ಆ ಕ್ಷಣ

ಇದು 27 ವಷ೯ಗಳ ಹಿಂದೆ ನಡೆದ ಕ್ಷಣ. ಅಮ್ಮನ ಇಡೀ ದೇಹ ರೊಮೈಟೆಡ್ ಅರ್ಥೈಟೀಸ್ ಕಾಯಿಲೆ ಆವರಿಸಿ ನೋವಿನಿಂದ ನರಳುತ್ತ ಹಾಸಿಗೆಯಿಂದ ಏಳಲಾರದ ಪರಿಸ್ಥಿತಿಯಲ್ಲಿ ಮಲಗಿದ್ದರು. ರಾತ್ರಿ 8ಕ್ಕೆ ನಾನೇ ಊಟ ಮಾಡಿಸಿ ಮಲಗಿಸಿದ್ದೆ. ಮಗಳ ಬಾಳಂತನಕ್ಕೆ ಊರಿಗೆ ಹೋದವಳು ಅಮ್ಮ ಇಹಲೋಕದ ಯಾತ್ರೆ ಮುಗಿಸಿದ್ದು ನೋಡುವ ಹಾಗಾಯಿತು. ಅದು ಉತ್ತರಾಯನ ಪುಣ್ಯ ಕಾಲ, ಜನವರಿ ಇಪ್ಪತ್ತು, ಮುತ್ತೈದೆ ಸಾವು. ವಯಸ್ಸು ಕೇವಲ ಐವತ್ತೆರಡು ವರ್ಷ ಇರಬಹುದು. ಏಕೆಂದರೆ ಅಮ್ಮನ ಜನ್ಮ ದಿನ ಗೊತ್ತಿಲ್ಲ.

ಕರೆದುಕೊಂಡು ಹೋಗುವಾಗಲೇ ಅದಾವ ದೈವ ಅವರ ಬಾಯಲ್ಲಿ ಹೇಳಿಸಿತ್ತೊ’ ಮಗಳೆ ಐದು ತಿಂಗಳು ಬಾಳಂತನ ಮುಗಿಸಿಕೊಂಡು ಹೋಗು’. ರಾತ್ರಿ 12ಗಂಟೆ ಐದು ತಿಂಗಳು ಮುಗಿದ ವೇಳೆ ನನ್ನ ಕೈಯ್ಯಾರೆ, ‘ಗಂಗಾ ಜಲ ಅರೆಬರೆ ಕುಡಿದು, ಗಂಟಲಲ್ಲಿ ಗೊಟಕ್ ಅನ್ನುವ ಶಬ್ದ, ಕಣ್ಣು ನಿದಾನವಾಗಿ ಮುಚ್ಚಿತು’ ಪ್ರಾಣ ಹೋಗುವ ಸಮಯ ಕಣ್ಣಾರೆ ಕಂಡೆ. ಆ ಸಂಕಟ ಅಳು ಮುಗಿಲು ಮುಟ್ಟಿತು ಕರುಳು ಕಿತ್ತು ಬರುವ ಹಾಗೆ. ಊಹಿಸಿರಲಿಲ್ಲ ಸಾವು!

ಅದುವರೆಗೂ ಓಡಾಡಿಕೊಂಡಿದ್ದವರು ಐದು ತಿಂಗಳು ಮುಗಿಯುವ ನಾಲ್ಕು ದಿನ ಮೊದಲು ಸಂಕ್ರಾಂತಿ ದಿನದ ಸಾಯಂಕಾಲ ಹಾಸಿಗೆ ಹಿಡಿದಿರೋದು ಸಾಯಲು ಹುಲ್ಲು ಕಡ್ಡಿ ನೆವ ಬೇಕು ಎಂಬ ಮಾತು ಅಕ್ಷರ ಸಹ ನಿಜ ಆಗೋಯ್ತು. ಎಂಥ ಕಾಕತಾಳೀಯ!

