ಎರಡು ಹನಿಗಳು

ನಿನ್ನೊಂದಿಗೆ 

ಆದ ಮನಸ್ಥಾಪ

ಎಂದಿಗೆ ಕೊನೆಯಾಗುವುದೋ 

ಎಂದು 

ಕಾದು ಕುಳಿತಿದ್ದೆ 

ಸಿಟ್ಟಡಗದ 

ನಿನ್ನ ಮುಖ ನೋಡಿದಾಗ

ಇಷ್ಟು ದಿನ ಕಾದಿದ್ದು 

ವ್ಯರ್ಥ ಎಂದರಿವಾಗಿ 

ನನ್ನ ದಾರಿ 

ನಾನು ನೋಡಿಕೊಂಡೆ.

***********

ಮೈ ಬಗ್ಗಿಸಿ 

ದುಡಿಯುವಾಗ

ಕಾಣದ ದಣಿವು

ಸಂಸಾರ 

ಕಟ್ಟಿಕೊಂಡ ಮೇಲೆ 

ಗೊತ್ತಾಯಿತು 

ದುಡಿಯುವುದೇ ವಾಸಿ

ಸಂಸಾರ ನಡೆಸುವುದು 

ಭಾರೀ ಕಷ್ಟ ಕಷ್ಟ.

**********

24-12-2023  9.00pm

ಎರಡು ಹನಿಗಳು

ಸತ್ತು ಹೋದ 

ಭಾವನೆಗಳಿಗೆ

ಜೀವ ತುಂಬಲು 

ನೀನೇ ಬರಬೇಕು 

ಗೆಳೆಯಾ

ಇದ್ದು ಹೋಗುವ 

ನಾಳೆಗಳಿಗೆ 

ಈಗಲೇ 

ವಿದಾಯ ಹೇಳಲು

ಮನಸೇ ಇಲ್ಲ!

*************

ಮಾಯೆಯ 

ಮುಸುಕಿನೊಳು

ನಾನಿನ್ನೂ ಬಂಧಿ

ಹೇಗೆ ಕಳಚಿಕೊಳ್ಳಲಿ 

ಹೇಳು

ನನ್ನ ನಿನ್ನ 

ಪ್ರೀತಿಯ ಸಂಬಂಧ

ಆರಾರು ಬಂದರೂ 

ಈಗ

ಕಣ್ಣೆದುರು 

ನೀನೇ ಇರುವಾಗ!

**************

3-11-2023. 2.50pm

ಹನಿಗವನ “ಸೆಲ್ಫಿ”

ನಗುವ ಬೀರಲು
ಕಾರಣಗಳು ಬೇಕಿಲ್ಲ
ಸೆಲ್ಫಿ ತೆಗೆಯುವಾಗ
ನಕ್ಕುಬಿಡಿ ನೀವೆಲ್ಲಾ.

ಯಾರ ನೋಡಿ ನಕ್ಕೆ
ಎಂದು ಕೇಳಲು
ನನ್ನೇ ನೋಡಿ ನಕ್ಕೆ
ಎಂದುಲಿದರಾಯಿತಲ್ಲಾ.

11-7-2023 5.15pm

ಹನಿಗವನ ” ಕವಿತೆ”

ಕವಿತೆಗೆ
ನನ್ನನ್ನು ಕಂಡರೆ
ತುಂಬಾ ಇಷ್ಟ
ಆದರೂ
ಕಾಯಿಸಿ ಕಾಯಿಸಿ
ಸತಾಯಿಸುತ್ತಾಳೆ.

ಒಂದು ದಿನ
ಕೇಳಿಯೇಬಿಟ್ಟೆ
ನೀನ್ಯಾಕೆ ಹೀಗೆ?
ಅದಕ್ಕವಳಂದಳು
ಸುಲಭವಾಗಿ ಸಿಗುವ
ಹಣ್ಣಿನ ರುಚಿ ಹುಳಿ.

