ಊಹೂಂ ಮಣಿಯಲೊಲ್ಲದು….

ಮನಸಿಗೆ ಕಾಲಲ್ಲಿ ಚಕ್ರವಿದೆಯೆ?
ಅಲ್ಲಾ ನೀನ್ಯಾಕೆ ಹೀಗೆ ಸದಾ ಅಲೆಯುತ್ತೀಯೆ?
ಕೇಳುತ್ತೇನೆ ಆಗಾಗ
ಪ್ರೀತಿಯಿಂದ ಓಲೈಸುತ್ತ
ನೀನೇ ನನ್ನ ಸರ್ವಸ್ವ ಬಾ ಒಮ್ಮೆ.

ಊಹೂಂ ಮಣಿಯಲೊಲ್ಲದು
ಎಷ್ಟು ಗೋಗರೆದರೂ
ಬಹಳ ಹಠಮಾರಿ ಘಾಟಿ ಘಠಾಣಿ
ಹಿಂದೆ ಹಿಂದೆ ನಾ ಓಡುತ್ತಲೇ ಇದ್ದೇನೆ
ಬುದ್ಧಿ ಬಂದಾಗಿಂದ
ಅದರ ಮೂಲ ಹುಡುಕಿ
ನನ್ನಣತಿಯಲ್ಲಿಡಲು ಹೆಣಗಾಡುತ್ತೇನೆ
ಹೆಣಗಾಡುತ್ತಲೇ ಇದ್ದೇನೆ

ಅದು ನನ್ನ ಮನಸು
ನನ್ನ ಸ್ವಂತ
ಆದರೆ ವಿಚಿತ್ರ ನೋಡಿ
ನನಗದರ ಮೇಲೆ ಅಧಿಕಾರವೇ ಇಲ್ಲವೆಂಬಂತೆ
ಪದೇ ಪದೇ ಕಳಚಿಕೊಳ್ಳುತ್ತಲೇ ಇದೆ
ಒಂದೆಡೆ ಕಟ್ಟಿ ಹಾಕಲು
ನನ್ನ ಶ್ರಮವೆಲ್ಲ ವ್ಯರ್ಥ ಆಗುತ್ತಲೇ ಇದೆ.

ಮತ್ತೆ ಮತ್ತೆ ಬುದ್ಧನ ಹಾದಿ ಹಿಡಿಯುತ್ತೇನೆ
ಇಡೀ ದೇಹ ಸೆಟೆದು ಮೌನದಲ್ಲಿ
ಹಾಕಿದ ಪದ್ಮಾಸನ ಹೇಳುತ್ತದೆ
ಕಾಲು ತೊಡೆ ನೋವಾಗಿ
ನಿಲ್ಲಿಸು ನಿನ್ನ ವ್ಯರ್ಥ ಪ್ರಲಾಪ
ನಿನ್ನದು ತಿಕಲ್ ಮೈಂಡು
ನಡಿ ನಡಿ
ನನ್ನ ಕಾಲುಜ್ಜು!
22-7-2017. 9.47am

ಕವನ ((112)

ನೀ ಸದಾ
ಕಾಲಿಗೆ ಗೆಜ್ಜೆ ಕಟ್ಟಿ
ತಕಥೈ ತಕಥೈ ಎಂದು
ನನ್ನೆದುರು ಬಿಡದೆ
ಕುಣಿಯುತ್ತಿರು‌.

ಅದರ
ತಕಧಿಮಿ ತಕಧಿಮಿ
ತದಾಂಗು ತಕಧಿಮಿ ತೋಂ
ಸುಶ್ರಾವ್ಯ ನಾದ
ಮನ ಕೆರಳಲಿ.

ಕೇಳುತ್ತ ಕೇಳುತ್ತ
ಅದೆಲ್ಲೊ ಕಳೆದೇ
ಹೋಗುವ ಮನಸ್ಸು
ಭಾವ ಪರವಶವಾಗಿ
ಜಗವನ್ನೇ ಮರೆಯಲಿ.

ಉದ್ಭವಿಸುವ ತರಂಗಗಳು
ಮೆಲ್ಲನೆ ಆಡಿಯಿಡುವ
ನನ್ನ ಲೇಖನಿಯಲ್ಲಿ
ಅಚ್ಚಾಗಿಸಲಿ ಶೃಂಗಾರದ
ಕಪ್ಪು ಗೋಳಾಕ್ಷರದಲ್ಲಿ.