“ಸಾವಿನ ನಿಜವಾದ ದುಃಖದ ತೀವ್ರತೆ ನಮ್ಮ ಹತ್ತಿರದವರ ಮರಣದಲ್ಲಿ ತಿಳಿಯುವುದು” ಎಲ್ಲೊ ಓದಿದ ನೆನಪು. ನಿಜಕ್ಕೂ ಹೌದು. ಸ್ವತಃ ಅನುಭವಿಸಿದೆ. ಹುಟ್ಟಿನಿಂದ ಅಮ್ಮನಿಲ್ಲದ ಪ್ರಪಂಚ ಹೊಂದಿಕೊಳ್ಳಲು ವಷ೯ಗಳೇ ಬೇಕಾಯಿತು. ಆ ದಿನಗಳು ಯಾವತ್ತೂ ಮಾಸೋದಿಲ್ಲ. ಅಮ್ಮನಿಲ್ಲದ ತವರಿಗೆ ಹೋಗುವ ಕಾತರ ಈಗಿಲ್ಲ.

ದಿನ ಕಾಯ೯ ಮುಗಸಿ ವಾಪಸ್ಸು ಬರುವಾಗ ಮಗಳು ಕೈಯಲ್ಲಿ ಹಸು ಗೂಸು ನೆನಪಿಸುತ್ತಾಳೆ ಅಮ್ಮ ನಾನಿದಿನಿ.

1997ರಲ್ಲಿ ಇದೇ ಕಾಯಿಲೆ ನನಗೂ ಬಂತು. 2007 ರವರೆಗೆ ಹೋಮಿಯೊಪತಿ,ಅಲೋಪತಿ,ಆಯುವೆ೯ದಿಕ ಎಲ್ಲ ಔಷಧಿ ತೆಗೆದುಕೊಂಡೆ. ಕಡಿಮೆ ಆಗಲಿಲ್ಲ. ಚಿಕನ್ ಗುನ್ಯಾ,ಸಯಾಟಿಕ(ಸೊಂಟ ನೋವು)ಬಂತು. ಕೆಲಸ ಬಿಟ್ಟೆ. ಕೊನೆಗೊಂದು ದಿನ ಯೋಗಕ್ಕೆ ಸೇರಿದೆ. ನಡೆಯೋಕೆ ಆಗದಿದ್ದವಳು ಕೇವಲ 15ದಿನದಲ್ಲಿ ಮಡಿಕೇರಿ’ಬ್ರಹ್ಮಗಿರಿ’ ಬೆಟ್ಟ ಹತ್ತಿ ಬಂದೆ. ಈಗ ಶುಗರ ಬಂದಿದೆ. ಯೋಗದಲ್ಲೇ ಎಲ್ಲ ಕಂಟ್ರೋಲ್ ಇದೆ‌ ಯಾವ ಮಾತ್ರೆ ಇಲ್ಲದೆ.

ನನ್ನ ಸ್ವಂತ ಅನುಭವದಲ್ಲಿ ಪ್ರತಿಯೊಬ್ಬರಿಗೂ ಹೇಳುವುದಿಷ್ಟೆ, ಕಾಯಿಲೆ ಮನುಷ್ಯನಾದವನನ್ನು ಯಾರನ್ನೂ ಬಿಟ್ಟಿಲ್ಲ. ಅದು ಬಂದಾಗ ದೃತಿಗೆಡದೆ ಸ್ವ ಮನಸ್ಸನಿಂದ ಅದರ ಪರಿಹಾರಕ್ಕಾಗಿ ಛಲ ತೊಡಬೇಕು. ನಮ್ಮಲ್ಲಿರುವ Willpower ಅಧ೯ ಕಾಯಿಲೆ ಗುಣ ಮಾಡುತ್ತದೆ. ಆರು ತಿಂಗಳು ಹಾಸಿಗೆ ಹಿಡಿದ ನನ್ನನ್ನು ‘ಇವಳೂ ಅಮ್ಮನ ದಾರೀನೆ ಹಿಡಿಯೋದು’ ಅಂತ ಆಡಿಕೊಂಡಾಗ ನನ್ನಲ್ಲಿ ಒಂದು ರೀತಿ ಛಲ ,ಈಗ ನಿಮ್ಮ ಮುಂದೆ ಬದುಕಿದ್ದೇನೆ.

ಬಹುಶಃ ಅಮ್ಮನಿಗೂ ಯೋಗದ ಶ್ರೀ ರಕ್ಷೆ ಸಿಕ್ಕಿದ್ದರೆ ಅಕಾಲಿಕ ಮರಣ ಹೊಂದುತ್ತಿರಲಿಲ್ಲವೇನೊ! ನೆನೆದಾಗ ಕಣ್ಣು ಮಂಜಾಗುತ್ತದೆ. ಕೊನೆಯ ಕ್ಷಣ ನೆನಪಾಗುತ್ತದೆ.

