ ಬಂದಿದ್ದು ಮಹೇಶನಿಗೆ ಎಷ್ಟು ಮಾತಾಡಿದರೂ ಮುಗಿಯದಷ್ಟು ವಿಷಯಗಳ ಸರಪಣಿ ಬಿಚ್ಚಿ ಕೊಳ್ಳುತ್ತಿತ್ತು. ಗೆಳೆತನ ಎಂದರೆ ಹಾಗೆ ಅಲ್ಲವೆ. ಮಾತಿನ ಭರದಲ್ಲಿ ಎಲ್ಲವನ್ನೂ ಮರೆಯುವಷ್ಟು ಸಂತೋಷದ ಸೆಲೆ ಸಿಗುವುದು ಅಲ್ಲೆ!

ಮಾರನೆ ದಿನ ಮದುವೆ ಕಾರ್ಯಕ್ರಮ ಮುಗಿಸಿ ಹೊರಟಾಗ ನಿಗದಿಪಡಿಸಿಕೊಂಡು ತಂದ ವಾಹನ ಕೆಟ್ಟು ನಿಂತಿತ್ತು. ಆಗಲೆ ಗಂಟೆ ಮಧ್ಯಾಹ್ನ ಮೂರು ಗಂಟೆ ಆಗಿದೆ. ಬ್ರೇಕ್ ಫೇಲಾಗಿದೆ ಎಂದು ಡ್ರೈವರ್ ಹೇಳಿದಾಗ ಮಹೇಶನಿಗೆ ದಿಕ್ಕೇ ತೋಚದಂತಾಯಿತು. ಉಳಿದವರು ಸರಿ ನಾವು ಬಸ್ಸಿನಲ್ಲಿ ಪ್ರಯಾಣ ಮಾಡೋಣ ನಡಿರಿ ಅಂದಾಗ ಶಾಮ್ ತಡೆದ.

” ಮಹೇಶಾ ನಾವಿಬ್ಬರೂ ಈಗ ಕುಮಟಾಕ್ಕೆ ನಮ್ಮ ಮನೆಗೆ ಹೋಗೋಣ. ಅಲ್ಲಿ ನಾನು ತೆಗೆದುಕೊಂಡ ಹೊಸಾ ಆಟೋ ಅಕ್ಕನ ಮನೆಗೆ ತೆಗೆದುಕೊಂಡು ಹೋಗಬೇಕು. ನನ್ನ ತಮ್ಮ ನೀನು ನಾನು ಮೂವರೂ ಒಟ್ಟಿಗೆ ನನ್ನ ಹೊಸಾ ಆಟೋದಲ್ಲಿ ಹೋಗೋಣ. ಇವರೆಲ್ಲ ಬಸ್ಸಿಗೆ ಬರಲಿ”

“ಸರಿ. ಆಗಲಿ ಹಾಗೆ ಮಾಡೋಣ. ನನಗೂ ನಿನ್ನ ಜೊತೆ ಇನ್ನಷ್ಟು ಹರಟಲು ಅವಕಾಶ ಆದಂತಾಯಿತು. ಆದರೆ ನಿಮ್ಮ ಮನೆಗೆ ಹೋದ ಹಾಗೆ ಹೊರಟು ಬಿಡೋಣ ಊರಿಗೆ. ನೋಡು ನನಗೆ ಅರ್ಜೆಂಟ್ ಊರಿಗೆ ಹೋಗಲೇ ಬೇಕು. ನಾಳೆ ಅಗತ್ಯ ಕೆಲಸ ಇದೆ.”

ಕುಮಟಾ ತಲುಪಿ ಅವರ ಮನೆ ಆಥಿತ್ಯ ಸ್ವೀಕರಿಸಿ ಊರ ಕಡೆ ಹೊರಟಾಗ ರಾತ್ರಿ ಒಂಬತ್ತು ಗಂಟೆ ದಾಟಿತ್ತು. ಶಾಮನಿಗೊ ರಾತ್ರಿ ಪ್ರಯಾಣ ಬಲೂ ಖುಷಿ. ಏಕೆಂದರೆ ರಸ್ತೆಯಲ್ಲಿ ನಿರಾಳವಾಗಿ ಆಟೋ ಓಡಿಸಬಹುದು. ಇವತ್ತಂತೂ ಗೆಳೆಯ ಇದ್ದಾನೆ. ಬಹುಶಃ ದಾರಿ ಸವೆದಿದ್ದೆ ಗೊತ್ತಾಗುವುದಿಲ್ಲ. “ಬಾರೊ, ನೋಡು ನನ್ನ ಆಟೋ ಹೇಗೆ ಓಡುತ್ತೆ ಅಂತ. ನಿನ್ನ ಊರಿಗೆ ತಲುಪಿಸುವ ಜವಾಬ್ದಾರಿ ನನ್ನದು. ಅಮ್ಮನಿಗೆ ಫೋನಚ್ಚು ಹೊರಟಿದ್ದೀನಿ ಅಂತ.”

ರಾತ್ರಿಯ ಬೀದಿ ದೀಪದ ನೆರಳು ಬೆಳಕಿನ ಹಾದಿಯಲ್ಲಿ ಹೊರಟಿದ್ದಾರೆ. ಶಾಮನಿಗೆ ಮಹೇಶನಿರುವನೆಂಬ ಧೈರ್ಯ. ಮಹೇಶನಿಗೆ ಪೇಪರ್ನಲ್ಲಿ ಓದಿದ ಲೇಖನಿಯ ಸತ್ಯಾ ಸತ್ಯತೆ ತಿಳಿಯುವ ಕುತೂಹಲ. ಆದರೆ ದೆವ್ವ ಭೂತದ ಬಗ್ಗೆ ಶಾಮನ ಹತ್ತಿರ ಚಕಾರ ಎತ್ತುತ್ತಿಲ್ಲ. ಕಾರಣ ಅವನು ಹೆದರುತ್ತಾನೆ ಎಂಬುದು ಅವನಿಗೆ ಗೊತ್ತು. ಹೊಸ ಆಟೋ ಊರಿಗೆ ಒಯ್ಯಲೇ ಬೇಕಾದ ಅನಿವಾರ್ಯತೆ ಶಾಮನಿಗೆ. ಅಷ್ಟೆ ಅಗತ್ಯ ಊರಿಗೆ ತಲುಪಲು ಮಹೇಶನಿಗೆ. ಇಬ್ಬರ ಅಗತ್ಯ ದಾರಿ ತನ್ನ ಕದಂಬ ಬಾಹು ಬಿಚ್ಚಿ ಎಳೆದುಕೊಂಡು ಹೋಗುತ್ತಿತ್ತು. ಜೊತೆಗಿದ್ದ ಶಾಮನ ತಮ್ಮ ಆಗಲೆ ನಿದ್ದೆಗೆ ಜಾರಿದ್ದ. ಗಂಟೆ ಹನ್ನೊಂದಾಗಿದೆ ದೇವಿ ಮನೆ ಘಾಟ್ ತಲುಪಿದಾಗ. ಹೋಗುತ್ತ ಹೋಗುತ್ತ ಜೀರುಂಡೆಯ ಸದ್ದು ಕಿವಿಗಪ್ಪಳಿಸುತ್ತಿದೆ. ದೂರದಲ್ಲಿ ಗೂಳಿಡುವ ನರಿಗಳ ಧ್ವನಿ. ಕಗ್ಗತ್ತಲ ರಾತ್ರಿಯಲ್ಲಿ ಭಯ ಹುಟ್ಟಿಸುವ ವಾತಾವರಣ. ಅಲ್ಲೊಂದು ಇಲ್ಲೊಂದು ವಾಹನ ಸಾಗುತ್ತಿದೆ. ನಿಧಾನವಾಗಿ ಸಾಗಬೇಕಾದ ಹಾದಿ. ಆದರೆ ಯಾವ ವಾಹನವನ್ನೂ ನಿಲ್ಲಿಸುವುದಿಲ್ಲ ಈ ಹಾದಿಯಲ್ಲಿ. ಇದು ಶಾಮನಿಗೆ ಚೆನ್ನಾಗಿ ಗೊತ್ತು.

ನಿರಾಳವಾಗಿ ಆಟೋ ಚಲಾಯಿಸುತ್ತಿರುವ ಶಾಮನಿಗೆ ಎದುರಿಗೆ ಆಕಾಶದಿಂದ ಭೂಮಿಯವರೆಗೆ ಕಪ್ಪು ಆಕೃತಿ ಎದುರಾದಂತಾಯಿತು. ಇದ್ದಕ್ಕಿದ್ದಂತೆ ಆಟೋ ಮುಂದಕ್ಕೆ ಸಾಗದೆ ನಿಂತು ಬಿಟ್ಟಿದೆ. ಮುಂದಿನ ದಾರಿಯೂ ಕಾಣುತ್ತಿಲ್ಲ. ಇಬ್ಬರೂ ಕೂತಲ್ಲೆ ಬೆವರಿ ಹೋದರು. ನೋಡ ನೋಡುತ್ತಿದ್ದಂತೆ ಆಟೋ ಪೂರ್ತಿ ಉಲ್ಟಾ ಆಗಿ ಮೂರೂ ಚಕ್ರ ಮೇಲೆ ಇವರು ಮೂವರೂ ರಸ್ತೆಯ ಪಕ್ಕಕ್ಕೆ ಉರುಳಿದರು. ಸುಧಾರಿಸಿಕೊಂಡು ಎದ್ದು ಸುತ್ತ ಕಣ್ಣಾಯಿಸಿದರೆ ಏನೂ ಇಲ್ಲ. ಆಟೋ ಮಾತ್ರ ಕೂದಲೆಳೆಯಷ್ಟೂ ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಸರಿಯಾಗಿ ಹನ್ನೆರಡು ಗಂಟೆಯ ಸಮಯ. ಆ ಕಾಡಿನಲ್ಲಿ ಏನು ಮಾಡಲೂ ತೋಚದೆ ಗಡ ಗಡ ನಡುಗುತ್ತಿದ್ದಾರೆ ಮೂವರು. ಎದೆ ಬಡಿತ ಅವರಿಗೇ ಕೇಳುವಷ್ಟು ಜೋರಾಗಿ ಹೊಡೆದುಕೊಳ್ಳುತ್ತಿದೆ. ಕಾಡು ಪ್ರಾಣಿಗಳು ತಿರುಗಾಡುವ ಹೊತ್ತು. ಎತ್ತ ನೋಡಿದರೂ ಕತ್ತಲು. ಒಬ್ಬರ ಮುಖ ಒಬ್ಬರಿಗೆ ಕಾಣುತ್ತಿಲ್ಲ. ಅಮಾವಾಸ್ಯೆ ಹತ್ತಿರ ಬರುತ್ತಿರುವುದು ಆಗ ಗಮನಕ್ಕೆ ಬಂತು ಶಾಮನಿಗೆ. ಮೊಬೈಲ್ ನೆಟ್ವರ್ಕ ಇಲ್ಲ. ಶಾಮನಿಗೆ ಇದು ಹೊಸತಲ್ಲ. ಆದರೂ ಅವನಿಗೆ ಹೀಗಾಗಲು ಕಾರಣ ಗೊತ್ತು.

