ಕಣ್ ಕಟ್ ಆಟ…..

“ಹೋಯ್! ಬೇಗಾ ಬೇಗಾ ಒಳಗಾಕ್ಕೊಳ್ರೋ,ಬಂದಾ ಬಂದಾ, ಹಿಂದೆ ಬತ್ತಾವನೆ. ತೆಗಿ ತೆಗಿ ಆ ಕವರು. ಹಾಕು ಹಾಕು ಕವರಿಂದ ಅದಕ್ಕೆ. ತತ್ತಾ ಈ ಕಡಿಕೆ…….” ಹೀಗೆ ಬಿರುಸಿನ ಮಾತು , ಗಡಿಬಿಡಿ, ಬಚಾವಾಗುವ ಪರಿ. ಎಲ್ಲಾ ಕಣ್ ಕಟ್ ಆಟಾ. ಹೀಗೆ ಮುಂದುವರಿದರೆ ಉದ್ಧಾರ ಆಗೋದು ಯಾವಾಗ? ಉತ್ಪನ್ನಗಳನ್ನು ಯಾಕೆ ಪೂರ್ತಿ ತೆಗೆದು ಹಾಕುತ್ತಿಲ್ಲ. ಕೈಗೆ ಸಿಗದೇ ಇದ್ದರೆ ಇಂತಹ ಸನ್ನಿವೇಶ ಕಣ್ಣೆದುರು ನೋಡುವ ದುರಂತ ಬರ್ತಿತ್ತಾ? ಪದೇ ಪದೇ ಮನೆಗೆ ಬರುವವರೆಗೂ, ಬಂದ ಮೇಲೂ, ಇಂದಿನವರೆಗೂ ಕಾಡುತ್ತಲೇ ಇದೆ. ಅದಕ್ಕೇ ಬರೆಯಲು ಕೂತೆ ಮನಸ್ಸು ತಡೀದೆ.

ನಿನ್ನೆ ಕೆಲವು ಕೆಲಸಗಳ ನಿಮಿತ್ತ ಹೊರಗಡೆ ಹೋದಾಗ ದಾರಿಯಂಚಿಗೆ ಮಾಮೂಲಿಯಾಗಿ ಕೂತು ತರಕಾರಿ ವ್ಯಾಪಾರ ಮಾಡುವವರನ್ನು ಮಾತನಾಡಿಸುವ ಪ್ರಯತ್ನ ಮಾಡಿದೆ. ಸುಮ್ಮನೆ ಏನಾದರೂ ಕೇಳಿದರೆ ಉತ್ತರ ಕೊಡ್ತಾರಾ? ಊಹೂಂ. ಬೇಕಾಗಲಿ ಬೇಡವಾಗಲಿ ಒಂದೆರಡು ತರಕಾರಿ ಆಯೊ ನೆವದಲ್ಲಿ ಮಂಡಿಯೂರಿ ಕೂತೆ ತರಕಾರಿ ಮುಂದೆ. ಅದೆಷ್ಟಣ್ಣಾ ಇದೆಷ್ಟಣ್ಣಾ. ಒಂದರ್ಧ ಕೇಜಿ ಕೊಡು, ಇರು ಇದೇ ರೇಟಿನ ಇನ್ನೊಂದೆರಡು ತರಕಾರಿ ಆಯ್ಕೋತೀನೀ ಅಂತೇಳುತ್ತ ಸುತ್ತ ಮುತ್ತ ಕಣ್ಣಾಯಿಸಿದೆ.

ತಕಳಪ್ಪಾ ಇದ್ದಕ್ಕಿದ್ದಂತೆ ಒಂದು ಯಪ್ಪಾ ಎಲ್ಲಿಂದ ಓಡಿ ಬಂದನೋ, ಮೇಲಿನ ಗಡಿಬಿಡಿ ಮಾತನಾಡುತ್ತ ಟೆನ್ಷನ್ ವಾತಾವರಣ ಸೃಷ್ಟಿ ಮಾಡಿಬಿಟ್ಟ. ನಾನಂತೂ ಅವಕ್ಕಾದೆ. ಹೀಗೂ ಉಂಟಾ? ಅಲ್ಲಾ ಸರಕಾರ ಪ್ಲಾಸ್ಟಿಕ್ ಬ್ಯಾನ್ ಮಾಡ್ತಿದ್ದರೆ ಇವರು ರಂಗೋಲಿ ಕೆಳಗೇ ನುಸುಳೋದಾ? ಶಿವನೇ ಇನ್ನೂ ಏನೇನು ಆಟ ಆಡ್ತಾರೋ.

