ಕವನ (115)

ನನಗೆ ಈಗ
ನೀ ಬೇಕೆನಿಸುವುದೇ ಇಲ್ಲ
ಯಾಕೆ ಗೊತ್ತಾ?
ಮನದ ತುಂಬ
ನೀನಿಲ್ಲದ ಜಾಗವೇ ಇಲ್ಲ.

ದುರ್ಭೀನು ಹಾಕಿ
ಎಲ್ಲಾ ಕಡೆ ಹುಡುಕಿದ್ದೇನೆ
ಸಾಸಿವೆ ಕಾಳಷ್ಟಾದರೂ
ಜಾಗ ಸಿಗಬಹುದೇ ಎಂದು
ಊಹೂಂ ಕಾಣಲಿಲ್ಲ.

ಈಗ ನೋಡು
ಅದೆಷ್ಟು ಹಾಯಾಗಿದೆ
ಒಡಲ ತುಂಬೆಲ್ಲ
ನಿನ್ನದೇ ಓಡಾಟ
ಖುಷಿಯ ಬುಗ್ಗೆ ಏಳುತ್ತಿದೆ.

ಕಚಗುಳಿ ಇಟ್ಟಾಗಲೆಲ್ಲ
ನಿನ್ನ ಸವರಿ
ನನ್ನದೇ ಶಬ್ದಗಳ ಸಾಲಲ್ಲಿ
ಒಪ್ಪವಾಗಿ ಕೂರಿಸಿಬಿಡುತ್ತೇನೆ
ಬೆಳ್ಳಕ್ಕಿಯ ಸಾಲ ತೆರದಿ.

ಬಾನಂಗದ ತುಂಬ
ರೆಕ್ಕೆ ಬಿಚ್ಚಿ ಹಾರಾಡುವುದ
ನೋಡುವುದೇ ನನಗಾನಂದ
ಕಣ್ಣ ತುಂಬಿಕೊಂಡು
ಆನಂದದಿ ಅನುಭವಿಸುತ್ತೇನೆ.

ನನಗಾಗಿ ಅದೆಲ್ಲಿಂದ
ನೀ ಬಂದೆ ಹೇಳು
ಮೌನ ರಾಗ ಮಿಡಿದು
ಅನುರಾಗದಿ ಬೆಸೆದು
ಈಗ ಕಾಣದಂತೆ ಕುಳಿತು ಬಿಟ್ಟೆಯಲ್ಲ?

11-9-2017. 5.21pm

Advertisements

ಯಕ್ಷಸಿರಿ – ಮಹಿಳಾ ಯಕ್ಷಗಾನ ತಂಡ | ಸಂಪದ – Sampada ಈ ವಾರದ ಆಯ್ದ ಬರಹವಾಗಿ ಪ್ರಕಟವಾಗಿದೆ ಸಂಪದದಲ್ಲಿ!😊

https://sampada.net/%E0%B2%AF%E0%B2%95%E0%B3%8D%E0%B2%B7%E0%B2%B8%E0%B2%BF%E0%B2%B0%E0%B2%BF-%E0%B2%AE%E0%B2%B9%E0%B2%BF%E0%B2%B3%E0%B2%BE-%E0%B2%AF%E0%B2%95%E0%B3%8D%E0%B2%B7%E0%B2%97%E0%B2%BE%E0%B2%A8-%E0%B2%A4%E0%B2%82%E0%B2%A1/47867

ಬದುಕು ಒಗಟು!!

ಇಡುವ ಹೆಜ್ಜೆಗಳ ಗುರುತಿರಿಸಿ
ಬಿಂಬದ ಗುಂಟ ಜೊತೆ ಬಂದಾಗ
ಪಡಿಯಚ್ಚಾಗಿ ಉಳಿದಿತ್ತು
ಮನ ಒಂದಕ್ಕೊಂದು ಬೆಸೆದು
ಬಿಟ್ಟಿರಲಾರದಷ್ಟು ಸಂಭ್ರಮ ಪಟ್ಟು.

