ಗೀತಾ ಜಿ ಹೆಗಡೆ ಕವಿತೆ – ಈಗೀಗ ರಸ್ತೆಗಳೂ ಮಾತನಾಡುತ್ತವೆ… | ಅವಧಿ । AVADHI

https://avadhimag.in/%e0%b2%97%e0%b3%80%e0%b2%a4%e0%b2%be-%e0%b2%9c%e0%b2%bf-%e0%b2%b9%e0%b3%86%e0%b2%97%e0%b2%a1%e0%b3%86-%e0%b2%95%e0%b2%b5%e0%b2%bf%e0%b2%a4%e0%b3%86-%e0%b2%88%e0%b2%97%e0%b3%80%e0%b2%97-%e0%b2%b0/

ಗೀತಾ ಜಿ ಹೆಗಡೆ ಕಲ್ಮನೆ ಕವಿತೆ – ದೇವರ ಆಟವಂತೆ… | ಅವಧಿ । AVADHI

https://avadhimag.in/%e0%b2%97%e0%b3%80%e0%b2%a4%e0%b2%be-%e0%b2%9c%e0%b2%bf-%e0%b2%b9%e0%b3%86%e0%b2%97%e0%b2%a1%e0%b3%86-%e0%b2%95%e0%b2%b2%e0%b3%8d%e0%b2%ae%e0%b2%a8%e0%b3%86-%e0%b2%95%e0%b2%b5%e0%b2%bf%e0%b2%a4-3/

ಹರಿಯುವ ನದಿಯ ನೀರನ್ನು
ಸ್ಪರ್ಶಿಸಲು ಹೋದಾಗ
ಅದು ಬೆರಳಿಗೆ ತಾಗಿ
ಸಂದಿಯಿಂದ ಹರಿದು ಹೋಯಿತು.

ಎಲ್ಲಿಗೆ ಹೋಗುವುದೋ
ಎಂಬ ಕುತೂಹಲಕ್ಕೆ ಕಾಲುಗಳು
ದಂಡೆಯ ಗುಂಟ ನಡೆದಾಗ
ಬೆಕ್ಕು ಅಡ್ಡ ಬಂದಿದ್ದಕ್ಕೆ
ಅಪಶಕುನವಾಯಿತೆಂದು ಹಿಂತಿರುಗಿದೆ.

ನೋಡನೋಡುತ್ತಿದ್ದಂತೆ
ಕಟ್ಟಿದ ಸೇತುವೆ ನದಿಯ ಮಧ್ಯದಲ್ಲಿ
ಹರಿದು ಬಿದ್ದಾಗ ಅಯ್ಯೋ ಎಂಬ
ಆರ್ತನಾದ ಕಿವಿಗಪ್ಪಳಿಸಿ
ಬೆಕ್ಕಿನ ಶಕುನ ನಿಜವೆಂದು ನಂಬಿದೆ.

ಇನ್ನೇನು ನಾನೂ ಸೇತುವೆ ಏರುವವಳಿದ್ದೆ
ನದಿಯ ಹರಿವು ಕಾಣಲು
ಸದ್ಯ ತಪ್ಪಿತು!
ಇಲ್ಲಿ ಮಾಧ್ಯಮಗಳು ಹಳವಂಡಿ ಸ್ವರದಲ್ಲಿ
ಅಲವತ್ತುಕೊಳ್ಳುತ್ತಿದ್ದವು ಕಾಲು ಬಾಲ ಕಟ್ಟಿ
ನೋಡುಗರ ಮನ ತಾಕುವಂತೆ.

ಹಾಗಂತೆ ಹೀಗಂತೆ
ಬಾಯಿಯಿಂದ ಬಾಯಿಗೆ ಹರಡಿದ ಸುದ್ದಿ
ದಿಕ್ ದಿಗಂತ ತಲುಪಲು
ರೀಪೇರಿ ಮಾಡಿದವ ಹೇಳಿದ್ದನಂತೆ ರೀ ಓಪನಿಂಗನಲ್ಲಿ
ಇನ್ನು ಹತ್ತು ವರ್ಷ ಎನೂ ತೊಂದರೆ ಇಲ್ಲ.

ಹೇಳಿದ ನಾಲ್ಕೇ ನಾಲ್ಕು ದಿನಗಳಲ್ಲಿ
ಸೇತುವೆ ಮಠಾಶ್
ಈಗ ಅಂಬೋಣ ಇದು ದೇವರ ಆಟವಂತೆ!

ಅಂದರೆ ದೇವರು ನನ್ನ ಬದುಕಿಸಲು
ಬೆಕ್ಕಿನ ರೂಪದಲ್ಲಿ ಬಂದಿದ್ದನಾ?
ಕೇಳೋಣವೆಂದರೆ ಬೆಕ್ಕೂ ಕೂಡಾ
ನಾಪತ್ತೆಯಾಗಿದೆ
ಮುಂದೇನು ಮಾಡುವುದು
ನೀವೇ ಹೇಳಿ.

3-11-22 3.55pm✍️

ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದ ಕಥೆ

ಧನ್ಯವಾದಗಳು ಪತ್ರಿಕಾ ಬಳಗದವರಿಗೆ 🙏🙏

“ಎಂತಾ ಮಾರಾಯ್ತಿ,  ಈ ನಮನಿ ಹಿಡದ್ ಬಿಡದೆ ಮಳಿ ಸುರೀತಿತ್.  ತಲೆ ಎತ್ತಿ ನೋಡೂಕ್ ಯಡಿಯಾ.  ಕಂಬಳಿ ಕೊಪ್ಪೆ ಒಳಗೆಲ್ಲ ನೀರ್ ಬತ್ ಕಾಣು.    ಹೆಗಡೀರು ಹೊತಾರೆನೆ ಹೇಳಿದ್ರ, ಶಂಕ್ರ ನೀ ಏನಾರ ಕಾನ್ಸೂರ್ ಪ್ಯಾಟಿ ಕಡಿ ಹೋಪುದಾದರೆ ಸ್ವಲ್ಪ ಸಾಮಾನು ತರೂಕಿತ್.  ಜಪತಿ ಮಡೀಕ ಅಂದಿದ್ರ.  ಹಂಗೆ ಹೆಗಡೀರ್ ಮನೆತಾವ್ ಏನ್ ತರೂಕಿತ್ತು ಕೇಳ್ಕಂಡಿ ಮಳಿಯಾದ್ರೂ ಪ್ಯಾಟಿ ಕಡಿ ಹೋಯ್ಲೆ ಬೇಕಿತ್.  ಒಸಿ ಕಡಿಮೆ ಆತ್ ಕಾತೆ.  ಸುಡು ಸುಡು ಚಾಯ್ ಕೊಡಾಯ್ತಾ. ನಿಂಗೇನರ ಬೇಕಿದ್ರ ಹೇಳು ಮತ್ತೆ.  ಮನಿ ಸಾಮಾನೆಲ್ಲ ಇತ್ ಕಾಣು.”

ಸುರಿಯುತ್ತಿರುವ ಜಡಿ ಮಳೆಯಲ್ಲಿ ಅಡಿಕೆಯ ತೋಟದ ಕೆಲಸವನ್ನು ಸರಿಯಾಗಿ ಮಾಡಲಾಗದೆ ಬೇಗನೇ ತನ್ನ ಬಿಡಾರಕ್ಕೆ ಬಂದವನೆ ಹನಿಯುತ್ತಿದ್ದ ತನ್ನ ಕಂಬಳಿ ಕೊಪ್ಪೆ ಗೂಟಕ್ಕೆ ನೇತಾಕಿ ಹೊಡತಲ ಬೆಂಕಿ ಕಾಯಿಸುತ್ತ ಹೆಗಡೆಯವರ ಮನೆ ಖಾಯಂ ಆಳು ಶಂಕರನ ಮಾತು ಹೆಂಡತಿ ನಿಂಗಿ ಜೊತೆ ನಡೆಯುತ್ತಿತ್ತು.  ಅವನಿಗೋ ಮೈಯ್ಯೆಲ್ಲ ಚಳಿ ಹತ್ತಿ ಒಂದು ಗುಟುಕು ಪ್ಯಾಟೆಗೆ ಹೋಗಿ ಹಾಕುವ ಇರಾದೆ ಮನಸಲ್ಲಿ.
ಹೆಗಡೆಯವರ ನೆವ ನಿಂಗಿಯ ಮುಂದೆ.  ಅವಳಿಗೇನು ತಿಳಿಯದ ವಿಚಾರವೆ?  ಅವಳು ಮೌನವಾಗಿ ಖಡಕ್ ಚಾ ಜೊತೆ ಆಗತಾನೆ ಬೆಂಕಿ ಕೆಂಡದಲ್ಲಿ ಸುಟ್ಟ ಹಲಸಿನ ಕಾಯಿ ಹಪ್ಪಳ ತಂದಿಟ್ಟು ಹೇಳುತ್ತಾಳೆ ; 

“ಓಯ್ ನಿನ್ನೇನು ನಾ ಕಾಣದ ಮನಷ್ಯಾನಾ?  ನಂಗೆಲ್ಲ ಗೊತ್ತಿತ್ತ್.  ಜಾಸ್ತಿ ಏನಾರ ಗಂಟಲಿಗೆ ಇಳಸಿದ್ಯೊ ಗೊತ್ತಿತ್ತಲ್ಲ!  ಮತ್ ನಾ ವೋಳಿಲ್ಲ ಅನ್ಬ್ಯಾಡ.  ನಡಿ ಬಿರೀನೆ ಹೋಗಿ ಬಿರೀನೆ ಬಾ.  ಬೆಳಗಾದರೆ ದೀಪಾವಳಿ ಹಬ್ಬ ಇತ್.  ಹಂಗೆ ಏಯ್ಡ ದಿವಸ ಕೆಲಸಕ್ಕೆ ಬರೂಕಾಯ್ತಿಲ್ಲ ಅಂತ ಹೆಗಡೀರ್ ಹತ್ರ ಹೇಳ್ ಬಾ.”