ಅಷ್ಟಕ್ಕೂ ಈ ರೀತಿ ತೆಳ್ಳಗಿನ ಪ್ಲಾಸ್ಟಿಕ್ ಕವರುಗಳು ಸಿಗೋದಾದರೂ ಎಲ್ಲಿಂದ? ಅವ್ಯಾಹತವಾಗಿ ಅದರಲ್ಲೂ ಕಿರಾಣಿ ಅಂಗಡಿಗಳಲ್ಲಿ, ರಸ್ತೆ ಬದಿ ವ್ಯಾಪಾರಸ್ತರಲ್ಲಿ ಹೇರಳವಾಗಿ ಇನ್ನೂ ಉಪಯೋಗವಾಗ್ತಿರೋದು ನೋಡಿದರೆ ಉತ್ಪಾದನೆ ಇನ್ನೂ ನಿಂತಿಲ್ಲ ಅನಿಸುತ್ತಿದೆ.

ಕ್ಷಣ ಮಾತ್ರದಲ್ಲಿ ಪ್ಲಾಸ್ಟಿಕ್ ಕವರೆಲ್ಲ ಅದೆಲ್ಲಿ ಮಂಗ ಮಾಯ ಮಾಡಿದರೋ ಗೊತ್ತಿಲ್ಲ ಬಿಳಿ ಬಟ್ಟೆ ಚೀಲ ಅಲ್ಲಿ ಕೂತ ನಾಲ್ಕಾರು ವ್ಯಾಪರಸ್ತರ ಮುಂದೆ ಕಣ್ಣಿಗೆ ಎರಚುವಂತೆ ಆಸೀನವಾಯಿತು. ವಾರೆವಾ! ಇದಪ್ಪಾ ಹಿಕ್ಮತ್ ಅಂದರೆ, ಚಕಿಂಗ್ ಬಂದವರ ಮುಂದೆ ಜೀ ಹುಜೂರ್. ಸೂಪರ್ ಐಡಿಯಾ. ನೋಡಿ ಎಂತೆಂಥಹಾ ಐಡಿಯಾ. ಹೀಗೆ ಎಲ್ಲೆಲ್ಲಿ ನಡೆಯುತ್ತದೋ ದೇವರಿಗೇ ಗೊತ್ತು.

“ಕೇಳಿದೆ, ಯಾಕ್ರೀ ಹೀಂಗ್ ಮಾಡ್ತೀರಾ? ನಮ್ಮ ಹತ್ತಿರ ಕವರಿಲ್ಲಾ, ಬ್ಯಾನ್ ಮಾಡಿದ್ದಾರೆ. ಮನೆಯಿಂದ ಬರೋವಾಗ ಚೀಲ ಹಿಡ್ಕೊಂಡು ಬನ್ನಿ ಅಂದರೆ ಆಗ್ತಿರಲಿಲ್ವೆ? ಎಲ್ಲರಿಗೂ ಸದಾ ಹೇಳ್ತಿರಿ. ಆಮೇಲೆ ಕವರು ಸಿಗಲ್ಲಪ್ಪಾ, ಚೀಲ ತಗೊಂಡು ಹೋಗ ಬೇಕು ಹೊರಗಡೆ ಏನಾದರೂ ತರೋದಿದ್ದರೆ ಅಂತ ಜ್ಞಾಪಿಸಿಕೊಂಡು ತರ್ತಾರೆ” ಅಂದೆ.

