ಅವಳು (ಸಣ್ಣ ಕಥೆ)

image

ಧೋ ಎಂದು ದುಮ್ಮಿಕ್ಕುತ್ತಿರುವ ಮಳೆ. ನೆನೆದು ಕೊಂಡೇ ಮುಂದೆ ಮುಂದೆ ಹೋಗುತ್ತಿದ್ದಾಳೆ. ರಸ್ತೆಯಲ್ಲಿ ನೀರು ಒಳಚರಂಡಿ ಸೇರದೆ ಸಾಗರವಾಗಿದೆ. ಎಲ್ಲಿ ಕಾಲು ಇಟ್ಟರೆ ಏನಾಗಬಹುದೆಂಬ ಆತಂಕವೂ ಇಲ್ಲದೆ. ಮನಸ್ಸೆಲ್ಲ ದುಗುಡದಿಂದ ತುಂಬಿ ಹೋಗಿದೆ. ದುಃಖ ಉಮ್ಮಳಿಸಿ ಹರಿಯುವ ಕಣ್ಣೀರು ಮಳೆಯ ಹನಿಗಳೊಡನೆ ಬೆರೆತು ಉಪ್ಪಿನ ರುಚಿ ಕಳೆದುಕೊಂಡು ನೀರಲ್ಲಿ ನೀರಾಗಿದೆ, ಯಾರೂ ಗುರುತಿಸಲಾಗದಷ್ಟು.

ಏನ್ರೀ ಈ ಮಳೆ ಅಷ್ಟೊಂದು ಪ್ರೀತಿನಾ? ಪಕ್ಕದಲ್ಲಿ ಮಳೆಗೆ ಮರೆಯಾಗಿ ನಿಂತವನ ವ್ಯಂಗದ ನಗೆ. ಕಿವಿಗೆ ಬಿದ್ದ ಕ್ಷಣ ದುರುಗುಟ್ಟಿ ನೋಡಿ ಹಾಗೆ ನಡೆದಿದೆ ನಡುಗೆ ಸಂಜೆ ಕತ್ತಲಲ್ಲಿ ಒಂಟಿ ಪಿಶಾಚಿಯಂತೆ!

ಒಳಗೊಳಗೆ ವಿಶಾದದ ನಗೆ, ಅಲ್ಲಾ ಇಷ್ಟೊಂದು ಗಡಿಬಿಡಿ ಯಾಕೆ ನನಗೆ? ಯಾರಿದಾರೆ ಮನೆಯಲ್ಲಿ? ಮನೆಯೊಂದು ಹಕ್ಕಿಯ ಗೂಡು. ನಾನು, ಕಾಣದ ನನ್ನವನು. ಮನದೊಳಗಿನ ಮಾತು ಯಾರಿಗೂ ಹೇಳದೆ ಅಂಜಿಕೊಂಡೇ ಅದ೯ ಜೀವನ ಕಳೆದೆ ಹೋಯಿತಲ್ಲ, ಹೀಗೆ ತನ್ನೊಳಗೆ ಮಾತಾಡಿಕೊಂಡು ಹೋಗುವಾಗ ದಾರಿ ಸವೆದಿದ್ದೇ ಗೊತ್ತಾಗಲಿಲ್ಲ. ಸುರಿವ ನೀರು ಮುಖ ಕೈಯಲ್ಲಿ ಒರೆಸುತ್ತ ಕತ್ತೆತ್ತಿ ನೋಡಿದರೆ ಮನೆಯ ಬಾಗಿಲಲ್ಲೇ ನಿಂತಿರೋದು ಗಮನಕ್ಕೆ ಬಂದು ತೊಪ್ಪೆಯಾದ ವ್ಯಾನಿಟಿ ಬ್ಯಾಗು ತಡಕಾಡಿ ನಡುಗುವ ಕೈಗಳಿಂದ ಬಾಗಿಲ ಬೀಗ ತೆಗೆದಾಗಲೇ ಗೊತ್ತಾಗಿದ್ದು ಮೈಯ್ಯೆಲ್ಲ ಸುಡುತ್ತಿದೆ. ಚಳಿಯ ಹೊದಿಕೆ ಹೊದ್ದ ಮೈ ಇಳಿಯುವ ನೀರನ್ನೂ ಲೆಕ್ಕಿಸದೆ ದೊಪ್ಪನೆ ಹಾಸಿಗೆಯಲ್ಲಿ ಬಿದ್ದಿರುವುದಷ್ಟೆ ನೆನಪು.

