ಗೀತಾ ಜಿ ಹೆಗಡೆ ಕವಿತೆ – ಈಗೀಗ ರಸ್ತೆಗಳೂ ಮಾತನಾಡುತ್ತವೆ… | ಅವಧಿ । AVADHI

https://avadhimag.in/%e0%b2%97%e0%b3%80%e0%b2%a4%e0%b2%be-%e0%b2%9c%e0%b2%bf-%e0%b2%b9%e0%b3%86%e0%b2%97%e0%b2%a1%e0%b3%86-%e0%b2%95%e0%b2%b5%e0%b2%bf%e0%b2%a4%e0%b3%86-%e0%b2%88%e0%b2%97%e0%b3%80%e0%b2%97-%e0%b2%b0/

ಗೀತಾ ಜಿ ಹೆಗಡೆ ಕಲ್ಮನೆ ಕವಿತೆ – ದೇವರ ಆಟವಂತೆ… | ಅವಧಿ । AVADHI

https://avadhimag.in/%e0%b2%97%e0%b3%80%e0%b2%a4%e0%b2%be-%e0%b2%9c%e0%b2%bf-%e0%b2%b9%e0%b3%86%e0%b2%97%e0%b2%a1%e0%b3%86-%e0%b2%95%e0%b2%b2%e0%b3%8d%e0%b2%ae%e0%b2%a8%e0%b3%86-%e0%b2%95%e0%b2%b5%e0%b2%bf%e0%b2%a4-3/

ಹರಿಯುವ ನದಿಯ ನೀರನ್ನು
ಸ್ಪರ್ಶಿಸಲು ಹೋದಾಗ
ಅದು ಬೆರಳಿಗೆ ತಾಗಿ
ಸಂದಿಯಿಂದ ಹರಿದು ಹೋಯಿತು.

ಎಲ್ಲಿಗೆ ಹೋಗುವುದೋ
ಎಂಬ ಕುತೂಹಲಕ್ಕೆ ಕಾಲುಗಳು
ದಂಡೆಯ ಗುಂಟ ನಡೆದಾಗ
ಬೆಕ್ಕು ಅಡ್ಡ ಬಂದಿದ್ದಕ್ಕೆ
ಅಪಶಕುನವಾಯಿತೆಂದು ಹಿಂತಿರುಗಿದೆ.

ನೋಡನೋಡುತ್ತಿದ್ದಂತೆ
ಕಟ್ಟಿದ ಸೇತುವೆ ನದಿಯ ಮಧ್ಯದಲ್ಲಿ
ಹರಿದು ಬಿದ್ದಾಗ ಅಯ್ಯೋ ಎಂಬ
ಆರ್ತನಾದ ಕಿವಿಗಪ್ಪಳಿಸಿ
ಬೆಕ್ಕಿನ ಶಕುನ ನಿಜವೆಂದು ನಂಬಿದೆ.

ಇನ್ನೇನು ನಾನೂ ಸೇತುವೆ ಏರುವವಳಿದ್ದೆ
ನದಿಯ ಹರಿವು ಕಾಣಲು
ಸದ್ಯ ತಪ್ಪಿತು!
ಇಲ್ಲಿ ಮಾಧ್ಯಮಗಳು ಹಳವಂಡಿ ಸ್ವರದಲ್ಲಿ
ಅಲವತ್ತುಕೊಳ್ಳುತ್ತಿದ್ದವು ಕಾಲು ಬಾಲ ಕಟ್ಟಿ
ನೋಡುಗರ ಮನ ತಾಕುವಂತೆ.

ಹಾಗಂತೆ ಹೀಗಂತೆ
ಬಾಯಿಯಿಂದ ಬಾಯಿಗೆ ಹರಡಿದ ಸುದ್ದಿ
ದಿಕ್ ದಿಗಂತ ತಲುಪಲು
ರೀಪೇರಿ ಮಾಡಿದವ ಹೇಳಿದ್ದನಂತೆ ರೀ ಓಪನಿಂಗನಲ್ಲಿ
ಇನ್ನು ಹತ್ತು ವರ್ಷ ಎನೂ ತೊಂದರೆ ಇಲ್ಲ.

ಹೇಳಿದ ನಾಲ್ಕೇ ನಾಲ್ಕು ದಿನಗಳಲ್ಲಿ
ಸೇತುವೆ ಮಠಾಶ್
ಈಗ ಅಂಬೋಣ ಇದು ದೇವರ ಆಟವಂತೆ!