ಮಹೇಶನಿಗೆ ಇದುವರೆಗೂ ಇದ್ದ ಧೈರ್ಯ ಮಂಗಮಾಯವಾಗಿತ್ತು. ಬಾಯಲ್ಲಿ ಮಾತು ಹೊರಡದೆ ಮೂಕನಂತಾಗಿದ್ದಾನೆ. ಕಾಲೆಲ್ಲ ತರ ತರ ನಡುಗುತ್ತಿದೆ. ಶಾಮನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ತುಟಿ ಅದುರುತ್ತಿದೆ. ಭಯಗೊಂಡಿದ್ದನ್ನು ಅರಿತ ಶಾಮ ಮೆಲ್ಲನೆ “ನೋಡು ಮಹೇಶಾ ನಾ ಹೇಳಿರಲಿಲ್ವಾ ಈ ದಾರಿಯಲ್ಲಿ ದೆವ್ವ ಭೂತಗಳು ಕಾಡುತ್ತವೆ ಅಂತ. ನೀನು ಮಾತ್ರ ನಂಬುತ್ತಿರಲಿಲ್ಲ. ನಿನಗದರ ಅನುಭವ ಆಗಲಿ ಅಂತನೆ ಕರೆದುಕೊಂಡು ಬಂದೆ ಕಣೊ. ಈಗೇನು ಹೇಳ್ತೀಯಾ? ಎಲ್ಲೋಯಿತು ನಿನ್ನ ಧೈರ್ಯ? ಬರುವಾಗ ನೀನು ದೇವಿಮನೆ ಘಾಟಿನಲ್ಲಿ ಇರೊ ದೇವಿಗೆ ನಮಸ್ಕಾರ ಮಾಡಿಲ್ಲ ತಾನೆ? ನನಗೆ ಗೊತ್ತು. ಆದರೆ ನೀ ಹಾಗೆ ಮಾಡಬಾರದಿತ್ತು. ಈ ದಾರಿಯಲ್ಲಿ ಬರುವಾಗ ಪ್ರತಿಯೊಂದು ವೆಹಿಕಲ್ ನಿಲ್ಲಿಸಿ ಆ ದೇವಿಗೆ ನಮಸ್ಕರಿಸಿ ಆರತಿ ಸ್ವೀಕರಿಸಿಯೆ ಹೊರಡೋದು. ಬಸ್ಸು ಬಂದರೆ ದೇವಸ್ಥಾನದ ವತಿಯಿಂದ ಆರತಿ ಹಿಡಿದೆ ಬಸ್ಸಿನಲ್ಲಿ ಬರುತ್ತಾರೆ. ಎಲ್ಲರೂ ಆರತಿ ಸ್ವೀಕರಿಸಿ ಕಾಣಿಕೆ ಹಾಕಿ ಬಂಡಾರ ಹಚ್ಚಿಕೊಂಡ ಮೇಲೆಯೆ ಬಸ್ಸು ಮುಂದೆ ಹೋಗೋದು. ಇದು ಇಲ್ಲಿಯ ಪದ್ಧತಿ, ದೇವಿಯ ಮಹಿಮೆ. ಇನ್ನಾದರೂ ಆದೇವಿಗೆ ನಮಸ್ಕರಿಸಿ ತಪ್ಪಾಯಿತು ಅಂತ ಕೇಳಿಕೊಳ್ಳೊ. ಬಂದ ವಿಘ್ನ ಪರಿಹಾರ ಆಗಲಿ. ಆ ತಾಯಿ ನಂಬಿದವರ ಕೈ ಬಿಡೋದಿಲ್ಲ.” ಎಂದನ್ನುತ್ತ ಕೈ ಮುಗಿದು ನಿಂತ ಶಾಮ.‌

ಶಾಮನ ಮಾತು ಮಹೇಶನಿಗೆ ಹೌದೆಂತನಿಸಿ ಮನದಲ್ಲೇ ಆ ತಾಯಿಯನ್ನು ಸ್ಮರಿಸಿ ದಾರಿ ಎಂಬುದನ್ನೂ ಪರಿಗಣಿಸದೆ ಅಲ್ಲೆ ಉದ್ದಂಡ ನಮಸ್ಕಾರ ಕೂಡಾ ಮಾಡಿದ. ಅರೆಗಳಿಗೆಯಲ್ಲೆ ದೂರದಲ್ಲಿ ಬಸ್ಸು ಬರುತ್ತಿರುವ ಶಬ್ದ. ಪ್ರಕಖರವಾದ ಬೆಳಕು ಇವರು ನಿಂತ ಕಡೆ ಬರುತ್ತಿದೆ. ಹತ್ತಿರ ಹತ್ತಿರ ಬಸ್ಸು ಬರುತ್ತಿದ್ದಂತೆ ಹೆದರಿದ ಹರಿಣಿಯಂತಾದ ಜೀವಗಳು ಧೈರ್ಯದಿಂದ ಆಟೊ ಸರಿ ಮಾಡಲು ಮುಂದಾದರು.

ಆಟೋ ಅಲುಗಾಡಿಸಿದರೆ ಅಲುಗಾಡುತ್ತಿದೆ. ಮೂವರೂ ಸೇರಿ ಅಟೋ ಮೊದಲಿನಂತೆ ನಿಲ್ಲಿಸಿ ಬೇಗ ಬೇಗ ಆಟೋ ಹತ್ತಿ ಹೊರಟರು. ಇವರನ್ನು ದೂರದಿಂದಲೆ ಗಮನಿಸಿದ ಬಸ್ಸಿನಲ್ಲಿ ಬಂದ ಗೆಳೆಯರು ಬಸ್ಸನ್ನು ನಿಲ್ಲಿಸಲಾಗದೆ ಮುನ್ನಡೆಯಬೇಕಾಯಿತು. ಏನೊ ಅನಾಹುತವಾಗಿದೆ. ಇಲ್ಲದಿದ್ದರೆ ಆಟೋ ಯಾಕೆ ಉಲ್ಟಾ ಆಗಿದೆ? ಊರಿಗಿನ್ನೇನು ಒಂದು ಮುಕ್ಕಾಲು ಗಂಟೆ ಹಾದಿ. ಗೆಳೆಯರ ಬಗ್ಗೆ ಚಡಪಡಿಸುತ್ತ ಸಾಗಿದ ಅವರು ಊರು ತಲುಪುತ್ತಿದ್ದಂತೆ ಪರಿಚಯದವರ ಕಾರಿನಲ್ಲಿ ಇವರಿರುವ ಕಡೆ ಬರಲು ಮುಂದಾದರು. ಒಂದರ್ಧ ಗಂಟೆ ಹೋಗುವಷ್ಟರಲ್ಲಿ ಗೆಳೆಯನ ಆಟೋ ಬರುತ್ತಿರುವುದನ್ನು ಗಮನಿಸಿ ನಿಲ್ಲಿಸಿ ನಡೆದ ಸಮಾಚಾರ ತಿಳಿದು ಎಲ್ಲರ ಝಂಗಾಲವೆ ಉರುಳಿ ಹೋದಂತಾಯಿತು. ಸುಮ್ಮನೆ ನಮ್ಮ ಜೊತೆ ಬಸ್ಸಲ್ಲಿ ಬಂದಿದ್ದರೆ ಈ ರಾಮಾಯಣ ಆಗುತ್ತಿರಲಿಲ್ಲ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನು ಗತಿ? ಅವರವರಲ್ಲೆ ಮಾತಾಡಿಕೊಂಡು ವಾಪಸ್ಸಾದಾಗ ಮಹೇಶನಿಗೆ ಮಾತ್ರ ಕಣ್ಣಿಗೆ ಕಟ್ಟಿದಂತಿದ್ದ ಆ ಭಯಾನಕ ದೃಶ್ಯ, ಆ ಪೇಪರ್ ಲೇಖನ ಅವನ ಮನಸ್ಸಿನಲ್ಲಿ ದೆವ್ವ ಭೂತಗಳ ಬಗ್ಗೆ ನಂಬಿಕೆ ಬರುವಂತಾಯಿತು. ಶಕ್ತಿಯನ್ನು ಪರೀಕ್ಷಿಸುವ ಧೈರ್ಯ ಉಡುಗಿ ಹೋಯಿತು.

(ನಡೆದ ಘಟನೆಯ ಸುತ್ತ ಹೆಣೆದ ಕಥೆ)

25-11-2017. 10.45pm

ಸ್ವಾಭಿಮಾನಿ (ಕಥೆ)

ಅಂದು ಶನಿವಾರ. ರೇಖಾ ತನ್ನ ಮಂದಲೆಯ ಬೈತಲೆಯನ್ನು ತೀಡಿಕೊಂಡು ಒಂದಷ್ಟು ಹೊಲಿಯುವ ಬಟ್ಟೆಗಳನ್ನು ಚೀಲದಲ್ಲಿ ತುಂಬಿಕೊಂಡು ಲಗುಬಗೆಯಿಂದ ತನ್ನ ಗೆಳತಿಯ ಮನೆಗೆ ಹೊರಟಳು. ಹೋಗುವಾಗ ಇವತ್ತು ಈ ಬಟ್ಟೆಗಳನ್ನೆಲ್ಲ ಹೊಲಿದು ಬಿಡಬೇಕೆನ್ನುವ ಹುನ್ನಾರ. ಹೊಲಿಯಲು ತೆಗೆದುಕೊಂಡು ಎಷ್ಟು ದಿನಗಳಾಯಿತು. ಇವುಗಳನ್ನು ಹೊಲಿದು ಕೊಟ್ಟರೆ ಒಂದಷ್ಟು ಕಾಸು ಸಿಗುವುದು. ಹರಿದ ಚಪ್ಪಲಿ ಹೊಲಿಸಿ ಹೊಲಿಸಿ ಸಾಕಾಗಿದೆ. ಒಂದೊಳ್ಳೆ ಚಪ್ಪಲಿ ತೆಗೆದುಕೊಳ್ಳಬೇಕು. ಹಾಗೆ ಸ್ವಲ್ಪ ದುಡ್ಡು ಕೂಡಾಕಿ ನನ್ನದೆ ಆದ ಒಂದು ಸ್ವಂತ ಹೊಲಿಗೆ ಮಿಷನ್ನು ಕೊಂಡುಕೊಳ್ಳಬೇಕು.