20-5-2023. 8.10pm

ಬರಹದೊಂದಿಗೆ ನನ್ನ ಮಾತು

ಇವತ್ತು ಬೆಳಿಗ್ಗೆ ಕೂತು ಬರೆಯುತ್ತಲೇ ಇದ್ದೆ ಬರಹದೊಂದಿಗೆ ಮಾತನಾಡುತ್ತ ಹಾಗೆ ಮುಂದುವರೆದು ರಾತ್ರಿ ಕೂಡಾ ಮತ್ತದೇ ಮಾತು ಅದರೊಂದಿಗೆ. ಇಂತಹ ಚುಟುಕು ಕವನಗಳು ಇನ್ನಷ್ಟು ಬರೆಯುತ್ತಿದ್ದೆ ಮದ್ಯೆ ಬೇರೆ ಯಾವ ಕೆಲಸ ಬಾರದೇ ಇದ್ದಿದ್ದರೆ ಅನಿಸಿತು.  ಅಬ್ಭಾ ಬರಹವೇ!!
***********

ನಿನ್ನ ಒಂದು
ನಗುವಿನಲ್ಲಿ
ನನ್ನದೊಂದು
ಖುಷಿಯಿದೆ
ನಿನ್ನೊಂದಿಗೆ
ಬದುಕಿಬಿಡಲು
ಮನಸು
ಷರಾ ಬರೆದಿದೆ.
**********

ಸೋತು ಹೋದ
ಬದುಕಿಂದು
ಮತ್ತೆ ಚಿಗುರೊಡೆದಿದೆ
ನಿನ್ನ ಪಾದದ
ಗುರುತೇ ಇದಕೆ
ಮೂಲ
ಕಾರಣವಾಗಿದೆ.
*********

ಕತ್ತು ಬಾಗಿದ
ಬೆನ್ನು ನೋವು
ಕ್ಷಣದಲ್ಲಿ
ಮಾಯವಾಗಿದೆ
ನಿನ್ನೊಂದಿಗೆ
ಮಾತನಾಡುತ್ತ
ಎಲ್ಲವನ್ನೂ
ಮರೆಸಿದೆ.
*********

ನೀನು
ಹೀಗೆಯೇ
ಇರುವೆಯೆಂಬ
ಕನಸು
ಬಿತ್ತು ನಿನ್ನೆಯೇ
ಬೆಳಗಾಗುವಷ್ಟರಲ್ಲಿ
ಮರೆತು ಎಲ್ಲ
ಮಂಗಮಾಯವಾಗಿದೆ.
***********

ಪದಪದಗಳಲ್ಲಿ
ಪದ್ಯ ಕಟ್ಟಿ
ಹಾಡಲಣಿಯಾಗಿಹೆ
ನೀನು
ಬಂದ ಹೊರತು
ಸ್ವರ
ಈಚೆ
ಬಾರದಾಗಿದೆ.
**********

ನನ್ನ ನಿನ್ನ
ನಡುವೆ ಇರುವ
ಅಂತರ
ಜಗವು ಹೇಳಿದೆ
ಆದರೇಕೊ
ಇದು ನನಗೆ
ಒಗಟಾಗೇ
ಉಳಿದಿದೆ.
***********

ಬೆಚ್ಚಿ ಬೀಳಿಸುವ
ಸಂಗತಿ ತಿಳಿದು
ಕೊಂಚ
ಮೈ ನಡುಗಿದೆ
ನೀನು
ಬಂದರೇನೇ
ಅದಕೆ ಧೈರ್ಯ
ಬರುವುದೆಂದಿದೆ.
*********

ತಾವು ಇಲ್ಲದ
ಕಟ್ಟುವಿಕೆಗೆ
ಏನು ಅರ್ಥ
ಎಂದಿದೆ
ನಿನ್ನ ಸಹಾಯ
ಪಡೆದು ನೋಡು
ಆಗ ಸಂಗತಿ
ಬೇರೆ ಎಂದಿದೆ.
*********

ಹೀಗೆ ಬಂದು
ಹಾಗೆ ಹೋಗುವ
ನೆಂಟ ನಾನಲ್ಲ
ಎಂದು ಹೇಳಿದೆ
ಬರೆದು ಬರೆದು
ಗುಡ್ಡೆ ಹಾಕಿದ್ದು
ನೋಡಿ
ಹೌದೆಂಬಂತೆ
ಮಾಡಿದೆ.
**********

ರಿಂಗಣಿಸುವ
ಪದಗಳೆಲ್ಲ
ಜೋತು ಬಿದ್ದಿವೆ
ಕೊರಳಿಗೆ
ಒಡವೆ
ಇಲ್ಲದಿರೇನಂತೆ
ಹಾರ ಮಾಡಿಕೋ
ನನ್ನೇ ಎಂದಿವೆ.
**********

ನಿನ್ನೇ
ಮಡಿಲಲಿರಿಸಿಕೊಂಡು
ಬರೆದೆ
ಒಂದು ಪುಸ್ತಕ
ನೋಡು ಈಗ
ಹೋದ ಮನೆಗಳಲ್ಲಿ
ನಿನ್ನ ಹೆಸರು
ಶಾಶ್ವತ.
*********