ನಿಂಗಿ ಮಾತಿಗೆ ದೂಸರಾ ಮಾತಾಡದೆ ಅವಳು ಕೊಟ್ಟ ಬಿಸಿ ಚಾ ಸೊರ್….ಸೊರ್…. ಎಂದು ಶಬ್ದ ಮಾಡಿ ಆಸ್ವಾದಿಸುತ್ತ ಕುಡಿದು ಮತ್ತದೆ ಕಂಬಳಿಕೊಪ್ಪೆ ಏರಿಸಿ ಹೆಗಡೆಯವರ ಮನೆ ಕಡೆ ಹೊರಟ.

“ಬಾ ಬಾ ನಿನ್ನೇ ಕಾಯ್ತಾ ಇದ್ದೆ.  ಯನ್ನ ಮಗಂಗೆ ಪ್ಯಾಟಿಗೆ ಹೋಪಕರೆ ಹೇಳಿದ್ನ ; ಮಾಣಿ, ಬರಕರೆ ಬಾಲಣ್ಣನ ಅಂಗಡಿಗೋಗಿ ಒಂದ್ ಕಟ್ ಬೀಡಿ ತಗಂಬಾ ಮರೆಯಡಾ ಹೇಳಿದ್ದಿ.   ಈ ಮಾಣಿ ಬರಕರೆ ಮರ್ತಿಕ್ಕ ಬಂದಿಗೀದಾ.  ಎಂತಾ ನಮನಿ ಮಳೆ.  ಚಳಿ ಜಾಸ್ತಿ.  ಹೊಡತಲ್ ಕಾಯಿಸ್ತಾ ಹಂಗೆ ಒಂದ ಧಮ್ ಎಳದ್ರೆ ನನ್ನ ಮಗಂದು ಚಳಿ ಕಿತ್ಕಂಡೋಗವು.    ಶಂಕರಾ ಬೇಗ ಹೋಗಿ ಈ ಚೀಟಿಯಲ್ಲಿರೊ ಸಾಮಾನಿನ ಸಂಗ್ತೀಗೆ ಬೀಡಿ ಮಾತ್ರ ಮರೆಯದೆ ತಗಂಬಾ.   ಲೇ ಇಲ್ನೋಡೆ.  ಶಂಕರಾ ಬಂಜಾ.  ಒಂದು ಚೀಲಾ ಕೊಡು.  ಕಾನ್ಸೂರಿಗೆ ಹೋಗಿ ಸಾಮಾನು ತತ್ತಾ.  ಲಗೂ ತಗಂಬಾರೆ….”

ಹೆಗಡೆಯವರ ಹೆಂಡತಿ ಮಾದೇವಿಗೂ  ಗೊತ್ತು ಗಂಡನ ಬೀಡಿ ಕತೆ.  ಇದಕ್ಕೊಂದು ನೆವ ತಮಗೆ ಬೀಡಿ ಬೇಕಾಜು.  ಮನಸ್ಸಿನಲ್ಲೆ ನಕ್ಕು ಬಿಸಿ ಬಿಸಿ ಎರಡು ಲೋಟ ಚಾ ಹಿಡಿದು ಚೀಲದೊಂದಿಗೆ ಜಗುಲಿಗೆ ಬರುತ್ತಾಳೆ.     

“ತಗ ಶಂಕರಾ ಚಾ ಕುಡಿ.  ನೀವೂ ಕುಡಿರಿ. ತಗಳಿ.  ಯಂಗೆ ಒಳಬದಿಗೆ ರಾಶಿ ಕೆಲಸಿದ್ದು.  ಶಂಕರಾ ನಿಂಗಿ ಕರ್ಕಂಡು ನಾಳೆ ಸಂಜಿಗೆ ಬಾರೊ.  ಕುಂಬಳಕಾಯಿ ಕಡುಬು ಮಾಡ್ತೆ.  ತಿಂದ್ಕಂಡು ಮಕ್ಕಳಿಗೂ ತಗಂಡು ಹೋಗ್ಲಕ್ಕು”. 

“ದೀಪಾವಳಿ ಹಬ್ಬದ ಕೆಲಸ ಮೈತುಂಬ. ಒಂದ ನಿಮಿಷ ಪುರಸೊತ್ತಿಲ್ಲೆ.  ಬೆಳಗಿಂದ ಹುಡಾದು ಹುಡಾದು ಸೊಂಟೆಲ್ಲ ನೋವು ಬಂದೋಜು.  ವಯಸ್ಸಾಗ್ತಾ ಆಗ್ತಾ ಹಬ್ಬದ ಶಾಸ್ತ್ರ ಮಾಡಲಾಕ್ತಿಲ್ಲೆ, ಮಾಡದೆ ಇದ್ರೆ ಮನಸ್ಸು ಕೇಳ್ತಿಲ್ಲೆ.  ಈಗಿನವಕೆ ಇದ್ಯಾವ್ದೂ ಬ್ಯಾಡಾ.  ಈ ಮನೇಲಿ ಒಳಬದಿ ಕೆಲಸಕ್ಕೆ ಆ ಒಬ್ಬನೇ ಹುಡಾಯವು.  ಆ ದೇವರಿಗೂ ಕರುಣಿಲ್ಲೆ.  ಎರಡು ಜನ ಗಂಡು ಮಕ್ಕಳ ಕೊಟ್ಟಿಗೀದಾ.  ಹೆಣ್ಣುಡ್ರಾದರೆ ಯಂಗೆ ಹನಿ ಸಹಾಯ ಮಾಡ್ತಿದ್ವನ……” ತನ್ನಷ್ಟಕ್ಕೆ ಗೊಣಗುತ್ತ ಒಳ ಹೋದ ಹೆಂಡತಿಯ ಕಡೆ ನೋಡುತ್ತ ಹೆಗಡೆಯವರು ಮುಖದಲ್ಲಿ ನಗು ಮೂಡಿತು. 

“ನೋಡು ಶಂಕರಾ ನಾಳೆ ಬೆಳಿಗ್ಗೆ ನಿನ್ನ ಹೆಂಡತಿಯನ್ನು ನಮ್ಮನೆಗೆ ಒಂದು ಸಲ ಕಳಿಸಿಕೊಡು.  ಒಂದಷ್ಟು ಕೆಲಸ ಮಾಡಿಕೊಟ್ಟರೆ ಇವಳಿಗೂ ಸಹಾಯವಾಗುತ್ತದೆ.  ಪಾಪ!  ಒಬ್ಬಳೆ ಕಷ್ಟ ಪಡುತ್ತಾಳೆ”  ನಿಟ್ಟುಸಿರು ಕೇಳುವಷ್ಟು ಜೋರಾಗಿತ್ತು. 

ಹೆಗಡೆಯವರ ಬಾಯಿಂದ ಬರುವ ಒಮ್ಮೆ ಹವ್ಯಕರ ಮಾತು ಇನ್ನೊಮ್ಮೆ ಪೇಟೆ ಮಾತು ಈ ಶಂಕರನಿಗೆ ಅದೆಷ್ಟು ಅರ್ಥ ಆಯಿತೊ ಗೊತ್ತಿಲ್ಲ.   ಕುಡಿದ ಲೋಟ ತೊಳೆದಿಟ್ಟು ಕೊಟ್ಟ ದುಡ್ಡು ಜೇಬಿಗೇರಿಸಿ ಚೀಲ ಹೆಗಲಿಗೇರಿಸಿಕೊಂಡು ” ಹೆಗಡೀರೆ ನಾ ಬತ್ತೆ.  ಬೀಡಿ ಮರೀದೆ ತತ್ತೆ ಆಯ್ತಾ” ಎಂದನ್ನುತ್ತ ಹೊರಟ.

ಮಳೆಯ ಅಬ್ಬರ ಸ್ವಲ್ಪ ಕಡಿಮೆ ಆಗಿತ್ತು.  ಶಂಕರನ ಬೀಡಿಗಾಗಿ ಹೆಗಡೆಯವರ ಮನ ಕಾಯುತ್ತಿತ್ತು.  ಶಂಕರನಿಗೆ ಗುಟುಕು ಹಾಕುವ ಹಪಹಪಿ ಮನ ಆವರಿಸಿತ್ತು.  ಕಾಲು ಸ್ವಲ್ಪ ಬಿರುಸಾಗಿ ಹೆಜ್ಜೆ ಹಾಕುತ್ತಿತ್ತು.  ಸಂತಸದ ಅಲೆ ತೇಲಿ ಬಂದಿತೊಂದು ಗಾನ ಶಂಕರನ ಬಾಯಿಂದ ಸಣ್ಣದಾಗಿ ಗುಣಗುಣಿಸುತ್ತ ಸಾಗಿತ್ತು ಹಾದಿ.