ಇವತ್ತು ಅಮ್ಮನ 27ನೇ ವರ್ಷದ ತಿಥಿ ಶಾಸ್ತ್ರ ಊರಲ್ಲಿ ನಡೆಯುತ್ತಿದೆ. ಅಣ್ಣ ಕರೆದರೂ ಹೋಗುವ ಮನಸ್ಸಿಲ್ಲ. ಅಮ್ಮನಿಲ್ಲದ ಆ ಮನೆ ಪ್ರೀತಿ ಇಲ್ಲದ ತವರಂತೆ ಭಾವ. ಮಕ್ಕಳ ಏಳ್ಗೆಯನ್ನೆ ಬಯಸುವ ಜೀವ, ಬರುವ ದಾರಿ ತುದಿಗಾಲಲ್ಲಿ ನಿಂತು ಗೋಣುದ್ದ ಮಾಡಿ ಕಾಯುವ ರೀತಿ, ಬರಲು ತಡವಾದರೆ ಏನೊ ಆಗಿಹೋಗಿದೆಯೆಂಬಂತೆ ಒದ್ದಾಡುವ ಪರಿ, ಆ ಮನೆಯಿಂದ ಹೊರಡುವಾಗ ಕಣ್ಣಲ್ಲಿ ನೀರು ತುಂಬಿಕೊಂಡು ಊರ ತುದಿಯವರೆಗೂ ಬಂದು ಬೀಳ್ಕೊಡುವ ದೃಶ್ಯ, ಇರುವಷ್ಟು ದಿನ ಊರಗಲದ ಸುದ್ದಿ ಬಿಚ್ಚಿಟ್ಟು ಕಷ್ಟ ಸುಃಖ ತನ್ನದೆಂಬಂತೆ ವರದಿ ಒಪ್ಪಿಸುವದು, ಮಾತ್ರೆಗಳ ಒಡನಾಟದಲ್ಲಿ ತನ್ನ ನೋವು ಶಮನಕ್ಕಾಗಿ ಪಟ್ಟ ಪಾಡು ಎಲ್ಲವೂ ಸುರುಳಿ ಬಿಚ್ಚಿದಂತೆ ನೆನಪಾಗುತ್ತಿದೆ. ಯಾರು ಎಷ್ಟೇ ಕರೆದರೂ, ಆದರಿಸಿದರೂ ಆ ಅಮ್ಮನ ಪ್ರೀತಿಗೆ ಯಾರೂ ಸಮಾನರಾಗೋಕೆ ಸಾಧ್ಯವೇ ಇಲ್ಲ. ಆ ಪ್ರೀತಿಯ ನೆನಪುಗಳೇ ನನಗೆ ಶ್ರೀ ರಕ್ಷೆ. ಕೋಟಿ ನಮಸ್ಕಾರ ಮಾಡಿದರೂ ಮುಗಿಯದು ನಿನ್ನ ಋಣ. ಅಮ್ಮಾ…..

7-2-2017. 5.43pm.

ಮನಸ್ಸು

image

ಮನಸ್ಸು ಯಾವಾಗಲೂ
ಸತ್ತ ನೆನಪುಗಳ ಸುತ್ತ
ಗಿರಕಿ ಹೊಡೆಯುತ್ತಲೇ
ಇರುತ್ತದೆ,
ವಿವೇಕ ಹೇಳುತ್ತದೆ
ಇದರಿಂದ ಏನೂ
ಪ್ರಯೋಜನ ಇಲ್ಲ
ಬಿಟ್ಟು ಬಿಡು ಅಂತ.
ಆದರೂ ಕೇಳಬೇಕಲ್ಲ
ಬೇಕಾದ್ದು,ಬೇಡಾದ್ದು
ಎಲ್ಲಾ ನೆನಪಿಸಿಕೊಂಡು
ಆಕಾಶವೇ ತಲೆ ಮೇಲೆ
ಬಿದ್ದವರ ತರ ಪೆಚ್ಚು
ಮೋರೆ ಹಾಕಿಕೊಂಡು
ಅತ್ತು ಅತ್ತು ಕಣ್ಣೆಲ್ಲ
ಹೆಂಡ ಕುಡಿದವರಂತೆ
ಕೆಂಗಣ್ಣು ಮಾಡಿಕೊಂಡು
ಈ ದೇಹದ ಸೌಂದರ್ಯ
ಸತ್ಯ ನಾಶ ಮಾಡೋದರಲ್ಲಿ
ಅದೇನು ಖುಷಿನೊ
ಆ ದೇವರೆ ಬಲ್ಲ!
ಓ ಮನಸೆ, ಒಮ್ಮೆ
ನೀನೆ ಯೋಚಿಸಿ ನೋಡು
ಸ್ವಗ೯ದ ಬೇರು ನಿನ್ನಲ್ಲೇ ಇದೆ
ತಂಗಾಳಿಯಾಗಿ
ಸವಿ ಸವಿಯಾದ
ನೆನಪುಗಳಷ್ಟನ್ನೇ
ನೀ ಉಳಿಸಿಕೊಂಡು
ದೇಹವನ್ನು ಆವರಿಸಿಕೊ
ಶಿರದಲ್ಲಿ ಸಿಗುವುದು
ನಿನಗೆ ರಾಜ ಮಯಾ೯ದೆ
ಮನು ಕುಲಕೆ ನೀನಾಗಿರುವೆ
ಮೂಲಾಧಾರ.
1-1-2016. 2.47pm