ಮೊನ್ನೆ ರಮೇಶಣ್ಣ ಸಿಕ್ಕಿದಾಗ ಹೇಳಿದ್ದ. “ನೋಡಿ ರೇಖಾ, ನನ್ನ ತಂಗಿ ಬ್ಯಾಂಕ್ ಲೋನ್ ಮಾಡಿ ಹೊಲಿಗೆ ಮಿಷನ್ ತೆಗೆದುಕೊಂಡಿದ್ದಾಳೆ. ಒಳ್ಳೆ ಮೆರಿಟ್ ಮಿಷನ್. ಲೋನಿನ್ನೂ ಮುನ್ನೂರು ರೂಪಾಯಿ ಬಾಕಿ ಇದೆ. ಅವಳು ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಾಳೆ. ಮಿಷನ್ ಯಾರೂ ಹೊಲಿಯದೆ ಹಾಗೆ ಬಿದ್ದಿದೆ. ನೀವು ಬೇಕಾದರೆ ಲೋನ್ ತೀರಿಸಿ ಮಷಿನ್ ತೆಗೆದುಕೊಂಡು ಹೋಗಿ.”

“ಆಯಿತು ರಮೇಶಣ್ಣಾ. ನಾನೇ ತೆಗೆದುಕೊಳ್ಳುತ್ತೇನೆ. ಯಾರಿಗೂ ಕೊಡಬೇಡಿ” ಎಂದು ಹೇಳಿದ್ದೆ. ಈಗಾಗಲೇ ನೂರೈವತ್ತು ರೂಪಾಯಿ ಇದೆ. ಇನ್ನೂ ನೂರೈವತ್ತು ರೂಪಾಯಿ ಆದಷ್ಟು ಬೇಗ ಕೂಡಾಕಿ ಹೇಗಾದರೂ ಮಾಡಿ ಆ ಮಿಷನ್ ತೆಗೆದುಕೊಳ್ಳಬೇಕು. ಕಡಿಮೆ ದರದಲ್ಲಿ ಎಷ್ಟೊಳ್ಳೆ ಮಿಷನ್ ಸಿಗುತ್ತಿದೆ. ಅವನೇನು ನಮ್ಮ ನೆಂಟ ಅಲ್ಲ ಒಡ ಹುಟ್ಟಿದವನೂ ಅಲ್ಲ. ಹೀಗೆ ಪರಿಚಯವಾಗಿ ನಮ್ಮಿಬ್ಬರಲ್ಲಿ ಅಣ್ಣ ತಂಗಿ ಆತ್ಮೀಯತೆ ಬೆಳೆದಿದೆ. ಆಯಿ ಅಪ್ಪಯ್ಯನ ಹತ್ತಿರವೂ ಹೇಳಿದ್ದೇನೆ. ಆಗಲಿ ತಗೊ ಮಿಷನ್ನು. ಮನೆಯಲ್ಲಿ ಇದ್ದರೆ ಇನ್ನಷ್ಟು ಬಟ್ಟೆ ನೀನು ಹೊಲಿಯಬಹುದು. ಉಳಿದವರೂ ಕಲಿಯಬಹುದು. ಅಪ್ಪನ ಲೆಕ್ಕಾಚಾರವೂ ಸರಿ. ಆದರೆ ದುಡ್ಡು ಹೊಂದಿಸುವುದೇ ಕಷ್ಟ. ಹೊಲಿದುಕೊಟ್ಟ ಬಟ್ಟೆಗೆ ದುಡ್ಡು ಬರುವುದೂ ಅಷ್ಟಕ್ಕಷ್ಟೆ. ನಾಲ್ಕು ಜನ ಮಕ್ಕಳ ಸಂಸಾರ ತೂಗಿಸಿಕೊಂಡು ಹೋಗುವುದೆ ಹೆತ್ತವರಿಗೆ ಕಷ್ಟವಾಗಿರುವಾಗ ಅವರ ಹತ್ತಿರ ಕೇಳಲೂ ಆಗುವುದಿಲ್ಲ.

ತಲೆ ತುಂಬ ಯೋಚನೆ ತುಂಬಿಕೊಂಡು ರಿಪೇರಿ ಚಪ್ಪಲಿ ಮೆಟ್ಟಿ “ಆಯಿ ಹೋಗ್ಬರ್ತ್ನೆ” ಎಂದು ಹೊರಟಾಗ ಆಗಿನ್ನೂ ಬೆಳಗಿನ ಒಂಬತ್ತು ಗಂಟೆ. ಹೇಳಿ ಕೇಳಿ ಅದೊಂದು ಚಿಕ್ಕ ಹಳ್ಳಿ. ಹೋಗುವ ದಾರಿ ಮಣ್ಣಿನ ರಸ್ತೆ ಒಂದಷ್ಟು ದೂರ ನಂತರ ಸಣ್ಣ ಹಳ್ಳದಲ್ಲಿ ಹತ್ತು ನಿಮಿಷ ಸಾಗಬೇಕು ಆನಂತರ ಕಾಲು ಹಾದಿ ಹುಲ್ಲು ಬೆಳೆಯುವ ಬೇಣದಲ್ಲಿ. ಅಂತೂ ಮನೆಯಿಂದ ಸುಮಾರು ಒಂದೂವರೆ ಮೈಲಿ ನಡೆದು ಹೋದರೆ ಸಿಗುವುದು ಅವಳ ಗೆಳತಿಯ ಮನೆ. ಹೊಲಿಯಲು ಬಟ್ಟೆ ಬಂದಾಗೆಲ್ಲ ಅವಳ ಮನೆಗೆ ಹೋಗಿ ಹೊಲಿದುಕೊಂಡು ಬರುವುದು ಈಗೊಂದು ವರ್ಷದ ಹಿಂದೆ ಹೊಲಿಗೆ ಕಲಿತ ರೇಖಾಳಿಗೆ ಒಂದು ಸಣ್ಣ ಸ್ವಯಂ ಸಂಪಾದನೆಗೆ ದಾರಿಯಾಗಿತ್ತು. ಗೆಳತಿಯ ಸಹಾಯ ಯಾವತ್ತೂ ಮರೆಯುವಂತಿಲ್ಲ. ಒಟ್ಟಿಗೆ ಓದಿದವರು. ಇವಳ ಕಷ್ಟ ಗೊತ್ತು. ಹಾಗಾಗಿ ಆ ಮನೆಯ ಜನರಿಗೆಲ್ಲರಿಗೂ ಇವಳನ್ನು ಕಂಡರೆ ಅನುಕಂಪ. ಒಮ್ಮೆ ಅವಳ ಗೆಳತಿಯೆ ಈ ದಾರಿ ಪ್ರಸ್ತಾಪ ಮಾಡಿದ್ದು. “ಯಾಕೆ ರೇಖಾ ನೀನು ನಮ್ಮನೆಗೇ ಬಟ್ಟೆ ತಂದು ಹೊಲಿಯಬಾರದು? ನಮ್ಮಮ್ಮ ಯಾವಾಗಾದರೂ ಒಮ್ಮೆ ಹೊಲಿಯುತ್ತಾರೆ. ನಾನೇ ಅಮ್ಮನ ಹತ್ತಿರ ಹೇಳುತ್ತೇನೆ ಬಾ”ಎಂದು ಕರೆದಿದ್ದಳು. ಆಗಾಗ ಮಧ್ಯಾಹ್ನದ ಊಟ ಕೂಡಾ ಅವರ ಮನೆಯಲ್ಲಿ ಆಗುತ್ತಿತ್ತು. ಹತ್ತಿರದ ಸಂಬಂಧಿಕರೊಬ್ಬರು ಹೊಲಿಗೆ ಕಲಿಸಿದ್ದು ಸದಾ ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸುತ್ತಾಳೆ ಮನದಲ್ಲಿ. ಸ್ವಾಭಿಮಾನಿಯಾದ ಅವಳು ಕಷ್ಟ ಪಡುವುದಕ್ಕೆ ಹಿಂಜರಿಯುವುದಿಲ್ಲ. ಅದವಳ ಹುಟ್ಟು ಗುಣ.

ಹೊಲಿಯುತ್ತ ಕೂತವಳಿಗೆ ಮಧ್ಯಾಹ್ನ ಹನ್ನೆರಡು ಗಂಟೆ ಆಗಿದ್ದು ಗೊತ್ತಾಗಲೇ ಇಲ್ಲ. ಆಯಿ ಬೇಗ ಬಾ ಇವತ್ತು ಅಂತ ಬೇರೆ ಹೇಳಿದ್ದಳು. ಗೆಳತಿ ಊಟ ಮಾಡಿ ಹೋಗೆ ಅಂದರೂ ಕೇಳದೆ ಲಗುಬಗೆಯಿಂದ ಹೊರಟಿದ್ದಳು ಮನೆಯ ಕಡೆ. ಮಧ್ಯಾಹ್ನದ ರಣ ರಣ ಬಿಸಿಲು. ಸೂರ್ಯ ನೆತ್ತಿಯ ಮೇಲೆ ಬಂದು ಸುಡುತ್ತಿದ್ದ. ಬೇಣದ ಕಾಲು ಹಾದಿಯಲ್ಲಿ ಬರುವಾಗ ಸುತ್ತ ಯಾರೂ ಇರಲಿಲ್ಲ. ಸ್ವಲ್ಪ ಭಯ ಮನದಲ್ಲಿ. ಬೇಗ ಬೇಗ ಹೆಜ್ಜೆ ಹಾಕುತ್ತಿದ್ದಾಳೆ. ಇದ್ದಕ್ಕಿದ್ದಂತೆ ಕಾಲು ಹಾದಿಯ ಮಧ್ಯ ಸುರಳಿಯಂತೆ ತರಗೆಲೆಗಳು ಗಾಳಿಯ ರಭಸಕ್ಕೆ ತಿರುಗಲು ಶುರುವಾಯಿತು. ಧೂಳು ಮೇಲೇರಿತು. ಇಡೀ ಶರೀರ ಆ ಸುಂಟರ ಗಾಳಿಯ ಮಧ್ಯ ಚಕ್ರದಲ್ಲಿ ಸಿಲುಕಿಕೊಂಡ ಅನುಭವ. ಸ್ವಲ್ಪ ಸಮಯದಲ್ಲಿ ಏನೂ ಇಲ್ಲ. ಹೆದರಿ ಕಣ್ಣು ಮುಚ್ಚಿ ಮುದುರಿ ನಿಂತವಳು ಲಗುಬಗೆಯಿಂದ ಬೇಣದ ಹಾದಿಯಿಂದ ಹಳ್ಳದ ಹಾದಿಗೆ ಬಂದು ಮುಖಕ್ಕೆ ಒಂದಷ್ಟು ನೀರು ಚಿಮುಕಿಸಿ ಮನೆಯ ಕಡೆ ಹೆಜ್ಜೆ ಹಾಕಿದಳು.

