ಕ್ರ ಚ ನ ವ ಜೀ(ಜೀವನ ಚಕ್ರ)

(ಈ ಕವನ ವೃದ್ಧಾಪ್ಯದಿಂದ ಬಾಲ್ಯ ಕೊನೆಗೆ ಎಲ್ಲಿಂದ ಬಂದಿದ್ದೆವೋ ಅಲ್ಲಿಯೇ ಸಮಾಪ್ತಿ ಹೀಗೆ ಕಲ್ಪಿಸಿಕೊಂಡು ಬರೆದ ಕವನವಿದು )

ಹಣ್ಣು ಹಣ್ಣು ಮುದುಕಿ
ಬೆನ್ನು ಬಾಗಿ ಕೋಲು ಕುಟ್ಕತ್ತ
ಹಣೆಗೆ ಕೈ ಅಡ್ಡ ಹಿಡಿದು
ಎದುರಿಗೆ ಬಂದವರನ್ನು ಕಣ್ಣು ಕಿರಿದಾಗಿಸಿ ನೋಡಿ
ಯಾರು ಮಗಾ ನೀನು?
ವಯಸ್ಸಾಯಿತು ಕಣ್ಣೂ ಕಾಣವಲ್ಲದು
ಕಿವೀನೂ ಕೇಳವಲ್ಲದು
ಊರು ಹೋಗು ಹೇಳುತ್ತೆ
ಸಾವು ಬಾ ಬಾ ಹೇಳುತ್ತೆ
ಮಾಡಿದ ಕರ್ಮ ತೀರಬೇಕು
ಎಂದಲವತ್ತು ಕೊಳ್ಳುವ ಜೀವ
ಮುದಿ ವಯಸ್ಸಿನ ಬವಣೆ
ಬರಲಿ ಬಿಡು ಬೇಜಾರಿಲ್ಲ.

ಬುಡಬುಡಕೆ ಬದುಕು
ಐವತ್ತರ ಹರೆಯ
ಕಣ್ಣು ಕಿಚಾಯಿಸುವ ತಲುಬು
ನೋಡುವವರ ಕಣ್ಣಿಗೆ ಸಂಭಾವಿತರಾಗಿ
ಮುಖವಾಡ ಹೊತ್ತ ದರಿದ್ರ ಬಿಕನಾಸಿಗಳ
ಬುಡಸಮೇತ ಕಿತ್ತು ಸುತ್ತ ಎಂಟು ದಿಕ್ಕುಗಳಿಗೆ
ವಗಾಯಿಸಿ ಬಿಡಬೇಕೆನ್ನುವ ಕಿಚ್ಚು
ದೇಶೋದ್ಧಾರದ ಕನಸು ನನಸಾಗಿಸುವತ್ತ
ಅವಕಾಶವಾದಿಯ ಚಿತ್ತ.

ಬಿಸಿ ರಕ್ತ ಹರಿದಾಡುವ ವಯಸ್ಸು
ಅನುಭವಿಸಬೇಕು ಜಗತ್ತಿನ ಅಷ್ಟೂ ಸುಖ
ಆಯಿಯ ದುಡ್ಡೊ ಅಪ್ಪಯ್ಯನ ದುಡ್ಡೊ
ವಾರಸುದಾರ ನಾನೊಬ್ಬಳೆ ಅಲ್ವಾ
ಮೈ ಮನ ತಣಿವಷ್ಟು ಸುಖಪಡಬೇಕು
ಕಾಲು ಬಿದ್ದು ಹೋಗುವಷ್ಟು ದೇಶ ಸುತ್ತಿ
ಕೋಶ ಓದಿ ಬರೆದೂ ಬರೆದೂ
ಕಣ್ಣು ಕೈ ಕಾಲು ಸಾಕೂ ಅನ್ನುವಷ್ಟು
ಒಡವೆ, ವಸ್ತ್ರ, ಕಾಂಚಾಣದೊಡತಿ
ನಾನೂ ಆಗಲೇ ಬೇಕು.

ಕುಂಟೆ ಬಿಲ್ಲೆ, ಚಿನ್ನಿ ದಾಂಡು, ಗಜಗದಾಟ
ಸುತ್ತ ಮಾ ರಾಶಿ ಮಕ್ಕಳ ಸೈನ್ಯ
ಊಹೂ ಇಷ್ಟೇ ಸಾಲದು
ಗೇರು ಬೆಟ್ಟ, ಬಿಕ್ಕೆ ಹಣ್ಣು, ಕೌಳಿ ಕಾಯಿ
ಒಂದಾ ಎರಡಾ ಮಜಾನೆ ಮಜಾ
ಚೌತಿ ಹಬ್ಬ, ನವರಾತ್ರಿ ಹಬ್ಬ, ದೊಡ್ಡಬ್ಬ
ಪಟಾಕಿ, ಶಿಡ್ಲೆಕಾಯಿ ಜುಂಜು ದೀಪ, ಭೂತನ ಕಟ್ಟೆ
ಶೃಂಗರಿಸಿದ ಎತ್ತಿನ ಓಟ, ಸುಳ್ಗಾಯಿ ಆಟ
ಪೊಗದಸ್ತಾದ ಊಟ, ಅರಿಶಿನದ ತೆಳ್ಳವು
ಯಾವುದೂ ನಾನಂತೂ ಬಿಡದೆ ಅನುಭವಿಸಬೇಕು.

ಇಯ್ಯೆ^^ಇಯ್ಯೆ^^^
ಊರೆಲ್ಲ ಕೇಳೊ ಅಳು
ಬೇಕಾದ್ದು ಕಸಿಯುವ ಕಸರತ್ತು
ಬಿಟ್ಟು ಹೋದ ನನ್ನಮ್ಮನ ಪ್ರೀತಿ
ನಾನು ಮತ್ತೆ ಪಡೆಯಬೇಕು
ಅವಳೊಟ್ಟೆಯೊಳಗೆ ಇರೊ ಸ್ವಗ೯ ಹೊಕ್ಕಿ
ಮತ್ತೆ ಈ ಭೂಮಿಗೆ ಬರಲೇಬಾರದು.

18-9-2016 10.42am

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮ ಟಿಪ್ಪಣಿ ಬರೆಯಿರಿ