ಅದೊಂದು ಸುಂದರ ದಟ್ಟ ಕಾಡು. ಹಕ್ಕಿಗಳ ಕಲರವದ ಮದ್ಯೆ ಅಲ್ಲೇಲ್ಲೊ ನೀರಿನ ತೊರೆ ಹರಿಯುವ ಸದ್ದು. ಉದಯಿಸುವ ಸೂಯ೯ ಕಾನನದ ತುಂಬ ಬ್ಯಾಟರಿ ಬಿಟ್ಟಂತೆ ಕಾಣುವ ದೃಷ್ಯ. ಮರಗಳ ಸಂದಿಯಿಂದ ಸೀಳಿಕೊಂಡು ಬರುವ ಕಿರಣ ಕಂಡು ಮೂಕ ವಿಸ್ಮಿತಳಾಗಿ ನೋಡುತ್ತಲೆ ಇದ್ದಾಳೆ ಅದೆಷ್ಟೋ ಹೊತ್ತು‌.

ಏನೊ ಸರಪರ ಸದ್ದು, ಯಾರೊ ಬರುತ್ತಿರುವ ಹಾಗಿದೆ. ಏನದು ಈ ಕಾಡಲ್ಲಿ? ಯಾವುದಾದರೂ ಕ್ರೂರ ಪ್ರಾಣಿ ಬರುತ್ತಿರಬಹುದೆ, ಹೆದರಿಕೆಯಿಂದ ಮೈ ಬೆವರಲು ಶುರುವಾಗಿದೆ, ಮೈ ಮುದುಡಿಕೊಂಡು ಅಡಗಿಕೊಳ್ಳುವ ಆತುರ. ಅಷ್ಟರಲ್ಲಿ ಯಾರೊ ಹೆಗಲ ಮೇಲೆ ಕೈ ಇಟ್ಟ ಅನುಭವ. ತಿರುಗಿ ನೋಡುತ್ತಾಳೆ. ಅವನೊ ಅವಳ ಸೌಂದರ್ಯ ಹೀರಿಕೊಳ್ಳುತ್ತಿದ್ದಾನೆ ಕಣ್ಣು ಮಿಟುಕಿಸದೆ ನಖಶಿಖಾಂತ!

ಒಂದು ಕ್ಷಣ ಅಧೀರಳಾಗುತ್ತಾಳೆ. ಇದು ಕನಸೊ ನನಸೊ! ಬಾವನೆಗಳ ಮಹಾಪೂರ ಖುಷಿ, ನಗು,ಆಶ್ಚಯ೯ ಒಮ್ಮೆಲೇ ಸಮರೋಪಾದಿಯಲ್ಲಿ ಮುನ್ನುಗ್ಗಿ ಮೂಕ ವಿಸ್ಮಿತಳಾಗುತ್ತಾಳೆ. ಮುಂದೆ ನಿಂತಿರುವ ತನ್ನವನ ಕಂಡು. ಅವಳಿಗೆ ಗೊಂದಲ ನಾ ಹೇಗೆ ಗುರುತು ಹಿಡಿದೆ ಇವನು ನನ್ನವನು. ಇದುವರೆಗು ನೋಡೇ ಇಲ್ಲ. ಮನಸ್ಸಿನ ಮಾತು, ಮನದೊಳಗಿನ ರೂಪ ,ಚಿತ್ತದಲ್ಲಿಯ ಯೋಚನೆಗೆ ಕಡಿವಾಣ ಹಾಕಿತ್ತು ಅವನ ಮಾತು.

ಹೇಗಿದ್ದಿಯಾ, ಯಾವಾಗ ಬಂದೆ, ಒಬ್ಬಳೆ ಏನು ಮಾಡ್ತಿದಿಯಾ ಬಾ ನಮ್ಮನೆಗೆ ಹೋಗೋಣ ಇಲ್ಲೆ ಹತ್ತಿರದಲ್ಲಿದೆ ನಡಿ ಅಂದಾಗಲೆ ಅವಳು ಬಾವನೆಗಳಿಂದ ಹೊರಗೆ ಬರುತ್ತಾಳೆ‌.
ಏನೂ ಮಾತಾಡದೆ ಅವನನ್ನು ಹಿಂಬಾಲಿಸುತ್ತಾಳೆ, ಅವನ ಮನೆ ಹೊಸಿಲು ತುಳಿಯುವಾಗ ಬಲಗಾಲು ಇಟ್ಟು ಒಳಗೆ ಹೋಗಬೇಕು, ಇದೇ ನನ್ನ ಮನೆ, ಇಲ್ಲೆ ನನ್ನ ಬದುಕು ಮುಂದುವರಿಯೋದು ಅನ್ನುವ ತನ್ನ ಯೋಚನೆಯಲ್ಲಿ ಮುಳುಗಿ.