ಅಂದರೆ ದೇವರು ನನ್ನ ಬದುಕಿಸಲು
ಬೆಕ್ಕಿನ ರೂಪದಲ್ಲಿ ಬಂದಿದ್ದನಾ?
ಕೇಳೋಣವೆಂದರೆ ಬೆಕ್ಕೂ ಕೂಡಾ
ನಾಪತ್ತೆಯಾಗಿದೆ
ಮುಂದೇನು ಮಾಡುವುದು
ನೀವೇ ಹೇಳಿ.

3-11-22 3.55pm✍️

ಗೀತಾ ಹೆಗ್ಡೆ ಕಲ್ಮನೆ ಕವಿತೆ – ಇರಲಿ ಬಿಡು ಆಪ್ತೇಷ್ಟರು… | ಅವಧಿ । AVADHI

https://avadhimag.in/%e0%b2%97%e0%b3%80%e0%b2%a4%e0%b2%be-%e0%b2%b9%e0%b3%86%e0%b2%97%e0%b3%8d%e0%b2%a1%e0%b3%86-%e0%b2%95%e0%b2%b2%e0%b3%8d%e0%b2%ae%e0%b2%a8%e0%b3%86-%e0%b2%95%e0%b2%b5%e0%b2%bf%e0%b2%a4%e0%b3%86/

ಸಂವೇದಿ ತುಣುಕುಗಳು(ಅವಧಿಯಲ್ಲಿ)

https://bit.ly/3T1HtmQ

(ಈ ಕವನ ದಿನಾಂಕ 19-8-2022ರಂದು ಅವಧಿ online ತಾಣದಲ್ಲಿ ಪ್ರಕಟವಾಗಿದೆ)

ಕಪಾಟಿನ ತುಂಬ ತೂರಿಸಿಟ್ಟ
ಸೀರೆ,ಚೂಡಿದಾರುಗಳು
ಈ ಮಳೆಗೆ ಮುಗ್ಗು ಹಿಡಿದು
ಬಾಗಿಲು ತೆಗೆದರೆ ಸಾಕು
ಮಹಾ ಗಬ್ಬು ಗಬ್ಬು.

ನೇತಾಡುವ ವ್ಯಾನಿಟಿ ಬ್ಯಾಗನ್ನು
ಒಮ್ಮೆ ತೆಗೆದು ಕೈಯ್ಯಾಡಿಸಿದೆ
ಏನೊ ಅಂಟು ಅಂಟು
ಬಿಳಿ ಚಿತ್ತಾರ ಅಲ್ಲಲ್ಲಿ
ಜಿಪ್ಪೋ….ಸರಿಯಲೊಲ್ಲದು
ಅವಕೂ ತಟಾಕು ಎಣ್ಣೆ ನೀವಬೇಕು.

ಎಲ್ಲವನ್ನೂ ಬಿಸಿಲಿಗೆ ಹರಡಬೇಕು
ಅದು ಬರುವ ದಿನಕ್ಕಾಗಿ ಕಾದು
ಆಗಾಗ ಮೋಡ ಕಟ್ಟಿದರೆ
ಒಳಗೊಳಗೇ ಆತಂಕ
ಬಡಬಡನೆ ತೆಗೆದಿಡಲು ತಡವಾದರೆ
ಒದ್ದೆ ಮುದ್ದೆ ಆದರೆ ಗತಿ?

ಮೂಲೆಯಲ್ಲಿ ಕೂತಲ್ಲೇ ಕೂತ
ಕವಿತೆ ಬರಹಗಳು
ನೆಗಾಡುತ್ತವೆ ಹಿ…ಹಿ… ಎಂದು
ಅವಕೂ ಗೊತ್ತು ತಮ್ಮಂತೆ ಇವು
ಒಂದಾ ಸುತ್ತಿಕೊಳ್ಳಬೇಕು
ಇಲ್ಲಾ ಬಿಸಿಲಿಗೆ ನೇತಾಡಬೇಕು.

