ಪುಸ್ತಕ ಪರಿಚಯ – “ತಿಂಮ ಸತ್ತಾಗ”

ಪುಸ್ತಕ – ತಿಂಮ ಸತ್ತಾಗ
ಲೇಖಕರು – ಬೀಚಿ
ಸಮಾಜ ಪುಸ್ತಕಾಲಯ, ಧಾರವಾಡ.
ಬೆಲೆ – 40/-

ಇಂದು ಬೀಚಿಯವರ ಪುಣ್ಯ ಸ್ಮರಣೆಯ ದಿನ.  ಈ ದಿನ ಅವರನ್ನು ನೆನೆದು ಅವರ ಬರಹಗಳೊಂದಿಗೆ ನನ್ನ ಅಶ್ರುತರ್ಪಣದೊಂದಿಗೆ ಕೃತಾರ್ಥಳಾಗಲು ಈ ಪುಸ್ತಕ ಆರಿಸಿಕೊಂಡೆ.

ನಾನು ಈ ಪುಸ್ತಕ ಕೊಂಡುಕೊಂಡಿದ್ದು ಬೆಂಗಳೂರಿನಲ್ಲಿ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ.  ಹೈಸ್ಕೂಲ್ ದಿನಗಳಿಂದಲೂ ಇವರ ಸಾಹಿತ್ಯ ಓದುತ್ತಿದ್ದೆ.  ಹಾಗೆ  ನನಗೆ ಇನ್ನೂ ನೆನಪಿದೆ ; 1976ರಲ್ಲಿ ನನ್ನ ಸೋದರ ಮಾವ ಸಾಹಿತಿ ಪಿ.ವಿ.ಶಾಸ್ತ್ರಿ,ಕಿಬ್ಬಳ್ಳಿಯವರ ಮನೆಗೆ ಬೀಚಿಯವರು ಬಂದಾಗ ಅವರನ್ನು ನೋಡಿದ್ದು, ಹೊರಡುವಾಗ ಕಾಲಿಗೆರಗಿ ನಮಸ್ಕಾರ ಮಾಡಿದಾಗ “ಏನಮ್ಮಾ ನಿನ್ನ ಹೆಸರು?”…… “ಇವಳಿಗೆ ಸಂಗೀತಾ ಎಂದು ಹೆಸರು ಇಟ್ಟಿದ್ದು ನಾನೇ.  ನನ್ನ ಅಕ್ಕನ ಮಗಳು”ಎಂದು ಮಾವ ಹೆಮ್ಮೆಯಿಂದ ಹೇಳಿಕೊಂಡಾಗ…..  “ಸಂಗೀತ ಬರುತ್ತಾ? ಒಂದು ಹಾಡು ಹಾಡು” ಎಂದಾಗ ಮುದುರಿ ನಿಂತಿದ್ದು ಕಂಡು ನನ್ನ ತಲೆ ಸವರಿ ಆಶಿರ್ವಾದ ಮಾಡಿದ್ದು ಜೊತೆಗೆ ಎಲ್ಲರೂ ಜೋರಾಗಿ ನಕ್ಕಿದ್ದು…. ವಾಮನ ಮೂರ್ತಿಯ ನಗುಮುಖ ಎಲ್ಲವೂ ಈಗ ಕನಸು.  ಆಗ ಸಾಹಿತ್ಯದ ಗಂಧಗಾಳ ಗೊತ್ತಿಲ್ಲದ ನನಗೆ ಅವರನ್ನು ಕಂಡಿದ್ದು ಮಾತ್ರ ಮಹಾ ಖುಷಿ ಆಗಿತ್ತು.

ತಮ್ಮ ಅದ್ಭುತ ಹಾಸ್ಯ ಬರಹಗಳಿಂದ ಖ್ಯಾತರಾದ ಬೀಚಿಯವರ ಮೂಲ ಹೆಸರು ರಾಯಸಂ ಭೀಮಸೇನರಾವ್.  ದಿನಾಂಕ 29-4-1913ರಲ್ಲಿ ಹರಪನಹಳ್ಳಿಯಲ್ಲಿ ಜನ್ಮ ತಳೆದು ಕೇವಲ ತಮ್ಮ 67ನೇ ವಯಸ್ಸಿನಲ್ಲಿ 7-12-1980ರಲ್ಲಿ ಕಾಲವಾದದ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ.  ತಮ್ಮ ಜೀವಿತಾವಧಿಯಲ್ಲಿ ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದು ಅವರ ಹಲವಾರು ಕೃತಿಗಳು ಮರು ಮುದ್ರಣಗೊಂಡಿವೆ.  ಅವರು ಇನ್ನಷ್ಟು ವರ್ಷ ಬದುಕಿದ್ದರೆ ಇನ್ನೆಷ್ಟು ಪುಸ್ತಕಗಳು ಸಾಹಿತ್ಯದೊಡಲು ತುಂಬುತ್ತಿತ್ತೊ ಏನೋ!

ಬೀchiಯವರ ಚುಟುಕಗಳು, ನಗೆಹನಿಗಳು, ತಿಂಮ ದರ್ಶನಗಳು, ತಿಂಮ ರಸಾಯನಗಳು, ಹರಟೆಗಳು, ತಿಂಮನ ತಲೆ, ಹುಚ್ಚು ಹುರುಳು, ಚಿನ್ನದ ಕಸ, ಬೆಳ್ಳಿ ತಿಂಮ ನೂರೆಂಟು ಹೇಳಿದ, ಅಮ್ಮಾವ್ರ ಕಾಲ್ಗುಣ, ಹೆಂಡತಿ ನಕ್ಕಾಗ, ಸಂಪನ್ನರಿದ್ದಾರೆ ಎಚ್ಚರಿಕೆ, ಉತ್ತರ ಭೂಪ, ತಿಂಮಿಕ್ಷನರಿ, ಅಂದನಾ ತಿಂಮ ಮೊದಲಾದ ಹಾಸ್ಯ ಕೃತಿಗಳು ಇಂದಿಗೂ ಓದುಗರ ಮನ ಮನೆಗಳಲ್ಲಿ ರಾರಾಜಿಸುತ್ತಿವೆ.

ಬೀಚಿಯವರ ಕಲ್ಪನೆಯ ಪಾತ್ರಧಾರಿ “ತಿಂಮ” ಅವರ ಅನೇಕ ಕೃತಿಗಳಲ್ಲಿ ಮರು ಹುಟ್ಟು ಪಡೆಯುತ್ತಾನೆ.  ಅವರೇ ಹೇಳುವಂತೆ “ಈ ಹೆಸರು ದಡ್ಡತನದಲ್ಲಿ ಕಂಡು ಕೇಳಿದ ಚೇಷ್ಟೆಗಳಿಗೆಲ್ಲಾ –ಪಾಪ! ತಿಂಮನನ್ನೇ ನಾಯಕನನ್ನಾಗಿ ಒಡ್ಡಿದ್ದೇನೆ. ತಿಂಮನ ನಗು ದೇಹವಾದರೆ ಆ ನಗುವಿನ ಹಿಂದೆ ಹುದುಗಿಕೊಂಡಿರುವ ನೋವೇ ಜೀವ, ಅದನ್ನು ಗುರುತಿಸದಿದ್ದರೆ ದೊರೆಯುವುದು ತಿಂಮನ ಹೆಣ ಮಾತ್ರ”.

“ತಿಂಮ ಸತ್ತಾಗ” ಈ ಪುಸ್ತಕದಲ್ಲಿ ಒಟ್ಟೂ ಎಂಟು ನಾಟಕಗಳು ಇವೆ.  ಮೊದಲ ನಾಟಕ “ತಿಂಮ ಸತ್ತಾಗ” ನಾಟಕದಲ್ಲಿ ಒಟ್ಟೂ ಹನ್ನೊಂದು ಪಾತ್ರದಾರಿಗಳನ್ನು ಸೃಷ್ಟಿಸಿದ್ದಾರೆ.  “ತಿಂಮ” ಮುಖ್ಯ ಪಾತ್ರಧಾರಿ ಶವದಂತೆ ಮಲಗಿರುತ್ತಾನೆ.  ಅವನ ಸುತ್ತಲೂ ಅವನ ಹೆಂಡತಿ, ತಾಯಿ, ವಿದ್ಯಾರ್ಥಿ,ಸಾಕಿದ ದೊಡ್ಡಮ್ಮ, ಅವಿವಾಹಿತ ಮಗಳು, ನಾಲ್ಕು ವರ್ಷದ ಪುಟ್ಟ ಮಗು, ಆಚಾರ್ಯರು,ಪಕ್ಕದ ಮನೆ ವಿಧವೆ ಇವರೆಲ್ಲರೂ ತಿಂಮನ ಸಾವಿನ ನೋವಿನಲ್ಲಿ ಗೋಳಾಡುತ್ತ ಅಲವತ್ತುಗೊಳ್ಳುವ….  ನನಗೆ ಸಾವು ಬರಬಾರದಿತ್ತಾ ಎಂದು ಹಪಹಪಿಸುವ ಕೊನೆಗೆ ತಿಂಮ ನಿದ್ದೆಯಿಂದ ಎದ್ದಂತೆ ಎದ್ದು ಕೂತಾಗ ತಮ್ಮ ಜೀವ ಕೊಡಲು ಇಲ್ಲದ ಕಾರಣ, ನೆಪ ಹೇಳುವುದು, ಪಲಾಯನ ಮಾಡಿದ ಪರಿ ಎಲ್ಲವೂ ಎಷ್ಟೊಂದು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ! ಕೊನೆಯಲ್ಲಿ ತಾಯಿ ಗಂಗವ್ವ ಮೊದಲು ಆಗ ಅಂದುಕೊಂಡಂತೆ ನಾನು ಹೊರಟೆ ಎಂದು ಕಣ್ಣು ಮುಚ್ಚುತ್ತಾಳೆ.

ಇಲ್ಲಿ ಬದುಕಿನ ವಾಸ್ತವ ಸಂಗತಿ,ಜೊತೆಗಿದ್ದವರ ಒಳಗುಟ್ಟು, ನಾಟಕೀಯ ವ್ಯಕ್ತಿತ್ವ, ಯಾರ ಪ್ರೀತಿ ಸತ್ಯ, ಸುಳ್ಳುಗಳ ಅನಾವರಣ ಎಲ್ಲವನ್ನೂ ಅರಿಯಲು ಒಂದು ವೇದಿಕೆ ಕಲ್ಪಿಸಿ ಜನರ ಮುಂದಿಟ್ಟಿದ್ದಾರೆ. 

ಕೊನೆಯಲ್ಲಿ ಬೀಚಿ ತಿಂಮನನ್ನು ಕುರಿತು ಆಡುವ ಮಾತುಗಳು ಪುಸ್ತಕ ಓದಿಯೇ ಅನುಭವಿಸಬೇಕು.  ನಗೆ ಗಡಲಲ್ಲಿ ತೇಲಿಸುವ ನಾಟಕ ಓದುತ್ತ ಒಮ್ಮೆ  ಬೀಚಿಯವರೂ ಹೀಗೆ ಎದ್ದು ಬಂದುಬಿಡಬಾರದಿತ್ತೇ…ಅನಿಸಿ ಕಣ್ಣು ಮಂಜಾಗಿಸಿತು.
ಹೆಚ್ಚು ಬರೆಯಲಾದೀತೇ……

ಪುಸ್ತಕದಲ್ಲಿಯ ಪ್ರತಿಯೊಂದು ನಾಟಕಗಳಲ್ಲಿ ಪಾತ್ರಧಾರಿಯಾಗಿ ಬೀಚಿಯವರು ಅದೆಷ್ಟು ಸೊಗಸಾಗಿ ಬರೆದಿದ್ದಾರೆ ಅಂದರೆ ನಿಜಕ್ಕೂ ಮೈನವಿರೇಳಿಸುತ್ತದೆ, ಮತ್ತೆ ಮತ್ತೆ ಓದಿ ನಗು ಕೂಡಾ ಉಕ್ಕಿ ಬರುತ್ತದೆ ಹಾಗೂ ಚಿಂತನೆಗೀಡು ಮಾಡುತ್ತದೆ.  ನಗುವಿನಲ್ಲೂ ನವಿರಾಗಿ ಬದುಕಿನ ಸತ್ಯ ಅರಿವಾಗಿಸಿದ್ದಾರೆ.