ಅಮ್ಮ ನೋಡಿಲ್ಲಿ ಯಾರು ಬಂದಿದಾರೆ? ಬಿಸಿ ಬಿಸಿ ಎರಡು ಕಪ್ ಟೀ ಕೊಡಮ್ಮ, ಯಾಕೊ ಇವತ್ತು ಸ್ವಲ್ಪ ಚಳಿ ಜಾಸ್ತಿ ಇದೆ.

ಹೂ ಕಣೊ ತಂದೆ. ಇವಳೆಲ್ಲಿ ಸಿಕ್ಕಿದಳು ನಿನಗೆ? ಎಷ್ಟು ಚೆನ್ನಾಗಿ ಆಗಿದಾಳೊ, ನಾನು ನೋಡಿ ಸುಮಾರು ವಷ೯ ಆಯಿತು. ಕುಡಿಯಮ್ಮ ಟೀ. ಹಾಗೆ ಕೈ ಕಾಲು ತೊಳೆದು ತಿಂಡಿಗೆ ಬನ್ನಿ, ದೋಸೆ ಮಾಡಿದಿನಿ.

ಮನಸ್ಸು ಮಂಡಿಗೆ ತಿನ್ನುತ್ತಿತ್ತು ಆಗಲೆ. ಈ ಮನೆ ಸೇರಿ ನಾನು ಹೀಗೆ ಬಂದವರಿಗೆ ಉಪಚಾರ ಮಾಡುತ್ತೀನಿ ಅಲ್ವಾ? ಎರಡು ಮೂರು ದಿನ ರಜೆ ಇದೆ ಇಲ್ಲೆ ಇದ್ದು ಹೋಗು ಅನ್ನುವ ಅಮ್ಮನ ಕಟ್ಟಪ್ಪಣೆಯಲ್ಲಿ ಮೂರು ದಿನ ಕಳೆದಿದ್ದೆ ಗೊತ್ತಾಗಲಿಲ್ಲ. ಅವನೊಂದಿಗೆ ಕೂತು ಮಾತಾಡಬೇಕೆನ್ನುವ ಹಂಬಲ ಚಿತ್ತದಲ್ಲಿ ಎಡತಾಕುತ್ತಲೇ ಇತ್ತು. ಇನ್ನೂ ಏನೇನೊ ಹೇಳಬೇಕೆನ್ನುವ ಮಾತುಗಳು ಮನಸ್ಸು ಸಮಯಕ್ಕಾಗಿ ಕಾಯುತ್ತಿತ್ತು. ಒಬ್ಬನೆ ಕುಳಿತಿರುವ ಸಮಯ ನೋಡಿ ಹತ್ತಿರ ಹೋದಾಗ ಏನು? ಏನೊ ಹೇಳಬೇಕು ಅಂತ ಬಂದ ಹಾಗಿದೆ? ಏನು ಹೇಳು. ನೀ ಏನೂ ಹೇಳದಿದ್ದರೂ ನನಗೆಲ್ಲ ಅಥ೯ಆಗುತ್ತಿದೆ. ಆ ಟೈಮು ಬರಲಿ, ನಾ ಬಾ ಅಂದ ತಕ್ಷಣ ನನ್ನ ಜೊತೆ ಬರಲು ರೆಡಿ ಇರಬೇಕು, ನಿಮ್ಮನೆಯವರು ಒಪ್ಪಲಿ, ಬಿಡಲಿ. ಹೇಳಿದ್ದು ಅಥ೯ ಆಯಿತಾ? ಮನಸ್ಸು ಜಿಂಕೆ ಮರಿ ಆಗಿತ್ತು, ಇನ್ನೇನು ಬೇಕು ನನಗೆ ಅನ್ನೊ ಖುಷಿಯಿಂದ.

ಹೊರಡುವ ಕ್ಷಣ ಹತ್ತಿರ ಬಂತು‌ ಮನೆಯ ಮುಂದೆ ಅಟೊ ನಿಂತ ಶಬ್ದ. ಪುಟ್ಟ ಮಗು ಅಪ್ಪ ಎಂದು ಓಡಿ ಬಂದು ತಬ್ಬಿಕೊಂಡಾಗ, ಬಳಿಯಲ್ಲಿ ಅವನನ್ನು ರೀ ಸ್ವಲ್ಪ ಬರ್ತೀರಾ ಲಗೇಜು ಇಳಿಸೋಕೆ ಆಗುತ್ತಿಲ್ಲ ಎಂಬ ದ್ವನಿ. ದಿಗಭ್ರಮೆಯಿಂದ ನೋಡುತ್ತಿದ್ದಾಳೆ!