ಅದಕ್ಕವರು ಅಂತಾರೆ ” ನೋಡಿ ಮೇಡಂ, ನಮಗೂ ಸರಕಾರದ ಜೊತೆ ಕೈ ಜೋಡಿಸೋಕೆ ಇಷ್ಟ. ಆದರೆ ಈ ಇಷ್ಟ ನಂಬಿ ನಾವು ಮುಂದುವರೆದರೆ ಹೊಟ್ಟೆ ಮೇಲೆ ತಣ್ಣೀರ್ ಪಟ್ಟಿ. ಮೇಡಂ ಬಂದಾಗೆಲ್ಲಾ ಹೇಳ್ತಾನೇ ಇರ್ತೀವಿ. ಆದರೆ ಎಲ್ಲೋ ಒಂದೆರಡು ನಿಮ್ಮಂಥವರು ಬಿಟ್ಟರೆ ಯಾರು ಚೀಲ ತರೋದಿಲ್ಲ ಮೇಡಂ. ಅದಕ್ಕೇ ನಾವು ಪ್ಲಾಸ್ಟಿಕ್ ಇನ್ನು ಯೂಸ್ ಮಾಡ್ತಿರೋದು. ಕವರಿಲ್ಲಾ ಅಂದರೆ ತರಕಾರಿನೇ ಬೇಡಾ ಅಂತಾರೆ. ಬೇರೆ ಕಡೆ ತಗೋತಾರೆ. ನಾವೊಂದು ಮಾಡಿದರೆ ಸಾಕಾ ಮೇಡಂ, ಎಲ್ಲಾ ವ್ಯಾಪಾರಿಗಳು ನಿಯತ್ತಾಗಿ ಬೆಂಬಲಿಸಿದರೆ, ಸಾರ್ವಜನಿಕರೂ ನಮ್ಮ ಕಷ್ಟ ಅರ್ಥ ಮಾಡಿಕೊಂಡರೆ ಸರ್ಕಾರದ ನಿಯಮ ಪಾಲನೆ ಆಗಲು ಸಾಧ್ಯ. ನೋಡಿ ಮೇಡಂ ನಮ್ಮ ಅವಸ್ಥೆ. ಎಲ್ಲಾದರೂ ಸಿಕ್ಕಾಕಿಕೊಂಡರೆ ನಮ್ಮ ಗತಿ ಹೇಳಿ. ಆದರೂ ಇದರಲ್ಲೇ ಜೀವನ ಆಗಬೇಕಲ್ಲಾ. ಏನೋ ಹೀಂಗೇ ನಡಿತೀದೆ. ಇರಲಿ ಮೇಡಂ ನಮ್ಮ ಕಷ್ಟ ನಮಗೆ. ಕೊಡಿ ಚೀಲ ತಕಳಿ ನಲವತ್ತು ರೂಪಾಯಿ ಆಯಿತು. ಕಾಸು ಕೊಡಿ” ಅನ್ನಬೇಕಾ!!

ನನಗೆ ಏನು ಹೇಳಬೇಕು ಗೊತ್ತಾಗದೆ ಹಣ ಕೊಟ್ಟು ಸ್ಕೂಟಿ ಏರಿದೆ. ದಾರಿಯುದ್ದಕ್ಕೂ ಅವನ ಮಾತು ಮರುಕಳಿಸುತ್ತಲೇ ಇತ್ತು.
ಮೂಲದಿಂದಲೇ ಅಂದರೆ ಪ್ಲಾಸ್ಟಿಕ್ ಕವರ್ ಉತ್ಪನ್ನವನ್ನೇ ಬಂದು ಮಾಡಿದರೆ ಎಷ್ಟು ದಿನ ಅಂತ ಕವರ್ ಚಲಾವಣೆಯಲ್ಲಿ ಇರಲು ಸಾಧ್ಯ?

ಮನೆ ಮುಂದೆ ಕಸದ ಗಾಡಿ ಬರಲಿ ಚೀಲದಲ್ಲಿ ಸಂಗ್ರಹಿಸಿದ ಕವರುಗಳು ಉಕ್ತಾ ಇರುತ್ತವೆ. ಪ್ರಯಾಣ ಮಾಡುವಾಗ ದಾರಿಯುದ್ದಕ್ಕೂ ಅಕ್ಕ ಪಕ್ಕ ಗಮನಿಸಿದರೆ ಈ ಪ್ಲಾಸ್ಟಿಕ್ ಕವರ್ ಚಿಂದಿ ಇರದ ಜಾಗವೇ ಇಲ್ಲ. ರಸ್ತೆಯಲ್ಲಿ ಚಿಕ್ಕ ಪೆಂಡಾಲ್ ಹಾಕಿ ರಾಮನವಮಿನೋ, ರಾಜಕುಮಾರ್ ಜನ್ಮ ದಿನವೋ ಇಲ್ಲಾ ಇನ್ನೊಂದು ಇತ್ಯಾದಿ ಆದಾಗೆಲ್ಲ ಗಮನಿಸಿದ್ದೇನೆ. ಕುಡಿದು ತಿಂದು ಹಾಕಿದ ಪ್ಲಾಸ್ಟಿಕ್ ಲೋಟ ತಟ್ಟೆಗಳ ರಾಶಿ ಕುಣಿದು ಕುಪ್ಪಳಿಸುವ ಜೋಷಲ್ಲಿ ರಸ್ತೆ ಅಕ್ಕ ಪಕ್ಕ ಬಿಸಾಕಿದ್ದು ನಂತರ ಬೆಳಗಿನ ವಾಕಿಂಗಾಯಣದಲ್ಲಿ ಎಲ್ಲಿ ಕಾಲಿಟ್ಟು ದಾಟಬೇಕು ಅನ್ನುವುದೇ ತಿಳಿವಲ್ಲದು. ಯಾಕೆ ನಮ್ಮ ಜನ ಅಸಂಸ್ಕೃತರಂತೆ ನಡೆದುಕೊಳ್ಳುತ್ತಾರೆ? ಬೀದಿ ಗುಡಿಸುವ ಹೆಂಗಳೆಯರು ಒಂದಷ್ಟು ಬಯ್ಕೊಂಡು ಎಲ್ಲಾ ಬಾಚಿ ಎತ್ತಾಕುವಾಗ ಪಾಪ ಅನಿಸುತ್ತದೆ. ಅವರೂ ನಮ್ಮಂತೆ ಮನುಷ್ಯರಲ್ಲವಾ?