ನವಿಲ ಬಣ್ಣ
ನಿಮಿರಿ ಉಡುಗೆ
ಹೋದಲ್ಲೆಲ್ಲ
ನಿನ್ನದೇ ಸದ್ದು
ಇನ್ನೂ ಹೇಳು
ಏನು ಬೇಕು
ಸಾಕಾಗಲಿಲ್ಲವೇ
ಹಿರಿ ಜೀವಕೆ.
*********
13-12-2021 11.10pm

ಹನಿಗವನಗಳು “ಕಾವ್ಯ”*

ಕಾವ್ಯದ ಕೊಳದಲ್ಲಿ
ಖನಿಜದ ಲಾವಣಿ
ಅಗೆದಷ್ಟೂ ಬಗೆದಷ್ಟೂ
ಮುಗಿಯದು ಚಾವಣಿ.
************

ಪ್ರತಿಭಾನ್ವಿತ ಲೇಖಕರ
ಒಂದು ಲೈಕು
ದಿಢೀರನೆ ಆಗುವುದು
ಮನಸು ಹೈಕು.
**********

ಕೆಂಪಿಂಕಿನ ಬಣ್ಣದಲ್ಲಿ
ಕಳೆ ಕಳೆಯಾಗಿ
ಕಾಣುವುದೇ ಇಲ್ಲ ನೀನು
ಅದೇನಷ್ಟೊಂದು ಆಸೆ
ಕಪ್ಪು ಕೊಳದಲ್ಲಿ ಮಿಂದೇಳಲು?
***********

ಕೆಲವರಿಗೇ ಮಾತ್ರ ದಕ್ಕುವ ಪ್ರಶಸ್ತಿ
ಎಲ್ಲರಿಗೂ ದಕ್ಕುವುದಿಲ್ಲ ಏಕೆ?
ಹೀಗೊಂದು ಪ್ರಶ್ನೆ ಕಾಡಿದಾಗ
ಅಂದುಕೊಂಡುಬಿಡಿ
ಅದು ಪ್ರಶಸ್ತಿ ಅಲ್ಲ ವಶೀಲಿ!
***********

ಖುಷಿಗೆ ಕವಿತೆಗಳು ಅರಳುತ್ತವೆ
ವಿಧವಿಧವಾದ ಭಂಗಿ, ಬಣ್ಣಗಳಲ್ಲಿ
ನಮ್ಮೂರ ಹಿತ್ತಲ ಡೇರೆ ಹೂಗಳಂತೆ
ಥೇಟ್ ಅಮ್ಮ ಮಡಿಚಿಟ್ಟ ಸೀರೆಗಳಂತೆ
ಕಪಾಟಿನ ತುಂಬ ಒಪ್ಪವಾಗಿ ಜೋಡಿಸಿ
ಆಗಾಗ ಮೈದಡವುತ್ತೇನೆ ಅವಳ ಕಂಡಂತೆ.

24-8-2021. 9.45pm

ಕೆಲವು ಹನಿಗವನಗಳು

ಕವಿತೆಗಳ ಸಾಲುಗಳಲ್ಲಿ
ನಾನು ಅಡಗಿಕೊಳ್ಳಲು ಹೋದೆ
ನನ್ನ ನೂಕಿ ಹೇಳಿತು
ನೀನು ಆಗಾಗ ಬರೆಯುತ್ತಲೇ ಇರು
ಇದೇ ನಾನು ನಿನಗೆ ಕೊಡುವ ಶಿಕ್ಷೆ!

***************

ಬದುಕೇ ಬಣ್ಣದ ರಂಗೋಲಿ
ಎದುರಾಗುವ ಜನರ ಮನಸ್ಸೇ
ಸರ್ವ ಬಣ್ಣಗಳ ಮಿಶ್ರಣ
ಗುರುತಿಸುವಿಕೆಯಲ್ಲಿ ಜೀವ ಹೈರಾಣ
ಕೊನೆಗೆ ಎಲ್ಲರೂ ಹೋಗುವುದು
ಒಂದೇ ತಾಣ.
****************