“ಯಾರೆ ಕೂಗಾಡಲಿ
ಊರೆ ಹೋರಾಡಲಿ
ಎಮ್ಮೆ ನಿನಗೆ ಸಾಟಿಯಿಲ್ಲ
ನಿನ್ನ ನೆಮ್ಮದಿಗೆ ಭಂಗವಿಲ್ಲ
ಅರೆ ಹೊಯ್….ಅರೆ ಹೊಯ್…”

ಸಾಮಾನ್ಯವಾಗಿ ಹಳ್ಳಿ ಮಕ್ಕಳ ಬಾಯಲ್ಲಿ ಲೀಲಾಜಾಲವಾಗಿ ಹೊರ ಹೊಮ್ಮುವ ಡಾ॥ರಾಜಕುಮಾರ್ ಹಾಡು ಶಂಕರನೂ ಕೇಳಿ ಕೇಳಿ ಕಲಿತು ಬಿಟ್ಟಿದ್ದ.  ತನ್ನದೆ ರಾಗದಲ್ಲಿ ಸಣ್ಣಗಿದ್ದ ಧ್ವನಿ ದಾರಿ ಸಾಗುತ್ತಿದ್ದಂತೆ ಜೋರಾಗಿ ಹಾಡಿಕೊಂಡು ಹೋಗುವ ಶಂಕರನ ಉತ್ಸಾಹ ಇಮ್ಮಡಿಸಿತ್ತು.  ಸಂಜೆಗತ್ತಲು ಆವರಿಸುತ್ತಿತ್ತು. ಬರುವಾಗ ಬೆಳಕಿಗೆ ಇರಲಿ ಎಂದು ಅಡಿಕೆ ದಬ್ಬೆ ಸಿಗಿದು ಒಪ್ಪವಾಗಿ ತಾನೇ ಮಾಡಿದ ಸೂಡಿಯನ್ನು  ಹಿಡಿದು ನಡೆಯುತ್ತಿದ್ದ.  ಅವನಿಗೆ ಕತ್ತಲೆಂದರೆ ಸ್ವಲ್ಪ ಭಯ.  ದೆವ್ವ ಭೂತಕ್ಕೆ ಬಹಳ ಹೆದರುವವ. 

ಅವನೇನು?  ಸಾಮಾನ್ಯವಾಗಿ ಹಳ್ಳಿಯ ಕಡೆ ರಾತ್ರಿ ಒಬ್ಬೊಬ್ಬರೆ ಹೋಗುವಾಗ ಈ ಸೂಡಿಗೆ ಬೆಂಕಿ ಹಚ್ಚಿಕೊಂಡು ಹೋಗುವ ಪದ್ದತಿ ರೂಡಿಸಿಕೊಂಡಿದ್ದರು ಕೆಲವು ಮಂದಿ.  ಬೆಂಕಿ ಕೈಲಿದ್ದರೆ ದೆವ್ವ ಭೂತಗಳ ಕಾಟ ಇರುವುದಿಲ್ಲ ಎಂಬ ಧೈರ್ಯ.  ಇದಕ್ಕೆ ಸರಿಯಾಗಿ ಹಳ್ಳಿಯ ಜನ ಪೂರ್ವ ತಯಾರಿಯಾಗಿ ಅಡಿಕೆ ತೋಟದಲ್ಲಿ  ಒಣಗಿದ ಅಡಿಕೆ ಮರ ಸಿಕ್ಕರೆ ಸಾಕು.  ಒಂದಷ್ಟು ಸೂಡಿಯನ್ನು ಮಾಡಿ ಇಟ್ಟುಕೊಳ್ಳುತ್ತಿದ್ದರು.  ಸರಿ ರಾತ್ರಿಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಪರಿಚಯಸ್ಥರು ಬಂದರೆ ಹೋಗುವಾಗ ಈ ಸೂಡಿ ಹಚ್ಚಿ ಬೆಳಕಿಗಿರಲಿ ಎಂದು ಕೊಡುತ್ತಿದ್ದರು.  

ಹಳ್ಳಿ ಅಂದ ಮೇಲೆ ಕೇಳಬೇಕೆ.  ಬೆಟ್ಟ ಗುಡ್ಡಗಳ ನಾಡು.  ಎಲ್ಲಿ ಹೋಗಬೇಕಾದರೂ ಒಳ ಹಾದಿಯ ಗುರುತು ಹಾವಿನಂತೆ ಸರಿದಾಡುತ್ತ ಸಾಗುವ ಕಿರಿದಾದ ಹಾದಿ  ಹುಲ್ಲು ಬೆಳೆಯುವ ಬೇಣ, ಅಡಿಕೆ ತೋಟದ ಮದ್ಯ ಸಾಗುವಾಗ ಅಲ್ಲಲ್ಲಿ ಸಿಗುವ ಹಳ್ಳಗಳು, ಹೊಳೆ ದಾಟಲು ಮರದ ಸಂಕ ಗಿಡ ಮರಗಳ ನಡುವೆ ತಾವೇ ಗುರುತಿಸಿಕೊಂಡ ಹಾದಿ ಸರಾಗವಾಗಿ ಸಾಗುತ್ತಿತ್ತು. 

ಪೇಟೆ ತಲುಪಿದ ಶಂಕರ.  ಆಗಲೆ ಬೀದಿ ದೀಪಗಳು ಹೊತ್ತಿಕೊಂಡಿತ್ತು.  “ಇಲ್ಲೆಲ್ಲ ಕಪ್ಪಾದರೂ ಬೆಳಕಿತ್, ನಮ್ಮ ಹಳ್ಳೀಗೆ ಯಾವಾಗ ಕರೆಂಟ್ ಬತ್ತಿತ್ತೊ ನಾ ಕಾಣೆ.” ಮನಸಲ್ಲೆ ಶಂಕರ ಅಲವತ್ತುಕೊಂಡ.  ಪೇಟೆಗೆ ಬಂದರೆ ಸಾಕು ಸೀದಾ ಅವನಿಗೆ ಪರಿಚಯವಿದ್ದ ಶೀನಣ್ಣನ ಹೊಟೆಲಿಗೆ ಮೊದಲು ಹೋಗಬೇಕು. 

“ಹೋಯ್! ಎಂತಾ ಮಾರಾಯಾ?   ಮಳಿ ಸಾಕಾ?  ಸಮಾ…ಹೊಡಿತ್ ನೋಡ್.  ತ್ವಾಟಕ್ಕೆ ಹೋಯಿ ಕಸುಬು ಮಾಡೂಕ್ ಆತಿಲ್ಲೆ.  ಒಂದು ಗಲಾಸು ಬಿಸಿ ಬಿಸಿ ಚಾಯ್ ಕೊಡು.  ಭಯಂಕರ ಥಂಡಿ ಮಾರಾಯಾ.  ಮನಿಂದ ಬರುವಾಗ ಕುಡದ್ರೂ ಮತ್ ಬೇಕಂತಾತ್.  ಎಂತಾ ಈ ವರ್ಸಾ ಈ ಪಾಟಿ ಮಳಿ.  ಬೇಗ ಕೊಡಾಯ್ತಾ?”

ಅವನು ಕೊಟ್ಟ ಬಿಸಿ ಚಾ ಗ್ಲಾಸ್ ಹಿಡಿದು ಅಲ್ಲೇ ಇರುವ ಬೇಂಚ್ ಮೇಲೆ ಕುಳಿತ ಶಂಕರನಿಗೆ ಸಟಕ್ಕನೆ ಎದುರಿಗೆ ಮೈಕಲ್ಲಿ ಕೂಗುತ್ತಿರುವ ವ್ಯಾನಿನ ಕಡೆ ಲಕ್ಷ ಹೋಯಿತು.  ವ್ಯಾನಿಗೆ ಬ್ಯಾನರ್ ಕಟ್ಟಿದ್ದರು.  ವ್ಯಾನಿನ ಸುತ್ತ ಒಂದಷ್ಟು ಚಿಕ್ಕ ಚಿಕ್ಕ ಚೀಟಿಗಳು ನೇತಾಡುತ್ತಿದ್ದವು.  ಕೆಂಪು,ಹಸಿರು ಹಳದಿ ಹೀಗೆ.  ಅದೇನೆಂದು ನೋಡುವ ಕುತೂಹಲ.  ಸುತ್ತ ಜನ ಬೇರೆ ಸೇರಿದ್ದರು.

ಕುಡಿದ ಟೀ ಗ್ಲಾಸ್ ಅಲ್ಲೇ ಇಟ್ಟು ವ್ಯಾನಿನ ಹತ್ತಿರ ಬಂದ.  ಓದಲು ಬರದ ಶಂಕರನಿಗೆ ಆ ಬಣ್ಣದ ಕೆಂಪು ಚೀಟಿ ಬಹಳ ಆಕರ್ಷಣೀಯವಾಗಿ ಕಂಡಿತು.  ಎಲ್ಲರೂ ದುಡ್ಡು ಕೊಟ್ಟು ತೆಗೆದುಕೊಳ್ಳುತ್ತಿದ್ದರು.  ಇವನಿಗೂ ಆಸೆಯಾಯಿತು.  ಆದರೆ ಅದು ಏನು?  ತಲೆ ಕೆರೆದು ಸೀದಾ ಶಿವಣ್ಣನ ಹತ್ತಿರ ಬಂದು ;

“ಅದೆಂತಾ?  ಆ ಪಾಟಿ ನೇತಾಕೀರು.  ಜನ ಹಣ ಕೊಟ್ಟ ತಗಂತ್ರು.  ಒಸಿ ಹೇಳು ಮಾರಾಯಾ.  ನಂಗೂ ಎಂತಕೊ ಆಸಿ ಆತ್ ಕಾಣು.”