“ನೋಡಿ ಮೇಡಂ. ನಾವಿದ್ದೀವಿ ಗುಡಿಸೋಕೆ ಅಂತ ಹ್ಯಾಂಗ್ ಮಾಡಿಟ್ಟವರೆ” ಸೊಂಟ ಹಿಡಿದುಕೊಂಡು ಹೇಳುವಾಗ ಮನಸ್ಸು ಚುರ್ ಅನ್ನುತ್ತದೆ. ಹಲವಾರು ಬಾರಿ ಕಣ್ಣಿಗೆ ಕಂಡಿದ್ದು ತಡಿಲಾರದೇ ಹೇಳಿದ್ದೂ ಉಂಟು,ಹಾಗೆ ಬಯ್ಸಿಕೊಂಡಿದ್ದೂ ಉಂಟು. ಏನೇ ಹೇಳಿ ಕೆಲವರಂತೂ ಯಾವಾಗ ಬುದ್ಧಿ ಕಲಿತಾರೋ ಅಂತ ತುಂಬಾ ಬೇಸರವಾಗುತ್ತದೆ.

ಹೀಗೆಯೇ ಆದರೆ ಈ ಪರಿಸರ ಸ್ವಚ್ಛವಾಗಿರಲು ಹೇಗೆ ಸಾಧ್ಯ? ಹಸುಗಳಂತೂ ಇವುಗಳನ್ನು ತಿಂದು ಸಾಯ್ತಾ ಇದ್ದಾವೆ. ಮನುಷ್ಯನಿಗೆ ಗೊತ್ತು ಪ್ಲಾಸ್ಟಿಕ್ ನಿಂದ ಏನೆಲ್ಲಾ ಅನಾಹುತವಾಗುತ್ತಿದೆ ಎಂದು. ಆದರೂ ಅದರ ನಿರ್ವಹಣೆ ಮಾಡುವುದರಲ್ಲಿ ಸೋಂಬೇರಿ ತನ ತಿರಸ್ಕಾರ. ಯಾಕಿಂತಹ ದುರ್ಭುದ್ಧಿ. ಪರಿಸರ ಪ್ರಾಣಿಗಳ ಜೀವದ ಬಗ್ಗೆ ಸ್ವಲ್ಪವಾದರೂ ಕಾಳಜಿ ಬೇಡವಾ? ಒಮ್ಮೊಮ್ಮೆ ಅನಿಸುತ್ತದೆ ; “ಭೂಮಿಗೆ ಭಾರ ಕೂಳಿಗೆ ದಂಡ” ಈ ಗಾದೆ ಇಂತಹವರನ್ನು ನೋಡಿಯೇ ಮಾಡಿರಬೇಕು.

ಪ್ಲಾಸ್ಟಿಕ್ ಇಲ್ಲದ ಜೀವನ ಊಹಿಸಿಕೊಳ್ಳಲೂ ಅಸಾಧ್ಯ. ಅಷ್ಟು ನಮ್ಮ ಜೀವನದಲ್ಲಿ ಪ್ರತಿಯೊಂದೂ ಪ್ಲಾಸ್ಟಿಕ್ ಮಯವಾಗಿಬಿಟ್ಟಿದೆ. ಆದರೆ ಕೆಲವು ಕಡೆ ಸಂಪೂರ್ಣ ಬ್ಯಾನ್ ಮಾಡಿ ಯಶಸ್ವಿಯಾಗಿದ್ದಾರೆ. ಹೇಗಪ್ಪಾ ಪ್ಲಾಸ್ಟಿಕ್ ಇಲ್ಲದೇ ಇರ್ತಾರೆ ಅನ್ನೋ ಕುತೂಹಲ ಇತ್ತು.

