ಬದುಕಿನ ಸತ್ಯ

ದಿನಗಳು ಹೇಗೆ ಕಳೆಯುತ್ತಿದೆ ಅನ್ನುವುದು ಗೊತ್ತಾಗೋದೆ ಇಲ್ಲ.  ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ.  ಬದುಕು ನಿಂತ ನೀರು.  ಒಮ್ಮೊಮ್ಮೆ  ಉತ್ಸಾಹ ಕಳೆದುಕೊಂಡು ಜಡತ್ವ ಮನೆ ಮಾಡುತ್ತದೆ.  ಯಾವುದು ಬೇಡ.  ಸುಮ್ಮನೆ ಕುಳಿತು ಮನಸ್ಸು ಯೋಚನೆಯಲ್ಲಿ ಮಗ್ನವಾಗಿಬಿಡುತ್ತದೆ.  ಯಾರಾದರೂ ಆತ್ಮೀಯರಾದರೂ ಸಿಕ್ಕಿದರೆ ಸ್ವಲ್ಪ ಮನಸ್ಸು ಹಗುರವಾಗುತ್ತಿತ್ತೇನೊ ಅನ್ನಿಸಿ ಕಣ್ಣು ಮಂಜಾಗುತ್ತದೆ.  ಈ ಒಂದು ಮನಸ್ಥಿತಿಯಲ್ಲಿ ಬರೆದ ಕವನ.

ಏಕಾಂಗಿ

ಮಾಡಲು ಬೇಕಾದಷ್ಟು
ಕೆಲಸ ಇದೆ
ಮಾಡಲು ಬೇಕಾದಷ್ಟು
ಸಮಯವೂ ಇದೆ
ಮಾಡಲು ಯಾಕೊ
ಮನಸ್ಸು ಬರುತ್ತಿಲ್ಲ
ಮನಸ್ಸು ತಟಸ್ಥವಾಗಿ
ಮಲಗಿಬಿಟ್ಟಿದೆ
ಮಾಡುವ ಕೆಲಸ ಮರೆತು
ಗೊಂದಲದ ಗೂಡಾಗಿ.

ಸಂಗೀತಾ ಕಲ್ಮನೆ
11-12-2015  9.07pm.

ನನ್ನ ಬರವಣಿಗೆ

ಈ ಬರವಣಿಗೆಯಲ್ಲಿ ನನಗೆ ಆಸಕ್ತಿ ಶುರುವಾಗಿರೋದು 1976ರ ಕೊನೆಯಲ್ಲಿ. ಆಗ ಬರವಣಿಗೆ ಬಗ್ಗೆ ಗಂದಗಾಳ ಗೊತ್ತಿಲ್ಲ. ಹಳಿಯಾಳದ ಇನ್ನೊಂದು ಸೋದರ ಮಾವನ ಮನೆಯಲ್ಲಿ ಸ್ವಲ್ಪ ದಿನ ಇದ್ದೆ. ಮಾವ ಸಾಹಿತಿ. ಅವರ ಮನೆಯಲ್ಲಿ ಸಾಹಿತಿ ಬೀಚಿ ಮತ್ತು ಜಯಂತ ಕಾಯ್ಕಣಿಯವರ ದಶ೯ನ ಭಾಗ್ಯ. ಸಾಹಿತ್ಯ ವಿಚಾರಗಳು ಪುಸ್ತಕದ ನಂಟು ಗೊತ್ತಿಲ್ಲದಂತೆ ಅಂಟಿಕೊಂಡಿತು‌. ಹನಿಗವನ ಬರೆದೆ ಹಾಗೆ ಮುಚ್ಚಿಟ್ಟೆ ಒಂದು ಪುಸ್ತಕದ ಸಂದಿಯಲ್ಲಿ. ಅತ್ತೆಗೆ ಸಿಕ್ಕಿತು. ಅದೆ ಇದು.

ಚಿಂತೆ

ವಿಶಾಲವಾದ ಸಮುದ್ರ
ದಂಡೆಗೆ ಆಗಾಗ
ಬಂದಪ್ಪಳಿಸುವ
ನೊರೆ-ನೊರೆ
ಚಿತ್ರ-ವಿಚಿತ್ರ
ಅಲೆಗಳು.

ಪ್ರೇಮ

ಹಸಿದಾಗ ತಾಯಿ
ಕರೆ ಕರೆದು ಕೊಡುವ
ಕ್ಷಣಿಕ ಹಸಿವನಿಂಗಿಸುವ
ಹಲ್ಲಿಗೆ ಮತ್ತು ಭರಿಸುವ
ಸಿಹಿ ಖಾರ ಬೆರೆತ
ಒಣ ಕುರುಕುಲು ತಿಂಡಿ‌
(ಪ್ರಕಟ – ಮೈತ್ರಿ ಮಾಸ ಪತ್ರಿಕೆ 1981)
.
ಸಂಗೀತಾ ಕಲ್ಮನೆ
8.49pm