ಶಂಕರನ ಮಾತಿಗೆ ನಗು ತಡೆಯಲಾಗದ ಶಿವಣ್ಣ ಒಮ್ಮೆ ಜೋರಾಗಿ ನಕ್ಕು ” ನಂಗೊಂದು ಮಾತು ಕೊಡಬೇಕು ನೀನು.  ಅಂದರೆ ಹೇಳ್ತೆ.”

“ಆಯ್ತು ಅದೆಂತದು ಹೇಳು.  ಲಾಟ್ರಿ ಲಾಟ್ರಿ ಅಂತ ಬಡಕಂತ್ರು.  ನಂಗೊಂದೂ ಅರ್ಥಾತಿಲ್ಲೆ.”

“ನೋಡು ಶಂಕರಾ ನಿನಗೆ ದುಡ್ಡು ಬೇಕಾ ಹೇಳು.  ಚೀಟಿ ತಗಾ.  ನಾಳೆ ಬೆಳಿಗ್ಗೆನೆ ಪೇಪರಲ್ಲಿ ಬರುತ್ತದೆ ಅದರ ನಂಬರು.  ನಿನ್ನ ಚೀಟಿ ನಂಬರು ಪೇಪರಲ್ಲಿ ಇದ್ದರೆ ಬಂಪರ್ ಬಹುಮಾನ ಎರಡೂವರೆ ಲಕ್ಷ ನಿಂಗೆ ಸಿಕ್ತದೆ.  ಅದರಲ್ಲಿ ಹತ್ತು ಸಾವಿರ ನನಗೆ ಕೊಡಬೇಕು ಆಯ್ತಾ.”  ತಮಾಷೆ ಮಾಡುತ್ತ ಹೇಳಿದ ಶಿವಣ್ಣ.

ಬಿಟ್ಟ ಬಾಯಿ ಬಿಟ್ಟಂತೆ ಕೇಳುತ್ತಿದ್ದ ಶಂಕರ ಆಗಲೆ ಕನಸಿನ ಲೋಕಕ್ಕೆ ಕಾಲಿಟ್ಟಿದ್ದ….

ಹೊಸ ಅಂಗಿ,ಉಟ್ಟ ಪಟಾಪಟಿ ಟವೆಲ್ಲು ಹೋಗಿ ಹೊಸಾ ಜರಿಯಂಚಿನ ಪಂಚೆ, ತಲೆ ಕೂದಲೆಲ್ಲ ಎಣ್ಣೆ ಹಾಕಿ ಮಿರಿ ಮಿರಿ ಮಿಂಚುವಂತೆ ಬಾಚಿ ಕೈಯಲ್ಲಿ ಬಂಗಾರದ ಕಲರ್ ಬೆಲ್ಟಿನ ದೊಡ್ಡ ವಾಚು,ಬಲಗೈಯ್ಯಿಗೆ ಬಿಳಿ ಹರಳಿನ ಉಂಗುರ, ಹೆಗಲ ಮೇಲೊಂದು ಟವೆಲ್ಲು  ಬಾಯಿತುಂಬ ಎಲೆ ಅಡಿಕೆ ಮೆಲ್ಲುತ್ತ ಶಿಸ್ತಾಗಿ ರೆಡಿ ಆಗಿಬಿಟ್ಟಿದ್ದ ಊರ ಶೇರೂಗಾರನ ಸ್ಟೈಲಲ್ಲಿ.  ಆಸೆ ಮತ್ತಷ್ಟು ಹೆಚ್ಚಾಯಿತು.  ಕೈ ಜೋಬು ತಡಕುತ್ತಿತ್ತು.  ಮನಸಲ್ಲಿ ಏನೊ ಲೆಕ್ಕಾಚಾರ ಹಾಕಿ…

“ಬಾ ಶಿವಣ್ಣ ನೀನು ಜೊತಿಗೆ.  ನಂಗೊಂದು ಕೆಂಪು ಚೀಟಿ ಕೊಡಿಸು.  ಚಂದಿತ್.  ನಂಗೆ ಅದೇ ಬೇಕು.  ಒಂದೇ ಒಂದು ಸಾಕು ಆಯ್ತಾ.  ಇವತ್ತು ಗುಟುಕು ಬ್ಯಾಡಾ.  ಅದೇ ದುಡ್ಡಲ್ಲಿ ತಿಕೀಟು ತಗಂತೆ” ಚಿಕ್ಕ ಮಕ್ಕಳ ಮಾತಂತಿತ್ತು ಅವನ ಮಾತು. 

“ಆಗಲಿ ಬಾ. ನಿಂಗೆ ಯಾವ ನಂಬರು ಬೇಕೊ ಆರಿಸಿಕೊ.  ಏ…ಮಾಣಿ ಗಿರಾಕಿ ಕಡೆ ಲಕ್ಷ ಇರಲಿ.  ಐದು ಮಿನೀಟ್ ನಾ ಬತ್ತೆ.”  ಗಲ್ಲಾ ಪೆಟ್ಟಿಗೆಗೆ ಬೀಗ ಜಡಿದು ಶಿವಣ್ಣ ಶಂಕರನೊಂದಿಗೆ ಹೊರಟ. 

“ನಂಗೆ ಮೊದಲೇ ಕಣ್ಣಿಗೆ ಬಿತ್,ಅದೇ ಕೆಂಪು ಚೀಟಿ ಸಾಕು.  ಆ ದ್ಯಾಮವ್ವನ ಆಶೀರ್ವಾದ ಇದ್ದರೆ ಇದೇ ನಂಬರಿಗೆ ಬತ್ತಿತ್ತು.  ಆರ್ಸೂದ್ ಎಂತಕ್ಕೆ.” 

ದೈವದ ಮೊರೆ ಹೋದ ಶಂಕರ ಹೇಳಿದ.  ಹತ್ತು ರೂಪಾಯಿ ಕೊಟ್ಟ ಕರ್ನಾಟಕ ರಾಜ್ಯ ಲಾಟರಿ ಟಿಕೆಟು ಭದ್ರವಾಗಿ ಶಂಕರನ ಜೋಬು ಸೇರಿತು. 

“ಬಾ ಹೋಪಾ.  ನಂಗೂ ಸಾಮಾನ್ ತಗಳಕಿತ್ತು.  ನಂಬರ್ ಬಂದರೆ ನಿನಗೂ ಹಣ ಕೊಡ್ತೆ ಆಯ್ತಾ? ” ಎಂದಂದು ಜೋಬಿನ ಮೇಲೆ ಮತ್ತೆ ಕೈಯಾಡಿಸಿ ಖಚಿತಪಡಿಸಿಕೊಂಡು ಶಂಕರ ಹೊರಟ. 

ಅವನ ಪ್ರಾಮಾಣಿಕತೆ ಶಿವಣ್ಣನಿಗೆ ಇವತ್ತೇನು ಹೊಸತಲ್ಲ.  ಹಲವು ವರ್ಷಗಳಿಂದ ಕಂಡ ಅಪರೂಪದ ಮನುಷ್ಯ.   ಹೆಗಡೆಯವರ ಮನೆಯಲ್ಲಿ ಮನೆಯಾಳಾಗಿ ಬೆಳಗಿನಿಂದ ಸಾಯಂಕಾಲದವರೆಗೂ ರಟ್ಟೆ ಮುರಿವಷ್ಟು ದುಡಿದು ನಂಬಿಗಸ್ಥನಾಗಿ ನಿಯತ್ತಿನಿಂದ ಬದುಕುತ್ತಿದ್ದ.  ಪೇಟೆಗೆ ಬಂದರೆ ಸಾಕು ಶಿವಣ್ಣನ ಹೊಟೆಲ್ ಖಾಯಂ ಗಿರಾಕಿ.  ಬನ್ನು ಟೀ ಕುಡಿದು ಒಂದಷ್ಟು ಹರಟೆ ಹೊಡೆದು ಹೋಗುವವ.  ಅವನನ್ನು ಕಂಡರೆ ಶಿವಣ್ಣನಿಗೆ ಇನ್ನಿಲ್ಲದ ಅಭಿಮಾನ.

ಇತ್ತ ಕಾಯುತ್ತಿರುವ ನಿಂಗಿಗೆ ಗಂಡನದೆ ಯೋಚನೆ.  ಎಲ್ಲಿ ಜಾಸ್ತಿ ಏರಿಸಿ ನಾನೇನಾದರೂ ಅಂದರೆ ಸಿಟ್ಟಲ್ಲಿ ಬಂದು ತದುಕಿದರೆ!  ಒಂದೆರಡು ಬಾರಿ ಹೀಗೆ ನಡೆದಿದ್ದರೂ ಗಂಡನ ಮೇಲೆ ಅಪಾರ ನಂಬಿಕೆ, ಪ್ರೀತಿ ಅವಳಿಗೆ.