ಪೃಕೃತಿ-ಪುರುಷ

ಪ್ರಿಯೆ
ನಿನಗೊಪ್ಪುವ ಬ್ಲೌಸು
ಹೊಲಿದು ಕೊಡಲೆ
ಹಣುಕಿ ಹಾಕುವವರ
ಕಣ್ಣು ಕುಕ್ಕುವ ಹಾಗೆ.

ನವಿಲು ನಡಿಗೆಯ
ಬೆಳದಿಂಗಳ ಬಾಲೆ ನೀನು
ಉಡಿಸಲೆ ಬೆಳ್ಳನೆಯ
ಜರಿಯಂಚಿನ
ನಿನಗೊಪ್ಪುವ ಸೀರೆ.

ನಿನ್ನಂಗಳದ ತುಂಬ
ಮೆತ್ತನೆಯ
ಹೂವ ಹಾಸಿಗೆ ಹಾಸಿರುವೆ
ನಲ್ಲನ ಬರುವಿಕೆಗಾಗಿ
ಕಾದಿರುವ ಹರಿಣಿಯಂತೆ.

ನಿನ್ನ ಸೊಬಗಿನ ವೈಭೋಗಕೆ
ಸವರಿದೆ ನವಿರಾಗಿ
ಅಂಗಾಂಗದ ತುಂಬೆಲ್ಲ
ಘಮ್ಮೆನ್ನುವ
ರಸಿಕತೆಯ ಮುಲಾಮು.

ನೆತ್ತಿಗೆ ಸೂರ್ಯ
ಬರುವ ಮುನ್ನ
ಹಾಸಿರುವ ಕುಸುಮ
ಬಾಡಿಹೋಗುವ ಮುನ್ನ
ಬಾ ಬಾಚಿ ತಬ್ಬಿಕೊ ನನ್ನ.

ಬೀಸುವ ತಂಗಾಳಿಗೆ
ಚಿಗುರೆಲೆಗಳ ವಯ್ಯಾರದ
ಕುಡಿ ನೋಟದಿ ಸೆಳೆಯುವ
ಪುರುಷ ನಾನಲ್ಲವೆ
ನಿನ್ನ ಮನ್ಮಥ.

ಮುಂಬರುವ ಯುಗಾದಿಗೆ
ಮಿಡಿ ಕಾಯಾಗಿ
ಮಾಗಿ ಹಣ್ಣಾಗಿ
ತಳಿರು ತೋರಣಗಳ ವೈಭವದ
ಹಬ್ಬದೋಳಿಗೆ ಉಣಬಡಿಸು ಬಾ!
18-3-2016 10.38am
(Published in Vismayanagari. com)

ವಿಸ್ಮಯ ನಗರಿ

ನನ್ನ ಬರಹಗಳನ್ನು online ನಲ್ಲಿ ಮೊದಲು publish ಮಾಡಿರುವುದು “ವಿಸ್ಮಯ ನಗರಿ”ಯಲ್ಲಿ. ಬರೆಯುತ್ತ ಈ ತಾಣದ ಬಗ್ಗೆ ನನಗಿರುವ ಪ್ರೀತಿ ಈ ಕವನ ಬರೆಯಲು ಸಾಧ್ಯವವಾಯಿತು.