ವಾಮನ ಮೂರ್ತಿಯ ನಗೆ ಕಣ್ತುಂಬಿಕೊಂಡು ಇವತ್ತಿನ ದಿನ ಅವರನ್ನು ನೆನೆಯುತ್ತ ನಾನು ಕಂಡ ನನ್ನ ನೆಚ್ಚಿನ ಸಾಹಿತಿ ಬೀಚಿಯವರು ಸದಾ ಈ ದಿನ ತಪ್ಪದೇ ನೆನಪಿಗೆ ಬಂದುಬಿಡುತ್ತಾರೆ.  ಏಕೆಂದರೆ ಇವತ್ತು ನನ್ನ ಜನ್ಮದಿನ ಅವರನ್ನು ಕಳೆದುಕೊಂಡ ದಿನ.  ಭಗವಂತ ಅವರ ಆತ್ಮಕ್ಕೆ ಸದಾ ಶಾಂತಿ ಕೊಡಲಿ.  ನಗುವಿನ ಸರದಾರನ ನೆನಪು ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರಲಿ.

7-12-2021. 8.25pm

ಪುಸ್ತಕ ಪರಿಚಯ – “ಉತ್ತರ ಭೂಪ”

ಪುಸ್ತಕ – ಉತ್ತರ ಭೂಪ
ಲೇಖಕರು – ಬೀಚಿ
ಬೀಚಿ ಪ್ರಕಾಶನ
ಪುಟಗಳು – 346
ಬೆಲೆ -ರೂ.200/

ದಿನ ನಿತ್ಯದ ಬದುಕಿಗೆ ಒಂದಿಷ್ಟು ಹಾಸ್ಯ ಇದ್ದರೇನೇ ಮನಸ್ಸು ಲವಲವಿಕೆಯಿಂದ ಇರಲು ಸಾಧ್ಯ.  ಚೈತನ್ಯಕ್ಕೆ ಉತ್ತಮ ಮದ್ದು ಎಂದರೂ ತಪ್ಪಾಗಲಾರದು.  ಹಿಂದೆಲ್ಲಾ ಒಟ್ಟು ಕುಟುಂಬ ಇರುತ್ತಿತ್ತು.  ಕುಟುಂಬದ ಸದಸ್ಯರಲ್ಲಿ ಒಬ್ಬರಲ್ಲಾ ಒಬ್ಬರು ತಮ್ಮ ಮಾತಿನ ಮಧ್ಯೆ ಹಾಸ್ಯ ಚಟಾಕಿ ಹಾರಿಸಿದಾಗಲೆಲ್ಲ ಮನೆ ನಗುವಿನಲ್ಲಿ ಮುಳುಗಿರುತ್ತಿತ್ತು.  ಇಂತಹ ಸನ್ನಿವೇಶ ಹೆಚ್ಚಾಗಿ ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ವರ್ಷಕ್ಕೆ ಒಂದೆರಡು ಬಾರಿ ಊರವರೆಲ್ಲ ಸೇರಿ ನಡೆಸುವ ಬೆಳದಿಂಗಳೂಟ, ಹೊಳೆಊಟ, ಹಬ್ಬಗಳಲ್ಲಿ, ಕಬ್ಬಿನಾಲೆಮನೆ ನಡೆಯುವ ದಿನಗಳಲ್ಲಿ, ಪ್ರವಾಸ ಇತ್ಯಾದಿ ಹೀಗೆ ಹಲವು ಸನ್ನಿವೇಶಗಳಲ್ಲಿ ಹೆಚ್ಚು ನಗೆಬುಗ್ಗೆಗಳು ಏಳುತ್ತಿದ್ದವು.  ಆದರೆ ಹಾಸ್ಯವಾಗಿ ಮಾತನಾಡಲು ಎಲ್ಲರಿಗೂ ಸಾಧ್ಯವಿಲ್ಲ.  ನಿತ್ಯ ಜೀವನದಲ್ಲಿ ನಡೆಯುವ ಸನ್ನಿವೇಶಗಳನ್ನೆ ಹಾಸ್ಯ ರೂಪದಲ್ಲಿ ಹೇಳಿ ನಗೆ ಚಟಾಕಿ ಹಾರಿಸುವ ಕಲಾವಿದರು, ಬರಹಗಾರರು ಇಂದು ನಮ್ಮೊಂದಿಗೆ ಇದ್ದಾರೆ.  ಆದರೆ ಪುಸ್ತಕಗಳನ್ನು ತಿರುವಿದಾಗ ಕಾಲವಾದ ಹಾಸ್ಯ ಬರಹಗಾರರ ಬರಹಗಳು ನಮ್ಮನ್ನು ಇಂದಿನವರೆಗೂ ರಂಜಿಸುತ್ತಿವೆ.

ಅವುಗಳಲ್ಲಿ ನನಗೆ ಸಿಕ್ಕ ಪುಸ್ತಕ “ಉತ್ತರ ಭೂಪ.”  ಹೆಸರೇ ಪಟಕ್ಕನೆ ನಗು ತರಿಸುತ್ತದೆ.  ಇನ್ನು ಪುಸ್ತಕ ಓದಿದಾಗ ಗಿಕಿ ಗಿಕಿ ನಗು ಬಾರದಿರು.

1974 ರಿಂದ 2017ರವರೆಗೆ ಬರೋಬ್ಬರಿ ಒಂಬತ್ತು ಬಾರಿ ಮರು ಮುದ್ರಣಗೊಂಡ ಪುಸ್ತಕವಿದು.  ಲೇಖಕರಾದ ಬೀಚಿಯವರು ಹೇಳುತ್ತಾರೆ ; ‘ಸುಧಾ’ವಾರಪತ್ರಿಕೆ ಜನನ 1965 ನವೆಂಬರ್ 1ರಂದು.
ಈ ವಾರ ಪತ್ರಿಕೆಯ “ನೀವು ಕೇಳಿದಿರಿ”ವಿಭಾಗವನ್ನು ನನಗೆ ವಹಿಸಿಕೊಳ್ಳಲು ಮಿತ್ರರಾದ ಇ.ಸೇತುರಾಮ್ ಮತ್ತು ಎಂ.ಬಿ.ಸಿಂಗ್ ರವರುಗಳು ಸೂಚಿಸಿದರು.  ಇದರಲ್ಲಿ ಬರಹ ಮುಂದುವರೆಸಿದೆ.  ಈ ಒಂದು ಅಂಕಣದಿಂದ ಸುಧಾ ಜನಪ್ರೀಯತೆ ಗಳಿಸಿತು.”

ಈಗ ನಮ್ಮ ಸ್ನೇಹಿತರು ಬಂಧು ಬಳಗದವರು ಬರಹಗಳ ಪುಸ್ತಕ ಮಾಡಿಸು ಎಂದಂತೆ ಆಗ ಬೀಚಿಯವರಿಗೆ ಅವರ ಸ್ನೇಹಿತರೂ ಕೂಡಾ ಪುಸ್ತಕ ಮಾಡಿಸಿ ಎಂದು ಹೇಳುತ್ತಿದ್ದರಂತೆ.  ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ಪ್ರಶ್ನೋತ್ತರಗಳನ್ನು ಹೆಕ್ಕಿ ತೆಗೆದು ಒಂದು ಪುಸ್ತಕ ಮಾಡುವ ಯೋಚನೆ ಬೀಚಿಯವರಲ್ಲಿ ಗಟ್ಟಿಯಾಯಿತು.  ವಾಚಕರು ಕೇಳಿದ ಪ್ರಶ್ನೆಗೆ ಬೀಚಿಯವರು ಕೊಟ್ಟ ಉತ್ತರಗಳ ಹೊತ್ತಿಗೆಯೇ ಈ ಉತ್ತರ ಭೂಪ. 

ಹಣ ಹೊಂದಿಸುವುದು ಹೇಗೆ ಎಂಬ ಪ್ರಶ್ನೆ ಕಾಡಿದಾಗ ಬೀಚಿಯವರು ತಮ್ಮ ಮಾತಿನಲ್ಲಿ ಹೀಗೆ ಹೇಳಿದ್ದಾರೆ ; “ನನಗೆ ಅರವತ್ತು ವರ್ಷಗಳಾದವು.  ಇದೊಂದು ರಾಷ್ಟ್ರೀಯ ಘಟನೆಯೇ? ಇದರಲ್ಲಿ ನನ್ನ ಸಾಹಸ ಏನಿದೆ? ಐವತ್ತೊಂಬತ್ತಕ್ಕೆ ಸಾಯದವರೆಲ್ಲರಿಗೂ ಅರವತ್ತು ಆಗಿಯೇ ಆಗುತ್ತದೆ.  ಕೆಲವು ಸ್ನೇಹಿತರು ಹಿತೈಷಿಗಳು ನನ್ನನ್ನು ಸತ್ಕರಿಸಿಸಲು ಸಭೆಗಳನ್ನು ಸೇರಿಸಿದರು.  ಇದರಿಂದ ಐದು ಸಾವಿರ ಸೇರಿತು.  ಪುಸ್ತಕದ ಮಾರಾಟ ಬೆಲೆಯನ್ನು ಕಡಿಮೆ ಮಾಡಿದೆ.” ನೋಡಿ ಎಂತಹ ಪ್ರಾಮಾಣಿಕತೆ ವ್ಯಕ್ತಿತ್ವ ಬೀಚಿಯವರದು! 

ಗೋವೆಯ ವಿಶ್ವಭಾರತಿ ಪ್ರಕಾಶನ, ಶಾ.ಮಂ.ಕೃಷ್ಣರಾಯರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.  ಒಂಬತ್ತು ವರ್ಷಗಳ ಸುಧೀರ್ಘ ಪಯಣ ಈ ಪ್ರಶ್ನೋತ್ತರ. ಅವುಗಳಲ್ಲಿ ಯೋಗ್ಯವೆನಿಸಿದ ಪ್ರಶ್ನೋತ್ತರಗಳನ್ನು ಹೆಕ್ಕಿ ತೆಗೆದು ಹಸ್ತಪ್ರತಿ ತಯಾರಿಸಿದವರು ಬೆಂಗಳೂರು  ವಿಶ್ವವಿದ್ಯಾಲಯದ ಸಹಾಯಕ ಗ್ರಂಥಾಧಿಕಾರಿಗಳಾಗಿರುವ ವೆಂಕಟರಮಣಯ್ಯನವರು ಈ ಕೆಲಸವನ್ನು ವಹಿಸಿಕೊಂಡು 1974ರಲ್ಲಿ ಮೊದಲ ಮುದ್ರಣಗೊಂಡಿತು.

ಸಾವಿರಾರು ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತ ಹೋದ ಭೂಪ ನಮ್ಮ ಬೀಚಿಯವರು.  ಅವರ ನವಿರಾದ ಜಾಣ್ಮೆಯ ಉತ್ತರ, ಮತ್ತೆ ಮತ್ತೆ ಮೆಲುಕು ಹಾಕಿ ನಗಿಸುವ ನಗೆ ಚಟಾಕಿ ನೀವು ಓದಬೇಕೆಂದರೆ ಪುಸ್ತಕ ಕೊಂಡುಕೊಳ್ಳಲೇ ಬೇಕು.  ಏಕೆಂದರೆ ಒಂದೇ ಗುಕ್ಕಿಗೆ ಓದಿಸುಕೊಂಡು ಹೋಗುವ ಲೇಖನವಲ್ಲ,ಕಾದಂಬರಿ ಅಲ್ಲ.  ಸಾವಿರಾರು ಓದುಗರು ಸುಧಾ ಪತ್ರಿಕೆ ಯಾವಾಗ ಬರುತ್ತದೆ ಎಂದು ಜಾತಕ ಪಕ್ಷಿಯಂತೆ ಕಾದು ಈ ಕಾಲಂ ಪಟಕ್ಕನೆ ಓದುವಂತೆ ಮರುಳು ಮಾಡಿದ ಕಾಲಂ ಇದು.  ಆಗ ನಾನೂ ಇವರಲ್ಲಿ ಒಬ್ಬಳಾಗಿದ್ದೆ.  ಅವುಗಳ ಸಂಗ್ರಹ ಪುಸ್ತಕ ನನ್ನ ಕಣ್ಣಿಗೆ ಬಿದ್ದಿದ್ದು 2018ರಲ್ಲಿ ಬೆಂಗಳೂರಿನ ಕಲಾಗ್ರಾಮದಲ್ಲಿ.  ಆಗ ಸುಧಾ ಪತ್ರಿಕೆಯಲ್ಲಿ ಪ್ರಶ್ನೆ ಕೇಳಿದವರ ಹೆಸರು ಇರುತ್ತಿತ್ತು.  ಆದರೆ ಈ ಪುಸ್ತಕದಲ್ಲಿ ಅವರುಗಳ ಹೆಸರು ಇಲ್ಲ ಅಷ್ಟೇ.