ಸೊಗಸು ಅದೆಷ್ಟು
ನೀನಿರುವುದೆ ನನಗಿಲ್ಲಿ
ಅಚ್ಚ ಬಿಳಿಯ ಹಾಳೆಯಲಿ
ಅಡಗಿಹ ನಿನ್ನ ಮನಸ್ಸು
ಕಾಡುವ ನನ್ನ ಕವನಾ!

19-7-2017. 8.47pm

ಒಂದು ಮೊಟ್ಟೆಯ ಕಥೆ.

ರೆಡಿಯೊ ಜಾಕಿಯಾಗಿದ್ದ ಶ್ರೀ ರಾಜೇಶ್ ಬಿ.ಶೆಟ್ಟಿಯವರು ಬರೆದು ನಿರ್ದೇಶಿಸಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಕನ್ನಡ ಚಿತ್ರ ಒಮ್ಮೆ ಎಲ್ಲರೂ ನೋಡಲೇ ಬೇಕಾದ ಚಿತ್ರ. ವಾಸ್ತವದ ಸತ್ಯವನ್ನು ಎಷ್ಟು ಸೊಗಸಾಗಿ ಕಥೆ ಹೆಣೆದು ಚಿತ್ರದುದ್ದಕ್ಕೂ ಆಗಾಗ ಬರುವ ಅಣ್ಣಾವರ ಹಾಡಿನೊಂದಿಗೆ ಹೊಟ್ಟೆ ತುಂಬ ನಗಿಸಿದ ಪರಿ ವಾವ್! ಸಂಭಾಷಣೆಯಲ್ಲಿ ಮದುವೆಯಾಗುವ ಹೆಣ್ಣು ಗಂಡುಗಳಿಗೆ ಒಂದೊಳ್ಳೆ ಸಂದೇಶ ತೋರಿಸಿಕೊಟ್ಟಿದ್ದಾರೆ. ಒಳ ಮನಸಿನ ತೊಳಲಾಟ ಒಂದು ಹಂತದಲ್ಲಿ ಹೇಗೆ ಅನಾವರಣವಾಗುತ್ತದೆ, ಮನಸ್ಸಿಗೆ ಸಂತೋಷ ನಿಜವಾಗಿ ಯಾವುದು ಎಂಬುದನ್ನು ಚಿತ್ರದ ಕೊನೆಯಲ್ಲಿ ಜನರ ಮುಂದಿಟ್ಟಿರುವ ವೈಖರಿ ಸೂಪರ್. ಚಿತ್ರ ಮುಗಿದಾಗ ಛೆ! ಇನ್ನೂ ಸ್ವಲ್ಪ ಹೊತ್ತು ಚಿತ್ರ ಇದ್ದಿದ್ದರೆ ಅನಿಸುವುದಂತೂ ಖಂಡಿತ. ಕನ್ನಡ ಚಿತ್ರ ರಸಿಕರಿಗೆ ಒಂದೊಳ್ಳೆ ಚಿತ್ರ ನೋಡುವ ಭಾಗ್ಯ ಕರುಣಿಸಿದ ನಿರ್ದೇಶಕರಿಗೆ ಧನ್ಯವಾದಗಳು😊

16-7-2017 9.10pm

ನೆನಪು (ಭಾಗ-1)

(ಚಿತ್ರ ಕೃಪೆ – ಗೂಗಲ್)

ಅದೊಂದು ದೊಡ್ಡ ಹಾಲ್.  ನಾಲ್ಕು ಜನ ಕುಳಿತುಕೊಳ್ಳುವಷ್ಟು ಎತ್ತರವಾದ ಉದ್ದನೆಯ ಕೌಂಟರ್ ಎದುರಿಗೆ ಗೋಡೆಗೆ ಸಮನಾಗಿ.   ಅಲ್ಲಿ ಮೂರು ಜನ ಕುಳಿತವರ ದೃಷ್ಟಿ ನನ್ನ ಮೇಲೆ ಇದೆ. ಅದು ನನ್ನರಿವಿಗೆ ಬಂದರೂ ಏನೂ ಗೊತ್ತಿಲ್ಲದವರಂತೆ ತಲೆ ತಗ್ಗಿಸಿ ಕೆಲಸ ಮಾಡುತ್ತಿದ್ದೇನೆ.  ದೇಹವೆಲ್ಲ ಸಂಕೋಚದಿಂದ ಮುದುಡಿದ ಅನುಭವ.