ಮತ್ತೇನಿಲ್ಲ ಒಂದು ಪುಸ್ತಕವಾಗಿ
ನಾಲ್ಕು ಜನರ ಕೈಯಲ್ಲಿ ಓಡಾಡಿ
ಬೀಗುವ ದಿನಕ್ಕಾಗಿ ಕಾಯುವ
ಕಾದೂ ಕಾದೂ ಸುಸ್ತಾಗಿ
ಬೆನ್ನು ಬಿದ್ದ ಕವಿತೆಗಳ ವಿಚಾರ.

ಸತ್ಯವಿರಬಹುದು ಸೂಚ್ಯಂಕ
‘ಎಲ್ಲದಕ್ಕೂ ಕಾಲ ಕೂಡಿ ಬರಬೇಕು’
ಅನುಭವಿಕರ ಅಂಬೋಣ
ಆದರೂ ಕಣ್ಣಾರೆ ಕಂಡ ಸಂವೇದಿ ತುಣುಕುಗಳು
ತಲೆ ಕೊರೆಯುವುದ ಎಲ್ಲಿ ಬಿಟ್ಟಾವು?

ರಾತ್ರಿ ನಿದ್ದೆ ನಡಿಗೆಯಾಯಿತು
ತಲೆ ಹೊಕ್ಕ ವಸ್ತುಗಳು ಚೆಲ್ಲಾಪಿಲ್ಲಿಯಾಗಿ
ಮನಸಿಂದ ಮರೆಯಾಗಿ ಹೋಗಬಾರದೇ…
ಒಳಗೊಳಗೆ ಹಂಬಲಿಸಿದ್ದಷ್ಟೇ ಬಂತು
ಕಣ್ಣು ಮಾತ್ರ ಕೆಂಪಾಗಿತ್ತು.

ಮೂಡಣದ ಸೂರ್ಯ ಚಿಲಿಪಿಲಿ ಹಕ್ಕಿಗಳನ್ನು
ಗೂಡಿಂದ ಹೊರದಬ್ಬಿದ್ದು ಕಿವಿಗೆ ಬಿತ್ತು
ಓಹೋ ಬೆಳಗಾಯಿತೆಂದು ಸಂಭ್ರಮಿಸಿದೆ
ಇಂದಾದರೂ ಬಿಸಿಲು ಬಂದಾತು
ಎಲ್ಲವನ್ನೂ ಊರಗಲ ಹರಡಿಬಿಡಬೇಕು
ಹಾಗೆ ಕವಿತೆಗೂ ಕಾಲ ಕೂಡಿ ಬಂದಿದ್ದೇ ಆದರೆ
ಗಬ್ಬೂ ಇಲ್ಲ
ರಾತ್ರಿ ನಡಿಗೆಯೂ ಇಲ್ಲ.

ಹಳತಾದರೂ ಹೊಸಕಿ ಹಾಕಲಾಗದ
ಅದೆಷ್ಟೋ ಸಂಗತಿಗಳಂತೆ
ಇದನ್ನೂ ಕವಿತೆಗೆ ಒಡ್ಡಿದ್ದಕ್ಕೆ
ಒಳಗಿರುವ ಸೀರೆ ಚೂಡಿದಾರು
ವ್ಯಾನಿಟಿ ಬ್ಯಾಗಿಗೂ ಗೊತ್ತಾಗಿ
ಕುಣಿಯುತ್ತಿವೆ ಸಂತೋಷದಿಂದ!

ಪಾಪ ಅವಕೇನು ಗೊತ್ತು
ಇದೂ ಕೂಡ
ಬೆನ್ನು ಬಿದ್ದ ಕವಿತೆಯಾಗುವುದೆಂದು!

18-8-2022  6.09pm













ಕಾಲ

https://avadhimag.in/%e0%b2%97%e0%b3%80%e0%b2%a4%e0%b2%be-%e0%b2%9c%e0%b2%bf-%e0%b2%b9%e0%b3%86%e0%b2%97%e0%b2%a1%e0%b3%86-%e0%b2%95%e0%b2%b2%e0%b3%8d%e0%b2%ae%e0%b2%a8%e0%b3%86-%e0%b2%95%e0%b2%b5%e0%b2%bf%e0%b2%a4/?relatedposts_hit=1&relatedposts_origin=298071&relatedposts_position=0&relatedposts_hit=1&relatedposts_origin=298071&relatedposts_position=0

ಬಿಚ್ಚಿ ಬಿಸಾಕಲೆ ತೊಟ್ಟುಡುಗೆ
ಈ ಸೆಖೆಗೆ ಕಂಕುಳು ಬೆವರಿ ಗಬ್ಬುನಾತ
ನಿತ್ಯ ತಲೆ ಮಿಂದರೂ ಬಿಡದು ತುರಿಕೆ
ಮೈ ಮನವೆಲ್ಲ ಸುಸ್ತೋ ಸುಸ್ತು
ಬೇಡಾ ಬೇಡಾ ಈ ಸೆಖೆಗಾಲ.