1) ಪ್ರಶ್ನೆ. – ನೀವು ಎಂತಹ ಪ್ರಶ್ನೆಗಳಿಗೂ ಬಹಳ ಸೊಗಸಾಗಿ ಉತ್ತರಿಸುತ್ತೀರಲ್ಲಾ, ನೀವು ಉಪಯೋಗಿಸುವ ಅಕ್ಕಿ ಯಾವುದು?

ಬೀಚಿ ಉತ್ತರ – ಉತ್ತರಗಳನ್ನು ಬರೆಯಲು ನಾನು ಪೇನಾ ಉಪಯೋಗಿಸುತ್ತೇನೆ, ಅಕ್ಕಿಯನ್ನಲ್ಲ.

2) ಪ್ರಶ್ನೆ – ಕೆಲ ಅರ್ಚಕರು ಕೈಯಲ್ಲಿ ವಾಚು ಮತ್ತು ಚಿನ್ನದುಂಗುರ ಧರಿಸಿ ದೇವರಿಗೆ ಅರ್ಚನೆ ಮಾಡುತ್ತಾರೆ. ಏಕೆ ಸ್ವಾಮಿ?

ಬೀಚಿ ಉತ್ತರ – ಆ ದೇವರುಗಳ ಜಾತಕದಲ್ಲಿ ಶ್ರೀಮಂತ ಅರ್ಚಕನಿಂದ ಪೂಜೆ ಎಂದಿರಬೇಕು.

ಹೀಗೆ ಬೀಚಿಯವರು ಪ್ರಶ್ನೆಗಳಿಗೆ ಕೊಟ್ಟ ಉತ್ತರಗಳನ್ನು ಓದುತ್ತಿದ್ದರೆ ನಿಮ್ಮ ಮುಖದ ಸ್ನಾಯುಗಳು ಹಿಗ್ಗಿ ಇನ್ನಷ್ಟು ಆರೋಗ್ಯವಂತರನ್ನಾಗಿ ಮಾಡುವುದು ನಿಶ್ಚಿತ. 

ಶ್ರೀಮತಿ ಗೀತಾ ಜಿ ಹೆಗಡೆ ಕಲ್ಮನೆ ✍️
26-11-2021. 9.10pm

(8) ಪುಸ್ತಕ ಪರಿಚಯ – “ಅನುಪರ್ವ “

# ಅನುಪರ್ವ # ಐತಿಹಾಸಿಕ ಕಾದಂಬರಿ.
ಲೇಖಕರು – ಡಾ.ಲಕ್ಷ್ಮಣ ಕೌಂಟೆ
ಪ್ರಕಾಶಕರು – ಧಾತ್ರಿ ಪುಸ್ತಕ
ಪುಸ್ತಕದ ಬೆಲೆ -350/-
ಮೊಬೈಲ್ –9880807864

ಲೇಖಕರು ಹೇಳುತ್ತಾರೆ ;  ಅವರು ಬರೆದ “ಅನುಪರ್ವ”  ಪುಸ್ತಕ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರ “ಪರ್ವ”ಕ್ಕೆ ಪರ್ಯಾಯವಲ್ಲ ಎಂದು.

ಈಗೊಂದು ವರ್ಷದ ಹಿಂದೆಯೇ ಲೇಖಕರಿಂದ ತರಿಸಿಕೊಂಡ ಈ ಪುಸ್ತಕ ಓದಿ ಮುಗಿಸಲು ಬರೋಬ್ಬರಿ ಒಂದು ತಿಂಗಳು ತೆಗೆದುಕೊಂಡೆ.  584 ಪುಟಗಳ ಈ ಬೃಹತ್ ಐತಿಹಾಸಿಕ ಪುಸ್ತಕ ಒಂದೇ ಸಮನೆ ಓದಲು ಸಾಧ್ಯ ಆಗೋದೂ ಇಲ್ಲ.  ಹಾಗೆ ಓದಿದ ಪುಟಗಳನ್ನೇ ಮತ್ತೆ ಮತ್ತೆ ಓದಿ ಮನನ ಮಾಡಿಕೊಂಡ ಹೊರತೂ ಓದುತ್ತ ಹೋದಂತೆ ವಿಷಯ, ವ್ಯಕ್ತಿ, ಘಟನೆ ಇತ್ಯಾದಿ ಕಲಸುಮೇಲೋಗರ ಆಗಿಬಿಡುತ್ತತ್ತು. 

ಸಂಪೂರ್ಣ ಮಹಾಭಾರತದ ಕಥೆಯನ್ನು ಆಳವಾಗಿ ಅಭ್ಯಾಸ ಮಾಡಿ ಲೇಖಕರು ಈ ಪುಸ್ತಕ ಬರೆದಿದ್ದಾರೆ.
ನಾನು ಹೈಸ್ಕೂಲ್ ಹೋಗುತ್ತಿದ್ದ ಸಮಯದಲ್ಲಿ ಸಂಪೂರ್ಣ ಮಹಾಭಾರತದ ಕಥೆಯನ್ನು ನನ್ನ ಅಜ್ಜಿಗೆ ದಿನಾ ಸಾಯಂಕಾಲ ಓದಿ ಹೇಳುವಾಗ ಯಕ್ಷಗಾನ ಪ್ರಿಯಳಾದ ಅಜ್ಜಿ ಯಕ್ಷಗಾನ ಸನ್ನಿವೇಶದಲ್ಲಿ ಬರುವ ಕಥೆಯೊಂದಿಗೆ ತುಲನೆ ಮಾಡಿ ನನಗೆ ವಿವರಿಸುತ್ತಿದ್ದಳು.  ಚಿಕ್ಕ ವಯಸ್ಸಿನಲ್ಲಿ ಅಷ್ಟೊಂದು ಅರ್ಥ ಆಗುತ್ತಿರಲಿಲ್ಲ.  ಮತ್ತೆ ಓದುವ ಆಸಕ್ತಿ ಇತ್ತು.  ಈಗ ದಕ್ಕಿತು.

ವಿಧುರನು ತೀರ್ಥಯಾತ್ರೆಯನ್ನು ಮುಗಿಸಿಕೊಂಡು ಹಿಂದಿರುಗುವಷ್ಟರಲ್ಲಿ ಅಣ್ಣ ತಮ್ಮಂದಿರಾದ ಕೌರವರು ಪಾಂಡವರು ರಾಜ್ಯಕ್ಕಾಗಿ ಹದಿನೆಂಟು ದಿನಗಳ ಕಾಲ ಯುದ್ಧ ಮಾಡುತ್ತಿದ್ದ ಸನ್ನಿವೇಶ, ಯುದ್ಧ ಮುಗಿದ ನಂತರ ರಣರಂಗದಲ್ಲಿ ಸತ್ತುಬಿದ್ದು ನಾರುತ್ತಿರುವ ಹೆಣಗಳು, ರಕ್ತದೋಕುಳಿ, ಹದ್ದುಗಳ ರೌದ್ರಾವತಾರ, ಕೆಟ್ಟ ವಾಸನೆ… ಲಕ್ಷ ಲಕ್ಷ ಹೆಂಗಸರು ತಮ್ಮ ಮಕ್ಕಳನ್ನು, ಗಂಡಂದಿರನ್ನು, ಸಂಬಂಧಿಕರನ್ನು, ಒಡಹುಟ್ಟಿದ ಅಣ್ಣ ತಮ್ಮಂದಿರನ್ನು ಕಳೆದುಕೊಂಡು ಪರಿತಪಿಸುವ ಸನ್ನಿವೇಶ ಇತ್ಯಾದಿ ಇತ್ಯಾದಿ ಎಲ್ಲವನ್ನೂ  ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.  ಓದುತ್ತ ಸ್ಥಬ್ಧವಾಗುತ್ತದೆ ಮನ. 

ಸಾಮೂಹಿಕ ವಿನಾಶದ ಯುದ್ಧಕ್ಕೆ ಕೃಷ್ಣ ತಂತ್ರಗಳನ್ನು ಹೆಣೆದಿರಬಹುದೇ… ಹಾಗೆ ಮುಂದುವರೆಯುತ್ತ  ಯುದ್ಧದಲ್ಲಿ ಕುರುವಂಶದ ಗಂಡಸರು ಮಕ್ಕಳೆಲ್ಲ ಮಡಿದು ಧೃತರಾಷ್ಟ್ರ ಮತ್ತು ಗಾಂಧಾರಿ ಇಬ್ಬರೂ ಮಡಿದವರ ಬಗ್ಗೆ ದುಃಖಪಡುತ್ತ ಕೌರವ ವಂಶ ಇಲ್ಲಿಗೇ ನಿಂತು ಹೋಗುವುದಲ್ಲಾ ಎಂದು ವ್ಯಥೆ ಪಡುತ್ತಾರೆ.  ಆಗ ನಿಯೋಗ ಪದ್ಧತಿಯಿಂದ ಸೊಸೆಯಂದಿರು ಮಕ್ಕಳನ್ನು ಪಡೆದಿದ್ದು…ವ್ಯಾಸ ಮಹರ್ಷಿಗಳ ಕುರಿತು ಅನೇಕ ಮಾಹಿತಿಗಳು, ಕರ್ಣನ ಹುಟ್ಟಿನ ಗುಟ್ಟು ರಣರಂಗದಲ್ಲಿ ಅನಾವರಣವಾದ ಸನ್ನಿವೇಶ, ಭೀಷ್ಮ ಪಿತಾಮಹನ ಪ್ರತಿಜ್ಞೆಯ ಬಗ್ಗೆ ಉಲ್ಲೇಖ….ಪಾಂಡವರ ಜನನದ ವೃತ್ತಾಂತ… ಅರ್ಜುನನ ಪಾಂಡಿತ್ಯ ಹಾಗೂ ಅವನ ಚರಿತ್ರೆ…ದ್ರೌಪದಿ ತನ್ನ ಐವರು ಗಂಡಂದಿರ ಬಗ್ಗೆ ವಿವರಿಸುವ ಪರಿ… ಪಗಡೆಯಾಟದಲ್ಲಿ ಎಲ್ಲವನ್ನೂ ಪಣಕ್ಕಿಟ್ಟು ಕೊನೆಗೆ ದ್ರೌಪದಿಯ ವಸ್ತ್ರಾಪಹರಣ ಸನ್ನಿವೇಶದಲ್ಲಿ ಅವಳು ಪರಿತಪಿಸಿ ಆಡುವ ಒಂದೊಂದು ಮಾತೂ ….. ಹೀಗೆ ಇಡೀ ಮಹಾಭಾರತ ಕಥೆಯನ್ನು ಸ್ಪುಟವಾಗಿ ಬರೆದಿದ್ದಾರೆ.

ಕೊನೆಯಲ್ಲಿ ಲಕ್ಷೋಪಲಕ್ಷ ಹೆಣಗಳು ರಣರಂಗದಲ್ಲಿ
ಕೊಳೆಯುತ್ತಿರುವಾಗ ಮಡಿದವರ ಅಂತ್ಯ ಸಂಸ್ಕಾರ ಹೇಗಾಯಿತು ಎಂಬುದು ಕೂಡಾ ಬರೆದಿದ್ದಾರೆ.  ಈ ಪುಸ್ತಕವನ್ನು ಕೊಂಡು ಓದಿದಲ್ಲಿ ಕೂಲಂಕಷವಾಗಿ ಪ್ರತಿಯೊಂದು ವೃತ್ತಾಂತ ತಿಳಿಯಲು ಸಾಧ್ಯ.  ಏಕೆಂದರೆ ಅಷ್ಟು ದೀರ್ಘವಾಗಿದೆ ಮಹಾಭಾರತದ ಕಥೆ ಅನುಪರ್ವ ಪುಸ್ತಕದಲ್ಲಿ. 