ಕೌಂಟರ ಒಂದು ಮೂಲೆಯ ಪಕ್ಕ ಲೆಕ್ಕಾಧಿಕಾರಿಯವರ ಟೇಬಲ್.   ಒಂದಷ್ಟು ಫೈಲು, ಲೆಡ್ಜರ್, ಸ್ಥಿರ ದೂರವಾಣಿ ಇತ್ಯಾದಿ ಹರಡಿಕೊಂಡ ಟೇಬಲ್ ಹೊಟ್ಟೆ ತುಂಬಿದಂತೆ ಗೋಚರವಾಗುತ್ತಿತ್ತು. ಕುಳಿತ ಅಧಿಕಾರಿ ಒಮ್ಮೆ ಫೈಲ್ ನೋಡೋದು ಇನ್ನೊಮ್ಮೆ ದೂರವಾಣಿಯಲ್ಲಿ ಮಾತಾಡೋದು,ಮ್ಯಾನೇಜರ್ ಕರೆದರು ಅಂತ ಒಳಗೋಗೋದು, ಅವರ ಛೇಂಬರ್ನಲ್ಲಿ ಅದೇನು ಗುಟ್ಟೊ ನಾ ಕಾಣೆ. ಆಗಾಗ ಬರುವ ಕಸ್ಟಮರ್ ಜೊತೆ ಸಂಭಾಷಣೆ. ಟ್ರಣ್^^^^ ಬೆಲ್ಲೊತ್ತಿ ಪ್ಯೂನ್ ಕರೆಯುವ ವೈಖರಿ. ” ಬಂದೇ ಸಾರ್. ” ಗಡಿಬಿಡಿಯಲ್ಲಿ ಅವ ಓಡಿ ಬರುವಾ!

ಈ ಅವಕಾಶ ಉಪಯೋಗಿಸಿಕೊಂಡ ಆ ಮೂವರು ತಮ್ಮ ತಮ್ಮಲ್ಲೇ ಅದೇನೊ ಗುಸು ಗುಸು ಪಿಸು ಪಿಸು. ಒಂದೆರಡು ಮಾತುಗಳು ಅಸ್ಪಷ್ಟವಾಗಿ ಕಿವಿಗೆ ಬೀಳುತ್ತಿದ್ದವು. ಎಲ್ಲರೂ ಬ್ರಹ್ಮಚಾರಿಗಳೋ ಏನೋ! ಅವರ ಕಳ್ಳ ನೋಟ ನನಗೆ ಹಾಗನಿಸುತ್ತಿತ್ತು. ಇದ್ದಕ್ಕಿದ್ದಂತೆ ಗೊಳ್ಳನೆ ನಗು. ಕೌಂಟರ್ ಇನ್ನೊಂದು ತುದಿಯಲ್ಲಿ ಕ್ಯಾಷ್ ಕೌಂಟರಿನಲ್ಲಿ ಕೂತ ಮಹಾಶಯನದು. ಪಾಪ! ಬಾಯಿ ತುಂಬಾ ಕವಳದ ಎಂಜಲು ಜಗಿದೂ ಜಗಿದೂ ನುಣ್ಣಗಾಗಿರಬಹುದು. ಇವರಾಡುವ ಮಾತಿಗೆ ಉಕ್ಕಿ ಬಂದ ನಗುವಿಕೆ ಕೊಂಚ ಅಂಗಿ ಮೇಲೆ ರಾಡಿ ಮಾಡಿಕೊಂಡ ಭೂಪ ಜಂಗನೇ ನೆಗೆದೊಡೋಡಿ ನಾ ಕೂತ ಟೇಬಲ್ ಪಕ್ಕದ ಹೆಬ್ಬಾಗಿಲ ಕಡೆ ಬರುವಾಗ ಆ ಸ್ಥಿತಿಯಲ್ಲೂ ವಾರೆಗಣ್ಣಿಂದ ನನ್ನ ಕಡೆ ದೃಷ್ಟಿ ಹಾಯಿಸುವುದು ಮರೆಯಲಿಲ್ಲ. ನಾನೂ ಅವನ ಅವಸ್ಥೆ ನೋಡಿರುವುದರಿಂದ ತಾನೆ ಗೊತ್ತಾಗಿದ್ದು. ನಾನು ಸಂಭಾವಿತ ಪೋಕ್ರಿ ಅಂತ ಹೇಳಿಕೊಳ್ಳುತ್ತಿಲ್ಲ. ಆದರೂ…..ಹೇಳಿದೆ😊