ಇತ್ತೀಚೆಗೆ ಅಂಡಮಾನ್ ಪ್ರವಾಸಕ್ಕೆ ಹೋದಾಗ ಅಲ್ಲಿಯ ಪರಿಸರ ಕಾಳಜಿ ಕಂಡು ಬೆರಗಾದೆ. ಸಂಪೂರ್ಣವಾಗಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದಾರೆ ಅಲ್ಲಿ. ಇಡೀ ಅಂಡಮಾನ್ ನಲ್ಲಿ ಕುಡಿಯುವ ಬಿಸ್ಲೇರಿ ನೀರು ಬಾಟಲ್ ಮಾತ್ರ ಪ್ಲಾಸ್ಟಿಕ್ ಕಂಡೆ. ಅಲ್ಲಿ ಕಸದ ನಿರ್ವಹಣೆಯೂ ಅಷ್ಟೇ ಚೆನ್ನಾಗಿದೆ. ಉಪಯೋಗಿಸೋದು ಬರೀ ಪೇಪರ್ ಕವರ್, ಸ್ಟೀಲ್ , ಪಿಂಗಾಣಿ, ಗಾಜಿನ ತಟ್ಟೆ, ಲೋಟ. ರಸ್ತೆ ಅಕ್ಕ ಪಕ್ಕದಲ್ಲಿ ಗಿಡಗಳ ಎಲೆಗಳು ಬಿಟ್ಟರೆ ಬೇರೇನೂ ಕಸ ಕಾಣದು. ಏಕೆಂದರೆ ಇಡೀ ಅಂಡಮಾನ್ ಸಮೃದ್ಧವಾಗಿ ಗಿಡಮರಗಳನ್ನು ಬೆಳೆಸಿದ್ದಾರೆ. ಎತ್ತ ನೋಡಿದರೂ ಸಮುದ್ರ ತೀರ. ಅಲ್ಲಿ ಕಡಲಂಚಿನಲ್ಲೂ ಮರಗಳ ಕಸಕಡ್ಡಿ ಬಿಟ್ಟರೆ ಬೇರಾವ ಕಸವೂ ಕಣ್ಣಿಗೆ ಕಾಣದು. ನಿಜಕ್ಕೂ ತುಂಬಾ ಆಶ್ಚರ್ಯ ಪಟ್ಟೆ.

ಇಂದು ವಿಶ್ವ ಪರಿಸರ ದಿನ. ಕಂಡಿದ್ದು, ಕೇಳಿದ್ದು,ಅನುಭವಿಸಿದ್ದು ಒಂದು ಚೂರು ಬರೆಯೋಣ ಅನಿಸಿತು, ಬರೆದೆ. ಮನಸ್ಸು ಆ ಕ್ಷಣ ಸಮಾಧಾನ ಪಡುತ್ತದೆ. ಮತ್ತೆ ಹೊರಗಡೆ ಹೋದಾಗ ಇನ್ನೊಂದು ಮತ್ತೊಂದು ಕಂಡರೆ ತಡಿಲಾರದೇ ಹೇಳ್ತೀನಿ. ಕೆಲವೊಮ್ಮೆ ಬಯ್ಸಿಕೊಂಡು, ಕೆಲವರು ಅರ್ಥ ಮಾಡಿಕೊಂಡರೆ ಖುಷಿ ಪಟ್ಟುಕೊಂಡು ಹೀಗೆ ನಡೆಯುತ್ತದೆ ಜೀವನ ಅಂತ ಗೊತ್ತಿದ್ದರೂ ಮನಸ್ಸಿನ ಮೂಲೆಯಲ್ಲಿ ಎಂದಾದರೂ ಸುಧಾರಣೆ ಆಗಬಹುದೆಂಬ ಭರವಸೆ ಮಾತ್ರ ಇನ್ನೂ ಉಡುಗೇ ಇಲ್ಲ ನೋಡ್ರಿ!😊

4-5-2019. 1.50pm

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮ ಟಿಪ್ಪಣಿ ಬರೆಯಿರಿ