ಯುದ್ಧಾನಂತರದ ಕಥೆ, ಕುರುವಂಶ ಹೇಗೆ ಮುಂದುವರೆಯಿತು, ನಿಯೋಗ ಪದ್ಧತಿ ಮತ್ತು ಮಹಾಭಾರತ ಬರೆದ ವ್ಯಾಸ ಮಹರ್ಷಿಗಳ ಬಗ್ಗೆ ಮಾಹಿತಿ ಇವೆಲ್ಲ ತಿಳಿದಿದ್ದು ಈ ಪುಸ್ತಕದ ಓದಿನಲ್ಲಿ.

ಇಂತಹ ಅತ್ಯುತ್ತಮವಾದ ಪುಸ್ತಕವನ್ನು ಸಾಹಿತ್ಯ ಲೋಕಕ್ಕೆ ನೀಡಿದ ಲೇಖಕರಿಗೆ ಮತ್ತಷ್ಟು ಪುಸ್ತಕ ಬರೆಯಲು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್. ಧನ್ಯವಾದಗಳು ತಮಗೆ 

ಶ್ರೀಮತಿ ಗೀತಾ ಜಿ ಹೆಗಡೆ ಕಲ್ಮನೆ ✍️
23-11-2021. 9.10pm

(7) ಪುಸ್ತಕ ಪರಿಚಯ – ” ಕಡಮ್ಮಕಲ್ಲು , ಜಲಪ್ರಳಯ “

(1) ಕಡಮ್ಮಕಲ್ಲು

(2) ಜಲಪ್ರಳಯ

ಲೇಖಕರು – ಶ್ರೀ ನೌಶಾದ್ ಜನ್ನತ್

ಕೊಡಗಿನ ಲೇಖಕರಾದ ಶ್ರೀ ನೌಶಾದ್ ಜನ್ನತ್ ರವರ “ಕಡಮ್ಮಕಲ್ಲು ಎಸ್ಟೇಟ್”ಕಾದಂಬರಿ ಮತ್ತು  “ಜಲಪ್ರಳಯ” ಈಗೆರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಮಳೆಯಿಂದ ಸಂಭವಿಸಿದ ಪ್ರಳಯದ ಅನಾಹುತಗಳ ಸತ್ಯವನ್ನು ಬಿಚ್ಚಿಟ್ಟ ಪುಸ್ತಕಗಳನ್ನು ನನಗೆ ಕಳಿಸಿದ್ದು ಓದುತ್ತ ಮನಸ್ಸು ಸ್ಥಬ್ಧವಾದ ಅನುಭವ ನೀಡಿತು. 

“ಕಡಮ್ಮಕಲ್ಲು” ಕಾದಂಬರಿಯಲ್ಲಿ ಕೇರಳದಿಂದ ವಲಸೆ ಬಂದ ಒಂದು ಕಾರ್ಮಿಕ ಮುಸ್ಲಿಂ ಕುಟುಂಬದ ತಾಯಿ ಮಗಳು ಅಸಹಾಯಕ ಸ್ಥಿತಿಯಲ್ಲಿ ಇರುವಾಗ ಅದೇ ಊರಿನ ಇಬ್ಬರು ಅವಕಾಶವಾದಿಗಳು ಹೇಗೆ ಅವರ ಆಸ್ತಿಯನ್ನು ಹೆದರಿಸಿ, ಬೆದರಿಸಿ, ಇಲ್ಲಸಲ್ಲದ ಆರೋಪ ಹೊರಿಸಿ ನಯವಂಚಕ ಮಾತುಗಳಿಂದ ತಮ್ಮ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರಿ ಹೋಗುವಂತೆ ಮಾಡಿ ಮುಂದಿನ ದಿನಗಳಲ್ಲಿ ಅವರವರಲ್ಲೇ ವೈಮನಸ್ಸು ಬೆಳೆದ ಚಿತ್ರಣವನ್ನು ತಮ್ಮ ಬರವಣಿಗೆಯಲ್ಲಿ ನಮೂದಿಸುವ ಪ್ರಯತ್ನ ಮಾಡಿದ್ದಾರೆ.  ವಾಸ್ತವದಲ್ಲಿ ನಮ್ಮ ಸುತ್ತಮುತ್ತಲಿನ ಅನೇಕ ಕುಟುಂಬಗಳು ಈ ರೀತಿ ಶೋಷಣೆಗೆ ಒಳಗಾಗಿರುವುದು ನಾವು ಕಾಣುತ್ತಲೇ ಇದ್ದೇವೆ.  ಆದರೆ ಇಂತಹ ಘಟನೆಗಳನ್ನು ಓದುಗರ ಮನಮುಟ್ಟುವಂತೆ
ಬರೆಯುವುದು ಅಷ್ಟು ಸುಲಭವೂ ಅಲ್ಲ.  ಶ್ರೀ ನೌಶಾದ್ ರವರು ತಮ್ಮ ಮೊದಲ ಕಾದಂಬರಿಯಲ್ಲೇ ಯಶಸ್ಸು ಸಾಧಿಸಿರುವುದು ಅವರೇ ಹೇಳಿದಂತೆ ಪುಸ್ತಕ ಪ್ರಕಟಗೊಂಡ ಎರಡೇ ದಿನದಲ್ಲಿ ಮರು ಮುದ್ರಣಗೊಂಡಿರುವುದೇ ಸಾಕ್ಷಿ. 

ಓದಲು ಹಿಡಿದ  ಕಾದಂಬರಿ ಮುಚ್ಚಿಡುವುದು ಪೂರ್ತಿ ಮುಗಿದ ನಂತರವೇ.  ಕಾರಣ ಕಾದಂಬರಿಯಲ್ಲಿ ಬರುವ ಫಾತಿಮಾ ಅಸಹಾಯಕಳಾಗಿ ತನ್ನ ಆಸ್ತಿಯನ್ನು ಮಾರುವಾಗಿನ ಪುಟಗಳನ್ನು ಓದುವಾಗ ನಾನಂತೂ ಒಂದು ರೀತಿ ಉದ್ವೇಗಕ್ಕೆ ಒಳಗಾಗಿ “ಬೇಡಾ ಮಾರಬೇಡಿ. ನಿಮಗೆ ಮೋಸ ಮಾಡುತ್ತಿದ್ದಾರೆ.  ಬೇಡಾ ಬೇಡಾ…..” ಅಂದುಕೊಳ್ಳುತ್ತ ಅಲವತ್ತಕೊಂಡು ಕಣ್ಣು ಮಂಜಾಗಿಸಿಕೊಂಡೆ.  ತೀವ್ರವಾದ ಆತಂಕ, ಸಂಕಟ. ಓದುತ್ತಿರುವುದು ಕಥೆ ಎಂಬುದನ್ನೂ ಮರೆತು ಅಷ್ಟು involved ಆಗುವಂತೆ ಬರೆದಿರುವುದಕ್ಕೆ ಲೇಖಕರಿಗೆ ಭೇಷ್ ಅನ್ನಲೇ ಬೇಕು.  ಓದಿ ಮುಗಿಸಿದಾಗ ಇನ್ನಷ್ಟು ಮುಂದುವರೆಸಬಹುದಿತ್ತು. ಯಾಕೆ ಹೀಗೆ ಮಾಡಿದರು ಎಂಬ ನಿರಾಶೆ ಕಾಡಿತು. 

” ಜಲಪ್ರಳಯ ” ನಡೆದ ಸತ್ಯ ಘಟನೆಗಳ ಸುತ್ತ ಇಂಚಿಂಚಾಗಿ ಮಾಹಿತಿಗಳನ್ನು ಸಂಗ್ರಹಿಸಿ, ಸ್ವತಃ ಲೇಖಕರು ‘ನಮ್ಮ ಕೊಡಗು’ ತಂಡ ಕಟ್ಟಿಕೊಂಡು ಸಂತೃಸ್ತರಿಗೆ ಶಕ್ತಿ ಮೀರಿ ನೆರವಾಗಿದ್ದಲ್ಲದೇ ಅನೇಕ ಅಪವಾದಗಳನ್ನು ಎದುರಿಸಿ ಸಹಾಯ ಮಾಡುವ ಸೋಗಿನಲ್ಲಿ ನಿರಾಶ್ರಿತರಿಗೆ ಆದ ವಂಚನೆ, ಮೋಸ, ಸಂತೃಸ್ತರ ಕಣ್ಣೀರ ಕಥೆ, ಕೊಡಗಿನಲ್ಲಾದ ಜಲಪ್ರಳಯದ ಅನಾಹುತ, ಹಣವಂತರ, ರಾಜಕೀಯ ಪಕ್ಷಗಳ ಮಾತಿನ ಸೋಗು, ಕೊಡಗಿನ ದುರಂತಕ್ಕೆ ವೈಜ್ಞಾನಿಕ ಹಾಗೂ ಮಾನವನ ದುರಾಸೆಯ ಕಾರಣಗಳನ್ನು ಚಿತ್ರಗಳ ಸಮೇತ ತಮ್ಮ ಲೇಖನಗಳಲ್ಲಿ ಬರೆದಿದ್ದಾರೆ.

ತಲೆತಲಾಂತರದಿಂದ ಬದುಕು ನಡೆಸಿದ ಮನೆಗಳಲ್ಲಿ ಸ್ಟೇ ಹೋಂ ನಿರ್ಮಾಣ ಮಾಡಿ ಷಹರದ ಜನ ಬಂದು ಉಳಿದು ಮೋಜು ಮಸ್ತಿಯಲ್ಲಿ ತೊಡಗಿದಾಗ ಅವರು ಕೊಡುವ ಹಣಕ್ಕೆ ಹೇಗೆ ಅಲ್ಲಿಯ ಜನರು ಕುರುಡಾಗಿ ಧನದಾಹಿಗಳಾದರು ಇತ್ಯಾದಿ ಇತ್ಯಾದಿ ಬರೆಯುತ್ತ ಪರೋಕ್ಷವಾಗಿ ಕೊಡಗಿನ ಜನರೂ ಕಾರಣಕರ್ತರು ಎಂಬುದನ್ನು ಒಪ್ಪಿಕೊಂಡಿದ್ದಾರೆ.  ಈ ಪುಸ್ತಕದ ಬಗ್ಗೆ ಬರೆಯುತ್ತ ಹೋದರೆ ಪುಟಗಳು ಬೆಳೆಯುತ್ತವೆ. ಅಷ್ಟಿವೆ ಕಣ್ಣೀರ ಕಥೆಗಳು, ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದ ಜನರ ಸಂಕಷ್ಟಗಳು.   ಕೊಡಗಿನಲ್ಲಿ ಹೀಗೂ ಆಗಿತ್ತು ಎಂದು ಮುಂದಿನ ಜನಾಂಗಕ್ಕೆ ಓದಿ ತಿಳಿಯಲು ಕಾದಿರಿಸಬೇಕಾದಂತ ಪುಸ್ತಕವಿದು. 

ಟೀವಿ ಹಾಗೂ ಪೇಪರುಗಳಲ್ಲಿ ಪ್ರಳಯದ ಬಗ್ಗೆ ಸಾಕಷ್ಟು ಓದಿರುತ್ತೇವೆ.  ಆದರೆ ನಾವು ನೋಡಿದ್ದು ಕೇಳಿದ್ದು ಎಷ್ಟು ಸತ್ಯ ಎಂಬುದು ಈ ಪುಸ್ತಕ ಓದಿದಾಗಲೇ ತಿಳಿಯುತ್ತದೆ.  ಹೊರನೋಟಕ್ಕೆ ಕೊಡಗು ರುದ್ರರಮಣೀಯ.  ನಿಜ.  ಆದರೆ ಅಲ್ಲಿಯ ಒಳಗುಟ್ಟು ಆ ಪ್ರದೇಶದ ಜನರಿಗಷ್ಟೇ ಗೊತ್ತಾಗಲು ಸಾಧ್ಯ.  ಗೊತ್ತಿದ್ದವರು ತಮ್ಮ ಬರವಣಿಗೆಯಲ್ಲಿ ಬರೆಯಲು ಎದೆಗಾರಿಕೆ ಇರಬೇಕು. ಲೇಖಕರು ಧೈರ್ಯದಿಂದ ಸವಿಸ್ತಾರವಾಗಿ ಎಲ್ಲವನ್ನೂ ಬರೆದಿದ್ದಾರೆ.  ಮುಂದಿನ ಆಗುಹೋಗುಗಳನ್ನು ಎದುರಿಸುವ ಕೆಚ್ಚೆದೆಯ ವ್ಯಕ್ತಿ ಶ್ರೀ ನೌಶಾದ್ ರವರು. ಎರಡು ಮಾತಿಲ್ಲ.