ಈ ಮಳೆಗಾಲ ಎಲ್ಲಿ ನೋಡಿದರೂ ಗಿಜಿ ಗಿಜಿ
ಹೊರಗೆ ಸುತ್ತಾಡಲು ಹೋಗುವಂತಿಲ್ಲ
ಮನೆಯಲ್ಲಿ ಆಗಾಗ ಕರೆಂಟು ಖೋತಾ
ಇನ್ನು ಮಾಡುವುದೇನು ನೆಟ್ಟಿಲ್ಲದೇ
ಬೇಡಾ ಬೇಡಾ ಮಳೆಗಾಲ.

ಚುಮು ಚುಮು ಚಳಿಗೆ ಕೈ ಕಾಲೆಲ್ಲಾ ಒಡಕು
ಹೊದ್ದು ಮಲಗುವುದು ಎಷ್ಟೊತ್ತು
ಸಂದು ಸಂದು ನೋವು ಚಳಿ ತಡೆಯಲಾಗದೆ
ಬೇಸಿಗೆಯೇ ಬೆಸ್ಟಿತ್ತು ದೇಹದಾರೋಗ್ಯಕ್ಕೆ
ಬೇಡಾ ಬೇಡಾ ಚಳಿಗಾಲ.

ಹೇಗಿದ್ದೀರಿ ನೀವು ಎಂದು ಮಂದಿಯನ್ನು ಕೇಳಿದರೆ
ಒಂದೊಂದು ಕಾಲಕ್ಕೂ ಅಲವತ್ತುಕೊಳ್ಳುವರು
ಆಗ ಅದು ಬೇಡಾ, ಈಗ ಅದೇ ಚಂದ ಇದು ಬೇಡಾ
ಒಟ್ಟಿನಲ್ಲಿ ಮನುಷ್ಯನಿಗೆ ಯಾವುದನ್ನೂ ಸಹಿಸಿಕೊಳ್ಳುವ ತಾಳ್ಮೆ ಇಲ್ಲ. 

11-5-2022. 5.15pm

(8) ನನ್ನ ಕೃತಿಯ ಕುರಿತು ಲೇಖಕರ ಅಭಿಪ್ರಾಯ ಅವಧಿಯಲ್ಲಿ ಗೀತಾ ಕುಂದಾಪುರ ರವರಿಂದ.

https://bit.ly/3Ep2KyY

ಲೇಖಕಿ ಗೀತಾ ಅವರು ತಮ್ಮ ಕೃತಿಯಲ್ಲಿ ಮನುಷ್ಯನ ಗುಣಗಳನ್ನು, ಸ್ವಭಾವಗಳನ್ನು, ಭಾವನೆಗಳನ್ನು ವಿಶ್ಲೇಷಿಸಿದ್ದಾರೆ, ಪುಸ್ತಕದಲ್ಲಿ 32 ಲೇಖನಗಳಿದ್ದು ಎಲ್ಲವೂ ಪ್ರಸಿದ್ಧ ಪತ್ರಿಕೆಗಳಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾದವುಗಳು. ಮನುಷ್ಯನ ಮನಸ್ಸು, ಸ್ವಭಾವ, ಭಾವನೆಗಳನ್ನೇ ವಿಷಯವಾಗಿಟ್ಟುಕೊಂಡು ಎಷ್ಟೊಂದು ಲೇಖನಗಳನ್ನು ಬರೆಯಬಹುದೆಂದು ತೋರಿಸಿದ್ದಾರೆ. ನಮ್ಮ ಮುಖ ನೋಡಲು ಕನ್ನಡಿಯಿದೆ, ಅಲ್ಲಿನ ಅಂಕು, ಡೊಂಕುಗಳನ್ನು ಸ್ವಲ್ಪ ಮಟ್ಟಿಗೆ ತಿದ್ದಿಕೊಳ್ಳಬಹುದು. ಅದೇ ನಮ್ಮದೇ ಸ್ವಭಾವ ಮತ್ತದರ ಮೂಲ ಅರಿಯುವುದು ಸುಲಭವಲ್ಲ, ಮತ್ತದಕ್ಕೆ ಯಾವ ಕನ್ನಡಿಯೂ ಇಲ್ಲ, ಆದರೆ ನೆಮ್ಮದಿಯ ಬದುಕಿಗೆ ಇದರ ಅಗತ್ಯವಿದೆ.