ಒಂದರೆ ಕ್ಷಣ ಪಕ್ಕದ ಮನೆ ನಾಯಿ ಜೋರಾಗಿ ಕೂಗಿದ ಸದ್ದು, ಎಚ್ಚರ. ಕಣ್ಣು ಬಿಟ್ಟು ನೋಡುತ್ತಾಳೆ. ಅರೆ ನಾ ನನ್ನ ಮನೆಯಲ್ಲೇ ಇದ್ದೇನೆ. ಮೈಯ್ಯೆಲ್ಲ ಒಂದು ಸಾರಿ ಜಾಡಿಸಿ,ಲಟ್ಟಿಗೆ ಮುರಿದು ಓ! ನಾ ಇದೂವರೆಗೂ ಕಂಡಿದ್ದು ಕನಸು. ಮುಖ ಪೆಚ್ಚಾಗುತ್ತದೆ. ಆದರೆ ಅಳು ಬರುತ್ತಿಲ್ಲ. ಮಳೆಯಲ್ಲಿ ಮಳೆಯಾಗಿ ಖಾಲಿ ಆಗಿರಬೇಕು. ಹೃದಯದಲ್ಲಿಯ ನೋವಿನ ಕಿಡಿ ಆರಿಸಲಾಗದೆ.

ಮನಸ್ಸಿಗೆ ನಿರಾಸೆ, ಆದರೆ ಕನಸಲ್ಲಾದರೂ ತನ್ನವನ ಕಂಡೆನಲ್ಲ ಅನ್ನುವ ಏನೊ ಒಂದು ರೀತಿ ಸಮಾಧಾನ. ತನಗೆ ಸಿಗದ ಸಂಸಾರ ಅವನಾದರೂ ಅನುಭವಿಸುತ್ತಿರುವನಲ್ಲ, ಸಾಕು. ಈ ನೆನಪುಗಳೆ ತಾನು ಒಂಟಿ ಅಲ್ಲ, ಮರೆಯಲ್ಲಿ ಅವನ ಹಾಜರಾತಿ ಅವಳ ಬದುಕಿಗೆ ನೆಮ್ಮದಿ.

ಮತ್ತದೆ ಕೆಲಸ, ಅದೆ ಆಫೀಸು ಫೈಲುಗಳ ನಡುವೆ. ಆದರೆ ಮನಸ್ಸು ಖುಷಿಯಾಗಿದೆ. ಮೊದಲಿನ ಬೇಸರ ಇಲ್ಲ, ಅಳು ಇಲ್ಲ. ಸಾಗಿಸುತ್ತಿದ್ದಾಳೆ ಜೀವನ ಮನಸ್ಸಿನ ಜೊತೆ ಮಾತಾಡಿಕೊಂಡು, ಕನಸನ್ನು ನೆನಪಿಸಿಕೊಂಡು, ಕಾಡಲ್ಲಿ ಕಂಡವನ ರೂಪ ನೆನಪಿಸಿಕೊಂಡು. ಪಾಪ! ಇದ್ದುದರಲ್ಲೆ ಸಂತೃಪ್ತಿ ಪಡುವ ನಡೆ ಅವಳದು.

5-2-2016.       3.29pm to 5.10pm
(ಇದು ನಾನು ಬರೆದ ಮೊದಲ ಕಥೆ)
(Published in Sampada net.
ಆಯ್ಕೆಯಾದ ಬರಹ ಸಂಪದದಲ್ಲಿ)

ಭಾಗ೯ವನಿಗೆ ನಮನ

ಉದಯಿಸುವ ಸೂಯ೯
ಹೊಂಗಿರಣ ಬೀರಿ
ಕತ್ತಲೆಯ ಕೋಟೆಯ
ಬೆಳಕಾಗಿಸುತಿಹನು‌.

ಶುಭೋದಯದ ಗಾನ
ನನ್ನಿಂದ ಹಾಡಿಸಿ
ದಿನದ ಗಳಿಗೆಗಳೆಲ್ಲ
ಸರ್ವರಿಗೂ ಶುಭವಾಗಲೆಂದು.