ಮನಸು ಸದಾ ಥಳಕು ಹಾಕುವ
ಆಗಾಗ ಬಣ್ಣ ಬದಲಾಯಿಸುವ
ಜೀವನ ಪರ್ಯಂತ ಚಿತ್ತಾರ ಬಿಡಿಸುವ
ವಿಶ್ವ ಪರ್ಯಟನೆಯನ್ನೇ ಮಾಡುವ
ಲಂಗು ಲಗಾಮಿಗೆ ಸಿಗದೆ ನುಣುಚಿಕೊಳ್ಳುತ್ತ
ಆಡುವುದು ನವರಂಗಿ ಆಟ.
***************

30-3-2021. 8.50am

ವಿಧವಿಧ ರೀತಿಯ ಕವಿತೆಗಳು

ದ್ವಿರುಕ್ತಿ ಕವಿತೆ

ನನ್ನ ನಿನ್ನ ನಡುವೆ ಸದಾ ಗಡಿಬಿಡಿ
ಎದ್ದೇಳುವುದು ಲೇಟಾಗಿ ಹೇಳುತ್ತಿದ್ದೆ ತಡಿತಡಿ
ತಿಂಡಿ ತಿನ್ನುವಾಗ ನೀ ಮಾಡುತ್ತಿದ್ದೆ ಸಿಡಿಮಿಡಿ
ಸಹಿಸಿಕೊಂಡು ನಾ ನೋಡುತ್ತಿದ್ದೆ ಪಿಕಿಪಿಕಿ.
**************

ಚೌಕ ಕವಿತೆ

ಮನದ ಮಾತಿಗೆ ಮೌನವೇ ಶೃಂಗಾರ
ಅರಿತು ನಡೆದರೆ ಬಾಳದು  ಬಂಗಾರ
ಇರುವ ಮೂರು ದಿನಗಳೇ  ಆಧಾರ
ಹೊಂದಿಕೆ ಬದುಕಿನ ಏಕೈಕ ಸಾಕಾರ.
**************

9 ಪದಗಳ ಕವಿತೆ

ಹೂವೇ ಹೆಣ್ಣಾಗಿ
ಇನ್ನೊಂದು ಮನೆ ಬೆಳಗಿ
ಸಂತಾನ ಸಂಪತ್ತಿಗೆ
ಒಡೆಯಳಾಗಾಮನೆಯ
ಜ್ಯೋತಿಯಾಗುವಳು!
************

ಮೊಗ್ಗು ಹೂವಾಗಿ
ಸುತ್ತೆಲ್ಲ ಪರಿಮಳ ಬೀರಿ
ಪೂಜೆಗೂ ಸಾವಿಗೂ
ಅರ್ಪಿಸಿಕೊಂಡು
ಕೃತಾರ್ಥಳಾಗುವಳು!
************

ಹೆಸರು ಕವಿತೆ

ಮೂರಕ್ಷರವೊಂದರ
ಹೆಸರಲ್ಲಿ ನಾನಿರುವೆ
ಮೊದಲಕ್ಷರವ ತೆಗೆದರೆ
ಅಲ್ಲೂ ನಾನಿರುವೆ
ಏನೆಂದು ಕೇಳುವಿರಾದರೆ
ಅದೇ ನನ್ನ ಹೆಸರು
” ಸಂ ಗೀತಾ “
*************

ಜೋಡು ನುಡಿ ಕವಿತೆ

ಮನೆಗಿನೆ ಎಲ್ಲಾ ಮರೆತು
ಹಾದಿಬೀದಿ ಸುತ್ತಿಕೊಂಡಿದ್ದರೆ
ಸಂಸಾರಗಿಂಸಾರ ಸಾಗೋದಾದರೂ ಹೇಗೆ.

ನಮ್ಮನಮ್ಮಲ್ಲಿ ಒಗ್ಗಟ್ಟಿದ್ದು
ಅಡ್ಡಾದಿಡ್ಡಿ ವ್ಯವಹಾರ ಮಾಡದೆ ಬದುಕಿದರೆ
ಅವರಿವರ ದೃಷ್ಟಿಯಲ್ಲಿ ಗೌರವ ಪಡೆಯಬಹುದು.
*************

ಬೆಸ ಕವಿತೆ

ಪ್ರಕೃತಿಯೊಡನೆ ಬೆರೆತು ನೋಡಿ
ಸಿಗುವುದು ಎಷ್ಟೊಂದು ಮನಕಾನಂದ
ಮರೆಯಲಾಗದ ಸಂತಸ ನೀಡುತ್ತ
ಮನಸ್ಸು ಮುಗ್ಧಗೊಳಿಸುವ ಶಕ್ತಿ
ಅವಳಿಗಲ್ಲದೇ ಇನ್ನಾರಿಗಿರಲು ಸಾಧ್ಯ?
*************

ಪ್ರಶ್ನೆ ಕವಿತೆ

ಸುಮ್ಮನಿದ್ದ ಮನಸ
ಕಾಡಿ ಬೇಡಿ ಕೆಣಕಿದರೆ
ಏನು ಬಂತು ಪ್ರಯೋಜನ?