ಈಗೆಲ್ಲ ಬರೀ ಮಾಸಲು ಮಾಸಲು
ಆಸೆಯಿಂದ ಕಣ್ಣು ಕಿರಿದಾಗಿಸಿ ನೋಡುತ್ತೇನೆ
ಕಿಂಚಿತ್ತಾದರೂ ಕಾಣಬಹುದೆಂಬ ನಿರೀಕ್ಷೆಯಲ್ಲಿ
ಬೆಂಗಾಡಾದ ಮನಕ್ಕೆ ಸಾಂತ್ವನ ಹೇಳಲು
ಉರಿ ಹೊತ್ತಿಸಿಕೊಂಡ ಅಪರಾಧಕ್ಕೆ
ಪ್ರಾಯಶ್ಚಿತ ಮಾಡಿಕೊಳ್ಳಲು.

ಆದರೀಗ ನಂಬಿದ ಬದುಕೇ ಒಗಟಾಗಿ
ಬವಣೆ ಬದುಕಿನ ಜಂಜಡ ಅರಿಯದೆ
ಸುತ್ತಿಕೊಂಡ ಕಾವಲ್ಲಿ ಮನ ಕಾದ ಹೆಂಚು
ಕುಣಿದ ಗಳಿಗೆಗಳೇ ನಶ್ವರವೆಂದೆನಿಸಿ
ಮೂಲೆಗುಂಪಾಗಿ ಕುಳಿತ ಬಗೆ
ಅರಿವಾದರೂ ಅರಗಿಸಿಕೊಳ್ಳಲಾರೆ.

ಏನೀ ಬದುಕು?
ಒಮ್ಮೆ ಕ್ಷಿತಿಜದಗಲ ಮತ್ತದೇ ವನವಾಸ
ಏರಿಳಿತಗಳ ಹೊತ್ತಿಗೆಯಲ್ಲಿ ತನು ಹೈರಾಣಾಗುವುದು
ಮೆರೆದಿದೆ ಜೈ ಜೈ ಕಾರ ಬಿಡಿಸಿಕೊಳಲುಂಟೆ?
ಸತ್ತು ಸುಣ್ಣವಾಗುವ ಮನಸು ಕಾಡುವ ಹುಳು
ಬಿಕ್ಕಿ ಬಿಕ್ಕಿ ಅತ್ತರೂ ಮರುಕವೆಂಬುದು ಮಾತ್ರ
ನೊಂದ ಹೃದಯಗಳಿಗೆ ತಿರುಕನ ಕನಸು!

28-8-2017. 1.47pm

ಕವನ (114)

ಪಲ್ಲಕ್ಕಿಯಂತಹ ಪಲ್ಲಂಗದಲಿ
ಅಂಗಾತ ನಿನ್ನ ಪವಡಿಸಿ
ಅಮ್ಮ ಕಲಿಸಿದ ಜೋಗುಳ ಹಾಡಿ
ಮಲಗಿಸುವಾಸೆ.

ತುಸು ಮಿಡುಕಿದರೂ
ಮನವೇಕೊ ದಿಗಿಲು
ಕಣ್ಣ ರೆಪ್ಪೆ ಅಗಲಿಸಿ
ಇರುಳ ಕಾಯುವಾಸೆ.

ತಿಳಿಗೊಳಕೆ ಚಂದ್ರಮನು
ಸದ್ದಿಲ್ಲದೆ ಬಂದಿರುವ
ಕಿರು ತಾರೆ ನೀನಿರಲು
ನನಗವನಲ್ಲ ಚಂದ.

ಕಣ್ಣ ಕಪ್ಪಿಗೂ ಬೇಕಂತೆ
ನಿನ್ನ ಮುತ್ತಿಕ್ಕುವಾಸೆ
ಕಚಗುಳಿಯಿಡುವ ಕಲ್ಪನೆಗೆ
ಕವನವಲ್ಲವೆ ಸಾಕ್ಷಿ!

2-8-2017 6.50pm

ಕವನ (113)

ಯಾಕಿಷ್ಟು ಕಾತರ ಮನದ ತುಂಬ
ನಿನ್ನ ಸೆರೆ ಹಿಡಿಯುವ ಆತುರ ಕಣ್ಣ ತುಂಬ.

ನವಿಲಂತೆ ನರ್ತಿಸುವೆ ಎದೆಯ ತುಂಬ
ದಿಗಿಲಾಗುತಿದೆ ನನಗಿಲ್ಲಿ ಕಾಣದಾಗ ನಿನ್ನ ಬಿಂಬ.