ಹಚ್ಚು ನೀ ಜ್ಯೋತಿಯನು
ನಿಸ್ವಾಥ೯ದಿಂದ
ಬತ್ತಲಾರದು ಬದುಕು
ಹಸಿರಾಗಿರುವುದೆಂದು.

ಈ ಹೊಸ ವಷ೯ದ
ಬರುವಿಕೆಯೊಂದಿಗೆ
ಹೊಸತನವು ಮೇಳೈಸಿ
ಕಳೆಯಲಿ ಕಾಲವೆಲ್ಲ.

ಬಾ ನನ್ನೊಳಗಿನ ಕನಸುಗಾರ
ಭಾಗ೯ವನಿಗೆ ನಮಿಸುವ ಒಂದಾಗಿ
ಭ್ರಾಹ್ಮೀ ಮುಹೂರ್ತದಲ್ಲಿ
ಹಳೆ ವಷ೯ಕ್ಕೆ ವಿದಾಯ ಹೇಳಿ.

31-12-2015 6.23pm.
(Published in Vismayanagari .com.)

ಸೂಯ೯-ಕೃಷ್ಣ-ಗಣಪತಿ-ಮನಸ್ಸು

ಇದೆಲ್ಲಿ ಒಂದಕ್ಕೊಂದು ಹೊಂದಾಣಿಕೆ ಇಲ್ವಲ್ಲ, ಯಾಕೆ ನ್ನನ್ನಲ್ಲಿ ಇಷ್ಟೊಂದು ಕಾಡುತ್ತಿವೆ ಎಂದು ಯಾವಾಗಲೂ ಅನ್ನಿಸುತ್ತಿತ್ತು.  ಆದರೆ ಇತ್ತೀಚೆಗೆ ಎಲ್ಲ ಸ್ಪಷ್ಟವಾಗಿ ಏನೊ ಒಂದು ರೀತಿ ಸಮಾಧಾನ. ಮುಂಜಾನೆಯ ಸೂಯ೯ ಮೂಡುವಾಗ ಸುತ್ತ ಕಿರಣಗಳ ಪ್ರಭಾವಳಿ ಕೃಷ್ಣನ ವಿಶ್ವ ರೂಪ ದಶ೯ನದ ನೆನಪಿಸುತ್ತದೆ.  ಖಗೋಳ ವಿಜ್ಞಾನ ಏನೇ ಹೇಳಲಿ ಕಣ್ಣಿಗೆ ಕಾಣುವ ದೇವರು ಸೂಯ೯,ಅವನೇ ದೇವರೆಂದು ನಂಬಿ ಕೃಷ್ಣನನ್ನು ಕಾಣುತ್ತೇನೆ. ಯಾವತ್ತು ಈ ರೀತಿ ನನಗನ್ನಿಸಿತೊ ಅಂದಿನಿಂದ ಬೆಳಗಿನ ಮೊದಲ ಕೆಲಸ ದೀಪ ಹಚ್ಚಿ ಭಗವತ್ಗೀತೆಯ 12ನೇ ಅಧ್ಯಾಯ ಹೇಳಿ ನಮಸ್ಕಾರ ಮಾಡುವುದು. ಇನ್ನು ಗಣಪತಿ ಚಿಕ್ಕಂದಿನಿಂದ ಪಾಲಕರ ಅಣತಿಯಂತೆ ಪೂಜಿಸುವ ರೂಢಿಯಲ್ಲಿ ಬಂದ ಪಾಠ. ಬಿಡೋಕಾಗಲ್ಲ. ವಿಘ್ನ ನಿವಾರಕ.

ದೇಹವೇ ದೇಗುಲ, ಇಲ್ಲಿ ಕಾಣದೇ ಇರುವ ದೇವರು ಮನಸ್ಸು.  ಹೌದು ಎಷ್ಟು ಅದ್ಭುತವಾದ ಶಕ್ತಿ ಇದಕ್ಕೆ! ಇದರ ಅಣತಿ ಎಲ್ಲದಕ್ಕೂ ಬೇಕೇ ಬೇಕು. ಮನುಷ್ಯನ ಮೂಲಾಧಾರವೇ ಮನಸ್ಸು. ಅದಕ್ಕೆ ಮನಸ್ಸನ್ನು ದೇವರೆಂದು ನಂಬಿದಿನಿ. ನನ್ನೊಳಗಿನ ಕನಸುಗಾರ. ಕೈ ಹಿಡಿದು ನಡೆಸುವ willpower ಅವನೆ.