ದಿನ ನಿತ್ಯ ಮೂರೊತ್ತೂ ಅವನ ಕವಳದ ಪಿಚಕಾರಿ ಪಕ್ಕದ ಓಣಿಯಲ್ಲಿ ಕೆಂಪಿನ ರಾಡಿ ರಾಚಿತ್ತು. ಅದಕ್ಕವನು ಕವಳದ ಗುಡ್ಡ ಅಂದು ನಗುತ್ತಿದ್ದ. ಇತ್ತ ಬಾಯಿ ಬರಿದು ಮಾಡಿ ಬಂದವನೆ ಮೂರು ಜನರೊಂದಿಗೆ ತಾನೂ ಸೇರಿದ ಮಾತಿನಲ್ಲಿ. ಇನ್ನೇನು ಕೇಳಬೇಕಾ? ಅವರವರಲ್ಲೇ “ತೂ ಸಾಂಗೊ, ಅಯ್ಯಪ್ಪಾ ಮಕ್ ಗೊತ್ನಾ, ತೂ ಪೊಳೆಲೆ? ಪೊಣ್ಣು ಬಾರೀಕಸಾ ಹೈವೇ?” ಇಂತಹ ಮಾತುಗಳು ನನಗರ್ಥ ಆಗಲಿಲ್ಲ. ಅಂತೂ ಇಂತೂ ಅವರಲ್ಲೊಬ್ಬವ ನಾನು ಅವರತ್ತ ನೋಡೋದೇ ಕಾಯ್ತಾ ಇದ್ದ ಅನಿಸುತ್ತದೆ. ಒಮ್ಮೆ ಆ ಕಡೆ ನೋಡಿದ್ದೇ ತಡ “ಬಾಯೋರೆ” ಅಂದಾ. ನಾನು ಆ ಕಡೆ ಈ ಕಡೆ ಅಕ್ಕ ಪಕ್ಕ ನೋಡಿದರೆ ಯಾರೂ ಇಲ್ಲ. ” ನಿಮಗೇ ಹೇಳಿದ್ದು.” ನನಗೊ ಹಾಂಗಂದರೆ ಏನು? ಯಾಕೆ ಹೀಗೆ ಕರಿತಾರೆ? ಅರ್ಥ ಆಗಲಿಲ್ಲ. ಅವನು ಮೀನು ತಿನ್ನುವ ಕೊಂಕಣಿ ಜನಾಂಗದವನು. ಬಲೂ ಸೂಕ್ಷ್ಮ, ಚೂಟಿ. ಗೊತ್ತಾಯಿತು ಅನಿಸುತ್ತದೆ. ” ಅದೇರಿ ನಾವು ಆಫೀಸಲ್ಲಿ ಹೆಣ್ಣು ಮಕ್ಕಳಿಗೆ ಬಾಯೋರೆ ಅಂತ ಕರೆಯೋದು. ಅದಕ್ಕೆ ನಿಮ್ಮನ್ನು ಹಾಗೆ ಕರೆದೆ.” ನಾನು ಏನೂ ಮಾತನಾಡಲಿಲ್ಲ. “ನಿಮ್ಮ ಹೆಸರೇನು? ಯಾವೂರು? ” ಹಿ…ಹಿ.. ಅಂದ. ಗೊತ್ತಾಯಿತು. ಬಹಳ ಗೌರವ ತೋರಿಸುತ್ತಿದ್ದಾರೆ, ಮಾತನಾಡಿಸುವ ಪೀಠಿಕೆ. ಎಲ್ಲಾ ಗೊತ್ತಿದೆ. ಸುಮ್ನೆ ಕೇಳೋದು, ಅದೂ ಗೊತ್ತಾಗಿದೆ ನನಗೆ. ಆದರೂ ಅವನು ಕೇಳಿದ್ದಕ್ಕೆ ಚುಟುಕು ಉತ್ತರ ಕೊಟ್ಟೆ. ನಂತರ ಇನ್ನೊಬ್ಬನು “ಇಲ್ಲಿ ಎಲ್ಲಿದ್ದೀರಿ? ಊರಿಂದ ಓಡಾಡ್ತೀರಿ?” ಪಾಕಡಾ ಇದೂ ಗೊತ್ತಲ್ಲಾ ಇವರಿಗೆ! ಪರವಾಗಿಲ್ವೆ. ನನ್ನ ವಾಚ್ ಮಾಡ್ತಿದ್ದಾರೆ. ಅದೆ ಆ ಕ್ಯಾಷಿಯರ್ ಬಾಯಿ ಖಾಲಿ ಆಗಿತ್ತಲ್ಲ, ಆಫೀಸ್ ಪ್ಯೂನ್ ಕರೆದು ಮಧ್ಯಾಹ್ನದ ಟೀಗೆ ಆರ್ಡರ್ ಮಾಡಿದ. ಮತ್ತೆ “ಬಾಯೋರೆ ನೀವು ಏನು ಕುಡಿತೀರಾ? ಏಯ್ ಹೋಗೊ ಅವರನ್ನು ಕೇಳಿ ಅವರಿಗೇನು ಬೇಕು ತಗೊಂಬಾ” ಸರಿ ನನಗೇನು ಬೇಕು ಅದು ಹೇಳಿದ್ದೂ ಆಯಿತು.