ಎಲ್ಲರೂ ಊಟಕ್ಕೆ ಇವಳು ಬರುವುದನ್ನೇ ಕಾಯುತ್ತಿದ್ದರು. ಗೋಕರ್ಣ ಕ್ಷೇತ್ರದಿಂದ ಅಡಿಕೆ ಸಂಭಾವನೆಗೆಂದು ಹಳ್ಳಿ ಹಳ್ಳಿಗಳಿಗೆ ಭೇಟಿ ಕೊಡುವ ಮನೆಯ ಪುರೋಹಿತರೊಬ್ಬರು ಪ್ರತೀ ವರ್ಷದ ವಾಡಿಕೆಯಂತೆ ಇಂದು ಅವಳ ಮನೆಗೂ ಬಂದಿದ್ದರು. ಆಯಿ ಸಿಹಿ ಅಡಿಗೆ ಮಾಡಿದ್ದರು. ಎಲ್ಲರೊಂದಿಗೆ ಊಟ ಮಾಡಿದವಳು ಯಾಕೊ ಸುಸ್ತಾಗುತ್ತಿದೆಯಲ್ಲ. ಸ್ವಲ್ಪ ಕೈ ಹೊಲಿಗೆ ಕೆಲಸ ಇತ್ತು. ಸ್ವಲ್ಪ ಹೊತ್ತು ಮಲಗಿ ಆಮೇಲೆ ಹೊಲಿದರಾಯಿತೆಂದು ಚಾಪೆಯಲ್ಲಿ ಮಲಗಿದ್ದೊಂದೆ ಗೊತ್ತು. ಸಂಜೆ ಐದು ಗಂಟೆ ಆಗಿರಬಹುದು. ನರಳುತ್ತಿರುವ ಧ್ವನಿ ಕೇಳಿದ ಅವಳಪ್ಪ ಏನಾಯಿತು ಮಗಳೆ ಎಂದು ಮೈ ತಡವಲಾಗಿ ಜ್ವರ ಬಂದಿರುವುದು ತಿಳಿದು ” ಏಯ್ ! ಬಾರೆ ಇಲ್ಲಿ. ನೋಡು ನಿನ್ನ ಮಗಳಿಗೆ ಜ್ವರ ಬಂದಿದೆ. ಎಂತಾ ಮಾಡದು ಈಗಾ?” ಮನೆ ಮಂದಿಗೆಲ್ಲ ಗಾಬರಿ. ಬೆಳಿಗ್ಗೆ ಎಷ್ಟು ಲವಲವಿಕೆಯಿಂದ ಇದ್ದವಳಿಗೆ ಇದ್ದಕ್ಕಿದ್ದಂತೆ ಏನಾಯಿತು?

ಹೊರಗೆ ಜಗುಲಿಯ ಮೇಲೆ ಕುಳಿತ ಪುರೋಹಿತರಿಗೆ ಇವರ ಸಂಭಾಷಣೆ ಕೇಳಿತು. ” ಮಗಳನ್ನು ಕರೆದು ತನ್ನಿ ಇಲ್ಲಿ, ನಾನು ನೋಡುತ್ತೇನೆ.”

ಪುರೋಹಿತರ ಮಾತಿನ ಮೇಲೆ ಎಲ್ಲರಿಗೂ ಅಪಾರ ಗೌರವ. ತಲೆ ತಲಾಂತರದಿಂದ ಬಂದು ಹೋಗಿ ಮಾಡುವ ಆತ್ಮೀಯ ಬಂಧು ಅವರು. ಸರಿ ಅವರ ಮುಂದೆ ಕೂಡಿಸಿದಾಗ ಪಂಚಾಂಗ ತೆರೆದು ಹೆಸರು,ನಕ್ಷತ್ರ, ಗಳಿಗೆ ಎಲ್ಲ ಕೂಡಿ ಕಳೆದು ಮಾಡಿ “ಈ ದಿನ ಅಮಾವಾಸ್ಯೆ. ಮಟ ಮಟ ಮಧ್ಯಾಹ್ನ ಉರಿ ಬಿಸಿಲಲ್ಲಿ ಒಬ್ಬಳೇ ಬಂದಿದ್ದಾಳೆ. ಗಾಳಿ ತಾಗಿದೆ. ಹೆದರಿದ್ದಾಳೆ. ಭೂತ ಬಡಿದಿದೆ. ನಿಮಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ ಅವಳ ಬೆನ್ನನ್ನು ನನ್ನ ಎದುರು ತೆರೆದಿಡಿ ತೋರಿಸುತ್ತೇನೆ” ಅಂದರು.

ಅವರು ಹೇಳಿದಂತೆ ಮಾಡಿದಾಗ ತಮ್ಮ ಕೈಯಲ್ಲಿ ಒಂದಷ್ಟು ಭಸ್ಮವನ್ನು ಹಿಡಿದುಕೊಂಡು ಅವಳ ಬೆನ್ನಿಗೆ ಎದುರಾಗಿ ಉಫ್ ಎಂದು ಊದಿದಾಗ ಬೆನ್ನಿನ ಮೇಲೆ ಹಸ್ತದೊಂದಿಗೆ ಐದೂ ಬೆರಳು ಮೂಡಿರುವುದು ಕಂಡು ಎಲ್ಲರೂ ಧಂಗಾದರು. ಕೂಡಲೇ ಅಪ್ಪನಿಗೆ ಹೇಳಿದರು ” ಪ್ರತಿ ಅಮಾವಾಸ್ಯೆಯ ದಿನ ತಪ್ಪದೆ ಊರ ಮುಂದಿನ ಭೂತಪ್ಪನ ಕಟ್ಟೆಯ ಹತ್ತಿರ ಹೋಗಿ ದೀಪ ಹಚ್ಚಿ ಬನ್ನಿ. ಹಾಗೆ ಹಣ್ಣು ಕಾಯಿ ನೈವೇದ್ಯ ಮಾಡುತ್ತಿರಿ. ಹರಕೆ ಹೊತ್ತುಕೊಳ್ಳಿ. ಜ್ವರ ಕಡಿಮೆ ಆಗುತ್ತದೆ. ಮತ್ತೆ ಯಾವ ಔಷಧಿಯ ಅಗತ್ಯ ಇಲ್ಲ. ತಲೆ ಬಿಸಿ ಮಾಡಿಕೊಳ್ಳಬೇಡಿ” ಎಂದು ಹೇಳಿ ಒಂದಷ್ಟು ಮಂತ್ರಗಳನ್ನು ಪಠಿಸಿ ಭಸ್ಮವನ್ನು ಅವಳ ಹಣೆಗೆ ಹಚ್ಚಿ ಚಿಟಿಕೆ ಭಸ್ಮ ಬಾಯೊಳಗೆ ತಾವೆ ಹಾಕಿ “ಸ್ವಲ್ಪ ನೀರು ಕುಡಿಸಿ ಮಲಗಿಸಿ. ಬೆಳಿಗ್ಗೆ ಆರಾಮಾಗುತ್ತಾಳೆ ” ಅಂದರು.

ಅವರಣತಿಯಂತೆ ಹರಕೆ ಹೊತ್ತು ನಡೆದುಕೊಂಡಾಗ ಮಾರನೆ ದಿನ ಜ್ವರ ಕಡಿಮೆ ಆಗಿತ್ತು. ಆದರೆ ಎರಡು ದಿನ ಸುಸ್ತು ಆವರಿಸಿತ್ತು. ಸುದ್ದಿ ತಿಳಿದ ಅವಳ ಗೆಳತಿ ನೋಡಲು ಬಂದಾಗ ನಡೆದ ವಿಷಯ ತಿಳಿದು ” ಹೌದು ಅದೊಂದು ಜಾಗದಲ್ಲಿ ಈ ರೀತಿ ಕಾಡುವುದಿದೆ. ನೀನು ಹೋದ ಮೇಲೆ ನನ್ನ ಅಪ್ಪ ಅಮ್ಮ ಅದೇ ಮಾತಾಡಿಕೊಳ್ಳುತ್ತಿದ್ದರು. ಛೆ! ಹೋಗಲು ಬಿಡಬಾರದಿತ್ತು. ಸದ್ಯ ಇಷ್ಟರಲ್ಲೆ ಮುಗಿತಲ್ಲ ” ಎಂದು ಎಲ್ಲರೂ ನಿಟ್ಟುಸಿರು ಬಿಟ್ಟರು.