ಬರೆದೆ ಹೊಸ ವಷ೯ದ ಹೊಸ್ತಿಲಲ್ಲಿ ಕಾಣುವ ದೇವರು ಸೂಯ೯ನಿಗೊಂದು ನನ್ನ ಕವನದಲ್ಲಿ ನಮಸ್ಕಾರ!
31-12-2016 5.25pm

ನೆನಪಾದ ಕನಸುಗಾರ


ಈ ದಿನ ಪ್ರಸಿದ್ಧ ಸಾಹಿತಿಗಳಾದ ಶ್ರೀ ಎನ.ಎಸ್. ಲಕ್ಷೀನಾರಾಯಣ ಭಟ್ಟ ಅವರ “ದೀಪಿಕಾ ಮತ್ತು ಬಾರೋ ವಸಂತ” ಪುಸ್ತಕದಲ್ಲಿಯ ಕವನಗಳನ್ನು ಓದುತ್ತಿದ್ದೆ. (ಈ ಪುಸ್ತಕವನ್ನು ಎಂ.ಇ.ಎಸ್. ಕಾಲೇಜು,ಸಿಸಿ೯ಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ದಿನಾಂಕ 14-11-1981ರಲ್ಲಿ ಖರೀದಿಸಿದ್ದು.) ಇದರಲ್ಲಿಯ ಒಂದು ಕವನ ನನ್ನನ್ನು ತುಂಬಾ ಹಿಂದೆ ಕರೆದುಕೊಂಡು ಹೋಯಿತು. ‘ ಎಂಥಾ ಹದವಿತ್ತೇ? ಹರಯಕೆ ಏನೋ ಮುದವಿತ್ತೇ’.ನನ್ನೊಳಗಿನ ಮನಸ್ಸು(ಕನಸುಗಾರ ಅಂತ ಕರಿತಿನಿ)ನೆನಪಿಗೆ ಬಂದು ಈ ಕವನ ಬರೆದೆ.

ನೆನಪು

ಪದಬಂದ ಬಿಡಿಸುವಾಗ
ಮುತ್ತಿಕ್ಕಿದ ನಿನ್ನ ನೆನಪು
ಒಂದು ಮನೆಯಲ್ಲಿ
ನಿನ್ನ ಹೆಸರನಿಂದ
ಪೂತಿ೯ಗೊಂಡಾಗ
ನಗು ಬಂತು
ಎಲ್ಲೆಲ್ಲಿ ಮುತ್ತಿಕೊಳ್ಳುವೆಯಲ್ಲ!

ಬಿಡದೆ ಚಿತ್ತವ ಕಾಡಿ
ಚಿತ್ತಾರ ಬಿಡಿಸುವ ನೀನು
ಮತ್ತಲ್ಲೆ ಬೇರು ಬಿಟ್ಟು
ಕತ್ತಿಗೆ ಜೋತು ಬಿದ್ದು
ಗಳಿಗೆಗೊಮ್ಮೆ ನೆನಪಿಸಿ
ನಿನ್ನಿರುವ ಖಾತರಿ
ಮಾಡಿಕೊಳ್ಳುವೆಯಲ್ಲ!

ಮರೆತುಬಿಡುವೆನೆಂಬ
ಸಂಶಯದ ಬೀಜ
ಮೊಳಕೆಯೊಡೆಯಲು
ಬಿಡಬೇಡ ಗೆಳೆಯ
ನೀ ಮರೆತರೂ
ನಾ ಹೇಗೆ ಮರೆಯಲಿ
ನಾನೇ ನೀನಾಗಿರುವೆಯಲ್ಲ!

ಅಡಗಿಕೊಂಡಿಹೆ ನೀನು
ನಿನ್ನಂತರಂಗದರಮನೆಯಲ್ಲಿ
ಸುತ್ತೆಲ್ಲ ಭದ್ರ ಕೋಟೆಯ ಕಟ್ಟಿ
ಅದೇನೊ ಶಾಂತಿ ಮಂತ್ರವನೂದಿ
ನಗಾರಿ ಭಾರಿಸುತಿಹುದು
ಹೃದಾಯಂತರದೊಳಗಿಂದ
ನನ್ನ ಕನಸುಗಾರ….ಎಲ್ಲಿ ಎಲ್ಲಿ ಎಲ್ಲಿ!