ಮನುಷ್ಯನ ಗುಣ, ಸ್ವಭಾವವನ್ನು ನಿರ್ಧರಿಸುವುದು ಅವನ ‘ಮನಸ್ಸು’. ಪುಸ್ತಕ ಓದುತ್ತಿದ್ದಂತೆ ಹೌದಲ್ಲವೇ, ನಾವೂ ಹೀಗೆ ವರ್ತಿಸುತ್ತಿದ್ದೇವಲ್ಲವೇ? ನಮ್ಮ ಮನಸ್ಸೂ ಹೀಗೆ ಅಲ್ಲವೇ? ನಮ್ಮ ಸುತ್ತಲೂ ಇಂತಹ ಗುಣದ ಜನರಿದ್ದಾರೆ ಎನ್ನುತ್ತದೆ ನಮ್ಮ ಮನಸ್ಸು. ಆದರೂ ಅರ್ಥ ಮಾಡಿಕೊಂಡಷ್ಟೂ ಮತ್ತಷ್ಟೂ ನಿಗೂಢವಾಗಿ ಉಳಿಯುತ್ತದೆ ಮನಸ್ಸು. 

ಲೇಖನಗಳಲ್ಲಿ ಅಚ್ಚರಿ ಮೂಡಿಸುವ, ಬೆರುಗು ಹುಟ್ಟಿಸುವ, ಅಲ್ಲಗಳೆಯಬಹುದಾದ ಯಾವ ವಿಷಯವೂ ಇಲ್ಲ, ಎಲ್ಲವೂ ಇದ್ದದ್ದೇ ಆದರೆ ನಮ್ಮ ಜೀವನದ ಓಟದಲ್ಲಿ ಗಮನಿಸದೆ ನಡೆದಿರುವುದೇ ಹೆಚ್ಚು. ನಮ್ಮನ್ನು ನಾವು ಅರಿಯುತ್ತಿದ್ದಂತೆ, ಇತರರ ನಡುವಳಿಕೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಂತೆ ಪ್ರಶಾಂತತೆ ಮೂಡುವುದು ಸಹಜ, ಇದರ ಅಗತ್ಯವೂ ಇದೆ. ಅಧ್ಯಾತ್ಮದತ್ತ ಸ್ವಲ್ಪ ವಾಲಿಕೊಂಡಿರುವ ಲೇಖನಗಳು ಓದುತ್ತಿದ್ದಂತೆ ಮನಸ್ಸಿನಲ್ಲಿ ನಿರಾಳ ಭಾವ ಮೂಡುವುದು ಸಹಜ. 

ಜೀವನದ ಹಾದಿಯಲ್ಲಿ ಸೋಲು, ಗೆಲುವು ಸಹಜ, ಆದರದನ್ನು ಸುಲಭದಲ್ಲಿ ಅರಗಿಸಿಕೊಳ್ಳಲಾಗದು. ಸೋಲುಂಟಾದಾಗ ಎದುರಾಗುವ ಒಂಟಿತನ, ಅದರೊಂದಿಗೆ ಸೇರಿಕೊಳ್ಳುವ ಖಿನ್ನತೆ ಕಿತ್ತೊಗೆಯುವುದು ಸುಲಭ ಸಾಧ್ಯವೇ? ಇನ್ನು ಜೀವನದಲ್ಲಿ ಸಿಗುವ ಅನಿರೀಕ್ಷಿತ ಗೆಲುವು, ಗೆಲುವನ್ನು ಸರಳ ರೀತಿಯಲ್ಲಿ ಸ್ವೀಕರಿಸುವುದೂ ಎಲ್ಲರ ಕೈಲಾಗದು, ಗೆದ್ದಾಗ ಹಿಗ್ಗಿ ಹೀರೆಕಾಯಿಯಾಗಿ ತಪ್ಪು ಮಾಡುವುದೇ ಹೆಚ್ಚು. ಕೌನ ಬನೇಗ ಕ್ರೋರ್ ಪತಿಯಲ್ಲಿ 5 ಕೋಟಿ ಗೆದ್ದವ ಒಂದೇ ವರ್ಷದಲ್ಲಿ ಕುಡಿತಕ್ಕೆ ಸಿಲುಕಿದ, ಎಲ್ಲಾ ಹಣವನ್ನೂ ಕಳೆದುಕೊಂಡ, ಗೆಲುವನ್ನು ಸಹಜವಾಗಿ ಸ್ವೀಕರಿಸದ ಪರಿಣಾಮವಿದು. 