ಶೋನು ಮರಿ


ಅಪರೂಪದಲ್ಲಿ ಅಪರೂಪದ ಮರಿ ನಾನು ಸಾಕಿದ ಶೋನು ಮರಿ.  25-3-2010ರ ಸುಂದರ ಮುಂಜಾನೆ ಮನೆ ಹಿಂದಿನ ಖಾಲಿ ಸೈಟಲ್ಲಿ ಪುಟ್ಟ ನಾಯಿಮರಿ ಕುಯ್ಯಿ, ಕಯ್ಯಿ ಶಬ್ದ ಕೇಳಿ ಪಾಪ ಅನಿಸಿ ನೋಡಲು ಹತ್ತಿರ ಹೋದರೆ ಒಂದು ಸಿಮೆಂಟ ಬಾನಿಯಿಂದ ಹೊರಬರಲಾರದೆ ಕೂಗುತ್ತಿತ್ತು. ಸರಿ ನಾನು ಮಗಳು ಇಬ್ಬರೂ ಮುದ್ದಾದ ಮರಿ ಎತ್ತಿಕೊಂಡು ಬಂದು ಸ್ನಾನ ಉಪಚಾರ ಕಾರಣ ಮೂತಿ ಮೇಲೊಂದು ಗಾಯ, ಸಣ್ಣ ಹುಳುಗಳು. ಡಾಕ್ಟರ್ ಭೇಟಿ ಇಂಜಕ್ಷನ ಔಷಧಿ ಎಲ್ಲ ಮಾಡಿ ಅಂತೂ ನನಗೂ ಮೂರು ದಿನ ರಾತ್ರಿ ಹಗಲೂ ನಿದ್ದೆನೂ ಇಲ್ಲದೆ ಒಂದು ಹಂತಕ್ಕೆ ಬಂದಿತು ಅದರ ನಮ್ಮ ಬಾಂದವ್ಯ.

ಈಗ ನಮ್ಮ ಮನೆಯ ಒಂದು ಸದಸ್ಯನಾಗಿ ನನ್ನ ಒಂಟಿತನವನ್ನು ದೂರ ಮಾಡಿದ, ಸದಾ ನನ್ನ ಜೊತೆಗೆ ಮಾತಾಕೊಂಡಿರುವ(ಅದರದೆ ಭಾಷೆ) ನನ್ನ friend.  ಬೆಳಗಿನ ವಾಕಿಂಗ ಹೊರಟರೆ ಪಾಪ ಅದೇನೊ.ಖುಷಿ.  ಪಾರ್ಕ್ ಒಳಗಡೆ ಬಿಡೊಲ್ಲ ಹತ್ತಿರದಲ್ಲೆ ಇರುವ ಯೋಗ ಕ್ಲಾಸ ಕಂಪೌಂಡನಲ್ಲಿ ಸುಮ್ಮನೆ ಕೂತಿರುತ್ತೆ ನನ್ನ ವಾಕಿಂಗ ಮುಗಿಯೋವರೆಗು.  ಎರಡು ದಿನ ಗಲಾಟೆ ಮಾಡಿ ಆಮೇಲೆ ಗೊತ್ತಾಯಿತು  ಅಮ್ಮ ಎಲ್ಲೂ ಹೋಗಲ್ಲ ನನ್ನ ಬಿಟ್ಟು, ಎಂಥ ಬುದ್ಧಿ!  ಅದೆಷ್ಟು ಬುದ್ಧಿವಂತ ನಮ್ಮ ಶೋನು ಮರಿ!
God bless you!

ಕೆಲಸಕ್ಕೆ ವಿದಾಯ

ಕೆಲವೊಮ್ಮೆ ನಮಗೆ ತಿಳಿಯದಂತೆ ಯಾವುದೊ ಕೆಲಸ ಶುರುಮಾಡಿರುತ್ತೇವೆ.  ಆಮೇಲೆ ಯಾವಾಗಲೊ ನೆನಪಿಗೆ ಬರುತ್ತದೆ ಓ! ಈ ದಿನ ಹಾಗಾಗಿತ್ತು,ಹೀಗಾಗಿತ್ತು. ಅದೇ ರೀತಿ ನಾನು ಬ್ಲಾಗ್ ಬರೆದ ಮೊದಲ ದಿನ ಜನವರಿ 31.  ಈ ದಿನ ನಾನು 27 ವಷ೯ ಕೆಲಸ ಮಾಡಿದ ಕೋ-ಆಪರೇಟಿವ್ ಬ್ಯಾಂಕಿಗೆ ವಿದಾಯ (31-1-2007) ಹೇಳಿದ ದಿನ‌.  ರಾತ್ರಿ ಯಾಕೊ ಜ್ಞಾಪಕಕ್ಕೆ ಬಂದಿತು‌.  ಈ ಮೂಲಕ ನಾನು  ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಟ್ಟ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದಂತಾಯಿತು. ಮನದಲ್ಲಿ ಒಂದು ಖುಷಿಯ ನಗು ಇವತ್ತೆಲ್ಲ ಅದೇನೊ ಉತ್ಸಾಹ.