ಸಾಕು ಮಾಡೋ
ಊರಗಲ ಒಡ್ಡೋಲಗ ಬಾರಿಸಿ
ಬಾಜಾ ಭಜಂತ್ರಿಯಲ್ಲಿ
ಕರೆಯಿಸಿಕೊಳ್ಳಬೇಕೆ ನಿನ್ನ
ಎಲ್ಲಿರುವೆ ಹೇಳು ನೀನು
ಯಾವ ಕಾನನ,ಊರು ಸುತ್ತುತಿರುವೆ
ನಗು ಬೀರು ನೀನೊಮ್ಮೆ ನನ್ನ ಕನಸಿನಲ್ಲಿ!

ಸಂಗೀತಾ ಕಲ್ಮನೆ
25-12-2015. 2.33pm

ಬದುಕಿನ ಸತ್ಯ

ದಿನಗಳು ಹೇಗೆ ಕಳೆಯುತ್ತಿದೆ ಅನ್ನುವುದು ಗೊತ್ತಾಗೋದೆ ಇಲ್ಲ.  ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ.  ಬದುಕು ನಿಂತ ನೀರು.  ಒಮ್ಮೊಮ್ಮೆ  ಉತ್ಸಾಹ ಕಳೆದುಕೊಂಡು ಜಡತ್ವ ಮನೆ ಮಾಡುತ್ತದೆ.  ಯಾವುದು ಬೇಡ.  ಸುಮ್ಮನೆ ಕುಳಿತು ಮನಸ್ಸು ಯೋಚನೆಯಲ್ಲಿ ಮಗ್ನವಾಗಿಬಿಡುತ್ತದೆ.  ಯಾರಾದರೂ ಆತ್ಮೀಯರಾದರೂ ಸಿಕ್ಕಿದರೆ ಸ್ವಲ್ಪ ಮನಸ್ಸು ಹಗುರವಾಗುತ್ತಿತ್ತೇನೊ ಅನ್ನಿಸಿ ಕಣ್ಣು ಮಂಜಾಗುತ್ತದೆ.  ಈ ಒಂದು ಮನಸ್ಥಿತಿಯಲ್ಲಿ ಬರೆದ ಕವನ.

ಏಕಾಂಗಿ

ಮಾಡಲು ಬೇಕಾದಷ್ಟು
ಕೆಲಸ ಇದೆ
ಮಾಡಲು ಬೇಕಾದಷ್ಟು
ಸಮಯವೂ ಇದೆ
ಮಾಡಲು ಯಾಕೊ
ಮನಸ್ಸು ಬರುತ್ತಿಲ್ಲ
ಮನಸ್ಸು ತಟಸ್ಥವಾಗಿ
ಮಲಗಿಬಿಟ್ಟಿದೆ
ಮಾಡುವ ಕೆಲಸ ಮರೆತು
ಗೊಂದಲದ ಗೂಡಾಗಿ.

ಸಂಗೀತಾ ಕಲ್ಮನೆ
11-12-2015  9.07pm.

ನನ್ನ ಬರವಣಿಗೆ

ಈ ಬರವಣಿಗೆಯಲ್ಲಿ ನನಗೆ ಆಸಕ್ತಿ ಶುರುವಾಗಿರೋದು 1976ರ ಕೊನೆಯಲ್ಲಿ. ಆಗ ಬರವಣಿಗೆ ಬಗ್ಗೆ ಗಂದಗಾಳ ಗೊತ್ತಿಲ್ಲ. ಹಳಿಯಾಳದ ಇನ್ನೊಂದು ಸೋದರ ಮಾವನ ಮನೆಯಲ್ಲಿ ಸ್ವಲ್ಪ ದಿನ ಇದ್ದೆ. ಮಾವ ಸಾಹಿತಿ. ಅವರ ಮನೆಯಲ್ಲಿ ಸಾಹಿತಿ ಬೀಚಿ ಮತ್ತು ಜಯಂತ ಕಾಯ್ಕಣಿಯವರ ದಶ೯ನ ಭಾಗ್ಯ. ಸಾಹಿತ್ಯ ವಿಚಾರಗಳು ಪುಸ್ತಕದ ನಂಟು ಗೊತ್ತಿಲ್ಲದಂತೆ ಅಂಟಿಕೊಂಡಿತು‌. ಹನಿಗವನ ಬರೆದೆ ಹಾಗೆ ಮುಚ್ಚಿಟ್ಟೆ ಒಂದು ಪುಸ್ತಕದ ಸಂದಿಯಲ್ಲಿ. ಅತ್ತೆಗೆ ಸಿಕ್ಕಿತು. ಅದೆ ಇದು.