  “ಅವ ಹಾಂಗ ಮಾಡೂಕಿಲ್ಲ, ಹೋಗುವಾಗ ಏಳೀನಲ್ಲಾ.  ನನ್ನ ಭಯ ಒಸಿ ಇತ್ ಅವನಿಗೆ.  ಪಿರೂತಿನೂ ಮಾಡ್ತಾ.” ತನ್ನಷ್ಟಕ್ಕೆ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದಾಳೆ.

ಮೊದಲು ಹೆಗಡೆಯವರಿಗೆ ಬೀಡಿ ತೆಗೆದುಕೊಂಡು ಚೀಟಿಯಲ್ಲಿರುವ ಸಾಮಾನೆಲ್ಲ ಕಟ್ಟಿಸಿಕೊಂಡ ಶಂಕರ ಅಲ್ಲೆ ಹತ್ತಿರವಿದ್ದ ಮನೆಯೊಂದರಲ್ಲಿ ಸೂಡಿಗೆ ಬೆಂಕಿ ಹೊತ್ತಿಸಿಕೊಂಡು ಲಗುಬಗೆಯಿಂದ ಮನೆಯ ಕಡೆ ಹೆಜ್ಜೆ ಹಾಕಿದ.  ಒಂದೂವರೆ ಮೈಲು ನಡಿಗೆ ಆ ಕಾಲು ಹಾದಿಯಲ್ಲಿ ಮಳೆಯ ಹೊಡೆತಕ್ಕೆ ಅಲ್ಲಲ್ಲಿ ಸ್ವಲ್ಪ ಜಾರುತ್ತಿತ್ತು.  ಸುತ್ತ ನಿರ್ಜನ ಪ್ರದೇಶ.  ಬೆಂಕಿ ಕೈಲಿರೋದೇ ಧೈರ್ಯ ಅವನಿಗೆ.  ಹೆಗಡೆಯವರ ಮನೆಗೆ ಸಾಮಾನೆಲ್ಲ ತಲುಪಿಸಿ ತನ್ನ ಗುಡಿಸಲು ತಲುಪಿದಾಗ ಗಂಟೆ ರಾತ್ರಿ ಒಂಬತ್ತು ಮೂವತ್ತು ದಾಟಿತ್ತು.

“ಅರೆ ಇದೇನಿದು?  ಬಿರೀನೆ ಬಂದುಬಿಟ್ಟೆ?” 

ಹತ್ತಿರ ಬಂದು ಮೂಸಿದರೂ ವಾಸನೆ ಮೂಗಿಗೆ ಬರುತ್ತಿಲ್ಲ.  ಇದೇನಾಶ್ಚರ್ಯ!  ಆದರೆ ಏನೂ ಕೇಳದೆ ಮಾಡಿದ ಬಿಸಿ ಬಿಸಿ ಕೆಂಪಕ್ಕಿ ಗಂಜಿ ಬೇಯಿಸಿದ ಎರಡು ಕೋಳಿ ಮೊಟ್ಟೆ ಬಾಳೆ ಎಲೆಗೆ ಹಾಕಿ  ಹೆಗಡೆಯವರ ಮನೆಯಿಂದ ತಂದ ಮಾವಿನ ಮಿಡಿ ಉಪ್ಪಿನ ಕಾಯಿ ಬಾಳೆ ತುದಿಯಲ್ಲಿ ಹಾಕಿ ಪಕ್ಕದಲ್ಲಿ ಬಂದು ಕುಳಿತಳು.  ಶಂಕರ ಮಾತ್ರ ಹೆಚ್ಚು ಮಾತನಾಡದೆ ಮೌನವಾಗಿ ಊಟ ಮಾಡುತ್ತಿದ್ದ. 

ಮನುಷ್ಯನಿಗೆ ಯಾವುದಾದರೂ ವಿಷಯ ತಲೆಗೆ ಹೊಕ್ಕಿತು ಅಂದರೆ ಅದೇ ವಿಷಯದ ಸುತ್ತ ಮನಸ್ಸು ಗಿರಕಿ ಹೊಡೆಯುತ್ತಲೆ ಇರುತ್ತದೆ.  ಅದು ನಿರೀಕ್ಷೆಯ ಕ್ಷಣಗಳಾದರೆ ಅದು ಈಡೇರುವವರೆಗೂ ಮನಸ್ಸು ಚಡಪಡಿಸುತ್ತಲೆ ಇರುತ್ತದೆ.  ಮಾತು ಮೌನದ ರೂಪ ತಾಳುತ್ತದೆ.  ಶಂಕರನಿಗೂ ಇದೆ ಅವಸ್ಥೆ.  ಅವನ ತಲೆ ತುಂಬ ಆ ಲಾಟರಿ ಟಿಕೇಟಿನದೆ ಗುಂಗು.  ಹಾಸಿಗೆಯಲ್ಲಿ ಹೊರಳಾಡುತ್ತ ಮಲಗಿದನೆ ಹೊರತು ನಿದ್ದೆ ಹತ್ತಿರ ಸುಳಿಯುತ್ತಿಲ್ಲ.  ಬೆಳಗಿನ ಜಾವಜಲ್ಲಿ ಸ್ವಲ್ಪ ನಿದ್ದೆ ಬಂದಂತಾದರೂ ಅದು ದೀರ್ಘ ನಿದ್ದೆಯಾಗಿರಲಿಲ್ಲ. 

ಬೇಗನೇ ಎಚ್ಚರಿಕೆಯಾದ ಶಂಕರನಿಗೆ ಹೆಗಡೆಯವರ ಮನೆಗೆ ಹೋಗುವ ಧಾವಂತ.  ನಿಂಗಿ ಏಳುವಷ್ಟರಲ್ಲಿಯೆ ಹೊರಟು ನಿಂತ ಶಂಕರ …

” ನಾ ಹೆಗಡೆಯವರ ಮನೆ ತಾವ ಒಸಿ ಹೋಯ್ ಬರ್ತೆ ಆಯ್ತಾ?  ಬಿರೀನೆ ಬತ್ತೆ.  ಹಬ್ಬ ಮಾಡ್ವಾ.  ಅರ್ಜಂಟ್ ಕೆಲಸಿತ್.”

ನಿಂಗಿ ಏನೊ ಹೇಳಬೇಕು ಅನ್ನುವಷ್ಟರಲ್ಲಿ ಶಂಕರ ಅಷ್ಟು ದೂರ ಹೋಗಿ ಆಗಿತ್ತು.

“ಎಂತಾ ಕೆಲಸಿತ್ತೊ ಏನೊ.  ಹೋಗು ಮುಂಚೆ ಹಾಂಗೆಲ್ಲ ಏನು ಎತ್ತ ಅಂತ ಕೇಳೂಕ್ ಯಡಿಯಾ.” ತನ್ನಲ್ಲೆ ಹೇಳಿಕೊಂಡು ಕೆಲಸದಲ್ಲಿ ಮಗ್ನಳಾದಳು.

ಹೆಗಡೆಯವರ ಬಂಗಲೆಯಂತ ದೊಡ್ಡ ಮನೆ ಹಬ್ಬದ ಕಳೆ ಕಟ್ಟಿತ್ತು.  ಹಿಂದಿನ ದಿನ ತಾನೇ ಅಂಗಳವನ್ನೆಲ್ಲ ಗುಡಿಸಿ ಸಗಣಿ ನೀರಲ್ಲಿ ತೊಡೆದು ಒಪ್ಪವಾಗಿ ಕಾಣುವಂತೆ ಮಾಡಿದ್ದ.  ಮಾವಿನ ಎಲೆಗಳ ತೋರಣ, ಚೆಂಡು ಹೂವಿನ ಮಾಲೆ, ಕೆಂಪಡಿಕೆಯೊಂದಿಗೆ ಅಡಿಕೆ ಶೃಂಗಾರ ಸೇರಿಸಿ ಕಟ್ಟಿದ್ದ ದಂಡೆ ಎಲ್ಲವೂ ಹೆಬ್ಬಾಗಿಲನ್ನು ಏರಿದ್ದವು.  ದೀಪಾವಳಿ ಹಬ್ಬದ ಸಂಭ್ರಮ ಬಾಗಿಲ ಮುಂದಿನ ರಂಗೋಲಿ ಬಣ್ಣಗಳಿಂದ ಶೋಡಷೋಪಚಾರ ಪಡೆದಿತ್ತು.  ಎಣ್ಣೆಯನ್ನು ತುಂಬಿಕೊಂಡ ಹಣತೆಗಳು ದೀಪಾಲಂಕೃತವಾಗಿ  ಮನೆ ಇನ್ನಷ್ಟು ಕಂಗೊಳಿಸುವಂತೆ ಮಾಡಿದ್ದವು. 