ಅದಾಗಲೆ ಅವರಪ್ಪ ಹೀಗೆ ಮಗಳನ್ನು ಕಳಿಸುವುದು ಸರಿಯಲ್ಲವೆಂದು ಯೋಚಿಸಿ ಹೆಂಡತಿಯ ಹತ್ತಿರ ” ಅವಳಿಗೊಂದು ಹೊಲಿಗೆ ಮಿಷನ್ನು ಕೊಡಸವೆ ಹ್ಯಾಂಗಾರು ಮಾಡಿ. ಅದ್ಯಾರೊ ಕೊಡ್ತಿ ಹೇಳಿದ್ದ ಹೇಳ್ತಿತ್ತಲ್ಲೆ. ನೀ ಸರಿಯಾಗಿ ಕೇಳಿ ತಿಳಕ. ನಾ ದುಡ್ಡಿಗೆ ವ್ಯವಸ್ಥೆ ಮಾಡ್ತೆ” ಎಂದು ಎದ್ದು ಹೊರಟಾಗ ಮಲಗಿದಲ್ಲೆ ಕೇಳಿಸಿಕೊಳ್ಳುತ್ತಿರುವ ರೇಖಾಳಿಗೆ ಅಪ್ಪನ ಬಗ್ಗೆ ಹೆಮ್ಮೆ,. ಹೊಲಿಗೆ ಮಿಷನ್ ಕಣ್ಣ ಮುಂದೆ ಬಂದು ಕನಸು ನನಸಾಗುತ್ತಿರುವುದಕ್ಕೆ ಸಖತ್ ಖುಷಿ ಒಂದು ಕಡೆ ಅಪ್ಪ ಕೊಟ್ಟ ದುಡ್ಡು ತಾನು ಹೊಲಿಗೆ ಹೊಲಿದು ವಾಪಸ್ಸು ಕೊಡಬೇಕೆನ್ನುವ ಸ್ವಾಭಿಮಾನ ಸೆಟೆದು ನಿಂತಿತು. ಇದೆ ಸಂತೃಪ್ತಿಯಲ್ಲಿ ಸುಸ್ತಾದ ದೇಹ ಮತ್ತೆ ನಿದ್ದೆಗೆ ಜಾರಿತು.

(ನಡೆದ ಘಟನೆಯ ಸುತ್ತ ಹೆಣೆದ ಕಥೆ)

22-11-2017. 2.38pm

ಮೆಜೆಸ್ಟಿಕ್(ಕಥೆ)

ಬೆಂಗಳೂರಿನ ಮೆಜೆಸ್ಟಕ್ ಏರಿಯಾ ಅಂದರೆ ಕೇಳಬೇಕಾ? ಸದಾ ಗಿಜಿ ಗಿಜಿ ಗುಡುವ ಜನರ ದಂಡು. ಎಲ್ಲಿ ನೋಡಿದರೂ ಜನವೋ ಜನ. ಅದೆಲ್ಲಿಗೆ ಹೋಗುತ್ತಾರೊ ಅದೆಲ್ಲಿಗೆ ಬರುತ್ತಾರೊ ದೇವರಿಗೇ ಗೊತ್ತು. ದಿನದ ಯಾವುದೆ ವೇಳೆಗೆ ಹೋದರೂ ಜನರ ಓಡಾಟ ನಿಲ್ಲೋದಿಲ್ಲ. ಅದರಲ್ಲೂ ಸಿನೇಮಾ ಬಿಡೊ ವೇಳೆಯಲ್ಲಿ ಹೋದರೆ ಮುಗಿದೇ ಹೋಯ್ತು. ಜೊತೆಗಿದ್ದವರ ಕೈ ಗಟ್ಟಿಯಾಗಿ ಹಿಡಿದಿದ್ದರೆ ಪರವಾಗಿಲ್ಲ. ಅದಿಲ್ಲವಾದರೆ ಕಳೆದು ಹೋಗೋದು ಗ್ಯಾರಂಟಿ.

ಅವಳಿಗೊ ಊರು ಹೊಸದು. ಮದುವೆಯಾಗಿ ಗಂಡನ ಜೊತೆ ಕಾಲಿಕ್ಕಿದ ಮೊದಲ ಬೆಂಗಳೂರು ದರ್ಶನ ಒಮ್ಮೆ ಅವಕ್ಕಾಗಿದ್ದಳು. ಎಲ್ಲಿ ಒಬ್ಬಳೆ ಹೋಗಲು ಭಯ ಭಯ. ಸದಾ ಗುಬ್ಬಿ ಗೂಡಂತಹ ಮನೆಯಲ್ಲಿ ಇರುತ್ತಿದ್ದಳು. ಹೊರಗೆ ಕಾಲಿಕ್ಕಲು ಜೊತೆಗೆ ಯಾರಾದರೂ ಬೇಕೇ ಬೇಕು. ಅವಳ ಗಂಡನಿಗೊ ರಜೆ ಬಂದರೆ ಸಾಕು ಹಳೆಯ ಸಿನೇಮಾ ನೋಡುವ ಹುಚ್ಚು. ಅಲ್ಲಿ ಇಲ್ಲಿ ಹೊಸ ಹೊಸ ಜಾಗ ನೋಡೊ ಹಂಬಲ. ಇವಳು ಅವನ ತದ್ವಿರುದ್ಧ. ಎಷ್ಟೆಂದರೂ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳು. ಇವಳೆ ಹಿರಿಯವಳು. ಜೊತೆಗೆ ಒಡ ಹುಟ್ಟಿದ ಇಬ್ಬರು ತಂಗಿಯರು ಒಬ್ಬ ಅಣ್ಣ ಅಜ್ಜಿ ಅಪ್ಪ ಅಮ್ಮ ಎಲ್ಲರ ಜೊತೆ ಬೆಳೆದವಳು. ಹಳ್ಳಿ ಸುತ್ತೋದು ಬಿಟ್ಟರೆ ಷಹರದ ಗಂಧಗಾಳ ಇಲ್ಲ. ಆದರೂ ಚಂದ ಇರುವ ಅವಳಿಗೆ ಬೆಂಗಳೂರಿನಲ್ಲಿ ಉತ್ತಮ ನೌಕರಿ ಇರುವ ಗಂಡ ಸಿಕ್ಕಾಗ ಸ್ವರ್ಗಕ್ಕೆ ಮೂರೆ ಗೇಣು. ಖುಷಿ ಖುಷಿಯಿಂದ ಮದುವೆಯಾಗಿ ಗಂಡನೊಂದಿಗೆ ಸಂಸಾರ ಶುರು ಮಾಡಿದ್ದಳು. ಆದರೆ ಗಂಡನ ಆಸಕ್ತಿಗೂ ಅವಳ ಆಸಕ್ತಿಗೂ ಅಜಗಜಾಂತರ. ಅವನು ಏತಿ ಅಂದರೆ ಇವಳು ಪ್ರೇತಿ ಅನ್ನುತ್ತಿದ್ದಳು. ಸದಾ ವಾದ ಮಾಡೋದು ಅವನು ಹೋಗೋಣ ಬಾರೆ ಅಂದರೆ ನನಗೆ ಬೇಜಾರು ಬರಲು. ಅಂತೂ ಹೀಗೆ ನಡೆಯುತ್ತಿರುವ ಸಂಸಾರಕ್ಕೆ ಆರು ತಿಂಗಳಾಗಿರಬಹುದು.

ಗಂಡ ನೋಡಿದಾ ನೋಡಿದಾ ಅಲ್ಲಾ ಮದುವೆಯಾಗಿ ಇಷ್ಟು ತಿಂಗಳಾಯಿತು ತನ್ನ ಹೆಂಡತಿಗೆ ಸರಿಯಾಗಿ ಸೀರೆ ಉಡಲಿಕ್ಕೇ ಬರೋದಿಲ್ಲವಲ್ಲಾ. ಹಿಂದೆ ಗಿಡ್ಡಾ ಮುಂದೆ ಉದ್ದಾ. ನಡೆಯುವಾಗ ನೆರಿಗೆ ಕಾಲಿಗೆ ತೊಡರಿಕೊಳ್ಳುವುದು. ಒಂದಿನ ಮನೆಗೆ ಬಂದ ನೆಂಟರಲ್ಲಿ ಈ ವಿಷಯ ಪ್ರಸ್ಥಾಪ ಮಾಡಿ ಅವಳು ಸೀರೆ ಉಡುವ ರೀತಿ ತೋರಿಸಲು ಹೋಗಿ ಎಲ್ಲರೂ ಗೊಳ್ಳೆಂದು ನಕ್ಕರೆ ಇವಳಿಗೆ ಕೆಟ್ಟ ಕೋಪ ಬಂದು ನಾಲ್ಕು ದಿನ ಮಾತೇ ಬಂದು ಮಾಡಿದಳು. ಗಂಡನಿಗೆ ಲಂಗಣ. ಸರಿಯಾಗಿ ಅಡಿಗೆ ತಿಂಡಿ ಇಲ್ಲ. ಮನಸ್ಸು ಬಂದರೆ ಮಾಡೋದು ಇಲ್ಲವಾದರೆ ಇಲ್ಲ. ಮನ ಮನೆಯೆಲ್ಲ ಮೌನದರಮನೆಯಾಯಿತು.

ರಾತ್ರಿ ಒಳಗೊಳಗೆ ವಿರಹ ವೇದನೆ ಒಮ್ಮೆ ನನ್ನ ಹತ್ತಿರ sorry ಕೇಳಬಾರದಾ? ದುರಹಂಕಾರ, ಕೊಬ್ಬು. ನಾ ಮಾತಾಡಲ್ಲ, ಬೇಕಾದರೆ ಅವರೆ ಮಾತಾಡಲಿ ಮೊದಲು ಎಂದಂದುಕೊಂಡು ಬೆನ್ನು ತಿರುಗಿಸಿ ಮಲಗುತ್ತಾಳೆ. ಗಡಿಯಾರದ ಟಿಕ್ ಟಿಕ್ ಶಬ್ದ ಬಿಟ್ಟರೆ ಉಸಿರೂ ಕೇಳುವಷ್ಟು ಮೌನ ಆ ರಾತ್ರಿ. ಇಬ್ಬರಲ್ಲೂ ಸ್ವಾಭಿಮಾನ ಬಿಡಲೊಲ್ಲದು!!

ಕೊನೆಗೆ ಗಂಡ ಮಹಾಶಯ ತಾನೆ ಪೂಸಿ ಹೊಡೆದೂ ಹೊಡೆದೂ ಅಂತೂ ಅವಳ ಕೋಪಕ್ಕೆ ನಾಂದಿ ಹಾಡಿಸಿದ. ಮತ್ತೆ ಈ ಖುಷಿಯಲ್ಲಿ ಡಾ॥ ರಾಜಕುಮಾರವರ ಸಿನೇಮಾಕ್ಕೆ ಕರೆದುಕೊಂಡು ಹೋಗುವ ತಯಾರಿ. ಅವಳಿಗೆ ಡಾ॥ರಾಜಕುಮಾರನ ಸಿನೇಮಾ ಅಂದರೆ ಸಾಕು ಹೊರಡುವ ಮನಸ್ಸು ಮಾಡುತ್ತಾಳೆಂಬುದು ಅವನಿಗೆ ಚೆನ್ನಾಗಿ ಗೊತ್ತು. ರಾಜಕುಮಾರ ಸಿನೇಮಾ ಅಂದರೆ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ? ಅದೂ ಮೆಜೆಸ್ಟಿಕ್ನಲ್ಲಿ ಸಂತೋಷ್ ಟಾಕೀಸಿನಲ್ಲಿ ದೊಡ್ಡ ಪರದೆಯ ಮುಂದೆ ಕೂಡಿಸುತ್ತೇನೆಂದು ರೀಲು ಬಿಟ್ಟ ನೋಡಿ. ಖುಷಿ ಖುಷಿಯಿಂದ “ನಡಿರಿ ಹೋಗೋಣ ” ಎಂದು ಸಮ್ಮತಿ ಸೂಚಿಸಿದಳು.