ಮೇಲ್ಕಂಡ ಎರಡೂ ಪುಸ್ತಕಗಳಲ್ಲಿ ವಸ್ತುಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.  ಹೀಗೂ ಉಂಟೆ? ಎಂದು ಹುಬ್ಬೇರಿಸಬೇಡಿ; ಬದಲಾಗಿ ಒಮ್ಮೆ ಕೊಂಡು ಓದಿ.  ಮುಂದಿನ ಬರವಣಿಗೆಗೆ ಪ್ರೋತ್ಸಾಹ ನೀಡಿ. 

ಕೊನೆಯಲ್ಲಿ ಲೇಖಕರಿಗೆ ನನ್ನದೊಂದು ಬಿನ್ನಹ ; ದಯವಿಟ್ಟು ಎಷ್ಟೇ ಅವಕಾಶ ಒದಗಿ ಬಂದರೂ ನೀವು ಮಾತ್ರ ರಾಜಕಾರಣಿ ಆಗಬೇಡಿ.  ನೀವು ಬದಲಾಗಿಬಿಡುತ್ತೀರಾ.  ಹೀಗೆ ನಿಮ್ಮ ತಂಡದೊಂದಿಗೆ ಮಾರ್ಗದರ್ಶಕರಾಗಿ ಸಂತೃಸ್ತರ,ಅಸಹಾಯಕರ ನೆರಳಾಗಿ ಕೊನೆಯವರೆಗೂ ಅವರ ಉಸಿರಾಗಿ ಇರಿ.
ನಿಮ್ಮಂತಹವರ ಅಗತ್ಯ ಈ ಸಮಾಜಕ್ಕೆ ತುಂಬಾ ಅಗತ್ಯ ಇದೆ.   ಇನ್ನೂ ಹೆಚ್ಚಿನ ಕೃತಿ ತಮ್ಮಿಂದ ಹೊರಬಂದು ಸಾಹಿತ್ಯ ಲೋಕ ಬೆಳಗಲಿ. ಒಳ್ಳೆಯದಾಗಲಿ.  ಶುಭವಾಗಲಿ.

24-9-2021. 1.30pm

(6) ಪುಸ್ತಕ ಪರಿಚಯ – “ಅಘೋರಿಗಳ ಲೋಕದಲ್ಲಿ”


ಪುಸ್ತಕ : ಅಘೋರಿಗಳ ಲೋಕದಲ್ಲಿ
ಲೇಖಕರು : ಶ್ರೀ ಸಂತೋಷ್ ಕುಮಾರ್ ಮೆಹಂದಾಳೆ.

ಇವರ  “ಅಘೋರಿಗಳ ಲೋಕದಲ್ಲಿ” ಎಂಬ ಪುಸ್ತಕ ಅಂಕಿತ ಪ್ರಕಾಶನದವರು ಬಿಡುಗಡೆ ಮಾಡಿ ಆಗಲೇ ಮೂರು ವರ್ಷ ಆಯಿತು.  ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರನ್ನು ಮುಖತಃ ಭೇಟಿಯಾಗಿದ್ದು ಮಾತ್ರ ಅವರ ಇನ್ನೊಂದು ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ.  ಕಾರಣ ಒಬ್ಬ ಬರಹಗಾರನ ಬರೆಯುವ ಶೈಲಿ, ಅದರಲ್ಲಿಯ ಆಳವಾದ ವಿಷಯ, ಓದುಗರನ್ನು ತನ್ಮಯಗೊಳಿಸಿ ಪುಸ್ತಕ ಓದಿ ಮುಚ್ಚಿಟ್ಟರೂ ಮತ್ತೆ ಮತ್ತೆ ಓದುವಂತೆ ಮಾಡುವ ಸಾಹಿತಿಗಳನ್ನು ಭೇಟಿಯಾಗಬೇಕು ಎಂಬ ಕುತೂಹಲ ಎಲ್ಲರಲ್ಲೂ ಇರುವುದು ಸಹಜ.  ಹಾಗೇ ನಾನೂ ನನ್ನನ್ನು ಪರಿಚಯ ಮಾಡಿಕೊಂಡು “ಎಂಟೆಬೆ” ಕೊಂಡುಕೊಂಡು ಬಂದೆ. ಓದುತ್ತ ಹೆಚ್ಚು ನನ್ನ ಕಾಡಿದ್ದು “ಅಘೋರಿಗಳ ಲೋಕದಲ್ಲಿ” ಪುಸ್ತಕ.

ಅಘೋರಿಗಳ ಬಗ್ಗೆ ನನಗೆ ಸರಿಯಾದ ಮಾಹಿತಿ, ನನ್ನಲ್ಲಿದ್ದ ಕುತೂಹಲ, ಅವರ್ಯಾಕೆ ಹೀಗೆ, ಹೇಗೆ ಬದುಕುತ್ತಾರೆ,  ಅವರು ಕ್ರೂರಿಗಳಾ, ನಮ್ಮಂಥವರು ಅವರನ್ನು ಭೇಟಿ ಮಾಡಬಾರದಾ ಇತ್ಯಾದಿ ಹಲವು ವಿಷಯಗಳಿಗೆ ಸಮಂಜಸವಾದ ಉತ್ತರ ಸಿಕ್ಕಿದ್ದು ಇವರ ಈ ಪುಸ್ತಕ ಓದಿದಾಗ.  ನಡೆದ ಘಟನಾವಳಿಗಳ ಬಗ್ಗೆ, ಅವರ ಸಾಧನೆ, ನಿತ್ಯ ಬದುಕಿನ ಬಗ್ಗೆ ವೈಜ್ಞಾನಿಕ ತಳಹದಿಯಲ್ಲಿ ತರ್ಕಿಸಿ ಉದಾಹರಣೆಗಳೊಂದಿಗೆ ವಿಶ್ಲೇಷಣೆ ಮಾಡಿದ್ದಾರೆ.   ಎಷ್ಟೆಲ್ಲಾ ವರ್ಷ ಅಘೋರಿಗಳು,ನಾಗಾಸಾಧುಗಳ ಒಡನಾಟದಲ್ಲಿ ಇದ್ದು ಅವರನ್ನು ಹತ್ತಿರದಿಂದ ಕಂಡು ಅವರ ಸತ್ಯದರ್ಶನದ ಪರಿಚಯ ಮಾಡಿದ್ದು ನಿಜಕ್ಕೂ ಹೆಮ್ಮೆಯ ವಿಷಯ. 


ಏಕೆಂದರೆ ಇಲ್ಲಿ ಅನುಭವದ ಬರಹವಿದೆ, ಕುತೂಹಲ, ಆಶ್ಚರ್ಯ, ಅಸಹ್ಯ, ವಾಕರಿಕೆ,ತಲೆ ಗಿರ್ರನೆ ಸುತ್ತುವ, ನಿದ್ದೆಯಲ್ಲೂ ಬೆಚ್ಚಿ ಬೀಳಿಸುವ, ಶವ, ಸ್ಮಶಾನ, ಮಾಟಮಂತ್ರ, ತರ್ಕಕ್ಕೆ ಸಿಗದ ಹೀಗೆ ಇತ್ಯಾದಿ ಎಲ್ಲವೂ ಇದೆ.  ಒಬ್ಬ ಎದೆಗಾರಿಕೆ, ಧೈರ್ಯ ಇರುವ ಬರಹಗಾರ ತನ್ನ ಜೀವದ ಹಂಗು ತೊರೆದು ಸತ್ಯಾಸತ್ಯತೆಯನ್ನು ತಿಳಿದು ಬರೆದು ಓದುಗರಿಗೆ ನೀಡುವುದೆಂದರೆ ಸಾಮಾನ್ಯ ವಿಷಯವಲ್ಲ.    ಈಗಾಗಲೇ ತುಂಬಾ ಜನ ಓದಿರುತ್ತೀರಿ.  ಪುಸ್ತಕದ ಬಗ್ಗೆ ಅನೇಕರು ನಿರೂಪಣೆ ಬರೆದಿದ್ದಾರೆ.  ಮತ್ತೆ ಮತ್ತೆ ಮರುಮುದ್ರಣ ಪಡೆದ ಈ ಪುಸ್ತಕ ಎಲ್ಲರೂ ಓದುವಂತಾಗಬೇಕು.  ಇದು ಕಥೆಯಲ್ಲ, ನಮ್ಮ ಸಮಾಜದಿಂದ ಹೊರಗಿದ್ದು ಸಾಧನೆಯ ದಾರಿಯಲ್ಲಿ ಮುನ್ನುಗ್ಗುತ್ತಿರುವ, ಅಮಾನುಷವಾಗಿ ತಮ್ಮನ್ನೇ ತಾವು ಪಂತಕ್ಕೊಡ್ಡಿ ವಿಚಿತ್ರವಾಗಿ ಬದುಕುತ್ತಿರುವ ನಮ್ಮಂತೆ ಇರುವ ಮನುಷ್ಯರ ಬದುಕಿನ ಚಿತ್ರಣದ ಹಂದರವಿದು.  ಶಿವನಲ್ಲಿ ಮುಕ್ತಿ ಕಾಣುವ, ಅವನನ್ನು ಒಲಿಸಿಕೊಳ್ಳುವ ಹಂಬಲ ಅದೆಷ್ಟು ತೀವ್ರವಾಗಿದೆ ಇವರಲ್ಲಿ.  ತಮ್ಮದೇ ಸಮಾಜ ನಿರ್ಮಾಣ ಮಾಡಿಕೊಂಡು ಬದುಕುತ್ತಿರುವ ಇವರು ನಮ್ಮಗಳ ಮಧ್ಯೆ ಯಾಕೆ ಬೆರೆಯುತ್ತಿಲ್ಲ  ಎಂಬ ಮಾಹಿತಿ, ಕುಂಭಮೇಳ, ಕಾಶಿಯ ಸುತ್ತಮುತ್ತಲಿನ ನಿಗೂಢ ಪರಿಚಯ ಎಲ್ಲವೂ ಒಳಗೊಂಡಿದೆ.

ಈ ಹಿಂದೆ 2019 ಸೆಪ್ಟೆಂಬರ್ ನಲ್ಲಿ ನಾನು ಕಾಶಿಗೆ ಹೋಗುವಾಗ ಅಂಕಿತದಿಂದ ಪುಸ್ತಕ ತರಿಸಿಕೊಂಡು ಸುಧೀರ್ಘ 54 ತಾಸಿನ ರೈಲು ಪ್ರಯಾಣದಲ್ಲಿ ಓದಿ ಮುಗಿಸಿ ಕೊನೆಗೆ ಬೇಡಪ್ಪಾ ಕಾಶಿಯಲ್ಲಿ ಕಂಡರೆ ಇವರನ್ನು ಮಾತಾಡಿಸೋದಿರಲಿ, ನೋಡೋದೂ ಬೇಡಾ ಎಂಬ ತೀರ್ಮಾನಕ್ಕೆ ಬಂದಿದ್ದೆ ಅವರ ರೀತಿ ನೀತಿ ಬದುಕು ತಿಳಿದು.  ಆದರೂ ಅಲ್ಲಿ ಕಂಡಾಗ ಒಮ್ಮೆ ಕ್ಲಿಕ್ಕಿಸಿದ್ದೆ ಕುತೂಹಲದಿಂದ. 

ನಾನು ಇದುವರೆಗೆ ಈ ಪುಸ್ತಕ ಮೂರು ಬಾರಿ ಓದಿದರೂ ನಿಗೂಢ ಜಗತ್ತಿನ ಬಗ್ಗೆ ಕುತೂಹಲ ಮೂಡಿದಾಗೆಲ್ಲ ಪುಟ ತಿರುವಿ ಹಾಕೋದು ಇನ್ನೂ ನಿಂತಿಲ್ಲ.   ಅಘೋರಿಗಳ ಲೋಕ ಸಾರಾಸಗಟಾಗಿ  ಪರಿಚಯ ಮಾಡಿಕೊಟ್ಟ ಲೇಖಕರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.   ಇವರು ಅದ್ಭುತವಾದ ಇನ್ನಷ್ಟು ಮತ್ತಷ್ಟು ಪುಸ್ತಕ ಬರೆಯುವಂತಾಗಲಿ, ದೇವರು ಸದಾ ಬರೆಯುವ ಚೈತನ್ಯ ಕೊಡಲಿ ಎಂಬುದು ನನ್ನ ಹಾರೈಕೆ, ಆಶಯ.