“ಅಲ್ಲಾ ನಮ್ಮೂರಿಗೆ ಕರೆಂಟು ಬಂದರೆ ಹೆಗಡೀರ್ ಮನಿ ಇನ್ನೇಪ್ಟು ಚಂದ ಕಾಣೂಕಿಲ್ಲಾ?”  ನೋಡುತ್ತ ಮೈಮರೆತ ಶಂಕರ. ಅಂಬಾ…ಎಂಬ ಕೂಗುವ ಧ್ವನಿ ವಾಸ್ತವಕ್ಕೆ ಕರೆ ತಂದಿತು.  ಸೀದಾ ಹಸು ಎಮ್ಮೆಗಳನ್ನು ಕಟ್ಟಿದ ಕೊಟ್ಟಿಗೆಗೆ ಹೋಗಿ ಒಂದಷ್ಟು ಹುಲ್ಲು ಅವುಗಳಿಗೆ ಹಾಕಿ ಸೀದಾ ಆರಾಮ ಕುರ್ಚಿಯಲ್ಲಿ ಆಗಷ್ಟೆ ಆಸೀನರಾಗಿ ಬೆಳಗಿನ ಬಿಸಿ ಬಿಸಿ ಚಾ ಹೀರುತ್ತ ಕುಳಿತ ಹೆಗಡೆಯವರಿರುವಲ್ಲಿಗೆ ಬಂದ.  

ಬೆಳ್ಳಂ ಬೆಳಗ್ಗೆ ಬಂದ ಶಂಕರನನ್ನು ಕಂಡು ಹೆಗಡೆಯವರಿಗೆ ಆಶ್ಚರ್ಯ.  “ಏನು ಶಂಕರಾ?  ಏನು ಬಂದಿದ್ದು?  ನಿನ್ನ ಹೆಂಡತಿ ಎಲ್ಲೊ?  ಬರಲಿಕ್ಕೆ ಹೇಳು ಅಂದಿದ್ನಲ್ಲೊ?”

ಶಂಕರ ತಲೆ ಕೆರೆಯುತ್ತ “ಜಪ್ತಿ ಆಗಿಲ್ರ.  ಮನೀಗ್ ಹೋಯಿ ಕಳಸ್ತೆ.  ಹಬ್ಬ ಅಲ್ವರಾ.  ಎಂತದೊ ಕೆಲಸ ಮಾಡ್ಕಂತೆ ಕೂಕಂಡ್ಲು.” ಕೈಕಟ್ಟಿ ಮೂಲೆಯಲ್ಲಿ ನಿಂತ. 

ಇವನೇನೊ ಹೇಳಲು ಬಂದಿದ್ದಾನೆ ಎಂಬುದು ಅವನು ನಿಂತ ಶೈಲಿಯಲ್ಲಿಯೆ ಗೊತ್ತಾಯಿತು.  “ಬಾ ಕೂತ್ಕ.  ಅದೇನು ಹೇಳು.  ಹಬ್ಬಕ್ಕೆ ದುಡ್ಡೇನಾದರೂ ಬೇಕಿತ್ತೇನೊ?”

“ಇಲ್ಲ ವಡಿಯಾ.  ಇವತ್ತಿನ್ ಪ್ಯಾಪರ್ ಬಂದಿತ್ತಾ ಕೇಂಡೆ.”

ಹೆಗಡೆಯವರಿಗೆ ಇವನ ಮಾತು ಕೇಳಿ ಪರಮಾಶ್ಚರ್ಯ.  “ಅಲ್ಲಾ ನಿಂಗ್ಯಾಕೊ ಪೇಪರ್ರೂ?  ಓದು ಬರಹ ಯಾವಾಗ ಕಲಿತೆಯೊ?”

“ಅಲ್ಲ ನನ್ನೊಡೆಯಾ.  ಸುಮ್ಕೆ ಕೇಂಡೆ”  ಸಂಕೋಚದಿಂದ ಮುದುಡಿ ನಿಂತ ಹೆಗಡೆಯವರ ಮಾತು ಅವರ ಜೋರಾದ ನಗೆಗೆ.
ಶಂಕರನ ಕೈ ಜೇಬನ್ನು ತಡಕಾಡುತ್ತಿರುವುದನ್ನ ಕಂಡ ಅವರು…

“ಅದೇನೊ ಜೋಬಲ್ಲಿ.  ತೋರಿಸು”

“ಹೆಗಡೀರೆ ನೀವ್ ಮೊದ್ಲು ಇವತ್ತಿನ್ ಪ್ಯಾಪರ್ ತಕ ಬನ್ನಿ, ಹೇಳ್ತೆ.”

ಯಲಾ ಇವನ!  ನನಗೆ ಸವಾಲಾಗ್ತಾನಲ್ಲಾ?  ಇರಲಿ.  ನೋಡೇ ಬಿಡುವಾ.  ತಾವೇ ಖುದ್ದಾಗಿ ರೂಮಿನ ಮಂಚದ ಮೇಲಿರುವ ಪೇಪರನ್ನು ತಂದು ಕುಳಿತಾಗ ಮೆಲ್ಲನೆ ಜೇಬಿನಿಂದ ತೆಗೆದ ಲಾಟರಿ ಟಿಕೇಟ್. 

“ಓಹ್, ಇದಕಾ?  ಹೌದಲ್ಲೊ ನಾನೂ ಮರೆತಿದ್ದೆ.  ಇರು ಮೊದಲು ನಿನ್ದು ಕೊಡು ಇಲ್ಲಿ, ನೋಡೋಣ.”

ಶಂಕರನು ಕೊಟ್ಟ ಲಾಟರಿ ಟಿಕೇಟ್ ನಂಬರನ್ನು ಪೇಪರಿನಲ್ಲಿ ಕೊನೆಯ ನಂಬರಿನಿಂದ ಹುಡುಕುತ್ತಿರುವಂತೆ ಗಕ್ಕನೆ ಹೆಗಡೆಯವರ ಕೈ ಬೆರಳು ಒಂದು ನಂಬರಿನ ಮೇಲೆ ತಟಸ್ಥವಾಯಿತು.  ಹಾಕಿದ ಕನ್ನಡಕ ಸರಿಪಡಿಸಿಕೊಳ್ಳುತ್ತ ಕಣ್ಣಗಲಿಸಿ ನೋಡುತ್ತಿದ್ದಾರೆ.  ಮೈಯ್ಯೆಲ್ಲ ಬಿಸಿ ಏರಿದಂತಾಗಿ ಕೈ ಸಣ್ಣಗೆ ನಡುಗಿದಂತಾಯಿತು.  ಕೂಡಲೇ ಏನೂ ಆಗಲೆ ಇಲ್ಲವೆಂಬಂತೆ ಸಾವರಿಸಿಕೊಂಡು ಎದ್ದು ಒಳಗೆ ಹೋಗಿ ತಾವು ತಂದ ಒಂದಷ್ಟು ಲಾಟರಿ ಟಿಕೇಟ್ ತಂದು ನೋಡುತ್ತ ಕುಳಿತರು.

ಶಂಕರನಿಗೊ!  ತನ್ನ ಟಿಕೇಟ್ ಬಗ್ಗೆ ತಿಳಿಯುವ ತವಕ.  ಮೆಲ್ಲನೆ “ಎಂತಾಯ್ತ್ ವಡೆಯಾ?  ನನ್ನ ಚೀಟಿ ನಂಬರ್ ಇತ್ತಾ ಕಂಡ್ರಾ?”

ಹೆಗಡೆಯವರು ತಡವರಿಸುತ್ತ ” ತಕ ನಿನ್ನ ಚೀಟಿ.  ಇಲ್ಲ ಮಾರಾಯಾ ಇದರಲ್ಲಿ ನಿನ್ನ ಚೀಟಿ ನಂಬರು.  ಸುಮ್ನೆ ಹತ್ತು ರೂಪಾಯಿ ಹೋಯ್ತು.  ಚಿಂತೆ ಮಾಡಬೇಡಾ.  ನಾನು ನೂರು ರೂಪಾಯಿ ಕೊಡುತ್ತೇನೆ ಆಯ್ತಾ?  ಆದರೆ ಯಾರಿಗೂ ಈ ವಿಷಯ ಹೇಳಬೇಡಾ.  ಬೇಕಾದರೆ ಇನ್ನೂ ಸ್ವಲ್ಪ ಹಣ ಕೊಡುತ್ತೇನೆ” ಎಂದು ಅವನಿಗೆ ಚೀಟಿ ಕೊಟ್ಟು ಹಣ ಕೊಡಲು ಹೋದಾಗ ಶಂಕರ ;

“ಹೆಗಡೀರೆ ಈ ಚೀಟಿ ನಂದಲ್ಲ.  ನಾ ನಿಮಗೆ ಕೊಟ್ಟಿದ್ ಕೆಂಪು ಚೀಟಿ.  ನೀವ್ಯಾಕೆ ಹಸರ್ ಚೀಟಿ ಕೊಡ್ತ್ರಿ?  ನನಗ್ ನನ್ನ ಚೀಟಿ ಕೊಡಿ.  ಆ ನಂಬರಾ ಇಲ್ಲ ಅಂದ್ರ ಏನ್ ಬ್ಯಾಸರ್ ಇಲ್ಲ.  ಹಂಗೇ ಜಪ್ತಿಗೆ ಮಡೀಕಂತೆ.  ನಂಗದೇ ಬೇಕಿತ್ತ” ಮತ್ತೆ ಹಠ ಮಾಡುತ್ತಿರುವ  ಮಗುವಿನಂತಹ ಮುಗ್ಧ ಮಾತು.