ತನ್ನ ತಾನು ಅರಿಯದೆ
ಅನ್ಯರಿಗೆ ಹಿಂಸೆ ಕೊಡುವ ಮನಸ
ಈ ಜಗದಲಿ ಯಾರು ಮೆಚ್ಚುವರು?

12-3-2021. 10.13pm

ನಿರ್ಧಿಷ್ಟ ಪದಗಳಲ್ಲಿ ಬರೆದ ಕವಿತೆಗಳು


1234

ಎಲ್ಲೋ
ಇದ್ದ ನನ್ನ
ನಿನ್ನ ಮೋಡಿಗೆ ಬೆರಗಾಗಿಸಿ
ಬಿಡಿಸಿಕೊಳ್ಳಲು ಆಗದಂತೆ ಮಾಡಿದ್ದು ತರವೇ?

ಹೇಗೋ
ಇದ್ದೆ ನಾನು
ನೀನು ಬಂದ ಮೇಲೆ
ನಾನಾರೆಂದು ಅರಿವಾಗಿಸಿದ್ದಕ್ಕೆ ಏನು ಕೊಡಲೇಳು?
************

424 ಕವಿತೆ

ರೈತರ ಬೆಳೆಗೆ ಸೂಕ್ತ ಬೆಲೆ
ಸಿಕ್ಕರೆ ಸಾಕು
ಉತ್ತು ಬಿತ್ತಿ ಮತ್ತಷ್ಟು ಬೆಳೆದಾನು!
**************

323 ಕವಿತೆ

ಕಂದನ ತೊದಲು ನುಡಿ
ತಾಯ್ತನಕ್ಕೆ ಗರಿಮೆ
ಹೆಣ್ಣಿಗದು ಸಂಭ್ರಮದ ಗಳಿಗೆ.
************

242 ಕವಿತೆ

ಅರಿವಿಲ್ಲದಂತೆ ಅರಿವಾಗುವುದು
ತನು ಮನದೊಳಗೆಲ್ಲ ಪ್ರೇಮ ನಿವೇದನೆ
ಇದುವೇ ಹರೆಯ.
*************

333 ಕವಿತೆ

ಇರುವ ಮೂರು ದಿನಕೆ
ಸದಾ ಏನೇನೆಲ್ಲಾ ಬಡಿವಾರ
ಕೊನೆಗೆ ಸಾವಿನಲ್ಲಿ ಸಮಾಪ್ತಿ.
*************

353 ಕವಿತೆ

ಕಾಡುವ ಮನಸುಗಳು ನೂರಿರಲು
ಕವಿತೆಗೆಲ್ಲಿ ಬರುವುದು ಒಂದು ದಿನವಾದರೂ ನಿದ್ರೆ
ಬಟ್ಟಿಯಿಳಿಸಿ ಬರೆಯಿಸುವುದೇ ಆಯಿತಲ್ಲಾ.
***********

333 ಕವಿತೆ

ಭಾವದಲೆಗಳ ಮೇಲೆ ತೇಲುತಿಹ
ಪದಗಳ ಮೇಳ ಜಾರಿದಾಗ
ಉದ್ಭವಿಸಿತೊಂದು ಚಂದದ ಕವನ.
**********

12345 ಕವಿತೆ

ನಾನೊಂದು
ವೀಣೆಯ ತಂತಿ
ಮೀಟುವವ ನೀನಿರುವಾಗ ನನಗಿಲ್ಲ
ನಾದ ಹೊರಬರದಿರಬಹುದೆಂಬ ಕಿಂಚಿತ್ತೂ ಆತಂಕ
ಹೀಗೆಯೇ ಮುಂದುವರೆದರೆ ನೀನಿಟ್ಟ ಹೆಸರು ಸಾರ್ಥಕ!
***********

2424 ಕವಿತೆ

ಪದ ಪದಗಳಲಿ
ಹುಟ್ಟಿ ಬರುವ ಅಂದದ ಅರಗಿಣಿ
ನಿನ್ನ ಅಂಗಳದಲ್ಲಿ
ಅದಿನ್ನೆಷ್ಟು ಅಡಗಿವೆ ನನಗೊಮ್ಮೆ ಹೇಳು.
*************