ಆದರೆ ಹೋಗುವಾಗ ಇವಳಿಗೆ ಒಳಗೊಳಗೇ ಭಯ. ಹೇಗೆ ಜನರ ಮಧ್ಯ ತಿರುಗಾಡೋದು? ಮೊದಲೆ ಗಂಡನಿಗೆ ತಾಕೀತು ಮಾಡಿದಳು. “ನನ್ನ ಬಿಟ್ಟು ದೂರ ಹೋಗುವಂತಿಲ್ಲ. ಜೊತೆಗೇ ಇರಬೇಕು. ನನಗೆ ಭಯಾ.”

“ಆಯಿತು ಮಾರಾಯ್ತಿ. ನಡಿ ಹೋಗೋಣ.”

ಇಬ್ಬರ ಸವಾರಿ ಹೊರಟಿತು ಸಿಟಿ ಬಸ್ಸು ಏರಿ. ಮೆಜೆಸ್ಟಿಕ್ ಬಸ್ ಸ್ಯಾಂಡಿನಲ್ಲೇ ಇಳಿದು ಇವಳಿಗೆ ಸ್ವಲ್ಪ ಸುತ್ತಾಡಿಸಬೇಕು ಎಂದು ಗಂಡ ಎರಡು ತಾಸು ಮೊದಲೆ ಕರೆದುಕೊಂಡು ಹೋಗಿದ್ದ. ಸರಿ ಬಸ್ಸಿಂದ ಇಳಿದು ಇವಳೊಂದಿಗೆ ಹಜ್ಜೆ ಹಾಕುತ್ತಿರುವಾಗ ಎದುರಿಗೆ ಬರುವ ಅಡ್ಡಡ್ಡ ಜನರ ತಳ್ಳಾಟದಲ್ಲಿ ಇವಳೂ ನಡೆದುಕೊಂಡು ಹೋಗುತ್ತಿದ್ದಾಳೆ. ಗಂಡ ಮುಂದೆ ಇವಳು ಅವನ ಹಿಂದೆ. ಹೋಗ್ತಾ ಹೋಗ್ತಾ ಅವನ ಸ್ವಲ್ಪ ಬಿರುಸಿನ ನಡುಗೆಯೊಂದಿಗೆ ಇವಳ ನಿರಿಗೆಯ ಸೀರೆಯ ತಡವರಿಕೆಯ ಹೆಜ್ಜೆ ಸ್ವಲ್ಪ ಹಿಂದೆ ಹಿಂದೆ ಇರುವಂತೆ ಆಯಿತು. ಆದರೂ ಅವಳಿಗೆ ಅವನ ಕೆಂಪು ಶರ್ಟ್ ಗುರುತು ಗುಂಡಾದ ತಲೆ ಕಾಣುತ್ತಿತ್ತು. ಅದೇ ಗುರುತಿಟ್ಟುಕೊಂಡು ಹಿಂದೆ ಹಿಂದೆನೆ ಹೋಗುತ್ತಿದ್ದಾಳೆ. ಸುಮಾರು ದೂರ ನಡೆದಾಗಿದೆ. ಅಲ್ಲೊಂದು ಕಡೆ ಅವನು ನಿಂತು ಕತ್ತು ಹೊರಳಿಸಿದಾಗ ಗೊತ್ತಾಗುತ್ತದೆ ಇವನು ನನ್ನ ಗಂಡನಲ್ಲ. ಗಾಭರಿಯಿಂದ ಸುತ್ತೆಲ್ಲ ನೋಡುತ್ತಾಳೆ. ಎಲ್ಲರೂ ಅಪರಿಚಿತರು. ಎಲ್ಲಾ ಅವರವರ ಗಡಿಬಿಡಿಯಲ್ಲಿ ಇದ್ದಾರೆ. ಏನು ಮಾಡುವುದು? ದಿಕ್ಕೇ ತೋಚದಂತಾಯಿತು. ಕೋಪ, ದುಃಖ, ಹೆದರಿಕೆ ಎಲ್ಲ ಒಟ್ಟೊಟ್ಟಿಗೆ ಬಂದು ಕಣ್ಣು ತುಂಬಿಕೊಳ್ಳುತ್ತದೆ.

ಆಗೆಲ್ಲ ಈಗಿನಂತೆ ಮೊಬೈಲ್ ಇಲ್ಲ. ಕೈಯಲ್ಲಿ ಒಂದು ಕರವಸ್ತ್ರ ಬಿಟ್ಟರೆ ಬೇರೇನೂ ಇಲ್ಲ. ಕತ್ತಲಾಗುತ್ತಿದೆ. ಊಟ ಮಾಡಿ ಹೊರಟಿದ್ದು ನಾಲ್ಕೂವರೆ ಶೋಗೆಂದು. ಇದುವರೆಗೆ ನಡೆದುಕೊಂಡು ಬಂದ ದಾರಿಯಲ್ಲಿ ಹಿಂತಿರುಗುತ್ತಾಳೆ. ನಡೆದೂ ನಡೆದೂ ಸೋತ ಕಾಲ್ಗಳು ದಾರಿ ಪಕ್ಕದಲ್ಲಿರುವ ಒಂದು ಪಾಳು ಬಿದ್ದ ಮನೆ ಕಟ್ಟೆಯ ಮೇಲೆ ಕುಳಿತುಕೊಳ್ಳುವಂತಾದಾಗ ಇದೇ ಸರಿ ಸ್ವಲ್ಪ ಹೊತ್ತು ಇಲ್ಲಿ ಕೂತು ನೋಡೋಣ. ನನ್ನ ಹುಡುಕಿಕೊಂಡು ಬರಬಹುದು. ಏಕೆಂದರೆ ಹೋಗುವಾಗ ಕೇಳಿದ್ದೆ “ಇಷ್ಟೊಂದು ದೊಡ್ಡ ಪಟ್ಟಣದಲ್ಲಿ ಈ ಮನೆ ಯಾಕೆ ಪಾಳು ಬಿದ್ದಿದೆ? ” ಎಂದು ಕೇಳಿದಾಗ “ಹೋಗಿ ಹೋಗಿ ಈ ಮನೆ ಮೇಲೆ ಯಾಕೆ ಕಣ್ಣು ಬಿತ್ತು? ಎಷ್ಟೆಲ್ಲಾ ಅಂಗಡಿಗಳು ಲೈಟಿನ ಬೆಳಕಲ್ಲಿ ಜಗಮಗಿಸುತ್ತಿವೆ. ಒಂದು ಸೀರೆನೊ ಅಥವಾ ಇನ್ನೇನೊ ಕೇಳ್ತೀಯಾ ಅಂದುಕೊಂಡರೆ ” ಎಂದು ಅಪಹಾಸ್ಯ ಮಾಡಿದ್ದು ನೆನಪಿಗೆ ಬಂತು. ಖಂಡಿತಾ ನನ್ನ ಹುಡುಕಿಕೊಂಡು ಬಂದೇ ಬರುತ್ತಾರೆಂಬ ಭರವಸೆ ಚಿಗುರೊಡೆಯಿತು. ಕೊಂಚ ಸಮಾಧಾನವೂ ಆಯಿತು.