ಈಗ ಹೆಗಡೆಯವರ ಶರೀರ ಬೆವರಲು ಶುರುವಾಯಿತು.  ಹೇಗಾದರೂ ಇವನನ್ನು ಇಲ್ಲಿಂದ ಸಾಗ ಹಾಕಬೇಕು. ಇಲ್ಲದಿದ್ದರೆ ರಂಪಾಟ ಮಾಡಿ ಊರ ಜನ ಸೇರಸಿದರೆ?  ಸ್ವಲ್ಪ ಗಡಸು ಧ್ವನಿಯಲ್ಲಿ ….

“ಏನು ನನ್ನ ಹತ್ತಿರ ಹಠನಾ?  ನಿನ್ನ ಚೀಟಿ ಕೊಟ್ಟಿದ್ದೇನೆ.  ತಗೊಂಡು ಹೋಗು.  ಮತ್ತೇನಾದರೂ ಹೇಳ್ತಾ ಕೂತ್ಯೊ ಗೊತ್ತಲ್ಲಾ?  ನಾಳೆಯಿಂದಲೆ ನೀವಿಬ್ಬರೂ ನಮ್ಮ ಮನೆ ಕೆಲಸಕ್ಕೆ ಬರಬೇಡಿ. ನನ್ನ ಜಾಗದಲ್ಲಿರೊ ನಿಮ್ಮ ಬಿಡಾರ ಈಗಿಂದೀಗಲೆ ಖಾಲಿ ಮಾಡಿಕೊಂಡು ಹೋಗಿ.  ಚೀಟಿಯಂತೆ ಚೀಟಿ.  ಕೊಟ್ಟೆ ತಾನೆ?  ಮತ್ತೀನ್ನೇನು ರಗಳೆ?  ನೀ ಕೊಟ್ಟಿದ್ದು ಇದೇ ಚೀಟಿ.  ಗೊತ್ತಾಯ್ತಲ್ಲಾ?  ತಂಗಂಡು ನಡಿ ನಡಿ.”

ಹೆಗಡೆಯವರ ಗದರಿಕೆಯ ಮಾತು ಶಂಕರನ ಕಿವಿಗೆ ಕಾದ ಎಣ್ಣೆ ಸುರಿದಂತಾಯಿತು.  ಒಮ್ಮೆ ಅವರ ಜೋರಾದ ಮಾತಿಗೆ ಗಡ ಗಡ ನಡುಗಿಬಿಟ್ಟ.  ಹಲವಾರು ವರ್ಷಗಳಿಂದ ಮನೆಯ ನಂಬಿಕೆಯ ಆಳಾಗಿ ಅವರು ಹೇಳಿದಂತೆ ಚಾಚೂ ತಪ್ಪದೆ ಅವರ ಆಶ್ರಯದಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿದು ಬದುಕುತ್ತಿದ್ದಾರೆ.  ಉಳಿಯಲು ಬಿಡಾರ ತಮ್ಮದೆ ಜಾಗದಲ್ಲಿ ಕಟ್ಟಿ ಕೊಟ್ಟಿದ್ದಾರೆ.  ಕಷ್ಟ ಸುಖಕ್ಕೆ ಆಗುವವರು.  ಬಹಳ ನಂಬಿದ ಅವನಿಗೆ ಹೆಗಡೆಯವರ ಈ ಒಂದು ಸುಳ್ಳು ನುಂಗಲಾರದ ತುತ್ತಾಯಿತು.  ಹಲವು ಕನಸುಗಳನ್ನು ಮನಸ್ಸಿನಲ್ಲಿ ಆ ಚೀಟಿ ನೋಡಿದಾಗಿನಿಂದ ಹೆಣೆದುಕೊಳ್ಳುತ್ತ ಬಂದಿದ್ದ.  ಬೇರೆಯ ಕೆಂಪು ಚೀಟಿ ಕೊಟ್ಟಿದ್ದರೂ ಬಹುಶಹ ಶಂಕರನಿಗೆ ಏನೂ ಗೊತ್ತಾಗುತ್ತಿರಲಿಲ್ಲ.  ಆದರೆ ಚೀಟಿಯ ಬಣ್ಣ ಬದಲಾಗಿದ್ದು ಹೆಗಡೆಯವರು ಸುಳ್ಳು ಹೇಳುತ್ತಿದ್ದಾರೆ ಅನ್ನುವುದು ಅವನಿಗೆ ಖಚಿತವಾಯಿತು. 

ಕಣ್ಣು ತುಂಬ ನೀರು ತುಂಬಿಕೊಂಡು ಅವರು ಕೊಟ್ಟ ಚೀಟಿ ಪಡೆದು ಮರು ಮಾತನಾಡದೆ ಅಲ್ಲಿಂದ ಸೀದಾ ಹೊರಟ.  ಮನೆಯ ಕಡೆ ಹೆಜ್ಜೆ ಹಾಕಲು ಅವನಿಗೆ ಮನಸ್ಸಿಲ್ಲ.  ಅವನ ಕಾಲು ಅವನಿಗರಿವಿಲ್ಲದಂತೆ ಸಾಗುತ್ತಿತ್ತು.  ಒಳ ಮನಸ್ಸು ಇದನ್ನು ತನ್ನಲ್ಲೇ ಹಿಡಿದಿಟ್ಟುಕೊಳ್ಳಲಾಗದೆ  ಚಡಪಡಿಸುತ್ತಿತ್ತು.  ಬೆಳಗಿನಿಂದ ಕುಡತೆ ನೀರನ್ನೂ ಕುಡಿಯದ ಅವನಿಗೆ ಹಸಿವಿನ ಕಡೆಯೂ ಲಕ್ಷ ಇರಲಿಲ್ಲ.  ಕಣ್ಣಾಲಿಗಳ ನೀರು ಕಪೋಲ ತೊಯ್ದು ಅವನಂಗಿಯ ಮೇಲೆ ಇಂಗುತ್ತಿತ್ತು. ಯಾವತ್ತೂ ಏನನ್ನೂ ಬಯಸದ ಶಂಕರ ಈ ಕೆಂಪು ಚೀಟಿಗೆ ಮರುಳಾಗಿದ್ದ.  ಅದೆಷ್ಟು ಹೊತ್ತು ನಡೆದನೊ!  ಆದರೆ ಆಗಲೆ ಅವನ ಗೆಳೆಯ ಶಿವಣ್ಣನ ಹೋಟೆಲ್ ತಲುಪಿದ್ದ.

ಇವನ ಮ್ಲಾನವಾದ ಮುಖ ಕಂಡ ಶಿವಣ್ಣ “ಏನಾಯ್ತು? ಯಾಕೆ ಹೀಗೆ ಇದ್ದೀಯಾ? ಅಳ್ತಾ ಇದ್ದೀಯಾ?  ಬಾ ಬಾರೊ.  ಕೂತ್ಕೊ.  ಏಯ್  ಮಾಣಿ ಬಿಸಿ ಬಿಸಿ ಒಂದು ಗ್ಲಾಸ್ ಚಾ ಎರಡು ಬನ್ನು ತೆಗೆದುಕೊಂಡು ಬಾ ಬೇಗಾ.”

 “ನೀನು ಸ್ವಲ್ಪ ಸುಧಾರಿಸಿಕೊ.”

ಶಂಕರನಿಗೆ ದುಃಖ ಒತ್ತರಿಸಿ ಬಂತು.  ಅತ್ತು ಸಮಾಧಾನ ಮಾಡಿಕೊಳ್ಳಲಿ ಎಂದು ಶಿವಣ್ಣನೂ ಸುಮ್ಮನಿದ್ದ.  ಸುತ್ತ ಕಣ್ಣಾಡಿಸಿದರೆ ಒಂದೆರಡು ಜನ ಮಾತ್ರ ಇದ್ದರು.  ಹಬ್ಬ ಆಗಿದ್ದರಿಂದ ಜನ ಕಡಿಮೆ.  ಪರವಾಗಿಲ್ಲ ಅವನಾಗೆ ಹೇಳುವವರೆಗೆ ಕಾದರಾಯಿತೆಂದು ತನ್ನ ಕೆಲಸದಲ್ಲಿ ಮಗ್ನನಾದ.

ಸುಧಾರಿಸಿಕೊಂಡ ಶಂಕರನಿಗೆ ಶಿವಣ್ಣ ಆಪದ್ಬಾಂಧವನಂತೆ ಕಂಡುಬಂದ.  ಕೊಟ್ಟ ಟೀ ಬನ್ನು ತಿಂದು “ಶಿವಣ್ಣ ನಿನ್ನ ಹತ್ತಿರ ಒಸಿ ಮಾತಾಡುಕಿತ್ತ್.  ಆದರೆ ಇಲ್ಲಿ ಬ್ಯಾಡಾ ಆಯಿತಾ?”

ನಡಿ ಮಾರಾಯಾ.  ಇವತ್ತು ಗಿರಾಕಿಗಳೂ ಇಲ್ಲ.  ರಸ್ತೆಯ ಪಕ್ಕದ ಮೋರಿಯ ಮೇಲೆ ಕುಳಿತಂತೆ ಶಂಕರ ತನ್ನ ಜೋಬಿನಿಂದ ಚೀಟಿ ತೆಗೆದು ಶಿವಣ್ಣನ ಮುಂದೆ ಹಿಡಿದ.  ಶಿವಣ್ಣನಿಗೆ ಆಶ್ಚರ್ಯ.  “ಏನೊ ಇದು.  ಈ ಚೀಟಿ ಯಾಕೊ ನನಗೆ ತೋರಿಸುತ್ತೀಯಾ?  ಇದ್ಯಾವಾಗ ತಗಂಡ್ಯೊ? ” ಒಂದೇ ಸಮ ಶಿವಣ್ಣನ ಮಾತು .