ಹುಟ್ಟಿ ಬಂದಿರುವೆ ನನಗರಿವಿಲ್ಲದಂತೆ
ನಿನ್ನ ಬಿಟ್ಟಿರಲು ನನಗೂ ಬಲು ಚಿಂತೆ.

ಬೆರೆತಿರುವೆ ನನ್ನಲ್ಲಿ ಅನುಬಂಧದಂತೆ
ಮನವೀಗ ದಿನವೂ ಸಂತಸದ ಸಂತೆ.

ಮರೆತೆಯಾದರೆ ಮನಕಾಗುವುದು ತಲ್ಲಣ
ನಿನ್ನಿರುವು ದಿನವೂ ಹೋಳಿಗೆ ಹೂರಣ.

ಕಾಲವೆಷ್ಟಾದರೇನು ಮಾಡುವೆ ಕೊನೆವರೆಗೆ ಚಾರಣ
ದಿನ ದಿನವೂ ನಿನಗೆ ಕಟ್ಟುವೆ ಅಕ್ಷರದ ತೋರಣ!

4-9-2017. 8.53am

ಯಕ್ಷಸಿರಿ – ಮಹಿಳಾ ಯಕ್ಷಗಾನ ತಂಡ | Readoo Kannada | ರೀಡೂ ಕನ್ನಡ

http://kannada.readoo.in/2017/09/%e0%b2%af%e0%b2%95%e0%b3%8d%e0%b2%b7%e0%b2%b8%e0%b2%bf%e0%b2%b0%e0%b2%bf-%e0%b2%ae%e0%b2%b9%e0%b2%bf%e0%b2%b3%e0%b2%be-%e0%b2%af%e0%b2%95%e0%b3%8d%e0%b2%b7%e0%b2%97%e0%b2%be%e0%b2%a8-%e0%b2%a4

ಮನದ ಮಾತು

ಸಂತೋಷವಾದಾಗ ಮಾತ್ರ
ಮನ ನಾ ಹೇಳಿದಂತೆ ಕುಣಿಯುತ್ತದೆ.

ರಂಗಸ್ಥಳದ ಅಗತ್ಯ ಇಲ್ಲವೇ ಇಲ್ಲ
ಪೂರ್ವ ತಯಾರಿ ಬೇಕಾಗೇ ಇಲ್ಲ
ಕಣ್ಣು ಹೊಳಪಾಗಿ
ಮನ ಹಗುರಾಗಿ
ಹೃದಯ ನವಿಲಂತೆ ಹಾರಾಡಿ
ಇಕ್ಕುವ ಹೆಜ್ಜೆ
ಒಂದಿನಿತೂ ತಾಳ ತಪ್ಪದೆ
ತಕಧಿಮಿ ತಕಧಿಮಿ ಕುಣಿವಾಗಾ
ಏನ್ ಕೇಳ್ತೀರಾ ಅದರ ಅಂದಾವಾ^^^^!

ಹೀಗೆಯೇ ಇರು
ಬೇಡಾ ಅಂದವರಾರು?

ಮನ ಎಷ್ಟು ಅಲವತ್ತುಕೊಂಡರೂ
ಆಗಾಗ ಕುಟುಕಿ ಬುದ್ಧಿ ಹೇಳಿದರೂ
ನಾನ್ಯಾಕೆ ಊರಿಗಿಲ್ಲದ ಉಸಾಪರಿ ಮೈಮೇಲೆ ಎಳಕೊಂಡು
ಮನದ ಮಾತಿಗೆ ಬೆಲೆನೇ ಕೊಡದೆ
ಅವಮಾನ ಮಾಡ್ತಿದ್ದೀನಲ್ಲಾ
ಅದರ ಸಂತೋಷ ಪದೇ ಪದೇ ಚಿವುಟ್ತೀನಲ್ಲಾ
ತಪ್ಪೆಂದೆನಿಸಿದರೂ ಮತ್ತದೆ ಪುನರಾವರ್ತನೆ!

ಆಗೆಲ್ಲ
ಸಹಿಸಲಾರದೆ ಸೆಟಗೊಂಡು ಅನ್ನುತ್ತೆ
ಹೋಗಿ ಹೋಗಿ ನಿನಗೆ ಬುದ್ಧಿ ಹೇಳ್ತೀನಲ್ಲಾ
ನಿನ್ನ ಕರ್ಮ
ಅನುಭವಿಸು!

29-8-2017. 2.26pm