ಇದ್ದಕ್ಕಿದ್ದಂತೆ ಕರೆಂಟು ಹೋಯಿತು. ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳ ಬೆಳಕು ಒಂದೊಂದಾಗಿ ಸಣ್ಣದಾಗಿ ಹೊತ್ತಿಕೊಂಡವು. ಬೆಳಕಿಗಿಂತ ಕತ್ತಲೆಯ ಸಾಮ್ರಾಜ್ಯ ಎತ್ತ ನೋಡಿದರೂ. ಎದ್ದು ನಿಂತು ಸುತ್ತಲೂ ನೋಡುತ್ತಾಳೆ. ಕುಳಿತ ಮನೆಯ ಪಾಳು ಬಿದ್ದ ಕಟ್ಟಡದೊಳಗಿಂದ ಮಿಣಿ ಮಿಣಿ ದೀಪ ಕಾಣುತ್ತದೆ. ಒಂದು ಹೆಂಗಸಿನ ಮುಖ ಅಸ್ಪಷ್ಟವಾಗಿ ಗೋಚರವಾಗುತ್ತಿದೆ. ಇವಳು ಆ ಬೆಳಕು ಬಂದತ್ತ ಮೆಲ್ಲನೆ ಹೆಜ್ಜೆ ಹಾಕುತ್ತಾಳೆ. ಈ ಬೀದಿಗಿಂತ ಆ ಮನೆಯ ಹೆಂಗಸಿನೊಂದಿಗೇ ಇರುವುದು ವಾಸಿ ಎಂದೆಣಿಸಿ ಅವಳ ಮುಂದೆ ನಿಂತು ತನ್ನ ಪರಿಚಯ ತನಗಾದ ಅವಸ್ಥೆ ಬಡಬಡಿಸುತ್ತಾಳೆ. ನಕ್ಕ ಆ ಹೆಂಗಸು ಬಾ ಎನ್ನುವ ಸೌಂಜ್ಞೆಯೊಂದಿಗೆ ಆ ಮನೆಯ ಮೆಟ್ಟಿಲೇರಲು ಇವಳೂ ಕೂಡಾ ಅವಳನ್ನು ಹಿಂಬಾಲಿಸುತ್ತಾಳೆ. ಮೇಲೆ ಸುಂದರ ದೊಡ್ಡ ಹಜಾರ. ಬಣ್ಣ ಬಣ್ಣದ ಲೈಟುಗಳು. ಸುತ್ತ ಕಿಟಕಿಗಳಿಗೆ ಬೆಳ್ಳನೆಯ ಪರದೆಗಳನ್ನು ಇಳಿ ಬಿಟ್ಟಿದ್ದಾರೆ. ಅದು ಹೊರಗಿನ ಗಾಳಿಗೆ ಹಾರಾಡುತ್ತಿದೆ. ಆ ಹೆಂಗಸು ಕುಳಿತ ತೂಗು ಮಂಚ. ಅತ್ತಿಂದಿತ್ತ ಇತ್ತಿಂದತ್ತ ತೂಗುವಾಗ ಅದಕ್ಕೆ ಕಟ್ಟಿದ ಗೆಜ್ಜೆಯ ಬೊಂತೆ ಹಳ್ಳಿಯಲ್ಲಿ ಎತ್ತಿನ ಗಾಡಿ ಹೋಗುವಾಗ ಎತ್ತುಗಳ ಕೊರಳ ಗಂಟೆಯಂತೆ ಕ್ರಮಬದ್ಧವಾಗಿ ಓಲಾಡಿ ತಮ್ಮ ಇಂಪಾದ ನಾದ ಸೂಸುತ್ತಿವೆ. ಅಲ್ಲಿಯೆ ಇದ್ದ ಒಂದು ಮರದ ರೌಂಡಾದ ಟಿಪಾಯಿಯ ಮೇಲೆ ನೀರಿನ ತಂಬಿಗೆ ಕಾಣುತ್ತಿದೆ. ದಾಹ ಗರಿಗೆದರಿ ಕುಡಿಯುವ ಆಸೆ. ಹೆಂಗಸು ಇವಳನ್ನೇ ದಿಟ್ಟಿಸಿ ನೋಡುತ್ತಿದ್ದಾಳೆ. ಹಳ್ಳಿಯಲ್ಲಿ ಹೀಗೆ ನೋಡಿದರೆ ನನ್ನಜ್ಜಿ ಬೈಯ್ಯೋರು. “ನಡಿ ಒಳಕ್ಕೆ ದೃಷ್ಟಿ ಗಿಷ್ಟಿ ಆದಾತು “ಅಂತ. ಆದರೆ ಇಲ್ಲಿ ಹಾಗೆ ಹೋಗೊ ಹಾಗಿಲ್ಲ. ಸುಮ್ಮನೆ ಸಣ್ಣಗೆ ನಗುತ್ತಾಳೆ. ಆ ಹೆಂಗಸು ಮೆಲ್ಲನೆ ಎದ್ದು ಹತ್ತಿರ ಹತ್ತಿರ ಬರುತ್ತಿದ್ದಾಳೆ. ಮುಖದಲ್ಲಿ ಮಂದಹಾಸದ ಬದಲಾಗಿ ಕ್ರೂರತನ ಕಾಣುತ್ತಿದೆ. ಕಟ್ಟಿದ ತುರುಬು ಬಿಚ್ಚಿಕೊಳ್ಳುತ್ತದೆ. ಒಮ್ಮೆ ತನ್ನ ಹಣೆಗೆ ಹೆಬ್ಬೆರಳಿಟ್ಟು ಮೇಲಕ್ಕೆ ನೀವುತ್ತಾಳೆ. ಅವಳ ಹಣೆ ಉದ್ದನೆಯ ಕೆಂಪು ಕುಂಕುಮದ ನಾಮ. ಕಣ್ಣೆರಡೂ ಊರಗಲ. ಚಂಡಿ ಚಾಮುಂಡಿಯೊ ಅಥವಾ ನಮ್ಮೂರ ಚೌಡಿಯ ಅತಾರವೊ ಏನೂ ಗೊತ್ತಾಗದೆ ಎದೆ ಬಡಿತ ಅವಳಿಗೇ ಕೇಳುವಷ್ಟು ಜೋರಾಗಿ ಬಡಿದುಕೊಳ್ಳುತ್ತಿದೆ. ಯಾರೊ ಎದೆಯ ಮೇಲೆ ಬಂದು ಕೂತ ಅನುಭವ. ಗಂಟಲು ಒತ್ತಿದಂತಾಗಿ ಕೂಗಲು ಧ್ವನಿ ಹೊರ ಬರುತ್ತಿಲ್ಲ. ಕಣ್ಣು ಹೆದರಿಕೆಯಲ್ಲಿ ಗಟ್ಟಿಯಾಗಿ ಮುಚ್ಚಿಕೊಂಡಿದ್ದಾಳೆ. ಕಾಲುಗಳು ಒದ್ದಾಡುತ್ತಿವೆ. ಅವಳ ಎರಡೂ ಕೈ ಕತ್ತು ಒತ್ತುತ್ತಿವೆ. ಉಸಿರು ಕಟ್ಟಿದಂತಾಗಿ ಕಿಟಾರನೆ ಕಿರುಚುತ್ತಾಳೆ!!

ಶಾರದಾ,ಏಯ್ ಶಾರದಾ ಏನಾಯ್ತೆ? ಯಾಕೆ ಹೀಗೆ ವರ್ತಿಸ್ತಾ ಇದ್ದೀಯಾ? ಎದ್ದೇಳು, ಎಚ್ಚರ ಮಾಡಿಕೊ ಎಂದು ಗಂಡ ಜೋರಾಗಿ ಅಲುಗಾಡಿಸುತ್ತಾನೆ. ಇವಳೊ ಪೂರ್ತಿ ಬೆವತು ದೇಹವೆಲ್ಲ ಒದ್ದೆಯಾಗಿದೆ. ನೂರಾರು ಮೈಲಿ ಓಡಿ ಬಂದಂತೆ ಜೋರಾಗಿ ಎದುರಿಸಿರು ಬಿಡುತ್ತಿದ್ದಾಳೆ. ಗಂಡನ ಅಲಗಾಡಿಸುವಿಕೆಗೆ ಪೂರ್ತಿ ಎಚ್ಚರಗೊಂಡು ಪಟಕ್ಕನೆ ಎದ್ದು ಕುಳಿತು ನಾನೆಲ್ಲಿ ಇದ್ದೇನೆ? ಅದೆ ಅವಳೆಲ್ಲಿ? ನೀವು ಯಾವಾಗ ಬಂದ್ರಿ? ನನ್ನ ಒಬ್ಬಳನ್ನೇ ಬಿಟ್ಟು ಎಲ್ಲಿ ಹೋಗಿದ್ರಿ? ಮುಂದುವರಿಯುತ್ತಲೇ ಇದೆ ಅವಳ ಬಡಬಡಿಕೆಯ ಮಾತು.

ಒಂದಷ್ಟು ನೀರು ಕುಡಿಸಿ ತಟ್ಟಿ ವಾಸ್ತವಕ್ಕೆ ತಂದಾಗ ಅವಳು ಗಂಡನನ್ನು ಗಟ್ಟಿಯಾಗಿ ತಬ್ಬಿಕೊಂಡು “Please ನನ್ನ ಒಬ್ಬಳೆ ಬಿಟ್ಟು ಎಲ್ಲೂ ಹೋಗಬೇಡ್ರಿ. ಭಯ ಆಗುತ್ತದೆ. ನಾನು ಆ ಮೆಜೆಸ್ಟಿಕ್ಕಿಗೆ ಬರೋದಿಲ್ಲ. ಯಾವ ಸಿನೇಮಾನೂ ಬೇಡಾ. ಎಲ್ಲೂ ಹೋಗೋದು ಬೇಡಾ ಕಂಡ್ರಿ^^^ ನನಗೆ ನಮ್ಮೂರೆ ವಾಸಿ. ನನ್ನ ಅಪ್ಪ ಅಮ್ಮನನ್ನು ನೋಡಬೇಕು, ನಾನಿಲ್ಲಿ ಇರೋದಿಲ್ಲ, ನಾನು ಕಳೆದು ಹೋಗ್ತೀನಿ, ಅದೆ ಅವಳು ಬರುತ್ತಾಳೆ, ಭಯ ಆಗುತ್ತೆ ಕಂಡ್ರೀ^^^^ ಎಂದು ಜೋರಾಗಿ ಅಳಲು ಶುರು ಮಾಡುತ್ತಾಳೆ.

ಅವಳ ಮಾತು ಮುಗಿಯುವ ಲಕ್ಷಣ ಕಾಣದೆ ಗಂಡನಿಗೆ ನಗು ತಡೆಯೋಕೂ ಆಗದೆ ಅಂತೂ ಹೇಗೊ ಸಮಾಧಾನಿಸಿ ಮಲಗಸಿದಾಗ ಸೂರ್ಯ ಮೂಡುವ ಹೊತ್ತಾಗಿತ್ತು. ಚಂದಿರ ಇವರಿಬ್ಬರ ಸಲ್ಲಾಪ ಕಿಟಕಿಯಲ್ಲೆ ಬಗ್ಗಿ ನೋಡಿ ಮುಸಿ ಮುಸಿ ನಕ್ಕು ಮರೆಯಾದ!!

(ಇದು ನಡೆದ ಘಟನೆಯ ಸುತ್ತ ನನ್ನದೆ ಕಲ್ಪನೆಯಲ್ಲಿ ಬರೆದ ಕಥೆ)

20-11-2017. 5.06pm

ನೆವ (ಸಣ್ಣ ಕಥೆ)

ಎಂತ ಮಾರಾಯ್ತಿ, ಈ ನಮನಿ ಹಿಡದ್ ಬಿಡದೆ ಮಳಿ ಸುರೀತಿತ್. ತಲೆ ಎತ್ತಿ ನೋಡೂಕ್ ಯಡಿಯಾ. ಕಂಬಳಿ ಕೊಪ್ಪೆ ಒಳಗೆಲ್ಲ ನೀರ್ ಬತ್ ಕಾಣು. “ಎಯ್ ನಿಂಗಿ ಬಿರೀನೆ ಒಸಿ ಒಂದ ಕಪ್ ಚಾ ಮಾಡು ಕಾತೆ. ಹೆಗಡೀರು ಹೊತಾರೆನೆ ಹೇಳಿದ್ರ, ಶಂಕ್ರ ನೀ ಏನಾರ ಕಾನ್ಸೂರ್ ಪ್ಯಾಟಿ ಕಡಿ ಹೋಪುದಾದರೆ ಸ್ವಲ್ಪ ಸಾಮಾನು ತರೂಕಿತ್. ಜಪತಿ ಮಡೀಕ ಅಂದಿದ್ರ. ಹಂಗೆ ಹೆಗಡೀರ್ ಮನೆತಾವ್ ಏನ್ ತರೂಕಿತ್ತು ಕೇಕಂಡಿ ಮಳಿಯಾದ್ರೂ ಪ್ಯಾಟಿ ಕಡಿ ಹೋಯ್ಲೆ ಬೇಕಿತ್. ಒಸಿ ಕಡಿಮೆ ಆತ್ ಕಾತೆ. ಸುಡು ಸುಡು ಚಾಯ್ ಕೊಡಾಯ್ತಾ. ನಿಂಗೇನರ ಬೇಕಿದ್ರ ಹೇಳು ಮತ್ತೆ. ಮನಿ ಸಾಮಾನೆಲ್ಲ ಇತ್ ಕಾಣು.”