2323 ಕವಿತೆ

ಕವಿಯ ಭಾವನೆಗಳ
ದ್ಯೋತಕ ಪದಗಳ ಬಳಕೆ
ಮುತ್ತಿನಂತೆ ಪೊಣಿಸುವುದು
ಅದವರವರ ಬುದ್ಧಿಮತ್ತೆಯ ಹಿಕ್ಮತ್ತು.
************

432 ಕವಿತೆ

ನಾನು ನೀನೊಂದಾಗಿ ಬರೆದ ಕವಿತೆ
ಇಂದೆನಗೆ ಓದುವ ಆಸೆಯಾಗಿದೆ
ಆದರೆ ನೀನಿಲ್ಲವಲ್ಲಾ!
*************

135 ಕವಿತೆ

ಕನಸೇ
ನೀನೇಕೆ ಬೆನ್ನಟ್ಟಿ ಬರುವೆ…
ನಖಶಿಖಾಂತ ಉರಿ ಎಬ್ಬಿಸಿ ಚೆಂದ ನೋಡುವುದಕ್ಕಾ?

************

321 ಕವಿತೆ

ಸೂರ್ಯಾಸ್ತದ ರಂಗಿಗೆ ಅಂಬರವು
ಕೆಂಪಾಗಿರಲು ಭುವಿಯೂ
ತಂಪಾಯಿತು.
**************

1212 ಕವಿತೆ

ಪದಗಳ
ಲಾಲಿತ್ಯಕೆ ಮಣಿಯದ
ಕವಿಯಿಲ್ಲ
ಭಾವೋದ್ವೇಗದ ಕ್ಷಣಗಳಲಿ.
***********

2332 ಕವಿತೆ

ನೆನಪಾಗಿ ಉಳಿಯದಿರು
ಗಾಯಕ್ಕೆ ಬರೆ ಎಳೆದಂತೆ
ಕಂಬನಿಯ ಉಯಿಲು ಬತ್ತಿ
ಬಾಯ್ತೆರೆದ ಭೂಮಿಯಾಗುವುದು.
*************

7-3-2021 2.47pm

ಅಪಾರ್ಥ

ನಗುಮೊಗದಲಿ ನಾನಂದು ನಿನಗೆ
ಏನೋ ಹೇಳಲು ಹೊರಟಿದ್ದೆ
ಕಿವಿಗಿಟ್ಟ ನಿನ್ನ ಮೊಬೈಲಿನಲಿ
ನೀ ಉಲಿಯುತ್ತಿದ್ದೆ ಸ್ವಲ್ಪ ಜೋರಾಗೇ
ಅವಳಾ…ಗಂಟು ಮೋರೆ ಗಿರಾಕಿ.

ಆ ಕ್ಷಣ ನಾನಂದುಕೊಂಡಿದ್ದೆ
ಈ ಮಾತು ನನ್ನ ಕುರಿತೇ ಇರಬಹುದೆಂದು
ಕ್ಷಣಮಾತ್ರದಲಿ ಗಂಟಾದ ನನ್ನ ಮುಖ
ನೀ ನೋಡಬೇಕೆಂದೇ ಎದುರಾದೆ
ಇನ್ನಷ್ಟು ಊದಿಸಿಕೊಂಡು.

ಸೂಕ್ಷ್ಮಮತಿ ನೀನು ಗಮನಿಸಿಯೇ ಬಿಟ್ಟೆ
“ಅಪಾರ್ಥ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ”
ಅಂದು ನೀ ಹೇಳಿದ್ದು ಸಾಭೀತೂ ಮಾಡಿಬಿಟ್ಟೆ
ನಾಚಿಕೆಯಾಗುತಿದೆ ಈಗಲೂ ನೆನಪಿಸಿಕೊಂಡರೆ
ಥೋ…….ನನ್ನ ತಲೆ ಕಾಯಾ!

“ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ”
ಎಂದು ಮತ್ತೆ ಮತ್ತೆ ಹೇಳಬೇಡೊ ಮಾರಾಯಾ
ಹೆಣ್ಣಿಗೆ ಹೊಗಳಿಕೆ ಬೇಕು ತೆಗಳಿಕೆ ಬೇಡಾ
ಇದು ತಿಳಿಯದ ಗಂಡಸರು
ಎಷ್ಟು ಪ್ರೀತಿ ಮಾಡಿದರೂ ಅಷ್ಟೇ.

29-11-2020. 12.20pm