Thanks God.

ಮೊದಲ ಹೆಜ್ಜೆ

ಆ ದಿನಗಳು ತುಂಬಾ ಸುಂದರವಾಗಿ ಇದ್ದವು.ಮಲ್ಪೆಯ ಕಡಲ ತೀರದಲ್ಲಿ ಮುಸ್ಸಂಜೆಯ ಸೂಯ೯ ಮುಳುಗುವ ಹೊತ್ತು‌. ಬಾನಿಗೆ ಹಣತೆಯ ದೀಪ ಹಚ್ಚಿಟ್ಟಂತೆ ಬಾನಂಗಳ ಸುಂದರಲೋಕ. ಮನದಲ್ಲಿ ‘ ಸಂದ್ಯಾದೀಪ’ ಈ ಹೆಸರು ಅಚ್ಚಳಿಯದೇ ಊಳಿದು ಜೋರಾಗಿ ಕೂಗಿ ಹೇಳಬೇಕು ಅನ್ನುವ ಹಂಬಲ. ಅದಕ್ಕೆ ಬ್ಲಾಗ್ಗೆ ಈ ಹೆಸರಿಟ್ಟೆ‌.

ಇಂದೂ ಕೂಡ ಮುಸ್ಸಂಜೆ ಹೊತ್ತಲ್ಲಿ ಸಂದ್ಯಾದೀಪ ಹಚ್ಚಿ ಬ್ಲಾಗ ಬರೆಯಲು ಶುರು ಮಾಡಿದೆ‌.

ಇದು ನಾ ಬರೆದ ಮೊದಲ ಕವನ 1977ರಲ್ಲಿ ಬರೆದೆ‌.  ಮಲ್ಪೆಯ(ಉಡುಪಿ ) ಹತ್ತಿರ ತೊಟ್ಟಂ ಊರಲ್ಲಿ ಕೆಲವು ತಿಂಗಳ ವಾಸ ಸೋದರ ಮಾವನ ಮನೇಯಲ್ಲಿ ಟೈಪಿಂಗ ಕಲಿಯಲು. ದಿನವೂ ಬತ್ತದ ಗದ್ದೆಯಲ್ಲಿ ಸ್ವಲ್ಪ ದೂರ ನಡುಗೆ. ಭತ್ತದ ತೆನೆಗಳ ಸೌಂದರ್ಯ ಈ ಸಂದಭ೯ದಲ್ಲಿ ನನ್ನೊಳಗಿನ ಭಾವನೆ ಕವನದಲ್ಲಿ ಬರೆದೆ‌‌.  ಏನೊ ಸಂಕೋಚ‌. ಯಾರಿಗೂ ತೋರಿಸದೇ ಹಲವಾರು ಕವನ ಬರೆದೆ‌.ಊರಿಗೆ ಬಂದಾಗ ನನ್ನ ಗರುಗಳು ಓದಿ ಕಳಿಸಿದ ‘ತೆನೆ’ ನನ್ನ ಮೊದಲ ಕವನ “ತುಷಾರ” ಪತ್ರಿಕೆ ಜನವರಿ 1981 ಪ್ರಕಟವಾಯಿತು. ಹೇಳಲಾರದ ಸಂತೋಷ! ಬರವಣಿಗೆ ಮುಂದುವರೆಯಿತು.

ತೆನೆ
ಈ ಅನಂತ ಘೋಂಡಾರಣ್ಯದಲ್ಲಿ
ತನ್ನೊಡಲ ಬಸಿರ ಬಗೆದು
ಚಿಗುರೊಡೆದು
ನಿಶ್ಶಬ್ಧವಾದ ಮೇಘ ಸ್ಪರ್ಶಕ್ಕೆ
ಮೋಹನ ಮುರುಳಿಯಾಗಿ
ತನ್ನ ತನದ ಅಲೆ ಅಲೆಯ
ಮೃದುಗಾನದ ರಾಗರತಿಗೆ
ಪುಲಕಿತಗೊಂಡು
ಹಸಿರೊಡೆದು,ಟಿಸಿಲ್ಗೊಂಡು
ಇಳೆಯನ್ನು ಗಟ್ಟಿಯಾಗಿ ಅಪ್ಪಿ
ಮುತ್ತಿಕ್ಕಿ, ಉತ್ತುಂಗದ
ಹಷ್೯ಲಾಘವಕ್ಕೆ ಬಾಗುತ್ತ ಬಳುಕುತ್ತ
ತನ್ನಿನಿಯನ ಬರುವಿಕೆಗೆ
ನಸುನಗುತ್ತ ತಲೆ
ಬಾಗಿ ನಾಚಿ ನಿಂತ
ಚಲುವಾದ ಹದಿಹರೆಯದ
ಶೋಡಷ ಕನ್ಯೆ.

ಸಂಗೀತಾ ಕಲ್ಮನೆ 1977.