ಮೆಲ್ಲನೆ ಎದ್ದು ಬಂದ ಲೆಕ್ಕಾಧಿಕಾರಿ ನನ್ನ ಪಕ್ಕ ಬಂದು ನಿಂತರು. “ಏನ್ರೀ ಮಾಡ್ತಿದ್ದೀರಾ? ” ನನಗೊ ಹೊಸದಾಗಿ ಸೀರೆ ಉಟ್ಟ ಅವತಾರಕ್ಕೆ ಪಕ್ಕನೆ ಎದ್ದು ನಿಲ್ಲೋಕೆ ಆಗ್ತಿಲ್ಲ. ನೆರಿಗೆ ಕಾಲಡಿ ಸಿಕ್ಕಾಕಿಕೊಂಡು ಬಿಟ್ಟಿದೆ. “ಇರಲಿ ಇರಲಿ,ಕೂತಲ್ಲೇ ಹೇಳಿ.” ” ಸರ್ ಷೆಡ್ಯುಲ್ ಟೋಟಲ್ ಹಾಕ್ತಿದ್ದೇನೆ.” “ಎಲ್ಲಿ ತೋರಿಸಿ ಬೆಳಗಿಂದ ಎಷ್ಟು ಪೇಜಾಗಿದೆ.?” ಎಷ್ಟು ಪೇಜೇನು? ನೆಟ್ಟಗೆ ಎರಡು ಪೇಜ್ ದಾಟಿಲ್ಲ. ಗಮನ ಕೆಲಸದ ಕಡೆ ಇದ್ದರೆ ತಾನೆ? ಎಲ್ಲ ಎದುರುಗಡೆ ಇರೊ ನಾಲ್ಕು ಜನ,ನಾಲ್ಕು ಬಾಯಿ,ಎಂಟು ಕಣ್ಣು, ಅವರ ಮಾತು ಇದರ ಕಡೆಗೆ ನನ್ನ ಲಕ್ಷ, ಲೆಕ್ಕ ಅಲಕ್ಷ ಆಗೋಯ್ತು. ಆಗೆಲ್ಲ ಬಾಯಿ ಲೆಕ್ಕ. ಕ್ಯಾಲ್ಕೂಲೇಟರ್ ಇಲ್ಲ. ಕಂಪ್ಯೂಟರ್ ಬಂದೇ ಇರಲಿಲ್ಲ. ಉಳಿತಾಯ ಖಾತೆ ಷೆಡ್ಯೂಲ್ ಟೋಟಲ್ ಹಾಕಲು ಕೊಟ್ಟಿದ್ದರು. ಅವರಿಗೆ ಅರಿವಾಯಿತು. ” ಸರಿ ಸರಿ ಮಾಡಿ” ತಮ್ಮಷ್ಟಕ್ಕೇ ನಕ್ಕೊಂಡು ಆ ಕಡೆ ಹೋದರು. ಈ ಎಂಟು ಕಣ್ಣು ಬಾಯಿ ಬಿಟ್ಟುಕೊಂಡು ನೋಡ್ತಾ ಇತ್ತು. ಎಲ್ಲಾ ಹುಡುಗಾಟ್ಗೆ ವಯಸ್ಸಿನವರು ನನ್ನ ಹಾಗೆ.😊 ಒಂದು ನಿಮಿಷ ಬಿಡದೆ ತಮ್ಮತಮ್ಮಲ್ಲೇ ಮಾತಾಡಿಕೊಂಡು ನನ್ನನ್ನೂ ತಮ್ಮ ಜೊತೆ ಸೇರಿಸಿಕೊಳ್ಳಲು ಹವಣಿಸುತ್ತಿದ್ದರು. ಅವರಿಗೆಲ್ಲ ಅದೇನೋ ಖುಷಿ. ಬರೀ ಗಂಡು ಹೈಕಳ ಜೊತೆ ಇದೊಂದು ಹೆಣ್ಣು ಬಂತಲ್ಲಾ ಅಂತ.