ಕೆಲವು ಲೇಖನಗಳು ಇದು ನನ್ನದೇ ಎನಿಸಿತು, ಇನ್ನು ಕೆಲವು ವಿಷಯಗಳನ್ನು, ಮನಸ್ಸನ್ನು ಹೆಚ್ಚು ಅರಿಯಲು ಸಹಾಯ ಮಾಡಿತು. ಪ್ರತೀ ಲೇಖನದ ಆರಂಭದಲ್ಲಿರುವ ನಾಲ್ಕು ಸಾಲುಗಳ ಕವಿತೆ ಲೇಖನಕ್ಕೆ ಕಳಶವಿಟ್ಟಂತಿದೆ. 

ಪುಸ್ತಕದಲ್ಲಿರುವ ಹೆಚ್ಚಿನ ಲೇಖನಗಳು ಮತ್ತೆ, ಮತ್ತೆ ಓದಿಸುವಂತಿದ್ದರೂ ನಾನು ಹೆಚ್ಚು ಇಷ್ಟ ಪಟ್ಟ ಕೆಲವೊಂದು ಲೇಖನಗಳ ಬಗ್ಗೆ ಬರೆಯದಿದ್ದರೆ ಹೇಗೆ?
ಪುಸ್ತಕದ ಶೀರ್ಷಿಕೆ ಹೊತ್ತ ಲೇಖನ – ‘ಮನಸೇ ನೀನೇಕೆ ಹೀಗೆ’ –ಎಂದೋ ನಡೆದ ಕಹಿ ಘಟನೆಯನ್ನೋ, ಮಾತನ್ನೋ ಮತ್ಯಾವತ್ತೋ ನೆನಪಿಸಿ ಕೊರಗುವಂತೆ ಮಾಡುವ ಮನಸ್ಸಿನ ಸ್ವಭಾವದ ಮೇಲೆ ಬೆಳಕು ಚೆಲ್ಲುತ್ತದೆ ಲೇಖನ. ಹೌದಲ್ಲವೇ ಪೆಟ್ಟು ಸಿಕ್ಕಿದಾಗ ಆಗುವ ನೋವಿಗಿಂತ ಅದರ ನೆನಪೇ ಹೆಚ್ಚು ನೋವನ್ನು ಕೊಡುತ್ತದೆ, ಸೋಲಿಗಿಂತ ಸೋಲಿನ ನೆನಪೇ ಹೆಚ್ಚು ನೋವು ತಂದರೆ ಆಶ್ಚರ್ಯವಿಲ್ಲ.
ಮನಸ್ಸು ಹೆಚ್ಚು ಹೆಚ್ಚಾಗಿ ಕೆಟ್ಟ ಗಳಿಗೆಯನ್ನೇ ಮತ್ತೆ ಮತ್ತೆ ನೆನಪಿಸಿ ಸಂತೋಷ ಪಡುತ್ತದೇನೋ ಅಥವಾ ಮನಸ್ಸು ನೋವನ್ನೇ ಹೆಚ್ಚು ಪ್ರೀತಿಸತ್ತದೋ ಏನೋ. ಲೇಖನದ ಕೊನೆಯಲ್ಲಿ ‘ಸ್ವರ್ಗದ ಬೇರು ನಿನ್ನಲ್ಲೇ ಇದೆ, ತಂಗಾಳಿಯಾಗಿ ಸವಿ ಸವಿಯಾದ ನೆನಪುಗಳನ್ನಷ್ಟೇ ನೀ ಉಳಿಸಿಕೊಂಡು ದೇಹವನ್ನು ಆವರಿಸಿಕೊ’ ಎನ್ನುತ್ತಾ ಲೇಖಕಿ ಇಂತಹ ನೋವನ್ನು ದೂರ ಮಾಡಬಹುದಾದರ ಬಗ್ಗೆ ಬರೆಯುತ್ತಾರೆ.