ಚಿಂತೆ

ವಿಶಾಲವಾದ ಸಮುದ್ರ
ದಂಡೆಗೆ ಆಗಾಗ
ಬಂದಪ್ಪಳಿಸುವ
ನೊರೆ-ನೊರೆ
ಚಿತ್ರ-ವಿಚಿತ್ರ
ಅಲೆಗಳು.

ಪ್ರೇಮ

ಹಸಿದಾಗ ತಾಯಿ
ಕರೆ ಕರೆದು ಕೊಡುವ
ಕ್ಷಣಿಕ ಹಸಿವನಿಂಗಿಸುವ
ಹಲ್ಲಿಗೆ ಮತ್ತು ಭರಿಸುವ
ಸಿಹಿ ಖಾರ ಬೆರೆತ
ಒಣ ಕುರುಕುಲು ತಿಂಡಿ‌
(ಪ್ರಕಟ – ಮೈತ್ರಿ ಮಾಸ ಪತ್ರಿಕೆ 1981)
.
ಸಂಗೀತಾ ಕಲ್ಮನೆ
8.49pm

ಶೋನು ಮರಿ


ಅಪರೂಪದಲ್ಲಿ ಅಪರೂಪದ ಮರಿ ನಾನು ಸಾಕಿದ ಶೋನು ಮರಿ.  25-3-2010ರ ಸುಂದರ ಮುಂಜಾನೆ ಮನೆ ಹಿಂದಿನ ಖಾಲಿ ಸೈಟಲ್ಲಿ ಪುಟ್ಟ ನಾಯಿಮರಿ ಕುಯ್ಯಿ, ಕಯ್ಯಿ ಶಬ್ದ ಕೇಳಿ ಪಾಪ ಅನಿಸಿ ನೋಡಲು ಹತ್ತಿರ ಹೋದರೆ ಒಂದು ಸಿಮೆಂಟ ಬಾನಿಯಿಂದ ಹೊರಬರಲಾರದೆ ಕೂಗುತ್ತಿತ್ತು. ಸರಿ ನಾನು ಮಗಳು ಇಬ್ಬರೂ ಮುದ್ದಾದ ಮರಿ ಎತ್ತಿಕೊಂಡು ಬಂದು ಸ್ನಾನ ಉಪಚಾರ ಕಾರಣ ಮೂತಿ ಮೇಲೊಂದು ಗಾಯ, ಸಣ್ಣ ಹುಳುಗಳು. ಡಾಕ್ಟರ್ ಭೇಟಿ ಇಂಜಕ್ಷನ ಔಷಧಿ ಎಲ್ಲ ಮಾಡಿ ಅಂತೂ ನನಗೂ ಮೂರು ದಿನ ರಾತ್ರಿ ಹಗಲೂ ನಿದ್ದೆನೂ ಇಲ್ಲದೆ ಒಂದು ಹಂತಕ್ಕೆ ಬಂದಿತು ಅದರ ನಮ್ಮ ಬಾಂದವ್ಯ.

ಈಗ ನಮ್ಮ ಮನೆಯ ಒಂದು ಸದಸ್ಯನಾಗಿ ನನ್ನ ಒಂಟಿತನವನ್ನು ದೂರ ಮಾಡಿದ, ಸದಾ ನನ್ನ ಜೊತೆಗೆ ಮಾತಾಕೊಂಡಿರುವ(ಅದರದೆ ಭಾಷೆ) ನನ್ನ friend.  ಬೆಳಗಿನ ವಾಕಿಂಗ ಹೊರಟರೆ ಪಾಪ ಅದೇನೊ.ಖುಷಿ.  ಪಾರ್ಕ್ ಒಳಗಡೆ ಬಿಡೊಲ್ಲ ಹತ್ತಿರದಲ್ಲೆ ಇರುವ ಯೋಗ ಕ್ಲಾಸ ಕಂಪೌಂಡನಲ್ಲಿ ಸುಮ್ಮನೆ ಕೂತಿರುತ್ತೆ ನನ್ನ ವಾಕಿಂಗ ಮುಗಿಯೋವರೆಗು.  ಎರಡು ದಿನ ಗಲಾಟೆ ಮಾಡಿ ಆಮೇಲೆ ಗೊತ್ತಾಯಿತು  ಅಮ್ಮ ಎಲ್ಲೂ ಹೋಗಲ್ಲ ನನ್ನ ಬಿಟ್ಟು, ಎಂಥ ಬುದ್ಧಿ!  ಅದೆಷ್ಟು ಬುದ್ಧಿವಂತ ನಮ್ಮ ಶೋನು ಮರಿ!
God bless you!