ಕೆಲಸದಿಂದ ಸುಸ್ತಾಗಿ ಮಳೆಯಲ್ಲಿ ಕೆಲಸನೂ ಸರಿ ಮಾಡಲಾಗದೆ ಕಂಬಳಿ ಕೊಪ್ಪೆ ಗೂಟಕ್ಕೆ ನೇತಾಕಿ ಹೊಡತಲ ಬೆಂಕಿ ಕಾಯಿಸುತ್ತ ಹೆಗಡೇರ ಮನೆ ಖಾಯಂ ಆಳು ಶಂಕರನ ಮಾತು ಹೆಂಡತಿ ನಿಂಗಿ ಜೊತೆ ನಡೆಯುತ್ತಿತ್ತು. ಅವನಿಗೂ ಮೈಯ್ಯೆಲ್ಲ ಚಳಿ ಹತ್ತಿ ಒಂದು ಗುಟುಕು ಪ್ಯಾಟೆಗೆ ಹೋಗಿ ಹಾಕುವ ಇರಾದೆ ಮನಸಲ್ಲಿ. ಹೆಗಡೇರ ನೆವ ನಿಂಗಿಯ ಮುಂದೆ. ಅವಳಿಗೇನು ತಿಳಿಯದ ವಿಚಾರವೆ? ಅವಳು ಮೌನವಾಗಿ ಖಡಕ್ ಚಾ ಜೊತೆ ಒಂದಷ್ಟು ಬೆಳಗಿನ ಮಿಕ್ಕಿದ ತಿಂಡಿ ತಂದಿಟ್ಟು ಹೇಳ್ತಾಳೆ ;

“ಓಯ್ ನಿನ್ನೇನು ನಾ ಕಾಣದ ಮನಷ್ಯಾನ? ನಂಗೆಲ್ಲ ಗೊತ್ತಿತ್ತ್. ಜಾಸ್ತಿ ಏನಾರ ಗಂಟಲಿಗೆ ಇಳಸಿದ್ಯೊ ಗೊತ್ತಿತ್ತಲ್ಲ! ಮತ್ ನಾ ವೋಳಿಲ್ಲ ಅನ್ಬ್ಯಾಡ. ನಡಿ ಬಿರೀನೆ ಹೋಗಿ ಬಿರೀನೆ ಬಾ. ಬೆಳಕಾದರೆ ದೀಪಾವಳಿ ಹಬ್ಬ ಇತ್. ಹಂಗೆ ಏಯ್ಡ ದಿವಸ ಕೆಲಸಕ್ಕೆ ಬರೂಕಾಯ್ತಿಲ್ಲ ಅಂತ ಹೆಗಡೀರ್ ಹತ್ರ ಹೇಳ್ ಬಾ.”

ನಿಂಗಿ ಮಾತಿಗೆ ದೂಸರಾ ಮಾತಾಡದೆ ಶಂಕರ ಮತ್ತದೆ ಕಂಬಳಿಕೊಪ್ಪೆ ಏರಿಸಿ ಹೆಗಡೆಯವರ ಮನೆಗೆ ಹೊರಟ.

“ಬಾ ಬಾ ನಿನ್ನೇ ಕಾಯ್ತಾ ಇದ್ದೆ. ” ಯನ್ನ ಮಗಂಗೆ ಪ್ಯಾಟಿಗೆ ಹೋಪಕರೆ ಹೇಳಿದ್ನ “ಮಾಣಿ, ಬರಕರೆ ಬಾಲಣ್ಣನ ಅಂಗಡಿಗೋಗಿ ಒಂದ್ ಕಟ್ ಬೀಡಿ ತಕಬಾ” ಮರೆಯಡಾ ಹೇಳಿದ್ದಿ. ಎಂತಾ ಮಳೆ. ಚಳಿ ಜಾಸ್ತಿ. ಹೊಡತಲ್ ಕಾಯಿಸ್ತಾ ಹಂಗೆ ಒಂದ ಧಮ್ ಎಳದ್ರೆ ನನ್ನ ಮಗಂದು ಚಳಿ ಕಿತ್ಕಂಡೋಗವು. ಈ ಮಾಣಿ ಬರಕರೆ ಮರ್ತಿಕ್ಕ ಬಂದಿಗೀದಾ. ಶಂಕರಾ ಬೇಗ ಹೋಗಿ ಈ ಚೀಟಿಯಲ್ಲಿರೊ ಸಾಮಾನಿನ ಸಂಗ್ತೀಗೆ ಬೀಡಿ ಮಾತ್ರ ಮರೆಯದೆ ತಗಂಬಾ. ಏಯ್! ಲೇ ಇಲ್ನೋಡೆ. ಶಂಕರಾ ಬಂಜಾ. ಒಂದು ಚೀಲಾ ಕೊಡು. ಕಾನ್ಸೂರಿಗೆ ಹೋಗಿ ಸಾಮಾನು ತತ್ತಾ. ಲಗೂ ತಗಂಬಾ.”

ಹೆಗಡೆಯವರ ಹೆಂಡತಿಗೂ ಗೊತ್ತು ಗಂಡನ ಬೀಡಿ ಕತೆ. ಇದಕ್ಕೊಂದು ನೆವ ತಮಗೆ ಬೀಡಿ ಬೇಕಾಜು. ಮನಸ್ಸಿನಲ್ಲೆ ನಕ್ಕು ಬಿಸಿ ಬಿಸಿ ಎರಡು ಲೋಟ ಚಾ ಹಿಡಿದು ಚೀಲದೊಂದಿಗೆ ಜಗುಲಿಗೆ ಬರುತ್ತಾಳೆ.

“ತಗ ಶಂಕರಾ ಚಾ. ನೀವೂ ಕುಡಿರಿ. ತಗಳಿ. ಯಂಗೆ ಒಳಬದಿಗೆ ರಾಶಿ ಕೆಲಸಿದ್ದು. ಶಂಕರಾ ನಿಂಗಿ ಕರ್ಕಂಡು ನಾಳೆ ಸಂಜಿಗೆ ಬಾರೊ. ಕುಂಬಳಕಾಯಿ ಕಡುಬು ಮಾಡ್ತೆ. ತಿಂದ್ಕಂಡು ಮಕ್ಕಳಿಗೂ ತಗಂಡು ಹೋಗ್ಲಕ್ಕು.”

ಶಂಕರ ಕುಡಿದ ಲೋಟ ತೊಳೆದಿಟ್ಟು ಕೊಟ್ಟ ದುಡ್ಡು ಜೇಬಿಗೇರಿಸಿ ಚೀಲ ಹೆಗಲಿಗೇರಸಿ ” ಹೆಗಡೀರೆ ನಾ ಬತ್ತೆ. ಬೀಡಿ ಮರೀದೆ ತತ್ತೆ ಆಯ್ತಾ” ಎಂದನ್ನುತ್ತ ಹೊರಟನು.

ಮಳೆಯ ಅಬ್ಬರ ಸ್ವಲ್ಪ ಕಡಿಮೆ ಆಗಿತ್ತು. ಶಂಕರನ ಬೀಡಿಗಾಗಿ ಹೆಗಡೆಯವರ ಮನ ಕಾಯುತ್ತಿತ್ತು. ಶಂಕರನಿಗೆ ಗುಟುಕು ಹಾಕುವ ಹಪಹಪಿ ಮನ ಆವರಿಸಿತ್ತು. ಕಾಲು ಸ್ವಲ್ಪ ಬಿರುಸಾಗಿ ಹೆಜ್ಜೆ ಹಾಕುತ್ತಿತ್ತು. ಸಂತಸದ ಅಲೆ ತೇಲಿ ಬಂದಿತೊಂದು ಗಾನ ಶಂಕರನ ಬಾಯಿಂದ ಸಣ್ಣದಾಗಿ ಗುಣಗುಣಿಸುತ್ತ ಸಾಗಿತ್ತು ಹಾದಿ.

10-10-2017. 7.14pm

ಪ್ರತಿಲಿಪಿ | Pratilipi(ಸ್ಪರ್ಧೆಯಲ್ಲಿ ಓದುಗರ ಆಯ್ಕೆ)

https://kannada.pratilipi.com/blog/kaiyya-hididu-hejje-besedu-contest-results

ಗದ್ಯ ವಿಭಾಗ

ಪದ್ಯ ವಿಭಾಗ

ಗದ್ಯ ವಿಭಾಗದಲ್ಲಿ ಪ್ರಕಟವಾದ ನಾನು ಬರೆದ ಕಥೆ “ಸ್ನೇಹ ಪತ್ರ” 8ನೇ ಸ್ಥಾನ ಪಡೆದರೆ
ಪದ್ಯ ವಿಭಾಗದಲ್ಲಿ ಪ್ರಕಟವಾದ ನಾನು ಬರೆದ “ಮೌನ ರಾಗ” ಕವಿತೆ 6ನೇ ಸ್ಥಾನ ಪಡೆದರೆ,
“ಬಿಂಬವೂ ಮೌನವಾದಾಗ” 16ನೇ ಸ್ಥಾನದಲ್ಲಿ ತೃಪ್ತಿ ಪಡಬೇಕಾಯಿತು. ಸದ್ಯ ಓದುಗರು ನನ್ನ ಬರಹ ಸ್ವಲ್ಪವಾದರೂ ಇಷ್ಟ ಪಡುತ್ತಿರುವರಲ್ಲಾ ಅಂತ ಸಂತೋಷವಾಯಿತು.

ಪ್ರತಿಲಿಪಿ ಓದುಗರಿಗೆಲ್ಲ ಆತ್ಮೀಯ ಧನ್ಯವಾದಗಳು.

11-10-2017