5-7-2021. 6.59pm

(5) ಪುಸ್ತಕ ಪರಿಚಯ – “ನೀಲಮ್ಮನ ಬಳಗದ ವಚನಗಳು”

ಪುಸ್ತಕ – ನೀಲಮ್ಮನ ಬಳಗದ ವಚನಗಳು
ಸಂಪಾದಕರು – ಶ್ರೀ ರಮೇಶ್ ಬಿರಾದಾರ್

ಬಸವ ಸೇವಾ ಪ್ರತಿಷ್ಠಾನದ ಅಂಗ ಸಂಸ್ಥೆಯಾಗಿ ಬೆಳೆಯುತ್ತಿರುವ ನೀಲಮ್ಮನ ಬಳಗ, ಬೀದರ ಜಿಲ್ಲೆಯ ಹನ್ನೆರಡು ಜನ ವಚನಕಾರರು ಶ್ರೀ ರಮೇಶ್ ಬಿರಾದಾರ್ ಇವರ ಸಂಪಾದಕತ್ವದಲ್ಲಿ ಹೊರ ತಂದಿರುವ ವಚನಾಮೃತ ಪುಸ್ತಕವಿದು.  ಈ ಪುಸ್ತಕದಲ್ಲಿ ಒಟ್ಟೂ 311 ವಚನಗಳಿದ್ದು ಪ್ರತಿಯೊಬ್ಬರೂ ತಮ್ಮ ಅನುಭವಾಮೃತಗಳನ್ನು, ಅನಿಸಿಕೆಗಳನ್ನು ವಚನದಲ್ಲಿ ಬರೆದು ವ್ಯಕ್ತಪಡಿಸಿದ್ದಾರೆ.  ಹಾಗೂ ಇವರೆಲ್ಲರ ಪರಿಚಯ ಸಂಪಾದಕರು ಸುದೀರ್ಘವಾಗಿ ಬರೆದಿರುತ್ತಾರೆ. 

ಬಸವಣ್ಣನವರು 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣನವರು ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು. ಇಷ್ಟಲಿಂಗ ಹಾರವನ್ನು ಎಲ್ಲರು ಧರಿಸಿ ಪೂಜಿಸಬಹುದು.  ಅನುಭವ ಮಂಟಪದ ಮೂಲಕ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿದರು. ಅವರ ವಚನಗಳು ಇಂದಿಗೂ ಜನಮನದಲ್ಲಿ ಜನಜನಿತ, ಬದುಕಿಗೊಂದು ಪ್ರೇರಣೆ, ಮಾರ್ಗದರ್ಶನ ನೀಡುತ್ತಿವೆ.  ಇಂತಹ ಮಹನೀಯರ ವಚನಗಳು ತಮ್ಮ ವಚನ ಕೃತಿಗೆ ಪ್ರೇರಣೆ ಎಂದು ಇಲ್ಲಿನ ವಚನಕಾರರು ಹೇಳಿಕೊಂಡಿದ್ದಾರೆ.

ಇಲ್ಲಿ ಕೆಲಸದಿಂದ ನಿವೃತ್ತಿ ನಂತರದ ದಿನಗಳಲ್ಲಿ ವಚನ ಬರೆದವರು, 22 ವರ್ಷಗಳ ಹಿಂದೆ ಅತ್ತೆ ಬರೆದಿರುವ ವಚನಗಳನ್ನು ಸಂಗ್ರಹಿಸಿ ಸೊಸೆಯಾದವಳು ಕೃತಿ ರೂಪಕ್ಕೆ ಅಣಿಗೊಳಿಸಿದವಳು, ನೀಲಮ್ಮನ ಬಳಗದೊಡನಾಟದಲ್ಲಿ ತಾವೂ ವಚನ ಬರೆಯುವಂತಾದೆ ಎಂದು ಹೆಮ್ಮೆ ಪಡುವವರೂ ಇತ್ಯಾದಿ ಇತ್ಯಾದಿ ಕಾಣಬಹುದು.

ಇವರೆಲ್ಲರ ಹೆಗಲಾಗಿ ಸಂಪಾದಕತ್ವ ವಹಿಸಿಕೊಂಡ ಶ್ರೀ ರಮೇಶ್ ಬಿರಾದಾರ್ ಇವರನ್ನು ಎಷ್ಟು ಹೊಗಳಿದರೂ ಸಾಲದು.  ಎಷ್ಟೋ ಲೇಖಕರ ಬರಹಗಳು ಅಲ್ಲಲ್ಲೇ ಎಲೆ ಮರೆಯ ಕಾಯಿಯಂತೆ ನಶಿಸಿ ಹೋಗುತ್ತಿರುವಾಗ  ಇದಕ್ಕೆಲ್ಲ ಅವಕಾಶ ಕೊಡದೇ ಜವಾಬ್ದಾರಿಯಿಂದ ಸತತ ನಾಲ್ಕು ವರ್ಷಗಳ ಪರಿಶ್ರಮದಿಂದ ಇವರೆಲ್ಲರ ವಚನಗಳಿಗೆ ಪುಸ್ತಕ ರೂಪ ಕೊಟ್ಟಿದ್ದಾರೆ.  ಹಾಗೆ ತಾವು ಬರೆದ ವಚನಗಳನ್ನೂ ಈ ಪುಸ್ತಕದಲ್ಲಿ ಸೇರಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.

ಇನ್ನು ಇವರೆಲ್ಲರ ವಚನಗಳನ್ನು ಓದುತ್ತಿದ್ದಂತೆ ಬಸವಣ್ಣನವರ ವಚನಗಳು ನೆನಪಿಗೆ ಬಾರದಿರದು.  ಶಾಲಾ ದಿನಗಳಲ್ಲಿ ಪಠ್ಯ ಪುಸ್ತಕಗಳಲ್ಲಿ ಬಸವಣ್ಣನವರ ವಚನಗಳನ್ನು ಕಂಠಪಾಠ ಮಾಡಿ ಗುರುಗಳಿಗೆ ಒಪ್ಪಿಸುತ್ತಿದ್ದದ್ದು ಮುಂದಿನ ದಿನಗಳಲ್ಲಿ ನನ್ನ ಸೋದರತ್ತೆಯೊಬ್ಬರು ಶಾಸ್ತ್ರೀಯ ಸಂಗೀತ ಕಲಿತಿದ್ದು ಅವರು ಬಸವಣ್ಣನವರ ಅನೇಕ ವಚನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು.  ಎಷ್ಟೊಂದು ಬಾರಿ ಆಸಕ್ತಿಯಿಂದ ಕೇಳುತ್ತಿದ್ದೆ ನಾನು. ಹಾಗೆ ಅವರೊಂದಿಗೆ ನಾನೂ ಹಾಡಬೇಕೆನ್ನುವ ಉಮೇದಿ ಬಂದಿದ್ದೂ ಇದೆ.  ಕಾರಣ ವಚನಗಳಲ್ಲಿ ಅಷ್ಟೊಂದು ತಲ್ಲೀನತೆ ಇದೆ,ಅರ್ಥ ಇದೆ, ಬದುಕಿಗೊಂದು ಸೂತ್ರ ಇದೆ. 

“ಈ ಪುಸ್ತಕ ಓದಿ ಅಕ್ಕಾ” ಎಂದು ರಮೇಶ್ ಬಿರಾದಾರ್ ರವರು ಪುಸ್ತಕ ಕೊಟ್ಟು ವಚನಗಳನ್ನು ಓದುವ ಅವಕಾಶ ಮಾಡಿಕೊಟ್ಟಿದ್ದಾರೆ.  ಅವರಿಗೂ ಹಾಗೂ ವಚನ ಬರೆದ ನೀಲಮ್ಮನ ಬಳಗದ ಒಡನಾಡಿಗಳಿಗೂ ಕೃತಜ್ಞತೆಗಳು.  ಇನ್ನೂ ಹೆಚ್ಚಿನ ರೀತಿಯಲ್ಲಿ ವಚನಾಮೃತ ಬರೆಯುವಂತಾಗಲಿ ಕೃತಿ ಲೋಕಾರ್ಪಣೆ ಆಗಲಿ ಎಂದು ಆಶಿಸುತ್ತೇನೆ.  ಧನ್ಯವಾದಗಳು.

8-6-2021. 8.20pm

(4) ಪುಸ್ತಕ ಪರಿಚಯ – “ನನ್ನೊಳಗಿನ ಹಾಡು ಕ್ಯೂಬಾ”

ಪ್ರವಾಸ ಕಥನ – “ನನ್ನೊಳಗಿನ ಹಾಡು ಕ್ಯೂಬಾ”
ಲೇಖಕರು – Sri Gn Mohan

“ಕ್ಯೂಬಾ ನಿರಾಭರಣ ಸುಂದರಿ. ಇಲ್ಲಿ ಉತ್ಸಾಹ ನೋಡಿಯೇ ಉತ್ಸವ ನಿರ್ಧರಿಸಬೇಕು.  ಎಲ್ಲೆಂದರಲ್ಲಿ ತೋರಣ, ಕಮಾನು,ಗೋಡೆಬರಹ, ಭಿತ್ತಿಪತ್ರ, ಬ್ಯಾನರ್… ಉಹುಂ ಬರುವವರೆಲ್ಲರೂ ನೆಂಟರೇ ಆಗಿರುವಾಗ ಬ್ಯಾನರ್ ಏಕೆ ಬೇಕು.  ಕ್ಯೂಬಾದಲ್ಲಿ ನಡೆಯುತ್ತಿರುವ ಐತಿಹಾಸಿಕ ಸಮ್ಮೇಳನ ‘ಉನ್ ಫೆಸ್ಟಿವಲ್’ಗಾಗಿ ನಾವು ಬಂದು ಇಳಿದಿದ್ದೆವು.  50 ವರ್ಷಗಳ ಹಿಂದೆ ಸಾಮ್ರಾಜ್ಯಶಾಹಿಯ ಯುದ್ಧ ಪಿಪಾಸುತನ, ಜಗತ್ತನ್ನು ಕೊಳ್ಳೆ ಹೊಡೆಯುವ ಆಸೆಬುರುಕುತನ, ತನ್ನ ಮಾತನ್ನೇ ಎಲ್ಲರೂ ಕೇಳಬೇಕೆಂಬ ಅಹಂಕಾರದ ವಿರುದ್ಧ ಸೆಡ್ಡು ಹೊಡೆದಿದ್ದ 
ವಿದ್ಯಾರ್ಥಿ ಯುವಜನರು ಆರಂಭಿಸಿದ ಜಗತ್ತಿನ ಜನರ ಮಿಲನ ಇದು.  ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ, ಸೌಹಾರ್ದತೆ, ಶಾಂತಿ ಮತ್ತು ಸ್ನೇಹಕ್ಕಾಗಿ ನಡೆಯುತ್ತಿರುವ ಜಗತ್ತಿನ ಜಾತ್ರೆ.  ಪ್ರತೀ ಬಾರಿಯ ಸಮ್ಮೇಳನ ಅಮೇರಿಕ ಹಾಗೂ ಅದರ ಮಿತ್ರ ಕೂಟದಿಂದ ನೂರಾರು ಕಿರುಕುಳಗಳನ್ನು ಎದುರಿಸುತ್ತಲೇ ‘ ನಡೆ ಮುಂದೆ ನಡೆ ಮುಂದೆ’ಎಂಬ ಹುಮ್ಮಸ್ಸು ಉಳಿಸಿಕೊಂಡಿದೆ.”