ಇದುವರೆಗೆ ನಡೆದ ವೃತ್ತಾಂತವನ್ನೆಲ್ಲ ಅವನ ಹತ್ತಿರ ಅರುಹಿದಾಗ ಶಿವಣ್ಣನಿಗೆ ಸಿಟ್ಟು ನೆತ್ತಿ ಹತ್ತಿ ಬಂದು  ಕೋಪದಲ್ಲಿ ಒಮ್ಮೆ ಗುಡುಗಿದ.  “ಛೆ! ಎಂತಾ ಕೆಲಸ ಆಯ್ತು. ನಿನ್ನ ನಂಬಿಕೆಗೆ ದ್ರೋಹ ಮಾಡಿಬಿಟ್ಟರಲ್ಲೊ.  ಹೀಗಾಗಬಾರದಿತ್ತು.  ಆದರೆ ಈಗ ಏನು ಮಾಡಲೂ ಸಾಧ್ಯವೇ ಇಲ್ಲ.  ನೀನೊ ಓದು ಬರಹ ಬಾರದವನು.  ನಿನ್ನ ಅಸಹಾಯಕತೆ ಅವರು ದುರುಪಯೋಗ ಮಾಡಿಕೊಂಡರು.  ದೇವರು ಕೊಟ್ಟರೂ ಪೂಜಾರಿ ಕೊಡಾ ಅಂದಾಂಗಾಯಿತಲ್ಲೊ.  ಒಂದೆರಡು ರೂಪಾಯಿನಾ ಅದು?  ಆ ದುಡ್ಡು ಸಿಕ್ಕಿದ್ದರೆ ನಿನಗೆ ಜನ್ಮ ಪೂರ್ತಿ ಸಾಕಾಗುತ್ತಿತ್ತಲ್ಲೊ.  ಸುಖವಾಗಿ ಇರಬಹುದಿತ್ತಲ್ಲೋ.  ಶಿವನೆ!  ಇದೇನಾಗಿ ಹೋಯಿತು.  ಹೀಗಾ ಮಾಡೋದು ನಿನಗೆ?  ನಿನ್ನಂತಹ ಪ್ರಾಮಾಣಿಕ ನಂಬಿಗಸ್ಥ ವ್ಯಕ್ತಿಗೆ ಮೋಸ ಮಾಡಿದರೆ ಖಂಡಿತಾ ಉದ್ದಾರಾಗೋಲ್ಲ ಕಣೊ.”

ಶಿಮಣ್ಣನ ಮಾತು ನಿಲ್ತಾನೇ ಇಲ್ಲ.  ಮಧ್ಯದಲ್ಲಿ ಶಂಕರ ತಡೆದು ” ಹೆಗಡೀರಿಗೆ ಹಾಂಗೆಲ್ಲ ಅನ್ನ ಬ್ಯಾಡಿ.  ಏಟಂದ್ರೂ ನಮಗೆ ಅನ್ನ ಹಾಕಿದ ಧಣಿ.  ಅವರ ಆಸ್ರಯ ಇಲ್ಲಾ ಅಂದ್ರೆ ನಾವ್ ಬದುಕೂಕ್ ಆಯ್ತದಾ?  ಬಿಡ್ತು ಅನ್ನಿ.  ನನ್ನ ಹಣಿಬಾರ್ದಾಗೆ ಬರೆದಿದ್ದೆ ಇಟೇವಾ.  ಯಾರಂದಂದು ಏನು ಸುಖ ಐತೆ.  ನನಗೂ ಓದು ಬರಾ ಬಂದಿದ್ರೆ ಹೀಗಾಯ್ತಿತ್ತಾ?  ಎಲ್ಲಾ ಪಡಕಂಡು ಬಂದಿರ್ಬೇಕು.”

ಶಿವಣ್ಣ ಶಂಕರನ ಮಾತಿಗೆ ಜೋರಾಗಿ ತಬ್ಬಿಕೊಂಡು…

” ನನಗೇ ಇಷ್ಟು  ಸಂಕಟ ಆಗುತ್ತಿದೆ.  ನಿನ್ನದು ಎಷ್ಟೊಳ್ಳೆ ಮನಸ್ಸೊ!  ಎಲ್ಲರನ್ನೂ ಕ್ಷಮಿಸುವ ಕ್ಷಮಾ ಗುಣ ನಿನ್ನ ಕೈ ಬಿಡೋದಿಲ್ಲ.  ದೇವರಿದ್ದಾನೆ.  ನಿನ್ನ ಮಕ್ಕಳಿಗಾದರೂ ವಿದ್ಯಾಭ್ಯಾಸ ಕಲಿಸಿ ಅವರು ನಾಳೆ ಈ ರೀತಿ ಮೋಸ ಹೋಗುವುದನ್ನು ತಪ್ಪಿಸು.  ನಿನ್ನಂತೆ ಆಳಾಗಿ ಕಂಡವರ ಕೈ ಕೆಳಗೆ ದುಡಿಯುವುದು ಬೇಡಾ.  ಆಗೋದೆಲ್ಲ ಒಳ್ಳೆಯದಕ್ಕೆ ಅಂತ ತಿಳಿದು ಸಮಾಧಾನ ಮಾಡಿಕೊ.  ಆಗಿದ್ದು ಆಗಿಹೋಯಿತು.  ಇನ್ನೆಷ್ಟು ಚಿಂತೆ ಮಾಡಿದರೂ ಪ್ರಯೋಜನ ಇಲ್ಲ.”

ಎಂದು ಶಂಕರನನ್ನು ಸಮಾಧಾನಪಡಿಸಿ ಒಂದಷ್ಟು ಕುರುಕಲು ತಿಂಡಿಗಳನ್ನು ಮಕ್ಕಳಿಗೆ ಕಟ್ಟಿಸಿಕೊಟ್ಟು  ” ಹೋಗು ಮನೆಯಲ್ಲಿ ನಿನ್ನ ಹೆಂಡತಿ ಕಾಯುತ್ತಿರುತ್ತಾಳೆ.  ಹಬ್ಬ ಬೇರೆ ಇವತ್ತು.  ನಾನೂ ಮನೆಗೆ ಹೋಗ ಬೇಕು.  ಬಾ ಹೋಗೋಣ” ಎಂದಾಗ ;

ಶಂಕರ ಸ್ವಲ್ಪ ಹೊತ್ತು ಅಲ್ಲೆ ಕುಳಿತು ಮುಂದಿನ ನಿರ್ಧಾರದ ಬಗ್ಗೆ ಶಿವಣ್ಣನಲ್ಲಿ ಚರ್ಚಿಸಿ ತನ್ನ ಮನೆಯ ಕಡೆ ಹೊರಟ.  ನಿಂಗಿ ಹಬ್ಬದಡುಗೆ ಮಾಡಿ ಮಕ್ಕಳೊಂದಿಗೆ ದಾರಿ ಕಾಯುತ್ತ ಕುಳಿತಿದ್ದಳು.  ಶಂಕರ ಮಾತ್ರ ನಡೆದ ವಿಷಯ ಏನೊಂದೂ ಅವಳ ಹತ್ತಿರ ಹೇಳದೆ ಮಾಮೂಲಿ ದಿನಗಳಲ್ಲಿ ಇದ್ದಂತೆ ಇದ್ದುಬಿಟ್ಟ.

ಅವನಲ್ಲಿಯ ನಿರ್ಧಾರ ಆಪ್ತ ಗೆಳೆಯ ಶಿವಣ್ಣನಿಗೆ ಮಾತ್ರ ಗೊತ್ತಿತ್ತು.  ಅವನ ಗುರಿ ಈಗ ಕೇವಲ ಮಕ್ಕಳ ಕಡೆ ಮನೆ ಮಾಡಿತ್ತು.  ಇದೊಂದು ಘಟನೆ ಮುಂದಿನ ಹಾದಿಗೆ ನೆವ ಮಾತ್ರ.  ದೇವರೆ ನನಗೆ ದಾರಿ ತೋರಿಸಿದ್ದಾನೆ.  ತಲೆ ತಲಾಂತರದಿಂದ ಬಂದ ಈ ಜೀತ ಪದ್ಧತಿಯಿಂದ ಮಕ್ಕಳನ್ನು ಮುಕ್ತ ಮಾಡುವುದೇ ಅವನ ಧ್ಯೇಯವಾಯಿತು. 

                 *************

2-11-2022 2.29pm

ಗೀತಾ ಹೆಗ್ಡೆ ಕಲ್ಮನೆ ಕವಿತೆ – ಇರಲಿ ಬಿಡು ಆಪ್ತೇಷ್ಟರು… | ಅವಧಿ । AVADHI

https://avadhimag.in/%e0%b2%97%e0%b3%80%e0%b2%a4%e0%b2%be-%e0%b2%b9%e0%b3%86%e0%b2%97%e0%b3%8d%e0%b2%a1%e0%b3%86-%e0%b2%95%e0%b2%b2%e0%b3%8d%e0%b2%ae%e0%b2%a8%e0%b3%86-%e0%b2%95%e0%b2%b5%e0%b2%bf%e0%b2%a4%e0%b3%86/