ಲೇಖನ ‘ಮನುಷ್ಯನ ಅಂತರಂಗ – ಬಹಿರಂಗ’, ಯಾವುದು ಸತ್ಯ, ಯಾವುದು ಮಿಥ್ಯ, ಸತ್ಯವನ್ನು ಧೈರ್ಯವಾಗಿ ಸ್ವೀಕರಿಸಲಾಗದ ಪರಿಸ್ಥಿತಿ, ಮಿಥ್ಯವನ್ನೇ ಸರಿ ಎಂದದ್ದೂ ಇದೆ, ಇದೇ ಜೀವನದ ಸಂಘರ್ಷ.  ಅತೀ ಹತ್ತಿರದವರ ಬಣ್ಣ ಗೊತ್ತಿದ್ದರೂ, ಆಡಲಾಗದ, ಅನುಭವಿಸಲಾಗದ ಪರಿಸ್ಥಿತಿ, ನೋವು ನುಂಗಿಕೊಂಡು ನಗುವಿನ ಮುಖವಾಡ ಧರಿಸಬೇಕಾದ ಸ್ಥಿತಿ. 
ಎದುರಿಗಿರುವವರು ಆಡುತ್ತಿರುವುದು ಸುಳ್ಳು, ಬೊಗಳೆ ಎಂದು ಗೊತ್ತಿದ್ದರೂ ಎಷ್ಟೊಂದು ಸಲ ಅರಿಯದ ಹಾಗೆ ನಟಿಸುವ ಪರಿಸ್ಥಿತಿ ಬಂದಿಲ್ಲ!!! ಇಲ್ಲಿ ನಾನೊಂದು ವಾಕ್ಯವನ್ನು ಸೇರಿಸಲು ಇಚ್ಚಿಸುತ್ತೇನೆ, ಹೆಚ್ಚು, ಹೆಚ್ಚು ಮುಖವಾಡ ಧರಿಸಿದವರೇ ಸತ್ಯ ಸಂದರು, ಒಳ್ಳೆಯವರು, ಸಾಧಕರೆಂದು ಗುರುತಿಸಲ್ಪಟ್ಟು ಎಲ್ಲರ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ, ಸಾದಾ, ಸೀದಾ ನಡುವಳಿಕೆಯುಳ್ಳವರೇ ಬಲಿ ಪಶುಗಳು. ಆಗೆಲ್ಲಾ ಸತ್ಯಕ್ಕಿಂತ ಸುಳ್ಳಿಗೇ ಹೆಚ್ಚು ಗೌರವ ಎನಿಸದಿರದು. 

ಲೇಖನ ‘ನಾನು – ನನ್ನದು’ – ‘ಇದು ಸರಿಯಲ್ಲ, ನಿನ್ನಲ್ಲೊಂದು ದೋಷವಿದೆ’ ಎಂದಾಗ ಸರಿ ಪಡಿಸಿಕೊಳ್ಳುವುದಿರಲಿ, ಕೇಳಿಸಿಕೊಳ್ಳುವ, ಅರಗಿಸಿಕೊಳ್ಳುವ ತಾಳ್ಮೆ, ಒಳ್ಳೆಯ ಮನಸ್ಸು ಎಷ್ಟು ಜನರಿಗಿದೆ? ನಾನೇ ಸರಿ, ನಾನು ತಪ್ಪು ಮಾಡುವ ಪ್ರಶ್ನೆಯೇ ಇಲ್ಲ ಎನ್ನುವವರು ಜೀವನದಲ್ಲಿ ಎದುರಾಗುವುದೇ ಜಾಸ್ತಿ. ಅಲ್ಲದೆ ಲೇಖನದಲ್ಲಿ ಬರೆದ ಹಾಗೆ ಅತೀ ಬುದ್ಧಿವಂತರಿಗಿಂತ ನಿಷ್ಕಲ್ಮಶ ವ್ಯಕ್ತಿತ್ವದವರೇ ಆಪ್ತರಾಗುತ್ತಾರೆ. ಇಲ್ಲಿ ಪ್ರಚಲಿತ ಪುಟ್ಟ ಕತೆಯೊಂದು ನೆನಪಿಗೆ ಬರುತ್ತದೆ, ಉದ್ಯೋಗಾರ್ಥಿಯಾಗಿ ಬಂದ ಇಬ್ಬರಲ್ಲಿ ಒಬ್ಬ ಅತೀ ಬುದ್ಧಿವಂತ, ತುಂಬಾ ಓದಿಕೊಂಡವ, ಮತ್ತೊಬ್ಬ ಸಾಮಾನ್ಯ ಜ್ಞಾನಿ ಆದರೆ ಪ್ರಮಾಣಿಕ, ಇಬ್ಬರಲ್ಲಿ ಸಾಮಾನ್ಯ ಜ್ನಾನಿಯೇ ಆಯ್ಕೆಯಾಗುತ್ತಾನೆ. 
ನಮ್ಮ ಶತ್ರು ನಮ್ಮ ಅಹಂಕಾರವೇ ಎಂದರೆ ತಪ್ಪಾಗಲಾರದು, ನಾನು, ನನ್ನದು ಎಂಬ ಅತೀ ವ್ಯಾಮೋಹ ಮನುಷ್ಯ, ಮನುಷ್ಯರನ್ನು ದೂರ ಮಾಡುತ್ತದೆ. 