ಹೀಗೆ ಸಾಹಿತಿಗಳು, ಪತ್ರಕರ್ತರು ಮತ್ತು ಅವಧಿಯ ಪ್ರಧಾನ ಸಂಪಾದಕರಾಗಿರುವ Sri Gn Mohan ಸರ್ ರವರು ಸಕ್ಕರೆಯ ಕಣಜವಾದ ಪುಟ್ಟ ದೇಶ “ಕ್ಯೂಬಾ”ವನ್ನು ಶಾರದಾ ಅಟ್ಲಾಸ್ ನಲ್ಲಿ ತಡಕಾಡಿ ಅಲ್ಲಿ ಅಂತಾರಾಷ್ಟ್ರೀಯ ಯುವಜನ ಉತ್ಸವದಲ್ಲಿ ಮೊತ್ತ ಮೊದಲ ಬಾರಿಗೆ ನಡೆದ ಯುವ ಪತ್ರಕರ್ತರ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿ ತಮ್ಮ ಅನುಭವ, ಅನಿಸಿಕೆಗಳನ್ನು ಮತ್ತು 400 ವರ್ಷಗಳ ಕಾಲ ಆಳಿದ ಸ್ಪೇನ್ ದೇಶದ ವಿರುದ್ಧ ರಕ್ತಸಿಕ್ತ ಹೋರಾಟ ನಡೆಸಿ ಇನ್ನೇನು ಕ್ಯೂಬಾ ತನ್ನ ದೇಶದ ಧ್ವಜ ಮೇಲೆರುತ್ತದೆ ಎನ್ನುವಷ್ಟರಲ್ಲಿ ಕ್ಯೂಬಾ ದೇಶ ಅಮೇರಿಕಾದ ಪಾಲಾದ ಸನ್ನಿವೇಶ, ಈ ಎರಡೂ ದೇಶಗಳ ದಾಸ್ಯದಲ್ಲಿ ಕ್ಯೂಬಾ ದೇಶದ ಜನರು ಪಟ್ಟ ಬವಣೆ, ಪಾಡು,ಸತ್ತು ಸತ್ತು ಬದುಕಿದ ಹೋರಾಟದ ಬದುಕನ್ನು ಇಂಚಿಂಚಾಗಿ ತಮ್ಮ ಬರವಣಿಗೆಯಲ್ಲಿ ಬಿಂಬಿಸಿದ್ದಾರೆ.  ನಿಜಕ್ಕೂ ಎಂತಹವರಿಗೂ ಕಣ್ಣು ಮಂಜಾಗದಿರದು.
ಓದಿ ಮುಗಿಸಿದಾಗ ಮನಸ್ಸು ತಟಸ್ಥವಾಗುವಂತೆ ಮಾಡಿತು. 

ಹಾಗೆ ಓದುತ್ತ ನಮ್ಮ ಭಾರತ ದೇಶದ ಜನ ಬ್ರೀಟಿಷರ ಸಂಕೋಲೆಯಲ್ಲಿ ವಿಲ ವಿಲ ಒದ್ದಾಡಿದ ದೃಶ್ಯಗಳು, ಸ್ವಾತಂತ್ರ್ಯ ಹೋರಾಟಗಾರರ ಕಿಚ್ಚು ಮನಃಪಟಲದಲ್ಲಿ ಹರಿದಾಡಿತು.

ಅತ್ಯಂತ ಆಳವಾದ ಅಧ್ಯಯನ ನಡೆಸಿ ಕ್ಯೂಬಾ ದೇಶದ ಬಗ್ಗೆ ಬರೆದ ಪುಸ್ತಕವಿದು.  ವಿದೇಶ ಪ್ರವಾಸ ಕೇವಲ ಪ್ರವಾಸಿ ಕಥನವಾಗಿರದೇ ಹೋಗಿರುವ ದೇಶದ ಬಗ್ಗೆ ಅಭಿಮಾನ, ಪ್ರೀತಿ, ಅಲ್ಲಿನ ಜನರ ಬಗ್ಗೆ ತಿಳಿದುಕೊಂಡು
ತಾವೂ ಕಂಬನಿ ಮಿಡಿದಿದ್ದಾರೆ ತಮ್ಮ ಬರವಣಿಗೆಯಲ್ಲಿ.  ನಿಜಕ್ಕೂ ಒಮ್ಮೆ ಓದಲೇಬೇಕಾದ ಪುಟ್ಟ ಪುಸ್ತಕ ಇದು.  ಆದರೆ ಅದರೊಳಗಿನ ವಿಷಯ ಅಗಾಧ.

ಈ ಎರಡು ದೇಶಗಳ ನಡುವೆ ನಲುಗಿದ ಕ್ಯೂಬಾ ದೇಶದ ಬಗ್ಗೆ ಬರೆದು ಓದುಗರಿಗೆ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದೀರಿ ಸರ್.  ತಮಗೆ ಅನಂತಾನಂತ ಧನ್ಯವಾದಗಳು ಸರ್.


4-6-2021. 7.48pm

(3) ಪುಸ್ತಕ ಪರಿಚಯ – “ಕೇರಿ ಮುಟ್ಟಿದ ಮಾವು”


ಕಾದಂಬರಿ – ಕೇರಿ ಮುಟ್ಟಿದ ಮಾವು
ಲೇಖಕರು – ಶೆಲ್ಲಿ ಕೂಡ್ಲಗಿ ಶಿಕ್ಷಕರು


ಇವರ “ಕೇರಿ ಮುಟ್ಟಿದ ಮಾವು ಮತ್ತು ಎರಡು ಲೋಟದ ಹುಡುಗಿ” ಇವೆರಡೂ ಕಾದಂಬರಿಗಳು ನನ್ನ ಕೈ ಸೇರಿ ಆಗಲೇ ಒಂದು ವರ್ಷ ಆಗುತ್ತಾ ಬಂತು.  ಕಾರಣಾಂತರಗಳಿಂದ ಇದುವರೆಗೂ ಓದದೆ ನನ್ನ ಪುಸ್ತಕ ಸಂಗ್ರಹದಲ್ಲಿ ಭದ್ರವಾಗಿ ಇತ್ತು.  ಇದರೊಂದಿಗೆ ಇನ್ನೂ ಅನೇಕ ಲೇಖಕರ ಪುಸ್ತಕಗಳು ಓದಿಗಾಗಿ ಕಾಯುತ್ತಿವೆ.  ಓದುವ ಹುಚ್ಚು ಕಾಲು ಕೆದರಿಕೊಂಡು ಬಂದಾಗ ಓದುವ ಹಪಾಹಪಿ ನಿರಂತರ ಮುಂದುವರಿಯುತ್ತಿರುತ್ತದೆ.  ಇದು ನನಗೆ ಮೊದಲಿನಿಂದಲೂ ಆದ ಅನುಭವ.   ಈ ಲಾಕ್ ಡೌನ್ ಒಂದು ನೆಪ ಮಾತ್ರ ಅಷ್ಟೇ.

“ಕೇರಿ ಮುಟ್ಟಿದ ಮಾವು” ಈ ಕಾದಂಬರಿ ಶೆಲ್ಲಿಯವರ ಮೊದಲ ಕಾದಂಬರಿ.  ಇಸ್ಲಾಂ ಧರ್ಮದಲ್ಲಿ ಹುಟ್ಟಿ ಇಷ್ಟು ಸ್ಪಷ್ಟವಾಗಿ, ಸುಲಲಿತವಾಗಿ ಕನ್ನಡ ಬರೆಯುತ್ತಿರುವುದು ನನಗಂತೂ ಹೆಮ್ಮೆಯ ವಿಷಯ.  ಹಾಗೆ ಇವರೊಬ್ಬ ಆದರ್ಶ ಶಿಕ್ಷಕ ಎಂದರೂ ತಪ್ಪಾಗಲಾರದು.  ಮುಖಪುಟದಲ್ಲಿ ಆಗಾಗ ಬರುವ ಅವರ ಪೋಸ್ಟ್, ವೃತ್ತಿಯಲ್ಲಿ ಅವರಿಗಿರುವ ಜವಾಬ್ದಾರಿ, ಅವರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಳ್ಳುವ ಕಾರ್ಯ ಚಟುವಟಿಕೆಗಳು ಸ್ಪಷ್ಟ ಸಾಕ್ಷಿ.  ಹಾಗೆ ಅವರೊಬ್ಬ ಪ್ರಕೃತಿ ಪ್ರೇಮಿ, ಸುಂದರ ಹೂ ಗಿಡ ಮರಗಳ ದಾಸ.  ಅಪರೂಪದ ಹೂ ಗಿಡಗಳನ್ನು onlineನಲ್ಲಿ ಖರೀದಿಸಿ ಬೆಳೆಸಿ ನಮ್ಮ ಮನೆಯಲ್ಲಿ ಅರಳಿದ ಹೂವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಾಗ ಪ್ರತಿಕ್ರಿಯಿಸದೇ ಇರಲಾಗದು.

ಇವರ ಕಾದಂಬರಿಯಲ್ಲಿ ಸಮಾಜದಲ್ಲಿ ಬಹಿಷ್ಕಾರಕ್ಕೆ ತುತ್ತಾದವರು, ಸಂಬಂಧಗಳಿಂದ ವಂಚಿತರಾದರು ಪ್ರಕೃತಿ ಪ್ರೇಮ, ಮೂಕ ಪ್ರಾಣಿಗಳ ಒಡನಾಟ, ತಮ್ಮ ಭಾವನೆಗಳಿಗೆ ನೆಲೆ, ಮಾವು ಕೇವಲ ಒಂದು ಹಣ್ಣು ಆಗಿರದೇ ದಲಿತ ಕೇರಿಯಲ್ಲಿ ಪೇತುವಿನ ಮೂಲಕ ಹಂಚಿ ಅಲ್ಲೊಂದು ನಿರ್ಮಲ ಸಂಬಂಧ, ಅರಿವು, ವಿಷಾದ, ಖಾಲಿತನ, ಕಳಕೊಂಡ ಸಂಕಟ, ಅಳು, ಆಪ್ತತೆ, ಹೀಗೆ ಒಂದಾ ಎರಡಾ ಎಲ್ಲ ಎಲ್ಲವನ್ನೂ ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟಿದ್ದಾರೆ. 

ಪುಸ್ತಕ ಓದಿ ಮುಗಿಸಿದಾಗ ಅಲ್ಲಿ ಬರುವ ಒಂದೊಂದು ಪಾತ್ರಗಳೂ ಕಾಡುತ್ತವೆ.  ಕಾರಣ ಮೇಲ್ಜಾತಿ ಕೀಳ್ಜಾತಿ ಎಂಬ ತಾರತಮ್ಯ ನಮ್ಮ ಕಾಲದ ಅನೇಕ ಘಟನೆಗಳನ್ನು ನೆನಪಿಸುತ್ತದೆ.  ಹಾಗೆ ಅಂದಿಗೂ ಇಂದಿಗೂ ಎಷ್ಟು ಸುಧಾರಣೆ ಕಂಡಿದೆ ಈ ವಿಷಯದಲ್ಲಿ ಎಂದನಿಸದಿರದು. 

ಒಂದೊಳ್ಳೆ ಪುಸ್ತಕ ಓದಿದ ಅನುಭವವಾಯಿತು.  ಲೇಖಕರು ಹೀಗೆ ಬರೆಯುತ್ತ ಇನ್ನೂ ಹೆಚ್ಚಿನ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ನೀಡುವಂತಾಗಲಿ ಎಂಬುದು ನನ್ನ ಹಾರೈಕೆ,ಆಶಯ.  ಶುಭವಾಗಲಿ.

26-5-2021. 8.45pm

(2) ಪುಸ್ತಕ ಪರಿಚಯ – ” ನೂಲಿನ ಬೇಲಿ”


ಕಾದಂಬರಿ – ನೂಲಿನ ಬೇಲಿ
ಲೇಖಕರು – ಶ್ರೀ ಮುದಲ್ ವಿಜಯ್
***********

ನಾವಂದುಕೊಂಡಂತೆ ಬದುಕು ಇರೋದಿಲ್ಲ, ಯಾವಾಗ ಯಾರ ಬದುಕಲ್ಲಿ ಏನು ನಡೆಯುತ್ತದೆ ಯಾರಿಗೂ ಗೊತ್ತಾಗುವುದಿಲ್ಲ ಇದು ಎಷ್ಟು ನಿಜ ಅಲ್ವಾ?

ಹೌದು, ಶ್ರೀ ಮುದಲ್ ವಿಜಯ್ ರವರ ಮೂರನೆಯ ಕಾದಂಬರಿ “ನೂಲಿನ ಬೇಲಿ” ಓದುತ್ತಿದ್ದರೆ ಅಕ್ಷರಶಃ ನಿಜವೆನಿಸದಿರದು.  ಅವರೇ ಹೇಳುವಂತೆ ; ಈ ಕಾದಂಬರಿಯಲ್ಲಿ ಬರುವ ಸನ್ನಿವೇಶಗಳು ಅವರ ಬಾಲ್ಯದ ನೆನಪುಗಳೊಂದಿಗೆ ಒಂದಿಷ್ಟು ಕಥಾನಕ ಕಲ್ಪನೆ
ವಾಸ್ತವದ ನೆಲೆಗಟ್ಟಿನಲ್ಲಿ ರೂಪುಗೊಂಡ ಕಾದಂಬರಿ ಇದು.