ಹೀಗೆ ಅದು ಇದೂ ಮಾತು, ಪರಿಚಯ, ಕೆಲಸ ಕಲಿಯುವ ನನ್ನ ಉಮೇದಿ, ಅಲ್ಲಿ ವಾತಾವರಣ ನನಗಂತೂ ಸಖತ್ ಇಷ್ಟ ಆಯಿತು. ಗಂಟೆ ಐದೂ ಮೂವತ್ತು ಆಗಿದ್ದು ಅವರೆಲ್ಲ ಹೊರಟು ನಿಂತಾಗಲೇ ಗೊತ್ತಾಗಿದ್ದು. ಅರೆ ಇಷ್ಟು ಬೇಗ ಟೈಮ್ ಆಯ್ತಾ? ಅನಿಸಿತ್ತು.

“ಬಾಯೋರೆ ನೀವು ಇಲ್ಲಿ ಸೇರಿಕೊಂಡಿದ್ದು ನಮಗೆಲ್ಲ ತುಂಬಾ ಸಂತೋಷ ಆಗಿದೆ. ಬನ್ನಿ ಹೋಗುವಾಗ ಎಲ್ಲರೂ ಈ ಖುಷಿಗೆ ಹೊಟೇಲ್ನಲ್ಲಿ ತಿಂಡಿ ತಿಂದು ಹೋಗೋಣ. ನಡಿರಿ ನಡಿರಿ”.

ಬೇಡವೆಂದರೂ ಕೇಳದೇ ಆ ದಿನ ನನಗಿಷ್ಟವಾದ ತಿಂಡಿ ಕೊಡಿಸಿ ಬಸ್ ಸ್ಟ್ಯಾಂಡಿನವರೆಗೂ ಬೀಳ್ಕೊಟ್ಟು ” ನಾಳೆ ಬರೋದು ಮರಿಬೇಡಿ. ಈಗ ಕೆಲಸಕ್ಕೆ ಸೇರಿಕೊಂಡಿದ್ದೀರಾ. ” ಇದು ಮ್ಯಾನೇಜರ್ ಮತ್ತು ಅಲ್ಲಿಯ ಉಳಿದ ಗುಮಾಸ್ತರು ಮೊದಲ ದಿನ ನನ್ನ ಕಂಡ ರೀತಿ. ಹೇಗೆ ಮರೆಯಲು ಸಾಧ್ಯ !!!

ಹಾಂ, ಇಷ್ಟೊತ್ತೂ ಹೇಳಿದ್ದು ನಾನು 1980 ನವೆಂಬರ ತಿಂಗಳಲ್ಲಿ ಬ್ಯಾಂಕಿನ ಕೆಲಸಕ್ಕೆ ಸೇರಿದ ಮೊದಲ ದಿನದ ಅನುಭವ ಇದು. ಇಷ್ಟು ವರ್ಷಗಳಾದರೂ ನೆನಪಿನ್ನೂ ಹಚ್ಚ ಹಸಿರಾಗಿದೆ. ಕೆಲವು ನೆನಪುಗಳು ಹಾಗೆ ಅಲ್ಲವೆ?

ಮುಂದುವರಿಯುವುದು…

12-7-2017. 1.25pm