ನನ್ನ ಎಷ್ಟೊಂದು ಬರಹಗಳಿಗೆ ತನ್ನ ಮಡಿಲಲ್ಲಿ ಆಶ್ರಯ ಕೊಟ್ಟಿದ್ದಾಳೆ‌. ನಿಜಕ್ಕೂ ಇದು ನನ್ನ ಬರಹದ ತೌರುಮನೆ‌. ನನ್ನ ಬರಹಕ್ಕೆ ಇಲ್ಲಿ ಒಳ್ಳೆ ಮನ್ನಣೆ ಸಿಕ್ಕಿದೆ. ಈ ತಾಣ ಯಾವತ್ತೂ ಮರೆಯೋಲ್ಲ.

Thanks Vismaya!
9-3-2016. 1.35pm

****************

ವಿರಾಜಿಸುತ್ತಿದೆ ಕನ್ನಡದ ಸುಂದರ ವಿಸ್ಮಯ ನಗರಿ
ಸ್ಮರಿಸುತಿಹರು ದಿನವೂ ಕವಿ ಬಳಗದವರೆಲ್ಲ
ಯಶಸ್ವಿಯಾಗಿ ಬೆಳೆಯುತ್ತಿದೆ ಎಂಬ ಖುಷಿಯಲ್ಲಿ.

ನವ್ಯ ಕವಿಗಳಿಗೆ ಆಶ್ರಯ ಕಲ್ಪಿಸಿರುವೆ
ಗರಿಗೆದರಿ ಸಂಭ್ರಮಿಸುವರು ಬರೆದಾಗ ನಿನ್ನಲ್ಲಿ
ರಿಂಗಣಿಸುತ್ತಿದೆ ನಿನ್ನ ಪ್ರಭೆ ಎಲ್ಲರ ಮನದಲ್ಲಿ.

ಯಾರಿಟ್ಟರೆ ನೀನಗೀ ಸುಂದರ ಹೆಸರು?
ಸ್ಮರಿಸಿಕೊಂಡಾಗೆಲ್ಲ ಕಾಡುವೆ ಮನದಲ್ಲಿ ವಿಸ್ಮಯವಾಗಿ
ಕೈ ಎತ್ತಿ ಮುಗಿಯ ಬೇಕು ನಿನ್ನ ಸೃಷ್ಟಿಸಿದ ರಾಜನಿಗೆ!

ನಾಲ್ಕು ವಷ೯ದಲ್ಲಿ ಅನನ್ಯ ಸಾಧನೆ ತೋರಿಸಿರುವೆ
ಸಾವಿರಾರು ಮನದ ಕದವ ತಟ್ಟಿರುವೆ
ಇನ್ನೂ ಕೋಟಿ ಕವಿಗಳು ನಿನ್ನಂಗಳಕೆ ಬರಬೇಕು.

ಏನುಂಟು ಏನಿಲ್ಲ ಹೇಳು ನಿನ್ನ ಮಡಿಲಲ್ಲಿ
ಮುತ್ತಿನಂಥ ಮಾತು ಪಿಸುಮಾತಿನಲ್ಲಿ ಹಾಸ್ಯ ಸಂದೇಶ
ಕವನಗಳ ಡಂಗುರ ಸ್ನೇಹಿತರ ಬಳಗ ಇತರೆ ಇನ್ನೆನೇನೋ.

ಹೃದಯವಂತರೇ ಇಹರು ನಿನ್ನ ಊರಲ್ಲಿ
ಇಲ್ಲಿ ರಾಜಕೀಯವಿಲ್ಲ,ಮೇಲು ಕೀಳೆಂಬುದಿಲ್ಲ
ಪ್ರತಿಬೆಗೆ ಮುಕ್ತ ಮಣೆ ಹಾಕುವರು ನಿನ್ನವರು.

“ಸಜ್ಜನರ ಸಂಘ ಹೆಜ್ಜೇನು ಸವಿದಂತೆ”
ನೆನಪಿಸಿಕೊಳ್ಳುವರೆಲ್ಲ ಸುಂದರ ಕವಿ ವಾಣಿ
ಕೃತಜ್ಞತೆಯ ಭಾವ ಮೂಡಿಹುದು ಎಲ್ಲರ ಮನದಲ್ಲಿ.