ಮೊದಮೊದಲು ಓದುವಾಗ ಪುಸ್ತಕ ಓದುತ್ತಿರುವೆನೆಂಬ ಅನಿಸಿಕೆ ಹುಟ್ಟುಹಾಕುವುದಿಲ್ಲ.  ಅವರ ಒಡನಾಟದಲ್ಲಿ ಇರುವವರ ಜೊತೆಗಿನ ಮಾತು ನಾವು ಕೇಳುತ್ತಿದ್ದೇವೆ ಎಂದೆನಿಸಿತು.  ಎಲ್ಲಿಂದ ಕಥೆ ಶುರುವಾಗುವುದೆಂದು ಆಚೆ ಈಚೆ ಪುಟ ತಿರುಗಿಸಿದ್ದು ನಿಜ.  ಒಟ್ಟೂ ಇಪ್ಪತ್ತು ಭಾಗಗಳಲ್ಲಿ ಕೊನೆ ಕೊನೆಗೆ ಓದುತ್ತ ಹೋದಂತೆ ಮನಸ್ಸನ್ನು ಓದಿನಲ್ಲಿ ತಲ್ಲೀನಗೊಳಿಸಿಬಿಡುತ್ತದೆ.

ಅಕಸ್ಮಾತಾಗಿ ಆತ್ಮೀಯ ಗೆಳೆಯ ಶಂಕರನ ಮಗ ರಮೇಶನ  ಭೇಟಿಯಾಗುತ್ತದೆ.  ಅವನ ಪರಿಚಯವೇ ಸಿಗದಷ್ಟು ವರ್ಷಗಳು ಕಳೆದು ಹೋಗಿದ್ದರೂ ನೆನಪುಗಳು ಮಾತ್ರ ನಶಿಸಿರುವುದಿಲ್ಲ.    ತನ್ನ ಗೆಳೆಯನ ಅಕಾಲಿಕ ಮರಣ, ಅವನ ಹೆಂಡತಿ ಭವಾನಿ ಅಸಹಾಯಕಳಾಗಿ ಪಡುವ ಪಾಡು ಈ ಮಧ್ಯೆ
ಹುಟ್ಟಿ ಬೆಳೆದ ಕಮಲಾಪುರ,  ನಡೆದ ಘಟನಾವಳಿಗಳ ಚಿತ್ರಣವೇ ಈ ಕಾದಂಬರಿಯ ಕಥಾ ವಸ್ತು.  ಈ ಮಧ್ಯೆ ಅಲ್ಲಲ್ಲಿ ಹಳ್ಳಿಯ ಜಗಳ, ಸ್ಲಂ ಭಾಷೆಗಳು ಹುಬೇ ಹೂಬಾಗಿ ಬರೆದಿದ್ದು ಓದುವಾಗ ನಮ್ಮ ಸುತ್ತ ಮುತ್ತಲಿನ ಇಂತಹ ಘಟನಾವಳಿಗಳು ನೆನಪಾಗದಿರದು.

ಒಟ್ಟಿನಲ್ಲಿ ಒಂದು ಹೆಣ್ಣು ಅಸಹಾಯಕತೆಗೆ ತಲುಪಿದಾಗ ಸಮಾಜ ನಡೆಸಿಕೊಳ್ಳುವ ರೀತಿ, ಮೋಸ, ವಂಚನೆಗೆ ಒಳಗಾಗಿ ಪಡುವ ಪಾಡು ಬಿಡಿಸಿಕೊಳ್ಳಲಾಗದೇ ಅವಳು ತೆಗೆದುಕೊಳ್ಳುವ ನಿರ್ಧಾರ ಎಲ್ಲವನ್ನೂ ಎಳೆ ಎಳೆಯಾಗಿ ಬರೆದಿದ್ದಾರೆ.  ಹೆಣ್ಣಿಗೆ ಎಂತಹುದೇ ಪರಿಸ್ಥಿತಿ ಎದುರಾದಾಗ ಸ್ವಂತ ದುಡಿಮೆಯೊಂದಿದ್ದರೆ ಸ್ವತಂತ್ರವಾಗಿ ಬದುಕಬಹುದು ಎಂಬುದನ್ನು ನಿರೂಪಿಸಿದ್ದಾರೆ.  ಇದು ಇಂದಿನ ದಿನಮಾನದಲ್ಲಿ ಸತ್ಯವೂ ಹೌದು.

ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ಇದಾಗಿದ್ದು ಲೇಖಕರಾದ ಶ್ರೀ ಮುದಲ್ ವಿಜಯ್ ರವರಿಗೆ ಅಭಿನಂದನೆ ಸಲ್ಲಿಸುತ್ತಾ ತಮ್ಮಿಂದ ಇನ್ನೂ ಹೆಚ್ಚಿನ ಕೃತಿ ಲೋಕಾರ್ಪಣೆಯಾಗಲಿ ಎಂದು ಆಶಿಸುತ್ತೇನೆ. ಹಾಗೂ ತಾವುಗಳೂ ಕೊಂಡು ಓದಿ ಲೇಖಕರಿಗೆ ಪ್ರೋತ್ಸಾಹ ನೀಡಬೇಕಾಗಿ ಕೋರುತ್ತೇನೆ.

20-5-2021. 9.55pm

(1) ಪುಸ್ತಕ ಪರಿಚಯ – ” ಮೌನ ಸೆರೆ”

ಸಾಮಾಜಿಕ ಕಾದಂಬರಿ – ಮೌನಸೆರೆ
ಲೇಖಕರು – Sri Ganapathi Hegde

ಆಗಾಗ ಬೆನ್ನು ನೋವು ಕಾಡಿದಾಗಲೆಲ್ಲ ಪವಡಿಸದೇ ಗತಿ ಇಲ್ಲ. ಸುಮ್ಮನೆ ಮಲಗಿ ಕಾಲಹರಣ ಮಾಡಬೇಕಲ್ಲಾ ಛೆ! ಎಷ್ಟು ಸಮಯ ಹಾಳು ಅಂತ ಮನಸ್ಸು ಕಾಡಿದಾಗ ಪಕ್ಕನೆ ಒಂದು ಪುಸ್ತಕ  ಕೈಗೆತ್ತಿಕೊಂಡು ಓದಲು ಶುರು ಮಾಡುತ್ತೇನೆ.

ಇವತ್ತು ಮಾಡಿದ್ದೂ ಇದೇ ; ಪ್ರೀತಿಯ ತಮ್ಮ Ganapathi Hegde ಯವರ “ಮೌನಸೆರೆ” ಸಾಮಾಜಿಕ ಕಾದಂಬರಿ ಓದುತ್ತಾ ವಾಸ್ತವಕ್ಕೆ ಬಂದಿದ್ದು ಕೊನೆಯ ಪುಟ ಮಗುಚಿದಾಗ.

ಕಾದಂಬರಿಯ ಉದ್ದಕ್ಕೂ ಓದುಗರೊಂದಿಗೆ ಮಾತನಾಡುತ್ತಾರೆ, ಮನಸ್ಸಿನ ಭಾವನೆಗಳನ್ನು ಬಿಚ್ಚಿಡುತ್ತಾರೆ, ಕಣ್ಣು ಮಂಜಾಗಿಸುತ್ತಾರೆ, ಕೊನೆಯಲ್ಲಿ ಓದುಗ ದೀರ್ಘ ನಿಟ್ಟುಸಿರು ಬಿಟ್ಟು ಮನಸ್ಸು ತಟಸ್ಥವಾಗುವಂತೆ ಮಾಡುತ್ತಾರೆ.  ಅಬ್ಭಾ! ಪರಕಾಯ ಪ್ರವೇಶ ಮಾಡಿದಂತೆ ತಾವೇ ಪಾತ್ರಧಾರಿಯಾಗಿ ಕಾದಂಬರಿಯಲ್ಲಿ ಬರುವ ಪ್ರತಿ ವ್ಯಕ್ತಿಯ ಚಿತ್ರಣ ಅಚ್ಚುಕಟ್ಟಾಗಿ ಎಲ್ಲಿಯೂ ಬೇಸರ ಬರದಂತೆ ಓದಿಸಿಕೊಂಡು ಹೋಗುವ ಅವರ ಬರವಣಿಗೆಯ ಶೈಲಿ ಮೆಚ್ಚಲೇಬೇಕು.

ಅದರಲ್ಲೂ ಮನೆಯ ಜವಾಬ್ದಾರಿ ಹೊತ್ತ ಚಿಕ್ಕ ವಯಸ್ಸಿನ ಹೆಣ್ಣು ಮಗಳು ವೈಶಾಲಿಯ ಬದುಕಿನ ಚಿತ್ರಣ ವಾಸ್ತವಕ್ಕೆ ಹಿಡಿದ ಕನ್ನಡಿ.  ನಮ್ಮ ಸುತ್ತಲಿನ ನೈಜ ಚಿತ್ರಣ ಕಥೆಯ ಹಂದರ. 

ಕೆಲವೊಮ್ಮೆ ಕೃತಿಗಳು ಕಾಡುವುದುಂಟು ಹಾಗೆ ನಮ್ಮ ಜೀವನಕ್ಕೂ ಹತ್ತಿರವಾದ ಸನ್ನಿವೇಶ ಬಿಚ್ಚಿಕೊಳ್ಳುವುದೂ ಇದೆ. 

ಅಂದಹಾಗೆ ಈ ಕಾದಂಬರಿಯಲ್ಲಿ ಬರುವ ಕಥಾನಾಯಕಿ ವೈಶಾಲಿಯ ಪ್ರಾರಂಭದ ಜೀವನದಂತೆ ನನ್ನನು ಅಮ್ಮಾ ಎಂದು ಕರೆಯುವ ಅಕಸ್ಮಾತ್ ಪರಿಚಯವಾದ  ಒಬ್ಬ ಹೆಣ್ಣುಮಗಳು ತನ್ನ ಹೆತ್ತವರಿಗಾಗಿ, ಒಡಹುಟ್ಟಿದವರಿಗಾಗಿ ಪಟ್ಟ ಕಷ್ಟ, ಈಗೆಲ್ಲಾ ಅವರೆಲ್ಲರ ಜೀವನ ಒಂದು ಹಂತಕ್ಕೆ ಬಂದು ಇವಳು ಮಾತ್ರ ಮದುವೆಯಾಗದೆ ಉಳಿದಿದ್ದು ಸತ್ಯವಾದರೂ ಅವಳ ಮುಂದಿನ ಜೀವನ ವೈಶಾಲಿಯ ಜೀವನದಂತಾಗದಿರಲಿ ಎಂದು ಬೇಡಿಕೊಳ್ಳುವಂತಾಯಿತು.

ಕುತೂಹಲ ಉಂಟಾಗುತ್ತಿದೆಯಾ ಏನಿದು ಕಥೆ? ಪುಸ್ತಕದ ಬಗ್ಗೆ ಹೆಚ್ಚು ವಿಮರ್ಶೆ ಮಾಡುವುದಿಲ್ಲ.  ಒಮ್ಮೆ ಪುಸ್ತಕವನ್ನು ಕೊಂಡು ಓದಿ.  ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುವ ಅಷ್ಟೂ ಸಮಯ ಮೈಮರೆಸುವ ತಾಕತ್ತಿದೆ ಹೆಗಡೆಯವರ ಬರವಣಿಗೆಯಲ್ಲಿ. 

ಇವರಿಂದ ಇನ್ನೂ ಹೆಚ್ಚಿನ ಎಲ್ಲಾ ಪ್ರಕಾರದ ಬರಹಗಳ ಪುಸ್ತಕಗಳು ಅಚ್ಚಾಗಿ ಓದುಗರ ಕೈ ಸೇರಲಿ, ಮೆಚ್ಚುಗೆ ಪಡೆಯಲಿ ಎಂಬುದು ನನ್ನ ಹಾರೈಕೆ.  ಶುಭವಾಗಲಿ ತಮ್ಮಾ

15-5-2021 8.21pm