ಲೇಖನ ‘ಗೆಳೆತನ – ಸಂಬಂಧ’ – ಲೇಖನದಲ್ಲಿ ಬರೆದ ಹಾಗೆ ಮನುಷ್ಯ ಸಂಘ ಜೀವಿ, ಸದಾ ಸ್ನೇಹ ಬಯಸುತ್ತಿರುತ್ತದೆ, ಆದರೆ ಇವನು ನನ್ನ ಗೆಳೆಯ ಅಥವಾ ಗೆಳತಿ ಎನ್ನುತ್ತಾ ನಮ್ಮ ದುಃಖ ದುಮ್ಮಾನಗಳನ್ನೆಲ್ಲಾ ಹೇಳಿಕೊಂಡು ನಮ್ಮತನಕ್ಕೆ ಕೊಳ್ಳಿ ಇಡುತ್ತಾ ಬಂದಿರುತ್ತೇವೆ, ಇದು ಅರಿವಾಗುವುದು ಸ್ವಲ್ಪ ತಡವಾಗಿ. ಗೆಳೆತನವೆನ್ನುವುದು ಕೊಡು-ಕೊಳ್ಳುವ ಸಂಬಂಧವಲ್ಲ, ಅಲ್ಲದೆ ಇಲ್ಲಿ ಅಹಂ, ಸ್ವಾರ್ಥ ಮಾರು ದೂರ ಸರಿಯಬೇಕು, ಆಗಲೇ ಗೆಳೆತನ ಗಟ್ಟಿಯಾಗುವುದು. ಎಷ್ಟೇ ಆತ್ಮೀಯ ಗೆಳೆಯರಿರಲಿ ಅತ್ಯಂತ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳದಿರುವುದೇ ಒಳ್ಳೆಯದು, ಹಾಗೆ ಹಂಚಿಕೊಂಡವರ ಕತೆ ಮತ್ತು ವ್ಯಥೆ ಆಗಾಗ ಕೇಳಿ ಬರುತ್ತದೆ. 

ಗೊತ್ತಿದೆ ಮನುಷ್ಯನ ಸ್ವಭಾವ ಹೀಗೆಯೇ ಎಂದು, ಆದರೂ ಅರಿಯುವ, ಅಳೆಯುವ, ಒಪ್ಪಿಕೊಳ್ಳಲು ಏಕೋ ಹಿಂದೇಟು, ಲೇಖನಗಳು ಅದರತ್ತ ಬೆಟ್ಟು ಮಾಡಿ ಇದು ಸಹಜ ಎನ್ನುತ್ತಾ ಸಮಾಧಾನ ಪಡಿಸುವಂತಿದೆ.

ಲೇಖಕಿ ಗೀತಾ ಕುಂದಾಪುರ್
3-12-2021 5.00pm

ಪುಸ್ತಕ ಬೇಕಾದವರು ಇಲ್ಲಿ ಸಂಪರ್ಕಿಸಿ ; https://tejupublicationsonline.stores.instamojo.com/product/3021874/manase-neeneke-heege/