ಬೆಳೆಯುತ್ತಲಿರಲಿ ನಿನ್ನ ಸಾಮ್ರಾಜ್ಯ ಎಲ್ಲ ದಿಕ್ಕಿನಲ್ಲಿ
ನಿತ್ಯಪೂಜಿಸುವೆವು ಶಬ್ದಗಳ ತೋರಣ ಕಟ್ಟಿ,
ಅಕ್ಷರಗಳ ಮಾಲೆ ತೊಡಿಸಿ,ಹೃದಯ ಮಂದಿರದಲ್ಲಿ ದೀಪ ಹಚ್ಚಿ!

ಬನ್ನಿ,ಕನ್ನಡಾಂಬೆಯ ಸೇವೆಗೆ ಕೈ ಜೋಡಿಸೋಣ
ಉತ್ತಮವಾದ ಬರಹಕ್ಕೆ ಹಾಕೋಣ ವೋಟು
ಬರೆಯುವ ಕೈಗಳಿಗೆ ಮಾಡೋಣ ಸಪೋಟು೯.

ಹೆಚ್ಚು ಬರೆಯುವುದಿಲ್ಲ ಇದು ನನ್ನ ಬರಹದ ತೌರುಮನೆ
ಮರೆತರೂ ಮರೆಯಲಾಗದ ಋಣದ ನಂಟಿಹುದಿಲ್ಲಿ
ಬಂದು ಹೋಗುವೆನು ಆಗಾಗ ಬರಹದ ಬುತ್ತಿ ಹೊತ್ತು!

” ಜೈ ಭುವನೇಶ್ವರಿ”
2-2-2016. 8.45pm
(Published in Vismayanagari. com)

ಕವಿ ಹೃದಯ

image

ಎಲ್ಲರನು ಕಂಡಾಗ
ಕವಿ ಹೃದಯ
ಕರಗುವುದಿಲ್ಲ
ಹೊಮ್ಮಿ ಬರುವುದಿಲ್ಲ
ಸ್ಪೂತಿ೯.

ಅಂತರಾತ್ಮದ
ಕದವ ತಟ್ಟಿ
ಬಡಿದೆಬ್ಬಿಸಿದರೂ
ಬಾಚಿತಬ್ಬದರೂ
ಸಿಗುವುದಿಲ್ಲ
ಶಬ್ಧಗಳ ಸಾಲು.

ಗಟ್ಟಿ ಮನಸಿನ ತುಂಬ
ಬಿಟ್ಟ ಬೇರುಗಳಲ್ಲೆಲ್ಲ
ಕಂಡ ಕಲ್ಪನೆಗಳೆಲ್ಲ
ಸಾಕಾರವಾದಾಗ ಮಾತ್ರ
ಉಕ್ಕುಕ್ಕಿ ಹರಿಯುವುದು
ಕವನಗಳ ಸಾಲು.

10-7-2013.
(Published in Sampada net. And Vismayanagari. com).

ಭಾಗ೯ವನಿಗೆ ನಮನ

ಉದಯಿಸುವ ಸೂಯ೯
ಹೊಂಗಿರಣ ಬೀರಿ
ಕತ್ತಲೆಯ ಕೋಟೆಯ
ಬೆಳಕಾಗಿಸುತಿಹನು‌.

ಶುಭೋದಯದ ಗಾನ
ನನ್ನಿಂದ ಹಾಡಿಸಿ
ದಿನದ ಗಳಿಗೆಗಳೆಲ್ಲ
ಸರ್ವರಿಗೂ ಶುಭವಾಗಲೆಂದು.

ಹಚ್ಚು ನೀ ಜ್ಯೋತಿಯನು
ನಿಸ್ವಾಥ೯ದಿಂದ
ಬತ್ತಲಾರದು ಬದುಕು
ಹಸಿರಾಗಿರುವುದೆಂದೆಂದೂ.

ಈ ಹೊಸ ವಷ೯ದ
ಬರುವಿಕೆಯೊಂದಿಗೆ
ಹೊಸತನವು ಮೇಳೈಸಿ
ಕಳೆಯಲಿ ಕಾಲವೆಲ್ಲ.

ಬಾ ನನ್ನೊಳಗಿನ ಕನಸುಗಾರ
ಭಾಗ೯ವನಿಗೆ ನಮಿಸುವ ಒಂದಾಗಿ
ಭ್ರಾಹ್ಮೀ ಮುಹೂರ್ತದಲ್ಲಿ
ಹಳೆ ವಷ೯ಕ್ಕೆ ವಿದಾಯ ಹೇಳಿ.

31-12-2015 6.23pm.
(Published in Vismayanagari .com.)